ವಿದ್ಯಮಾನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಿದ್ಯಮಾನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಅಕ್ಟೋಬರ್ 24, 2017

ನಮ್ಮ ಧರ್ಮ ನಮಗೆ-ನಿಮ್ಮ ಧರ್ಮ ನಿಮಗೆ

*"ಮತಿಗೆಟ್ಟವರ ಗತಿಕೇಡು"*
✍🏻 *ಎಂ.ಯು*
( ಹಿನ್ನಲೆ: ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾಂಸಾಹಾರ ಸೇವಿಸಿ ದೇವಸ್ಥಾನ ಪ್ರವೇಶಿಸಿದ್ದರಿಂದ ದೇವಸ್ಥಾನ ಅಪವಿತ್ರವಾಯಿತೆಂಬ ಕೂಗು ಎದ್ದ ವಿಚಾರ ಹಾಗೂ ಅಲ್ಲಿ ಆಡಳಿತಾಧಿಕಾರಿ ಮಾಂಸಾಹಾರ ಸೇವಿಸಿ ದೇವಸ್ಥಾನ ಪ್ರವೇಶಿಸಬಾರದೆಂಬ ನಿಯಮವೇನೂ ಪ್ರಸ್ತುತ ದೇವಸ್ಥಾನದಲ್ಲಿ ಇಲ್ಲ. ಎಂಬ ಸ್ಪಷ್ಟೀಕರಣ ನೀಡಿರುತ್ತಾರೆ.)
ಈ ವಿಚಾರವಾಗಿ ವಿವಾದವೆಬ್ಬಿಸುತ್ತಾ
*ಸಿದ್ಧರಾಮಯ್ಯ* ರವರು ಹಂದಿ ತಿಂದು ಮಸ್ಜಿದ್'ಗೆ ಹೋಗಲಿ. ಎಂದು ಸವಾಲು ಹಾಕುತ್ತಾ ಕೆಲವು ಕೂಪಮಂಡೂಕಗಳು ವಟಗುಟ್ಟುತ್ತಾ ತಾವು ಅಜ್ಞಾನಿಗಳೆಂಬುವುದನ್ನು ಸಾಬೀತು ಪಡಿಸುತ್ತಿರುವುದು ಸಂತಸದ ವಿಚಾರವೇ ಸರಿ.😄
*ಮುಖ್ಯಮಂತ್ರಿ ಸಿದ್ಧರಾಮಯ್ಯ
ಏನುತಿನ್ಬೇಕು ; ಎಲ್ಲಿಗೆ ಹೋಗ್ಬೇಕು ಎಂದು ತೀರ್ಮಾನಿಸಲು ನೀವು ಯಾರು?

*ಈ ವಿಚಾರದಲ್ಲಿ ಇಸ್ಲಾಮನ್ನು ಏಕೆ ನಡುವೆ ಎಳೆದು ತರ್ತೀರಿ?
ಸಿದ್ಧರಾಮಯ್ಯರೂ ಹಿಂದೂ ಧರ್ಮೀಯರೇ ಆಗಿದ್ದಾರೆ ಹಾಗೂ ಅವರು ಮಾಂಸಾಹಾರ ಸೇವಿಸಿ ಪ್ರವೇಶಿಸಿದ ದೇವಾಲಯವೂ ಹಿಂದೂಗಳದ್ದೇ ಆಗಿದೆ. ಇಲ್ಲಿ ಮಸ್ಜಿದ್ ಹಾಗೂ ಹಂದಿ ಯಾಕೆ ಬಂತು? ನಿಮ್ಮ ಧರ್ಮದ ವಿಚಾರದಲ್ಲಿ ಇತರರನ್ನೇಕೆ ಎಳೆದು ತರ್ತಿದ್ದೀರಾ?
ಅಷ್ಟಕ್ಕೂ *"ಗೋಕುಲಾಷ್ಟಮಿಗೂ  ಮಕ್ಬೂಲ್ ಸಾಬರಿಗೂ ಏನು ಸಂಬಂಧ?"* ನಿಮ್ಮ ಧರ್ಮದ ನಿಯಮಗಳನ್ನು ಪ್ರತಿಪಾದಿಸಲು ಇಸ್ಲಾಮಿನ ಸಹಾಯವನ್ನು ಪಡೆಯುತ್ತಿದ್ದೀರಲ್ಲಾ.. ಅಷ್ಟಕ್ಕೂ ಆಧಾರಗಳಿಲ್ಲದ ಧರ್ಮ ನಿಮ್ಮದೆಂದು ಸ್ವತಃ  ಒಪ್ಪಿಕೊಂಡಂತಲ್ಲವೇ?
ಮುಸ್ಲಿಮರು ಅವರ ಧರ್ಮದಲ್ಲಿ ಒಪ್ಪಿಕೊಂಡವುಗಳನ್ನು ನೀವು ಒಪ್ಪಿಕೊಳ್ಳುವಿರಾ?
ನಿಮ್ಮ ಧರ್ಮದ ನಿಯಮಗಳನ್ನು ಪ್ರತಿಪಾದಿಸಲು ನಿಮ್ಮ ಧರ್ಮದ ಆಧಾರ ಗ್ರಂಥಗಳನ್ನು ಬಳಸಿ ಸಮರ್ಥಿಸಿ. ಅದನ್ನ ಬಿಟ್ಟು ಹಂದಿ ತಿಂದರೆ ಅವರು ಒಪ್ಪಿಕೊಳ್ತಾರಾ; ಇವರು ಒಪ್ಪಿಕೊಳ್ತಾರ ಎಂಬ ಉಸಾಬರಿ ನಿಮಗೇಕೆ?

*ಇಸ್ಲಾಮ್ ಹಂದಿ ತಿನ್ನುವುದನ್ನು ನಿಷೇಧಿಸಿದೆ; ಹಂದಿ ತಿನ್ನುವವರನ್ನು ಅಸ್ಪೃಶ್ಯರಂತೆ ಕಂಡು ದೂರವಿಡಬೇಕು. ಅವರು ಮನೆ ಆರಾಧನಾಲಯಗಳಿಗೆ ಬಂದ್ರೆ ಮೈಲಿಗೆಯಾಗುತ್ತದೆ ಎಂದು ಎಲ್ಲೂ ಹೇಳಿಲ್ಲ.

*ಮುಸ್ಲಿಮರ ಧಾರ್ಮಿಕ ಕೇಂದ್ರಗಳಾದ ದರ್ಗಾ,
ಮಸ್ಜಿದ್'ಗಳಿಗೆ ಅದೆಷ್ಟೋ ಮುಸ್ಲಿಮೇತರರು ಬರುತ್ತಾರೆ. ಅಲ್ಲಿ ಬಂದಾಗ ಮನುಷ್ಯನಿಗೆ ಯಾವರೀತಿಯ ಆದರ ಗೌರವಗಳು ಸಲ್ಲಬೇಕೋ ಅವುಗಳನ್ನು ನೀಡಲಾಗುತ್ತದೆ.  ಅವರು ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಂಡರೆ ಅವುಗಳ ನಿವಾರಣೆಗಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.
*ಬಂದವರೊಂದಿಗೆ ನೀನು ಹಂದಿ,ಕುರಿ,ದನ,ಕೋಳಿ,ಮೀನು ತಿಂದು ಬಂದಿರುವೆಯಾ? ಎಂದು ಪ್ರಶ್ನಿಸಿ ಪ್ರವೇಶ ನಿರಾಕರಿಸುವುದಿಲ್ಲ.
ಬಂದವರಿಗೆ ಬಾಯಾರಿಕೆ ಹಾಗೂ ಹಸಿದು ಬಂದವರ ಹಸಿವು ತಣಿಸುವ ಕಾರ್ಯ ನಡೆಯುತ್ತದೆ.
ಬಂದ ಅತಿಥಿಗಳೊಂದಿಗೆ ಏನು ತಿಂದು ಬಂದಿರಿ? ಎಂದು ಪ್ರಶ್ನಿಸಿ ನಿರಾಕರಿಸುವುದು ಮಾನವ ಸಂಸ್ಕೃತಿಯಂತೂ ಅಲ್ಲ.
ಬಂದವರನ್ನು ಮಾನವರಾಗಿ ಕಂಡು ಅವರ ದಾಹ ತಣಿಸುವುದು ಹಾಗೂ ಹಸಿದವರ ಆಹಾರ ನೀಡುವುದು ಮಾನವ ಸಂಸ್ಕೃತಿ.
ಏನು ತಿಂದು ಬಂದಿರಿ? ಎಂದು ಕೇಳುವ ಬದಲು ಬಂದವರೊಂದಿಗೆ ಏನು ತಿನ್ನುವಿರಿ? ಎಂದು ಆದರದಿಂದ ಕೇಳುವುದಾಗಿದೆ ಮಾನವೀಯತೆ.

