*ಮುಸ್ಲಿಮ್ ಸಮುದಾಯದ ಕ್ಷಮೆಯಾಚಿಸುತ್ತಾ....* 🙋♂
👉🏿 *ಹೇಗಾದರೂ ಮಗಳನ್ನು ಮದುವೆ ಮಾಡಿಸಿ ಜವಾಬ್ದಾರಿಯಿಂದ ಮುಕ್ತನಾಗಲು ಹಂಬಲಿಸುವ ತಂದೆ, ಅದಕ್ಕಾಗಿ ಮನೆ-ಮಠ ಮಾರುವುದನ್ನೂ ಬಡ್ಡಿಗೆ ಸಾಲ ಪಡೆದು ಆರ್ಥಿಕವಾಗಿ ದಿವಾಳಿಯಾಗುತ್ತಿರುವುದನ್ನೂ ನಾವು ಕಾಣುತ್ತಿದ್ದೇವೆ. ವಯಸ್ಸಿಗೆ ಬಂದ ಮಗಳ ಮದುವೆಗಾಗಿ ಮಸೀದಿಯ ಆಡಳಿತ ಕಮಿಟಿ ನೀಡಿದ ದೃಢಪತ್ರವನ್ನು ಕೈಯಲ್ಲಿ ಹಿಡಿದು ಮನೆ, ಕಛೇರಿ, ಬಝಾರ್, ಅಂಗಡಿ ಬಾಗಿಲಲ್ಲಿ ಬೇಡುವ ಹೆತ್ತವರು ಒಂದೆಡೆಯಾದರೆ, ಮದುವೆಯನ್ನೇ ತನ್ನ ಪ್ರತಿಷ್ಠೆಯ ಪ್ರದರ್ಶನವೆಂದು ತಿಳಿದು, ಲಕ್ಷಾಂತರ ಹಣವನ್ನು ನೀರಿನಂತೆ ಚೆಲ್ಲಿ ಅಹಂಕಾರದಿಂದ ಬೀಗುವವರು ಮತ್ತೊಂದೆಡೆ.*
👉🏿 *ಕೆಲವು ಮದುವೆ ಸಮಾರಂಭಗಳು ತಿಂಗಳುಗಟ್ಟಲೆ ಮುಂದುವರಿಯುತ್ತದೆ. ಮೊದಲು ವರನ ಸಹೋದರಿಯರು ಬಂದು ಹೆಣ್ಣು ನೋಡುವುದು, ನಂತರ ವರ ತನ್ನ ತಾಯಿಯೊಂದಿಗೆ ಬಂದು ಹೆಣ್ಣು ನೋಡುವುದು, ಬಳಿಕ ವರನ ಕುಟುಂಬದ 40-50 ಮಂದಿ ಹೋಗಿ ಹೆಣ್ಣು ನೋಡುವುದು, ನಿಶ್ಚಿತಾರ್ಥ(ವರಪ್ಪ್), ಮೆಹಂದಿ, ಕೋಲಿಚೋರು, ಹಳದಿ, ತಾಲ, ಚಮ್ಮನ, ಹಾಡು-ಕುಣಿತಗಳು, ಮದುವೆಯ ಭೂರಿ ಭೋಜನಗಳು, ಮದುವೆಯ ಬಳಿಕದ ಕೆಲವು ಕಾರ್ಯಗಳು... ಹೀಗೆ ಪೈಪೋಟಿಯ ರೀತಿಯಲ್ಲಿ ನಡೆಯುತ್ತಿರುವ ದುಂದುವೆಚ್ಚಗಳು, ಅನಗತ್ಯ ಖರ್ಚುಗಳು ಸಮುದಾಯಕ್ಕೆ ಶಾಪವಾಗಿದೆ.*
👉🏿 *ನಮ್ಮಲ್ಲಿರುವ ಹಣದ ಅಹಂ ಎಷ್ಟು ಎತ್ತರದಲ್ಲಿದೆಯೆಂದರೆ, ಪ್ರತಿಯೊಂದನ್ನು ಪ್ರತ್ಯೇಕವಾಗಿ ದುಬಾರಿ ಬಾಡಿಗೆಯ ಹಾಲ್‍ನಲ್ಲೇ ನಡೆಸುತ್ತೇವೆ. ತಿಂದವರಿಗೇ ಮತ್ತೆ ಮತ್ತೆ ತಿನ್ನಿಸುವುದು! ಮಾತ್ರವಲ್ಲ,*
