ಕಥೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕಥೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಆಗಸ್ಟ್ 8, 2017

ಕ್ಷಮೆ

#ಸಣ್ಣಕಥೆ

            ಅಸರ್ ನಮಾಝ್ ಮುಗಿಸಿ ಬಂದ ಜಬ್ಬಾರ್ ಉಸ್ತಾದರು ದರ್ಸಿನ ಚಾವಡಿ ಯಲ್ಲಿ ಕುಳಿತು ತಾವೇ ಮಾಡಿದ ಚಹಾ ಹೀರುತ್ತಿದ್ದರು.ಪಕ್ಕದಲ್ಲಿ ಬುತ್ತಿ ತರುವ ಹಕೀಂ, ಉಸ್ತಾದರಿಗೆ ತಂದಿದ್ದ ಮಧ್ಯಾಹ್ನ ದ ಊಟದಲ್ಲಿ ಉಳಿದಿದ್ದ ನೈಚೋರನ್ನು ಉಣ್ಣುತ್ತಿದ್ದ. ಇವತ್ತು ಮೂಸಾ ಹಾಜಾರ್ ನ ಮನೆಯಿಂದ ಉಸ್ತಾದರಿಗೆ ಊಟ.‌ಹಾಜಾರ್ ನ ಊಟ ಅಂದ್ಮೇಲೆ ಕೇಳಬೇಕೇ!, ನೈಚೋರಿನ ಪರಿಮಳ ಜೋರಾಗೇ ಇತ್ತು. ಉಸ್ತಾದ್! ಉಸ್ತಾದ್!... ಕೂಗು ಕೇಳಿ ಉಸ್ತಾದರು ಚಹಾ ಬದಿಗಿಟ್ಟು ತಿರುಗಿದರು. ಸುಲೈಮಾನ್ ತನ್ನ ಹತ್ತು ತಿಂಗಳ ಮಗುವ ಹಿಡಿದು ಓಡೋಡಿ ಬಂದವನೇ ಉಸ್ತಾದರ ಕೈಯಲ್ಲಿಟ್ಟ.ಏನಾಯ್ತು?...ಉಸ್ತಾದ್ ಕೇಳಿದರು..ಬೆಳಿಗ್ಗೆಯಿಂದ ಒಂದೇ ಸಮನೆ ಹಟ,ಅಳು ನಿಲ್ಲಿಸುತ್ತಿಲ್ಲ ಎಂದನು ಸುಲೈಮಾನ್.ಉಸ್ತಾದರ ಕುರುಚಲು ಗಡ್ಡದಿಂದ ಆವೃತವಾದ ಮುಖ ದಿಟ್ಟಿಸುತ್ತಲೇ ಮಗುವಿನ ಅಳು‌ ನಿಂತಿತ್ತು.‌ಉಸ್ತಾದರು ಆಯತುಲ್ ಕುರ್ಸಿ ಓದಿ ಊದಿದರು. ತನ್ನ ಪೆಟ್ಟಿಗೆಯಲ್ಲಿದ್ದ ಕಪ್ಪು ನೂಲೊಂದನ್ನು ತೆಗೆದು ಮಂತ್ರಿಸಿ  ಮಗುವಿನ ರಟ್ಟೆಗೆ ಕಟ್ಟಿದರು.ಸ್ವಲ್ಪ ಝಂ ಝಂ ನೀರನು ಬಾಯಿಗೆ ಸುರಿಯಲು ಮಗುವಿನ ಮುಖ ಅರಳಿತು. ಮಗುವನ್ನೆತ್ತಿಕೊಂಡು ಸುಲೈಮಾನ್ ಹೊರಟ.ಉಸ್ತಾದರು ಕುಳಿತಿರುವಂತೇ ದರ್ಸಿಗೆ ಮಕ್ಕಳು ಒಂದೊಂದಾಗೇ ಬರ ತೊಡಗಿದ್ದರು. ಮಗ್ರಿಬ್ ಬಾಂಗ್ ಗೆ ಸಮಯವಾದಾಗ ಉಸ್ತಾದರು ಮಸೀದಿ ಒಳಗೆ ಹೋದರು.
    ಜಬ್ಬಾರ್ ಉಸ್ತಾದರು ಆ ಊರಿನ ಮಸೀದಿಯ ಖತೀಬರು. ಇಪ್ಪತ್ತೈದು ವರ್ಷಗಳಿಂದ ಅದೇ ಊರಲ್ಲಿ ಸೇವೆ ಸಲ್ಲಿಸುತ್ತಿರುವರು.ಬಹಳ ಗಾಂಭೀರ್ಯ ತುಂಬಿದ ಮುಖದಲ್ಲಿ ನಮಾಜ್ ನ ಕಳೆ ಎದ್ದು ಕಾಣುತ್ತಿತ್ತು. ಕೊಂಚವೂ ತಾಳ್ಮೆ ಕಳೆದುಕೊಳ್ಳದ ಉಸ್ತಾದರದು ಮೇರು ವ್ಯಕ್ತಿತ್ವ. ವಯಸ್ಸಾಗಿದ್ದರೂ ಬಹಳ ಲವಲವಿಕೆಯಿಂದ ಇರುತ್ತಿದ್ದರು. ಜಬ್ಬಾರ್ ಉಸ್ತಾದ್ ಊರಿನ ಎಲ್ಲಾ ಧರ್ಮದವರ ಪಾಲಿಗೆ ಓರ್ವ ಆದರ್ಶ ವ್ಯಕ್ತಿ.ನ್ಯಾಯವೆಂದು ಬಂದಾಗ,ಜಾತಿ,ಬಂಧು ಬಳಗ,ಏನನ್ನೂ ನೋಡುತ್ತಿರಲಿಲ್ಲ.ಊರಿನ ಹಲವಾರು ಜನರ ಕ್ಲಿಷ್ಟಕರ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರ ಸೂಚಿಸಿ ನ್ಯಾಯಯುತ ತೀರ್ಪು ನೀಡಿದ್ದರು.ಅವರು ಬಂದರೆಂದರೆ ಊರವರು ಎದ್ದು ನಿಂತು ಗೌರವ ಸೂಚಿಸುತ್ತಿದ್ದರು.ಅವರ ಸಂಸಾರ ಇಪ್ಪತ್ತು ಕಿಲೋ ಮೀಟರ್ ಆಚೆಗೆ ವಾಸವಿತ್ತು. ಮೂವರು ಮಕ್ಕಳಲ್ಲಿ ಒಬ್ಬಾಕೆ ಹೆಣ್ಣು. ಎಲ್ಲರಿಗೂ ಮದುವೆಯಾಗಿ ಮಕ್ಕಳಿವೆ. ವಾರದ ಮಧ್ಯದಲ್ಲಿ ಮನೆಗೆ ಹೋಗಿ ಬರುತ್ತಿದ್ದರು.
         ಮಗ್ರಿಬ್ ನಮಾಝ್ ಮುಗಿಸಿದವರೇ,ಉಸ್ತಾದರು ದರ್ಸಿಗೆ ಬಂದರು. ಹಸನ್ ಮುಸ್ಲಿಯಾರ್ ಬೇರೆ ರಜೆಯಲ್ಲಿದ್ದರು.ಹಾಗಾಗಿ ಎರಡೂ ತರಗತಿಯ ಮಕ್ಕಳಿಗೆ ಒಟ್ಟಿಗೆ ಪಾಠ ಮಾಡುವ ಅನಿವಾರ್ಯತೆ..ಫಿಕ್ಹ್ ಕುರಿತು ತರಗತಿ ನಡೆಯಿತು.ನಿನ್ನೆ ಕಂಠಪಾಠ ಮಾಡಿ ಬರಲು ಹೇಳಿದ್ದ ಸೂರಃ ವನ್ನು ಕೇಳ ತೊಡಗಿದರು.ಮಕ್ಕಳೆಲ್ಲಾ  ಒಬ್ಬೊಬ್ಬರಾಗಿ ಹೇಳಿದರು. ಸ್ವಲ್ಪ ಪೋಕಿರಿಯಾಗಿದ್ದ ಸಫ್ವಾನ್ ತಪ್ಪು ತಪ್ಪಾಗಿ ಹೇಳಿ ಒಂದೆರಡು ಏಟನ್ನೂ ತಿಂದ. ತರಗತಿಯ ನಂತರ ಪ್ರವಾದಿ ಮೊಹಮ್ಮದರ ಚರಿತ್ರೆ ಹೇಳೋದು ವಾಡಿಕೆ..ಉಸ್ತಾದರು ಹಾಜರಿ ಹಾಕಿದ ನಂತರ ಶಾಯಿನಾ ಉಸ್ತಾದ್ ಚರಿತ್ರೆ ಚರಿತ್ರೆ...!  ಎಂದಳು..ಉಸ್ತಾದರು, ಪ್ರವಾದಿ ನಮಾಝ್ ಮಾಡುತ್ತಿರಲು ಒಬ್ಬ ವ್ಯಕ್ತಿಯು ಹಿಂದಿನಿಂದ ಬಂದು ಸತ್ತ ಒಂಟೆಯ ಚಿಂದಿಯಾದ ಕರುಳ ಬಳ್ಳಿಯನ್ನು ಅವರ ಕೊರಳಿಗೆ ಹಾಕಿದ ಕತೆಯನ್ನೂ,ಬಳಿಕ ಪ್ರವಾದಿ ಅವನನ್ನು ಕ್ಷಮಿಸಿದ್ದ ವಿಚಾರವನ್ನು ಮಕ್ಕಳಿಗೆ ವಿವರಿಸಿದರು.ತನ್ನ ಕೈಯಲ್ಲಿ ಆ ವ್ಯಕ್ತಿಯ ಶಿಕ್ಷಿಸುವ ಎಲ್ಲಾ ಅವಕಾಶವಿದ್ದಾಗಲೂ ನೆಬಿಯವರು ಅವನಿಗೆ ಕ್ಷಮೆ ನೀಡಿದ್ದರು ಎಂದ ಉಸ್ತಾದರು ಕೆಲವೊಮ್ಮೆ ನ್ಯಾಯ ನೋಡುವುದಕ್ಕಿಂತ ಕ್ಷಮಿಸುವುದಾಗಿದೆ ಉತ್ತಮ ಎಂದರು. ಆ ನೀತಿಯೊಂದಿಗೆ ಅಂದಿನ ತರಗತಿ ಮುಗಿಯಿತು.ಇಶಾ ನಮಾಝ್ ನಂತರ ಊಟ ಮುಗಿಸಿದ ಉಸ್ತಾದರು ನಿದ್ರೆಗೆ ಜಾರಿದರು.ರಾತ್ರಿ ಊಟವ ತಂದಿದ್ದ ಹಕೀಂ ಅದಾಗಲೇ ತನ್ನ ಮನೆಗೆ ಹೋಗಿದ್ದ.
