ಬೇಡವೆಂದರೂ ಬಿಡದೀ ಮಾಯೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಬೇಡವೆಂದರೂ ಬಿಡದೀ ಮಾಯೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಅಕ್ಟೋಬರ್ 21, 2017

ಬೇಡವೆಂದರೂ ಬಿಡದೀ ಮಾಯೆ..14

ಬೇಡವೆಂದರೂ ಬಿಡದೀ ಮಾಯೆ..14
------          ------         ------
ನಮ್ಮ ಕಡೆ ಘಟ್ಟದ ಕೆಳಗೆ ಮತ್ತು ಮೇಲೆ ಎಂಬ ಭಿನ್ನತೆಯ ಮಾತುಗಳು ಅಗಾಗ ಕೇಳಿ ಬರುತ್ತದೆ.ಹಾಗೆಯೇ ಬದುಕಿನ ಶ್ರೇಣಿಯೂ..!.ಹದಿಹರೆಯ ಘಟ್ಟದ ಮಧ್ಯೆಯ ಭಯಂಕರ ತಿರುವಿನ ಹಾದಿಯಾದರೆ ,ಬಾಲ್ಯ ಘಟ್ಟದ ಕೆಳಗಿನ ಸಮುದ್ರ ದಂಡೆಯ ಬದಿ ಕಳೆದ ಸಮಯ.ಅಂತೂ ಘಟ್ಟ ಹತ್ತಿ ಬಿಟ್ಟೆವಾದರೆ ಸಿಗುವುದು ತಾರುಣ್ಯವೆಂಬ ಸಮೃದ್ಧ ಬಯಲು.ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಜಗತ್ತ ನಾಳೆ ನೋಡುವ.
ಇವತ್ತು, ಪತ್ರಿಕೆಯೊಂದರಲ್ಲಿ ಪ್ರಕಟಿತ ಮತ್ತು ಪ್ರತಿಲಿಪಿಯಲ್ಲಿ ಲಭ್ಯವಿರುವ ಮತ್ತೊಂದು ಕಥೆ ಓದಿ...

