ಸೋಮವಾರ, ಜುಲೈ 11, 2016

ಇದು ಇಂದಿನ ಜನರ ಮನಸ್ಥಿತಿ

ಗೆಳೆಯರಿಬ್ಬರು ದಿನ ಪತ್ರಿಕೆ ಓದುತ್ತಿದ್ದರು.

ಬೊಮ್ಮ> ಕಳಪೆ ಬಿತ್ತನೆ ಬೀಜ, ಇಳುವರಿ ಕಡಿಮೆ ಮತ್ತು ಬೆಳೆಯ ಬೆಲೆ ಕುಸಿತದಿಂದಾಗಿ ನಷ್ಟ ಅನುಭವಿಸಿ, ಸಾಲಭಾದೆ ತಾಳಲಾರದೆ ರೈತರಿಬ್ಬರ ಆತ್ಮಹತ್ಯೆ.

ತಿಮ್ಮ> ಅವರೆಲ್ಲೋ ಕುಡುಕರೋ, ಜೂಜುಕೋರರೋ ಆಗಿರಬೇಕು. ಅದಕ್ಕೆ ಸಾಲಮಾಡ್ಕೊಂಡು ತೀರಿಸೋಕೂ ಆಗ್ದೆ ಆತ್ಮಹತ್ಯೆ ಮಾಡ್ಕೊಂಡಿದ್ದಾರೆ. ಇದಕ್ಕೆ ಸರ್ಕಾರ ಹೇಗೆ ಹೊಣೆಯಾಗುತ್ತೆ ಹೇಳಿ. ಬೀಜ ನಕಲೀನೋ ಅಸಲೀನೋ ನೋಡಿ ತಕೋಬೇಕಿತ್ತು. ಬೆಳೆನಾಶ ಆದ್ರೆ, ಬೆಳೆಯ ಬೆಲೆ ಕುಸಿದರೆ ಸರ್ಕಾರ ಏನ್ಮಾಡ್ಬೇಕು? ಕೆಲವು ರೈತರಂತೂ ಸರ್ಕಾರದಿಂದ ಲಕ್ಷಾಂತರ ರೂ ಪರಿಹಾರ ಸಿಗುತ್ತೆ ಅಂತಾನೆ ಆತ್ಮಹತ್ಯೆ ಮಾಡ್ಕೊತ್ಕಾರೆ ಬಿಡಿ.

ಬೊಮ್ಮ> ಸಾಲಬಾಧೆ ತಾಳಲಾರದೆ ನಗರದ ದಂಪತಿಗಳು ತಮ್ಮೆರಡು ಮಕ್ಕಳಿಗೂ ವಿಷ ಉಣಿಸಿ ನೇಣಿಗೆ ಶರಣು. ಪತಿ ಪತ್ನಿ ಇಬ್ಬರು ದುಡಿದರೂ ಮಕ್ಕಳಿಗೆ ವಿಧ್ಯಾಭ್ಯಾಸ ಕೊಡಿಸಲು ಮತ್ತು ಕುಟುಂಬ ಸದಸ್ಯರ ಆರೋಗ್ಯ ವೆಚ್ಚಕ್ಕಾಗಿ ಮಾಡಿದ ಸಾಲ ತೀರಿಸಲಾಗದೆ, ಬರುವ ಆಧಾಯದಲ್ಲಿ ಬಡ್ಡಿ ಕಟ್ಟಿ ಸಂಸಾರ ತೂಗಿಸಲಾಗದೆ ಮಾಡಿದ ಸಾಲದಿಂದಾಗಿ ಮನನೊಂದು ಇಡೀ ಕುಟುಂದ ಆತ್ಮಹತ್ಯೆಗೆ ಶರಣಾಗಿದೆ.

ತಿಮ್ಮ> ಮುಂಡೇವು ಹಾಸಿಗೆ ಇದ್ದಷ್ಟು ಕಾಲುಚಾಚೋದು ಬಿಟ್ಟು ಅದ್ಯಾಕೆ ಸಾಲ ಮಾಡ್ಕೊಂಡ್ ಸಾಯ್ತಾವೋ? ಕಡಿಮೆ ವೇತನ ಸಿಗೋದ್ರಲ್ಲೋ, ಶಿಕ್ಷಣ ಮತ್ತು ಆರೋಗ್ಯದ ವೆಚ್ಚ ಹೆಚ್ಚಾಗಿರೋದ್ರಲ್ಲೋ, ಅಥವಾ ಅಧಿಕ ಬಡ್ಡಿ ದಂದೆ ಮಾಡುವವರ ವ್ಯವಹಾರದಲ್ಲೋ ಸರ್ಕಾರದ ಪಾತ್ರ ಏನೂ ಇಲ್ಲ ಬಿಡಿ.

ಬೊಮ್ಮ> ಕಂಪನಿಯೊಂದು ಕೆಲಸದಿಂದ ತೆಗೆದು ಹಾಕಿದ್ದನ್ನು ವಿರೋದಿಸಿ ಹಲವು ತಿಂಗಳ ಹೋರಾಟ ನಡೆಸಿಯೂ ಪರಿಹಾರ ಸಿಗದ ಕಾರಣ ಬೇಸತ್ತ ಕಾರ್ಮಿಕನೊಬ್ಬ ಆತ್ಮಹತ್ಯೆ.