         ರಾತ್ರಿ ಮೂರು ಗಂಟೆಯ ಸುಮಾರಿಗೆ ನಿದ್ರೆಯಿಂದ ಎದ್ದು ಏಕಾಂತದಲ್ಲಿ ತಹಜ್ಜುದ್ ನಮಾಝ್ ನಿರ್ವಹಿಸಿ ಸುಬುಹ್ ಆಝಾನ್ ವರೆಗೆ ಇಬಾದತ್ ನಲ್ಲಿ ಮಗ್ನರಾಗುವುದು ಉಸ್ತಾದರ ದಿನಚರಿ. ಇಂದೂ ಅದೇ ರೀತಿ ಎದ್ದು ಪ್ರಾರ್ಥನಾ ಮಗ್ನರಾಗಿದ್ದರು. ಅಷ್ಟರಲ್ಲಿ..! ದೊಪ್ಪ್...  ಅದೇನೋ ಸದ್ದು... ಕಿಟಕಿಯಿಂದ ಇಣುಕಲು, ಎರಡು ಮುಸುಕುದಾರಿ ಯುವಕರು ಮಸೀದಿಯ ಆವರಣದಲ್ಲಿದ್ದರು. ಅದೇನೋ ಮಸೀದಿಯ ಮುಂದೆ ಎಸೆದು ತಾವು ಬಂದಿದ್ದ ಬೈಕ್ ನತ್ತ ಓಡಿದರು.ಉಸ್ತಾದ್ ಏಯ್ ಯಾರದು ಎಂದು ಧ್ವನಿ ಏರಿಸಲು ಆ ಯುವಕರು ಬೈಕ್ ನಲ್ಲಿ ತೆರಳಿಯಾಗಿತ್ತು. ಉಸ್ತಾದರ ಹೊರ ಬಂದು ನೋಡಿದರು‌.ಅವರ ಊಹೆ‌ ಸರಿಯಾಗಿತ್ತು. ಅದೊಂದು ಹಂದಿಯ ತಲೆಯಾಗಿತ್ತು. ಸುತ್ತ ಮುತ್ತಲಿನ ಊರುಗಳಲ್ಲಿ ಮಸೀದಿಯ ಮುಂದೆ ಹಂದಿ ತಲೆಯನ್ನೂ, ದೇವಸ್ಥಾನ ದ ಮುಂದೆ ದನದ ತಲೆ ಎಸೆದು ಓಡುವ ಕಿಡಿಗೇಡಿಗಳ ವಿಚಾರ ಅವರಿಗೂ ತಿಳಿದಿತ್ತು.ಮತ್ತು ಅದರ ವಿಚಾರವಾಗಿ ದೊಡ್ಡ ಮಟ್ಟಿನ ಗಲಭೆಗಳು ನಡೆದಿರೋದೂ ಗೊತ್ತಿತ್ತು.  ಆದರೆ ಆ ಊರಲ್ಲಿ ಯಾವುದೇ  ಗಲಭೆ ಗಳು ನಡೆದಿರಲಿಲ್ಲ. ಸರ್ವ ಧರ್ಮೀಯರು ಅನ್ಯೋನ್ಯತೆಯಲ್ಲಿದ್ದರು. ಇನ್ನು ಈ ಹಂದಿ ತಲೆಯ ವಿಚಾರವಾಗಿ ಊರಲ್ಲಿ ಯಾವುದೇ ತರ್ಕ ನಡೆದು ಗಲಭೆ ಉಂಟಾಗುವುದು ಬೇಡವೆಂದು ನಿರ್ಧರಿಸಿದ ಉಸ್ತಾದರಿಗೆ ತಾನೇ ರಾತ್ರಿ ಹೇಳಿದ ನೀತಿಯ ನೆನಪಾಗಿ ಇಲ್ಲಿ ನ್ಯಾಯಕ್ಕಿಂತ ಕ್ಷಮೆ ಯೋಗ್ಯವೆಂದು ಕೊಂಡರು. ಯೋಚಿಸುತ್ತಿದ್ದಂತೆ ಮಳೆ ಜೋರಾಗಿ ಸುರಿಯ ತೊಡಗಿತು. ಆ ಮಳೆಯಲ್ಲೇ , ಹಾರೆಯ ಸಹಾಯದಿಂದ ಒಂದು ಗುಂಡಿ ತೋಡಿ ಒಂದು ಪ್ಲಾಸ್ಟಿಕ್ ಗೋಣಿಯ ಸಹಾಯದೊಂದಿಗೆ ಆ ತಲೆಯನ್ನು ದಫನ ಮಾಡಿದರು. ಸುರಿದಿದ್ದ ರಕ್ತವನ್ನೆಲ್ಲಾ ಶುದ್ಧೀಕರಿಸುವಷ್ಟರಲ್ಲಿ ಆ ಮುದಿ ಜೀವಕ್ಕೆ ಸಾಕಾಗ್ಬಿಟ್ಟಿತ್ತು. ಬಿರಬಿರನ ಸ್ನಾನವ ಮುಗಿಸಿ ಮಸೀದಿಯ ಒಳಗೆ ಓಡಲು‌ ಅದಾಗಲೇ ಸುಬುಹ್ ಅಝಾನ್ ನ ಸಮಯ ಮೀರಿತ್ತು. ಅಲ್ಲಾಹು ಅಕ್ಬರ್! ಅಲ್ಲಾಹು ಅಕ್ಬರ್! ...ಹದಿನೈದು ನಿಮಿಷ ತಡವಾಗಿ ಮಸೀದಿಯ ಮಿನಾರದಲ್ಲಿ ಆಝಾನ್ ಮೊಳಗಿತು. ಸುಬುಹ್ ನಮಾಝ್ ಗೆ ಮಂದಿ ಆಗಮಿಸ ತೊಡಗಿದರು. ಬಂದವರು ಯಾಕೆ ತಡವಾಯ್ತು ಎಂದು ಕೇಳಲು ಉಸ್ತಾದರು, ನಿದ್ದೆಯಿಂದ ಎಚ್ಚರವಾಗಲು ತಡವಾಯಿತೆಂದರು. ಕೆಲವರು ಅಪಸ್ವರ ಎತ್ತ ತೊಡಗಿದರು. ಹೇಗೋ ಸುಬುಹ್ ನಮಾಝ್ ನಡೆಯಿತು..ಹತ್ತಿರದ ದೇವಸ್ಥಾನ ದಲ್ಲಿ "ಕೌಸಲ್ಯಾ ಸುಪ್ರಜಾ ರಾಮಾ ಪೂರ್ವಾ ಸಂಧ್ಯಾ ಪ್ರವರ್ತತೇ ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್".... ಸುಪ್ರಭಾತದ ಇಂಪು‌ ಪಸರಿಸ ತೊಡಗಿತು...ಎಲ್ಲವೂ ಶಾಂತವಾಗಿತ್ತು. ಜನ ತಮ್ಮ ದೈನಂದಿನ ಕೆಲಸ ಕಾರ್ಯದಲ್ಲಿ ತೊಡಗಿದರು.
        ಉಸ್ತಾದರು ಹದಿನೈದು ನಿಮಿಷ ತಡವಾಗಿ ಬಾಂಗ್ ಕೊಟ್ಟಿದ್ದು ದೊಡ್ಡ ಸುದ್ದಿಯಾಯಿತು..ಉಸ್ತಾದರ ನ್ಯಾಯ ಇರುವಲ್ಲಿಯ ವರೆಗೆ ಆ ಊರಲ್ಲಿ ತಮ್ಮ ಬೇಳೆ ಬೇಯುವುದಿಲ್ಲವೆಂದು ಅರಿತಿದ್ದ ಎರಡು ಪುಂಡ ನಾಯಕರು ಎಚ್ಚರವಾದರು. ಇದೇ ತಕ್ಕ ಸಮಯವೆಂದು ಕೊಂಡು ಜಮಾತ್ ನ ಒಂದೆರೆಡು ಜನರನ್ನು ಸೇರಿಸಿ ಇಂದೇ ಸಭೆ ನಡೆಯ ಬೇಕೆಂದು ಪಟ್ಟು ಹಿಡಿದರು.ಸುಬುಹ್ ನಮಾಝ್ ಗೆ ಯಾವತ್ತೂ ಬರದವರೂ ಕೂಡ ಅವರ ಜೊತೆ ಸೇರಿ ಕೊಂಡರು‌. ಸಭೆ ನಡೆಯಿತು. ಕಳೆದ ವಾರ ನಡೆದ ಪಂಚಾಯಿತಿಗೆಯಲ್ಲಿ ಯೂಸುಫನ ವಿರುದ್ಧವಾಗಿ ಉಸ್ತಾದರು ತೀರ್ಪು ಕೊಟ್ಟಿದ್ದರು. ಹಾಗಾಗಿಯೋ ಏನೋ..ಉಸ್ತಾದರಿಗೆ ವಯಸ್ಸಾಗಿದೆ‌ ,ನಿದ್ದೆಯಿಂದ ಎಚ್ಚರವಾಗದವರೆಲ್ಲಾ ನಮಗೆ ಖತೀಬರಾಗಿ ಬೇಡ ಎಂದು ಗುಡುಗಿದರು.ಹಲವರು ದನಿಗೂಡಿಸಿದರು.ಪರವಿರೋಧ ಚರ್ಚೆ ನಡೆಯಿತು. ಕಡೆಗೆ ಅಲ್ಲಿ ಉಸ್ತಾದರನ್ನು ಕಳಿಸಿಕೊಡುವ ತೀರ್ಪು ನೀಡಲಾಯಿತು. ಬಹುಪಾಲು ಮಂದಿ ಉಸ್ತಾದರನ್ನು ಬೆಂಬಲಿಸಿದ್ದರೂ ಎದುರಾಳಿ ಗಳು ಪ್ರಬಲವಾಗಿದ್ದರಿಂದ ಉಸ್ತಾದರನ್ನು ಕಳಿಸಿ ಕೊಡಲೇಬೇಕಾಯಿತು. ಉಸ್ತಾದರು ಸತ್ಯ ಹೇಳಿದ್ದರೆ ಕೆಲಸ ಉಳಿಯುತ್ತಿತ್ತು. ಆದರೆ ಊರು ಉರಿಯುವುದು ಅವರಿಗೆ
ಬೇಕಿರಲಿಲ್ಲ.
          ಉಸ್ತಾದರು ನಗುಮುಖದಿಂದಲೇ ವಿದಾಯ ಹೇಳಿದರು.ಸನ್ಮನಸ್ಸಿನ ಜಮಾತಿಗರು ದುಃಖ ದಲ್ಲಿದ್ದರು.ಜಬ್ಬಾರ್ ಉಸ್ತಾದರು ಮನೆ ಕಡೆ ಹೆಜ್ಜೆ ಯಾಕ ತೊಡಗಿದರು.ಅವರಲ್ಲಿ ಸಂತೃಪ್ತಿ ಮನೆ ಮಾಡಿತ್ತು. " ಹೋಗಿದ್ದು ಒಂದು ಕೆಲಸ, ಉಳಿಸಿದ್ದು ಒಂದು ಊರು " ಅನ್ನೋ ಸಂತೃಪ್ತಿ...