ಒಂದು ಸಮಕಾಲೀನ ಕಥೆ.
===========
ಕೃಷ್ಣಮೂರ್ತಿ ಹೆಗಡೆ ಅಲಿಯಾಸ್ ಕಿಟ್ಟಿ ಹುಟ್ಟಿದ್ದು,ಬೆಳೆದದ್ದು,ಮತ್ತು ಈಗ ವಾಸಿಸುತ್ತಿರುವ ಊರು ರಮಣಗಿರಿಯೇ ಆಗಿದೆ.ಪಿ ಯು ಸಿ ಮತ್ತು ಎಂಜಿನಿಯರಿಂಗ್ ಓದುವಾಗ ಪರವೂರಿನಲ್ಲಿ ನೆಲೆಸಿದ್ದು ಬಿಟ್ಟರೆ,ಹೆಚ್ಚು ಕಾಲ ಕಳೆದದ್ದು ರಮಣಗಿರಿಯಲ್ಲಿಯೇ.
ರಮಣಗಿರಿ ಹೆಸರಿಗೆ ತಕ್ಕಂತೆ ಶಾಂತ,ಮತ್ತು ನಯನ ಮನೋಹರ ಸ್ಥಳ.ಮನೆ ಸ್ವಲ್ಪ ಶಿಖರದ ಜಾಗದಲ್ಲಿದ್ದರೆ,ಕಣಿವೆಯಲ್ಲಿ ಅಡಿಕೆ,ಎಲಕ್ಕಿ ಮತ್ತು ಬಾಳೆ ತೋಟ.ಮಧ್ಯದ ತಪ್ಪಲಿನಲ್ಲಿ ತೆಂಗು,ಮಾವು,ಚಿಕ್ಕು,ಲವಂಗ,ಜಾಯಿ ಕಾಯಿ ಮುಂತಾದ ಮರ ಗಿಡಗಳು.
ಒಂದಿಷ್ಟು ಶುಂಠಿ ,ಅನಾನಸುಗಳನ್ನೂ ಬೆಳೆದಿದ್ದಾರೆ.ಜೊತೆಗೊಂದಿಷ್ಟು ಭತ್ತದ ಗದ್ದೆ.
ಅಪ್ಪ ಮಹಾಬಲ ಹೆಗಡೆಯವರು ತಮ್ಮ ತಂದೆಯ ಹೆಸರನ್ನೇ ಮಗನಿಗೆ ಇಟ್ಟಿದ್ದರು.ತಾಯಿ ಮಹಾದೇವಿ ವಾಳ್ಯದ ಸೀಮೆಯ ಸಂಪ್ರದಾಯಸ್ಥ ಸದ್ಗೃಹಿಣಿ. ಅವತ್ತಿನ ಕಾಲಕ್ಕೇ ಅನುಕೂಲಸ್ಥರಾದ ಮಹಾಬಲ ಹೆಗಡೆಯವರು ಇದ್ದೊಬ್ಬ ಮಗ ಚೆನ್ನಾಗಿ ವಿದ್ಯೆ ಕಲಿಯಲಿ ಎಂದು ಐದನೇಯ ಇಯತ್ತೆಗೆ ಶಿರಸಿಯ ಕಾನ್ವೆಂಟ್ ಒಂದಕ್ಕೆ ಸೇರಿಸಿದ್ದರು.ಮಗನಿಗೆ ಮನೆಯಲ್ಲಿ ಇದ್ದ ಅಕ್ಕರೆಯೇ ಸಿಗಲಿ ಎಂದು ಮಾದೇವಿಯ ಅಕ್ಕನ ಮನೆಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆಯನ್ನು ಮಾಡಿದ್ದರು.
ಹಾಗೆ ಊರಿಂದ ಹೊರ ಕಾಲಿಟ್ಟ ಕಿಟ್ಟಿ ವಾರೊಪ್ಪತ್ತಿನಲ್ಲೆ ಮತ್ತೆ ಮನೆ ಸೇರಿದ್ದ. ’ಹೋಗಲಿ ಬಿಡಿ ಪಾಪ,ಮನೆ ಬಿಟ್ಟು ಉಳಿದು ಅಭ್ಯಾಸವಿಲ್ಲ ನಮ್ಮನೆ ಮಾಣಿಗೆ ’ ಅಂದರು ಮಾದೇವಕ್ಕ.ಅವನಿಗೆ ಹೋಮ್ ಸಿಕ್ ಇರಬಹುದು ಎಂದು ಮಹಾಬಲರು ಸುಮ್ಮನಾದರು.
ಮುಂದೆ ಶಿರಸಿಯಲ್ಲಿ ಪಿಯೂ ಮುಗಿಸಿ ,ತುಮಕೂರಿನ ಸಿದ್ಧಗಂಗಾದಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಪೂರೈಸುವವರೆಗೂ ಕಿಟ್ಟಿಯ ಜೀವನದಲ್ಲಿ ವಿಶೇಷವಾದುದೇನು ಘಟಿಸಲಿಲ್ಲ.
ನೌಕರಿ ನಿಮಿತ್ತ ಬೆಂಗಳೂರು ಸೇರಿದ ಕಿಟ್ಟಿ ಆ ನಗರದ ವೇಗಕ್ಕೆ ಸ್ವಲ್ಪ ಹೆಚ್ಚೇ ಕಂಗಾಲಾಗಿದ್ದ. ಅದು ಸಾಫ್ಟವೇರ್ ಉದ್ಯಮ ಎಕ್ ದಮ್ ಶಿಖರಕ್ಕೇರಿದ ಸಮಯ.ಇನಫೋಸಿಸ್ ಸೇರಿದ ಕಿಟ್ಟಿಗೆ ಯಾವುದೊ ಮಾಯಾಲೋಕಕ್ಕೆ ಬಂದಂತೆ ಭಾಸವಾಗಿತ್ತು.ಅಲ್ಲಿ ಕಂಡ ಅಪ್ಸರೆಯೂ ಅದಕ್ಕೆ ಇಂಬುಕೊಡುವಂತಿದ್ದಳು.ಅವಳೇ ಅಲ್ಲಿ ಅಡ್ಮಿನ್ ಆಗಿದ್ದ ರಾಧಿಕಾ ಭಟ್.ಮೆಟ್ರೋ ಜೀವನ ಶೈಲಿ ಅವನಿಗೆ ಒಗ್ಗದಿದ್ದರೂ ಅದನ್ನು ಒಂದಿಷ್ಟು ಸಹ್ಯ ಮಾಡಿದ್ದು ರಾಧಿಕಾಳ ಸ್ನೇಹವೇ.
  ಮುಂದೆ ಅದು ಪ್ರೀತಿಗೆ ತಿರುಗಿದ್ದು ಎಲ್ಲ ನಿರೀಕ್ಷಿತವೇ.ಅಲ್ಲದೆ ಇಬ್ಬರೂ ಒಂದೇ ಜಾತಿಗೆ ಸೇರಿದ್ದರಿಂದ,ಆರ್ಥಿಕ ಸ್ವಾವಲಂಬಿಗಳಾದ್ದರಿಂದ ವಿಲನ್ ಗಳಾರು ಇಲ್ಲವಾಗಿ,ಎಲ್ಲವೂ ಸುಖಾಂತ್ಯವಾಗುವ ಹಂತ ತಲುಪಿತ್ತು.ಇಂತಹ ಹೊತ್ತಿನಲ್ಲೆ ಕಾಲದ ಓಟ ವೇಗ ಪಡೆದುಕೊಳ್ಳುವುದು.ಯುರೋಪ್ ಮತ್ತು ಅಮೇರಿಕದ ಆರ್ಥಿಕ ಮುಗ್ಗಟ್ಟಿನ ಬಿಸಿ ಇಲ್ಲಿಗೂ ತಲುಪಿತ್ತು.ಬೆಂಗಳೂರಿನ ಸಾಫ್ಟವೇರ್ ಪ್ರಪಂಚದಲ್ಲಿ ಸಣ್ಣದೊಂದು ಕಂಪನ ಆರಂಭವಾಗಿತ್ತು.ಮಿತವ್ಯಯದ ಕ್ರಮವಾಗಿ ಕಂಪನಿ ಕೈಬಿಟ್ಟ ನೌಕರರ ಮೊದಲ ಪಟ್ಟಿಯಲ್ಲಿ ಕಿಟ್ಟಿ ಹೆಸರಿತ್ತು.ಹಿ ವಾಸ್ ಫೈರಡ್..!.ಇನ್ನೇನು ಮದುವೆಯಾಗಿ ಲೈಫ್ ಸೆಟಲ್ ಆಗುವುದು ಎಂದುಕೊಂಡಿದ್ದ ಕಿಟ್ಟಿ ಸಂಪೂರ್ಣ ಅಧೀರನಾಗಿ ಬಿಟ್ಟ.ಜೊತೆಗೆ ಸಂಬಳದ ಆಧಾರದ ಮೇಲೆ ಕೊಂಡ ಕಾರ್,ಸೈಟುಗಳ ಲೋನ್ ಇನ್ನು ತೀರಿರಲಿಲ್ಲ.ದಿಕ್ಕೇ ತೋಚದ ಕಿಟ್ಟಿ ನಿಸ್ತೇಜನಾಗಿ ಬಿಟ್ಟ.
ಇಂತಹ ಸ್ಥಿತಿಯಲ್ಲಿ ,ಆ ಕ್ಷಣದಲ್ಲಿ ಪ್ರಿಯತಮೆ ರಾಧೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮಾಡಿದ ನಿರ್ಧಾರವೊಂದು ಆತನ ಬದುಕನ್ನು ಅನಿರೀಕ್ಷಿತ ತಿರುವಿಗೆ ತಳ್ಳಿಬಿಟ್ಟಿತು.ಅದುವೇ ಬೆಂಗಳೂರಿನಿಂದ ಊರಿಗೆ ತೆರಳುವ ನಿರ್ಧಾರ !
ಸೈಟ್ ನ ಬೆಲೆ ದುಪ್ಪಟ್ಟಾದ್ದರಿಂದ ,ಅದನ್ನೊಂದು ಮಾರಿ ಬಿಟ್ಟರೆ ಸಾಲವೆಲ್ಲ ತೀರಿ ಒಂದಿಷ್ಟು ದುಡ್ಡಿನೊಂದಿಗೆ ಊರಿಗೆ ಮರಳುವುದು ಕಿಟ್ಟಿಗೆ ಸುಲಭದ ಮಾರ್ಗವಾಗಿ ಕಂಡಿತು.ಇನ್ನುಳಿದಿದ್ದು ಮನದನ್ನೆ ರಾಧೆಯನ್ನು ಒಪ್ಪಿಸುವ ಕೆಲಸ ಮಾತ್ರ.ತನ್ನನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುವ ಅವಳು ಎದುರಾಡಿಯಾಳೇ?.ಖಂಡಿತ ಒಪ್ಪುತ್ತಾಳೆ ಎಂಬ ನಂಬಿಕೆ ಆತನದ್ದಾಗಿತ್ತು. ರಾಧಿಕಾಳ ವಾದ ಬೇರೆಯದ್ದೇ ಆಗಿತ್ತು.’ಈ ಆರ್ಥಿಕ ಹಿಂಜರಿತ ಎಲ್ಲ ತಾತ್ಕಾಲಿಕ ಕಣೋ,ಇದಕ್ಕೆ ಹೆದರಿ ಓಡಿಹೋಗಿ ಹೇಡಿಯಾಗ್ತಿಯಾ?.ಹೋಗೋದು ಬೇಡ ಅನ್ನಲ್ಲ ,ಇನ್ನು ಇಪ್ಪತ್ತು ವರ್ಷ ದುಡಿದು ಹೋಗೋಣ.ಪ್ಲೀಸ್ ಕಿಟ್ಟಿ ’ ಅಂದಿದ್ದಳು.
    ನಿರ್ಧಾರ ಮತ್ತು ರಾಧಿಕಾ ,ಎರಡರಲ್ಲಿ ಒಂದರ ಆಯ್ಕೆ ಮಾತ್ರ ಅವನ ಪಾಲಿಗಿತ್ತು.ಒಂದು ವಾರ ರೂಮಿನಲ್ಲಿ ಮಲಗಿಯೇ ಕಳೆದ ಕಿಟ್ಟಿಗೆ ಯಾವುದಕ್ಕೂ ಊರಿಗೆ ಹೋಗಿ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ ಅನಿಸಿತ್ತು.ನಡೆದ ವಿಷಯಗಳೆಲ್ಲವನ್ನೂ ಅಪ್ಪನಿಗೆ ತಿಳಿಸಿದ ಕಿಟ್ಟಿ,ರಾಧೆ ಮತ್ತವಳ ಹೆತ್ತವರಿಗೆ ವಿಷಯ ತಿಳಿಸುವ ಜವಾಬ್ದಾರಿಯನ್ನು ಅಪ್ಪನ ಹೆಗಲಿಗೇರಿಸಿ ಚಿತ್ತ ನಿವೃತ್ತನಾದ.ಮುಂದೊಂದು ದಿನ ರಾಧಿಕಾಳ ಮದುವೆಯ ಕರೆಯೋಲೆ ಕಣ್ಣಿಗೆ ಬಿತ್ತು. ಆಗ ಬ್ರಹ್ಮಚಾರಿಯಾಗಿಯೇ ಇರುವ ನಿರ್ಣಯ ಕೈಗೊಂಡ ಕಿಟ್ಟಿ,ತನ್ನ ಪಾಡಿಗೆ ಕೃಷಿ ಮತ್ತು ಊರಿನ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡ.
