ರಕ್ತವನ್ನು ದೇಹದ ಇತರ ಭಾಗಗಳಿಗೆ ಪಂಪ್ ಮಾಡುವ ಮೂಲಕ ರವಾನಿಸುವ ಅತ್ಯಂತ ಪ್ರಮುಖವಾದ ಅಂಗವೇ ಹೃದಯ. ಅಪಧಮನಿಗಳು ಎಂದು ಕರೆಯಲಾಗುವ ರಕ್ತನಾಳಗಳ ಮೂಲಕ ಆಮ್ಲಜನಕವನ್ನು ಪಡೆಯುತ್ತದೆ. ರಕ್ತನಾಳಗಳು ಕಟ್ಟಿಕೊಂಡು ರಕ್ತ ಸಂಚಾರಕ್ಕೆ ಅಡಚಣೆಯುಂಟಾದರೆ, ಹೃದಯದ ಸ್ನಾಯುಗಳಿಗೆ ಅಗತ್ಯವಾದ ರಕ್ತದ ಪೂರೈಕೆಯಾಗದೇ ಅವು ಸಾಯುತ್ತವೆ. ಇದನ್ನೇ ಹೃದಯಾಘಾತ ಎನ್ನಲಾಗುತ್ತದೆ. ಹೃದಯದ ಸ್ನಾಯುಗಳಿಗೆ ಉಂಟಾಗುವ ಹಾನಿಗೆ ಅನುಗುಣವಾಗಿ, ಹೃದಯಾಘಾತದ ತೀವ್ರತೆಯನ್ನು ಗುರುತಿಸಲಾಗುತ್ತದೆ. ಸತ್ತ ಹೃದಯದ ಸ್ನಾಯು ಹೃದಯದ ಕಾರ್ಯವೈಖರಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಂದರೆ, ಹೃದಯ ಹೆಚ್ಚು ರಕ್ತವನ್ನು ಪಂಪ್ ಮಾಡಲಾಗದು
ಈ ಸ್ಥಿತಿಯನ್ನು ಕಂಜೆಸ್ಟಿವ್ ಹೃದಯ ವೈಫಲ್ಯ ಎನ್ನಲಾಗುತ್ತದೆ. ಸ್ಥಿತಿಯಿಂದ ಉಸಿರಾಟದ ಕೊರತೆ ಮತ್ತು ಪಾದಗಳಲ್ಲಿ ಬೆವರು ಕಾಣಿಸಿಕೊಳ್ಳುತ್ತದೆ.
ಇದು ಏಕೆ ಕಾಣಿಸಿಕೊಳ್ಳುತ್ತದೆ?
ನಾವು ಬೆಳೆದಂತೆಲ್ಲಾ, ದೇಹದ ವಿವಿಧ ರಕ್ತನಾಳಗಳ ಒಳ ಭಾಗದಲ್ಲಿ ಕೊಬ್ಬಿನ ಶೇಖರಣೆಯಾಗಿ, ಕ್ರಮೇಣ ರಕ್ತ ಸಂಚಾರಕ್ಕೆ ಅಡಚಣೆಯುಂಟಾಗುತ್ತದೆ. ಈ ಬಗೆಯಲ್ಲಿ ರಕ್ತ ನಾಳ ಕಿರಿದಾಗುವಿಕೆಯನ್ನು ಅಥೆರೋಸ್ಕೆಲೆರೋಸಿಸ್ ಎಂದು ಕರೆಯಲಾಗುತ್ತದೆ.
ಮಹಿಳೆಯರಿಗಿಂತ ಪುರುಷರಲ್ಲಿ ಹೃದಯಾಘಾತ ಹೆಚ್ಚು. ಈಸ್ಟ್ರೋಜನ್ ಮತ್ತು ಪ್ರೋಜೆಸ್ಟ್ರೋನ್ ಗಳೆಂಬ ಮಹಿಳೆಯರ ಲಿಂಗ ಹಾರ್ಮೋನುಗಳ ಪ್ರಭಾವದಿಂದಾಗಿ, ಮಹಿಳೆಯರಲ್ಲಿ ಹೃದಯಾಘಾತ ಕೊಂಚ ಕಡಿಮೆಯೇ ಎನ್ನಬಹುದು. ಈ ಬಗೆಯ ರಕ್ಷಣಾತ್ಮಕ ಪ್ರಭಾವ ಮಹಿಳೆಯರ ಮುಟ್ಟು ನಿಲ್ಲುವಿಕೆಯವರೆಗೂ ಇರಬಲ್ಲದು.ಏಷ್ಯನ್ನರು ಅದರಲ್ಲೂ ವಿಶೇಷವಾಗಿ ಭಾರತೀಯರಲ್ಲಿ ಹೃದಯಾಘಾತದ ಸಾಧ್ಯತೆ ಹೆಚ್ಚು.
