ಬೇಡವೆಂದರೂ ಬಿಡದೀ ಮಾಯೆ-12
------- ------- -------
ಹದಿಹರೆಯದವರಿಗೆ ಲೈಂಗಿಕ ಶಿಕ್ಷಣವನ್ನು ನೀಡುವ ಬಗ್ಗೆ ಚರ್ಚೆಗಳು ಸಾಕಷ್ಟು ಕೇಳಿ ಬರುತ್ತಿವೆ.ಹದಿಹರೆಯದವರಿಗೆ ಲೈಂಗಿಕ ಶಿಕ್ಷಣ ನೀಡುವುದು ಅಗತ್ಯ ಎಂಬುದನ್ನು ಯಾವಾಗ ಮೊದಲು ಪರಿಭಾವಿಸಿದರು ಎಂಬುದನ್ನು ಕಂಡು ಹಿಡಿಯುವುದು ಕಷ್ಟ. ಆದರೂ, ಕುಟುಂಬ ಮತ್ತು ಸಮಾಜದಲ್ಲಿ ಆದ ಕೆಲವು ಬದಲಾವಣೆಗಳ ಜೊತೆಯಲ್ಲೇ ಇದೂ ಬೆಳೆದು ಬಂತು ಎನ್ನಬಹುದು.ಇನ್ನೂ ನಿಖರವಾಗಿ ಹೇಳಬೇಕೆಂದರೆ ಅವಿಭಕ್ತ ಕುಟುಂಬಗಳು ವಿಘಟನೆ ಆದ ಮೇಲೆ ಒಂದೇ ಮಗುವು ಇರುವ ಕುಟುಂಬಗಳು ಜಾಸ್ತಿ ಆದಂತೆ,ಹಾಗೆಯೇ ಒಬ್ಬರೇ ಪೋಷಕರು ಇರುವ ಕುಟುಂಬಗಳು ಜಾಸ್ತಿ ಆದಂತೆ ಜೊತೆಯಲ್ಲೇ ಇದೂ ಬೆಳೆದು ಬಂತು ಅನ್ನಬಹುದೆನೋ..!
ಮಗುವು ಒಂದು ದೊಡ್ಡ ಕುಟುಂಬದಲ್ಲಿ ಬೆಳೆಯುವಾಗ,ಅದು ಎಲ್ಲಾ ವಯಸ್ಸಿನ ಮತ್ತು ಎರಡೂ ಲಿಂಗಗಳ ಜನರನ್ನು ಒಳಗೊಂಡ ಒಂದು ಸಮೂಹದಲ್ಲಿ ತಾನೂ ಒಂದು ಭಾಗವಾಗಿ ಬೆಳೆಯುತ್ತದೆ. ಇಂಥ ಪರಿಸ್ಥಿತಿಯಲ್ಲಿ ಅದರ ಸದಸ್ಯರು ಒಂದೇ ಬಗೆಯ ಪ್ರಕ್ರಿಯೆಯಲ್ಲಿ ಒಬ್ಬೊಬ್ಬರಾಗಿ ಭಾಗವಾಗುತ್ತಿರುವಂತೆ ಆಗುತ್ತದೆ.ಇನ್ನೊಬ್ಬರಿಗೆ ಈ ಮೊದಲು ಸಂಭವಿಸಿದ ಪ್ರಕ್ರಿಯೆ ಮತ್ತೊಬ್ಬರಿಗೆ ಸಂಭವಿಸುತ್ತದೆ.ಹೀಗಾಗಿ ಜೀವನದ ಎಲ್ಲಾ ಹಂತಗಳ ಪ್ರಕ್ರಿಯೆಯನ್ನು ಮಗುವು ಒಟ್ಟಿಗೆ ಒಂದೇ ಬಾರಿಗೆ ವಾಸ್ತವಿಕವಾಗಿ ಗಮನಿಸುತ್ತಿರುತ್ತದೆ.