ದರ್ಸ್ : ಮದರಸ , ನೈಚೋರ್: ತುಪ್ಪದ ಊಟ , ಸುಬುಹ್ : ಮುಂಜಾನೆ..

#ಇರ್ಫಾನ್_ಹಕ್

ಗುರುವಾರ, ಜೂನ್ 15, 2017

ಮಗ್ರಿಬಿನ ಬಾಂಗ್

ಬಾಪಾ, ನಾಳೆಯಾದ್ರೂ ಶಾಲೆಗೆ ಬರ್ತಿರಾ?" ಮಸೀದಿಯ ಪಕ್ಕದ ಕಚೇರಿಯಲ್ಲಿದ್ದ ಟೆಲಿಫೋನಿಗೆ ಕರೆ ಮಾಡಿದ್ದ ಸಯೀದಾ ಕೇಳುತ್ತಿದ್ದಳು.  ಅದ್ದು ಉಸ್ತಾದ್ ನಿಲ್ಲಲು ಶಕ್ತಿ ಸಾಲದೆ ಕೊಟಡಿಯ ಗೋಡೆಗೆ ಒರಗಿಕೊಂಡರು. ಮಗಳ ಧ್ವನಿಯಲ್ಲಿ ತನ್ನ ಬಗ್ಗೆ ತಾತ್ಸಾರದ ಭಾವವಿದೆಯಾ, ಛೇ ಛೇ ಇರಲಾರದು ಹದಿಮೂರರ ಹರೆಯದಲ್ಲಿಯೇ ಮನೆಯ ಜವಾಬ್ದಾರಿ ವಹಿಸಿಕೊಂಡವಳು ಸಯೀದಾ.

''ಬಾಪಾ.." ಸಯೀದಾ ಇನ್ನೊಮ್ಮೆ ಕರೆದಾಗ ಅದ್ದು ಉಸ್ತಾದ್ ನೆನಪಿನ ಜಂಗುಳಿಯಿಂದ ಹೊರಬಂದರು.
"ಹ್ಞಾ.. ಮೋಳೆ, ನಾಳೆ ಬೆಳಿಗ್ಗೆ ಎಂಟು ಗಂಟೆಯ ಬಸ್ಸಿನಲ್ಲಿ ನಿನ್ನ ಸ್ಕೂಲ್ ಪೀಜನ್ನು ಕಳುಹಿಸುತ್ತೇನೆ, ಆ ಬಸ್ಸಲ್ಲಿ ಕಂಡಕ್ಟರ್ ನನ್ನ ಅಳಿಯ ಅಲ್ವಾ.. ನಿನ್ನ ಸ್ಕೂಲಿಗೇ ತಲುಪಿಸುತ್ತಾನಮ್ಮ", 
"ಆದರೂ ನೀವೊಮ್ಮೆ ಬರಬೇಕೆಂದು ಹೆಡ್ ಮಾಸ್ತರ್ ಹೇಳಿದ್ದಾರೆ ಬಾಪಾ",
"ನಾಳೆ ನಾನು ಬಂದರೆ ಇಲ್ಲಿ ಬಾಂಗ್ ಕೊಡೋದು ಯಾರು ಮೋಳೆ, ನೋಡೋಣ ಈ ಜುಮ್ಮಾ ಕಳೆದ ನಂತರ ಚನಿಯಾಸೆಗಾದ್ರೂ ಬರುತ್ತೇನೆ",
"ಆಯ್ತು ಬಾಪಾ",
"ಉಮಾ ಹೇಗಿದ್ದಾಳೆ ಮೋಳೆ",
"ಇನ್ನೂ ಕೆಮ್ಮು ನಿಂತಿಲ್ಲ ಬಾಪಾ, ಡಾಕ್ಟ್ರು ಕೊಟ್ಟ ಮದ್ದು ಇನ್ನೂ ಇದೆ"

ಅದ್ದು ಉಸ್ತಾದ್ ಪತ್ನಿ ಮದುವೆಯಾಗುವಾಗಲೇ ಅಷ್ಟೇನು ಹುಷಾರಿನವರಾಗಿರಲಿಲ್ಲ, ಆದರೂ ಮದುವೆಯಾಗಿ ಬಂದಂದಿನಿಂದ ಪತಿಯೊಂದಿಗೆ ಎಂದೂ ಕೊಂಕು ಮಾತಾಡಿದವರಲ್ಲ. ಇಲ್ಮು ಕತ್ತಲೆಯನ್ನು ದೂರ ಮಾಡಿ ಬೆಳಕನ್ನು ನೀಡುತ್ತದೆಯೇ ಹೊರತು ಹಸಿವನ್ನು ನೀಗಿಸುವುದಿಲ್ಲ ಎಂದು ಅದ್ದು ಉಸ್ತಾದರ ಗುರುಗಳು ಯಾವಾಗಲೂ ಹೇಳುತ್ತಿದ್ದ ಮಾತು. ಬಡತನ ಅದ್ದು ಉಸ್ತಾದರಿಗೆ ಪಿತ್ರಾರ್ಜಿತ ಬಳುವಳಿ. ಜೊತೆಗೆ ಹೆಂಡತಿಯ ದಮ್ಮು ರೋಗ ಟಿ.ಬಿ ಗೆ ತಿರುಗಿ ಅದ್ದು ಉಸ್ತಾದರ ಜೀವನದ ದಾರಿಯನ್ನೇ ತಿರುಗಿಸಿತ್ತು. ಎಲ್ಲೋ ಬಾಂಗಿನ ಧ್ವನಿ ಕೇಳುತ್ತಿದೆ, ಅರೇ ಫೋನಿನೊಳಗಿಂದಲೇ!? ಅದ್ದು ಉಸ್ತಾದ್ ನೆನಪಿನ ಮೊಟ್ಟೆಯಿಂದ ಹೊರ ಬಂದರು.

" ಅಯ್ಯೋ! ಮಗ್ರೀಬ್ ಮೋಳೆ! ನಮ್ಮ ಹಳೆ ಮಸೀದಿ ಬಾಂಗ್ ಕೇಳ್ತಾ ಇದೆ, ನಾನಿನ್ನು  ಮೇಲೆ ಹೋಗ್ಬೇಕು ಮೋಳೆ, ಪೀಜು ನಾಳೆ ಕಳುಹಿಸುತ್ತೇನೆ" "ಆಯ್ತು ಬಾಪಾ" ಎಂದು ಆಚೆ ಕಡೆಯಿಂದ ಸಯಿದಾ ಹೇಳುತ್ತಿರುವುದನ್ನೂ ಕೇಳದೆ ಅದ್ದು ಉಸ್ತಾದ್ ಫೋನ್ ಕೆಳಗೆ ಇಟ್ಟು ತರಾತುರಿಯಲ್ಲಿ ಮಸೀದಿಯತ್ತ ಓಡಿದರು.