*ಈವರೆಗೂ ಹಲವಾರು ರಾಜಕಾರಣಿಗಳು ಮಸೀದಿ, ದರ್ಗಾಗಳಿಗೆ ಭೇಟಿ ನೀಡಿದಾಗ ಯಾರಲ್ಲೂ *ನೀವು ಹಂದಿ ತಿಂದು ಬಂದಿರಾ? ಎಂದು ಪ್ರಶ್ನಿಸಿ ಪ್ರವೇಶ ನಿರಾಕರಿಸಿದ ಒಂದೇ ಒಂದು ನಿದರ್ಶನ ತೋರಿಸಲು ನಿಮಗೆ ಸಾಧ್ಯವಿಲ್ಲ.*

ಎಲ್ಲದಕ್ಕೂ ಇಸ್ಲಾಮನ್ನು ಎಳೆದು ತರ್ತೀರಲ್ಲಾ? ನಿಮಗೊಂದು ಸವಾಲು.

*ನಾವು ದರ್ಗಾ,ಮಸ್ಜಿದ್'ಗಳಿಗೆ ಮುಸ್ಲಿಮೇತರರು ಭೇಟಿ ಕೊಟ್ಟರೆ (ಅವರು ಹಂದಿ ತಿಂದು ಬಂದಿದ್ದರೂ) ಅವರಿಗೆ ಪ್ರವೇಶ ನಿರಾಕರಿಸಲ್ಲ.
ನಾವು ಅವರೇನು ತಿಂದು ಬಂದಿದ್ದಾರೆ ಎಂದು ಪ್ರಶ್ನಿಸುವುದೇ ಇಲ್ಲ.ಇನ್ನು ಪ್ರವೇಶ  ನಿರಾಕರಣೆಯ ವಿಚಾರ ಅಲ್ಲಿ ಇಲ್ಲವೇ ಇಲ್ಲ. ಅವರಿಗೆ ಮಾನವನಿಗೆ ಸಲ್ಲಬೇಕಾದ ಗೌರವಾದರಗಳು ನೀಡುತ್ತೇವೆ. ಹಂದಿ ತಿನ್ನುವವರು ಎಂಬ ಕಾರಣಕ್ಕೆ ಮೈಲಿಗೆಯಾಗುತ್ತದೆಂದು ಪ್ರವೇಶ ನಿರಾಕರಿಸಲ್ಲ. ಕುರ್-ಆನ್ ನಮಗೆ *"ಮನುಕುಲವನ್ನು ಗೌರವಿಸಿ."* ಎಂದು ಕಲಿಸಿದ್ದನ್ನು ನಾವು ಪಾಲಿಸ್ತೇವೆ. ನೀವು ಇತರ ಧರ್ಮೀರಿಗೆ ದೇವಾಲಯಗಳಲ್ಲಿ ಹಾಗೆ ಪ್ರವೇಶ ನೀಡಲು ಸಿದ್ಧರಿದ್ದೀರಾ?
ಇತರ ಧರ್ಮೀಯರು ಬಿಡಿ; ನೀವು *ನಾವೆಲ್ಲಾ ಹಿಂದೂ- ನಾವೆಲ್ಲ ಒಂದು* ಎಂದು ಘೋಷಿಸಿರುವ ವ್ಯಾಪ್ತಿಯೊಳಗೆ ಬರುವ ಹಿಂದುಳಿದವರು, ದಲಿತರು, ನೀವು ಅಸ್ಪೃಶ್ಯರೆಂದು ಪರಿಗಣಿಸಿದ ಹಿಂದೂಗಳಿಗಾದ್ರೂ ಮುಕ್ತ ಅವಕಾಶ ನೀಡಲು ಸಿದ್ಧರಿದ್ದೀರಾ?
ಇವರಿಗೆಲ್ಲಾ ಕೊನೆಯ ಪಕ್ಷ ಮಾನವನಿಗೆ ಸಲ್ಲಬೇಕಾದ ಆದರವನ್ನಾದರೂ ನೀಡ್ತೀರಾ? ಹೀಗೆ ಮಾಡುವ ಮೂಲಕ *"ವಸುದೈವ ಕುಟುಂಬಕಂ."* ಎಂಬುವುದನ್ನು ಪಾಲಿಸಲು ಸಿದ್ಧರಿದ್ದೀರಾ?

ಎಲ್ಲಕ್ಕೂ ಇಸ್ಲಾಮಿನ ವಿಧಿ-ವಿಧಾನಗಳನ್ನು ಎಳೆದು ತಂದು ಅವುಗಳನ್ನು ದುರ್ವ್ಯಾಖ್ಯಾನ ಮಾಡಿ ರಾಡಿಯೆಬ್ಬಿಸ್ತೀರಲ್ಲ??

*ಮುಸ್ಲಿಮರು ತಮ್ಮ ಧಾರ್ಮಿಕ ಕೇಂದ್ರಗಳಾದ ದರ್ಗಾ, ಮಸ್ಜಿದ್'ಗಳಲ್ಲಿ ಇಸ್ಲಾಮ್ ಅನುವದನೀಯಗೊಳಿಸಿದ ಪ್ರಾಣಿಗಳ ಮಾಂಸದೂಟದ ಪ್ರಸಾದವನ್ನು ನೀಡ್ತಾರೆ.
ನಿಮ್ಮ ದೇವಾಲಯಗಳಲ್ಲಿ ನಿಮಗೆ ತಿನ್ನಲು ಅನುವದನೀಯವಾದ ಪ್ರಾಣಿಗಳ ಮಾಂಸದೂಟವನ್ನು ಪ್ರಸಾದವಾಗಿ ನೀಡಲು ಸಿದ್ಧರಿದ್ದೀರಾ??

#ನಮ್ಮ ಧಾರ್ಮಿಕ ಕೇಂದ್ರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ಎಲ್ಲರೂ           *ಒಂದೇ ಲೋಟದಲ್ಲಿ ತುಟಿಹಚ್ಚಿ* ನೀರು ಕುಡಿಯುತ್ತೇವೆ.
ನಿಮ್ಮ ದೇವಾಲಯಗಳಲ್ಲಿ ಎಲ್ಲಾ ಜಾತಿಯ ಹಿಂದೂಗಳು ಕೂಡಾ ಒಂದೇ ಲೋಟದಲ್ಲಿ ತುಟಿಹಚ್ಚಿ ನೀರು ಕುಡಿಯುವ ವ್ಯವಸ್ಥೆಯನ್ನು ಒಪ್ಪಿಕೊಳ್ಳುವಿರಾ?

#ನಮ್ಮ ಮಸ್ಜಿದ್'ಗಳಲ್ಲಿ ಮುಸ್ಲಿಮರು ಬಡವ-ಶ್ರೀಮಂತ ಕರಿಯ-ಬಿಳಿಯ ಹಾಗೂ ವೃತ್ತಿಯಾಧಾರಿತ ಯಾವುದೇ ತಾರತಮ್ಯವಿಲ್ಲದೆ ಭುಜಕ್ಕೆ ಭುಜ ಸೇರಿಸಿ ಸಾಲಾಗಿ ನಿಂತು ಪ್ರಾರ್ಥನೆ ಮಾಡ್ತೇವೆ.
ಪ್ರಾರ್ಥನೆಯಲ್ಲಿ ನಿರ್ದಿಷ್ಟ ವರ್ಗದವರಿಗೆ ವಿಶೇಷ ಪರಿಗಣನೆಯೆಂಬುವುದಿಲ್ಲ. ಒಬ್ಬ ಕೂಲಿಕೆಲಸದವ ಮೊದಲು ಬಂದಿದ್ದರೆ ಅವನು ಪ್ರಾರ್ಥನೆಗೆ ಮೊದಲ ಸಾಲಲ್ಲಿ ನಿಂತದ್ರೂ ಮೊದಲ ಸಾಲು ಪೂರ್ಣಗೊಂಡ ಬಳಿಕ ಎಷ್ಟೇ ದೊಡ್ಡ ಗಣ್ಯ, ಮಂತ್ರಿ ಬಂದರೂ ಅವನು ಹಿಂದೇನೇ ನಿಲ್ಲಬೇಕು.
ನಿಮ್ಮ ದೇವಾಲಯಗಳ ಪ್ರಾರ್ಥನೆಯಲ್ಲಿ ಎಲ್ಲ ಜಾತಿಯವರಿಗೂ ಈರೀತಿಯ ಸಮಾನ ಅವಕಾಶ ನೀಡುವಿರಾ?

ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ *"ಇಲ್ಲ".* ಎಂದಾಗಿದ್ದರೆ; ನಿಮ್ಮ ಧರ್ಮದ ಸಮಸ್ಯೆಗಳಿಗೆ ಇತರ ಧರ್ಮಗಳ ಕಡೆ ಕೈತೋರಿಸಿ ವಿವಾದವೆಬ್ಬಿಸುವ ಕೆಲಸವನ್ನು ಮಾಡಬೇಡಿ. ನಿಮ್ಮ ಧರ್ಮದ ನಿಯಮಗಳನ್ನು ನೀವು ಪಾಲಿಸಿ. ನಮ್ಮ ಧರ್ಮದ ನಿಯಮಗಳನ್ನು ನಾವು ಪಾಲಿಸ್ತೇವೆ.
*"ನಮ್ಮ ಧರ್ಮ ನಮಗೆ-ನಿಮ್ಮ ಧರ್ಮ ನಿಮಗೆ."*

(ಸೂಚನೆ: ಈ ಲೇಖನವು ಹಿಂದೂಗಳ ಭಾವನೆಗಳನ್ನು ವಿರೋಧಿಸಲು ಬರೆದುದಲ್ಲ. ಇಸ್ಲಾಮ್ ಇತರರ ಭಾವನೆಗಳನ್ನು ಅವಹೇಳಿಸುವುದನ್ನು ವಿರೋಧಿಸುತ್ತದೆ. ಮೇಲಿನ ವಿಚಾರದಲ್ಲಿ ಅನವಶ್ಯಕವಾಗಿ ಇಸ್ಲಾಮನ್ನು ಎಳೆದು ತಂದುದಕ್ಕಾಗಿ ಪ್ರತಿಕ್ರಿಯೆ ನೀಡಲು ಬರೆದುದಾಗಿದೆ.)

ಶುಕ್ರವಾರ, ಅಕ್ಟೋಬರ್ 6, 2017

ಮೋದಿ ನೀವು ಹೀಗೇಕೆ…?

ಬರೆದವರು ಯಾರು ಅರಿಯದು,ಆದರೂ ಗಂಭೀರವಾದ ಪ್ರಶ್ನೆಗಳು. .

ಏನೇ ಆದರೂ ಹಗ್ಗ ಜಗ್ಗಾಟದಲ್ಲಿ ಅಪ್ಪಚ್ಚಿಯಾಗಿದ್ದು ಮಾತ್ರ ಜನ ಸಾಮಾನ್ಯ 😑

#ಇಟ್ಟ ಗುರಿ ತಲುಪದ ಮೋದಿಯವರು....

ಮೋದಿ ನೀವು ಹೀಗೇಕೆ…?

1. ನಿಮ್ಮ ಪಕ್ಷ, 23 ಜನವರಿ 2014ರಂದು ಕರೆನ್ಸಿ ನೋಟುಗಳ ಬದಲಾವಣೆಯನ್ನು ಪ್ರಬಲವಾಗಿ ವಿರೋಧಿಸುತ್ತದೆ..

ಆದರೆ,

8ನೇ ನವೆಂಬರ್ 2016 ರಂದು, 500 ಮತ್ತು 1000 ರೂಗಳ ನೋಟುಗಳನ್ನು ನೀವೇ ಅಮಾನ್ಯ ಮಾಡುತ್ತೀರಿ...

2. ನಿಮ್ಮ ಪಕ್ಷ, 2013ರಲ್ಲಿ 1 ಕೇ.ಜಿ ತೊಗರಿ ಬೇಳೆ 85ರೂಗಳಿಗೆ ಮಾರಾಟವಾಗುತ್ತಿದ್ದುದ್ದನ್ನು ಬೆಲೆ ಏರಿಕೆ ಎಂದು ರಾಷ್ಟ್ರಾದ್ಯಂತ ಪ್ರತಿಭಟಿಸುತ್ತದೆ...

ಆದರೆ,

ನಿಮ್ಮ ಅಧಿಕಾರಾವಧಿಯಲ್ಲಿ ತೊಗರಿ ಬೇಳೆ ಕಿಲೋ ಒಂದಕ್ಕೆ ರೂ 150 ರಿಂದ 200ರ ವರೆಗೆ ಮಾರಾಟವಾಗುತ್ತಿದೆ…

3. ನಿಮ್ಮ ಪಕ್ಷ ಗೋ ಹತ್ಯೆಯನ್ನು ವಿರೋಧಿಸುತ್ತದೆ. ಮನಮೋಹನ್ ಸಿಂಗರ ಸಮಯದಲ್ಲಿ ಭಾರತದಿಂದ ವಿದೇಶಕ್ಕೆ ಗೋಮಾಂಸ ರಪ್ತಿನ ಬಗ್ಗೆ "ಎದೆ ಕಿವುಚಿದಂತೆ ಆಗುತ್ತಿದೆ" ಎಂದು ಅತ್ತು ಭಾಷಣ ಮಾಡುತ್ತೀರಿ.

ಆದರೆ,

ನೀವು ಅಧಿಕಾರಕ್ಕೆ ಬರುತ್ತಿದ್ದಂತೆಯೇ, ಭಾರತ  ಗೋ ಮಾಂಸವನ್ನು ರಫ್ತು ಮಾಡುತ್ತಿರುವ ಜಾಗತಿಕ ಮಟ್ಟದಲ್ಲಿ ದಾಖಲೆಪ್ರಮಾಣದಲ್ಲಿ ಏರಿಕೆ ಆಗುತ್ತದೆ
ನಂ.1 ದೇಶವಾಗಿದೆ.

4. ಅಂದು, ಪ್ರಧಾನ ಮಂತ್ರಿಗಳಾಗಿದ್ದ ಮನ ಮೋಹನ್ ಸಿಂಗ್ ಅವರು ವಿದೇಶದಲ್ಲಿ ನವಾಜ್ ಷರೀಫ್ ಅವರೋಂದಿಗೆ ಕೈ ಕುಲುಕಿದಾಗ, ಹಳ್ಳಿ ಹೆಂಗಸು ಎಂದು ಮೂದಲಿಸುತ್ತೀರಿ…

ಅದರೆ,

ನೀವು, ಆಮಂತ್ರಣವಿಲ್ಲದಿದ್ದರೂ ನವಾಜ್ ಶರೀಫರ ಜನ್ಮದಿನದಂದು ‘ಕೋಕ್ ಮತ್ತು ಬಿರಿಯಾನಿ’ಯನ್ನು ತಿನ್ನಲು ಪಾಕಿಸ್ಥಾನವನ್ನು ತಲುಪುತ್ತೀರಿ...

5. 2004 ರಿಂದ 2014ರ ವರೆಗೆ ನಿಮ್ಮ ಪಕ್ಷ, ರೈಲ್ವೆಯು ಟಿಕೆಟ್ ಧರವನ್ನು 1 ರೂ ಹೆಚ್ಚು ಮಾಡಿದರೂ ರೈಲುಗಳನ್ನು ತಡೆದು ಪ್ರತಿಭಟಿಸುತ್ತಿದ್ದಿರಿ...

