ಗಲ್ಪ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಗಲ್ಪ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಮೇ 31, 2017

ಗಲ್ಫ್ -ಹಣ

ಕರಾವಳಿ ಮುಸ್ಲಿಮರ ಆರ್ಥಿಕತೆ ಸುಧಾರೆಣೆಗೆ ಎಡೆ ಮಾಡಿಕೊಟ್ಟ ಊರೇ ಗಲ್ಫ್ ರಾಷ್ಟ್ರಗಳು

ಈ ಹೆಸರೇ ಯುವ ಜನತೆಗೆ ಮುದ ನೀಡುವ ಕನಸಿನ ಕಲ್ಪನಾ ಲೋಕ

ಕೈ ತುಂಬಾ ಸಂಬಳ, ರಿಯಾಲ್ ದಿರ‍್ಹಂ-ದಿನಾರ್'ಗಳನ್ನು ರೂಪಾಯಿಗೆ ಪರಿವರ್ತಿಸಿ ಎಣಿಸುವುದು ಸ್ಪ್ರೇ ಹಾಕಿದ ಟಾಕುಟೀಕಿನ ಕೋಟು-ಸೂಟು, ಸುತ್ತಾಡಲು ಕಾರು, ವಾಸಕ್ಕೆ ಬಂಗಲೆ ಹೀಗೆ ಕನಸಿನ ಗೋಪುರ ಕಟ್ಟಿಕೊಂಡು ಧ್ಯಾನಿಸುವ ಯುವ ಪೀಳಿಗೆಗೆ ಸುಲಭದಲ್ಲಿ ಕಾಣುವ ಹಾದಿಯೇ ಗಲ್ಫ್ ಯಾತ್ರೆ...!!!

ಹೌದು ವಿದೇಶ ಯಾತ್ರೆ ಎಂಬುದು ಯುವ ಜನತೆಯ ಮನದಾಳದ ಆಸೆ ನಿರೀಕ್ಷೆ ಎಲ್ಲವೂ ಆಗಿದೆ. #ಪ್ರವಾದಿ(ಸ.ಅ)ರವರು ಬದುಕಿಬಾಳಿದ #ಸೌದಿ ಅರೇಬಿಯಾ ಇರಲಿ #ಸ್ವಹಾಬಿಗಳ ದಅವಾ ಯಾತ್ರೆಯಿಂದ ಪುನೀತಗೊಂಡ #ತೈಲ ಸಂಪನ್ನ ರಾಷ್ಟ್ರವಾದ #ಗಲ್ಫ್‌ನ ಯಾವುದೇ #ಕಂಟ್ರಿಯಾಗಲೀ ಅದೊಂದು ಅನುಗ್ರಹಿತ ಪ್ರದೇಶವೇ. ಇಂದು ಜಗತ್ತಿಗೆ ತೈಲ ನೀಡುವ ಈ ಕೊಲ್ಲಿ ರಾಷ್ಟ್ರವನ್ನೇ ಅಂಥ ಅಮೇರಿಕಾ, ಜಪಾನ್, ಬ್ರಿಟನ್‌ಗಳೂ ಆಶ್ರಯಿಸಬೇಕು. ಏಕೆಂದರೆ ವಾಹನ ಓಡಬೇಕಿದ್ದರೆ ಅರಬನ ಪೆಟ್ರೋಲ್ ಬೇಕೆಬೇಕು

ಅಂಥ ರಾಷ್ಟ್ರದಲ್ಲಿ ದುಡಿದು ಕೈ ತುಂಬಾ ಸಂಬಳ ಪಡೆದು ಶ್ರೀಮಂತನಾಗಬೇಕೆಂದು ಕನಸು ಕಾಣದವರು ಯಾರು? ಅದೇ ಕನಸು ಹೊತ್ತ ಪಯಾಣ ಮಲಬಾರ್ ಹಾಗೂ ನಮ್ಮ ಕರಾವಳಿಯ ಮುಸ್ಲಿಮರ ಬದುಕು ಬದಲಾಯಿಸಿದೆ ಎಂದರೆ ತಪ್ಪಲ್ಲ. ಇಂದು ಈ ಪರಿಸರದ ಸಾಮೂದಾಯಿಕ ಸರ್ವ ಕ್ಷೇತ್ರಗಳಲ್ಲೂ ಗಲ್ಫ್‌ನ ಲಿಂಕು ಸಂಪನ್ನಗೊಳಿಸಿದ್ದು, ದಿನಾರ್-ದಿರ್‌ಹಂ. ಸಣ್ಣ ಮಟ್ಟಿಗೆ ನಮ್ಮ ಬಡತನವನ್ನು ನೀಗಿಸಿದೆ ಎಂದರೆ ತಪ್ಪಲ್ಲ. ಒಂದು ಕಾಲದಲ್ಲಿ ಕಲಿಕೆ ಮುಗಿದರೆ(ಕೆಲವೊಮ್ಮೆ ಕಲಿಕೆಗೂ ಹೋಗದೆ) ಗದ್ದೆ, ತೋಟ, ಮತ್ತಿತರ ಕೃಷಿ ಕೆಲಸವೋ, ಸಣ್ಣಪುಟ್ಟ ವ್ಯಾಪಾರಗಳಲ್ಲೂ ತೊಡಗಿಸಿ ಕೊಳ್ಳುತ್ತಿದ್ದ ಯುವ ಪೀಳಿಗೆ ☞.೧೯೬೦-೭೦ರ ಜಮಾನದಲ್ಲಿ ಗಲ್ಫ್ ರಾಷ್ಟ್ರದತ್ತ ಚಿತ್ತ ಹರಿಸಲು ಶುರುವಿಟ್ಟರು. ಮರುಭೂಮಿಯ ದಿರ್‌ಹಂ-ದಿನಾರ್‌ಗಿರುವ ಹೆಚ್ಚಿನ ಮೌಲ್ಯವೇ ಇದಕ್ಕೆ ಮೈನ್ ರೀಸನ್. ಎಜುಕೇಶನ್ ಕೆಪಾಸಿಟಿ ಅದ್ಯಾವುದೋ ಇಲ್ಲದಿದ್ದ್ರೂ ಕನಸು ಕಟ್ಟಿ ಹಡಗು ಹತ್ತಿ ಗಲ್ಪ್‌ಗೆ ತೆರಳಿ ಅಷ್ಟು ಇಷ್ಟು ಸಂಪಾದಿಸಿ ಸಂತೃಪ್ತ ಕಂಡರು ಅದೆಷ್ಟೋ ಮಂದಿ.
ಸ್ವಂತ ನಾಡಲ್ಲಿ ಬೆನ್ನು ಬಗ್ಗಿಸಿ ದುಡಿದರೂ ಎಲ್ಲಿಗೂ ತಲುಪುತ್ತಿಲ್ಲ ಎಂದು ಅಸಂತುಷ್ಠರಾಗಿದ್ದ ಯುವ ಪೀಳಿಗೆ ಸಾಂಪ್ರದಾಯಿಕ ಕೆಲಸ ಹಾಗೂ ಪಾರಂಪರ‍್ಯದ ಬದುಕಿನ ಶೈಲಿಗೆ ಸಲಾಂ ಹೇಳಿ ಹೊಸತೊಂದು ಬದುಕನ್ನು ಕನವರಿಸುತ್ತಾ ಅರಸಿ ಹೋದದ್ದು ಮರುಭೂಮಿಗೆ.
ಕನಸಿನ ಬುತ್ತಿಯಲ್ಲಿದ್ದದ್ದು ಕೇವಲ ತಿಂದು ತೇಗುವುದು ಮಾತ್ರವಲ್ಲ, ದೊಡ್ಡ ದೊಡ್ಡ ಕಾಂಕ್ರೀಟ್ ಕಟ್ಟಡಗಳು, ಬಂಗಲೆಯಂಥ ಮನೆಗಳು, ಆಲಂಕೃತ ವರಾಂಡಗಳು, ಮನೆ ಮುಂದೆ ಕಾರು ಪಾರ್ಕಿಂಗ್ ಹೀಗೆ ಕನಸುಗಳ ಗೋಪುರ ಕಟ್ಟಿಕೊಂಡು ಗಲ್ಫ್‌ಗೆ ತೆರಳಿದ ಕಾರಣ ಶ್ರೀಮಂತ ಅರಬರ ಮನೆಯ ಕಿಚನ್ ಕೋಣೆಗಳು, ವರಾಂಡಗಳು, ಪಾರ್ಕಿಂಗ್‌ಗಳು ಇಲ್ಲೂ ತಲೆಯೆತ್ತಿ ನಿಂತವು. ಎಲ್ಲೆಲ್ಲೂ ಗಲ್ಫ್‌ನ ಕಾಂಚನ ಸದ್ದು ಮಾಡಿತು. ಲೈಫಿನ ಸ್ಟೈಲನ್ನೇ ಬದಲಿಸಿತು.