       ಮಸೀದಿಯ ಮೆಟ್ಟಿಲನ್ನು ಹತ್ತಿಕೊಂಡು ವರಾಂಡದ ಮೂಲೆಯಲ್ಲಿರುವ ನೀರಿನ ತೊಟ್ಟಿಯಲ್ಲಿ ಕೈಕಾಲು ತೊಳೆದು ಉಝು ಕರ್ಮಗಳನ್ನು ಮುಗಿಸಿದರು.  ನೈರುತ್ಯ ದಿಕ್ಕಿನಿಂದ ಬೀಸಿದ ಗಾಳಿಗೆ ಮೂತ್ರದ ವಾಸನೆ ಜೋರಾಗಿ ಮೂಗಿಗೆ ಬಡಿಯಿತು.  ನೀರಿನ ತೊಟ್ಟಿಗೆ ತಾಗಿಕೊಂಡೇ ಮದರಸದ ಮಕ್ಕಳು ಮತ್ತು ಮಸೀದಿಗೆ ಬರುವವರ ಉಪಯೋಗಕ್ಕೆಂದು ಕಟ್ಟಿಸಿದ ಮೂತ್ರದೊಡ್ಡಿಗಳಿದ್ದವು.  ಶೌಚಾಲಯದ ಗೋಡೆಯ ಬಲಭಾಗದಲ್ಲಿ ಶೈತಾನನ ವಶವಾಗದಂತೆ ಸರ್ವಶಕ್ತನನ್ನು ಅಭಿವಾದಿಸುವ ಸೂಕ್ತಗಳನ್ನು ಅರೆಬಿಕ್ನಲ್ಲಿ ಬರೆದಿದ್ದರು. ಅದನ್ನೊಮ್ಮೆ ಮನಸ್ಸಿನಲ್ಲಿಯೇ ಪಠಿಸಿದ ಅದ್ದು ಉಸ್ತಾದ್ ಇನ್ನೊಮ್ಮೆ ಮುಖತೊಳೆದುಕೊಂಡು ಬೇಗ ಬೇಗನೇ ಮಸೀದಿಯೊಳಕ್ಕೆ ಧಾವಿಸಿ ಮಗ್ರೀಬಿನ ಬಾಂಗ್ ನೀಡಿದರು. ಕಿಟಕಿಯ ಹೊರಗೆ ಹಕ್ಕಿಗಳು ಜೋರಾಗಿ ಚಿಲಿಪಿಲಿಗುಟ್ಟತೊಡಗಿದವು. ಕುರ್ ಆನ್ ಗ್ರಂಥವನ್ನೊಮ್ಮೆ ಹಣೆಗೊತ್ತಿ , ಚುಂಬಿಸಿದ ಅದ್ದು ಉಸ್ತಾದ್ ಗೋಡೆಯಲ್ಲಿ ಗ್ರಂಥವನ್ನಿಡುವ ಹಲಗೆಯ ಅಡ್ಡದಲ್ಲಿರಿಸಿದರು.
        ಮಕ್ಕಳು ಸಂಜೆಯ ತರಗತಿಗೆ ಮದರಸದೊಳಗೆ ಬರುತ್ತಿದ್ದರು. ಆಫೀಸು ಕೋಣೆಯ ಪಕ್ಕದ ಕೊಟಡಿಯಲ್ಲಿಯೇ ಮದರಸ ನಡೆಸುತ್ತಿದ್ದರು.  ಮಕ್ಕಳ ಮುಖವನ್ನು ನೋಡುತ್ತಿದ್ದಂತೆ ಅದ್ದು ಉಸ್ತಾದರಿಗೆ ಮನೆಯ ನೆನಪಾಯಿತು. ನಾಳೆ ಬೆಳಿಗ್ಗೆ ಎಂಟು ಗಂಟೆಯ ಬಸ್ಸಿಗೆ ಮಗಳ ಸ್ಕೂಲ್ ಪೀಜು ಕಳುಹಿಸಬೇಕು,  ಅಧ್ಯಕ್ಷರು ಸಂಬಳವಿನ್ನೂ ಕೊಟ್ಟಿಲ್ಲ.  ತರಗತಿ ಮುಗಿದ ಕೂಡಲೇ ಅಧ್ಯಕ್ಷರ ಮನೆಗೆ ಹೋಗಬೇಕೆಂದು ಕೊಂಡರು.  ಮಕ್ಕಳೆಲ್ಲಾ ತರಗತಿಯಲ್ಲಿ ಕುಳಿತುಕೊಂಡಾಗಿತ್ತು. ಅದ್ದು ಉಸ್ತಾದ್ ಮಕ್ಕಳಿಗೆ ಅರೆಬಿಕ್ ಪಠ್ಯದ ಎರಡು ತಸ್ಬಿಗಳನ್ನು ಗಟ್ಟಿ ಸ್ವರದಲ್ಲಿ ಕಂಠಪಾಠಮಾಡಲು ಹೇಳಿ ಪುನಃ ನೆನಪಿನ ಕುದುರೆಯ ಬೆನ್ನು ಹತ್ತಿದರು.
        ಮದರಸದ ಕಿಟಕಿಯ ಹೊರಗೆ ಶೆರೀಪಮ್ಮಾ ತನ್ನ ಗುಡಿಸಲಿಗೆ ಮಡಲಿನ ತಟ್ಟಿಯನ್ನು ಭದ್ರಗೊಳಿಸುತ್ತಿದ್ದರು. ಗಾಳಿಗೆ ಮಿಣಿ ಮಿಣಿ ಓಲಾಡುತಿದ್ದ ಚಿಮಿಣಿಯ ಬೆಳಕಿಗೆ ಶೆರೀಪಮ್ಮರ ದೊಡ್ಡ ನೆರಳು ಆಚೆ ಈಚೆ ಓಡುತ್ತಿರುವಂತೆ ಕಾಣುತಿತ್ತು. 

"ಅಬ್ಬಾ ಈ ಸರ್ತಿಯಾದರೂ ಮನೆಗೆ ಮರದ ಬಾಗಿಲು ಮಾಡಿಸ್ಬೇಕು" ಸಯೀದಾ ಹೇಳುತ್ತಿದ್ದಳು.
" ಕತ್ತಲಾಗುವಾಗ ಯಾರೋ ಬಂದು ಜಗಲಿಯಲ್ಲಿ ಕುಳಿತ ಹಾಗೆ ಆಗುತ್ತೆ ಅಬ್ಬಾ"
ಅದ್ದು ಉಸ್ತಾದ್ "ಅದು ಮಲಕುಗಳಮ್ಮಾ , ಸಂಜೆ ಹೊತ್ತು ರಹಮತ್ತುಗಳನ್ನು ಹೊತ್ತ ತರುತ್ತಾರೆ ನಮ್ಮ ಮನೆಗೆ"

ಮಕ್ಕಳಿಗೆ ಪಾಠ ಮಾಡುವ ಅಭ್ಯಾಸದಲ್ಲಿ ಹೇಳಿದ ಅದ್ದು ಉಸ್ತಾದ್ ರ ಮಾತುಗಳು ಗಂಟಲಲ್ಲಿಯೇ ಬಾಕಿಯಾದವು. ಮಗಳು ದೊಡ್ಡವಳಾಗುತ್ತಿದ್ದಾಳೆ. ಅದ್ದು ಉಸ್ತಾದರ ಎದೆ ಭಾರವಾದಂತೆ ಅನಿಸುತಿತ್ತು. ಏನೇನೋ ಭಾವನೆಗಳು ಮನಸ್ಸಿಗೆ ಬಂದು ಚುಚ್ಚ ತೊಡಗಿದವು. ಕೆಮ್ಮುತ್ತಲೇ ಇದ್ದ ಹೆಂಡತಿ "ಇಕೊಳ್ಳಿ, ಅದು ಒಮ್ಮೆ ಅವನಿಗೆ ಕಾಗದ ಬರೆಯಬಹುದಲ್ವಾ" ಎಂದರು.
ಅದ್ದು ಉಸ್ತಾದ್ ಪತ್ನಿಯ ಮುಖವನೊಮ್ಮೆ ನೋಡಿದರು, ರೋಗಗ್ರಸ್ತಳಾಗುವ ವಯಸ್ಸೇ ಅಲ್ಲ ಅಮಿನಾರದ್ದು. ಇನ್ನೂ ನಲವತ್ತೈದು ಕೂಡಾ ಆಗಿರಲಿಕ್ಕಿಲ್ಲ ಆಗಲೇ ಈ ಹಾಳಾದ ಅಸ್ತಮಾ ರೋಗ ಅಮಿನಾಬಿಯನ್ನು ಹಣ್ಣುಗಾಯಿ ಮಾಡಿಹಾಕಿತ್ತು.
"ಅದನ್ನು ನನ್ನ ಕಬರಿನಲ್ಲಿಯೂ ಯೋಚನೆ ಮಾಡಲಾರೆ ಅಮಿನಾ" ಅದ್ದು ಉಸ್ತಾದ್ ಅಸಹನೆಯಿಂದ ನುಡಿದರು.
ಅದ್ದು ಉಸ್ತಾದರ ದೊಡ್ಡ ಮಗ ಪೇಟೆಯಲ್ಲಿ ಮಾವನ ಮನೆಯಲ್ಲಿ ಬೆಳೆದವನು ಹತ್ತನೆ ತರಗತಿಯವರೆಗೆ ಅಲ್ಲಿಯೇ ಕಲಿತಿದ್ದ. ಇನ್ನಾದರೂ ಕೇರಳದ ಯಾವುದಾದರೂ ಅರೆಬಿಕ್ ಶಾಲೆಯಲ್ಲಿ ಸ್ವಲ್ಪ ಧಾರ್ಮಿಕ ಶಿಕ್ಷಣ ಕಲಿಯಲಿ ಎಂದು ಅದ್ದು ಉಸ್ತಾದರ ಮನಸ್ಸಾಗಿತ್ತು. ಆದರೆ ಹುಡುಗ ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಇಲ್ಲಿಯೇ ಕಲಿತು ಸೌದಿಯಾಕ್ಕೆ ಹೋಗುತ್ತೇನೆ ಎಂದೇ ಪಟ್ಟು ಹಿಡಿದು ಕುಳಿತ. ಕೊನೆಗೊಮ್ಮೆ ಹನ್ನೆರಡನೇ ತರಗತಿ ಮುಗಿಸಿದವನಿಗೆ ಮಾವನೇ ವೀಸಾವನ್ನೂ ತರಿಸಿಕೊಟ್ಟಿದ್ದ.

