ಬುಧವಾರ, ಜೂನ್ 29, 2016

ಕಡ್ಡಾಯ ಸ್ನಾನ ಆಗದಿರಲಿ ಗೌಣ

ನನ್ನ ಮಾಹಿತಿ ಪ್ರಕಾರ ಹಲವರಿಗೆ ಕಡ್ಡಾಯ ಸ್ನಾನದ ಬಗ್ಗೆ ಸಂಶಯಗಳಿವೆ ಅಥವಾ ಕೆಲವರಿಗೆ ಗೊತ್ತೇ ಇಲ್ಲ. ಒಬ್ಬ ಪುರುಷ ಅಥವಾ ಮಹಿಳೆಗೆ ಸ್ನಾನ ಕಡ್ಡಾಯವಾದರೆ, ಕಡ್ಡಾಯ ಸ್ನಾನವನ್ನು ಮಾಡದ ಹೊರತು ಅವನಿಗೆ ನಮಾಝ್, ಕುರಾನ್ ಪಾರಾಯಣ, ಮಸೀದಿ ಪ್ರವೇಶ ಇತ್ಯಾದಿ ನಿಷಿದ್ಧವಾಗಿದೆ.

ಯಾರಿಗೆ, ಹೇಗೆ ಸ್ನಾನ ಕಡ್ಡಾಯವಾಗುತ್ತದೆ, ಎಂಬ ಬಗ್ಗೆ ತಮಗೆಲ್ಲರಿಗೂ ಗೊತ್ತಿರಬಹುದು.
ಆದುದರಿಂದ ನೇರವಾಗಿ ಕಡ್ಡಾಯ ಸ್ನಾನ ಮಾಡುವ ಬಗ್ಗೆ ತಿಳಿಯೋಣ...

ಕಡ್ಡಾಯ ಸ್ನಾನ ಎರಡು ವಿಧಗಳಲ್ಲಿ ಮಾಡಲಾಗುತ್ತದೆ,

1.ಸಂಕ್ಷಿಪ್ತ ರೂಪ:

ನಿಯ್ಯತಿನೊಂದಿಗೆ ಸ್ನಾನದ ಕಡ್ಡಾಯ ಕರ್ಮಗಳನ್ನು ಮಾತ್ರ ಮಾಡುವುದು. ದೇಹದ ಎಲ್ಲಾ ಭಾಗಗಳಿಗೂ ನೀರು ಹರಿಸುವುದು ಮತ್ತು ಬಾಯಿ ಹಾಗೂ ಮೂಗನ್ನು ತೊಳೆಯುವುದು. ಹೀಗೆ ಮಾಡುವುದರಿಂದ ಒಬ್ಬನ ಮೇಲೆ ಕಡ್ಡಾಯವಾದ ಸ್ನಾನವನ್ನು ಮಾಡಿದನು ಅಥವಾ ಅಶುದ್ಧತೆಯಿಂದ ಶುದ್ಧನಾಗುವನು. 

ಅಲ್ಲಾಹು ಪವಿತ್ರ ಕುರಾನ್ ಅಧ್ಯಾಯ 5: ಅಲ್ ಮಾಇದಃ, ಸೂಕ್ತ  6 ರಲ್ಲಿ ಹೇಳುತ್ತಾನೆ, "ಜನಾಬತ್ (ವೀರ್ಯಸ್ಖಲನ ನಂತರದ ಮಾಲಿನ್ಯ) ಸ್ಥಿತಿಯಲ್ಲಿದ್ದರೆ ಸ್ನಾನ ಮಾಡಿ ಶುದ್ಧರಾಗಿಕೊಳ್ಳಿರಿ".

2. ಪರಿಪೂರ್ಣ ರೂಪ:

🚿ನಿಯ್ಯತ್ (Intention)

"ದೊಡ್ಡ ಅಶುದ್ಧತೆಯಿಂದ ಶುದ್ಧಿಯಾಗಲು ಕಡ್ಡಾಯವಾದ ಸ್ನಾನವನ್ನು ನಾನು ಮಾಡುತ್ತೇನೆ" ಎಂದು ಮನಸ್ಸಿನಲ್ಲಿ ಸಂಕಲ್ಪಿಸಬೇಕು.

ನಂತರ ಅಲ್ಲಾಹನ ನಾಮದೊಂದಿಗೆ "ಬಿಸ್ಮಿಲ್ಲಾಹಿ ರ್ರಹ್ಮಾನಿರ್ರಹೀಮ್" ಎಂದು ಪ್ರಾರಂಭಿಸಬೇಕು.