ಇಂದಿಗೂ ವಯೋವೃದ್ಧರಿಂದ ಹಿಡಿದು ಎಲ್ಕೇಜು ಮಕ್ಕಳವರೆಗೂ ಗಲ್ಫಿನ ಹಣದ ಪರಿಮಳವೆಂದರೆ ಇನ್ನಿಲ್ಲದ ಪ್ರೇಮ. ಕೊಲ್ಲಿಯ ಮರುಭೂಮಿಯಲ್ಲಿ ಬದುಕನ್ನು ಮೇಣದ ಬತ್ತಿಯಂತೆ ಕರಗಿ ಮುಗಿಸುವ ಮನುಷ್ಯ ತಂದೆಯೋ, ಅಣ್ಣನೋ ಬೇಡ ಗಂಡನೇ ಆದರೂ ಆ ಬಗ್ಗೆ ತಲೆಕೆಡಿಸುವ ಉಮೇದು ಊರಿನ ಹೆಚ್ಚಿನ ಮನೆ ಮಂದಿಗೂ ಇರುವುದಿಲ್ಲ. ಸ್ವಂತ ಊರಲ್ಲಿ ಬಂದು ಹಸುವಿನ ಕರುವನ್ನು ನೋಡಿಕಳ್ಳಲಾರದವ ಅರಬರನ ಮನೆಯ ಒಂಟೆ-ಆಡುಗಳನ್ನು ಹೊಲಕ್ಕೆ ಕೊಂಡೆಯ್ದು ಮೇಯಿಸಲೂ ಸಿದ್ಧನಿದ್ದಾನೆ ಎಂದರೆ ಅದರ ಹಿಂದಿರುವುದು ತನ್ನ ಹಾಗೂ ಕಟ್ಟಿಕೊಂಡವರ ಲಕ್ಸುರಿ ಲೈಫಿನ ಕನಸು ಮಾತ್ರ.

ಊರಿಗೆ ಬಂದಾಗ ಆತನ ಖಡಕ್ ಪ್ಯಾಂಟ್ ಸೂಟ್ ಕೆಲವರಿಗೆ ಸಂಭ್ರಮ ಇನ್ನು ಕೆಲವರಿಗೆ ಅಸೂಯೆ ಆಗಿರುತ್ತೇ ವಿನಾಃ ಯಾರಿಗೂ ಹಕೀಕತ್ತು ಅರ್ಥವಾಗುವುದೇ ಇಲ್ಲ.
ಅಷ್ಟೇ ಯಾಕೆ ಕೈಯಲ್ಲಿ ನಯಾ ಪೈಸೆ ಇಲ್ಲದಿದ್ದರೂ ಊರ ಅಭಿವೃದ್ಧಿ ಕೆಲಸಕ್ಕೆ ಬಡವರ ಮನೆ ನಿರ್ಮಾಣಕ್ಕೆ ವಿವಾಹಕ್ಕೆ ಮಸೀದಿ-ಮದ್ರಸಗಳ ಕೆಲಸಕ್ಕೆ ಅನಾಥ-ನಿರ್ಗತಿಕರ ಮಂದಿರಗಳಿಗೆ ಜೊತೆಗೆ ಕುಟುಂಸ್ಥರ ಅಗತ್ಯಗಳಿಗೆ ನೆರವಿಗಾಗಿ ಜನ ಅವನ ಮನೆ ಮುಂದೆ ಬಂದು ಪೀಡಿಸುತ್ತಲೇ ಇರುತ್ತಾರೆ. ಪಾಪ ಗಲ್ಫ್‌ಗಾರನಿಗೆ ಇಲ್ಲ ಎನ್ನಲಾಗದು ಸಾಲ ಶೋಲಮಾಡಿ ಬಂದವರಿಗೆ ಕೈತುಂಬಾ ನೀಡುತ್ತಾನೆ. ಆದರೆ ಅದನ್ನು ತುಂಬಿಸಲು ಮತ್ತೊಂದು ಟ್ರಿಪ್ಪು. ನಾಡು, ಮನೆ, ಒಡಹುಟ್ಟಿದವರು, ಕಟ್ಟಿಕೊಂಡವರು ಜನ್ಮಕೊಟ್ಟವರಿಗಾಗಿ ಬದುಕು ಮೀಸಲಿಟ್ಟ ಮನುಷ್ಯ, ತಾನು ಮೊದ್ಲು ವಿದೇಶ ಪ್ರಯಾಣಕ್ಕೆ ಮಾಡಿ ಇಟ್ಟ ಸಾಲದ ಸಂದಾಯವನ್ನು ಮಾಡಬೇಕಾಗುತ್ತದೆ. ಈ ಎಲ್ಲಾ ಆಗಿ ಮುಗಿದು ಹೈರಾಣಾಗುವ ಗಲ್ಫ್‌ಗಾರನ ಬದುಕು ಯಾವ ’ಎಂಜಾಯ್ ಲೈಫ್’ ನೀವೇ ಹೇಳಿ...???

ಗಲ್ಫ್‌ನ ಕನಸು ಹೊತ್ತವನ ಭವಣೆ ಆರಂಭವಾಗುವುದು ಒಂದು ಪಾಸ್‌ಪೋರ್ಟ್‌ಗಾಗಿ ಅಲೆದಾಡುವ ಮೂಲಕ. ಅದು ಕೈಗೆ ಸಿಕ್ಕಿದಾಗ ನಂತರ ವಿಝಾಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಾನೆ. ಇನ್ನು ವಿಝಾ ಸಿಗುತ್ತೆ ಅನ್ನಿ ಅದಕ್ಕೆ ಲಕ್ಷದಷ್ಟು ಹಣ ಗೂಡಿಸಬೇಕು ಎಲ್ಲಿಂದ ತರುವುದು. ಒಂದೋ ಸಾಲಶೋಲ ಮಾಡುತ್ತಾನೆ. ಇಲ್ಲವೇ ಹೆಂಡತಿಯ ಚಿನ್ನ ಮಾರುವುದೋ ಅಡವಿಡುವುದೋ ಮಾಡುತ್ತಾನೆ. ಇಲ್ಲದಿದ್ದರೆ ವಾಸಕ್ಕಿರುವ ಮನೆಯನ್ನೇ ಮರಾಟ ಮಾಡಿ ಬಿಡುತ್ತಾನೆ. ಈ ಎಲ್ಲಾವನ್ನು ಕಳಕೊಂಡು ಗಲ್ಫ್‌ಗೆ ತೆರಳುವ ಮನುಷ್ಯನ ಮನಸ್ಥಿತಿ ಬೇಗುದಿ ಹೇಗಿರಬೇಡ ಊಹಿಸಿ ನೋಡಿ.

