ನ್ಯಾಯ ಸಾಧಿಸಲು ಸಾಕಷ್ಟು ಧೈರ್ಯ ನಾನು ಪಡೆದಿಲ್ಲವೆಂದು ಅರಿವಾದಾಗ ಅನ್ಯಾಯ ನನ್ನಲ್ಲಿ ಭೀತಿ ಹುಟ್ಟಿಸುತ್ತದೆ
ಬೆಳಗುವ ಹಗಲಿಗೆ ನನ್ನೊಳಗಿನ ಕತ್ತಲನ್ನು ನೀಗಿಸಲು ಸಾಧ್ಯವಿಲ್ಲವೆಂದು ಅರಿವಾದಾಗ ರಾತ್ರಿ ನನ್ನಲ್ಲಿ ಭೀತಿ ಹುಟ್ಟಿಸುತ್ತದೆ
ಸುದೀರ್ಘ ವರ್ಷಗಳ ಕಾಲ ನಾನು ಜತನ ಮಾಡುತ್ತಾ ಬಂದಿರುವ ನನ್ನ ಈ ದೇಹದ ಅಂತ್ಯವೇನಾಗಿರಬಹುದೆಂದು ತಿಳಿಯದಾದಾಗ ಸಮಾಧಿ ನನ್ನಲ್ಲಿ ಭೀತಿ ಹುಟ್ಟಿಸುತ್ತದೆ
ಸಂತಸದ ತೀವ್ರತೆ, ತೀಕ್ಷ್ಣವಾಗಿ ಮರೆಯಾಗುವ ದುಃಖಕ್ಕೆ ಸಮವಾದಾಗ ಸಂತಸವೂ ನನ್ನಲ್ಲಿ ಭೀತಿ ಹುಟ್ಟಿಸುತ್ತದೆ.
ನನ್ನ ಭಾವನೆಗಳು ನುಚ್ಚುನೂರಾಗಿ ಅಳಿದು ಹೋಗದೆಂದು ನೂರು ಪ್ರತಿಶತ ಗ್ರಹಿಸಲು ಸಾಧ್ಯವಾಗಲಾರದೆಂದು ಮನವರಿಕೆಯಾದಾಗ ಪ್ರೀತಿಯೂ ನನ್ನಲ್ಲಿ ಭೀತಿ ಹುಟ್ಟಿಸುತ್ತದೆ.
ಮನುಷ್ಯನೊಂದಿಗೆ ಹಾಗೂ ವಸ್ತುಗಳೊಂದಿಗೆ ನಂಟು ಬೆಳೆಸುವಾಗ ಅದನ್ನು ಕಳೆದುಕೊಳ್ಳುವ ಭೀತಿ ನನಗೆ
ಬದುಕೆಂದರೂ ನನಗೆ ಭಯ, ಯಾಕೆಂದರೆ ನನ್ನ ಅನುಮತಿಯಿಲ್ಲದೇ ನನ್ನನ್ನು ದೂಡಿ ತಂದು ಅದರ ಮಗ್ಗುಲಲ್ಲಿರಿಸಲಾಗಿದೆ
ಬಲವಾದ ಕಾರಣಗಳ ಹಿನ್ನೆಲೆಯಲ್ಲಿ ಸೋತುಹೋದವರನ್ನು ನೋಡುವಾಗ ನನಗೆ ನಂಬಿಕೆ ಮತ್ತು ನಿರೀಕ್ಷೆಯೆಂದರೂ ಭಯ
ಅಲ್ಲಾಹನು ನನ್ನೊಳಗಿರುವುದನ್ನೆಲ್ಲಾ ಬಲ್ಲವನಾಗಿದ್ದಾನೆ ಎಂದರಿವಾದಾಗ ಅಲ್ಲಾಹನ ಭಯ ನನ್ನನ್ನಾವರಿಸುತ್ತದೆ ಆದರೆ ಅವನ ಯುಕ್ತಿ ಮತ್ತು ನಿಯಮಗಳೇನೂ ನನಗೆ ಅರ್ಥವಾಗುವುದೇ ಇಲ್ಲ.
ಅಶ್ರು ತುಂಬಿದ ನನ್ನ ಕಣ್ಣುಗಳೂ ನನ್ನಲ್ಲಿ ಭೀತಿ ಹುಟ್ಟಿಸುತ್ತದೆ, ಅದು ನನ್ನ ಹೃದಯದ ಮೇಲೆ ಒತ್ತಡ ಹಾಕುತ್ತದಲ್ಲವೇ!? ಅದೆಲ್ಲಿ ನಿಂತು ಹೋಗುವುದೋ ಎಂಬ ಭೀತಿ ಬೇರೆ..