  ಎಲ್ಲವೂ ಒಂದು ಹಂತಕ್ಕೆ ಬಂತು ಎನ್ನುವಾಗಲೆ ಅಮ್ಮ ಮಾದೇವಿ ಹೃದಯಾಘಾತದಿಂದ ತೀರಿಕೊಂಡಳು.ಪ್ರಾಜ್ಞ ಮಹಾಬಲರು ,ಸಂಸಾರಕ್ಕೆ ಹೆಣ್ಣೊಬ್ಬಳ ಅನಿವಾರ್ಯತೆಯನ್ನು ,ಕಿಟ್ಟಿಗೆ ಮನನ ಮಾಡಲು ಯಶಸ್ವಿಯಾದರು.ಆದರೆ ಆ ಹೊತ್ತಿಗೆ ಹವ್ಯಕರಲ್ಲಿ ಉಂಟಾದ ವಧುವಿನ ಕೊರತೆ ದೊಡ್ಡ ಹೆಗಡೆಯವರನ್ನು ಹಣ್ಣುಗಾಯಿ-ನೀರುಗಾಯಿ ಮಾಡಿಬಿಟ್ಟಿತು.ಇದರಿಂದ ಬಳಲಿದ ಎಲ್ಲರಂತೆ  ಇವರೂ, ಕೆಳ-ಮಧ್ಯಮ ವರ್ಗದ, ದೂರದ ಗುಲಬರ್ಗಾದ ರುಕ್ಮಿಣಿಯನ್ನು ಸೊಸೆಯಾಗಿ ಮನೆ ತುಂಬಿಸಿಕೊಂಡರು.ಸಂಸಾರವೆಂಬ ಸೋಜಿಗದ ವ್ಯವಸ್ಥೆಗೆ ಕಾಲಿಟ್ಟ ಕಿಟ್ಟಿಗೆ ವರ್ಷೊಪ್ಪತ್ತಿನೊಳಗೆ ಮಗುವೂ ಹುಟ್ಟಿತು.
ರಾಧಿಕಾಳಿಗೆ ಸುಲಭವಾಗಿ ಕಿಟ್ಟಿಯನ್ನು ಮರೆಯಲು ಸಾಧ್ಯವಿರಲಿಲ್ಲ.ಕಿಟ್ಟಿ ಕೈಕೊಟ್ಟು ಊರಿಗೆ ಹೊರಟಾಗ ಅವಳು ಸ್ತಂಭೀಭೂತಳಾಗಿದ್ದು ನಿಜ.ಆದರೆ ಹೇಡಿಯಂತೆ ಓಡಿಹೋದ ಕಿಟ್ಟಿಯ ಬಗ್ಗೆ ಅವಳಿಗೆ ಹುಟ್ಟಿದ್ದು ಕೇವಲ ಅಸಹ್ಯ.ಅದೇ ಅವಳಿಗೆ ಅವನನ್ನು ಮರೆಯಲು ಔಷಧವಾಗಿದ್ದು ಸುಳ್ಳಲ್ಲ.ನಂತರ ಮನೆಯವರ ಒತ್ತಾಸೆಗೆ ಟೆಕ್ಕಿ ರಾಜೇಶನನ್ನು ಮದುವೆಯಾಗಿ ಇಡೀ ಭರತ ಖಂಡವನ್ನು ಸುತ್ತಾಡಿದ್ದಲ್ಲದೆ,ಹತ್ತಾರು ಬೇರೆ ದೇಶಗಳನ್ನು ಕಂಡಳು.ಇದು ತಿಕ್ಕಲು ಕಿಟ್ಟಿಯನ್ನು ಕಟ್ಟಿಕೊಂಡಿದ್ದರೆ ಆಗುತ್ತಿತ್ತೆ,?,ಜೊತೆಗೆ ಮಡಿ -ಮೈಲಿಗೆಯ ಮಾದೇವತ್ತೆ ಯ ಸಂಗಡ ತನಗೆ ಏಗಿ ಬರುತ್ತಿತ್ತೆ ? ಎಂಬ ಸಮರ್ಥನೆಗಳು ಅವಳನ್ನು ಸಮಾಧಾನ ಪಡಿಸುತ್ತಿದ್ದವು.
ರಾಧಿಕಾಳದ್ದು ಚಿಕ್ಕ ಚೊಕ್ಕ ಕುಟುಂಬ .ತಿಂಗಳಿಗೆ ಆರಂಕಿ ಸಂಬಳ ಪಡೆಯುವ ಗಂಡ,ವಂಶೋದ್ಧಾರಕ್ಕೆ ಒಬ್ಬ ಮಗ.ಆದರೆ ಆ ಸಂಭ್ರಮ ಬಹಳ ಕಾಲ ಇರಲಿಲ್ಲ.ಪತಿ ಯಂತ್ರಮಾನವನಾಗಿಯೂ ,ಮಗ ಸಿದ್ಧವಸ್ತುವಾಗಿ ಶಾಲೆಯೆಂಬ ಕಾರ್ಖಾನೆಯಲ್ಲಿ ತಯಾರಾಗುತ್ತಿರುವ ಕಚ್ಚಾವಸ್ತುವಾಗಿಯೂ ಕಾಣಿಸತೊಡಗಿದ್ದರು.ಆದರೂ ತನ್ನಿಂದ ಕುಟುಂಬಕ್ಕೆ ಧಕ್ಕೆಯಾಗದಂತೆ ಕರ್ತವ್ಯ ನಿಭಾಯಿಸುವಲ್ಲಿ ಒಂದು ಹಂತಕ್ಕೆ ರಾಧಿಕಾ ಯಶಸ್ವಿಯಾದಳು.
   ರುಕ್ಮಿಣಿ ಒರಟು ಮತ್ತು ಬಿರುಬಿಸಿಲಿನ ನಾಡಾದ ಕಲಬುರ್ಗಿಯಿಂದ ಬಂದವಳು.ಬಡತನದ ಬೇಗೆ ಅವಳನ್ನು ಇನ್ನೊಂದಿಷ್ಟು ಕರಕಲು ಮಾಡಿತ್ತು.ಅವಳಿಗೆ ರಮಣಗಿರಿಯಲ್ಲಿ ಎಲ್ಲವೂ ಶೀತಲ.ಮಲೆನಾಡಿನ ಮಳೆ,ತಂಗಾಳಿ ಎಲ್ಲ ಸಂತಸ ಕೊಟ್ಟಿವೆ.ಇಲ್ಲಿಗೆ ಬಂದ ಒಂದೆರಡು ವರ್ಷ ಹೊಂದಾಣಿಕೆ ಕಷ್ಟ ಆಗಿತ್ತು.ಇಲ್ಲಿಯ ಭಾಷೆ ,ಆಹಾರಗಳಿಗೆ ಪಡಿಪಾಟಲು ಪಟ್ಟಿದ್ದಳು.ಈಗ ಎಲ್ಲವೂ ಸರಾಗ.ತನ್ನ ಊರಕಡೆಯ ಒಂದಿಷ್ಟು ಹೆಣ್ಣುಮಕ್ಕಳು ಈ ಕಡೆಯ ಸಂಬಂಧ ಮಾಡಿ ಸುಖವಾಗಿರಲಿ ಎಂದು ನೆಂಟಸ್ತಿಕೆ ಮಾಡಿಸಲು ಪ್ರಯತ್ನ ನಡೆಸುತ್ತಿದ್ದಾಳೆ.
                *              *                  *
ಅಂತೂ ಎಲ್ಲವೂ ಶುಭಂ ಎಂದು ಶರಾ ಬರೆಯುವ ವೇಳೆಗೆ ಎಲ್ಲರೂ ವರ್ತಮಾನದಲ್ಲಿ ಬಂದು ನಿಂತಿದ್ದಾರೆ.ಕಿಟ್ಟಿ ಇತ್ತೀಚಿಗೆ ಅಂತರ್ಮುಖಿಯಾಗಿದ್ದಾನೆ.ಯಾವ ಕೆಲಸ ಮಾಡಲೂ ಮನಸ್ಸಿಲ್ಲ.ಸುಮ್ಮನೆ ಸಿಡುಕುತ್ತಾನೆ.ಹೆಂಡತಿ ಮತ್ತು ಅವಳದೇ ಬಣ್ಣ ಪಡೆದ ಮಗಳೂ ಕುರೂಪಿಯಾಗಿ ಕಾಣುತ್ತಾರೆ.ತಾನು ರಾಧೆಗೆ ಮೋಸ ಮಾಡಿದೆ ಅಂತ ತೀವ್ರವಾಗಿ ಅನ್ನಿಸತೊಡಗಿದೆ.ನಗರ ಬಿಟ್ಟು ಬಂದು ತಪ್ಪು ಮಾಡಿದೆ ಎಂದು ಗೊಣಗಿಕೊಳ್ಳ ತೊಡಗಿದ್ದಾನೆ.ಇಲ್ಲಿರಲಾರೆ,ಅಲ್ಲಿಗೂ ಹೊಗಲಾರೆ ಎಂಬ ಸ್ಥಿತಿ ಕಿಟ್ಟಿಯದು.ಮಾಯೆಯೊಳು ತಾನೊ,ತನ್ನೊಳು ಮಾಯೆಯೋ ಎಂಬ ಭ್ರಮಾತ್ಮಕ ಜಗತ್ತಿನಲ್ಲಿ ಅವನಿದ್ದಾನೆ ಅಂತ ಖುದ್ದು ಅವನಿಗೆ ಅನ್ನಿಸತೊಡಗಿದೆ.
ಅತ್ತ ರಾಧಿಕಾಳಿಗೂ ಎನೋ ತಳಮಳ.ಈ ಮೆಟ್ರೋ ಜಗತ್ತು ಅವಳನ್ನು ಏಕಾಂಗಿಯಾಗಿಸಿದೆ.ಗಂಡ,ಮಗ ಯಾರಿಗೂ ಸಮಯವಿಲ್ಲ.ಈ ಯಾಂತ್ರಿಕ ಜಗತ್ತು ತನ್ನನ್ನು ಹುಚ್ಚಳನ್ನಾಗಿಸುತ್ತಿದೆಯಾ ಎಂಬ ಹೆದರಿಕೆ ಅವಳನ್ನು ಕಾಡುತ್ತಿದೆ.ಆಪ್ತ ಸಮಾಲೋಚಕರನ್ನೂ ಭೇಟಿಯಾಗಿ ಆಗಿದೆ.ಒಮ್ಮೆ ಹಗುರವಾಯ್ತು ಅನ್ನಿಸುವಾಗಲೆ,ಮತ್ತೆ ಹಳೆ ನೆನಪುಗಳು ಕಾಡಿ ಬೇಸರವಾಗುತ್ತದೆ.ಆದರೂ ಅವಡುಗಚ್ಚಿ ತನ್ನ ಸಂಸಾರ ರಥದ ಒಂದು ಚಕ್ರವಾಗಿ ಅವಳು ಸಾಗುತ್ತಿದ್ದಾಳೆ.
ಏನೂ ಅರಿಯದ ,ಜೊತೆಗೆ ಅನಿವಾರ್ಯವೂ ಆಗಿರುವ ಬದುಕನ್ನು ಸಂತೃಪ್ತವೋ ನಿರ್ಲಿಪ್ತವೋ ಆದ ಭಾವದಿಂದ ಸುಗಮವಾಗಿ ಸಾಗಿಸುತ್ತಿರುವವಳು ರುಕ್ಮಿಣಿಯೇ.ವಿಶೇಷ ಆಸೆ ಆಸಕ್ತಿಗಳು ಇಲ್ಲದ, ವೈರಾಗ್ಯವೂ ಅಲ್ಲದ ,ಬತ್ತದ ಚಿಲುಮೆಯಂತಹ ರೂಪಕವಾಗಿ ನಿಂತವಳು ಕೃಷ್ಣನ ಪತ್ನಿಯೇ.ತಾನು ಎನೂ ಕೊರತೆಯಿಲ್ಲದೆ ಸುಖವಾಗಿದ್ದೇನೆ ಎಂಬ ಭಾವವೇ ಅವಳನ್ನು ನಿಶ್ಚಿಂತಳನ್ನಾಗಿಸಿದೆ.ಕಾಲ ಕ್ರಮಿಸುತ್ತಿದೆ ನಿಧಾನವಾಗಿ.
******
ನಾವೂ ಕಥೆಯಲ್ಲಿ ಬರುವ ಕೃಷ್ಣ,ರಾಧೆ ಮತ್ತು ರುಕ್ಮಿಣಿ ಯರ ಹಾಗೆ.ಕೃಷ್ಣನಿಗೆ ಹಳ್ಳಿಯಲ್ಲಿದ್ದು ತಪ್ಪು ಮಾಡಿಬಿಟ್ಟೆ ಎಂಬ ಕೊರಗು.ರಾಧೆಗೆ ತದ್ವಿರುದ್ಧ ,ಪೇಟೆ ಸಾಕಾಗಿದೆ ಆದರೆ ತಿರುಗಿ ಬರದ ಹಾದಿಯದು.ರುಕ್ಮಿಣಿಗೆ ಪಾಲಿಗೆ ಬಂದದ್ದು ಪಂಚಾಮೃತ ಎಂಬ ಸ್ಥಿತಪ್ರಜ್ಞತೆ.ನಮ್ಮ ನಮ್ಮ ಪಾತ್ರಗಳ ಆಯ್ಕೆ ನಮ್ಮದು ಎಂಬ ಪ್ರಾಯೋಗಿಕ ನೆಲೆಯಲ್ಲಿ ನಿಂತಾಗಲೂ ,ಎಲ್ಲವೂ ವಿಧಿಯ ಲೀಲೆ ಎಂಬ ವೇದಾಂತ ಸೂಜಿಗಲ್ಲಿನಂತೆ ಎಳೆಯುವುದು ಈ ಬದುಕಿನ ವಿಸ್ಮಯ ಎನ್ನಿಸುವುದು ಸಹಜ!.
*               *                 *
ಮುಂದುವರೆಯುವುದು...
-ಡಾ.ಅಜಿತ್ ಹರೀಶಿ