ಎಲ್ಲವೂ ಕಳಕೊಂಡು ಕನಸಿನ ಗೋಪುರ ಕಟ್ಟಿ ಅರಬಿ ಮಣ್ಣಿಗೆ ತಲುಪಿದ ವ್ಯಕ್ತಿಯ ಬದುಕೇನು ಚಿನ್ನದ ಲೈಫೆಂದು ತಿಳಿಯಬೇಡಿ. ಇಂದು ವಿದೇಶಕ್ಕೆ ತೆರಳಿದ ನಮ್ಮ ಸಹೋದರರ ಪೈಕಿ ೭೫ ಶೇಖಡಾ ಮಂದಿಯೂ ಕಷ್ಟದ ಕೆಲಸದಲ್ಲಿ ತೊಡಗಿಸಿಕೊಂಡಿದ್ಧಾರೆ. ಇಲ್ಲವೇ ಸರಿಯಾದ ಕೆಲಸವೇ ಇಲ್ಲದೇ ಕೊರಗುತ್ತಾ ದಿನದೂಡುತಿದ್ದಾರೆ. ಒಂದೈದು ಶೇಖಡಾ ಮಂದಿ ಮಾತ್ರ ಉನ್ನತ ಹುದ್ದೆಯಲ್ಲಿದ್ದಾರೆ. ೨೫ ಶೇಖಡಾ ಮಂದಿ ಪರವಾಗಿಲ್ಲ ಎನ್ನುವಷ್ಟರ ಮಟ್ಟಿಗಿನ ಕೆಲಸದಲ್ಲಿದ್ದಾರೆ ಎಂದರೆ ನೀವು ನಂಬಲಿಕ್ಕಿಲ್ಲ

ಹಾಗೆ ನೋಡಿದರೆ ಅರಬರ ತೋಟ, ಹೊಲಗಳಲ್ಲಿ ಕೆಲಸ ಮಾಡುವವರು ಆಡು-ಒಂಟೆ ಮೇಯಿಸುವವರು, ರಸ್ತೆ, ಕಾರ್ಖಾನೆಗಳಲ್ಲಿ ಮೈಮುರಿದು ದುಡಿಯುವವರು ಹೀಗೆ ಅದೆಷ್ಟು ಮಂದಿಯ ಬವಣೆ ಹೇಳಿ ತೀರದ್ದು. ಇನ್ನು ಏಜೆನ್ಸಿಯ ಮರುಳ ಮಾತಿಗೆ ಒಪ್ಪಿಕೊಂಡು ಹಣ ಚೆಲ್ಲಿ ಹೋಗಿ ಸರಿಯಾದ ಕೆಲಸವೇ ದೊರೆಯದೆ ಕಂಗಾಲಾಗುವ ಮಂದಿಯ ಕಥಯೇ ಕರುಣಾಜನಕ, ಅದೇ ತೆರನಾಗಿ ಕೆಲಸವಿದ್ದರೂ ಸಂಬಳ ಕೊಡದೆ ಸತಾಯಿಸುವ ಅರಬರು ಬೇರೆ. ಹೀಗೆ ಎಲ್ಲವನ್ನು ಸಹಿಸಿ ಮರುಭೂಮಿಯ ಬಿಸಿಲಧಗೆಯಲ್ಲಿ ಕರಗಿ ಬದುಕು ಸವೆಸುವ ಗಲ್ಫ್‌ಗಾರನ ಬದುಕಿನ ಹಿಂದಿರುವ ಕರಾಳ ಕಥೆಯನ್ನು ತಿಳಿದವರೆಷ್ಟು...??? ನಾವು ಯೋಚಿಸಬೇಕಾದದ್ದಲ್ಲವೇ ಇದು...???

ಅಷ್ಟಕ್ಕೂ ಹಿಂದಿನಂತೆ ಹೋದವರಿಗೆಲ್ಲ ಸುಲಭದ ಕೆಲಸ ಸಿಗಬೇಕೆಂದರೆ ಅಗಲ್ಲ. ಯಾವುದೇ ಕ್ವಾಲಿಫಿಕೇಶನ್ ಇಲ್ಲದೇ ಕೈ ತುಂಬಾ ಸಂಬಳ ಸಿಗಬೇಕು ಎಂದು ಯೋಚಿಸುವುದು ತಪ್ಪು. ಇಲ್ಲಿ ಉನ್ನತ ಶಿಕ್ಷಣ ಪಡೆದು ಯಾವುದಾದರೂ ಡಿಗ್ರಿ, ವೃತಿ ತರಬೇತಿ ಮುಗಿಸಿದವರಿಗೆ ಕೆಲವೊಮ್ಮೆ ಉದ್ದೇಶಿತ ಕೆಲಸ ದೊರಕುತ್ತದೆ. ಆದ್ದರಿಂಲೇ ಯುವ ಪೀಳಿಗೆ ಆ ಬಗ್ಗೆ ಗಮನ ಹರಿಸುವುದು ಇಂದಿಗೆ ಸೂಕ್ತ.ಈ ಭವಣೆಯ ಹಿಂದಿರುವ ಕಾರಣಗಳಾವುವು...???
ಮನುಷ್ಯ ಎಂಜಾಯ್ ಬದುಕು, ಕಾರು, ಬಂಗಲೆಗಳ ಕನವರಿಕೆಯಲ್ಲಿ ತೊಡಗಿದಾಗ ಗಲ್ಫ್ ನೆನಪಾಗಿ ಬಿಡುತ್ತೆ. ಕೆಲ ಮಹಿಳೆಯರ ಬಿಂದಾಸ್ ಬದುಕಿನ ಕಲ್ಪನೆಗಳು ಗಂಡನನ್ನು ಗಲ್ಫ್‌ಗೆ ಒತ್ತಾಯ ಪೂರ್ವಕ ಅಟ್ಟಿಸಿಬಿಡುತ್ತೆ. ಇನ್ನು ಸಮಾಜವನ್ನು ರಾಕ್ಷಸನಂತೆ ಕಾಡುತ್ತಿರುವ ವೈರಸ್ ವರದಕ್ಷಿಣೆ ಗಲ್ಫ್ ದುಡಿಮೆಗೆ ಕಾರಣವಾಗುತ್ತೆ. ಒಡಹುಟ್ಟಿದ ಸಹೋದರಿಯರ, ಮಕ್ಕಳ ಮದುವೆಗೆಂದು ಹಣ ಗೂಡಿಸಬೇಕಿದ್ದರೆ ಆ ಮರುಭೂಮಿಗೆ ತೆರಳಿ ನೆತ್ತರು ಬೆವರಾಗಿಸಿ ದುಡಿಯಬೆಕು. ಒಂದು ರೀತಿಯಲ್ಲಿ ನಾವು ನಿರ್ಮಿಸಿಕೊಳ್ಳುತ್ತಿರುವ ಕಟ್ಟಳೆಗಳು, ಹದ್ದು ಮೀರಿದ ಬದುಕಿನ ಶೈಲಿಗಳೇ ನಮ್ಮವರನ್ನು ಕಷ್ಟದ ತಳ್ಳಿ ಬಿಟ್ಟಿದೆ.

ದಾರಿ ತಪ್ಪುತ್ತಿಪುವ ಗಲ್ಫ್ ಮನೆಯ ಮಹಿಳೆಯರು

ಈ ಎಲ್ಲಾ ಕಷ್ಟಕಾರ್ಪಣ್ಯಗಳ ಮಧ್ಯೆ ದೂರದ ಮರುಭೂಮಿಯಲ್ಲಿ ಉರಿಬಿಸಿಲಿನಲ್ಲಿ ಗಂಡ, ತಂದೆ ದುಡಿಯುವಾಗ ಇತ್ತ ಹೆಂಡತಿ/ಮಗಳು ಮೈಮೆರೆತು ಎಂಜಾಯ್ ಬದುಕಿನಲ್ಲಿ ಸಖತ್ ಮಜಾ ಹೊಡೆದು ಸುದ್ದಿಯಾಗುವುದೂ ಇದೆ. ಕೆಲ ಮಹಿಳೆಯರು ಅನ್ಯರ ಸಂಪರ್ಕ ಬೆಳೆಸಿ ಕಟ್ಟಿಕೊಂಡವನಿಗೆ ದ್ರೋಹ ಬಗೆಯುತ್ತಾರೆ ಎಂದರೆ ಅಂಥವರನ್ನು ಏನನ್ನಬೇಕು? ತನ್ನ ಹೆಂಡತಿ ಮಕ್ಕಳೆಂದು ನೆತ್ತರು ಬೆವರಾಗಿಸಿ ದುಡಿಯುವ ಆ ಮನುಷ್ಯ ಏನು ಮಾಡಬೇಕು? ನಿರಂತರ ಮೊಬೈಲ್ ಮೂಲಕ ಅನ್ಯರೊಂದಿಗೆ ಮಾತುಕತೆ, ಚಾಟಿಂಗ್, ಮೀಟಿಂಗ್ ಜೊತೆಗೆ ಸುತ್ತಾಟ ನಡೆಸುವವರು ಎಷ್ಟಿಲ್ಲ? ಯಾಕೆ ಇವರಿಗೆ ಅರ್ಥವಾಗುವುದಿಲ್ಲ? ಕೆಲವೊಮ್ಮೆ ಈ ಅನಿಸ್ಲಾಮಿಕ್ ಚಟುವಟಿಕೆಗಳಿಗೆ ಗಂಡಸರು ಕಾರಣವಾಗುವುದೂ ಇದೆ. ಗಲ್ಫ್‌ನಲ್ಲಿ ಕಷ್ಟಪಟ್ಟು ಸಿಕ್ಕಾಪಟ್ಟೆ ಹಣ ಕಳುಹಿಸಿಕೊಡುತ್ತಾರೆ ವಿನಾ ಪತ್ನಿ ಮಕ್ಕಳನ್ನು ಇಟ್ಟುಕೊಳ್ಳುಬೇಕಾದಲ್ಲಿ ಇಟ್ಟುಕೊಂಡಿರುವುದಿಲ್ಲ. ಅವರನ್ನು ಧರ್ಮದ ನೀತಿ, ಚೌಕಟ್ಟಿನಡಿಯಲ್ಲಿ ಶಿಸ್ತು ಬದ್ಧವಾಗಿ ಇಟ್ಟುಕೊಂಡರೆ ಯಾವುದೇ ದುರಂತಗಳು ಸಂಭವಿಸುವುದಿಲ್ಲ. ಅಂಥ ಶಿಸ್ತಿನ ಕುಟುಂಬಗಳು ಅದೆಷ್ಟೋ ಇದೆ. ಯಾವುದಕ್ಕೂ ಇತಿ-ಮಿತಿಗಳಿವೆ, ಆ ಮಿತಿಗಳು ತಪ್ಪಿದಲ್ಲಿ ಮಾತ್ರ ಅನಾಹುತ ಸಂಭವಿಸುತ್ತದೆ. ಈ ಬಗ್ಗೆ ಅನಿವಾಸಿಗಳಾಗಲಿ, ಮನೆ ಮಂದಿಯಾಗಲಿ ತಿಳಿದರೆ ಯಾವುದೇ ಮಿಸ್ಟಿಕ್ ಇಲ್ಲ ಬಿಡಿ