👉🏿 *ಕ್ಷಮಿಸಿ!! ನಮಗೇನಾಯಿತೋ ಗೊತ್ತಿಲ್ಲ! ಯಾರ್ಯಾರದೋ ಕಲ್ಯಾಣ ಮಂಟಪವನ್ನು ನಮ್ಮ ಹಣದಿಂದ ಬಣ್ಣ ಬಣ್ಣದ ವಿದ್ಯುದ್ದೀಪಗಳಿಂದ ಅಲಂಕರಿಸುತ್ತೇವೆ. ಇಂದು ಮುಸ್ಲಿಮೇತರ ಸಹೋದರರು ನಮಗಾಗಿಯೇ ಮದುವೆ ಹಾಲ್‍ಗಳನ್ನು ನಿರ್ಮಿಸುತ್ತಿದ್ದಾರೆ. ಆದರೆ ಅವರ ಮದುವೆಗಳು ಚರ್ಚ್ ಮತ್ತು ದೇವಸ್ಥಾನಗಳಲ್ಲಿ ನಡೆಯುತ್ತವೆ. ಹಾಲ್‍ನಲ್ಲಿ ಸೇರುವ ಜನರಾಶಿಯಿಂದ ರಸ್ತೆ ತಡೆಗಳಾಗುತ್ತಿವೆ. “ಖಂಡಿತವಾಗಿಯೂ ನಿಮಗೆ ನೀಡಿದ ಅನುಗ್ರಹಗಳ ಬಗ್ಗೆ ಪ್ರಶ್ನಿಸಲಾಗುವುದು.”[ಪವಿತ್ರ ಕುರ್‍ಆನ್]*
👉🏿 *ಎಷ್ಟೊಂದು ನೋವಿನ ಸಂಗತಿ! ಇಸ್ಲಾಮನ್ನು ಹೊತ್ತು ನಡೆಯುವವರೂ ಮತ್ತು ಸಮುದಾಯವನ್ನು ತಿದ್ದಿ ಸರಿಪಡಿಸಿ ಮಾದರಿಗಳಾಗಬೇಕಾದವರೂ, ತಮ್ಮ ಸರದಿ ಬಂದಾಗ ಸಮಾಜದ ರೀತಿ-ರಿವಾಜು-ಸಂಪ್ರದಾಯಗಳ ಮುಂದೆ ಮಂಡಿಯೂರುತ್ತಾರೆ. ಅಂದರೆ ಬಚ್ಚಲು ಮನೆಯಲ್ಲಿ ಎಲ್ಲರೂ ಬೆತ್ತಲೆ. ಇದ್ದವರು ಇದ್ದ ಹಾಗೆ ಖರ್ಚುಮಾಡಿದರೆ ತಪ್ಪೇನೆಂದು ಸಮರ್ಥಿಸುತ್ತಾರೆ. ಅಂದರೆ ಸಮಾಜಕ್ಕೆ ಮಾದರಿಗಳಾಗಬೇಕಾದವರೂ ಮಹಾಮಾರಿಗಳಾಗುತ್ತಿದ್ದಾರೆ. ಸರಳ ಸಾಮೂಹಿಕ ವಿವಾಹದ ವೇದಿಕೆಯಲ್ಲಿ ಭಾಷಣ ಬಿಗಿಯುವವರ ಮದುವೆಗಳು ಅದ್ಧೂರಿ-ಬೂಟಾಟಿಕೆ ಆಡಂಭರಗಳಿಂದ ಕೂಡಿರುತ್ತದೆ.*
👉🏿 *ಒಮ್ಮೆ ಓದಿ ಬಿಸಾಡುವ ಆಮಂತ್ರಣ ಪತ್ರಿಕೆಗೆ ಇಷ್ಟು ಖರ್ಚು ಏಕೆ? ಸಿಂಪಲ್ ಸಾಲದೇ? ಎಂದು ಕೇಳಿದವನ ಮಗಳ ಆಮಂತ್ರಣ ಪತ್ರಿಕೆಯನ್ನು ನೋಡಿ ತಬ್ಬಿಬ್ಬಾದೆ. ಒಂದೇ ಸಂಘಟನೆಯಲ್ಲಿದ್ದೂ ಒಂದೇ ಆದರ್ಶಕ್ಕಾಗಿ ಕೆಲಸ ಮಾಡುವ ಸಹೋದರರ ಅಥವಾ ಅವರ ಮಕ್ಕಳ ಮದುವೆಗಳು ವೈರುಧ್ಯಗಳಿಂದ ಕೂಡಿರುತ್ತದೆ. ನಿಜವಾಗಿ ಇದ್ದವರು, ಇಲ್ಲದವರಿಗೆ ಮಾದರಿಗಳಾಗಬೇಕಿತ್ತು. ತನ್ನ ಸಹ ಕಾರ್ಯಕರ್ತರ/ಮಿತ್ರರ ಆರ್ಥಿಕ ದುಸ್ಥಿತಿಯನ್ನು ಕಂಡು ಮರುಗದ ಕ್ರೂರ ಹೃದಯ ನಮ್ಮದು.*