ಬೇಡವೆಂದರೂ ಬಿಡದೀ ಮಾಯೆ..13

ಬೇಡವೆಂದರೂ ಬಿಡದೀ ಮಾಯೆ..13
  -----            -----          -----
       ಸಂವಹನ ಕಲೆ ಮತ್ತು ಆಂಗಿಕ (ದೇಹ) ಭಾಷೆ,ಈ ವಿಷಯಗಳ ಬಗ್ಗೆ ಹದಿಹರೆಯದ ಜನ ವಿಶೇಷ ಒತ್ತು ನೀಡುವ ಅಗತ್ಯವಿದೆ.ಪೋಷಕರೂ ಸಹ ಈ ನಿಟ್ಟಿನಲ್ಲಿ ಗಮನ ಕೊಡಬೇಕಾಗಿದೆ.
   ಸಂವಹನ ಕಲೆ (communication skill) ,ಆಂಗಿಕ ಭಾಷೆ  (body language) ಇವತ್ತಿನ ಸ್ಪರ್ಧಾ ಪ್ರಪಂಚದಲ್ಲಿ ಅತ್ಯಾವಶ್ಯಕ ’ಹತ್ಯಾರ್’ ಗಳಾಗಿವೆ.
ಅದನ್ನು ಹದಿಹರೆಯದಲ್ಲೇ ರೂಢಿಸಿಕೊಳ್ಳುವ ಬಗ್ಗೆ ಪ್ರಯತ್ನವೂ ಅವಶ್ಯಕ.
ಇಂದಿನ ತಂತ್ರಜ್ಞಾನ ಮತ್ತು ವಿಜ್ಞಾನ ಯುಗದಲ್ಲಿ ಹೆಚ್ಚು ಪಾತ್ರ ವಹಿಸುವುದು ಸಂವಹನವಾಗಿದೆ. ಸಂವಹನವು ನಮ್ಮ ಜೀವನ ಶೈಲಿಗೆ ತೀರಾ ಅತ್ಯಗತ್ಯವೂ ಹೌದು. ಉತ್ತಮ ಸಂವಹನ ಕೌಶಲ್ಯವು ಸಮಾಜದಲ್ಲಿ ನಮಗೆ ಒಳ್ಳೆಯ ಬೆಲೆಯನ್ನು ತಂದುಕೊಡುತ್ತದೆ.
ಮಾತು ಬಲ್ಲವನಿಗೆ ಜಗಳವಿಲ್ಲ ಎಂಬಂತೆ ಉತ್ತಮ ಸಂವಹನವು ಸಮಾಜದಲ್ಲಿ ನಮ್ಮ ಬೆಲೆಯನ್ನು ಎತ್ತಿ ತೋರಿಸುತ್ತದೆ. ಆದರೆ ತಮ್ಮಲ್ಲಿ ಉತ್ತಮ ಸಂವಹನ ಕೌಶಲ್ಯವಿಲ್ಲ ಎಂದು ಕೊರಗುವವರು  ಕೀಳರಿಮೆಗೆ ಗುರಿಯಾಗದೇ ಇರುವುದಿಲ್ಲ.ಈ ಸಂದರ್ಭದಲ್ಲಿ ನಮ್ಮಲ್ಲಿನ ಮಾತಿನ ಕೌಶಲ್ಯವನ್ನು ಸಾಣೆ ಹಿಡಿಯುವುದು ಹೇಗೆಂಬುದು ನಮಗೆ ತಿಳಿದಿರಬೇಕು. ನಿಮ್ಮ ಸಂವಹನ ಸುಧಾರಣೆಯಾದಲ್ಲಿ ಮಾತ್ರವೇ ಅವಕಾಶದ ಬಾಗಿಲು ತೆರೆದುಕೊಳ್ಳುತ್ತದೆ ಮತ್ತು ನಿಮ್ಮ ಗುರಿ ನಿಮಗೆ ಕಾಣುತ್ತದೆ.

ನಿಮ್ಮ ಸಂವಹನ ಮೌಲ್ಯವನ್ನು ಸುಧಾರಿಸಿಕೊಳ್ಳಲು ನೀವು ಉತ್ತಮ ಆಲಿಸುವವರಾಗಿರುವುದು ಅತೀ ಅಗತ್ಯವಾಗಿದೆ. ಇದರಿಂದ ನಿಮ್ಮ ಸುತ್ತಲಿನ ಜನರಿಂದ ಕೆಲವೊಂದನ್ನು ತಿಳಿದುಕೊಂಡಂತೆ ಆಗುತ್ತದೆ. ಆದಷ್ಟು ನಿಮ್ಮ ಕಿವಿಯನ್ನು ತೆರೆದಿಟ್ಟುಕೊಳ್ಳಿ. ನೀವು ನಿಮ್ಮ ಸುತ್ತಲಿನ ಜನರಿಂದ ಹೆಚ್ಚು ಆಲಿಸಿದಂತೆ ನಿಮ್ಮೊಳಗಿನ ಮಾತುಗಾರ ಬೆಳೆಯುತ್ತಾನೆ.
ಕಣ್ಣಿನ ಸಂಪರ್ಕವು ನಿಮ್ಮ ಸಂವಹನ ಭಾಷೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.  ಆಂಗಿಕ ಭಾಷೆ ನಂತರ ಬರುತ್ತದೆ.ಇದು ನಿಮ್ಮ ಸಂವಹನದ ಮಟ್ಟವನ್ನು ಮತ್ತು
ಆತ್ಮ ವಿಶ್ವಾಸವನ್ನು ದೃಢಪಡಿಸುತ್ತದೆ. ಈ ಆಂಗಿಕ ಭಾಷೆ ಸಂವಹನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಕೈಗಳನ್ನು ಅತ್ತಿತ್ತ ಚಲಿಸುತ್ತಾ ಮುಕ್ತವಾಗಿ ಮಾತನಾಡಿ.

ನಿಮ್ಮ ಭಾಷೆಯ ಕೌಶಲ್ಯವನ್ನು ಸುಧಾರಿಸುವುದು ನಿಮ್ಮೆಲ್ಲಾ ಸಂವಹನದ ಪ್ರಗತಿಗೆ ಅತಿ ಮುಖ್ಯವಾಗಿದೆ. ಸಂವಹನದಲ್ಲಿ ವ್ಯಾಕರಣ ಪ್ರಮುಖವಾಗಿದೆ. ನಿಮ್ಮ ವ್ಯಾಕರಣ ಸರಿಯಾಗುವವರೆಗೆ ನಿಮ್ಮ ಪ್ರಯತ್ನವನ್ನು ಬಿಡಬಾರದು. ಇದು ನಿಮ್ಮ ಪರಿಣಾಮಕಾರಿ ಸಂವಹನಕ್ಕೆ ಅತೀ ಅಗತ್ಯವಾಗಿದೆ.
ಓದುವಿಕೆ ಅತೀ ಮುಖ್ಯವಾಗಿದೆ. ನಿಮ್ಮ ಭಾಷಾ ಕೌಶಲ್ಯವನ್ನು ಸುಧಾರಿಸಲು ಇದು ಪರಿಣಾಮಕಾರಿ. ಸುದ್ದಿಪತ್ರಿಕೆಯನ್ನು, ಪುಸ್ತಕಗಳನ್ನು ಓದುವುದು ನಿಮ್ಮ ವ್ಯಾಕರಣವನ್ನು ಪದಗಳ ಉಚ್ಛಾರಣೆಯನ್ನು ಸುಧಾರಿಸಲು ಸಹಾಯಕಾರಿಯಾಗಿದೆ.

ಕನ್ನಡಿ-ಈ ಅಂಶ ನಿಮ್ಮ ಸಂವಹನ ಕೌಶಲ್ಯವನ್ನು ಸುಧಾರಿಸುವುದು ಖಂಡಿತ. ಕನ್ನಡಿಯ ಎದುರು ಸ್ವಲ್ಪ ಹೊತ್ತು ನಿಂತು ಪ್ರಯತ್ನಿಸಿ. ನೀವು ಕನ್ನಡಿಯ ಎದುರು ನಿಂತಾಗ ನಿಮ್ಮನ್ನು ನೀವು ಕಾಣಬಹುದು. ಇದು ನಿಮ್ಮ ಮುಖದ ಭಾವನೆಗಳನ್ನು ನೋಡಲು ಮತ್ತು ಆಂಗಿಕ ಭಾಷೆಯನ್ನು ಗಮನಿಸಲು ಅತೀ ಅಗತ್ಯವಾಗಿದೆ.
ಕೊನೆಯದಾಗಿ ಸಂವಹನ ಕೌಶಲ್ಯವನ್ನು ಸುಧಾರಿಸಲು ಜ್ಞಾನ ಅತೀ ಅಗತ್ಯವಾಗಿದೆ. ನಿಮ್ಮಲ್ಲಿ ಅತ್ಯುತ್ತಮ ಜ್ಞಾನ ಇದೆ ಎಂದಾದರೆ ಸಂವಹನವನ್ನು ಸುಧಾರಿಸುವಲ್ಲಿ ಯಾವುದೆ ತೊಂದರೆ ಆಗುವುದಿಲ್ಲ.
ಅಂಕಿ-ಅಂಶ;- ದೇಹ ಭಾಷೆಯ ಅಂಶಗಳಾದ ನಿಲವು,ಭಂಗಿ, ಆಂಗಿಕ ಸನ್ನೆಗಳು ಮತ್ತು ಕಣ್ಣ ಸಂಪರ್ಕದಿಂದ 55%ರಷ್ಟು ಸಂವಹನವನ್ನು ನಿರ್ಧರಿಸಬಹುದು,
ಧ್ವನಿಯ ಮಟ್ಟದ ಮೂಲಕ 38%ರಷ್ಟು ಮತ್ತು
ಸಂವಹನ ಪ್ರಕ್ರಿಯೆಯಲ್ಲಿ ಬಳಸಿದ ವಿಷಯ ಅಥವಾ ಪದಗಳಿಂದ 7%ರಷ್ಟನ್ನು ನಿರ್ಧರಿಸಬಹುದು.
#ವರ್ತಮಾನ -ಮುಂದೆ ತಾರುಣ್ಯದಲ್ಲಿ ಇದಕ್ಕಾಗಿ ಹಣ ಮತ್ತು ಸಮಯ ವ್ಯಯಿಸುವ
ಬದಲು ಹದಿಹರೆಯದಲ್ಲಿ ಈ ಬಗ್ಗೆ ಗಮನ ಹರಿಸಲು ಮಕ್ಕಳಿಗೆ, ಪೋಷಕರು ಉತ್ತೇಜಿಸಿದಲ್ಲಿ ಉತ್ತಮ ಫಲಿತಾಂಶ ನಿಶ್ಚಿತ.
  *                               *                                *
ಮುಂದುವರೆಯುವುದು....
-ಡಾ.ಅಜಿತ್ ಹರೀಶಿ.