ಯುವಜನತೆ ಚಿತ್ತ ಬದಲಿಸಬೇಕು

ಇಂದು ಗಲ್ಫ್ ರಾಷ್ಟಗಳಲ್ಲಿ ಹಿಂದಿನಂಥಲ್ಲ ಉದ್ಯೋಗವಕಾಶಗಳು ಕಡಿಮೆಯಾಗುತ್ತಿದೆ ಜಾಗತಿಕವಾಗಿ ಉಂಟಾದ ಆರ್ಥಿಕ ಮುಗ್ಗಟ್ಟು ಗಲ್ಫ್ ರಾಷ್ಟ್ರಗಳನ್ನು ಬಿಟ್ಟಿಲ್ಲ.ಆದ್ದರಿಂದ ಹೊರಗಿನವರಿಗೆ ಕೆಲಸ  ಕೊಡುವುದನ್ನು ಕಡಿತಗೊಳಿಸಿದ್ದಾರೆ. ಇನ್ನು ಕೆಲಸವಿದ್ದರೂ ಸಂಬಳ ಕಡಿಮೆ ಇಂಥ ಪರಿಸ್ಥಿತಿಯಲ್ಲಿ ವಿಝಾ, ಟಿಕೇಟ್‌ಗಳೆಂದು ಲಕ್ಷ ಸುರಿದು ಹೋಗಿ ಅಲ್ಲಿ ಮಾಡುವುದೇನು ಹೇಳಿ...??? ಇನ್ನು ಸಂಬಳ, ಮರ‍್ಯಾದೆ ಇರುವ ಕೆಲಸ ಸಿಗಬೇಕಾದರೆ ಉನ್ನತ ಶಿಕ್ಷಣ ಪಡೆದಿರಬೇಕು. ಏನು ಕಲಿಯದೆ ವಿಮಾನ ಹತ್ತಿ ಹೋದರೆ ಅಲ್ಲಿ ಕಷ್ಟ ಪಡಬೇಕಾಗುತ್ತದೆ. ಈ ಬಗ್ಗೆ ಯುವ ಜನತೆ ತಿಳಿಯಬೇಕು. ಕೇವಲ ಗಲ್ಫ್‌ನ ಕನವರಿಕೆಯನ್ನು ಕೈ ಬಿಡಬೇಕು.ಜುಜುಬಿ ಸಂಬಳಕ್ಕಾಗಿ ಲಕ್ಷ ಖರ್ಚುಮಾಡಿ ಬದುಕು ಪೂರ್ತಿ ವಿದೇಶದಲ್ಲಿ ಕರಗಿಸುವುದಕ್ಕಿಂತ ಅದೇ ಹಣವನ್ನು ಊರಿನಲ್ಲಿ ವ್ಯಾಪಾರ ಮುತ್ತಿತರ ವಹಿವಾಟಿಗೆ ವಿನಿಯೋಗಿಸಿದರೆ ಖಂಡಿತಾ ಯಶಸ್ವಿ ಕಾಣಬಹುದು. ಅದೇ ತೆರನಾಗಿ ಬೆಳೆದು ಬರುವ ಪೀಳಿಗೆ ಉನ್ನತ ಶಿಕ್ಷಣ ಪಡೆಯುವತ್ತ ಗಮನ ಹರಿಸಬೇಕು. ಇಂದು ಕೆಲವಡೆ ಮಕ್ಕಳು ಶಿಕ್ಷಣದತ್ತ ಉತ್ಸಾಹಿಕರಾಗಿರುವುದು ಉತ್ತಮ ಬೆಳವಣಿಗೆಯಾಗಿದೆ.ಉನ್ನತ ಶಿಕ್ಷಣ ಪಡೆದ ನಂತರ ನಮ್ಮ ನಾಡಲ್ಲೂ ಉತ್ತಮ ಉದ್ಯೋಗವಕಾಶಗಳು ಇವೆ* ಈ ಬಗ್ಗೆ ಸಮಾಜದ ಸಂಘ-ಸಂಸ್ಥೆಗಳು ಜಾಗೃತಿ ಮೂಡಿಸಿ ನಮ್ಮ ಮಕ್ಕಳನ್ನು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಉನ್ನತ ಉದ್ಯೋಗ ಪಡೆಯುವಂತೆ ನೋಡಿಕೊಂಡರೆ ಅದೆಷ್ಟೋ ಉತ್ತಮ ನೋಡಿ. ಸಮಾಜ ಎಚ್ಚೆತ್ತು ಕೊಂಡರೆ ಯಾವುದು ಕಷ್ಟವಿಲ್ಲಬಿಡಿ.
ಅಷ್ಟಕ್ಕು ಮಗುವನ್ನು ಎಲ್ಕೇಜಿಗೆ ಸೇರಿಸುವಾಗಲೇ ಗಲ್ಫ್‌ನ ಕನಸು ಕಾಣುವ ಹೆತ್ತವರು ಕೂಡಾ ಯೋಚಿಸಬೇಕು. ಮಕ್ಕಳಲ್ಲಿ ಕೇವಲ ವಿದೇಶದ ಕನಸು ತುಂಬುವುದಕ್ಕಿಂತ ಉನ್ನತ ಶಿಕ್ಷಿತರಾಗಿ ರೂಪಿಸಿ ನಮ್ಮ ಕಣ್ಮುಂದೆನೆ ಉತ್ತಮ ಬದುಕು ರೂಪಿಸಿ ಕೊಟ್ಟರೆ ಅದೆಷ್ಟು ಚೆನ್ನಾ ಹೇಳಿ...??? ಅಲ್ಲವೇ....!!!!