ಮನೆಯಲ್ಲೊಂದು ಮಗು ಹುಟ್ಟಿತ್ತದೆ. ಇದಾದ ಮೇಲೆ ಅದರ ಆಟನಿರತ ಬಾಲ್ಯ,.ಬತ್ತಲೆ ಮಕ್ಕಳು, ಹಾಲೂಡಿಸುವ ತಾಯಂದಿರು ಇಲ್ಲಿ ದೈನಂದಿನ ದೃಶ್ಯಾವಳಿಯಾಗಿರುತ್ತದೆ.ಹೆಣ್ಣು ಹುಡುಗಿ ಋತುಮತಿಯಾಗುವುದು ಅಲ್ಲಿ ನಡೆಯುವ ಕೆಲವೊಂದು ಸಾಂಸ್ಕೃತಿಕ ಆಚಾರಗಳಿಂದ ಎಲ್ಲರಿಗೂ ಗೊತ್ತಾಗುತ್ತದೆ.ಯುವಕ ಯುವತಿಯರು ಚಿಕ್ಕವಯಸ್ಸಿನಲ್ಲೇ ಮದುವೆಯಾಗುತ್ತಾರೆ ಮತ್ತು ಸಾಮಾನ್ಯವಾಗಿ ಮದುಮಗಳು ಬಲು ಬೇಗನೆ ಗರ್ಭಿಣಿಯಾಗುತ್ತಾಳೆ . ಗರ್ಭಧಾರಣೆ ವಿಳಂಬವಾದರೆ ಟೀಕೆಗೆ ಒಳಗಾಗಬೇಕಾಗುತ್ತದೆ ಎಂಬ ಅರಿವೂ ಇಲ್ಲಿರುವುದು ಚೋದ್ಯ..!. ಮತ್ತೆ ಹೆರಿಗೆ, ಮಗುವಿನ ಜನನ,ಬಾಣಂತನ ಇತ್ಯಾದಿ ಜರುಗುತ್ತವೆ.
ಸುತ್ತಮುತ್ತಲ ಪರಿಸರದಿಂದ ಹೀಗೆ ಹತ್ತು ಹಲವಾರು ಸೂಚನೆಗಳು ಬರುತ್ತಿರುವಾಗ ಹದಿಹರೆಯದವರಿಗೆ, ಎರಡು ಮತ್ತು ಎರಡು ನಾಲ್ಕು ಎಂಬಂತೆ 'ಜೀವನದ ಸತ್ಯ'ಗಳನ್ನು ಲೆಕ್ಕಹಾಕಿ ಅರಿಯುವುದು ಕಷ್ಟವಾಗುವುದಿಲ್ಲ.ಇದೇ ರೀತಿ ಮಕ್ಕಳು ಸಾಕು ಪ್ರಾಣಿಗಳ ನಡುವೆ ಬೆಳೆಯುತ್ತಿರುವಾಗ ಅವರಿಗೆ ಜೀವನ ರಹಸ್ಯಗಳನ್ನು ಅರಿಯುವುದು ಕಷ್ಟವಾಗಲಾರದು. ಈ ವಾಸ್ತವ ಸತ್ಯವನ್ನು ಜನನ ಪ್ರಕ್ರಿಯೆಯ ವೈದ್ಯಕೀಯ ಜ್ಞಾನವೆಂಬಂತೆ ಪ್ರತ್ಯೇಕವಾಗಿ ಗ್ರಹಿಸದೇ ಅದರ ಭಾವನಾತ್ಮಕ ಮತ್ತು ಸಾಮಾಜಿಕ ಮಹತ್ವದ ಜೊತೆಗೆ ಇಡಿಯಾಗಿ ಗ್ರಹಿಸಲಾಗುತ್ತದೆ.
