ಜಮಾಅತ್ ಅಧ್ಯಕ್ಷರ ಜವಾಬ್ದಾರಿ ಮಸೀದಿಯೊಳಗಿನ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದಿರಲಿ...!!
ಸಮುದಾಯದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಗಣನೀಯ ಪ್ರಮಾಣದಲ್ಲಿ ಸಾಧನೆಯನ್ನು ಮಾಡುತ್ತಿರುವಾಗ ಮತ್ತೊಂದು ಕಡೆ ಸಮುದಾಯದ ನಡುವೆ ಆಳವಾಗಿ ಬೇರೂರುತ್ತಿರುವ ಜ್ವಲಂತ ಸಮಸ್ಯೆಗಳಾದ ಬಡತನ ಮತ್ತು ವರದಕ್ಷಿಣೆಯು ಸಮುದಾಯವನ್ನು ಅಧಃಪತನದತ್ತ ಕೊಂಡೊಯ್ಯುತ್ತಲೇ ಇದೆ.
ಕರಾವಳಿ ಭಾಗದಲ್ಲೇ ಪ್ರತಿಯೊಂದು ಜಮಾಅತ್ ಗಳಲ್ಲೂ ಒಂದಕ್ಕಿಂತ ಭಿನ್ನವಾದ ಮತ್ತೊಂದು ಸಮಸ್ಯೆಗಳು ಸಮುದಾಯವನ್ನು ಕಾಡುತ್ತಾ ಇದ್ದರೂ, ಅದರ ಕುರಿತು ಚಿಂತಿಸಬೇಕಾದಂತವರು, ಅದಕ್ಕೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನ ಮಾಡುವುದರ ಬದಲು ಅದನ್ನು ಕಾಣದಂತೆ ನಟಿಸುತ್ತಾ ಇರುವುದು ಕಾಲದ ದುರಂತ..!!
ಸಮುದಾಯದ ಅದೆಷ್ಟೋ ಪ್ರತಿಭೆಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿ ಮುಂದುವರಿಯುತ್ತಿರುವಾಗ ಕೆಲವೊಮ್ಮೆ ಕಾಡುವ ಬಡತನ, ಅವರ ಶೈಕ್ಷಣಿಕ ಸಾಧನೆಗೆ ತಡೆಯಾದರೂ, ಅದನ್ನು ಪ್ರಶ್ನಿಸುವಂತಹ ಮನಸ್ಸುಗಳು ಕೆಲವೊಮ್ಮೆ ನಮಗೆ ಕಾಣಿಸುವುದಿಲ್ಲ.
ಅಧಿಕಾರಕ್ಕಾಗಿ ಹಾತೊರೆದು ಅದೆಷ್ಟು ಕಷ್ಟಪಟ್ಟಾದರೂ ಅಧಿಕಾರವನ್ನು ಪಡೆದ ನಂತರ ತಮ್ಮ ಜವಾಬ್ದಾರಿಕೆಗಳು ಮಸೀದಿಯ ಚಟುವಟಿಕೆಗಳಿಗೆ ಮಾತ್ರ ಸೀಮಿತ ಅಂದುಕೊಂಡು ಮೌನ ವಹಿಸಿದುದರ ಪರಿಣಾಮವಾಗಿಯೇ ಇಂದು ಪ್ರತಿಯೊಂದು ಜಮಾಅತಿನಲ್ಲೂ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿದೆ,ಮುಸ್ಲಿಂ ಸಮುದಾಯದ ಹಲವರು ಇಂದು ಬೀದಿಗಿಳಿದು ಭಿಕ್ಷೆ ಬೇಡಲು ಕಾರಣವಾಗಿದೆ..!!