ಗುರುವಾರ, ಅಕ್ಟೋಬರ್ 19, 2017

ಬೇಡವೆಂದರೂ ಬಿಡದೀ ಮಾಯೆ-12

ಬೇಡವೆಂದರೂ ಬಿಡದೀ ಮಾಯೆ-12
-------        -------       -------
ಹದಿಹರೆಯದವರಿಗೆ ಲೈಂಗಿಕ ಶಿಕ್ಷಣವನ್ನು ನೀಡುವ ಬಗ್ಗೆ ಚರ್ಚೆಗಳು ಸಾಕಷ್ಟು ಕೇಳಿ ಬರುತ್ತಿವೆ.ಹದಿಹರೆಯದವರಿಗೆ ಲೈಂಗಿಕ ಶಿಕ್ಷಣ ನೀಡುವುದು ಅಗತ್ಯ ಎಂಬುದನ್ನು ಯಾವಾಗ ಮೊದಲು ಪರಿಭಾವಿಸಿದರು ಎಂಬುದನ್ನು ಕಂಡು ಹಿಡಿಯುವುದು ಕಷ್ಟ. ಆದರೂ, ಕುಟುಂಬ ಮತ್ತು ಸಮಾಜದಲ್ಲಿ ಆದ ಕೆಲವು ಬದಲಾವಣೆಗಳ ಜೊತೆಯಲ್ಲೇ ಇದೂ ಬೆಳೆದು ಬಂತು ಎನ್ನಬಹುದು.ಇನ್ನೂ ನಿಖರವಾಗಿ ಹೇಳಬೇಕೆಂದರೆ ಅವಿಭಕ್ತ ಕುಟುಂಬಗಳು ವಿಘಟನೆ ಆದ ಮೇಲೆ  ಒಂದೇ ಮಗುವು ಇರುವ  ಕುಟುಂಬಗಳು ಜಾಸ್ತಿ ಆದಂತೆ,ಹಾಗೆಯೇ ಒಬ್ಬರೇ ಪೋಷಕರು ಇರುವ ಕುಟುಂಬಗಳು ಜಾಸ್ತಿ ಆದಂತೆ ಜೊತೆಯಲ್ಲೇ ಇದೂ ಬೆಳೆದು ಬಂತು ಅನ್ನಬಹುದೆನೋ..!

ಮಗುವು ಒಂದು ದೊಡ್ಡ ಕುಟುಂಬದಲ್ಲಿ ಬೆಳೆಯುವಾಗ,ಅದು ಎಲ್ಲಾ ವಯಸ್ಸಿನ ಮತ್ತು ಎರಡೂ ಲಿಂಗಗಳ ಜನರನ್ನು ಒಳಗೊಂಡ ಒಂದು ಸಮೂಹದಲ್ಲಿ ತಾನೂ ಒಂದು ಭಾಗವಾಗಿ ಬೆಳೆಯುತ್ತದೆ. ಇಂಥ ಪರಿಸ್ಥಿತಿಯಲ್ಲಿ ಅದರ ಸದಸ್ಯರು ಒಂದೇ ಬಗೆಯ ಪ್ರಕ್ರಿಯೆಯಲ್ಲಿ ಒಬ್ಬೊಬ್ಬರಾಗಿ ಭಾಗವಾಗುತ್ತಿರುವಂತೆ ಆಗುತ್ತದೆ.ಇನ್ನೊಬ್ಬರಿಗೆ ಈ ಮೊದಲು ಸಂಭವಿಸಿದ ಪ್ರಕ್ರಿಯೆ ಮತ್ತೊಬ್ಬರಿಗೆ ಸಂಭವಿಸುತ್ತದೆ.ಹೀಗಾಗಿ  ಜೀವನದ ಎಲ್ಲಾ ಹಂತಗಳ ಪ್ರಕ್ರಿಯೆಯನ್ನು ಮಗುವು ಒಟ್ಟಿಗೆ ಒಂದೇ ಬಾರಿಗೆ ವಾಸ್ತವಿಕವಾಗಿ  ಗಮನಿಸುತ್ತಿರುತ್ತದೆ.ಮನೆಯಲ್ಲೊಂದು ಮಗು ಹುಟ್ಟಿತ್ತದೆ. ಇದಾದ ಮೇಲೆ ಅದರ ಆಟನಿರತ ಬಾಲ್ಯ,.ಬತ್ತಲೆ ಮಕ್ಕಳು, ಹಾಲೂಡಿಸುವ ತಾಯಂದಿರು ಇಲ್ಲಿ ದೈನಂದಿನ ದೃಶ್ಯಾವಳಿಯಾಗಿರುತ್ತದೆ.ಹೆಣ್ಣು ಹುಡುಗಿ ಋತುಮತಿಯಾಗುವುದು ಅಲ್ಲಿ ನಡೆಯುವ ಕೆಲವೊಂದು ಸಾಂಸ್ಕೃತಿಕ ಆಚಾರಗಳಿಂದ ಎಲ್ಲರಿಗೂ ಗೊತ್ತಾಗುತ್ತದೆ.ಯುವಕ ಯುವತಿಯರು ಚಿಕ್ಕವಯಸ್ಸಿನಲ್ಲೇ ಮದುವೆಯಾಗುತ್ತಾರೆ ಮತ್ತು ಸಾಮಾನ್ಯವಾಗಿ ಮದುಮಗಳು ಬಲು ಬೇಗನೆ ಗರ್ಭಿಣಿಯಾಗುತ್ತಾಳೆ .  ಗರ್ಭಧಾರಣೆ ವಿಳಂಬವಾದರೆ ಟೀಕೆಗೆ ಒಳಗಾಗಬೇಕಾಗುತ್ತದೆ ಎಂಬ ಅರಿವೂ ಇಲ್ಲಿರುವುದು ಚೋದ್ಯ..!. ಮತ್ತೆ ಹೆರಿಗೆ, ಮಗುವಿನ ಜನನ,ಬಾಣಂತನ ಇತ್ಯಾದಿ ಜರುಗುತ್ತವೆ.
ಸುತ್ತಮುತ್ತಲ ಪರಿಸರದಿಂದ ಹೀಗೆ ಹತ್ತು ಹಲವಾರು ಸೂಚನೆಗಳು ಬರುತ್ತಿರುವಾಗ ಹದಿಹರೆಯದವರಿಗೆ, ಎರಡು ಮತ್ತು ಎರಡು ನಾಲ್ಕು ಎಂಬಂತೆ 'ಜೀವನದ ಸತ್ಯ'ಗಳನ್ನು ಲೆಕ್ಕಹಾಕಿ ಅರಿಯುವುದು ಕಷ್ಟವಾಗುವುದಿಲ್ಲ.ಇದೇ ರೀತಿ  ಮಕ್ಕಳು ಸಾಕು ಪ್ರಾಣಿಗಳ ನಡುವೆ ಬೆಳೆಯುತ್ತಿರುವಾಗ ಅವರಿಗೆ ಜೀವನ ರಹಸ್ಯಗಳನ್ನು ಅರಿಯುವುದು ಕಷ್ಟವಾಗಲಾರದು. ಈ ವಾಸ್ತವ ಸತ್ಯವನ್ನು   ಜನನ ಪ್ರಕ್ರಿಯೆಯ ವೈದ್ಯಕೀಯ ಜ್ಞಾನವೆಂಬಂತೆ ಪ್ರತ್ಯೇಕವಾಗಿ ಗ್ರಹಿಸದೇ ಅದರ ಭಾವನಾತ್ಮಕ ಮತ್ತು ಸಾಮಾಜಿಕ ಮಹತ್ವದ  ಜೊತೆಗೆ ಇಡಿಯಾಗಿ ಗ್ರಹಿಸಲಾಗುತ್ತದೆ.