👉🏿 *ನಾವು ಅಬ್ದುರ್ರಹ್ಮಾನ್ ಬಿನ್ ಔಫ್‍ರ(ರ) ಬಗ್ಗೆ ಬಹಳಷ್ಟು ಮಾತಾಡುತ್ತೇವೆ. ಪ್ರವಾದಿವರ್ಯರನ್ನೂ(ಸ) ಆಮಂತ್ರಿಸದ ಅವರ ಸರಳ ಮದುವೆಯನ್ನು ಕೊಂಡಾಡುತ್ತೇವೆ. ಆದರೆ ನಮ್ಮ ಹತ್ತಿರದ ಮಿತ್ರರು ಅಥವಾ ಕುಟುಂಬಿಕರು ನಮ್ಮನ್ನು ಆಮಂತ್ರಿಸದಿದ್ದಲ್ಲಿ ಮುನಿಸಿಕೊಳ್ಳುತ್ತೇವೆ. ಆಮಂತ್ರಣ ನೀಡದ ಕಾರಣಕ್ಕಾಗಿ ಪದೇ ಪದೇ ಅವರನ್ನು ಚುಚ್ಚುತ್ತೇವೆ. ಕಂಡ ಕಂಡವರಲ್ಲಿ ಹೇಳುತ್ತೇವೆ. ಏಕೆಂದರೆ ನಮ್ಮಲ್ಲಿ ಕೆಲವರಿಗೆ ತಿನ್ನುವುದೆಂದರೆ ತುಂಬಾ ಖುಷಿ! “ಆಮಂತ್ರಣವನ್ನು ತಿರಸ್ಕರಿಸಬಾರದೆಂಬ” ಪ್ರವಾದಿ ವಚನಗಳಿಂದ ಸಮರ್ಥಿಸುತ್ತೇವೆ.*
👉🏿 *ಸರಿ! ಆದರೆ ಆಮಂತ್ರಣವನ್ನು ಸ್ವೀಕರಿಸುವಾಗ ಅಲ್ಲಿ ಇಸ್ಲಾಮಿನ ಆಶಯ ಆದರ್ಶಗಳನ್ನು ಎಷ್ಟು ಪಾಲಿಸಲಾಗುತ್ತದೆ ಎಂಬುದರ ಬಗ್ಗೆ ನಮಗೆ ಯಾವ ದುಃಖವೂ ಬೇಸರವೂ ಇಲ್ಲ.*
👉🏿 *ಇಸ್ಲಾಮಿನ ದೃಷ್ಟಿಯಲ್ಲಿ ಮದುವೆ ಇಬಾದತ್ ಆಗಿದೆ ಮತ್ತು ಪ್ರವಾದಿ ಚರ್ಯೆಯಾಗಿದೆ. ಮದುವೆಯಾದವನು ದೀನಿನ ಅರ್ಧಭಾಗವನ್ನು ಪೂರ್ತಿಗೊಳಿಸಿದಂತೆ. ಆದ್ದರಿಂದ ಇಸ್ಲಾಮಿನಲ್ಲಿ ಮದುವೆಗೆ ಬಹಳ ಮಹತ್ವವಿದೆ, ರೀತಿನೀತಿಗಳಿವೆ. ಅದು ಸರಳವಾಗಿರಬೇಕೆಂದೂ ಅದರಿಂದ ಯಾರಿಗೂ ತೊಂದರೆಯಾಗಬಾರದೆಂದು ಇಸ್ಲಾಮ್ ಬಯಸುತ್ತದೆ. "ತೀರಾ ಕಡಿಮೆ ಪರಿಶ್ರಮವನ್ನು ಒಳಗೊಂಡ ನಿಖಾಹ್‍ನಲ್ಲಿ ನಿಮಗೆ ಬರ್ಕತ್ ಇದೆ." (ಹದೀಸ್)*