ಈ ಗಂಡಾಂತರಕ್ಕೆ ಕಾರಣಗಳು:
ಧೂಮಪಾನ
ಡಯಾಬಿಟೀಸ್
ಹೆಚ್ಚಿನ ರಕ್ತದೊತ್ತಡ
ಹೆಚ್ಚಿನ ತೂಕ
ಹೆಚ್ಚಿನ ಕೊಲ್ಲೆಸ್ಟ್ರಾಲ್ ಮತ್ತು ಉತ್ತಮ ಕೊಬ್ಬಿನಂಶದ ಕಡಿಮೆ ಪ್ರಮಾಣ
ದೈಹಿಕ ಚಟುವಟಿಕೆಯ ಕೊರತೆ
ಕುಟುಂಬದಲ್ಲಿ ಹೃದಯಾಘಾತದ ಇತಿಹಾಸ
ಒತ್ತಡ, ಸತತ ಕೋಪ ಹಾಗೂ ಆತಂಕ
ವಂಶಪಾರಂಪರ್ಯ ಕಾರಣಗಳು
ರೋಗ ಲಕ್ಷಣಗಳೇನು?
ರೋಗ ಲಕ್ಷಣಗಳನ್ನು ಗುರುತಿಸಲು ತುಂಬ ಕಷ್ಟ. ಇವು ಮತ್ಯಾವುದೋ ಆನಾರೋಗ್ಯದ ಲಕ್ಷಣಗಳಂತೆಯೂ ಕಾಣಿಸಬಹುದು. ಆದರೆ, ಪ್ರಮುಖ ಲಕ್ಷಣವೆಂದರೆ, ಎದೆ ಭಾರದೊಂದಿಗೆ ಕೂಡಿದ ಎದೆನೋವು ಮತ್ತು ಉಸಿರಾಟದ ಕೊರತೆ. ಬೆವರುವಿಕೆ, ತಲೆ ಸುತ್ತುವಿಕೆ ಮತ್ತು ಪ್ರಜ್ಞಾಹೀನತೆಯಾಗುವ ಭಾವನೆಗಳು ಇದರ ಲಕ್ಷಣಗಳು. ನೋವು ಮುಖ್ಯವಾಗಿ ಎದೆಯ ಮುಂಭಾಗ ಅಥವಾ ಮೊಲೆ ಮೂಳೆಯ ಹಿಂಭಾಗದಲ್ಲಿರಬಹುದು. ನೋವು ಈ ಭಾಗದಿಂದ ಆರಂಭವಾಗಿ, ಕತ್ತು ಅಥವಾ ಎಡ ಭಾಗಕ್ಕೆ ಹೋಗಬಹುದು. ವಾಂತಿ, ಆತಂಕ, ಕೆಮ್ಮು ಮತ್ತು ನಾಡಿ ಬಡಿತದಲ್ಲಿ ಏರಿಕೆ, 20 ನಿಮಿಷಕ್ಕಿಂತ ಹೆಚ್ಚು ಕಾಲ ಕಾಣಿಸಿಕೊಳ್ಳುವ ನೋವು-ಇವು ಇತರ ಲಕ್ಷಣಗಳು. ಕೆಲ ಪ್ರಕರಣಗಳಲ್ಲಿ ರಕ್ತದೊತ್ತಡದಲ್ಲಿ ತೀವ್ರ ಕುಸಿತವುಂಟಾಗಿ ರೋಗಿಯು ನಿಸ್ತೇಜನಾಗಿ ಕಂಡು ಬರಬಹುದು. ಈ ಬಗೆಯ ರಕ್ತದೊತ್ತಡ ಕುಸಿತದಿಂದ ರೋಗಿಯು ಸಾವನ್ನಪ್ಪಬಹುದು.
ಇದನ್ನು ಪತ್ತೆ ಹಚ್ಚುವುದು ಹೇಗೆ?
