ಟಿವಿ ನ್ಯೂಸ್ ಚಾನಲ್ ಗಳು ಪ್ರಸಾರ ಮಾಡುವ ಕಾರ್ಯಕ್ರಮಗಳ ಬಗೆಗೆ ತುಂಬಾ ತುಂಬಾ ಹೆಮ್ಮೆ ಇದೆ. ಏಕೆಂದರೆ,
ಸಿನಿಮಾ ತಾರೆಯರ, ಶ್ರೀಮಂತ ರಾಜಕಾರಣಿಗಳ ಭ್ರಷ್ಟ ಅಧಿಕಾರಿಗಳ ಆಡಂಬರದ ವೈಭವೋಪೇತ ಮದುವೆಗಳನ್ನು ಪೆದ್ದು ವೀಕ್ಷಕರಿಗೆ ದೇವಲೋಕದಂತೆ ತೋರಿಸುವ ಬ್ರೋಕರ್ ಗಳಾಗಿರುವುದಕ್ಕೆ.
ಕೊಲೆ ಅತ್ಯಾಚಾರ ಅಪಘಾತಗಳನ್ನು ಕೇಳಲು ಓದಲು ಹಿಂಸೆ ಪಡುತ್ತಿದ್ದ ಮೃದು ಮನಸ್ಸುಗಳಿಗೆ ರಕ್ತದ ಭೀಕರತೆಯ ಸಮೇತ ಸಂಗೀತ ಧ್ವನಿ ಸೇರಿಸಿ ಆಕರ್ಷಕವಾಗಿ ಪ್ರಸಾರ ಮಾಡುತ್ತಿರುವುದಕ್ಕೆ.
ಹಿಂದೆ ಮನೆಯ ಗಲಾಟೆಗಳನ್ನು ಆದಷ್ಟೂ ಗೌಪ್ಯವಾಗಿಟ್ಟು ಕೆಲ ಸಮಯದ ನಂತರ ಸಹಜ ಸ್ಥಿತಿಗೆ ಬರಬಹುದಾಗಿದ್ದ ಘಟನೆಗಳನ್ನು ಸಿನಿಮಾದ ಕ್ಯಾಬರೆ ದೃಶ್ಯದಂತೆ ಸಾರ್ವಜನಿಕವಾಗಿ ಬಹಿರಂಗಗೊಳಿಸಿ ಅವರಿಬ್ಬರು ಇನ್ನೆಂದೂ ಒಟ್ಟಾಗದಂತೆ ಮಾಡುತ್ತಿರುವ ಘನ ಕಾರ್ಯಕ್ಕಾಗಿ.
ಮಾನವೀಯತೆ - ಸೌಜನ್ಯತೆ ಇರಲಿ, ಕನಿಷ್ಠ ಸಾಮಾನ್ಯ ಜ್ಞಾನವೂ ಇಲ್ಲದ ರಾಕ್ಷಸ ಗುಣದ ರಾಜಕಾರಣಿಗಳ ತಿಕ್ಕಲು ಹೇಳಿಕೆಗಳನ್ನು ರಾಜ್ಯದ ಬಹುದೊಡ್ಡ ಸಮಸ್ಯೆ ಎಂಬಂತೆ ಬಿಂಬಿಸಿ ಅದನ್ನು ವಾರಗಟ್ಟಲೆ ವಿಶ್ಲೇಷಿಸುವ ರೀತಿಗೆ....
ಥೂ ..ನಿಮ್ಮ......
ಪತ್ರಕರ್ತರಯ್ಯ ನೀವು ಪತ್ರಕರ್ತರು.
ಹೆಚ್ಚು ಕಡಿಮೆ ಸತ್ಯ ಹರಿಶ್ಚಂದ್ರನಷ್ಟು ಪ್ರಾಮಾಣಿಕವಾಗಿರಬೇಕಾಗಿರುವವರು. ಎಷ್ಟೇ ಕಷ್ಟವಾದರೂ ಸತ್ಯವನ್ನಲ್ಲದೆ ಬೇರೇನನ್ನೂ ಹೇಳಬಾರದವರು.
ಸದ್ಯದ ಪರಿಸ್ಥಿತಿಯಲ್ಲಿ ಇಡೀ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸಿ ರೈತರು ಮಹಿಳೆಯರು ಕಾರ್ಮಿಕರು ಧಮನಿತರ ಜೀವನಮಟ್ಟ ಸುಧಾರಿಸಲು ಹೊಸ ಹೊಸ ಚಿಂತನೆಗಳನ್ನೊಳಗೊಂಡ ಕಾರ್ಯಕ್ರಮಗಳನ್ನು ರೂಪಿಸಿ ಸರ್ಕಾರದ ಗಮನ ಸೆಳೆಯಬೇಕಾಗಿರುವವರು. ಇದರ ಅನುಷ್ಠಾನಕ್ಕೆ ಹಕ್ಕೊತ್ತಾಯ ಮಾಡಬೇಕಾಗಿರುವವರು.
ಅಯ್ಯಾ ಮೂರ್ಖರೆ,
ಮದುವೆ ಯಾರದೇ ಆಗಿರಲಿ ಅದು ತೀರಾ ಖಾಸಗಿ ಕಾರ್ಯಕ್ರಮವಯ್ಯ. ಕುತೂಹಲ ಇರುವ ಜನರು ಸಮಯವಿದ್ದರೆ ಹೋಗಿ ನೋಡಲಿ. ನಿಮ್ಮ ಕೆಲಸ ಅದಲ್ಲರಯ್ಯ.
ಭ್ರಷ್ಟರನ್ನು ಕಳ್ಳರನ್ನು ವಂಚಕರನ್ನು ಕೊಲೆಗಡುಗರನ್ನು ಅತ್ಯಾಚಾರಿಗಳನ್ನು ಹಿಡಿಯಲು ಪೋಲೀಸರಿದ್ದಾರೆ. ಶಿಕ್ಷಿಸಲು ನ್ಯಾಯಾಲಯವಿದೆ.ಅದೊಂದು ಸಣ್ಣ ಸುದ್ದಿಯಯ್ಯ. ಅದಕ್ಕಿಂತ ಮುಖ್ಯ ಆ ರೀತಿಯ ಕೆಟ್ಟ ಚಟುವಟಿಕೆಗಳು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚಿಂತನೆ ನಡೆಸುವ ಕಾರ್ಯಕ್ರಮಗಳನ್ನು ರೂಪಿಸಿರಯ್ಯ.
ಪತ್ರಕರ್ತರೆಂದರೆ ಜನಸಾಮಾನ್ಯರಲ್ಲಿ ಬುದ್ದಿವಂತರೆಂಬ ಅಭಿಪ್ರಾಯವಿದೆಯಯ್ಯ.ಅದನ್ನು ಹಾಳು ಮಾಡಬೇಡಿ. ಈ ಮಾಧ್ಯಮಕ್ಕೆ ಮತ್ತೊಂದು ಪರ್ಯಾಯ ಇಲ್ಲವಯ್ಯ. ಆ ಬದ್ದತೆ ಪ್ರಾಮಾಣಿಕತೆ ಇಲ್ಲದಿದ್ದರೆ ದಯವಿಟ್ಟು ಬೇರೆ ಉದ್ಯೋಗ ನೋಡಿಕೊಳ್ಳಿರಯ್ಯ.
ಬೇಗ ಎಚ್ಚೆತ್ತುಕೊಳ್ಳಿ.
ಧನ್ಯವಾದಗಳು.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಇದು ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.