ಯಾವುದೇ ಮುನ್ಸೂಚನೆಯಿಲ್ಲದೇ ಕೆರಳಿ ಮುನ್ನುಗ್ಗುವ ಸಮುದ್ರವನ್ನು ನೋಡಿದರೂ ನನಗೆ ಆತಂಕ ನಿಧಾನ ಹಿಗ್ಗುತ್ತಾ ಹೋಗಿ ಹುಣ್ಣಿಮೆಗೆ ಪೂರ್ಣನಾಗಿ ಕ್ರಮೇಣ ಕುಗ್ಗುತ್ತಾ ಮಂದಗೊಳ್ಳುತ್ತಾ ಕೊನೆಗೆ ಇಲ್ಲವಾಗುವ ಚಂದ್ರನನ್ನು ನೋಡಿದರೂ ನನಗೆ ಭಯ
ನನ್ನ ಹಿಂದೆ ಬಿದ್ದು ನಾನದನ್ನು ಅರ್ಥ ಮಾಡಿಯೇ ತೀರಬೇಕೆಂದು ಪಟ್ಟುಹಿಡಿಯುವ ನನ್ನ ಮನಸ್ಸೂ ನನ್ನಲ್ಲಿ ಭೀತಿ ಹುಟ್ಟಿಸುತ್ತದೆ
ಯಾಕೆಂದರೆ ಅದನ್ನು ಅರ್ಥಮಾಡಿಕೊಳ್ಳುವುದು ನನ್ನಿಂದ ಸಾಧ್ಯವಾಗುವುದಿಲ್ಲ
ದಾರಿಯ ತುದಿಯನ್ನು ನೋಡಲು ಅಸಾಧ್ಯವಾದಾಗ ದಾರಿಯೂ ನನ್ನಲ್ಲಿ ಭೀತಿ ಹುಟ್ಟಿಸುತ್ತದೆ
ನನ್ನ ದಾರಿಯನ್ನು ಬೆಳಗಿಸುವ ಆದರೆ ಹತ್ತಿರ ಹೋಗಲು ಪ್ರಯತ್ನಿಸಿದರೆ ಸುಟ್ಟೇ ಬಿಡುವ ಸೂರ್ಯನೂ ನನ್ನಲ್ಲಿ ಭೀತಿ ಹುಟ್ಟಿಸುತ್ತಾನೆ
ಸದಾ ಸಿಂಡರಿಸಿಕೊಂಡಿರುವ, ಸದಾ ನಗುತ್ತಿರುವ, ನಿಗೂಢವಾಗಿರುವ ಹಾಗೂ ವಿಲಕ್ಷಣವಾದ ಮುಖಗಳೂ ನನ್ನಲ್ಲಿ ಭೀತಿ ಹುಟ್ಟಿಸುತ್ತದೆ.. ಹೌದು ಅವುಗಳ ಮೇಲೆ ಯಾವುದೇ ಪ್ರಭಾವ ಬೀರಲು ಅಸಾಧ್ಯವಾದಾಗ ಮತ್ತು ಅವುಗಳಲ್ಲಿ ಉತ್ಕರ್ಷ ಬದಲಾವಣೆ ನನ್ನಿಂದ ಸಾಧ್ಯವಾಗದೇ ಹೋದಾಗ ಆ ಮುಖಗಳಿಂದಲೂ ನಾನು ಭಯಭೀತನಾಗುತ್ತೇನೆ
ನಾನು ಸತ್ತವರನ್ನು ಕರೆಯುತ್ತೇನೆ ನನ್ನ ಕರೆಗೆ ಅವರೇನೂ ಪ್ರತಿಕ್ರಿಯಿಸದಿರುವುದನ್ನು ನೋಡಿದಾಗ ಸತ್ತವರೂ ನನ್ನಲ್ಲಿ ಭೀತಿ ಹುಟ್ಟಿಸುತ್ತಾರೆ
ಕ್ಷಣ ಕ್ಷಣವೂ ಭೀತಿಯೊಂದಿಗೇ ಸಾಗುತ್ತಿರುವ ನನ್ನ ಆಯುಷ್ಯವೂ ನನ್ನಲ್ಲಿ ಭೀತಿ ಹುಟ್ಟಿಸುತ್ತದೆ.
ಲೇಖಕರು: ಇಜಾಝ್ ಉಮರಿ
(ಅರಬೀ ಸಾಹಿತ್ಯದಿಂದ)