( ಸಂಗ್ರಹ )

ಬುಧವಾರ, ಮಾರ್ಚ್ 15, 2017

ಗಲ್ಫ್ ಎಂಬ ಮಾಯಾನಗರಿ

ಮಗು ಹುಟ್ಟುವ ಮುಂಚೆಯೇ ಆ ಮಗುವಿನ ಬಗ್ಗೆ ಕನಸು ಕಾಣ ತೊಡಗುತ್ತಾರೆ ಆ ಮಗುವಿನ ಹೆತ್ತವರಾಗಬಯಸುವವರು. ಮಗು ಹುಟ್ಟಿದ ಮೇಲೆ ಆ ಮಗುವಲ್ಲಿ ತಮ್ಮ ಕನಸುಗಳ ನನಸಾಗಿಸುವ ಬಗ್ಗೆಯೇ ಚಿಂತಿಸುತ್ತಾ ಆ ಮಗುವನ್ನು ಬೆಳೆಸುತ್ತಾರೆ. ಆ ಮಗು ಕೂಡ ಬೆಳೆಯುತ್ತಾ ಹೋದಂತೆ ತನ್ನ ಕನಸಿನ ಪಟ್ಟಿ ಬೆಳೆಸುತ್ತಾ ಹೋಗುತ್ತೆ.
ವಿದ್ಯಭ್ಯಾಸ ಪೂರ್ತಿಗೊಳಿಸಿದ ಮೇಲೆ ಎಲ್ಲರೂ ಸಹಜವಾಗಿ ಕಾಣುವ ಕನಸುಗಳಲ್ಲಿ ವಿದೇಶದ ನೌಕರಿ ಪ್ರಮುಖವಾದುದು. ದೂರದ ಬೆಟ್ಟ ನುಣ್ಣಗೆ ಎಂಬ ಗಾದೆ ಮಾತಿನಂತೆ ತನ್ನ ಹುಟ್ಟೂರಲ್ಲಿ ಏನೂ ಸಾಧಿಸಲಸಾಧ್ಯ. ನಾನೂ ವಿದೇಶಕ್ಕೆ ಆಧುನಿಕ ಮತ್ತು ಸುಖಕರ ಜೀವನ ಶೈಲಿ ತಮ್ಮದಾಗಬಹುದೆಂಬ ಆಸೆಯಿಂದ ವಿದೇಶ ನೌಕರಿಯ ಬಗ್ಗೆ ಕನಸು ಕಾಣ ತೊಡಗುತ್ತಾರೆ.
ಇಂತಹ ಕನಸುಗಾರರು ಮೊದಲು ಮಾಡುವ ಕೆಲಸ ಪಾಸ್ಪೋರ್ಟ್ ಮಾಡಿಸಿ ಇಟ್ಟುಕೊಳ್ಳುವುದು. ಯಾಕೆಂದರೆ ಪಾಸ್ಪೋರ್ಟ್ ತಯಾರಿದ್ದರೆ ನಮಗೆ ಅವಕಾಶ ಸಿಕ್ಕಿದ ತಕ್ಷಣ ವಿದೇಶಕ್ಕೆ ಹಾರಬಹುದೆಂಬ ಕಲ್ಪನೆ. ಊರಿನಲ್ಲಿ ಯಾರದ್ದೋ ಕೈಕಾಲು ಹಿಡಿದು, ಅಧಿಕಾರಿಗಳಿಗೆ ಲಂಚ ನೀಡಿ ಹೇಗೋ ಒದ್ದಾಡಿ ಕೊನೆಗೊಮ್ಮೆ ಪಾಸ್ಪೋರ್ಟ್ ಕೈಗೆ ಸಿಕ್ಕಿದಾಗ ವಿದೇಶಕ್ಕೆ ಹೋದಷ್ಟೆ ಸಂಭ್ರಮ.
ಪಾಸ್ಪೋರ್ಟ್ ಆದಮೇಲೆ ಮಾಡುವ ಮೊದಲ ಕೆಲಸವೆಂದರೆ ಎಲ್ಲರ ಜೊತೆ ಹೇಳಿಡುವುದು.ನನ್ನ ಪಾಸ್ಪೋರ್ಟ್ ರೆಡಿಯಾಗಿದೆ ನನಗೊಂದು ಗಲ್ಫ್ ಚಾನ್ಸ್ ಇದ್ರೆ ಹೇಳಿ. ವಿದೇಶದಿಂದ ಯಾರೋ ಮಿತ್ರರು ಅಥವಾ ಪರಿಚಯಸ್ಥರು ಬಂದಾಗ ಅವರ ಜೊತೆ ಕೂಡಾ ಹೇಳುವುದು ನನ್ನದು ಪಾಸ್ಪೋರ್ಟ್ ರೆಡಿಯಿದೆ ನಾನೂ ಕೂಡ ಬರಬಹುದಾ, ಚಾನ್ಸ್ ಸಿಗಬಹುದಾ ಇಂತದ್ದೆ ಹಲವಾರು ಕುತೂಹಲಭರಿತ ಪ್ರಶ್ನೆಗಳು. ವಿದೇಶದಲ್ಲಿ ಕೆಲಸ ಮಾಡಬೇಕೆಂಬ ಆಸೆಯೋ ಅಥವಾ ಊರಲ್ಲಿ ಸಾಲಮಾಡಿದ ಕೃಪೆಯೋ ಅಂತೂ ಇಂತೂ ಯಾರೋ ಪುಣ್ಯಾತ್ಮರ ಕೈಕಾಲು ಹಿಡಿದು ಅಥವಾ ಯಾವುದೋ ಕಂಪೆನಿಯ ಏಜೇಂಟ್ ಗಳಿಗೆ ಸಾವಿರ ಅಥವಾ ಲಕ್ಷಗಟ್ಟಲೇ ಹಣನೀಡಿ ಕೆಲಸವೇನೆಂದು ವಿಚಾರಿಸದೆ(ಮೊದಲು ಈಗ ಎಲ್ಲಾ ವಿಚಾರಿಸುತ್ತಾರೆ) ಭಾರತೀಯ ರೂಪಾಯಿ ಮೌಲ್ಯದಲ್ಲಿ ವಿದೇಶದ ಸಂಬಳವನ್ನು ಲೆಕ್ಕಹಾಕಿ ಸ್ವಲ್ಪ ಸಮಯ ವಿದೇಶದಲ್ಲಿ ದುಡಿದು ಒಳ್ಳೆ ಹಣ ಮಾಡಿ ಮತ್ತೆ ಊರಲ್ಲಿ ಏನಾದರೂ ವ್ಯವಹಾರ ಮಾಡುತ್ತಾ ಹಾಯಾಗಿರಬಹುದೆಂಬ ಚಿಂತನೆಯಲ್ಲಿ ವಿದೇಶದ ವಿಮಾನವೇರುತ್ತಾರೆ.

ವಿಮಾನವೇರಿದವನ ಮನಸ್ಸಲ್ಲಿ ನೂರಾರು ತಳಮಳ. ಒಂದೆಡೆ ಆಸೆಯ ಹೊಸಪ್ರಪಂಚ ನೋಡುವ ತವಕ ಇನ್ನೊಂದೆಡೆ ತಾನು ಹುಟ್ಟಿಬೆಳೆದ ಹುಟ್ಟೂರನ್ನು ತನ್ನ ಹೆತ್ತವರು,  ಕುಟುಂಬವರ್ಗ, ಸ್ನೇಹ ಬಳಗ ಇವೆಲ್ಲವನ್ನು ಬಿಟ್ಟು ಹೋಗುತ್ತಿರುವ ಅನಾಥ ಭಾವನೆ. ವಿಮಾನದ ಸಹಪ್ರಯಾಣಿಕರಲ್ಲಿ ಉಭಯ ಕುಶಲೋಪರಿ ಮಾತಾಡುತ್ತಾ ಅವರು ಗಲ್ಫ್ ನ ಅನುಭವಸ್ಥರಾದರೆ ಅವರಲ್ಲಿ ಆ ರಾಷ್ಟ್ರ, ಅಲ್ಲಿಯ ಅನುಭವಗಳ ಮಾತು ಕೇಳಿ ಮತ್ತಷ್ಟು ಹೊಸಕನಸುಗಳಿಗೆ ಸನ್ನದ್ಧರಾಗುತ್ತೇವೆ.

ಅಂತೂ ನಮ್ಮ ಪ್ರಯಾಣದ ಕೊನೆಕ್ಷಣದಲ್ಲಿ ಗಗನಸಖಿಯ ಸಿಹಿಧ್ವನಿಯಲ್ಲಿ ನಿಮ್ಮ ಪ್ರಯಾಣ ಇನ್ನೇನೋ ಕೆಲವೇ ಕ್ಷಣಗಳಲ್ಲಿ ಮುಗಿಯಲಿದೆ ಎಂಬ ಮಾತು ಕೇಳಿದಾಗ ನಮ್ಮ ಮನಸಲ್ಲಿ ಮತ್ತಷ್ಟು ಕಾತರ. ಅಂತೂ ವಿಮಾನ ಭೂಸ್ಪರ್ಶಿಸಿ ನಮ್ಮನ್ನು ನಮ್ಮ ಗಮ್ಯದ ಕಡೆ ತಲುಪಿಸಿ ನಮಗೂ ನಮಗೂ ಸಂಬಂಧವೇ ಇಲ್ಲವೆಂಬಂತೆ ನಿಂತುಬಿಡುತ್ತೆ.