ಆದರೆ ಒಂದು ಪುಟ್ಟ ನ್ಯೂಕ್ಲಿಯರ್ ಕುಟುಂಬದಲ್ಲಿ ಬೆಳೆಯುವ ಮಗುವಿಗೆ ಈ ಎಲ್ಲಾ ಅವಕಾಶಗಳು ದೊರೆಯುವುದೇ ಇಲ್ಲ. ತನ್ನದೇ ಆದ ದೈಹಿಕ ಮತ್ತು ಭಾವನಾತ್ಮಕ ಬದಲಾವಣೆಗಳು ಆ ಮಗುವು ಇನ್ನೊಬ್ಬರಿಗೆ ಹೀಗೆ ಆಗಿತ್ತು ನನಗೂ ಆಗುತ್ತಿದೆ ಎಂದು ಹೋಲಿಸಿ ಪರಿಭಾವಿಸಲು ಸಾಧ್ಯವಾಗದಂತೆ ಒಂಟಿ ಅನುಭವವಾಗಿ ಕಾಣಿಸಿಕೊಳ್ಳಬಹುದು. 8 ನೇ ತರಗತಿಯಲ್ಲಿ ಜೀವ ವಿಜ್ಞಾನದ ಪಾಠವಾಗಿ ವಸ್ತುನಿಷ್ಠವಾಗಿ ಕಲಿತ 'ಜೀವನದ ಸತ್ಯ', ಸಾಮಾನ್ಯವಾಗಿ, ಸಂಬಂಧಿತ ಭಾವಗಳು ಅಥವಾ ಸಾಮಾಜಿಕ ಸಂಭ್ರಮ ಅಥವಾ ಮಹತ್ವಗಳನ್ನು ಗ್ರಹಿಸಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದಿಲ್ಲ.ಇದಲ್ಲದೆ, ಮಾಧ್ಯಮಗಳಿಂದ ಮತ್ತು ತನ್ನ ಸಮವಯಸ್ಕರ ಮೂಲಕ ದೊರೆಯುವ ಅನೇಕ ಪ್ರಚೋದಕಗಳು ಮತ್ತು ಒಂದಕ್ಕೊಂದು ಸಂಬಂಧ ಪಡದ ಚಿತ್ರಗಳನ್ನು ಮಗುವು  ತಾನೇ ಅರಗಿಸಿಕೊಂಡು,ಒಟ್ಟುಗೂಡಿಸಿ ಅರ್ಥಮಾಡಿಕೊಳ್ಳುವಂತಾಗಿರುತ್ತದೆ ಮತ್ತು ಅದಕ್ಕೆ ಪ್ರತಿಕ್ರಿಯಿಸಬೇಕಾಗುತ್ತದೆ.
ಈ ಹಂತದಲ್ಲಿ ಪೋಷಕರ ಜವಾಬ್ದಾರಿ ಹೆಚ್ಚುತ್ತದೆ. ಮಕ್ಕಳೊಡನೆ ಮುಕ್ತ ಸಂವಾದ ನಡೆಸುವುದೇ ಅಲ್ಲದೆ, ಮುಂದಿನ ಜೀವನದ ಬಗ್ಗೆ ಸೂಕ್ತ ದೃಷ್ಟಿಕೋನವನ್ನು ಅವರು ಒದಗಿಸಬೇಕಾಗಿದೆ. ಅದಕ್ಕನುಗುಣವಾಗಿ  ಶಾಲೆಗಳು ಸಹ
ಲೈಂಗಿಕ-ಶಿಕ್ಷಣ ಕೋರ್ಸ್ ಪ್ರಾರಂಭಿಸಲು ಮುಂದಾಗಬೇಕು ಮತ್ತು ಅದನ್ನು  ಜೀವನ ಅಧ್ಯಯನ ಪಾಠಗಳು ಎಂದು ವಿಂಗಡಿಸಬಹುದು,ಅಲ್ಲವೇ..!
               *                                 *                                *
#ವರ್ತಮಾನ- ಮತ್ತೆ ವಾಪಸ್ ಅವಿಭಕ್ತ ಕುಟುಂಬ ವ್ಯವಸ್ತೆಗೆ ಹೋಗುವುದು ಅಸಾಧ್ಯ.ಹಾಗಾಗಿ ಶಿಕ್ಷಣ ವ್ಯವಸ್ಥೆಯ ಮುಖಾಂತರವೇ ಬದುಕು ಮತ್ತು ಅನುಭವದ ಪಾಠಕ್ಕೆ ಬೇಡಿಕೆ ಇಡುವ ಪ್ರಸಂಗ ಬಂದಿರುವುದು ಈ ಕ್ಷಣದ ವಿಚಿತ್ರ...!
   *
...ಮುಂದುವರೆಯುವುದು..
-ಡಾ.ಅಜಿತ್ ಹರೀಶಿ.

ಬೇಡವೆಂದರೂ ಬಿಡದೀ ಮಾಯೆ-11

ಬೇಡವೆಂದರೂ ಬಿಡದೀ ಮಾಯೆ-11
------- ------- -------
ಸಂಬಂಧಗಳನ್ನು ರಕ್ಷಿಸುವುದು ಸ್ತ್ರೀತ್ವದ ವೈಶಿಷ್ಟ್ಯ, ಅದು ಕುಟುಂಬವೇ ಆಗಿರಬಹುದು ಇಲ್ಲವೇ ಜೀವನ ಆಗಿರಬಹುದು. ಸರ್ವೆಕಲ್‌ ಕ್ಯಾನ್ಸರ್‌ ವಿಷಯಕ್ಕೆ ಬಂದಾಗ ಇದು ಇನ್ನು ತೀವ್ರವಾಗುತ್ತದೆ. ಭಾರತದಲ್ಲಿ ಕ್ಯಾನ್ಸರ್‌ ಸಂಬಂಧಿತ ಕಾಯಿಲೆಯಿಂದ ಸಾವಿಗೆ ಈಡಾಗುವ ಮಹಿಳೆಯರಲ್ಲಿ ಸರ್ವೆಕಲ್‌ ಕ್ಯಾನ್ಯರಿಗೆ (ಸ್ತನ ಕ್ಯಾನ್ಸರ್‌ಗಿಂತಲೂ ಹೆಚ್ಚು) ಬಲಿಯಾಗುತ್ತಿರುವವರೇ ಹೆಚ್ಚು.
ಸರ್ವೆಕ್ಸ್‌ (ಗರ್ಭಕೊರಳು) ನಲ್ಲಿ ಉಂಟಾಗುವ ಕ್ಯಾನ್ಸರ್‌ಗೆ ಸರ್ವೆಕಲ್‌ ಕ್ಯಾನ್ಸರ್‌ ಎನ್ನುತ್ತಾರೆ. ಗರ್ಭಾಶಯದ ಮುಂಭಾಗದಲ್ಲಿರುವ ಭಾಗಕ್ಕೆ ಸರ್ವೆಕ್ಸ್‌ ಎನ್ನುತ್ತಾರೆ.ಯಾವುದೇ ಬಗೆಯ ಸೋಂಕು ಗರ್ಭಾಶಯವನ್ನು ಸೇರುವುದನ್ನು ಈ ಸರ್ವೆಕ್ಸ್‌ ತಡೆಯುತ್ತದೆ.
ಈ ಬಗೆಯ ಕ್ಯಾನ್ಸರ್‌ ವಂಶಪಾರಂಪರ್ಯವಾಗಿ ಬರುವುದಿಲ್ಲ. ಹ್ಯೂಮನ್‌ ಪ್ಯಾಪಿಲೊಮ ವೈರಸ್‌ ಈ  ಕ್ಯಾನ್ಸರಿಗೆಕಾರಣ.
ಎಳೆಯ ಯುವತಿಯರು ಈ ಎಚ್‌ಪಿವಿ ಸೋಂಕಿಗೆ ಈಡಾಗುವ ಸಾಧ್ಯತೆ ಹೆಚ್ಚು. ಭವಿಷ್ಯದಲ್ಲಿ ಇದು ಸರ್ವೆಕಲ್‌ ಕ್ಯಾನ್ಸರ್‌ ಆಗುವ ಸಾಧ್ಯತೆ ಹೆಚ್ಚು. ಆದರೆ ಯಾವುದೇ ವಯೋಮಿತಿಯಿಲ್ಲದೆ ಪ್ರತಿ ಮಹಿಳೆಯೂ ಈ ಕ್ಯಾನ್ಸರಿನ ಅಪಾಯಕ್ಕೆ ಒಳಗಾಗಬಹುದು. ಹಾಗಾಗಿಯೇ ಹುಡುಗಿಯರನ್ನು ಆದಷ್ಟು ಬೇಗ ಇದರಿಂದ ರಕ್ಷಿಸುವುದು ಒಳಿತು.
ಹದಿಹರೆಯದ ಹೆಣ್ಣುಮಕ್ಕಳಿಗೆ ಆದಷ್ಟು ಶೀಘ್ರದಲ್ಲಿ  ಸರ್ವೆಕಲ್‌ ಕ್ಯಾನ್ಸರ್‌ ರೋಗನಿರೋಧಕ ಲಸಿಕೆಯನ್ನು ನೀಡುವುದರಿಂದ ಇದನ್ನು ತಡೆಯಬಹುದು.ಈ ರೋಗ ನಿರೋಧಕ ಲಸಿಕೆಯು ದೇಹದಲ್ಲಿ ಸೋಂಕನ್ನು ತಡೆಯುವ ಆಂಟಿಬಾಡಿಗಳನ್ನು ಉತ್ಪತ್ತಿ ಮಾಡುತ್ತದೆ. ಎಚ್‌ಪಿವಿ ಸೋಂಕು ತಗುಲಿದಾಗ ಈ ಆಂಟಿಬಾಡಿಗಳು ಆ ಸೋಂಕಿನಿಂದ ನಮ್ಮನ್ನು ಕಾಪಾಡುತ್ತವೆ. ವೈರಸ್‌ ಸರ್ವೆಕ್ಸ್ ನ ಮೇಲೆ ದಾಳಿ ಮಾಡಿದಾಗ ,ಅವು ವೈರಸ್‌ಗಳ ಮೇಲೆ ದಾಳಿ ಮಾಡುತ್ತವೆ.
ಎಚ್‌ಪಿವಿ ಸೋಂಕಿನಿಂದ ಸರ್ವೆಕ್ಸ್‌ ಅನ್ನು ರಕ್ಷಿಸುವ ಮೂಲಕ ರೋಗನಿರೋಧಕ ಲಸಿಕೆಯು ಸರ್ವೆಕಲ್‌ ಕ್ಯಾನ್ಸರಿನಿಂದ ರಕ್ಷಣೆ ನೀಡುತ್ತದೆ.ಈ ರೋಗನಿರೋಧಕ ಲಸಿಕೆಯನ್ನು ಆರು ತಿಂಗಳಲ್ಲಿ ಮೂರು ಡೋಸ್‌ಗಳಲ್ಲಿ ನೀಡಲಾಗುತ್ತದೆ. ಇದು ಸುರಕ್ಷಿತ ಮತ್ತು ತಡೆದುಕೊಳ್ಳಬಹುದಾಗಿದೆ. ಲಸಿಕೆ ನೀಡಿದ ನಂತರ ಎಲ್ಲ ರೋಗ ನಿರೋಧಕ ಲಸಿಕೆಗಳಿಗಿರುವಂತೆ ಇದರಲ್ಲೂ ತುಂಬ ಕಡಿಮೆ ತೀವ್ರತೆಯ ಅಡ್ಡಪರಿಣಾಮಗಳು ಆಗಬಹುದು ಉದಾ: ಸ್ವಲ್ಪ ಜ್ವರ, ಸ್ವಲ್ಪ ಊತ ಕಾಣಬಹುದು.
            *                        *                        *
ಭೂತಕಾಲ- ಪತ್ರಿಕೆಯೊಂದರಲ್ಲಿ ಪ್ರಕಟಿತ ಮತ್ತು ಪ್ರತಿಲಿಪಿಯಲ್ಲೂ ಲಭ್ಯವಿರುವ ಈ ಹಳೆಯ ಕಥೆಯನ್ನು ಡೌನ್ ಲೋಡ್ ಮಾಡಲಾಗುತ್ತಿಲ್ಲ, ಇಲ್ಲೇ ಪ್ರಕಟಿಸಿ ಎಂದು ಹಲವರು ಹೇಳಿದ್ದರಿಂದ  ಪ್ರಕಟಿಸುತ್ತಿದ್ದೇನೆ.ನೋಡಿ..ಹ್ಮಾಂ. ಇದೊಂದು ಸತ್ಯಕಥೆ.

