ಶನಿವಾರ, ಮಾರ್ಚ್ 4, 2017

ಅಪ್ಪಾ..!! ನಾನ್ಯಾಕೋ ನಿನಗಿಂದು ಬೇಡವಾದನೇ..?!!

ಅಪ್ಪಾ...
        ತಾಯಿಯ ಉದರದೊಳಗೆ ನಾನು ಬೆಳೆಯುತ್ತಿರುವಾಗ ನೀನು ಅದೆಷ್ಟು ಖುಷಿಪಡುತ್ತಿದ್ದೆ..? ತಾಯಿಗೆ ಫೋನ್ ಮಾಡಿ ಅದೆಷ್ಟು ಸಮಾಧಾನ ಹೇಳುತ್ತಿದ್ದಿ ಅಲ್ವಾ..?
ನನ್ನನ್ನು ನೋಡದೆಯೇ,ನೋಡಬೇಕೆನ್ನುವ ತವಕದಲ್ಲಿ ಅದೆಷ್ಟು ಕನಸುಗಳ ಗೋಪುರ ಕಟ್ಟಿರುವೆಯಾ..? ನಿನ್ನ ಗೆಳೆಯರೊಡನೆ ನನ್ನ ವಿಷಯ ಹೇಳಿ ನೀನು ಸಂತೋಷ ಪಡುವಾಗಲೆಲ್ಲಾ, ಅಮ್ಮ ನಿನ್ನ ಸಂತೋಷ ನೋಡಿ ಆನಂದಬಾಷ್ಪವನ್ನು ಹರಿಸುತ್ತಿರುವುದನ್ನು ನೀನೆಂದಾದರೂ ಗಮನಿಸಿರುವೆಯಾ..? ತಾಯಿಯನ್ನು ಏಕಾಂತದಲ್ಲಿರಿಸಿ ನೀನು ಕೆಲಸವನ್ನು ಅರಸುತ್ತಾ ಅತ್ತ ದೂರದೂರಿಗೆ ಹೋಗುವಾಗ ತಾಯಿಯ ಮನದಾಳದಲ್ಲಿ ಮಡುಗಟ್ಡಿದ ನೋವನ್ನು ಮರೆಮಾಚಿ ನಿನ್ನನ್ನು ಬೀಳ್ಕೊಡುವಾಗಲೂ ಪದೇ ಪದೇ ಬರುತ್ತಿರುವ ನನ್ನ ನೆನಪುಗಳನ್ನು ನಿನಗೆ ಕಾಣದಂತೆ ಅದುಮಿಡುವಾಗಲೂ ನಿನಗೆ ತಾಯಿಯ ಕಣ್ಣೀರನ್ನು ಕಾಣದಂತೆ ಮಾಡಲು ತಾಯಿ ಪಟ್ಟ ಕಷ್ಟ ನೀನು ಅರ್ಥೈಸಿರುವೆಯಾ..?