ವೈದ್ಯರು ವ್ಯಕ್ತಿಯ ವಿವರವಾದ ವೈದ್ಯಕೀಯ ಇತಿಹಾಸವನ್ನು ಪರಿಶೀಲಿಸುವರು. ಆ ಬಳಿಕ ಹೃದಯದ ಬಡಿತ ಮತ್ತು ರಕ್ತದೊತ್ತಡವನ್ನು ದಾಖಲಿಸುವರು. ಹೃದಯದ ಚಟುವಟಿಕೆಯ ದಾಖಲೆಯಾದ ಎಲೆಕ್ಟ್ರೋ ಕಾರ್ಡಿಯೋಗ್ರಾಮ್, ಇಸಿಜಿ ತೆಗೆಯಲಾಗುತ್ತದೆ. ಹೃದಯದ ಬಡಿತದ ದರ, ಬಡಿತದಲ್ಲೇನಾದರೂ ವೈಪರಿತ್ಯಗಳಿವೆ ಮತ್ತು ಹೃದಯದ ಸ್ನಾಯುಗಳಿಗೇನದರೂ ಹಾನಿಯುಂಟಾಗಿದೆಯೇ ಎಂಬ ಮಾಹಿತಿಯನ್ನು ಇಸಿಜಿ ನೀಡುತ್ತದೆ. ಆರಂಭದ ಹಂತದಲ್ಲಿ ಸಾಮಾನ್ಯ ಇಸಿಜಿಯು ಹೃದಯಾಘಾತವನ್ನು ಹೊರೆಗಡಬಲ್ಲದು. ಹೃದಯದ ಸ್ನಾಯುಗಳು ಹಾನಿಗೊಂಡಿರುವುದನ್ನು ರಕ್ತದ ಪರೀಕ್ಷೆಗಳು ಖಚಿತ ಪಡಿಸಲು ಸಹಕಾರಿ. ಹೃದಯದ ಚಟುವಟಿಕೆಯ ಕುರಿತು ಉಪಯುಕ್ತ ಮಾಹಿತಿಯನ್ನು ಅರಿಯಲು ಇಕೋ ಕಾರ್ಡಿಯೋಗ್ರಾಮ್ ಎಂಬ ಸ್ಕ್ಯಾನ್ ಸಹಾಯ ಮಾಡುತ್ತದೆ. ರಕ್ತನಾಳಗಳಲ್ಲಿ ಅಡಚಟಣೆ ಉಂಟಾಗಿರುವುದು ಖಚಿತ ಪಡಿಸುವುದು ಕರೋನರಿ ಆಂಜಿಯೋಗ್ರಾಮ್.
ಹೃದಯಾಘಾತದ ಸಂದರ್ಭದಲ್ಲಿ ರೋಗಿಗೆ ನೀಡುವ ಪ್ರಥಮ ಚಿಕಿತ್ಸೆಯೇನು?
ಹೃದಯಾಘಾತದ ಸಂದರ್ಭದಲ್ಲಿ ತತ್ ಕ್ಷಣ ಚಿಕಿತ್ಸೆ ನೀಡುವುದರಿಂದ ಜೀವನವನ್ನು ಉಳಿಸಬಹುದು. ತಜ್ಞ ವೈದ್ಯರು ಬರುವವರೆಗೂ ರೋಗಿಯನ್ನು ಮಲಗಿಸಿಯೇ ಇರಬೇಕು ಮತ್ತು ಬಿಗಿಯಾದ ಉಡುಪುಗಳನ್ನು ಸಡಿಲಿಸಬೇಕು. ಆಮ್ಲಜನಕದ ಸಿಲಿಂಡರ್ ಲಭ್ಯವಿದ್ದಲ್ಲಿ ಆಮ್ಲಜನಕವನ್ನು ರೋಗಿಗೆ ನೀಡಬೇಕು.ನೈಟ್ರೋಗ್ಲಿಸರೀನ್ ಅಥವಾ ಸಾರ್ಬಿಟ್ರೇಟ್ ಮಾತ್ರೆಗಳು ಲಭ್ಯವಿದ್ದಲ್ಲಿ, ಒಂದೆರಡು ಮಾತ್ರೆಗಳನ್ನು ನಾಲಿಗೆಯ ಕೆಳಗಿಡಬೇಕು. ಆಸ್ಪ್ರಿನ್ ಮಾತ್ರೆಯನ್ನು ಕರಗಿಸಿ ನೀಡಬೇಕು.
ಚಿಕಿತ್ಸೆಯೇನು?