     ಸೌದಿಗೆ ಹೊರಡುವುದಕೆ ವಾರದ ಮೊದಲೇ ಸತ್ತಾರ್ ಮನೆಗೆ ಬಂದಿದ್ದ. ಅಮಿನಾಭಿಯ ದಮ್ಮು ಈಗದಷ್ಟು ಜೋರು ಇರಲಿಲ್ಲವಾದರೂ ಕೆಮ್ಮುವುದಂತೂ ಇದ್ದೇ ಇತ್ತು.
     ಆಗೆಲ್ಲಾ ಸತ್ತಾರ್ ಸುತ್ತ ಮುತ್ತ ಇರುವ ಹಲವು ಮಸೀದಿಗಳು ಮತ್ತು ದರ್ಗಾಗಳಿಗೆ ಬೇಟಿಯನ್ನೂ ನೀಡಿದ್ದ. " ಉಮ್ಮಾ ಮೇಲಿನ ಮಸೀದಿಗೆ ಸೌದಿಯಿಂದ ಬಂದ ನಂತರ ಶೋ ಬಲ್ಬು ನೀಡುತ್ತೇನೆ ಎಂದು ಹರಕೆ ಇಟ್ಟಿದ್ದೇನೆ ಉಮ್ಮಾ" ಎನ್ನುತ್ತಿದ್ದ.  ಬೊಂಬಾಯಿಗೆ ಬಸ್ಸು ಹತ್ತುವವರೆಗೆ ಅದ್ದು ಉಸ್ತಾದರು ಕೂಡಾ ಕಾಲಿಗೆ ಚಕ್ರ ಕಟ್ಟಿದವರಂತೆ ಓಡಾಡುತಿದ್ದರು. ಅಮಿನಾಬಿಯ ಕಣ್ಣು ಸದಾ ತುಂಬಿದ ಕೊಡದಂತೆ ಕಾಣುತಿತ್ತು. ಯಾವ ಕ್ಷಣಕ್ಕಾದರೂ ಅದು ಹೊರಚೆಲ್ಲಿ ಬಿಡಬಹುದಿತ್ತು.
 
        ಕೊನೆಗೊಮ್ಮೆ ಆ ದಿನವು ಬಂದೇ ಬಿಟ್ಟಿತ್ತು. ಅದ್ದು ಉಸ್ತಾದರ ಮನೆಯಲ್ಲಿ ನಡೆದ ಮೌಲೂದು ಪಾರಾಯಣಕ್ಕೆ ಕೇರಳದಿಂದ ಆಗ ತಾನೇ ಕಲಿತು ಬಂದಿದ್ದ ಉಸ್ತಾದರಿಬ್ಬರನ್ನು ಕರೆಸಿದ್ದರು ಅದ್ದು ಉಸ್ತಾದ್. ಪಾರಾಯಣದ ಮಧುರ ಸ್ವರಗಳು ಇನ್ನೂ ಕಿವಿಯಲ್ಲಿ ಧ್ವನಿಸುತ್ತಿರುವಾಗಲೇ ಸತ್ತಾರ್ ಸೌದಿಗೆಂದು ಮುಂಬಯಿಯ ಬಸ್ಸು ಹತ್ತಿದ್ದ. ಸಣ್ಣವಳಾದ ಸಯೀದಾ ಅಳುತಿದ್ದಳು. ಅಮೀನಾಬಿಯ ಕೆಮ್ಮು ದಮ್ಮು ರೋಗವಾಗಿ ಮಾತು ಬಾರದೆ ಸೆರಗನ್ನು ಬಾಯಿಗೊತ್ತಿಕೊಂಡು ಕಟ್ಟೆಯೊಡೆದು ಹರಿಯುತ್ತಿರುವ ಕಣ್ಣೀರಿನ ಕಣ್ಣುಗಳಿಂದ ಮಗನನ್ನು ನೋಡುತ್ತಿದ್ದರು.  " ಮೋನೆ ನಿನ್ನ ಕೆಲಸವಲ್ಲದೆ, ಬೇರೆ ಯಾರ ಕೂಡ ಸೇರಿಕೊಳ್ಬೇಡಪ್ಪಾ. ಅಲ್ಲಿ ಹೊಸ ಹೊಸ ಜನರು ಮತ್ತು ಊರಿನವರು ಸೇರಿಕೊಂಡು ಏನೇನೊ ನೂತನಗಳ ಬಗ್ಗೆ ಮಾತನಾಡುತ್ತಾರಂತೆ" ಎಂದು ಮಗನ ಬಳಿ ಆಗಾಗ ಹೇಳುತ್ತಿದ್ದರು ಅಮಿನಾಬಿ. ಇಂದು ಮಾತೇ ಹೊರಡುತ್ತಿರಲಿಲ್ಲ. ಆದರೂ ಬಸ್ಸು ಹೊರಟಿತು.
    
      ಸೌದಿಯಿಂದ ಮೊದಲ ಪತ್ರ ಬರುವಾಗ ಮೂರು ತಿಂಗಳೇ ಕಳೆದಿತ್ತು. ಆ ಪತ್ರವನ್ನು ಅದ್ದು ಉಸ್ತಾದರು ಅಮಿನಾಬಿಗೆ ಓದಿ ಹೇಳಿದ್ದಕ್ಕೆ ಲೆಕ್ಕವಿಲ್ಲ. ಅದು ಒಂದು ಪತ್ರದಂತೆಯೇ ಇರಲಿಲ್ಲ, ತಾನು ಮೊತ್ತ ಮೊದಲು ಹತ್ತಿದ್ದ ವಿಮಾನದ  ಮತ್ತು ಪ್ರಯಾಣದ   ಬಗ್ಗೆಯೇ ಬರೆದಿದ್ದ ಸತ್ತಾರ್. ವಿಮಾನ ನಿಲ್ದಾಣದಿಂದ ಅಲ್ಲಾಡುತ್ತಲೇ ಬಹು ದೂರ ಓಡಿದ ವಿಮಾನ ಒಮ್ಮೆಲೆ ಮೇಲಕ್ಕೆ ಹಾರಿ ಒಳಗಿದ್ದವರೆಲ್ಲಾ ಹತ್ತಿಗಿಂತ ಹಗುರವಾದಂತಹ ಅನುಭವವಾದದ್ದೂ,  ಕೆಳಗಡೆ ಜೋರಾಗಿ ಕೇಳುತ್ತಿದ್ದ ವಿಮಾನದ ಸದ್ದು ಮೇಲೆ ಏರಿದಂತೆ ಕಡಿಮಯಾದದ್ದು. ಸೌದಿ ಏರ್ ಪೋರ್ಟಿನಲ್ಲಿ ಕಂಪೆನಿಯ ಏಜೆಂಟ್ ನನ್ನು ಹುಡುಕಲು ಕಷ್ಟವಾದದ್ದು,  ಹೀಗೆ ಸತ್ತಾರ್ ಹೆಜ್ಜೆ ಹೆಜ್ಜೆಗಳನ್ನೂ ವಿವರಿಸುತ್ತಿದ್ದ. ಅಮಿನಾಬಿ ಪ್ರತಿಯೊಂದು ವಾಕ್ಯಗಳನ್ನು ಕೇಳುವಾಗಲೂ "ಯಾ ಅಲ್ಲಾಹ್" ಎಂದು ಕಣ್ಣು ಮುಚ್ಚುತ್ತಿದ್ದರು. ಮಗನನ್ನು ಕ್ಷೇಮವಾಗಿ ತಲುಪಿಸಿ ಕಾಗದ ಬರೆಸುವಂತೆ ಮಾಡಿದ ಅಲ್ಲಾಹನನ್ನು ಎಷ್ಟು ಸಲ ಸ್ಮರಿಸಿ ಕೃತಜ್ಞತೆಯನ್ನು ಹೇಳಿದರೂ ಅಮಿನಾಭಿಗೆ ತೃಪ್ತಿಯಿಲ್ಲ. 