ಗಲ್ಫ್ ರಾಷ್ಟ್ರದ ವಿಮಾನ ನಿಲ್ದಾಣದ ಎಲ್ಲಾ ರೀತಿಯ ತಪಾಸಣೆಗಳು ಮುಗಿದ ನಂತರ ನಮ್ಮ ಹೊಸ ಕರ್ಮಭೂಮಿಯ ಮೇಲೆ ನಿಟ್ಟುಸಿರ ಹೆಜ್ಜೆ ಇಟ್ಟು ನಮಗೆ ಕೆಲಸ ಕೊಟ್ಟ ಕಂಪೆನಿಯ ವಾಹನದಲ್ಲಿ ನಮಗೆ ವ್ಯವಸ್ಥೆ ಮಾಡಿದ್ದ ವಸತಿನಿಲಯಕ್ಕೆ ಪ್ರಯಾಣ.

ವಸತಿ ನಿಲಯ ತಲುಪಿದ ಕೂಡಲೇ ಅಲ್ಲಿ ನಮ್ಮ ಪರಿಚಯದವರು ಇದ್ದರೆ ಚೆನ್ನಾಗಿರುತ್ತೆ.ಇಲ್ಲಂದ್ರೆ ಯಾವುದೋ ಗುರುತು ಪರಿಚಯ ಇಲ್ಲದವರಾದರೆ ಕಾಟಾಚರಕ್ಕೆ ನಗು ಬಿಸಾಕಿ ಸ್ವಲ್ಪ ನಮ್ಮ ಬಗ್ಗೆ ವಿಚಾರಿಸಿ ಅವರು ಅವರಷ್ಟಕ್ಕೆ ಸುಮ್ಮನಾಗುತ್ತಾರೆ.

ಒಂದು ರೂಮಿನಲ್ಲಿ ಐದೋ ಆರೋ ಜನರಿದ್ದು ಮಲಗಲು ಕಬ್ಬಿಣದ ಡಬಲ್ ಮಂಚ ಅಂದರೆ ಮೇಲೊಬ್ಬ ಕೆಲಗೊಬ್ಬ, ಬೆಡ್, ತಲೆದಿಂಬು, ಹೊದ್ದುಕೊಳ್ಳಲು ಕಂಬಳಿ, ಇವೆಲ್ಲ ಕೆಲವು ಕಂಪೆನಿಗಳಲ್ಲಿ ನೀಡುವ ಸವಲತ್ತು.

ಬೆಳಗ್ಗೆ ಬೇಗನೆ ಎದ್ದು ಕಂಪೆನಿಯ ಸಮವಸ್ತ್ರ ಧರಿಸಿ ಕಂಪೆನಿಯ ವಾಹನದಲ್ಲಿ ಕೆಲಸಕ್ಕೆ ಮಧ್ಯಾಹ್ನದ ಊಟವನ್ನು ಬುತ್ತಿ ಹಿಡಿದುಕೊಂಡು ಹೊರಟರೆ ಸಂಜೆ ವಾಪಾಸು ಬರುವವರೆಗೆ ವಿಶ್ರಾಂತಿಯಿಲ್ಲದೆ ಕತ್ತೆಯಂತೆ ದುಡಿಯಬೇಕು. ತದನಂತರ ರೂಮಿಗೆ ಬಂದು ಅಡಿಗೆ ಮಾಡಿ ಊರಿನ ನೆನಪಲ್ಲಿ ಊರಿನವರಿಗೆ ದೂರವಾಣಿಯ ಮುಖಾಂತರ ಮಾತಾಡಿ ಮನಸು ಹಗುರ ಮಾಡಿಕೊಂಡ ಸಮಾಧಾನ.

ಊರಿನ ಜಾತ್ರೆ, ಹಬ್ಬಗಳು ಯಾವುದೂ ಇಲ್ಲದೆ ಸಭೆ ಸಮಾರಂಭಗಳನ್ನು ಕೇವಲ ಫೋಟೋ ಅಥವಾ ವೀಡೀಯೋದಲ್ಲಿ ನೋಡಿ ಸಂಭ್ರಮಿಸುವ ಪರಿಸ್ಥಿತಿ. ಅಲ್ಲಿನ ಪರಿಸ್ಥಿತಿಗೆ ಒಗ್ಗಿಕೊಂಡ ಮೇಲೆ ನಮ್ಮ ಕನಸುಗಳು ಗರಿಗೆದರಲು ಆರಂಭವಾಗುತ್ತದೆ . ಮನೆಕಟ್ಟುವ ಯೋಚನೆಯೋ ಅಥವಾ ಸಹೋದರಿಯರಿಗೆ ಮದುವೆ ಮಾಡುವ ಯೋಚನೆಯೋ ಎಲ್ಲದಕ್ಕೂ ಹಣೊಟ್ಟುಮಾಡುವ ಯೋಚನೆ. ಇವೆಲ್ಲದರ ನಡುವೆ ಊರಸ್ನೇಹಿತರಿಂದ ಸಾಲಕ್ಕಾಗಿಯೋ ಊರಿನ ಯಾವುದೋ ಕಾರ್ಯಕ್ರಮಕ್ಕೆ ದೇಣಿಗೆಯಾಗಿಯೋ ಹಣದ ಬೇಡಿಕೆ. ಇವೆಲ್ಲವನ್ನೂ ಮನದಲ್ಲಿರುವ ಒಂಟಿತನದ ನೋವಲ್ಲಿ ಮರೆಯಲೂ ಆಗದೆ ಕೃತಕ ನಗುವಿನಲ್ಲಿ ಬದುಕುವ ಪ್ರಯತ್ನ ಪಡುತ್ತೇವೆ. ಅನಾರೋಗ್ಯಕ್ಕೆ ತುತ್ತಾಗಿ ಮಲಗಿದ್ದಾಗ ನಮಗೆ ಯಾರೂ ಇಲ್ಲ. ರೂಪಿನವರೆಲ್ಲ ಒಮ್ಮೆ ವಿಚಾರಿಸಿ ಮತ್ತೆ ಅವರವರ ಕೆಲಸದಲ್ಲಿ ನಿರತರಾಗುತ್ತಾರೆ.ಆ ಸಂದರ್ಭದಲ್ಲಿ ನಮ್ಮ ಮನೆಯವರ ನೆನಪು ಕಾಡುವುದು ಅಷ್ಟಿಷ್ಟಲ್ಲ.
ಕೆಲವೊಂದು ಸಲ ಊರಿನ ಸ್ನೇಹಿತರಿಗೆ ಅಥವಾ ನೆಂಟರಿಗೋ ಪ್ರೀತಿಯಿಂದ ಮಾತಾಡೋಣವೆಂದು ದೂರವಾಣಿ ಕರೆಮಾಡಿದ ಕೂಡಲೇ ಅವರಿಂದ ಯಾವುದೋ ಒಂದು ವಸ್ತುವಿಗೆ ಬೇಡಿಕೆ.ಅದನ್ನು ನಿರಾಕರಿಸಲಾಗದೆ ಆಯ್ತು ಎಂಬ ಉತ್ತರ ನಮ್ಮಿಂದ.