ಮೊದಲು ಎರಡು ಕೈಗಳನ್ನು, ನಂತರ ಗುಪ್ತಾಂಗವನ್ನು ಮತ್ತು ನಜಸ್ ಅಥವಾ ಅಶುದ್ಧತೆ ಇರುವ ಭಾಗಗಳನ್ನು ತೊಳೆದು ಶುದ್ಧಗೊಳಿಸುವುದು.

ಸ್ನಾನದ ನಂತರ ನಮಾಝ್ ಮಾಡುವುದಿದ್ದರೆ, ಅಂಗಶುದ್ಧಿ (ವುಳೂಹ್) ಮಾಡುವುದು ಸುನ್ನತ್ ಆಗಿದೆ. ಕಾಲು ಪಾದ ಬೇಕಾದರೆ ಸ್ನಾನದ ಬಳಿಕ ತೊಳೆಯಬಹುದಾಗಿದೆ.

ಮೂರು ಬಾರಿ ಶುದ್ಧವಾದ (ತ್ವಹೂರಾದ) ನೀರನ್ನು ತಲೆಯ ಮೇಲೆ ಹರಿಸಬೇಕು, ಬೆರಳುಗಳಿಂದ  ತಲೆಯ ಕೂದಲಿನ ಬುಡದವರೆಗೂ ಮತ್ತು ತಲೆಯ ಭಾಗಕ್ಕೂ ನೀರು ಸ್ಪರ್ಶಿಸಬೇಕು. ಒಂದು ಕೂದಲು ಕೂಡಾ ನೆನೆಯದೇ ಉಳಿದರೆ ಸ್ನಾನ ನಿರರ್ಥಕವಾಗುವುದು.

ನಂತರ ಬಲಭಾಗದಿಂದ ಪ್ರಾರಂಭಿಸಿ, ಎಡಭಾಗಕ್ಕೆ ಮತ್ತು ದೇಹದ ಭಾಗಕ್ಕೆ ನೀರನ್ನು ಹರಿಸಬೇಕು. ಕಂಕುಳ (armpit), ಕಿವಿಗಳು, ಹೊಕ್ಕುಳ ಮತ್ತು ನೀರು ತಲುಪಲು ಸ್ವಲ್ಪ ಕಷ್ಟವಾಗುವ ದೇಹದ ಎಲ್ಲಾ ಭಾಗಗಳಿಗೆ (ಸೂಕ್ಷ್ಮವಾಗಿ ಗಮನಿಸಿ, ಸುಕ್ಕುಗಟ್ಟಿದ ಚರ್ಮ)  ನೀರು ಸ್ಪರ್ಶಿಸುವಂತೆ ಮಾಡುವುದು ಕಡ್ಡಾಯವಾಗಿದೆ. ಬಾಯಿ ಮತ್ತು ಮೂಗಿಗೆ ನೀರು ಹರಿಸಿ ತೊಳೆಯುವುದು ಕೂಡಾ ಅವಶ್ಯಕ. ನಂತರ (ಮೊದಲು ತೊಳೆಯದಿದ್ದರೆ) ತನ್ನ ಪಾದಗಳನ್ನು ತೊಳೆದು ವುಳೂಹ್ ಪೂರ್ತಿಗೊಳಿಸಬಹುದಾಗಿದೆ.

💥ಆಯಿಷಾ (ರ.ಅ) ಹೇಳುತ್ತಾರೆ:
"ಅಲ್ಲಾಹನ ರಸೂಲರು (ಸ.ಅ) ಲೈಂಗಿಕ ಸಂಪರ್ಕದ ಬಳಿಕ ಕಡ್ಡಾಯವಾದ ಸ್ನಾನವನ್ನು ಮಾಡುವಾಗ, ಮೊದಲು ತನ್ನ ಕೈಗಳೆರಡನ್ನು ತೊಳೆಯುತ್ತಿದ್ದರು, ನಂತರ ತನ್ನ ಬಲ ಕೈಯಿಂದ ಎಡಕೈಗೆ ನೀರು ಹರಿಸುತ್ತಿದ್ದರು, ಗುಪ್ತಾಂಗಗಳನ್ನು ಶುಚಿಗೊಳಿಸುತ್ತಿದ್ದರು. ನಂತರ ಅವರು ನಮಾಝಿಗಾಗಿ ವುಳೂಹ್ ಮಾಡಿ, ತಲೆಯ ಕೂದಲಿನ ಬುಡದವರೆಗೂ ಕೈ ಬೆರಳುಗಳಿಂದ ತಿಕ್ಕುತ್ತಾ ನೀರು ಹರಿಸುತ್ತಿದ್ದರು.  (ಕೊನೆಗೆ) ಕಾಲು ಪಾದವನ್ನು ಶುಚಿಗೊಳಿಸುತ್ತಿದ್ದರು. (ಮುಸ್ಲಿಂ #316)

📍ಗಮನಿಸಬೇಕಾದ ಕೆಲವು ಅಂಶಗಳು:
🚿 ಬಳಸುವ ನೀರು ತ್ವಹೂರ್ (ಶುದ್ಧ) ಆಗಿರಬೇಕು.