ಆದರೆ,

ನೀವು ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿ, ರೈಲ್ವೆ ಪ್ರಯಾಣದ ದರಗಳನ್ನು ಶೇ 60 ರಿಂದ 70ರಷ್ಟು ಹೆಚ್ಚಿಸಿರುವಿರಿ…

6. ನಿಮ್ಮ ಪಕ್ಷ 2004 ರಿಂದ 2014ರವರೆಗೆ FDI, GST, AADHAR, MNREGA ಯೋಜನೆಗಳನ್ನು ತೀವ್ರವಾಗಿ ವಿರೋಧಿಸುತ್ತಿದ್ದಿರಿ…

ಆದರೆ,

ನೀವು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಈ ಯೋಜನೆಗಳ ಗುಣಗಾನ ಮಾಡು‌ತ್ತಾ ಅನುಷ್ಠಾನಗೊಳಿಸುತ್ತಿದ್ದೀರಿ…

7. ನಿರ್ಭಯಳ ಮೇಲಿನ ದೌರ್ಜನ್ಯವನ್ನು ಖಂಡಿಸಿ, ನಿಮ್ಮ ಪಕ್ಷ 3 ತಿಂಗಳುಗಳ ಕಾಲ ಪ್ರತಿಭಟನೆಯನ್ನು ಹಮ್ಮಿಕೊಂಡಿ‌ತ್ತು...

ಆದರೆ,

ಇಂದು ಬಿಜೆಪಿ ಆಡಳಿತವಿರುವ ಉತ್ತರಪ್ರದೇಶದಲ್ಲಿ ಎರಡೇ ತಿಂಗಳಲ್ಲಿ ನೂರಾರು, ಮಧ್ಯ ಪ್ರದೇಶದಲ್ಲಿ ದಿನಕ್ಕೆ 12 ಮತ್ತು ದಿಲ್ಲಿಯಲ್ಲಿ ದಿನಕ್ಕೆ 7 ಅತ್ಯಾಚಾರ ಪ್ರಕರಣಗಳು ನಡೆಯತ್ತಿವೆ, ಅವುಗಳು ನಿಮ್ಮ ಕಣ್ಣು, ಕಿವಿಗೆ ಬೀಳುತ್ತಿಲ್ಲ…

8. ಯು ಪಿ ಎ ಸರ್ಕಾರವು ಅಂತಾರಾಷ್ಟ್ರೀಯ ಮಾರುಕಟ್ಟಯಲ್ಲಿ ಪೆಟ್ರೋಲಿಯಂ ಕಚ್ಛಾತೈಲವನ್ನು ಬ್ಯಾರಲ್ ಒಂದಕ್ಕೆ 125 ರಿಂದ 140 ಡಾಲರ್ ನಂತೆ ಖರೀಧಿಸಿ  ಸ್ಥಳೀಯವಾಗಿ ಲೀಟರ್ 1 ಕ್ಕೆ 70 ರಿಂದ 75 ರೂಗಳಿಗೆ ದೊರಕಿಸುತ್ತಿತ್ತು. ಈ ದರಗಳನ್ನೂ ವಿರೋಧಿಸಿ ನಿಮ್ಮ ಪಕ್ಷ ಎತ್ತಿನ ಗಾಡಿಗಳ ಮೆರವಣಿಗೆಯನ್ನು ಮಾಡಿ ಪ್ರತಿಭಟಿಸಿತ್ತು...

ಅದರೆ,

ಈಗ ನಿಮ್ಮ ಆಡಳಿತಾವಧಿಯಲ್ಲಿ ಕಚ್ಛಾತೈಲ ಬ್ಯಾರಲ್ ಒಂದಕ್ಕೆ 50 ರಿಂದ 60 ಡಾಲರ್ಗಳಿಗೆ ದೊರೆಯುತ್ತಿದ್ದು, ಸ್ಥಳೀಯವಾಗಿ 1 ಲೀಟರ್ ಪೆಟ್ರೋಲ್ಅನ್ನು 70 ರೂಗಳಿಗೆ ಮಾರಾಟ ಮಾಡುತ್ತಿದ್ದೀರಿ...

9. ನಿಮ್ಮ ಪಕ್ಷದ ರಾಷ್ಟ್ರೀಯ ನಾಯಕರಾದ ಬಂಗಾರು ಲಕ್ಷ್ಮಣ್ ಅವರು ಭ್ರಷ್ಟಾಚಾರದಲ್ಲಿ ಸಾಕ್ಷ್ಯಾಧಾರಗಳ ಸಹಿತ ಸಿಕ್ಕಿಬಿದ್ದಿರುತ್ತಾರೆ. ಆದರೂ,

ನಿಮ್ಮ ಪಕ್ಷವನ್ನು ಅತ್ಯಂತ ಪ್ರಾಮಾಣಿಕ ಪಕ್ಷವೆನ್ನುತ್ತೀರಿ…

10. ನಿಮ್ಮ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಅವರ ಆಡಳಿತದಲ್ಲಿ ವ್ಯಾಪಂ ಹಗರಣ, ವಸುಂದರರಾಜೆ ಹಾಗೂ ಲಲಿತ್ ಮೋದಿಯವರ ಹಗರಣ, ರಮಣ ಸಿಂಗ್ ಅವರ 34000 ಕೋಟಿ ಅನ್ನ ವಿತರಣಾ ಹಗರಣ ಸಂಭವಿಸಿದೆ...

ಆದರೂ,

ನೀವು ನಿಮ್ಮ ಪಕ್ಷದ ಮುಖ್ಯ ಮಂತ್ರಿಯವರ ರಾಜೀನಾಮೆಯನ್ನು ಕೇಳುವುದಿಲ್ಲ. ಆದರೆ, ಇತರ ಪಕ್ಷಗಳ ಆಡಳಿತದಲ್ಲಿ ದಿನಂಪ್ರತಿ ಒಬ್ಬರಲ್ಲ ಒಬ್ಬರ ರಾಜೀನಾಮೆಗೆ ಆಗ್ರಹಿಸುತ್ತೀರಿ...

11. ಪ್ರತಿದಿನ ನೀವು 18 ಗಂಟೆಗಳ ಕಾಲ ಕೆಲಸ ಮಾಡುತ್ತೀರೆಂದು ನಿಮ್ಮ ಭಕ್ತರು ಕೊಂಡಾಡುತ್ತಾರೆ...

ಆದರೆ,

ನಿಮ್ಮ ಅಧಿಕಾರಾವಧಿಯ ಕಳೆದ ಮೂರು ವರ್ಷಗಳಲ್ಲಿ ನಿಮ್ಮಿಂದ ಯಾವ ವಿಕಾಸವಾಗಿದೆ ಎನ್ನುವುದು ಕಾಣುತ್ತಿಲ್ಲ.!

12. ನೀವು ಕೇವಲ 100 ದಿನಗಳಲ್ಲಿ ವಿದೇಶದಲ್ಲಿರುವ ಕಪ್ಪು ಹಣವನ್ನೆಲ್ಲಾ ತರುತ್ತೇನೆ ಎಂದು ಮಾತು ಕೊಟ್ಟಿದ್ದಿರಿ...

ಆದರೆ,

1000 ದಿನಗಳು ಕಳೆದರೂ ವಿದೇಶಿ ಬ್ಯಾಂಕುಗಳಲ್ಲಿರುವ ಕಪ್ಪು ಹಣವನ್ನು ತರಲಾಗಲಿಲ್ಲ..

13. ನೀವು ರೈತರ ಉತ್ಪಾದನಾ ವೆಚ್ಛದ ಕನಿಷ್ಠ  ಶೇ 50 ರಷ್ಟು ಲಾಭವನ್ನು ನೀಡುತ್ತೇನೆಂದು ವಚನ ನೀಡಿದ್ದಿರಿ...

ಆದರೆ,

ಕಳೆದ ಮೂರು ವರ್ಷಗಳಲ್ಲಿ ಸರ್ಕಾರದಿಂದ ರೈತರಿಗೆ ಅವರ ಉತ್ಪಾದನಾ ವೆಚ್ಛದ ಒಂದು ರೂಪಾಯಿಯನ್ನೂ ನೀಡಲಿಲ್ಲ.

14. ನೀವು, ಹುತಾತ್ಮನಾಗುವ ಒಬ್ಬ ಭಾರತೀಯ ಯೋಧನ ತಲೆಯ ಬದಲಿಗೆ 10 ಪಾಕೀಸ್ತಾನಿ ಯೋಧರ ತಲೆಗಳನ್ನು ತರುತ್ತೇನೆಂದು ಜಂಬ ಕೊಚ್ಚಿಕೊಂಡಿದ್ದಿರಿ...