ಕೇವಲ ಕರಾವಳಿ ಭಾಗದಲ್ಲೇ ಅದೆಷ್ಟೋ ಆಗರ್ಭ ಶ್ರೀಮಂತರನ್ನು ಹೊಂದಿದ ಮುಸ್ಲಿಂ ಸಮುದಾಯದ ವ್ಯಕ್ತಿಗಳಿಂದ ಸಮುದಾಯದ ತಳಮಟ್ಟದ ಅಥವಾ ಬಡ ವರ್ಗದ ಕುರಿತು ಚಿಂತಿಸಿ,ಅವರ ನೋವಿಗೆ ಸ್ಪಂದಿಸುವ ಪ್ರಯತ್ನ ಮಾಡಿದ್ದರೆ ಇಂದು ಸಮುದಾಯ ಇಷ್ಟರ ಮಟ್ಟಿಗೆ ಕಷ್ಟದಾಯಕ ಪರಿಸ್ಥಿತಿಗೆ ಬಂದು ನಿಲ್ಲುತ್ತಿರಲಿಲ್ಲ.
ಸಾರ್ವಜನಿಕ ವೇದಿಕೆಗಳಲ್ಲಿ ಲಕ್ಷ ಲಕ್ಷ ದೇಣಿಗೆ ನೀಡುವ ಶ್ರೀ ಮಂತ ವರ್ಗವು, ಬಡವನೇನಾದರೂ ತನ್ನ ಮನೆಗೆ ಸಮಸ್ಯೆಗಳನ್ನು ಹೇಳಿಕೊಂಡು ಬಂದರೆ ಐವತ್ತೋ,ನೂರೋ ಕೊಟ್ಟು ಕಳುಹಿಸುವಷ್ಟು ನೀಚ ಮಟ್ಟಕ್ಕಿಳಿದು,ಸ್ವಾರ್ಥತೆ ಹಾಗೂ ಹೆಸರಿಗೋಸ್ಕರ ತಮ್ಮ ಸೇವೆಯನ್ನು ವಿಸ್ತರಿಸಿರುವುದು ವಿಪರ್ಯಾಸ.
ತನ್ನ ಜಮಾಅತಿನಲ್ಲಿ ಅದೆಷ್ಟು ಮನೆಗಳಿವೆ ಅನ್ನುವುದರ ಕುರಿತು ಸ್ಪಷ್ಟವಾದ ಅರಿವಿರುವ ಜಮಾಅತ್ ಅಧ್ಯಕ್ಷರಿಗೆ ಆ ಮನೆಯಲ್ಲಿ ಅದೆಷ್ಟು ಮನೆಗಳಲ್ಲಿ ಕಷ್ಟದಾಯಕ ಪರಿಸ್ಥಿತಿಗಳಿವೆ,ಅದೆಷ್ಟು ಸಹೋದರಿಯರು ದಾಂಪತ್ಯ ಜೀವನದ ಹೊಸ್ತಿಲಿಗೆ ಬಂದು ನಿಂತಿದ್ದಾರೆ ಅನ್ನುವುದರ ಕುರಿತು ಚಿಂತಿಸುವಷ್ಟು ಸಮಯವಿಲ್ಲ.