     ಆದರೆ ಕಾಲವೆಂಬುದು ಅದ್ದು ಉಸ್ತಾದರಿಗೆ ಮಣಿದಿರಲಿಲ್ಲ. ಸತ್ತಾರ್ ಕಳುಹಿಸಿದ ಆರನೆ ಪತ್ರ, ಎಂದರೆ ಒಂದು ವರ್ಷದ ನಂತರ ಬಂದ ಪತ್ರವೊಂದು ಸ್ವಲ್ಪ ಬದಲಾಗಿತ್ತು. ಯಾವಾಗಲೂ ಗಟ್ಟಿಯಾಗಿ ಓದುತಿದ್ದ ಅದ್ದು ಉಸ್ತಾದ್ ಒಮ್ಮೆಲೇ ಓದುವುದನ್ನು ನಿಲ್ಲಿಸಿದರು.   
"ಅಬ್ಬಾ ನೀವು ಮೌಲೂದು ಮಾಡಲು ಮನೆ ಮನೆಗೆ ಹೋಗುವುದು ನನಗಿಷ್ಟವಿಲ್ಲ,  ಬೇಕಾದರೆ ನಾನು ಇನ್ನೂರು ರುಪಾಯಿ ಜಾಸ್ತಿಯೇ ಕಳುಹಿಸುತ್ತೇನೆ, ತಂಗಿಯ ಮದುವೆ ಮಾಡುವ ಜವಾಬ್ದಾರಿ ನನ್ನದು. ನೀವು ತಲೆಬಿಸಿ ಮಾಡಬೇಡಿ", ಇನ್ನೂ ಏನೇನೋ ವಿಷಯಗಳು, ಧರ್ಮದ ಬಗೆಗಿನ ಉಪದೇಶಗಳು, ಸತ್ತಾರ್ ಎಲ್ಲವನ್ನೂ ಬಿಡಿಸಿ ಬಿಡಿಸಿ ಬರೆಯುತ್ತಿದ್ದ. ತಂದೆ ತಾಯಿ ಸಂಬಂಧಗಳಿಗೇ ಬೆಲೆಯಿಲ್ಲವೋ ಎಂಬಂತೆ, ಕರ್ಮಶಾಸ್ತ್ರಗಳ ಕಟ್ಟು ನಿಟ್ಟುಗಳನ್ನು ಭೋದಿಸಲು ಶುರು ಹಚ್ಚಿದ್ದ.

"ಮೊಯಿಲಾರೇ ಮೊಯಿಲಾರೇ !" , ಹುಡುಗನೊಬ್ಬನ ಕೂಗಿಗೆ ಅದ್ದು ಉಸ್ತಾದ್ ಹೊರ ಜಗತ್ತಿಗೆ ಬಂದರು, ಮಕ್ಕಳು ತರಗತಿಯಲ್ಲಿ ತೂಕಡಿಸುತ್ತಿದ್ದರು, ಕರೆಂಟು ಹೋಗಿತ್ತು, ಬಾಗಿಲ ಬದಿಯಲ್ಲಿ ತೂಗುತಿದ್ದ ಲಾಂಟಾರ್ನು ತನ್ನ ಕೆಂಪನೆಯ ನಾಲಗೆಯನ್ನು ತೋರಿಸಿ ಎಣ್ಣೆ ಖಾಲಿಯಾಗಿದೆ ಎಂದು ತೋರಿಸುತಿತ್ತು.  ಮಕ್ಕಳು ತಸ್ಬಿಯನ್ನು ಕಂಠ ಪಾಠ ಮಾಡಿದ್ದರು.
ಎಲ್ಲರೂ ಸತ್ತಾರನಂತೆ ಕಂಡು ಬಂದು ಅದ್ದು ಉಸ್ತಾದರಿಗೆ ಶಕ್ತಿಗುಂದಿದ ಅನುಭವವಾಯಿತು. ಮನಸ್ಸು ಭಾರವಾಗಿ, ಸ್ವರ ಗದ್ಗದಿತವಾಯಿತು.
"ಮಕ್ಕಳೇ , ನಮ್ಮ ಪ್ರೀತಿಯ  ಪ್ರವಾದಿವರ್ಯರ ಬಗ್ಗೆ ಎಂದಿಗೂ ಅಪಸ್ವರವೆತ್ತ ಬೇಡಿರಿ, ಅಂತಹವರಿಂದ ದೂರವಿರಿ", ಅದ್ದು ಉಸ್ತಾದರ ಕಣ್ಣುಗಳು ಹನಿಗೂಡಿದ್ದವು. ಬೋರ್ಡಿನ ಕಡೆಗೆ ತಿರುಗಿ ಅದ್ದು ಉಸ್ತಾದ್ ಕಣ್ಣೊರೆಸಿಕೊಂಡರು. 
"ಅವನಿಗೆ ಪಶ್ಚಿಮದ ಗಾಳಿ ತಾಗಿದೆ, ಇದು ನನ್ನ ಪ್ರವಾದಿಯವರ ನಾಡಿನದ್ದಂತೂ ಅಲ್ಲವೇ ಅಲ್ಲ",  ದಿನಕ್ಕೆ ಹತ್ತು ಸಾರಿಯಾದರೂ ಅದ್ದು ಉಸ್ತಾದ್ ಅವರಷ್ಟಕ್ಕೇ ಹೇಳುತ್ತಿದ್ದರು.
ಬರಬರುತ್ತಾ ಸತ್ತಾರನ ಪತ್ರಗಳು ನಿಧಾನವಾಗ ತೊಡಗಿದವು, ಒಕ್ಕಣೆಯು ಚೊಕ್ಕ ವಾಗಿತ್ತು, ಅಕ್ಷರಗಳು ಭಾರವಾಗಿ ತೊನೆಯುತ್ತಿದ್ದವು.
"ನೀವು ಇಸ್ಲಾಮಿನ ಕರ್ಮಶಾಸ್ತ್ರಗಳ ಬಗ್ಗೆ ತಿಳಿದಿಲ್ಲ" ಎನ್ನುವಷ್ಟರ ಮಟ್ಟಿಗೆ ಬರೆಯುತ್ತಿದ್ದ.

   ಅದ್ದು ಉಸ್ತಾದರಿಗೆ ಪಾಪ ಪ್ರಜ್ಞೆಯೊಂದು ಕಾಡುತಿತ್ತು. ಇವನನ್ನು ಪೇಟೆ ಶಾಲೆಗೆ ಕಳುಹಿಸಿದ್ದೇ ತಪ್ಪಾಯಿತೇ, ನನ್ನ ಬಡತನವೇ ಇದಕ್ಕೆ ಕಾರಣವೇ?  ಅದಾಗಿರಲಾರದು, ಸೌದಿಗೆ ಹೋಗುವ ಮುನ್ನ ಆತ ಸರಿಯಿದ್ದನಲ್ಲ?, ಇತ್ತೀಚೆಗೆ ಮಸೀದಿಯ ಅಧ್ಯಕ್ಷರು ಕೂಡಾ ಇದನ್ನೇ ಹೇಳುತಿದ್ದರು. ಕೆಲವು ಪೇಟೆಯಿಂದ ಹುಡುಗರು ಮಾಡುತ್ತಿರುವ ವಿಚಿತ್ರ ವಾದ ಸರಣಿಯ ಬಗ್ಗೆ. ಆಗೆಲ್ಲಾ ಅಧ್ಯಕ್ಷರ ಬಿ.ಪಿ ಏರುತಿತ್ತು.
"ಅಲ್ಲ, ಅಪ್ಪ ಅಮ್ಮನೇ ಇಲ್ಲದೆ ಮಕ್ಕಳು ಆಗುವುದು ಹೇಗೇ? , ಈ ಪುಣ್ಯ ಪುರುಷರ ಬಗ್ಗೆ ಸಸಾರವಾಗಿ ಮಾತನಾಡ್ಲಿಕ್ಕೆ ಎಷ್ಟು ಧೈರ್ಯ ಅವುಗಳಿಗೆ", ಅದ್ದು ಉಸ್ತಾದರು ಮೌನವಾಗುತ್ತಿದ್ದರು.
"ಆ ಪೆನುಗೊಂಡದ ಬಾಬ , ಆ ಮಹಾ ಪುರುಷ, ನಮ್ಮ ತಾತ ಮುತ್ತಾಂದಿರ ಕಣ್ಣೀರೊರೆಸದಿದ್ದರೆ ನಾವೆಲ್ಲಾ ಈ ಪವಿತ್ರ ಇಸ್ಲಾಮನ್ನು ಪಡೆದು ಕೊಳ್ಳುತಿದ್ದೆವೇ?",
    ಅದ್ದು ಉಸ್ತಾದರಿಗೆ ಕಾಲ ಕೆಳಗಿನ ನೆಲವೇ ಸರಿದು ಹೋಗುತಿರುವಂತೆ ಅನಿಸುತಿತ್ತು. ಮನಸ್ಸು ಕದಡಿಹೋಗಿ ಬಾಂಗ್ ನೀಡುವಾಗ ಧ್ವನಿಯು ಉಡುಗಿಹೋಗುತಿತ್ತು.
"ಅಝಬ್ ನಹೀ ಕೆ ಖುದಾ ತಕ್ ತೇರಿ ರಸಾಯಿ ಹೋ
ತೇರಿ ನಿಗಾಹ್ ಸೆ ಹೈ ಪೋಶಿದಾ ಆದ್ಮಿ ಕಾ ಮಖಾಮ್
ತೇರಿ ನಮಾಝ್ ಮೇ ಬಾಕಿ ಜಲಾಲ್ ಹೈ,  ನ ಜಮಾಲ್
ತೇರಿ ಆಝಾನ್ ಮೆ ನಹೀ ಹೈ ಮೇರಿ ಸೆಹರ್ ಕಾ ಪಯಾಮ್"!!
ಎಂಬ ಅಲ್ಲಾಮ ಇಕ್ಬಾಲರ ನುಡಿಯು ತನ್ನನ್ನೇ ಅಣಕಿಸುತ್ತಿದೆಯೇ ಅನಿಸುತಿತ್ತು.