ಅಪ್ಪಾ...ನಿನಗೊಂದು ವಿಷಯ ಗೊತ್ತಾ..? ಅದೆಷ್ಟೋ ನೋವನ್ನನುಭವಿಸಿ ನನ್ನನ್ನು ಜನ್ಮವಿತ್ತಾಗ ನನ್ನನ್ನು ಮುದ್ದಿಸಿ, ನಿನಗೆ ನನ್ನನ್ನು ತೋರಿಸಿ ಸಂತೋಷವನ್ನು ಹಂಚಿಕೊಳ್ಳಲು ತಾಯಿ ಅದೆಷ್ಟು ಹುಡುಕಾಡಿದಳು ಅಂತ ನಿನಗೊತ್ತಾ..? ಎಲ್ಲಾ ದಿನವೂ ನನ್ನದೇ ವಿಷಯವನ್ನು ಮಾತನಾಡುತ್ತಾ ನನ್ನನ್ನು ನೋಡುವ ತವಕವನ್ನು ಮಾಡುತ್ತಿದ್ದ ನೀನು ಇನ್ನೂ ಯಾಕೆ ನನ್ನನ್ನು ನೋಡಲು ಬಂದಿಲ್ಲ..? ನನ್ನನ್ನು ನೋಡಲು ಬಂದ ನೆಂಟರಿಷ್ಟರೆಲ್ಲಾ ನನ್ನನ್ನು ಎತ್ತಿಕೊಂಡು ನನಗೊಂದು ಮುತ್ತಿಡುತ್ತಾ " ನೀನು ನಿನ್ನ ತಂದೆಯನ್ನೇ ಹೋಲುವಂತಿರುವಿ,ಅದೇ ಮುಖ " ಅಂತೆಲ್ಲಾ ಹೇಳುವಾಗ ತಾಯಿ ನೀನಿಲ್ಲದ ಕೊರಗಿನಿಂದ ಅದೆಷ್ಟು ರಾತ್ರಿ ನಿದ್ದೆಯಿಲ್ಲದೆ ಕಳೆದಿದ್ದಾಳೆ ಅಂತ ನಿನಗೆ ಗೊತ್ತಿದೆಯಾ..?
ನಿನ್ನ ಮೇಲೆ ನನಗೆ ಕನಿಕರವಿದೆ.ನಮಗೋಸ್ಕರನೇ ನೀನಲ್ಲಿ ಕಷ್ಟಪಡುತ್ತಿರುವಿ ಅಂತನೂ ಗೊತ್ತು,ಆದರೆ ಅದೆಷ್ಟು ಸಂಪಾದಿಸಿದರೂ,ಅದೆಷ್ಟು ಬಂಗಲೆಯನ್ನು ನಿರ್ಮಿಸಿದರೂ ಅದರಿಂದ ಸ್ನೇಹ,ಪ್ರೀತಿಯನ್ನು ಖರೀದಿಸಲಾಗದು ಅನ್ನುವ ವಾಸ್ತವ ಸತ್ಯವನ್ನು ಮರೆತು ಬಿಟ್ಟೆಯಾ ನೀನು..??!

ಹೌದು,
         ಇಂತಹ ಅದೆಷ್ಟೋ ಪ್ರಶ್ನೆಗಳನ್ನು ಮುಂದಿಡುವ ಮಕ್ಕಳನ್ನು ನಮಗೆ ಕಾಣಿಸಲು ಸಾಧ್ಯ.ಜೀವನದ ಯಾವುದೋ ಉದ್ದೇಶಗಳನ್ನು ಇಟ್ಟುಕೊಂಡು ಕೆಲಸದ ನಿಮಿತ್ತ ವಿದೇಶಕ್ಕೋ,ದೂರದ ಊರಿಗೋ ಹೋಗುವ ಅದೆಷ್ಟೋ ಅಪ್ಪಂದಿರು ತಮ್ಮ ಮಕ್ಕಳ ಮುಖವನ್ನು ನೋಡಿ ಮುತ್ತಿಡುವಂತಹ ಅವಕಾಶವನ್ನು ಕಳೆದು ನೋವು ತುಂಬಿಕೊಂಡು ಜೀವಿಸುವವರೂ ಇದ್ದಾರೆ.
ಒಂಭತ್ತು ತಿಂಗಳು ಗರ್ಭಧರಿಸಿ ಮುದ್ದು ಮುದ್ದಾದ ಮಗುವಿಗೆ ಜನ್ಮ ನೀಡುವ ಒಬ್ಬಳು ಸಹೋದರಿಯು
ತನ್ನ ಗಂಡನಾದವನು ತನ್ನ ಜತೆ ಇರಬೇಕೆಂದು ಬಯುಸುತ್ತಲೇ ಇರುತ್ತಾಳೆ.ಮಗುವಿನ ಚಲನವಲನಗಳನ್ನು ನೋಡುತ್ತಾ ತನ್ನ ಇನಿಯನ ಜತೆ ಕಳೆಯಲು ಆಕೆಯ ಮನ ತುಡಿಯುತ್ತಿರುತ್ತದೆ.