ಹೇಗೋ ಎರಡು ವರುಷಗಳನ್ನು ಪೂರೈಸಿ ಪ್ರಥಮ ಬಾರಿಗೆ ಹುಟ್ಟೂರಿಗೆ ಆಗಮಿಸುವ ಸಂಭ್ರಮ.ತಮ್ಮವರಿಗೆ ಬೇಕಾದ ವಸ್ತುಗಳನ್ನು ಖರೀದಿಸಿ ಯಾರಿಗೂ ಬೇಸರವಾಗಬಾರದೆಂಬ ಭಾವನೆಯಲ್ಲಿ ಸಣ್ಣದಾದರೂ ವಸ್ತುಗಳನ್ನು ತೆಗೆದುಕೊಂಡು ಹೋಗೋಣವೆಂದಾಗ ತೂಕದ ಮಿತಿ ನಮ್ಮನ್ನು ಕಾಡುತ್ತೆ. ಯಾಕೆಂದರೆ ವಿಮಾನಪ್ರಯಾಣದಲ್ಲಿ 30 ಕೆಜಿಗಿಂತ ಜಾಸ್ತಿ ಕೊಂಡೋಗಬೇಕಾದರೆ ಜಾಸ್ತಿ ಹಣ ಪಾವತಿಸಬೇಕು. ಅದನ್ನೆಲ್ಲ ಪೂರೈಸಿ ಊರಿಗೆ ಬಂದಾಗ ಊರನ್ನು, ನಮ್ಮ ಬಂಧುಗಳನ್ನು ನೋಡಿದ ಸಂಭ್ರಮೊಂದೆಡೆಯಾದರೆ ಹಿಂದೆ ಯಾವಾಗ ಹೋಗುತ್ತಿ ಎಂಬ ಕೆಲವರ ಚುಚ್ಚುಮಾತುಗಳು. ಊರಿಗೆ ಬರುವಾಗ ಹಾಕಿಕೊಂಡು ಬಂದಂತಹ ಚಿನ್ನದಾಭರಣಗಳು ಹೋಗುವ ಹೊತ್ತಿಗೆ ಬ್ಯಾಂಕ್ ಸೇರಿರುತ್ತದೆ. ಕಾರಣ ಹಣದ ಅಭಾವ. ಕೆಲವು ಸ್ನೇಹಿತರಲ್ಲಿ ಸಾಲ ಪಡೆದು ಹೋಗಿ ವಾಪಾಸು ಮಾಡುತ್ತೇನೆ ಎಂಬ ಮಾತು ನೀಡಿ ಮತ್ತದೆ ವಿಮಾನವನ್ನು ಹತ್ತಬೇಕಾದ ಸನ್ನವೇಶ ಗಲ್ಪ್ ಉದ್ಯೋಗಿಯ ಬದುಕಲ್ಲಿ ಸಾಮನ್ಯ.

ಎರಡು ವರುಷಗಳಲ್ಲಿ ಎಲ್ಲವನ್ನೂ ಸಾಧಿಸಿ ಬರುವೆನೆಂದು ಹೊರಟವನು ಹಲವಾರು ವರುಷ ದುಡಿದರೂ ಅವನ ಕನಸುಗಳು ಮುಗಿಯೋದೆ ಇಲ್ಲ. ಕೊನೆಗೆ ಅವನಿಗೆ ಸಮಾಧಾನ ನೀಡುವುದು ಒಬ್ಬಂಟಿಯಾಗಿ ಕುಳಿತು ಅವ ಸುರಿಸುವ ಕಣ್ಣೀರು ಮಾತ್ರ.ಆದರೆ ಈಗಿನ ಕಾಲ ಬದಲಾಗಿದೆ ಆಧುನಿಕ ಯುಗದಲ್ಲಿ ಎಲ್ಲವೂ ಸನಿಹವಿದ್ದೂ ನಮಗೆ ಬೇಕಾದ ಹಾಗೆ ಇದೆ. ಕೆಲವು ಕಂಪೆನಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಊರಿನವರೆ ಇದ್ದು ಊರಿನ ವಾತಾವರಣವೇ ಇದೇ. ಎಷ್ಟಾದರೂ ನಮ್ಮ ಊರು ಮಾತ್ರ ನೆನಪಾಗದೆ ಇರುವುದಿಲ್ಲ. ಇದೆಲ್ಲ ನಮ್ಮ ಅನುಭವ ಅಲ್ಲದಿದ್ದರೂ ಹೆಚ್ಚಿನ ಗಲ್ಫ್ ವಾಸಿಗಳ ಅನುಭವ ಇದೇ ಆಗಿದೆ.

✍🏻ಕಿಶೋರ್ ಎಕ್ಕಾರ್.

ಸೋಮವಾರ, ಜುಲೈ 4, 2016

ಊರಿನ ಈದ್ ಆಚರಣೆ ಸಂಭ್ರಮದ ನಡುವೆ ಪ್ರವಾಸಿಗರನ್ನು ಮರೆಯದಿರಿ

ಅಲ್ಲಾಹನ ಮೇಲೆ ಭಯವಿಟ್ಟು ಅಲ್ಲಾಹನು ಕಲ್ಪಿಸಿದಂತೆ ಒಂದು ತಿಂಗಳುಗಳ ಕಾಲ ವೃತಾಚರಿಸಿ ಕೊನೆಗೆ ಶವ್ವಾಲ್ ಒಂದರಂದು ರಮಳಾನ್ ತಿಂಗಳು  ವೃತಾಚರಿಸಿದ ವಿಶ್ವಾಸಿಗಳಿಗೆ ಕುಟುಂಬದ ಜೊತೆ ಸಂಭ್ರಮಿಸಲು ಹಾಗೂ ತನ್ನ ಸಂಪತ್ತಿನ ಮೇಲೆ ಝಕಾತ್ ನೀಡಿ ಅಲ್ಲಾಹನ ಪ್ರೀತಿಗೆ ಪಾತ್ರರಾಗುವಂತಹ ದಿನ...

ಊರಲ್ಲೆಲ್ಲಾ ಸಡಗರ ಸಂಭ್ರಮದ ದಿನ...
ಬಗೆಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಿ,
ತಮ್ಮ ಕುಟುಂಬದ ಜೊತೆ ಪ್ರೀತಿ ಹಂಚಿಕೊಂಡು ಸಮಯ ಕಳೆಯುವಂತಹ ಸುಂದರ ಕ್ಷಣ...

ಆದರೆ ತನ್ನವರಿಗಾಗಿ ಎಲ್ಲಾ ಕಷ್ಟಗಳನ್ನು  ಸಹಿಸಿಕೊಂಡು ತ್ಯಾಗಿಯಾಗಿ ಜೀವಿಸುವಂತಹ ಪ್ರವಾಸಿಯ ಈದ್ ಹೇಗಿದೆ ಎಂದು ನಮ್ಮವರು ಆಲೋಚಿಸಿದ್ದಾರೆಯೆ???

  *ಪ್ರವಾಸಿಗಳ ಈದ್*👇🏻

ತನ್ನವರು ಉತ್ತಮವಾದಂತಹ ಬಟ್ಟೆ ಬರೆಗಳನ್ನು ಖರೀದಿಸಲು ತನ್ನ ಕೈಯಲ್ಲಿ ಇದ್ದಂತಹ ಎಲ್ಲಾ ಹಣವನ್ನು ಊರಿಗೆ ಕಳುಹಿಸಿ ತನಗೆ ಬಟ್ಟೆ ಖರೀದಿಸದೆ, ಇದ್ದುದರಲ್ಲಿ ಉತ್ತಮವಾದಂತಹ ಬಟ್ಟೆ ತೊಟ್ಟು ಬೆಳಿಗ್ಗೆ ಮಸೀದಿ ಕಡೆ ಹೊರಟು ಈದ್ ನಮಾಝ್ ನಿರ್ವಹಿಸಿ ತಿರುಗಿ ತನ್ನ ರೂಮಿಗೆ ಬಂದೇ ಬಿಡುತ್ತಾನೆ...

ಆದರೆ ತನ್ನ ಮನವು ಹಲವಾರು ವರ್ಷಗಳ ಹಿಂದೆ ಆಚರಿಸಿದಂತಹ ಊರಿನ ಸಂತೋಷದಿಂದ, ಸಂಭ್ರಮದಿಂದ ಕೂಡಿದ ಈದ್ ಹಬ್ಬದಲ್ಲಿ ತೇಳಾಡುತ್ತಾ ಇರುತ್ತದೆ...

ಆದರೂ ಆ ನೋವನ್ನೆಲ್ಲಾ ಬದಿಗೆ ತಳ್ಳಿ ತನ್ನ ಫೋನ್ ತೆಗೆದು ಊರಿಗೆ ಕರೆ ಮಾಡಲು ತೊಡಗುತ್ತಾನೆ...
ಆದರೆ ಊರಿನಲ್ಲಿ ಪ್ರತಿಯೊಬ್ಬರೂ ಈದ್ ಸಂಭ್ರಮಿಸುವಾಗ ಅದರ ನಡುವೆ ಪ್ರವಾಸಿ ಮಿತ್ರರಲ್ಲಿ  ಮಾತನಾಡಲು ಅವರಿಗೆ ಸಮಯ ದೊರೆಯುತ್ತಿಲ್ಲ..