ಅದೊಂದು ದಿನ ,  ಸಂಜೆ ಮಸೀದಿಯ ಕಚೇರಿಯಿಂದ ಹುಡುಗನೊಬ್ಬ ಕೂಗಿ ಹೇಳಿದ "ಮೊಯಿಲಾರೇ ನಿಮಗೆ ಫೋನಿದೆ".
ಅದ್ದು ಉಸ್ತಾದ್ ಪೋನ್ ಮಾಡುವವಳು ತನ್ನ ಮಗಳೇ ಎಂದು ಗೊತ್ತಿದ್ದರೂ  "ಯಾರದಂತೆ" ಎಂದು ಕೇಳುತ್ತಲೇ ಮಸೀದಿಯ ಕೋಣೆಯಿಂದ ಹೊರಗೆ ಇಳಿದು ಬಂದು ಕಚೇರಿಯ ಒಳಗೆ ಬಂದರು. ಜಮಾತಿನ ಕಾರ್ಯದರ್ಶಿ ತಲೆ ಬಗ್ಗಿಸಿಕೊಂಡು ಲೆಕ್ಕ ಪುಸ್ತಕದಲ್ಲಿ ಬಾಡಿಗೆ ರಶೀದಿ ಬರೆಯುತ್ತಿದ್ದವರು ತಲೆ ಎತ್ತಿ ನೋಡಿ ಪುನಃ ಪುಸ್ತಕದಲ್ಲಿ ಲೀನವಾದರು.
ಪೋನು ಕೈಗೆತ್ತಿಕೊಂಡ ಅದ್ದು ಉಸ್ತಾದರು " ಏನು ಮೋಳೆ " ಎಂದಾಗ ಆ ಕಡೆಯಿಂದ ಕೇಳಿದ್ದು ಒಂದು ಗಂಡು ಧ್ವನಿ.
"ಅಸ್ಸಲಾಮು ಅಲೈಕುಮುಂ ಅದ್ದಾಕ"
"ಹ್ಞಾಂ , ಯಾರು ? ವಾಲೈಕುಂಸ್ಸಲಾಮು ರಹಮತುಲ್ಲಾ ಬರಕಾತು"
ಅದ್ದು ಉಸ್ತಾದರಿಗೆ ತಕ್ಷಣ ಯಾರೆಂದು ಗೊತ್ತಾಗಲಿಲ್ಲ,
"ನಾನು ಅದ್ದಾಕ, ಪಾತುಂಮ್ಮನ ಮಗ ಬಷೀರು, ..ಅದೇ.." 
" ಹ್ಞಾಂ !  ಬಷೀರಾ!,  ಹ್ಞಾಂ .. ಏನು ಮೋನೆ, ನಾನು ಸಯೀದಾ ಅಂದ್ಕೊಂಡೆ,  ಏನಾಯ್ತು ಮೋನೆ?",     
ಪಾತುಮ್ಮಳ ಮಗ ಬಷೀರು ಸ್ವಲ್ಪ ಪೆದ್ದು ಪೆದ್ದಾದ ಹುಡುಗ, ಕಷ್ಟ ಪಟ್ಟು ಐದನೆ ತರಗತಿ ಮುಗಿಸಿದವನಿಗೆ ಮತ್ತೆ ಶಾಲೆಯ ದಾರಿ ರುಚಿಸಲೇ ಇಲ್ಲ. ಅಲ್ಲಿ ಇಲ್ಲಿ ಕೆಲಸ ಮಾಡಿ  ನೆರೆಹೊರೆಯವರಿಗೆ ಅಂಗಡಿಯಿಂದ ಸಾಮಾನು ತಂದು ಕೊಡುವುದು ಮಾಡುತಿದ್ದ. ದಿನಕ್ಕೆ ಎರಡು ಮೂರು ಸಲವಾದರೂ ಅದ್ದು ಉಸ್ತಾದರ ಮನೆಗೆ ಹೋಗಿ ಬರುವವ. ಆದರೂ ಪಾತುಮ್ಮ ಆ ಹುಡುಗನನ್ನು ಗಿಣಿಯ ಹಾಗೆ ಸಾಕುತ್ತಿದ್ದಳು. 
"ಅದ್ದಾಕ ಅದೇ ಉಮ್ಮ ಪೋನು ಮಾಡ್ಲಿಕೆ ಹೇಳಿತು, ನಿಮ್ಮ ಹೆಂಗಸಿಗೆ ದಮ್ಮು ಜೋರಾಗಿ ಡಾಕ್ಟ್ರನ್ನು ನಾನೆ ಕರ್ಕೊಂಡು ಬಂದೆ, ಡಾಕ್ಟ್ರು ಬರೋವಷ್ಟರಲ್ಲಿ ಅವರು ಸತ್ತೋದರಂತೆ ಅದ್ದಾಕ, ಡಾಕ್ಟ್ರನ್ನು ಅಂಗಡಿವರೆಗೆ ಬಿಟ್ಟು ಅಲ್ಲಿಂದಲೇ ಪೋನು ಮಾಡ್ತಾ ಇದ್ದೇನೆ ಅದ್ದಾಕ.."

ಅದ್ದು ಉಸ್ತಾದರಿಗೆ ಕ್ಷಣಕಾಲ ಅರ್ಥವಾಗಲಿಲ್ಲ,  ಏನೋ ಕೇಳಲು ಬಾಯಿ ತೆರೆಯಿತು, ಗಂಟಲಲ್ಲಿ ಪಸೆಯೇ ಆರಿಹೋಗಿತ್ತು, ಯಾರೋ ಗಂಟಲನ್ನು ಗಟ್ಟಿಯಾಗಿ ಒತ್ತಿ ಹಿಡಿದಿರುವಂತೆ ಅನಿಸ ತೊಡಗಿ ಅದ್ದು ಉಸ್ತಾದ್  ಗಂಟಲಿಗೆ ಕೈ ಹಿಡಿದು ಕೊಂಡರು ಬಲಕೈ ಬಲಹೀನವಾಗಿ ಕೈಯಲ್ಲಿದ್ದ ಪೋನು ಬೀಳುವುದೋ ಎಂಬಂತಾಯಿತು,
"ಅದ್ದಾಕ ಅದ್ದಾಕ..." ಬಷೀರು ಆ ಕಡೆಯಿಂದ ಕರೆಯುತ್ತಿದ್ದ, ಪೋನಿನೊಳಗಿಂದ ಅಲ್ಲೇ ಅಂಗಡಿ ಪಕ್ಕದಲ್ಲಿದ್ದ ಹಳೇ ಮಸೀದಿಯಿಂದ ಮಗ್ರೀಬಿನ ಆಝಾನ್ ಕೇಳತೊಡಗಿತು. ಅದ್ದು ಉಸ್ತಾದ್ ಪೋನನ್ನು ಕೆಳಗಿಟ್ಟು  ನಿತ್ರಾಣವಾದಂತಾಗಿ ಎರಡೂ ಕೈಗಳಿಂದ ಮೇಜನ್ನು ಹಿಡಿದು ಕೊಂಡರು. ಕಾರ್ಯದರ್ಶಿ ಮತ್ತೊಮ್ಮೆ ತಲೆ ಎತ್ತಿ ಅದ್ದು ಉಸ್ತಾದರನ್ನೊಮ್ಮೆ ನೋಡಿ ಇನ್ನೊಮ್ಮೆ ಗೋಡೆಯ ಗಡಿಯಾರವನ್ನು ನೋಡಿದ, 
"ಏನಾಯಿತು ಉಸ್ತಾದರೇ? ಯಾರ ಪೋನು,  ಮಗ್ರೀಬಿಗೆ ಸಮಯವಾಯಿತಲ್ಲ?",  ಅದ್ದು ಉಸ್ತಾದ್ ಮಾತನಾಡಲಿಲ್ಲ.