ಕೆಲವರು ಅನಿವಾರ್ಯ ಕಾರಣಗಳಿಂದ ವಿದೇಶಕ್ಕೆ ಹೋದರೆ ಸಮಯಕ್ಕೆ ಸರಿಯಾಗಿ ರಜೆ ಸಿಗದಿರುವುದರಿಂದಲೋ,ಇನ್ಯಾವುದೋ ಕಾರಣಗಳಿಂದಲೋ ಬರಲು ಅಸಾಧ್ಯವಾದರೆ ಹೆಂಡತಿಯಾದವಳು ತುಂಬಾ ಬೇಸರವನ್ನು ವ್ಯಕ್ತಪಡಿಸುತ್ತಾಳೆ.ಅದೆಷ್ಟೇ ನೋವಿದ್ದರೂ ಅದನ್ನು ತೋರ್ಪಡಿಸಿಕೊಳ್ಳಲು ಇಷ್ಟಪಡುವುದಿಲ್ಲ.ಆ ಸಮಯದಲ್ಲಿ ಹೆಂಡತಿಯ ಮನಸ್ಸನ್ನು ಅರ್ಥೈಸುವ ಪ್ರಯತ್ನ ಮಾಡಬೇಕು.ನಾವು ಸಂಪಾದಿಸುವ ಹಣ,ಆಸ್ತಿಯಿಂದ ನಮ್ಮ ಮಕ್ಕಳಿಗೆ ಪ್ರೀತಿಯನ್ನು ತೋರ್ಪಡಿಸಲು ನಮ್ಮಿಂದ ಅಸಾಧ್ಯ.ಕೆಲವು ಮಕ್ಕಳಿಗೆ ವಯಸ್ಸು ನಾಲ್ಕು ತುಂಬಿದರೂ ಅವರು ತನ್ನ ತಂದೆ ಯಾರೂ ಅಂತನೇ ನೋಡಿರುವುದಿಲ್ಲ.ಕಾರಣ ತಂದೆ ಉದ್ಯೋಗದ ಹೆಸರಿನಲ್ಲಿ ಊರು ಬಿಟ್ಟು ಅದಾಗಲೇ ವರ್ಷ ಐದು ಕಳೆದಿರುತ್ತದೆ.ನಮ್ಮ ಮಕ್ಕಳು ತಂದೆಯ ಪ್ರೀತಿಯಿಂದ ವಂಚಿತರಾಗಿ ದಿನಕಳೆಯಬೇಕಾದ ಸಂದರ್ಭಗಳು ಒದಗಿ ಬರುತ್ತದೆ.
ಇಪ್ಪತ್ತೊಂದನೇ ಶತಮಾನದ ಆಧುನಿಕ ಯುಗದಲ್ಲಿ ಪ್ರೀತಿ,ಪ್ರೇಮಗಳು ಕಾಪಟ್ಯಕ್ಕೆ ಬಲಿಯಾಗುತ್ತಿರುವ ವಿಷಾಧಕರವಾದ ಸನ್ನಿವೇಶದಲ್ಲಿ ನಮ್ಮ ಮಕ್ಕಳಿಗೆ ನಾವು ಪ್ರೀತಿಯನ್ನು ನೀಡದೇ ಹೋದರೆ ಭವಿಷ್ಯದಲ್ಲಿ ಮಕ್ಕಳೂ ನಮ್ಮಿಂದ ಪ್ರೀತಿಯನ್ನು ನಿರೀಕ್ಷಿಸದಂತಹ ಸನ್ನಿವೇಶಗಳು ಸೃಷ್ಟಿಯಾಗಲೂಬಹುದು.
ಅದೆಷ್ಟೇ ಕೆಲಸದ ಒತ್ತಡವಿದ್ದರೂ ತನ್ನ ಪ್ರೀತಿಯ ಮಡದಿ ಮುದ್ದು ಮಗುವಿಗೆ ಜನ್ಮ ನೀಡಿದಳು ಅಂದರಿತಾಗ ನೀವು ನಿಮ್ಮ ಮಡದಿಯ ಸಮೀಪವಿರುವುದೇ ಆಕೆಗೆ ಅತೀ ದೊಡ್ಡ ಸಂತೋಷವಾಗಿರುತ್ತದೆ.
ಮಕ್ಕಳಿಲ್ಲದೆ ಕಣ್ಣೀರ ಧಾರೆ ಹರಿಸುತ್ತಿರುವ ಅದೆಷ್ಟೋ ದಂಪತಿಗಳ ನಡುವೆ ಮುದ್ದಾದ ಮಗುವನ್ನು ನೀಡಿ ಕರುಣಿಸಿದಾಗ ಆ ಮಗುವಿಗೆ ಪ್ರೀತಿ ನೀಡಲು ಸಾಧ್ಯವಾಗದ ಅಪ್ಪಂದಿರು ನಾವುಗಳಾಗದಿರೋಣ.

✍🏻ಸ್ನೇಹಜೀವಿ ಅಡ್ಕ