ಆದರೆ,

ವರ್ಷಗಳೇ ಕಳೆದರೂ ಒಂದರ ಬದಲಿಗೆ ಆರ್ಧ ತಲೆಯನ್ನೂ ತರಲಿಲ್ಲ.

15. ನಿಮ್ಮ ಪಕ್ಷ ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರಗಳ ಬಗ್ಗೆ ಬಹಳ ಮಾತನಾಡುತ್ತದೆ...

ಆದರೆ,

ನಿಮ್ಮ ಪಕ್ಷದ ಕಾರ್ಯಕರ್ತರು, ಮಂತ್ರಿಗಳು ಮತ್ತು ಭಕ್ತರು ಮಾತ್ರ....ಮಾತೃ ಮತ್ತು ಸಹೋದರಿಯರನ್ನು ಕುರಿತು ಬೈಯ್ಯದೆ ದಿನ ಕಳೆಯಲಾರರು.

16. ಕಡ್ಲೆ ಹಿಟ್ಟಿನ ಬೆಲೆ ಕೇಜಿಗೆ 60 ರೂಪಾಯಿಗಳಿದ್ದಾಗ ನಿಮ್ಮ ಬಿಜೆಪಿ ಕಾರ್ಯಕರ್ತರು ಕೈ ತಟ್ಟುವ ಆಂದೋಲನವನ್ನು ಹಮ್ಮಿಕೊಂಡಿದ್ದರು...

ಆದರೆ,

ಇಂದು ಕಿಲೋ ಒಂದಕ್ಕೆ 250 ರಂತೆ ಕೊಳ್ಳುವಂತಾಗಿದೆ. ಈಗ ಏನನ್ನು ತಟ್ಟುತ್ತೀರಿ…?

17. ನಿಮ್ಮ ಪಕ್ಷ ಸೇವಾತೆರಿಗೆ ವಿಧಿಸುವುದನ್ನು ಕಟುವಾಗಿ ವಿರೋಧಿಸುತ್ತಿತ್ತು...

ಆದರೆ,

ನೀವು ಅಧಿಕಾರವನ್ನು ಹಿಡಿದಾಕ್ಷಣ 2.5% ಸೇವಾ ತೆರಿಗೆಯನ್ನು ಹೆಚ್ಚಿಸಿದಿರಿ.

ಏಕೆ ಮೋದಿಯವರೆ ಏಕೆ…? ಜನತೆಯ ಸಂಯಮವನ್ನು ಪರೀಕ್ಷಿಸ ಬೇಡಿ…!

18. ನೀವು ಕಪ್ಪು ಹಣದ ಬಗ್ಗೆ ಉದ್ದುದ್ದ ಮಾತನಾಡುತ್ತೀರಿ...

ಆದರೆ,

ನಿಮ್ಮ ಚುನಾವಣೆಗೆ ಹನ್ನೊಂದುಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದೀರಿ.

ನಾನು ಕಾಂಗ್ರೇಸ್ ಅಥವಾ ಇನ್ಯಾವುದೇ ಪಕ್ಷಕ್ಕೆ ಸೇರಿದವನಲ್ಲ.

ಆದರೆ,

ಸತ್ಯವನ್ನು ಒಪ್ಪಿಕೊಳ್ಳಲೇ ಬೇಕಲ್ವೆ…?

ಭಾರತ ದೇಶದ ಆಣೆಯಾಗಿಯೂ ಈ ಸಂದೇಶವನ್ನು ಹೆಚ್ಚೆಚ್ಚು ಜನರಿಗೆ ತಲುಪಿ...

(ವಾಟ್ಸಪ್ ನಲ್ಲಿ ದೊರೆತ ಹಿಂದಿ ಬರಹದ ಭಾಷಾಂತರ)

—ಮಾನವ

ಶನಿವಾರ, ಆಗಸ್ಟ್ 19, 2017

ಚಿನ್ನ ಧರಿಸಿ ಹೋಗುವಿರಾ ಜೋಕೆ

ಮದುವೆ ,ಇನ್ನಿತರ ಶುಭ ಕಾರ್ಯಕ್ರಮಗಳಿಗೆ ಬೇರೆಯವರ ಚಿನ್ನ ಧರಿಸಿ ಹೋಗುವಿರಾ ಜೋಕೆ..!!

ಚಿನ್ನ ಧರಿಸದಿದ್ದರೆ ಅದೇನೋ ಹೆಣ್ಣಿಗೆ ಕೊರತೆಯೆನ್ನುವಂತೆ ಚಿನ್ನದ ಮೇಲಿನ ವ್ಯಾಮೋಹ ನವ ತರುಣಿಯರಿಂದ ಹಿಡಿದು ಮುದಿ ವಯಸ್ಸಿನ ಮಹಿಳೆಯರಿಂದಿಗೂ ಬೆಳೆದುಬಿಟ್ಟಿದೆ.
ವ್ಯಾಮೋಹಗಳು ಇರಲೇಬಾರದು ಅಂತಲ್ಲ.
ಕೆಲವರ ಅತಿಯಾದ ವ್ಯಾಮೋಹಗಳು ಹಾಗೂ ಚಿನ್ನ ಧರಿಸದಿದ್ದರೆ ಇನ್ನಿತರರ ಮುಂದೆ ನಾನು ಕೀಳಾಗಿ ಗುರುತಿಸಲ್ಪಡುವನೋ ಅನ್ನುವ ಅಂಜಿಕೆಗಳು ಹಲವು ಅವಾಂತರಗಳನ್ನು ಸೃಷ್ಟಿಸಿಬಿಡುತ್ತದೆ.

ಇಂದು ಬಹುತೇಕ ಮದುವೆ ,ಇನ್ನಿತರ ಶುಭ ಸಮಾರಂಭಗಳು ಮಹಿಳೆಯಂದಿರ ಅಲಂಕಾರದ ವೇದಿಕೆಗಳಾಗಿ ಗುರುತಿಸುವಷ್ಟರ ಮಟ್ಟಿಗೆ ಬದಲಾಗಿನಿಂತಿದೆ.
ಪವನ್ ಗಟ್ಟಲೆ ಚಿನ್ನ ಇರುವಂತಹ ಮಹಿಳೆಯರು ಅದನ್ನು ಪ್ರದರ್ಶನದ ವಸ್ತುಗಳನ್ನಾಗಿ ,ಬಡವರನ್ನು ಅಣಕಿಸುವ ರೀತಿಯಲ್ಲಿ ಪ್ರದರ್ಶಿಸಿ ಮೆರೆದಾಡುವಾಗ ಮಧ್ಯಮ ಹಾಗೂ ಬಡ ಕುಟುಂಬದ ಕೆಲವು ಮಹಿಳೆಯಂದಿರು ತಮ್ಮಲ್ಲಿ ಧರಿಸುವಂತಾಗಲು ಬೇಕಾದಷ್ಟು ಚಿನ್ನ ಇಲ್ಲದಿದ್ದರೂ ತಾನೂ ಸಹ ಅವರಿಗೇನು ಕಡಿಮೆ  ಇಲ್ಲದವರಂತೆ ಯಾರ್ಯಾರದೋ ಚಿನ್ನವನ್ನು ಪಡೆದುಕೊಂಡು ,ಅದನ್ನು ಹಾಕಿಕೊಂಡು ಶುಭ ಸಮಾರಂಭಗಳಲ್ಲಿ ಅದನ್ನು ಪ್ರದರ್ಶಿಸಲ್ಪಡುತ್ತಿದ್ದಾರೆ.

ಮದುವೆ ಇನ್ನಿತರ ಸಮಾರಂಭಗಳಲ್ಲಿ ಒಟ್ಟುಗೂಡಿದ ಮಹಿಳೆಯರು ಗುಂಪಾಗಿ ಮಾತುಗಳಿದರೆ ಅಲ್ಲಿ ಅದೇನು ನಡೆದರೂ ಅವರ ಗಮನಕ್ಕೆ ಬರುವಾಗ  ತುಂಬಾ ಸಮಯ ಕಳೆದುಬಿಡುತ್ತದೆ. ಇದನ್ನೇ ಬಂಡವಳನ್ನಾಗಿಸಿರುವ ಕೆಲವು ಮಹಿಳಾ ಕಳ್ಳಿಯಂದಿರು ಅವರ ಬೆಲೆಬಾಳುವ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ತಮ್ಮ ಕೈ ಚಳಕ ತೋರಿಸುತ್ತಾರೆ.
ಯಾರಿಂದಲೋ ಪಡೆದುಕೊಂಡು ಬಂದ ಚಿನ್ನ ಇನ್ಯಾರದೋ ಕೈ ಸೇರಿದಾಗಾಗಿರುತ್ತದೆ ಬಹುತೇಕ ಮಹಿಳೆಯಂದಿರು ಎಚ್ಚರಗೊಳ್ಳುವುದು. ಇಂತಹ ಹಲವು ಪ್ರಕರಣಗಳು ನಡೆಯುತ್ತಲೇ ಇದೆ.