🚿 ಬಕೆಟಿನಲ್ಲಿ ತುಂಬಿಸಿ ಸ್ನಾನ ಮಾಡುವುದಾದರೆ, ಕೈಗಳು ಅಥವಾ ಕೈ ಬೆರಳುಗಳು ನೀರನ್ನು ಸ್ಪರ್ಶಿಸುವ ಮೊದಲು ಕಡ್ಡಾಯವಾಗಿ ಜನಾಬತ್ (ಮುಟ್ಟು) ನಿಯ್ಯತಿನೊಂದಿಗೆ ಕೈಯನ್ನು ಶುದ್ಧೀಕರಿಸಬೇಕು. ಶುದ್ಧೀಕರಿಸದೆ ಕೈ ಅಥವಾ ಕೈ ಬೆರಳುಗಳು ಎಲ್ಲಿಯಾದರೂ ನೀರನ್ನು ಸ್ಪರ್ಶಿಸಿದರೆ ಆ ನೀರು ಅಶುದ್ಧವಾಗುವುದು.

🚿ಒಮ್ಮೆ ಬಳಸಿದ ನೀರು ಅಥವಾ ಸ್ನಾನ ಮಾಡಿದ ನೀರು ಬಕೆಟಿಗೆ ಬೀಳದಂತೆ ಎಚ್ಚರವಹಿಸಬೇಕು. ಒಂದು ಹನಿ ಬಿದ್ದರೂ ಆ ನೀರು ಅಶುದ್ಧವಾಗುವುದು.

🚿 ಶರೀರದ ಭಾಗದಲ್ಲಿರುವ ನಜಸ್, ಅಶುದ್ಧತೆಯನ್ನು ಮತ್ತು ನೀರು ದೇಹದ ಭಾಗವನ್ನು ಸ್ಪರ್ಶಿಸುವುದನ್ನು ತಡೆಯುವ (ಪೈಂಟ್ ಇತ್ಯಾದಿ) ಮೊದಲೇ ನೀಗಿಸಬೇಕು.

🚿❌ ದೇಹದ ಎಲ್ಲಾ ಭಾಗಗಳಿಗೂ ನೀರು ತಲುಪಿ, ಒದ್ದೆಯಾಗಬೇಕು, ಒಂದು ಸೂಜಿ ಮೊನೆಯಷ್ಟು ಬಾಕಿಯಾದರೂ ಸ್ನಾನ ಸರಿಯಾಗಲಾರದು, ಅಸಿಂಧುವಾಗುವುದು.

🚿ಪತಿ ಪತ್ನಿ ಒಂದೇ ಪಾತ್ರೆ ಅಥವಾ ಬಕೆಟಿನಿಂದ ಸ್ನಾನ ಮಾಡಬಹುದಾಗಿದ್ದು, ಪ್ರವಾದಿ ಸ.ಅ ರವರು ಮತ್ತು ಪತ್ನಿಯೊಂದಿಗೆ ಹೀಗೆ ಸ್ನಾನ ಮಾಡಿರುವ ಬಗ್ಗೆ ಹದೀಸ್'ಗಳಲ್ಲಿ ಉಲ್ಲೇಖವಿದೆ.

🚿  ಕಡ್ಡಾಯ ಸ್ನಾನ ಮಾಡುವಾಗ, ಅದರೊಂದಿಗೆ ನಿಯ್ಯತಿನೊಂದಿಗೆ ಸುನ್ನತ್ತಾದ ಸ್ನಾನ ಮಾಡಬಹುದಾಗಿದೆ. ಉದಾಹರಣೆಗೆ, ನೀವು ಜನಾಬತ್ ಕಡ್ಡಾಯ ಸ್ನಾನ ಮಾಡುವಾಗಲೇ ಜುಮಾಃ ಸ್ನಾನ ಕೂಡಾ ಮಾಡಬಹುದಾಗಿದೆ.

💚ಅಲ್ಲಾಹು ಮಾತ್ರವಾಗಿದ್ದಾನೆ ಹೆಚ್ಚು ತಿಳಿದವನು.💚

ಈ ಅಗತ್ಯ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಹಂಚಿ,

📝 kebeer thaivalap👍