👉🏿 *ವಿವಾಹದ ವಿಷಯದಲ್ಲಿ ವಧು-ವರರಿಗೆ ಪರಸ್ಪರ ನೋಡಲಿಕ್ಕಿರುವ ನಿಜವಾದ ವಸ್ತು ಧರ್ಮನಿಷ್ಠೆಯಾಗಿದೆ ಎಂದು ಪ್ರವಾದಿ(ಸ) ಮುಸ್ಲಿಮ್ ಸಮುದಾಯಕ್ಕೆ ಉಪದೇಶಿಸಿದ್ದಾರೆ. ಧರ್ಮನಿಷ್ಠೆಯನ್ನು ಕಡೆಗಣಿಸಿ ಕೇವಲ ಹಣ ಮತ್ತು ಸೌಂದರ್ಯವನ್ನು ವಿವಾಹವಾಗುವುದರ ದುಷ್ಪರಿಣಾಮವನ್ನು ಎಚ್ಚರಿಸಿದ್ದೂ ಹದೀಸ್‍ನ ಗ್ರಂಥಗಳಲ್ಲಿದೆ.*
👉🏿 *ಪ್ರವಾದಿಯವರ(ಸ) ಮಾತನ್ನು ಕೇಳದ ಕಾರಣ ಮುಸ್ಲಿಮ್ ಸಮುದಾಯವು ಎಂತಹ ಗೊಂದಲ-ಸಮಸ್ಯೆ-ಅಪಮಾನಕ್ಕೆ ಸಿಲುಕಿದೆಯೆಂಬುದನ್ನು ನಾವೆಲ್ಲ ಕಾಣುತ್ತಿದ್ದೇವೆ.*
👉🏿 *ಇಂದು ನಮ್ಮ ಮದುವೆಗಳು ಸಮಾಜಕ್ಕೆ ಶಾಪಗಳಾಗುತ್ತಿವೆ. ನಾವೆಲ್ಲ ಅದರ ಮೂಕ ಸಾಕ್ಷಿಗಳು. ಕಣ್ಣಿದ್ದೂ ಕುರುಡರಂತೆ. ನಮ್ಮ ಬಾಯಿಗೆ ಬೀಗ ಜಡಿಯಲಾಗಿದೆ. ಮನಸ್ಸುಗಳಿಗೆ ಅಂಧಕಾರ ಕವಿದಿದೆ...*
👉🏿 *ಆದ್ದರಿಂದ ಈ ಮೇಲಿನ ವಿಷಯಗಳು ನಮ್ಮ ಕುಟುಂಬಗಳಲ್ಲಿ ಚರ್ಚೆಯಾಗಲಿ. ಮುಸ್ಲಿಮ್ ಸಮುದಾಯದಲ್ಲೂ ಧಾರಾಳ ಚರ್ಚೆಗಳು ನಡೆದು, ಸಮಸ್ಯೆಗಳಿಗೆ ಪರಿಹಾರ ಸಿಗುವಂತಾಗಲಿ. ಅಲ್ಲಾಹನು ನೀಡಿದ ಅನುಗ್ರಹಗಳನ್ನು ಸದಾ ಸ್ಮರಿಸಿ ಅವನಿಗೆ ಕೃತಜ್ಞರಾಗಿ ಬದುಕೋಣ!* *ಸಂಪತ್ತಿನ ಆಧಿಕ್ಯದಿಂದ ಅಹಂಕಾರ ಪಡದೆ, ಅದನ್ನು ಅಲ್ಲಾಹನ ಮಾರ್ಗದಲ್ಲಿ ಮತ್ತು ಬಡತನ, ದಾರಿದ್ರ್ಯ, ಹಸಿವು, ರೋಗಗಳಿಂದ ದಿನದೂಡುತ್ತಿರುವ ಬಡವರಿಗೆ ವ್ಯಯಿಸೋಣ.*
*ಎಲ್ಲರೂ ಚಿಂತಿಸುವುದು ಹೇಗೆ ಸಮುದಾಯವನ್ನು ಬದಲಾಯಿಸುವುದು ಎಂದಾಗಿದೆ. ಯಾರೂ ಸಹ ಸ್ವತಃ ಬದಲಾಗುವುದರ ಕುರಿತು ಚಿಂತಿಸುವುದಿಲ್ಲ. ನಾವೆಲ್ಲ ಬದಲಾದರೆ ಖಂಡಿತ ಸಮುದಾಯ ಬದಲಾಗುತ್ತದೆ. ಆದ್ದರಿಂದ ಬದಲಾಗೋಣ!*
🌹 *ಪ್ರೀತಿಯಿಂದ* 🌹
*ಅಬೂ ಅಬ್ದುಲ್ಲಾ, ಮಂಗಳೂರು.*