ಚಿನ್ನ ಅನ್ನುವುದು ಮಹಿಳೆಯರ ಅಭಿಮಾನದ ಪ್ರತೀಕ ಅನ್ನುವಂತೆ ಒಂದು ವರ್ಗ ಇಲ್ಲಿ ತಮ್ಮ ಲಾಭಗಳಿಗೋಸ್ಕರ ಬಿಂಬಿಸಿಬಿಟ್ಟಿದ್ದಾರೆ. ಇನ್ನು ಕೆಲವು ಯುವತಿಯರಿಗೆ ಮದುವೆಯ ಸಂದರ್ಭದಲ್ಲಿ ತನ್ನ ಹೆತ್ತವರು ಹಾಕಿದಂತಹ ಚಿನ್ನಾಭರಣಗಳು ಮದುವೆಯ ಪ್ರಥಮ ವಾರ್ಷಿಕವನ್ನು ಆಚರಿಸುವ ಮುನ್ನವೇ ಯಾವುದೋ ಬ್ಯಾಂಕ್ ಲಾಕರ್ ನೊಳಗೆ ಕೆಲವು ಗಂಡಂದಿರು ಅನಿವಾರ್ಯವಾಗಿಯೋ, ಅನಿವಾರ್ಯತೆಯನ್ನು ಸೃಷ್ಟಿಸಿಯೋ ಅಡವಿಟ್ಟಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ಅವರ ಕುಟುಂಬದಲ್ಲಿ ನಡೆಯುವ ಶುಭ ಕಾರ್ಯಗಳಿಗೆ ಇನ್ಯಾರದೋ ಚಿನ್ನವನ್ನು ಪಡೆದುಕೊಂಡು ಹೋಗಬೇಕಾದ ಪರಿಸ್ಥಿತಿಗಳು ಉದ್ಭವವಾಗುತ್ತಿದೆ.
ಬಹುತೇಕ ಮಹಿಳೆಯರಿಗೆ ತನ್ನ ಚಿನ್ನವನ್ನು ಇನ್ನೊಬ್ಬರಿಗೆ ನೀಡಲು ಇಷ್ಟವಿಲ್ಲದಿದ್ದರೂ , ಅನಿವಾರ್ಯತೆಗೆ ಒಗ್ಗಿಕೊಂಡು ಒಲ್ಲದ ಮನಸ್ಸಿನಿಂದ ಕೊಡುತ್ತಾರೆ.
ಇನ್ನು ಕೆಲವು ಸಂದರ್ಭಗಳಲ್ಲಿ ಇಂತಹ ವಿಷಯಗಳು ಸಂಬಂಧಳ ನಡುವೆ ಕಂದಕ ಸೃಷ್ಟಿಯಾಗಲು ಕಾರಣಗಳಾಗುತ್ತಿದೆ.
ನಂಬಿಕೆಯ ಆಧಾರದ ಮೇಲೆ ಚಿನ್ನವನ್ನು ಪಡೆದು ಅದನ್ನು ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ಬ್ಯಾಂಕಿನಲ್ಲಿ ಅಡವಿಡುವ ಅದೆಷ್ಟೋ ಪ್ರಕರಣಗಳು ನಮ್ಮ ಸಮಾಜದ ನಡುವೆ ದಿನನಿತ್ಯ ನಡೆಯುತ್ತಿದೆ.
ಆದುದರಿಂದ ನಿಮ್ಮ ಚಿನ್ನಾಭರಣಗಳನ್ನು ಇತರರಿಗೆ ನೀಡುವಾಗಲೋ, ಇತರರಿಂದ ಪಡೆಯುವಾಗಲೋ ನೂರು ಬಾರಿ ಯೋಚಿಸಿರಿ.
ಲಜ್ಜೆಗಿಂತ ದೊಡ್ಡ ಸೌಂದರ್ಯ ಹೆಣ್ಣಿಗಿಲ್ಲ.
ಚಿನ್ನವನ್ನು ನಿಮ್ಮ ಅಭಿಮಾನದ ಪ್ರತೀಕವಾಗಿ ಪ್ರದರ್ಶಿಸುವಾಗ , ಅದೇ ಚಿನ್ನದ ವ್ಯಾಮೋಹ ನಿಮ್ಮನ್ನು ಸಂಕಷ್ಟಕ್ಕೊಳಪಡಿಸದಂತೆ ಜಾಗರೂಕರಾಗಿರಿ.

✍🏻ಸ್ನೇಹಜೀವಿ ಅಡ್ಕ

ಶನಿವಾರ, ಜುಲೈ 8, 2017

ಕರಾವಳಿ

ರಸ್ತೆ ಅಪಘಾತವಾದರೆ, ಪ್ರಕೃತಿ ವಿಕೋಪ ಘಟಿಸಿದರೆ, ನೆರೆಮನೆಯಲ್ಲಿ ಅನಾಹುತ ಸಂಭವಿಸಿದರೆ ಅಪ್ಪಿತಪ್ಪಿಯೂ ಧರ್ಮದ ಐಡಿ ಕಾರ್ಡ್ ಕೇಳದೆ ಸಹಾಯಕ್ಕೆ ನುಗ್ಗುವ  ಹೃದಯವಂತ ನಾಗರಿಕರಿರುವ ಕರಾವಳಿಯ ಬಗ್ಗೆ ಹೆಮ್ಮೆ ಎನಿಸುತ್ತದೆ...

ಆದರೆ ವಾಸಕ್ಕೆ ದೇಶದಲ್ಲೇ ಸುರಕ್ಷಿತ ಪ್ರದೇಶ ಎಂಬ ಬಿರುದು ಪಡೆದಿರುವ ಇದೇ ಕರಾವಳಿಯಲ್ಲಿ ಯಾರೆ ಒಬ್ಬನ ಮೇಲೆ ದಾಳಿ ನಡೆದರೆ ದಾಳಿಗೊಳಗಾದವನ ಧರ್ಮದ ಐಡಿ ಕಾರ್ಡ್ ಮೇಲೆ ನಮ್ಮ ಮುಂದಿನ ಪ್ರತಿಕ್ರಿಯೆ ನಿರ್ಭರವಾಗಿರುವುದು ವಿಪರ್ಯಾಸವಾಗಿದೆ.

ಇಂತಹ ಘಟನೆ ನಡೆದ ಕೂಡಲೆ ಪರಸ್ಪರ ಇನ್ನೊಂದು ಧರ್ಮದವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ತುದಿಗಾಲಲ್ಲಿ ಕೆಲವು ಅಬ್ಬೇಪಾರಿ (ಪದ ಬಳಕೆಗೆ ಕ್ಷಮೆ ಇರಲಿ) ರಾಜಕಾರಣಿಗಳು ಮತ ಎಣಿಕೆಗೆ ಕ್ಯಾಲಕ್ಯುಲೇಟರ್ ನೊಂದಿಗೆ ಪ್ರತ್ಯಕ್ಷರಾಗಿ ಬೂದಿ ಮುಚ್ಚಿದ ಕೆಂಡಕ್ಕೆ ಪೆಟ್ರೋಲ್ ಸುರಿದು ಮಾಯವಾಗುತ್ತಾರೆ.