ಮಸೀದಿಯ ವಂತಿಗೆಯನ್ನು ಕೊಡಲು ಒಂದು ವಾರ ತಡವಾದರೆ ಜಮಾಅತಿಗರ ಮುಂದೆ ಗದರಿಸಿ ಪಡೆಯುವಾಗಲೂ, ಯಾಕೆ ನಿನಗೆ ಕೊಡಲು ಸಾಧಿಸಿಲ್ಲ ಅನ್ನುವುದರ ಕುರಿತು ಪ್ರಶ್ನಿಸುವಂತಹ ಸೌಜನ್ಯವೂ ಕೆಲವೊಮ್ಮೆ ಜಮಾಅತ್ ಅಧ್ಯಕ್ಷರಿಗಿರುವುದಿಲ್ಲ.ಬಡತನದ ಬೇಗುದಿಯಲ್ಲಿ ತನ್ನ ಮಗಳನ್ನು ಮದುವೆ ಮಾಡಿಸಲು ಸಾಧ್ಯವಾಗದೆ ಜಮಾಅತಿನ ಮುಂದೆ ನೆರವು ಯಾಚಿಸಿದರೆ ಜಮಾಅತಿನ ಲೆಟರ್ ಹೆಡ್ ಮೂಲಕ ಅರ್ಜಿ ಬರೆದು ಅವರನ್ನು ಭಿಕ್ಷಾಟನೆಗೆ ಕಳುಹಿಸುವ ಜಮಾಅತಿಗರಿರುವುದರಿಂದಲೇ ಇಂದು ಮುಸ್ಲಿಂ ಸಮುದಾಯದಲ್ಲಿ ಭಿಕ್ಷಾಟನೆಯ ಸಂಖ್ಯೆ ವೃದ್ಧಿಸುತ್ತಲೇ ಇರುವುದು.
ಇಂದು ಪ್ರತಿಯೊಂದು ಜಮಾಅತಿನಲ್ಲಿಯೂ ಅದೆಷ್ಟೋ ಸಹೋದರಿಯರು ವಿವಾಹ ಪ್ರಾಯ ಕಳೆದು ಮನೆಯ ನಾಲ್ಕು ಗೋಡೆಗಳ ಮಧ್ಯೆ ಯಾತನೆ ಅನುಭವಿಸುತ್ತಿದ್ದಾರೆ,ಅದರಲ್ಲಿ ಕೆಲವರು ಯತೀಂ ಮಕ್ಕಳಾದರೆ ಇನ್ನು ಕೆಲವರು ಬಡತನದ ಬೇಗುದಿಯಲ್ಲಿ ದಿನದೂಡುತ್ತಿರುವವ ಅಸಹಾಯಕರು.ಒಬ್ಬ ಜಮಾಅತ್ ಅಧ್ಯಕ್ಷನಾಗಿ ನನ್ನಿಂದ ಅದೇನು ಸಾಧ್ಯವಿದೆ ಅನ್ನುವುದರ ಕುರಿತು ಚಿಂತಿಸುವುದರ ಬದಲು ಜಮಾಅತಿನ ಸಮಸ್ಯೆಗಳನ್ನು ತಮ್ಮ ಸಮಸ್ಯೆಗಳಾಗಿ ಮನಗಂಡು ಅದಕ್ಕೆ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಚಿಂತಿಸಬೇಕಾಗಿರುವುದು ಕಾಲಘಟ್ಟದ ಅನಿವಾರ್ಯವಾಗಿದೆ.
ಹಿರಿಯರನ್ನು ಕಂಡಾಗ ಗೌರವಿಸುವಂತಹ ಒಂದು ಕಾಲವಿತ್ತು.ಜಮಾಅತಿನ ಅಧ್ಯಕ್ಷರ ಮಾತಿಗೆ ಬೆಲೆ ಕಲ್ಪಿಸುವ ಕಿರಿಯ ಜೀವಗಳು ಇದ್ದವು.ಆದರೆ ಇಂದು ಬಹುತೇಕ ಜಮಾಅತ್ ವ್ಯಾಪ್ತಿಯಲ್ಲಿ ಹಿರಿಯರ ಮುಂದೆಯೇ ಇನ್ನಷ್ಟೇ ಮೀಸೆ ಚಿಗುರೊಡೆಯಬೇಕಾದ ಹುಡುಗರು ಸಿಗರೇಟ್,ಗಾಂಜಾ ಮುಂತಾದ ಮಾದಕ ವಸ್ತುಗಳ ದಾಸರಾಗಿ ಬದಲಾಗುತ್ತಿದ್ದಾರೆ. ಇದಕ್ಕೆಲ್ಲಾ ಹೊಣೆ ಯಾರು..? ಸಮಾಜ ಹೆತ್ತವರತ್ತ ಕೈ ತೋರಿಸಿದರೂ ಅದರ ಒಂದು ಪಾಲು ಜಮಾಅತ್ ಅಧ್ಯಕ್ಷರಿಗೂ ಇದೆ ಅನ್ನುವುದು ಮಾತ್ರ ಕಟು ಸತ್ಯ.ತಮ್ಮ ಜಮಾಅತಿಗೊಳಪಟ್ಟ ಯುವಕರಿಗೆ ಸರಿಯಾದ ಮಾರ್ಗದರ್ಶನ ನೀಡಿ ಅವರನ್ನು ಸರಿದಾರಿಗೆ ತರುವಂತಹ ಪ್ರಯತ್ನ ಮಾಡಬೇಕಾಗಿರುವುದು ಸಹ ಜಮಾಅತ್ ಅಧ್ಯಕ್ಷರ ಕರ್ತವ್ಯವಾಗಿದೆ.ಆದರೆ ಇದಕ್ಕೆಲ್ಲಾ ಎಲ್ಲಿದೆ ಸಮಯ ತಾನೇ..?