         ಕಾಲುಗಳು ಅದ್ದು ಉಸ್ತಾದರನ್ನು ಎಳೆದುಕೊಂಡು ಮಸೀದಿಯತ್ತ ಸಾಗಿದವು. ಎರಡನೇ ಮೆಟ್ಟಿಲಿನಿಂದ ಮೂರನೇ ಮೆಟ್ಟಿಲಿಗೆ ಇಟ್ಟ ಬಲಕಾಲು ಪುಸಕ್ಕೆಂದು ಜಾರಿ ಎರಡನೇ ಮೆಟ್ಟಿಲಿಗಿಳಿಯಿತು. "ಯಾ ಅಲ್ಲಾ!"  ಅದ್ದು ಉಸ್ತಾದ್ ಹಠಾತ್ತನೆ ಬಾಗಿ ಎರಡೂ ಕೈಗಳಿಂದ ಮೂರನೇ ಮೆಟ್ಟಲನ್ನು ಹಿಡಿದು ಸಾವರಿಸಿಕೊಂಡು ನಿಂತರು, ಸೊಂಟ ಪಳಕ್ಕೆಂದು ಉಳುಕಿದ ಸದ್ದು ಕೇಳಿತು, ನಡುಗುತ್ತಿದ್ದ ಇಡೀ ದೇಹವನ್ನು ನಿಯಂತ್ರಿಸಲು ಹೆಣಗಾಡಿದರು.  ಮಗ್ರೀಬಿಗೆ ಸಮಯ ಮೀರುತಿತ್ತು, ಸೀದಾ ನೀರಿನ ತೊಟ್ಟಿಯ ಬಳಿ ಹೋದವರೇ, ಉಝು ಮಾಡಿದರು.
"ಕಣ್ಣುಗಳೇ ಸ್ವಲ್ಪ ಹೊತ್ತು ತಡೆಯಿರಿ, ನನ್ನ ಈಮಾನನ್ನು ಪರೀಕ್ಷಿಸದಿರಿ! ಯಾ ಅಲ್ಲಾಹ್ ! ನನಗೆ ಶಕ್ತಿ ಕೊಡು"
ಅದ್ದು ಉಸ್ತಾದ್ ಮೈಕಿನ ಗುಂಡಿ ಅದುಮಿ  ಸೂರಾಹ್ ಗಳನ್ನೊಮ್ಮೆ ಉಚ್ಚರಿಸಿ ಗಟ್ಟಿಯಾಗಿ ಆಝಾನ್ ಶುರು ಮಾಡಿದರು.
ಹೃದಯ ವಿದ್ರಾವಕವಾಗಿ ಹೊರಹೊಮ್ಮಿದ ಆ ಧ್ವನಿ ಹಿಂದೆಂದಿಗಿಂತಲೂ ಮಧುರವಾಗಿತ್ತು, ಮಸೀದಿ ಪಕ್ಕದ ಮರದಿಂದ ಹಕ್ಕಿಗಳು ಚಿಲಿಪಿಲಿಗುಟ್ಟತೊಡಗಿದವು, ಸಿಮೆಂಟಿನ ಜಾಲಿಗಳ ತೂತುಗಳಿಂದ ಕಂಬಿಗಳಂತೆ ಕಾಣುತ್ತಿದ್ದ ಅಸ್ತಮಾನದ ಬಿಸಿಲು ನಿಧಾನವಾಗಿ ಮರೆಯಾಗುತ್ತಾ ಕತ್ತಲಾಯಿತು.

         ಅದ್ದು ಉಸ್ತಾದ್ ಮೊಣಕಾಲೂರಿ ಕುಳಿತಿದ್ದವರು ಅಡ್ಡಬಿದ್ದು ಆ ಪವಿತ್ರ ಸ್ಥಳವನ್ನು ಚುಂಬಿಸಿದರು. ಚಾದರವು ಕಣ್ಣೀರಿನಿಂದ ತೊಯ್ದು ಹೋಯಿತು. ಮಗ್ರೀಬಿನ ಸೂರ್ಯ ಪಶ್ಚಿಮದಲ್ಲಿ ಅಸ್ತಮಿಸಿದ.

Puneeth Appu

ಗುರುವಾರ, ಮೇ 18, 2017

ಜೀವನ

*ಸಣ್ಣಕತೆ*

ರಾತ್ರಿ ಸಮಯ ಅಂಗಡಿಯ
ಮಾಲೀಕ ಅಂಗಡಿಯನ್ನು , ಮುಚ್ಚುವ ತವಕದಲ್ಲಿ ಇದ್ದನು..
ಅಷ್ಟರಲ್ಲಿ ಒಂದು ನಾಯಿ ಅಲ್ಲಿಗೆ ಬಂದಿತು.

ಅದರ ಬಾಯಿಯಲ್ಲಿ ಒಂದು
ಪ್ಲಾಸ್ಟಿಕ್ ಚೀಲ ಇತ್ತು .. ಆ ಚೀಲದಲ್ಲಿ ಸಾಮಾನುಗಳ ಚಿಟಿ ಮತ್ತು ಹಣ ಇತ್ತು..

ಅಂಗಡಿಯವನು ಹಣವನ್ನು ತೆಗದುಕೊಂಡು ಸಾಮಾನುಗಳನ್ನು ಆ ಚೀಲದಲ್ಲಿ ತುಂಬಿದನು ನಾಯಿಯ ಬಾಯಿಯಿಂದ ಆ ಚೀಲವನ್ನು ತೆಗದುಕೊಂಡು ಹೊರಟಿತು..

ಅಂಗಡಿಯವ ಅಶ್ಚರ್ಯಚಕಿತನಾಗಿ ನಾಯಿ ಹಿಂದೆ ಹಿಂದೆ ತೆರಳಿದನು ... ಯಾಕೆಂದರೆ ನಾಯಿಗೆ ಎಷ್ಟು ತಿಳುವಳಿಕೆ ಇದೆ ಮತ್ತು ಇದರ ಮಾಲೀಕರು ಯಾರು ಎಂದು ಪರಿಶೀಲನೆ ಮಾಡಲು.!

ನಾಯಿ ಬಸ್ ಸ್ಟಾಪ್ ನಲ್ಲಿ ನಿಂತಿತ್ತು.. ಸ್ವಲ್ಪ ಸಮಯದ ನಂತರ ಬಸ್ ಬಂದಿತು.. ನಾಯಿ ಬಸ್ ಅನ್ನು ಹತ್ತಿತು.

ಕಂಡಕ್ಟರ್ ಬಂದಾಗ ತಲೆ ಮುಂದೆ ಚಾಚಿತು.ಕಂಡಕ್ಟರ್ ನಾಯಿಯ ಕೊರಳುನಲ್ಲಿ ಇರುವ ಪಟ್ಟಿಯಲ್ಲಿ ಇರುವ ವಿಳಾಸವನ್ನು ನೋಡಿ ಹಣ ತೆಗದುಕೊಂಡು ನಾಯಿಯ ಕೊರಳಲ್ಲಿ ಟಿಕೆಟ್ ಇಟ್ಟನು.

ನಾಯಿ ಇಳಿಯುವ ಜಾಗ ಬಂದಾಗ ಮುಂದಿನ ಬಾಗಿಲಿನಲ್ಲಿ ಬಂದು ಬಾಲ ಅಲ್ಲಾಡಿಸುತ್ತ ಬಸ್ ನಿಲ್ಲಿಸುವಂತೆ ಸನ್ನೆ ಮಾಡಿತು‌.

ಬಸ್ ನಿಂತ ಮೇಲೆ ಬಾಲ ಅಲ್ಲಾಡಿಸುತ್ತ  ಇಳಿದು ಹೋಗುತ್ತಿತ್ತು.

ಅಂಗಡಿಯವನಿಗೆ ಇನ್ನು ಉತ್ಸಾಹ ಹೆಚ್ಚಾಗಿತ್ತು.. ನಾಯಿ ಹಿಂದೆ , ಹಿಂದೆ ಬರುತ್ತಿದ್ದನು.‌

ನಾಯಿ ಒಂದು ಮನೆಯ ಹತ್ತಿರ
ಬಂದು ನಿಂತು ಚೀಲವನ್ನು ಕೆಳಗೆ ಇಟ್ಟು ಕಾಲಿನಿಂದ ಮೂರು ಸಲ ಬಾಗಿಲು ಬಡಿಯಿತು.

ಒಳಗಡೆಯಿಂದ ನಾಯಿಯ ಮಾಲಿಕ ಬಂದು ಕಟ್ಟಿಗೆಯಿಂದ ನಾಯಿಯನ್ನು ಹೊಡೆದನು.

ಅಂಗಡಿಯವವನು ನಾಯಿಯ ಮಾಲಿಕನಗೆ ಕೇಳಿದನು.
ನಾಯಿಯನ್ನು ಯಾಕೇ ಹೊಡೆದೆ ಎಂದು.?

ನಾಯಿಯ ಮಾಲಿಕ ಹೇಳಿದನು..

ಇದು ನನ್ನ ನಿದ್ರೆಯನ್ನು ಹಾಳು ಮಾಡಿತು..

ಹಣ , ಚೀಟಿ ಮತ್ತು ಚೀಲ ತೆಗದುಕೊಂಡ ಹೋದ ಇದು
ಕೀಲಿಯನ್ನು ಯಾಕೇ ಮರೆತು ಹೋಗಬೇಕಾಗಿತ್ತು  ಎಂದು ಬೈದನು.

#ಜೀವನದ_ಸತ್ಯವು_ಇಷ್ಟೇ

ಬಂಧು ಬಳಗಕ್ಕೆ ಮತ್ತು ಸ್ನೇಹಿತರಿಗೆ ನಾವು ಸಹಾಯ ಮಾಡುವ ದಿನಗಳಷ್ಟು ಮಾತ್ರ
ಒಳ್ಳೆಯವರು ಅಗಿ ಕಾಣುತ್ತೇವೆ.

ನಮ್ಮಿಂದ ಒಂದು ಚಿಕ್ಕ ತಪ್ಪು ಅದರು ಸಹ ಹಿಂದೆ ಮಾಡಿದ ಎಲ್ಲಾ ಸಹಾಯಗಳನ್ನು ಮರೆತು ನಮ್ಮ ಬಗ್ಗೆ ಕೆಟ್ಟದಾಗಿ ಮಾತಾನಾಡಲು ಶುರು ಮಾಡುತ್ತಾರೆ.

ಅದ್ದರಿಂದ ನಾವು ಮಾಡುವ ಕೆಲಸ ಒಳ್ಳೆಯದು ಅಗಿದ್ದರೆ
ಅದೆ ದಾರಿಯಲ್ಲಿ ಮುಂದುವರಿಯುವುದು ಉತ್ತಮ.

ನಾವು ಮಾಡುವ ಕೆಲಸಗಳು
ಜನರನ್ನು ಎಂದೆಂದಿಗೂ ಸಂತೃಪ್ತಿ ಗೊಳಿಸಲು ಸಾಧ್ಯವಿಲ್ಲ.

✍🏻✍🏻