ಅನ್ನ ಬೇಯಿಸಲು ನೀರು ಬಿಸಿ ಮಾಡು, ದಿನವಿಡಿ ದುಡಿದು ಅಕ್ಕಿ ತರುವೆ ಎಂದು ಹೊರಟ ಅಮಾಯಕ ರಿಕ್ಷಾ, ಟೆಂಪೋ ಚಾಲಕರ ವಾಹನಗಳ (ಅನ್ನದ ತಟ್ಟೆಯ) ಗಾಜುಗಳು ಪುಡಿಯಾಗುತ್ತವೆ. ಪುಡಿಯಾದ ಗಾಜಿನ ಚೂರುಗಳ ಮೇಲಿಂದ ಪೆಟ್ರೋಲ್ ಸುರಿದವರ ಕಾರುಗಳು ರೊಯ್ಯನೆ ಸಾಗುತ್ತವೆ. ದಾಳಿಗೊಳಗಾದ ಬಡ ವಾಹನ ಮಾಲಕ ತನ್ನ ಒಡೆದ ಗಾಜುಗಳ ಮೇಲಿಂದ ಸಾಗಿದ ಕಾರನ್ನೇ ಅಸಹಾಯಕನಾಗಿ ದಿಟ್ಟಿಸುತ್ತಾನೆ...

ಸಶೇಷ...

ಮುಖ್ತಾರ್ ಉಚ್ಚಿಲ.