ವಿದ್ಯಾರ್ಥಿ ಶಕ್ತಿ-
=======
ಇಲ್ಲ ,ಇದಕ್ಕೊಂದು ಮುಕ್ತಾಯ ಹೇಳಲೇಬೇಕು ಎಂದು ನನಗನಿಸಿಬಿಟ್ಟಿತ್ತು.ಯಾವುದೇ ಕ್ರೀಡೆಯಲ್ಲಾಗಲೀ,ಸಾಂಸ್ಕೃತಿಕ ಚಟುವಟಿಕೆಯಲ್ಲಾಗಲೀ ಪತ್ರಿಕೆಗಳಲ್ಲಿ ಹೆಸರು ಮಾಡದ ಕಾಲೇಜು ಇಂದು ಮುಖಪುಟದಲ್ಲಿ ರಾರಾಜಿಸುತ್ತಿತ್ತು.ಒಬ್ಬ ವಿದ್ಯಾರ್ಥಿಯ ತಲೆಯಿಂದ ನೆತ್ತರು ಬಸಿದಿದ್ದರೆ,ಇನ್ನೊಬ್ಬನ ಮುಖಕ್ಕೆ ರೇಜರ್ ಹಾಕಲಾಗಿತ್ತು.
ಹೊಸ ವಿದ್ಯಾರ್ಥಿ ಸಂಘದ ರಚನೆಗೆ ಪ್ರಕ್ರಿಯೆ ಆರಂಭವಾದಾಗಲೇ ಮುಂದಿನ ಅನಾಹುತದ ಲಕ್ಷಣಗಳು ಸ್ಪಷ್ಟವಾಗಿದ್ದವು.ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಭರ್ಜರಿ ಪೈಪೋಟಿಯಿತ್ತು.ಎಂದಿನ ಚುನಾವಣೆಗಿಂತ ದೊಡ್ಡ ರಂಗುರಂಗಾದ ಬ್ಯಾನರ್ ಗಳಿಂದ ಕ್ಯಾಂಪಸ್ ತುಂಬಿತ್ತು.
ಅಂದೇ ಒಬ್ಬ ಹುಡುಗನನ್ನು ಕೇಳಿದ್ದೆ, ಯಾರ್ಯಾರು ಸ್ಪರ್ಧಿಸಿದ್ದಾರೆ ಅಂತ.
"ಅದೇ ಸಾರ್..ಆ ನಿಖಿಲ್ ಶೆಟ್ಟಿ ಮತ್ತು ಅಮಿತ್,ಜಿ.ಎಸ್ ಪೋಸ್ಟ್ ಗೆ ಕಂಟೆಸ್ಟ್ ಮಾಡ್ತಿದಾರೆ ಸಾರ್.ನಿಖಿಲ್ ಗೆ ತನ್ನ ಜಾತಿ ಓಟು ಮತ್ತು ಸೌತ್ ಕೆನರಾ ಸ್ಟೂಡೆಂಟ್ಸ್ ಸಪೋರ್ಟ್ ಇದೆ.ಅಮಿತ್ ಲೋಕಲ್,ಜೊತೆಗೆ ದುಡ್ಡು ಇರೋ ದೊಡ್ಡ ಕುಳ ಸಾರ್".
ಒಂದೇ ಉಸಿರಿನಲ್ಲಿ ಆತ ನಾನು ಕೇಳಿದ್ದಕ್ಕಿಂತ ಹೆಚ್ಚಿನ ವಿಷಯ ಹೇಳಿಬಿಟ್ಟಿದ್ದ.ನನಗೆ ಆ ಎಲೆಕ್ಷನ್ ,ಓಟು,ಜಾತಿ,ಧರ್ಮ ಅಂದ್ರೆ ಅಲರ್ಜಿ.ಏನಾಗಿದೆ ಈ ಬಿಸಿರಕ್ತದ ಹುಡುಗ್ರಿಗೆ.ಎಂಥೆಂಥ ರ್ಯಾಂಕ್ ಸ್ಟೂಡೆಂಟ್ಸ್ ಈ ಎಂಜಿನಿಯರಿಂಗ್ ಕಾಲೇಜಿನಿಂದ ಹೊರಬಿದ್ದು ದೇಶ- ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ.ಅವರನ್ನ ಯಾಕೆ ಇವರು ಆದರ್ಶವಾಗಿ ತೆಗೆದುಕೊಳ್ಳಲ್ಲ?.ಹೊಲಸು ರಾಜಕೀಯ ಸಂಸ್ಕೃತಿಯನ್ನು,ರೌಡಿಗಳನ್ನು ಅದೆಷ್ಟು ಬೇಗ ಅನುಕರಿಸುತ್ತಾರೆ ! ಅನ್ನಿಸಿತು.ಇವೆಲ್ಲ ನೆನಪಿಗೆ ಬಂದಿದ್ದು ಇವತ್ತಿನ ಪೇಪರ್ ಓದುತ್ತಿದ್ದಾಗಲೇ.ಇನ್ನು ತಡ ಮಾಡಕೂಡದು.ಪ್ರಾಂಶುಪಾಲರ ಬಳಿ ಮಾತಾಡಿ ಪರಿಹರಿಸಲೇಬೇಕು ಅಂದುಕೊಳ್ಳುತ್ತಾ ಕಾರಿನ ಇಗ್ನೀಷನ್ ತಿರುವಿದೆ.
* * * *
ಕಾಲೇಜಿನಲ್ಲಿ ಆಗಲೇ ಗುಸುಗುಸು ಸುದ್ದಿ ಶುರುವಾಗಿಬಿಟ್ಟಿತ್ತು.ನಿನ್ನೆ ರಾತ್ರಿ ಕುಡಿದ ನಶೆಯಲ್ಲಿ ಅಮಿತ್ ಗ್ಯಾಂಗು ನಿಖಿಲ್ ನ ಕಡೆಯವನಿಗೆ ನೆತ್ತಿ ಬಿಚ್ಚುವಂತೆ ಹಾಕಿ ಸ್ಟಿಕ್ ನಲ್ಲಿ ಬಡಿಯಿತಂತೆ.ಆಗ ಸಿಟ್ಟಾದ ನಿಖಿಲ್ ಗ್ರೂಪ್ ಅಮಿತನ ಗೆಳೆಯನ ಮುಖಕ್ಕೆ ರೇಜರ್ ಹಾಕಿತಂತೆ..ಇತ್ಯಾದಿ,ಇತ್ಯಾದಿ.ನಾನು ನೇರವಾಗಿ ಪ್ರಿನ್ಸಿಪಾಲ್ ಚೇಂಬರಿಗೆ ಹೋದೆ.
"ಬನ್ನಿ ಪ್ರೊ. ನಾಗರಾಜು .ಈಗ ತಾನೆ ನಮ್ಮ ಸಂಸ್ಥೆಯ ಅಧ್ಯಕ್ಷರು ಫೋನ್ ಮಾಡಿದ್ರು.ಚುನಾವಣೆ ರದ್ದು ಮಾಡಿ ಮೆರಿಟ್ ಮೇಲೆ ಯೂನಿಯನ್ ಗೆ ಆಯ್ಕೆ ಮಾಡಿ ಅಂತಂದ್ರು.ಎನಂತೀರ ?".
"ತಮಗೆ ತಿಳಿದ ಹಾಗೆ ಮಾಡಿ ಸರ್.ಒಟ್ಟಿನಲ್ಲಿ ಸಮಸ್ಯೆ ಪರಿಹಾರ ಆದರೆ ಸಾಕು" ಅಂದೆ.
ಮೆರಿಟ್ ಪ್ರಕಾರ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಆರಿಸಿದರು.ಕು.ದೀಪಾಳನ್ನು ಜಿ.ಎಸ್ ಆಗಿ ಆಯ್ಕೆ ಮಾಡಿದರು.ಸಂಘದ ಉದ್ಘಾಟನಾ ದಿನಾಂಕವನ್ನು ನಿಗದಿಪಡಿಸಿ ಆಹ್ವಾನ ಪತ್ರಿಕೆಯನ್ನು ಅಚ್ಚಿಗೆ ಕಳುಹಿಸಿದರು.
* * * *
ಅಂದು ಸಮಾರಂಭದ ಹಿಂದಿನ ದಿನ ದೀಪಾ ಪ್ರಿನ್ಸಿಪಾಲ್ ಚೇಂಬರಿಗೆ ಬಂದು ಕಣ್ಣೀರಿಡುತ್ತಾ, "ನಂಗೆ ಈ ಪೋಸ್ಟೂ ಬೇಡ ಎನೂ ಬೇಡ ಸರ್ " ಅಂದಳು.
"ಈಗ ಹಿಂಗಂದ್ರೆ ಹೇಗಮ್ಮ ,ಕಾರ್ಡ್ ಪ್ರಿಂಟಾಗಿದೆ,ಗೆಸ್ಟ್ ಗಳಿಗೆ ಹೇಳಿಯಾಗಿದೆ.ಏನಾಯ್ತು ?" ,ಪ್ರಿನ್ಸಿಪಾಲರು ಆತಂಕಗೊಂಡಿದ್ದರು.
