✍🏻ಇರ್ಷಾದ್ ಬಜ್ಪೆ #ಹೊಂಬೆಳಕು#
*ಸಹೋದರರೇ... ನಮ್ಮ ಪ್ರವಾದಿ (ಸ.ಅ) ರವರು ತಮ್ಮ ಕಾಲದಲ್ಲಿ ಈದ್ ದಿನದಂದು 'ಎಲ್ಲರೂ ಸಂತೋಷವಾಗಿದ್ದಾರೆ' ಎಂದು ಖಾತ್ರಿಪಡಿಸುತ್ತಿದ್ದರು ಮತ್ತು ಪ್ರವಾದಿಯೊಂದಿಗಿರುವಾಗ ತಮ್ಮ ಕೈಯಲ್ಲಿ ಏನಿಲ್ಲದಿದ್ದರೂ, ಉಡಲು ಬಟ್ಟೆಯಿಲ್ಲದಿದ್ದರೂ ಅವರು ಮರೆತು ಬಿಡುತ್ತಿದ್ದರು. ಆದರೆ, ಇಂದು??!!*
*ಈದ್* ಬಗ್ಗೆ ಯೋಚಿಸುವಾಗಲೆಲ್ಲಾ ಬಡವರ, ಮಿಸ್ಕೀನರ ಚಿತ್ರಗಳೇ ನಮ್ಮ ಕಣ್ಣೆದುರು ಮೂಡಿ ಬರುತ್ತಿದೆ. ಬೇಕು ಬೇಡಗಳ ಕಾಣದ ಅವರ ಮನೆಯ ಪರಿಸ್ಥಿತಿಯ ಅರಿವು ನಮಗೆಲ್ಲರಿಗೂ ಇದೆ. ಊರೆಲ್ಲಾ ಪುಟ್ಟ ಮಕ್ಕಳು ಈದ್ ಖುಷಿಯಿಂದ ಕುಣಿದಾಡುತ್ತಿರುವಾಗ ಅವರ ಮಕ್ಕಳು, ಹೊಸ ಬಟ್ಟೆಯಿಲ್ಲದೆ, ತಿನ್ನಲು ಸರಿಯಾದ ಆಹಾರವಿಲ್ಲದೆ ಈದ್ ದಿನವನ್ನು ಕಳೆಯುತ್ತಿದ್ದಾರೆ. ಹಬ್ಬದ ಸ್ವಾದ ಸವಿಯದೆ ದುಃಖದಿಂದಲೇ ದಿನ ದೂಡುತ್ತಿದ್ದಾರೆ.
*ನ*ಮ್ಮ ಸಮುದಾಯದೊಳಗೆ ಇಷ್ಟೆಲ್ಲಾ ಸಂಪತ್ತು ಮತ್ತು ಸೌಕರ್ಯಗಳಿರುವಾಗ ನಮಗೆ ಬಡವರು, ನಿರ್ಗತಿಕರು ಇರುವಂತಹ ಸ್ಥಳಕ್ಕೆ ತಲುಪಲು ಏಕೆ ಸಾಧ್ಯವಾಗುತ್ತಿಲ್ಲ?
ಪವಿತ್ರ ಇಸ್ಲಾಂ ಧರ್ಮ ಎಷ್ಟೊಂದು ನ್ಯಾಯಯುತ *ಝಕಾತ್* ವ್ಯವಸ್ಥೆ ಮಾಡಿದೆ, ಯಾಕೆಂದರೆ ಈದ್ ಅಥವಾ ಅದರ ನಂತರದ ದಿನಗಳಲ್ಲಿ ಯಾವ ಮುಸ್ಲಿಮನೂ ಕೂಡಾ ಹಸಿವಿನಿಂದ ಅಥವಾ ದುಃಖದಿಂದ ಇರಬಾರದೆಂದಲ್ಲವೇ? ಆದರೆ ನಾನಿಂದು, ನನ್ನ ನೆರೆಮನೆಯ ಅಥವಾ ಹತ್ತಿರದ ಮನೆಗಳ ಪರಿಸ್ಥಿತಿಯನ್ನು ಅರಿಯದಷ್ಟು ಈ ನಶ್ವರ ದುನಿಯಾದಲ್ಲಿ ಬ್ಯುಸಿಯಾದೆ! ಅಷ್ಟೊಂದು ಅಹಂಭಾವವೇ? ಸಮಯ ಅಥವಾ ಜ್ಞಾನದ ಕೊರತೆಯೇ? ಒಪ್ಪೊತ್ತಿನ ಊಟಕ್ಕಾಗಿ ಬೊಬ್ಬಿಡುತ್ತಿರುವ ಆ ಮಗುವಿನ ಆರ್ತನಾದ ಕೇಳಲು ಅಸಾಧ್ಯವಾದುದು ನಮ್ಮೆಲ್ಲರ ಕೊರತೆಯಲ್ಲವೇ? ಈ ಬಗ್ಗೆ ನಮ್ಮ ಮನದಲ್ಲಿ ಅಲ್ಪ ಅಲೋಚನೆಯಾದರೂ ಮೂಡಿದೆಯೇ?