ಹಲವರಿಗೆ ಕರೆ ಮಾಡುವಾಗಲೂ *ಅಳಿಯ ಕೊರ್ಚೊ ಬ್ಯುಸಿ, ಪಿನ್ನೆ ಬಿಳಿಕ್ನೆ* ಎಂಬ ಉತ್ತರವು ಕೇಳಿ ಬರಲು ಸಾಧ್ಯವಾಗುತ್ತದೆ...

ಮನೆಯಲ್ಲೂ ಕುಟುಂಬ ಸದಸ್ಯರ ಸಂದರ್ಶನದಿಂದಾಗಿ ಅವರೂ ಬ್ಯುಸಿಯಾಗಿರುತ್ತಾರೆ...

ಅವೆಲ್ಲವನ್ನೂ ಪ್ರವಾಸಿಯು ಅರ್ಥಮಾಡಿಕೊಂಡರೂ ತನ್ನ ಮನದಾಳದಲ್ಲಿ ಉಧ್ಭವಿಸುವಂತಹ ನೋವು ಅತೀ ಕಠೋರವಾಗಿರುತ್ತದೆ...

ನನಸಾಗದಂತಹ ಕನಸುಗಳು ಇನ್ನಷ್ಟು ಅಧಿಕಗೊಳ್ಳುತ್ತದೆ.

ಮನಸ್ಸಿಲ್ಲದ ಮನಸ್ಸಿನಿಂದ ರೂಮಿಲ್ಲಿರುವ ಕೆಲವು ಮಿತ್ರರು ಜೊತೆಗೂಡಿ ಬಿರಿಯಾಣಿ ತಯಾರಿಸಿ ಅದನ್ನು ತಿಂದು ಇನ್ನಷ್ಟು ಕನಸುಗಳನ್ನು ಕಾಣಲೋಸ್ಕರ ಕುಳಿತಲ್ಲಿಯೇ ನಿದ್ರೆಗೆ ಜಾರುತ್ತಾರೆ...

*ಇದು ಪ್ರವಾಸಿಯ ಈದ್ ಹಬ್ಬ*

ಆದ್ದರಿಂದ ನನ್ನ ಊರಿನ ಕುಟುಂಬಿಕರಲ್ಲೂ, ಮಿತ್ರರಲ್ಲೂ ವಿನಮ್ರ ವಿನಂತಿ...
ನಿಮ್ಮ ಈದ್ ಹಬ್ಬ ಆಚರಣೆಯಲ್ಲಿ ಪ್ರವಾಸಿಗರನ್ನೂ ಸೇರಿಸಿಕೊಳ್ಳಿ...
ಫ್ರವಾಸಿಗರ ಜೊತೆ ಒಂದಿಷ್ಟು ಸಮಯ ಫೋನಿನಲ್ಲಿ ಸಂತೋಷಗಳನ್ನು ಹಂಚಿಕೊಳ್ಳಿ..
ಪ್ರವಾಸಿಗರು ನೋವಿಗೆ ಸಾಂತ್ವನ ನೀಡುವಂತಹ ಮಾತುಗಳನ್ನಾಡಿ...

ನಿಮ್ಮ ದುವಾದಲ್ಲಿ ಪ್ರವಾಸಿಗರನ್ನೂ ಸೇರಿಸಿಕೊಳ್ಳಿ...

✍🏻 *ಇಮ್ತಿ ಬೈರಿಕಟ್ಟೆ...*

ಗುರುವಾರ, ಜೂನ್ 30, 2016

ಅಬುದಾಬಿಯಲ್ಲಿರುವ ಶೇಖ್‌ ಝಾಯಿದ್‌ ಮಸೀದಿ

ಇದು ವಿಶ್ವದ ಉನ್ನತ 25 ಆಕರ್ಷಣೀಯ ಕೇಂದ್ರಗಳಲ್ಲಿ ಒಂದಾದ ಅಬುದಾಬಿಯಲ್ಲಿರುವ  ಶೇಖ್‌ ಝಾಯಿದ್‌ ಮಸೀದಿಯ ಒಂದು ಭವ್ಯ ನೋಟ.

1996 ರಿಂದ 2007 ರವರೆಗೆ ಈ ಮಸೀದಿಯ ಕಾಮಗಾರಿ ನಡೆದಿದ್ದು ಒಟ್ಟು 3000 ಕಾರ್ಮಿಕರು ಕೆಲಸ ಮಾಡಿದ್ದು  38 ಪ್ರಸಿದ್ಧ ಕಾಂಟ್ರಾಕ್ಟಿಂಗ್ ಕಂಪೆನಿಗಳು ಇದರ ಕಟ್ಟುವಿಕೆಯಲ್ಲಿ ಭಾಗಿಯಾಗಿವೆ.

ಡಿಸೆಂಬರ್ 20, 2007 ರಲ್ಲಿ ಉದ್ಘಾಟನೆಗೊಂಡ ಈ ಮಸೀದಿಗೆ ಕಳೆದ ವರ್ಷ  47 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದು, ಮಸೀದಿಯ ಒಳಾಂಗಣದಲ್ಲಿ 10,000 ಮಂದಿಗೆ ಮತ್ತು ಹೊರಾಂಗಣದಲ್ಲಿ 30,000ಮಂದಿಗೆ ಪ್ರಾರ್ಥನೆ ಸಲ್ಲಿಸಲು ಸ್ಥಳಾವಕಾಶವಿದೆ.

30 ಎಕ್ರೆ ಸ್ಥಳದಲ್ಲಿ ವ್ಯಾಪಿಸಿರುವ  ಶೈಖ್ ಝಾಯಿದ್ ಗ್ರ್ಯಾಂಡ್ ಮಸೀದಿಯಲ್ಲಿ ಈ ವರ್ಷದ ರಂಜಾನ್ ತಿಂಗಳ ಮೊದಲ ಹತ್ತೇ ದಿನದಲ್ಲಿ ಉಪವಾಸಿಗರನ್ನೊಳಗೊಂಡ 3,47,895 ಮುಸ್ಲಿಂ ಪ್ರಾರ್ಥನಾ ನಿರತ ಜನರು ಭೇಟಿ ನೀಡಿದ್ದಾರೆ ಎಂದು ವರದಿ ಹೇಳಿದೆ.

ಭೇಟಿ ನೀಡುವ ಬೃಹತ್ ಸಂಖ್ಯೆಯ ಜನರಿಗಾಗಿ ಮಸೀದಿ ನಿರ್ವಹಣಾ ಮಂಡಳಿಯು ಹನ್ನೆರಡು ಹವಾನಿಯಂತ್ರಿತ ಟೆಂಟ್‍ಗಳನ್ನು ಅಳವಡಿಸಿದ್ದು ರಂಝಾನ್ ಉಪವಾಸಿಗರ ಅನುಕೂಲಕವನ್ನು ಗಮನದಲ್ಲಿಟ್ಟುಕೊಂಡು ಇದನ್ನು ನಿರ್ಮಿಸಲಾಗಿದೆ.

ಅಬುದಾಬಿಯಲ್ಲಿರುವ  ಸರ್ಕಾರಿ ಇಲಾಖೆಗಳು ಪವಿತ್ರ ರಂಝಾನ್ ಮಾಸದಲ್ಲಿ ಮಸೀದಿಗೆ ಆಗಮಿಸುವ ಪ್ರಾರ್ಥನಾರ್ಥಿಗಳಿಗೆ ಸುವ್ಯವಸ್ಥಿತ ಸೌಕರ್ಯ ಮತ್ತು ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸದಾ ಸನ್ನದ್ಧವಾಗಿ ನಿಂತಿವೆ ಎಂದು ಗಲ್ಫ್ ಮಾಧ್ಯಮ ವರದಿ ಮಾಡಿದೆ.

ಮಾಹಿತಿ #ಉಫಾಕು#
ಚಿತ್ರ # ಗೂಗಲ್

ಅಬುದಾಬಿ

ಶೈಖ್ ಝಾಯೆದ್ ಮಸ್ಜಿದ್