"ಸರ್ ಯಾರೋ ನಿನ್ನೆ ರಾತ್ರಿ ಫೋನ್ ಮಾಡಿ ಅವಾಚ್ಯ ಶಬ್ದಗಳಲ್ಲಿ ನಿಂದಿಸಿ ,ರಾಜಿನಾಮೆ ಕೊಡದಿದ್ರೆ ಪರಿಣಾಮ ನೆಟ್ಟಗಿರೋಲ್ಲ ಅಂದ್ರು.ಜೊತೆಗೆ ನಾಳೆ ಸಮಾರಂಭದಿಂದ ವಿದ್ಯಾರ್ಥಿಗಳನ್ನ ವಾಕ್ ಔಟ್ ಮಾಡಿಸಿ ಅದು ನಡೀದೆ ಇರೋ ಹಂಗೆ ಮಾಡ್ಸಿ ಎಲ್ಲರಿಗೂ ಅವಮಾನ ಆಗೋ ಹಾಗೆ ಮಾಡ್ತೀವಿ ಅಂದರು.ಅಲ್ದೇ ಈ ಪ್ರಜಾಪ್ರಭುತ್ವ ಯುಗದಲ್ಲಿ ಸರ್ವಾಧಿಕಾರಿಯಾಗಿರುವ ಪ್ರಿನ್ಸಿಪಾಲರ ವಿರುದ್ಧ ವಿದ್ಯಾರ್ಥಿ ಸಂಘಟನೆ ಬೆಂಬಲ ತಗೊಂಡು ಚಳುವಳಿ ಮಾಡ್ತೀವಿ ಅಂತಾನು ಅಂದ್ರು ಸರ್."
ಆಗ ಅಲ್ಲಿದ್ದ ನಾನು ಎದ್ದು ನಿಂತು,"ಸರ್, ಈ ವಿಷಯ ನನಗೆ ಬಿಡಿ ,ನೋಡಿ ಮಿಸ್ ದೀಪಾ ನಾಳೆಯ ಸಮಾರಂಭಕ್ಕೆ ಸಿದ್ಧತೆ ನಡೆಸಿ.ನಿಮಗೆ ಮತ್ತು ಈ ಸಮಾರಂಭಕ್ಕೆ ಒಂಚೂರು ಧಕ್ಕೆ ಆಗದೆ ಇರೋ ಹಾಗೆ ನೋಡಿಕೊಳ್ಳೋ ಜವಾಬ್ದಾರಿ ನಂದು" ಅಂತ ಹೇಳಿ ಹೊರಬಂದೆ.
ಕಾಲೇಜ್ ಕ್ಯಾಂಟೀನ್ ಬಳಿ ಅಮಿತ್,ನಿಖಿಲ್ ಗ್ಯಾಂಗ್ ಮರುದಿನದ ಪ್ರೊಗ್ರಾಮ್ ಹಾಳುಮಾಡಲು ಬಲೆ ಹಣೀತಿದ್ರು ಅಂತ ಕಾಣುತ್ತೆ.ನನ್ನ ಕಂಡವರೇ ಮುಖ ತಿರುಗಿಸಿದ್ರು.ಕರೆದು ಅವರಿಬ್ಬರನ್ನೂ ಕಾರು ಹತ್ತಿಸಿಕೊಂಡೆ.ಮಧು ಬನ ಹೋಟೇಲ್ ಗೆ ಹೋದೆವು.ಫ್ಯಾಮಿಲಿಗೆ ರೂಮಿಗೆ ಹೋಗಿ ಕುಳಿತು ಕೊಂಡು ಕಾಫಿ ಆರ್ಡರ್ ಮಾಡಿ ಇಬ್ಬರನ್ನೂ ಕೇಳಿದೆ.ಇದು ಯಾವ ರೂಮು ಗೊತ್ತಾ ಅಂತ.’ಫ್ಯಾಮಿಲಿ ರೂಮು ಸರ’ ಅಂದರು.
"ಟೀಚರ್ಸ್,ಸ್ಟೂಡೆಂಟ್ಸ್ ಅಂದ್ರೆ ಫ್ಯಾಮಿಲಿ ಮೆಂಬರ್ಸ್ ಇದ್ದ ಹಾಗೆ,ಫ್ಯಾಮಿಲಿಯಲ್ಲಿ ಯಾರೇ ತಪ್ಪು ಮಾಡಿದ್ರೂ ಕೆಟ್ಟ ಹೆಸರು ಇಡೀ ಫ್ಯಾಮಿಲಿಗೆ ,ಅಲ್ವಾ"
ಇಬ್ರೂ ತಲೆ ತಗ್ಗಿಸಿ ಕುಳಿತಿದ್ರು.ನಾನು ಏನು ಹೆಳ್ತಾ ಇದೀನಿ ಅನ್ನೋ ವಿಷಯ ಅವರಿಗೆ ಅರಿವಾಗಿತ್ತು.
"ಅಲ್ಲಾ..ರ್‍ಯಾಂಕ್ ಪಡೆದು ಪತ್ರಿಕೇಲಿ ಸುದ್ದಿ ಮಾಡಬಹುದಿತ್ತಲ್ರೋ.ಇಬ್ರೂ ಬಡಿದಾಡಿಕೊಂಡು ಮುಖಪುಟದಲ್ಲಿ ಮಿಂಚಿಬಿಟ್ಟಿರಲ್ಲೋ,ಏನು ಸಿಗ್ತು ನಿಮಗೆ ?,ಈಗ ಫಂಕ್ಷನ್ ಹಾಳುಮಾಡೋಕೆ ಹೊರಟಿದಿರಲ್ಲಾ,ಇದೇನಾ ’ವಿದ್ಯಾರ್ಥಿ ಶಕ್ತಿ’ ?.ನಿಮ್ಮ ಪವರ್ನೆಲ್ಲಾ ಇದಕ್ಕೆ ವೇಸ್ಟ್ ಮಾಡ್ತಿದಿರಲ್ಲಾ.ಈ ಯುವಶಕ್ತಿಯನ್ನ ಸರಿಯಾದ ಚಾನೆಲ್ ನಲ್ಲಿ ಹರಿಬಿಡ್ರೋ.ಭಾವಿ ಎಂಜಿನಿಯರಗಳಾದ ನೀವು ರಾಷ್ಟ್ರ ಕಟ್ಟೊ ಒಳ್ಳೆ ದೃಷ್ಠಿಕೋನ ಇಟ್ಟುಕೊಳ್ಳಿ.ನಿಖಿಲ್ ನಾಳೆ ಕಾರ್ಯಕ್ರಮ ನಿರ್ವಹಣೆ ನಿನ್ನದು.ಅಮಿತ್,ನೀನು ವಂದನಾರ್ಪಣೆ ಮಾಡಬೇಕು, ತಿಳೀತಾ?,
ನಿಮ್ಮ ಮೇಲೆ ನಂಬಿಕೆ ಇದೆ".ಅವರಿಬ್ಬರ ಬೆನ್ನನ್ನೂ ಹಿತವಾಗಿ ಸ್ಪರ್ಶಿಸಿ ಬೀಳ್ಕೊಟ್ಟೆ.
* * * *
ಇಡೀ ಕಾಲೇಜೇ ಸಡಗರದಿಂದ ಇವತ್ತು ಸಿದ್ಧವಾಗಿತ್ತು.ಇದರ ಹಿಂದೆ ಕೇವಲ ವಿದ್ಯಾರ್ಥಿ ಸಂಘದ ಸದಸ್ಯರಲ್ಲದೆ ಇಡೀ ವಿದ್ಯಾರ್ಥಿ ಸಮೂಹದ ಪರಿಶ್ರಮ ಎದ್ದುಕಾಣುತ್ತಿತ್ತು.ಸಮಾರಂಭ ಅದ್ದೂರಿಯಾಗಿ ,ಶಿಸ್ತಿನಿಂದ ನಡೆದು ಕೊನೆಯ ಹಂತ ಮುಟ್ಟಿತು.ನಿಖಿಲ್ ಸುಂದರವಾಗಿ ಕಾರ್ಯಕ್ರಮ ನಿರ್ವಹಿಸಿದ್ದ.ಕೊನೆಯ ಸರದಿ ಅಮಿತ್ ನದು.ಎಲ್ಲರಿಗೂ ವಂದನೆ ಹೇಳಿ ಕೊನೆಗೆ " ಇದು ವಿದ್ಯಾರ್ಥಿ ಸಂಘದ ಉದ್ಘಾಟನೆ ಮಾತ್ರ,ವಾರ್ಷಿಕೋತ್ಸವ ಇದಕ್ಕಿಂತ ಗ್ರ್ಯಾಂಡಾಗಿರುತ್ತೆ." ಆವೇಶದಿಂದ ಹೇಳಿದ್ದ.
ಆಗಲೇ ಸಭಿಕರ ಮಧ್ಯದಿಂದ ಧ್ವನಿಯೊಂದು ತೂರಿಬಂತು.
"ಸ್ಟೂಡೆಂಟ್ಸ್ ಪವರ್"......."ನೇಷನ್ಸ್ ಪವರ್,,,"ಒಕ್ಕೊರಲಿಂದ ಬಂದ ಧ್ವನಿ ಸಭಾಭವನದ ತುಂಬೆಲ್ಲ ಮಾರ್ದನಿಸಿತ್ತು.
ಅಮಿತ್,ನಿಖಿಲ್,ದೀಪಾರ ಕಣ್ಣುಗಳಲ್ಲಿ ಅದೇನೋ ಹೊಳಪಿತ್ತು,ಆನಂದ ಭಾಷ್ಪವಿತ್ತು,ಪ್ರತಿಯೊಬ್ಬರ ಕಣ್ಣುಗಳಲ್ಲಿ ಕೂಡಾ...
= = =
..ಮುಂದುವರೆಯುವುದು..
-ಡಾ.ಅಜಿತ್ ಹರೀಶಿ.