ತಿಮ್ಮ> ಕಂಪನಿಯವರು ಕೆಲಸದಿಂದ ತೆಗೆದು ಹಾಕಿದ್ರೆ ಇನ್ನೊಂದು ಕಂಪನಿಯಲ್ಲಿ ಕೆಲಸಕ್ಕೆ ಸೇರ್ಕೋಬಹುದಿತ್ತು. ಈ ಹೋರಾಟ ಹಾರಟ ಎಲ್ಲಾ ಯಾಕ್ ಬೇಕಿತ್ತು? ಕಾರ್ಮಿಕ ಇಲಾಖೆಯಾಗಲೀ, ಸರ್ಕಾರ ಆಗಲಿ ಏನ್ಮಾಡೋಕೆ ಆಗುತ್ತೆ ಹೇಳಿ? ಅವನ್ಯಾವನೊ ಬುದ್ದಿಗೇಡಿ ಇರ್ಬೇಕು. ಬೇರೆ ಸುದ್ದಿ ಓದು.

ಬೊಮ್ಮ> ರಸ್ತೆ ನಡುವಿನಲ್ಲಿದ್ದ ಗುಂಡಿಗೆ ಬಿದ್ದ ಬೈಕ್ ಸವಾರ ಸಾವು. ಸೂಚನಾ ಫಲಕವಿಲ್ಲದ, ಹೊಗೆಯಿಂದಾಗಿ ಕಪ್ಪು ಬಣ್ಣ ತುಂಬಿಕೊಂಡಿದ್ದರಿಂದಾಗಿ ಚಾಲಕನ ಗಮನಕ್ಕೆ ಬಾರದೆ  ರಸ್ತೆ ವಿಭಜಕದ ಮೇಲೆ ಹತ್ತಿದ ಕಾರು, ಚಾಲಕ ಸಾವು. ಯಾವುದೇ ಸೂಚನೆ ಇಲ್ಲದೆ ವೇಗನಿಯಂತ್ರಿಸಲು ಪೊಲೀಸರು ರಸ್ತೆ ಮಧ್ಯದಲ್ಲಿ ಇಟ್ಟಿದ್ದ ಬ್ಯಾರಿಕೇಡ್ ಕಂಡ ಚಾಲಕನಿಂದ ಇದ್ದಕ್ಕಿದ್ದಂತೆ ಭ್ರೇಕ್. ಹಿಂದಿನಿಂದ ಬರುತ್ತಿದ್ದ ಡಿಕ್ಕಿ. ಒಬ್ಬನ ಸಾವು,  ಎರಡೂ ವಾಹನಗಳ ಜಕಂ. ಒಳಚರಂಡಿಯ ತೆರೆದ ಮ್ಯಾನ್ ಹೋಲ್ ಗೆ ಬಿದ್ದು ಪಾದಚಾರಿಯೊಬ್ಬನ ಸಾವು.

ತಿಮ್ಮ> ಇವರೆಲ್ಲಾ ಕುಡಿದು ರಸ್ತೆಗೆ  ಬರ್ತಾರೇನೊಪ್ಪ. ನೋಡ್ಕೊಂಡು ಓಡಾಡ್ಬೇಕಲ್ವ. ಇವರು ಮಾಡೋ 'ಅಜಾರೂಕತೆ ವಾಹನ ಚಾಲನೆ'ಗಳಿಗೆಲ್ಲಾ ಪೋಲೀಸರು ಹೊಣೆಯಾಗ್ತಾರಾ? ಅದ್ಯಾರೋ ಸರಿಯಾಗಿ ರಸ್ತೆ ನೋಡ್ಕೊಂಡ್ ಬರ್ದೆ ಮ್ಯಾನ್ ಹೋಲ್ ಗೆ ಬಿದ್ದು ಸತ್ರೆ ಇಲಾಖೆನಾ ದೂರೋಕಾಗುತ್ತಾ? 

ಬೊಮ್ಮ> ಮಂತ್ರಿ ಮತ್ತು ಮೇಲಧಿಕಾರಿಗಳ ಕಿರುಕುಳ, ಅಧಿಕಾರಿ ಆತ್ಮಹತ್ಯೆ.

ತಿಮ್ಮ> ಏನ್ ಸರ್ಕಾರ ರೀ ಇದು. ಒಬ್ಬ ಅಧಿಕಾರಿ ಆತ್ಮಹತ್ಯೆ ಮಾಡ್ಕೊಂಡಿದ್ದಾನೆ ಅಂದ್ರೆ ಈ ಸರ್ಕಾರ ಆತನಿಗೆ ಎಷ್ಟ್ ಕಿರುಕುಳ ಕೊಟ್ಟಿರಬಹುದು. ಧರಿದ್ರ ಸರ್ಕಾರ ರೀ ಇದು. ಆಧಿಕಾರಿಯ ಆತ್ಮಹತ್ಯೆಗೆ ಕಾರಣರಾದ ಸಚಿವರು ಮತ್ತು ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಕೇಸ್ ಹಾಕ್ಬೇಕ್ರಿ.