ಹೃದಯಾಘಾತ ಸಂದರ್ಭವು ತುರ್ತು ವೈದ್ಯಕೀಯ ನಿಗಾವನ್ನು ಬೇಡುತ್ತದೆ ಮತ್ತು ರೋಗಿಯನ್ನು ಆಸ್ಪತ್ರೆಗೆ ಸೇರಿಸಬೇಕು. ಹೃದಯಾಘಾತವಾದ ಆರಂಭಿಕ ಕೆಲ ನಿಮಿಷ ಅಥವಾ ಕೆಲ ಗಂಟೆಗಳು ಅತ್ಯಂತ ಗಂಡಾಂತರಕಾರಿ. ಆರಂಭದಲ್ಲಿಯೇ ಪತ್ತೆಯಾದಾಗ, ಸೂಕ್ತವಾದ ಔಷಧಿಗಳ ಮೂಲಕ ನೀಡಿ ರಕ್ತನಾಳಗಳಲ್ಲಿನ ರಕ್ತದ ಕರಣೆಯನ್ನು ಕರಗಿಸಬಹುದು. ಹೃದಯದ ಬಡಿತದ ವೈಪರಿತ್ಯವನ್ನು ಗಮನಿಸಿ, ಸೂಕ್ತ ಚಿಕಿತ್ಸೆ ನೀಡಬಹುದು. ರಕ್ತದೊತ್ತಡ ಜಾಸ್ತಿಯಿದ್ದರೆ, ಅದನ್ನು ಕಡಿಮೆ ಮಾಡಲು ಸೂಕ್ತ ಚಿಕಿತ್ಸೆ ನೀಡಬೇಕು. ನಿರ್ದಿಷ್ಟವಾದ ಚಿಕಿತ್ಸೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ರೋಗಿಯ ವಯಸ್ಸು, ಹೃದಯಾಘಾತದ ಪ್ರಮಾಣ, ಹೃದಯದ ಸ್ನಾಯುಗಳಿಗೆ ಆಗಿರುವ ಹಾನಿಯ ಪ್ರಮಾಣ ಮತ್ತು ರಕ್ತನಾಳದಲ್ಲಿ ಕಾಣಿಸಿಕೊಂಡಿರುವ ಅಡಚಣೆಗಳ ಮೇಲೆ ನಿರ್ಧರಿಸಲಾಗುತ್ತದೆ. ಅನೇಕ ಸಂದರ್ಭದಲ್ಲಿ ಈ ಅಡಚಣೆಗಳನ್ನು ನಿವಾರಿಸಲು ಕೆಲ ನಿರ್ದಿಷ್ಟ ತಂತ್ರಗಳನ್ನು ಬಳಸಲಾಗುತ್ತದೆ. ಕರೋನರಿ ಅಂಜಿಯೋಪ್ಲಾಸ್ಟಿ, ಬಲೂನುಗಳ ಮೂಲಕ ರಕ್ತನಾಳಗಳನ್ನು ಹಿಗ್ಗಿಸುವ ತಂತ್ರ ಅಥವಾ ಕರೋನರಿ ಬೈಪಾಸ್ ಸರ್ಜರಿ ತಂತ್ರಗಳ ಮುಖಾಂತರ ಅಡಚಣೆಗಳನ್ನು ನಿವಾರಿಸಬಹುದು.
ಹೃದಯಾಘಾತಗಳನ್ನು ತಡೆಯುವುದು ಹೇಗೆ?
ಹೃದಯಾಘಾತಗಳಿಗೆ ಒಳಗಾಗುವ ಸಾಧ್ಯತೆಯಿರುವವರು ಈ ಕೆಳಕಂಡ ಕ್ರಮವನ್ನು ಕೈಗೊಳ್ಳಬೇಕು: ಜೀವನಶೈಲಿಯಲ್ಲಿ ಬದಲಾವಣೆ
ಆಹಾರವು ಆರೋಗ್ಯಪೂರ್ಣವಾಗಿದ್ದು, ಕೊಬ್ಬು ಮತ್ತು ಉಪ್ಪಿನ ಪ್ರಮಾಣ ಕಡಿಮೆಯಿರಬೇಕು. ನಾರಿನಂಶ ಹಾಗೂ ಸಂಕೀರ್ಣ ಪಿಷ್ಟಗಳು ಹೆಚ್ಚಿರುವ ಆಹಾರವನ್ನು ಸೇವಿಸಬೇಕು.
ತೂಕ ಹೆಚ್ಚಿರುವವರು, ತೂಕ ಇಳಿಸಬೇಕು.
ದೈಹಿಕ ಚಟುವಟಿಕೆ, ಕಸರತ್ತುಗಳನ್ನು ದಿನಂಪ್ರತಿ ಮಾಡಬೇಕು.
ಧೂಮಪಾನವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.
ಡಯಾಬಿಟೀಸ್, ಹೆಚ್ಚಿನ ರಕ್ತದೊತ್ತಡ ಹಾಗೂ ಹೆಚ್ಚಿನ ಕೊಲ್ಲೆಸ್ಟ್ರಾಲ್ ಹೊಂದಿರುವವರು ಸೂಕ್ತವಾದ ಔಷಧವನ್ನು ಸೇವಿಸುವ ಮೂಲಕ ಈ ಕಾಯಿಲೆಗಳನ್ನು ಹತೋಟಿಯಲ್ಲಿಡಬೇಕು.
ಮೂಲ :ವಿಕಾಸ್ ಪೀಡಿಯಾ