ಒಂದು ಮಸೀದಿಯೊಳಗೆ ನಾಲ್ಕೈದು ಬಣಗಳಾಗಿ ದಿನನಿತ್ಯ ಇಲ್ಲದ ಸಮಸ್ಯೆಗಳನ್ನು ಸೃಷ್ಟಿಸಿ ಗದ್ದಲಗಳನ್ನು ನಡೆಸುವಾಗ ಜಮಾಅತಿನವರ ನೋವಿಗೆ ಸ್ಪಂದನೆಯಾಗಲು ಸಮಯವಾದರೂ ಎಲ್ಲಿದೆ..?!
ಮಸೀದಿಯ ಯಾವುದಾದರೂ ಕಾಮಗಾರಿಗಳಿಗೋ,ಇನ್ನಿತರ ಖರ್ಚುಗಳಿಗೆ ಕಲೆಕ್ಷನ್ ಮಾಡಲು ತೋರುವ ಉತ್ಸುಕತೆ ಜಮಾಅತಿನಲ್ಲಿರುವ ಅಸಹಾಯಕರ ನೋವಿಗೆ ತೋರದೆ ಇರುವುದು ಖೇದಕರ.
ಸಮುದಾಯದ ಅದೆಷ್ಟೋ ಮಕ್ಕಳು ಬಡತನದ ಕಾರಣದಿಂದ ಶೈಕ್ಷಣಿಕ ಹಾಗೂ ಧಾರ್ಮಿಕ ಶಿಕ್ಷಣಗಳನ್ನು ಅರ್ಧಕ್ಕೆ ಮೊಟಕುಗೊಳಿಸಿ ತನ್ನ ಸಣ್ಣ ಪ್ರಾಯದಲ್ಲೇ ಹೋಟೆಲ್ ಕೆಲಸಕ್ಕೋ,ಇನ್ನಿತರ ಕೆಲಸಗಳಿಗೆ ಹೋಗಿ ತಮ್ಮ ಭವಿಷ್ಯಗಳನ್ನು ನಷ್ಟಗೊಳಿಸುವಂತಹ ಸಂದರ್ಭಗಳು ನಮಗೆ ಕಾಣಿಸಲು ಸಾಧ್ಯವಾಗುತ್ತದೆ.ಕೆಲವೊಮ್ಮೆ ಅಂತಹ ಮಕ್ಕಳು ಸಮಾಜಕ್ಕೆ ಮಾರಕವಾಗಿ ಪರಿಣಮಿಸುತ್ತಾರೆ, ಇದಕ್ಕೆಲ್ಲಾ ಹೊಣೆ ಯಾರು..?