*ಯಾ*ಕೆ ನಾನಿಷ್ಟು ಸ್ವಾರ್ಥಿಯಾಗುತ್ತಿದ್ದೇನೆ? ಪ್ರವಾದಿ(ಸ.ಅ) ಪದೇ ಪದೇ ಅತ್ತು ಕರೆದ ಆ ಉಮ್ಮತ್'ನಲ್ಲಿ ಇವರಾರೂ ಸ್ಥಾನ ಗಳಿಸಿಲ್ಲವೇ? ನಾವೂ ಪ್ರೀತಿಸುತ್ತಿರುವುದು ನಾನು, ನನ್ನದು, ಎಂಬ ಸ್ವಾರ್ಥ. ಅಲೋಚಿಸಿದಾಗ ಅಸಹ್ಯವೆನಿಸುವುದಿಲ್ಲವೇ? ಅವರಿಗಾಗಿ ಕಣ್ಣೀರಿಟ್ಟು ನಾನೆಷ್ಟು ಪ್ರಾರ್ಥಿಸಿದೆನು? ಅವರು ನಮ್ಮ ಬಳಿ ಬಂದು ಕೈ ಚಾಚಿದಾಗ ಅವರ ಮನದಲ್ಲಿದ್ದ ಆಕಾಂಕ್ಷೆಗಳೆಷ್ಟು? ಕನಿಷ್ಟ ನಿನ್ನ ಮುಗುಳ್ನಗೆಯಾದರೂ ಅವರಿಗೆ ಸಿಗದಾಗ ಅವರ ಮನಸ್ಸಲ್ಲುಂಟಾಗಿರಬಹುದಾದ ನೋವುಗಳೆಷ್ಟು? ನಿನ್ನ ಕ್ಷಣಿಕ ಸುಖದ ಪಾಲನ್ನು ಅವರು ಕೇಳಿಲ್ಲವಲ್ಲಾ? ಹೊಟ್ಟೆಗಾಗಿ, ಅಲ್ಪ ಬಟ್ಟೆಗಾಗಿ ಅಲ್ಲವೇ ಅರ್ಥೈಸಿದರೆ ನಿನಗೂ ಒಳಿತಲ್ಲವೇ?
*ಸೃ*ಷ್ಟಿಕರ್ತನ ನೋಟವಿದೆ.. ನೆನಪಿರಲಿ ನಿನಗೆ ಕೊಟ್ಟವನೂ ಅಲ್ಲಾಹನು, ಕೊಟ್ಟದ್ದನ್ನೇ ಅಲ್ಪ ಅವರಿಗೂ ನೀಡಲು ಹೇಳಿದ್ದನಲ್ಲವೇ? ಅವನ ಮಾತು ಕೇಳದೆ ಹೇಗೆ ತಾನೇ ನಮ್ಮ ಮೇಲೆ ಕರುಣೆ ತೋರಿಯಾನು?
*ಸ*ಮುದಾಯದೊಳಿರುವ ಬಡವರ ಏಳಿಗೆಗಾಗಿ ನಮ್ಮ ನಿಮ್ಮ ಕಣ್ಣೋಟವೊಂದಿರಲಿ, ದಾನದ ಹಿನ್ನಡೆಯು ಸಮುದಾಯದ ನಷ್ಟವೆಂಬುದು ಮನಸ್ಸಲ್ಲಿಟ್ಟು ಮುನ್ನಡೆಯೋಣ, ಅಲ್ಲಾಹನ ಕರುಣೆ ನಮ್ಮೆಲ್ಲರ ಮೇಲಿರಲಿ ಎಂದು ಆಶಿಸುತ್ತಾ,
*✍🏻ಇರ್ಷಾದ್ ಬಜ್ಪೆ*