ಆದರೆ ಒಂದು ಪುಟ್ಟ ನ್ಯೂಕ್ಲಿಯರ್ ಕುಟುಂಬದಲ್ಲಿ ಬೆಳೆಯುವ ಮಗುವಿಗೆ ಈ ಎಲ್ಲಾ ಅವಕಾಶಗಳು ದೊರೆಯುವುದೇ ಇಲ್ಲ. ತನ್ನದೇ ಆದ ದೈಹಿಕ ಮತ್ತು ಭಾವನಾತ್ಮಕ ಬದಲಾವಣೆಗಳು ಆ ಮಗುವು ಇನ್ನೊಬ್ಬರಿಗೆ ಹೀಗೆ ಆಗಿತ್ತು ನನಗೂ ಆಗುತ್ತಿದೆ ಎಂದು ಹೋಲಿಸಿ ಪರಿಭಾವಿಸಲು ಸಾಧ್ಯವಾಗದಂತೆ ಒಂಟಿ ಅನುಭವವಾಗಿ ಕಾಣಿಸಿಕೊಳ್ಳಬಹುದು. 8 ನೇ ತರಗತಿಯಲ್ಲಿ ಜೀವ ವಿಜ್ಞಾನದ ಪಾಠವಾಗಿ ವಸ್ತುನಿಷ್ಠವಾಗಿ ಕಲಿತ 'ಜೀವನದ ಸತ್ಯ', ಸಾಮಾನ್ಯವಾಗಿ, ಸಂಬಂಧಿತ ಭಾವಗಳು ಅಥವಾ ಸಾಮಾಜಿಕ ಸಂಭ್ರಮ ಅಥವಾ ಮಹತ್ವಗಳನ್ನು ಗ್ರಹಿಸಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದಿಲ್ಲ.ಇದಲ್ಲದೆ, ಮಾಧ್ಯಮಗಳಿಂದ ಮತ್ತು ತನ್ನ ಸಮವಯಸ್ಕರ ಮೂಲಕ ದೊರೆಯುವ ಅನೇಕ ಪ್ರಚೋದಕಗಳು ಮತ್ತು ಒಂದಕ್ಕೊಂದು ಸಂಬಂಧ ಪಡದ ಚಿತ್ರಗಳನ್ನು ಮಗುವು ತಾನೇ ಅರಗಿಸಿಕೊಂಡು,ಒಟ್ಟುಗೂಡಿಸಿ ಅರ್ಥಮಾಡಿಕೊಳ್ಳುವಂತಾಗಿರುತ್ತದೆ ಮತ್ತು ಅದಕ್ಕೆ ಪ್ರತಿಕ್ರಿಯಿಸಬೇಕಾಗುತ್ತದೆ.
ಈ ಹಂತದಲ್ಲಿ ಪೋಷಕರ ಜವಾಬ್ದಾರಿ ಹೆಚ್ಚುತ್ತದೆ. ಮಕ್ಕಳೊಡನೆ ಮುಕ್ತ ಸಂವಾದ ನಡೆಸುವುದೇ ಅಲ್ಲದೆ, ಮುಂದಿನ ಜೀವನದ ಬಗ್ಗೆ ಸೂಕ್ತ ದೃಷ್ಟಿಕೋನವನ್ನು ಅವರು ಒದಗಿಸಬೇಕಾಗಿದೆ. ಅದಕ್ಕನುಗುಣವಾಗಿ ಶಾಲೆಗಳು ಸಹ
ಲೈಂಗಿಕ-ಶಿಕ್ಷಣ ಕೋರ್ಸ್ ಪ್ರಾರಂಭಿಸಲು ಮುಂದಾಗಬೇಕು ಮತ್ತು ಅದನ್ನು ಜೀವನ ಅಧ್ಯಯನ ಪಾಠಗಳು ಎಂದು ವಿಂಗಡಿಸಬಹುದು,ಅಲ್ಲವೇ..!
* * *
#ವರ್ತಮಾನ- ಮತ್ತೆ ವಾಪಸ್ ಅವಿಭಕ್ತ ಕುಟುಂಬ ವ್ಯವಸ್ತೆಗೆ ಹೋಗುವುದು ಅಸಾಧ್ಯ.ಹಾಗಾಗಿ ಶಿಕ್ಷಣ ವ್ಯವಸ್ಥೆಯ ಮುಖಾಂತರವೇ ಬದುಕು ಮತ್ತು ಅನುಭವದ ಪಾಠಕ್ಕೆ ಬೇಡಿಕೆ ಇಡುವ ಪ್ರಸಂಗ ಬಂದಿರುವುದು ಈ ಕ್ಷಣದ ವಿಚಿತ್ರ...!
*
...ಮುಂದುವರೆಯುವುದು..
-ಡಾ.ಅಜಿತ್ ಹರೀಶಿ.