ಅಂತಹ ಮಕ್ಕಳ ನೋವಿಗೆ ಆಸರೆಯಾಗಿ ,ಅವರ ಕಷ್ಟಗಳಿಗೆ ಸ್ಪಂದಿಸುವಂತಹ ಪ್ರಯತ್ನ ಒಂದು ವೇಳೆ ಜಮಾಅತ್ ಮಾಡಿರುತ್ತಿದ್ದರೆ ಅವರೂ ಸಹ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದಲಾಗುತ್ತಿದ್ದರು ತಾನೇ.?
ಒಂದು ಜಮಾಅತಿನ ಅಧ್ಯಕ್ಷರಾಗಿ ಮಸೀದಿಯ ಕಾರ್ಯಚಟುವಟಿಕೆಗಳಿಗೆ ತಮ್ಮನ್ನು ತೊಡಗಿಸಿಕೊಳ್ಳದೆ ತಮ್ಮ ಜಮಾಅತಿನಲ್ಲಿರುವ ಅಸಹಾಯಕ ಕುಟುಂಬಗಳಿಗೆ ಆಗುವ ನೆರವನ್ನು ನೀಡುವ ಪ್ರಯತ್ನವನ್ನು ನಡೆಸಬೇಕಾಗಿದೆ.ತಮ್ಮ ಜಮಾಅತಿನ ಯುವಕರು ಹೊರದೇಶಗಳಲ್ಲಿ ದುಡಿಯುತ್ತಿದ್ದರೆ ಅವರನ್ನು ಸಂಘಟಿತರನ್ನಾಗಿಸಿ, ಅವರಿಂದ ಮಾಸಿಕವಾಗಿ ಸಿಗುವ ಮೊತ್ತವನ್ನು ಜಮಾತಿಗೊಳಪಟ್ಟ ಬಡ ಸಹೋದರಿಯರ ಮದುವೆಗೆ ಸಹಾಯವನ್ನು ಒದಗಿಸಿಕೊಡುವ ಮೂಲಕ ನೆರವಾಗಬೇಕಿದೆ.ಊರಿನ ಯುವಕರಿಗೆ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವುದರ ಜತೆಗೆ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಂತಹ ಪ್ರಯತ್ನ, ಮಾರ್ಗದರ್ಶನ ನೀಡಬೇಕಿದೆ.ತಮ್ಮ ಜಮಾಅತಿನಲ್ಲಿ ಬಡತನದ ಕಾರಣದಿಂದ ಶೈಕ್ಷಣಿಕ ಶಿಕ್ಷಣದಿಂದ ವಂಚಿತರಾಗುವ ವಿದ್ಯಾರ್ಥಿಗಳಿಗೆ ಎಲ್ಲಾ ವಿಧದ ನೆರವನ್ನು ನೀಡಿ ಅವರಿಗೆ ಕಲಿಕೆಯ ಮಹತ್ವವನ್ನು ಸಾರಿ ಹೇಳಬೇಕಾಗಿರುವುದು ಸಹ ಒಬ್ಬ ಜಮಾಅತ್ ಅಧ್ಯಕ್ಷನ ಜವಾಬ್ದಾರಿಕೆಯಾಗಿರುತ್ತದೆ.
ಕೇವಲ ಹೆಸರಿಗೋಸ್ಕರ ಜಮಾಅತ್ ಅಧ್ಯಕ್ಷರಾಗಿ, ತಮ್ಮ ಜಮಾಅತಿನ ನೊಂದವರ ನೋವನ್ನು ಅರ್ಥೈಸದೆ ಅವರನ್ನು ಭಿಕ್ಷಾಟನೆಗೆ ತಳ್ಳಲ್ಪಡುವಂತಹ ಪರಿಸ್ಥಿತಿಯನ್ನು ಸೃಷ್ಟಿಸದೆ,ಜಮಾಅತಿನ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನಗಳನ್ನು ಕೈಗೊಳ್ಳುವಂತವರಾಗಿರಿ.
📝ಸ್ನೇಹಜೀವಿ ಅಡ್ಕ