ಶನಿವಾರ, ಜುಲೈ 1, 2017

ಯುವ ಶಕ್ತಿ

ಯವ್ವನ ಎಂಬ ಪದವೇ ಮೈಯನ್ನು ರೋಮಾಂಚನಗೊಳಿಸುತ್ತದೆ. ಪ್ರೌಡ ಹಂತವು ಕಳೆದು ಚಿಗುರು ಮೀಸೆ ಮೊಳಕೆಯೊಡೆಯುವ ಸನ್ನಿವೇಶದಲ್ಲಿ ಮನಷ್ಯ ಭಯವೆಂಬ ಗುಣವನ್ನೇ ಮರೆತು ತಾನು ಬಯಸಿದ್ದನ್ನು ಮಾಡಿಯೇ ತೀರುವೆನೆಂಬ ದೃಡವಾದ ಸಂಕಲ್ಪವನ್ನು ಹೊಂದಿರುತ್ತಾನೆ. ಯುವ ಶಕ್ತಿ ಎಂದರೆ ಪರಮಾಣು ಶಕ್ತಿಗಿಂತಲೂ ಮಿಗಿಲು. “Atomic Power is not than Youth Power” ಎಂಬ ಅನುಭವ ನುಡಿಯು ಕೇವಲ ಉತ್ಪ್ರೇಕ್ಷೆಯಲ್ಲ.
ಚರಿತ್ರೆಯನ್ನು ಕೆದಕುವಾಗ ಅದೆಷ್ಟೋ ಸಾಹಸಗಳ, ಯುದ್ದಗಳ, ವೀರ ಕ್ರೂರ ಪರಾಕ್ರಮಗಳ, ಹಿಂದೆ ಯುವಕರಲ್ಲದೆ ಇನ್ಯಾರು.?
ಬಿಸಿ ರಕ್ತವು ನರನಾಡಿಗಳಲ್ಲಿ ಸಂಚರಿಸುವ ತಾರುಣ್ಯವು ಯಾವತ್ತೂ ಅಂಜಿಕೆಗಳಿಗೆ ಶರಣಾಗದು. ಹಿಮಾಲಯ ಪರ್ವತದ ತುತ್ತ ತುದಿಯನ್ನೇರಿ ನಿರಾಳವಾದ ನಿಟ್ಟುಸಿರನ್ನು ಬಿಟ್ಟ ತೇನ್‌ಸಿಂಗ್ ನೋರ್ಕೆ ಒಬ್ಬ ಯುವಕನಾಗಿದ್ದನು. ದೈತ್ಯವಾದ ಕಡಲಿನ ತೆರೆಮಾಲೆಗಳನ್ನು ಸೀಳಿ ಯುರೋಪ್‌ನಿಂದ ಜಲಮಾರ್ಗವಾಗಿ ಹಲವಾರು ತಿಂಗಳುಗಳ ಯಾನ ಮಾಡಿ ದಕ್ಷಿಣ ಭಾರತದ ಕಲ್ಲಿಕೋಟೆಯಲ್ಲಿ ಬಂದಿಳಿದ ನಾವಿಕ ಕೊಲಂಬಸನೂ ಬಿಸಿರಕ್ತ ಹರಿಯುವ ತರುಣನಾಗಿದ್ದನು. ದೇಶದ ಗಡಿಗಳನ್ನು ಹಗಲು ರಾತ್ರಿ ಎನ್ನದೆ ಪಹರೆ ಕಾಯುತ್ತಿರುವ ಸೇನಾಪಡೆಗಳು ಯುವಕರ ದಂಡುಗಳಾಗಿವೆ. ಪ್ರಾಣವನ್ನೇ ಒತ್ತೆಯಿಟ್ಟು ಗಣಿಗಳ ಆಳಕ್ಕಿಳಿದು ಕಚ್ಚಾ ವಸ್ತುಗಳನ್ನು ಹೊರತೆಗೆಯುವ ಸಾಹಸಿಗಳೂ ಯುವಕರಾಗಿದ್ದಾರೆ. ಒಟ್ಟಿನಲ್ಲಿ ಯವ್ವನವು ಅದ್ಭುತವಾದ ಕಾಲ.
ಪ್ರವಾದಿ(ಸ.ಅ) ಹೇಳುತ್ತಾರೆ, ನಾಳೆ ಪರಲೋಕದಲ್ಲಿ ಅಲ್ಲಾಹನ ಮುಂದೆ ಎಲ್ಲರೂ ಸಂಗಮಿಸುವ ವೇಳೆಯಲ್ಲಿ ಅಲ್ಲಾಹನ ವಿಚಾರಣೆಯು ಬಹಳ ಗೌರವ ಪೂರ್ಣವಾಗಿರುತ್ತದೆ. ಪ್ರಮುಖವಾಗಿ ನಮ್ಮ ಯವ್ವನದ ಬಗ್ಗೆ ಅಲ್ಲಾಹು ಕೇಳುವನು. ಓ ಮನುಷ್ಯ ನಿನಗೆ ನಾನು ಆರೋಗ್ಯಪೂರ್ಣ ಯವ್ವನವನ್ನು ನೀಡಲಿಲ್ಲವೇ? ಅದನ್ನು ನೀನು ಹೇಗೆ ವ್ಯಯಿಸಿದೆ.?”
ಈ ಪ್ರಶ್ನೆಗೆ ಉತ್ತರಿಸದೇ ನಿಂತಲ್ಲಿಂದ ಒಂದು ಹೆಜ್ಜೆಯನ್ನು ಮುಂದಿಡಲು ಸಾದ್ಯವಿಲ್ಲ. ಎಲ್ಲರೂ ಕೈಕಟ್ಟಿ ಉತ್ತರಿಸಬೇಕಾದ ದಿನವದು. ಲಹರಿ ಪದಾರ್ಥಗಳ ದಾಸರಾಗಿ ಸುಂದರ ಭವಿಷ್ಯವನ್ನು ಬಲಿಕೊಡುತ್ತಿರುವ ಮುಗ್ದ ಯುವಕರು ಆಲೋಚಿಸಲು ಈ ಪವಿತ್ರ ಹದೀಸ್ ಸಾಕಾಗಿದೆ. ಆಡಂಭರದ ಜೀವನವನ್ನು ಕನಸು ಕಂಡು ಅದರ ನೆನಪಿಗಾಗಿ ಏನನ್ನು ಮಾಡಲೂ ಹೇಸದ ಲಜ್ಜಗೆಟ್ಟ ಯುವ ಸಮೂಹವೊಂದು ಬೆಳೆದು ಬರುತ್ತಿರುವಾಗ ಅದರ ವಿರುದ್ದ ಧಾರ್ಮಿಕ ಚಿಂತನೆಗಳಿಂದ ನೈತಿಕತೆಯ ಹಾದಿಯನ್ನು ತುಳಿಯುವ ಯುವಕರ ತಂಡವೂ ಸೃಷ್ಟಿಯಾಗಬೇಕಿದೆ.
ಸತ್ಯಮಾರ್ಗದಲ್ಲಿ ನಿರಂತರವಾಗಿ ಹೋರಾಡುವ ಒಂದು ವಿಭಾಗವು ನನ್ನ ಸಮುದಾಯದಲ್ಲಿದೆ. ಎಂಬ ಪ್ರವಾದಿ ವಚನದಡಿಯಲ್ಲಿ ಒಗ್ಗೂಡುವ ಮಾದರಿ ಯುವಕರ ಗುಂಪನ್ನು ನಾವು ರೂಪಿಸುವುದು ಅನಿವಾರ್ಯವಾಗಿದೆ.
ಚಿಕ್ಕಾಸಿನ ಆಮಿಷಕ್ಕೆ ಯುವಕರನ್ನು ಬಲಿ ನೀಡುವ ಭ್ರಷ್ಟ ಅಧಿಕಾರಿಗಳ ಕಪಟ ನಾಟಕವನ್ನು ಅರ್ಥೈಸುವಂತಹ ಪ್ರಜ್ಷೆಯುಳ್ಳ ಯುವಕರು ಸೃಷ್ಟಿಯಾಗಬೇಕು. ಪಕ್ಷ, ಹಣ, ಕೋಮು ಮುಂತಾದ ವಿಷಪ್ರಾಶನ ನೀಡಿ ಯುವಕರ ಬ್ರೈನ್‌ವಾಶ್ ನಡೆಸುವ ದುರುಳರನ್ನು ಗುರುತಿಸುವ ಯುವಕರು ಸಮಾಜಕ್ಕೆ ಅವಶ್ಯವಾಗಿದೆ.
ಮೇಯಿಸುವವನಿಲ್ಲದ ಮೇಕೆಗಳಂತೆ” ನಾಯಕತ್ವವಿಲ್ಲದೆ ನಮ್ಮ ಯುವ ಪೀಳಿಗೆ ಚೆಲ್ಲಾಪಿಲ್ಲಿಯಾಗಿದೆ. ಸುಭದ್ರವಾದ ನಾಯಕತ್ವ ಮತ್ತು ಉತ್ತಮವಾದ ಮಾರ್ಗದರ್ಶನ ಲಭಿಸಿದರೆ ಖಂಡಿತಾ ಯುವಶಕ್ತಿಯನ್ನು ಸರಿದಾರಿಯಲ್ಲಿ ಮುನ್ನಡೆಸಬಹುದು.
ಸಮುದಾಯದಲ್ಲಿರುವ ಅನೈಕ್ಯತೆ, ಪಕ್ಷಪಾತ ಧೋರಣೆಗಳನ್ನು ಕಂಡು ಯುವಶಕ್ತಿಯು ಮುಜುಗರ ಪಟ್ಟುಕೊಳ್ಳುತ್ತಿವೆ. ದರ್ಮದ ಹೆಸರಿನಲ್ಲಿ ಆಂತರಿಕ ಕಚ್ಚಾಟ ನಡೆಸುವವರಿಗೆ ಕುಮ್ಮಕ್ಕು ನೀಡಿ ತಮ್ಮ ಬೇಳೆ ಬೇಯಿಸಲು ಬಾಹ್ಯ ವೈರಿಗಳಿಗೆ ಬಹಳ ಸುಲಭವಾಗುತ್ತದೆ.
ಚಿಲ್ಲರೆ ವಿಷಯಗಳಿಗಾಗಿ ಮುಖ ತಿರುಗಿಸಿ ನಡೆಯುತ್ತಿರುವ, ಸಂಕುಚಿತ ಮುನೋಭಾವಗಳನ್ನು ಕೊನೆಗೊಳಿಸಬೇಕು. ಸ್ವ-ಹಿತಾಶಕ್ತಿಗಳನ್ನು ಬದಿಗಿರಿಸಿ ಸಮುದಾಯಕ್ಕಾಗಿ ದುಡಿಯುವ ವಿಶಾಲ ಮನಸನ್ನು ಬೆಳೆಸಬೇಕು. ವೇದಿಕೆಗಳನ್ನು ಕಟ್ಟಿ ಪರಸ್ಪರ ದೂಷಣೆಗಳನ್ನು ಮಾಡುವ ವಿಷಕಾರಿ ಭಾಷಣಗಳನ್ನು ಕೊನೆಗೊಳಿಸಿ ನಮ್ಮ ನಾಲಗೆ ಮತ್ತು ಕೈಗಳಿಂದ ಒಳಿತನ್ನು ಮಾತ್ರವೇ ಮಾಡುವ ಪ್ರತಿಜ್ಞೆಗಳನ್ನು ಕೈಗೊಳ್ಳಬೇಕು.
ಪರಸ್ಪರ ಮೈ ಪರಚಿಕೊಳ್ಳುವ ಕಾರ್ಯಕ್ರಮಗಳನ್ನು ಯುವಕರು ತಣ್ಣೀರೆರಚಿ ನೀರಸಗೊಳಿಸಬೇಕು. ವಿದ್ಯಾಭ್ಯಾಸದ ವಿಷಯದಲ್ಲಿ ಮುಂದುವರಿಯುವ ಉನ್ನತ ಸಮುದಾಯವಾಗಿ ರೂಪುಗೊಳ್ಳಬೇಕು. ಮೋರಿಗಳ ಮೇಲೆ, ಅಂಗಡಿ ಬದಿಯಲ್ಲಿ, ಬೀದಿಗಳಲ್ಲಿ ನಿಂತು ಸಮಯವನ್ನು ಕೊಲ್ಲುವ ಬೀದಿ ಬೀಕಾರಿಗಳ ಸಂಘಗಳಲ್ಲಿ ನಮ್ಮ ಹೆಸರು ಶಾಮಿಲಾಗದಂತೆ ನೋಡಿಕೊಳ್ಳಬೇಕು. ಪ್ರವಾದಿ (ಸ.ಅ) ಹೇಳುತ್ತಾರೆ. ’ರಸ್ತೆಯಲ್ಲಿ ನಡೆದುಕೊಂಡು ಹೋಗುವವರಿಗೆ ಅವರ ಅವಕಾಶಗಳನ್ನು ಬಿಟ್ಟುಕೊಡಿ. ಅವರಿಗೆ ತೊಂದರೆ ಕೀಟಲೆಗಳನ್ನು ನೀಡಬಾರದು. ವಿನಾಕಾರಣ ದಾರಿಹೋಕರನ್ನು ನಿಂದಿಸಿ ಛೇಡಿಸಿ ಅವರ ತೇಜೋವಧೆ ನಡೆಸುವ ಯುವಕರ ಕೆಲವು ಸಂಘಗಳನ್ನು ಕಾಣಬಹುದು. ಕೆಲವರಂತೂ ಮುಗ್ದ ಹೆಂಗಸರನ್ನು ಈ ರೀತಿ ಕೀಟಲೆ ಮಾಡುವುದುಂಟು. ನಿಜವಾಗಿಯು ಇದು ಮಹಾ ಅಪರಾಧ. ರಸ್ತೆಯಲ್ಲಿರುವ ಮುಳ್ಳುಗಳನ್ನು ಬದಿಗೆ ಸರಿಸಿರಿ ಅದು ಮಹತ್ತರವಾದ ದಾನ ಧರ್ಮವಾಗಿದೆ. ಎಂದು ಸಾರಿ ಹೇಳಿದ ಪ್ರವಾದಿ ಅನುಯಾಯಿಗಳಿಗೆ ಇದು ಭೂಷಣವಲ್ಲ.
ಸಮುದಾಯ ನಿರಂತರವಾಗಿ ಅನುಭವಿಸಿಕೊಂಡು ಬರುತ್ತಿರುವ ಹಲವಾರು ಸಮಸ್ಯೆಗಳನ್ನು ಬೊಟ್ಟುಮಾಡಿ ಅದರ ನಿವಾರಣೆಗಾಗಿ ಪರಿಹಾರ ಮಾರ್ಗವನ್ನು ಕಂಡು ಹಿಡಿಯಲು ಯುವಶಕ್ತಿ ಮುಂದಾಗಬೇಕು. ಸಮುದಾಯದ ಉಲಮಾಗಳಿಂದ ಮಾರ್ಗದರ್ಶನ ಪಡೆದು ಮುಂದುವರಿದರೆ ಖಂಡಿತಾ ಯಶಸ್ಸನ್ನು ಸಾಧಿಸಬಹುದು.
ಸಮಾಜದಲ್ಲಿ ಪೆಡಂಭೂತವಾಗಿ ವಕ್ಕರಿಸುತ್ತಿರುವ ವರದಕ್ಷಿಣೆ, ಮೌಢ್ಯ, ನೂತನವಾದಗಳು ಕೊನೆಗೊಳ್ಳದೆ ಸಮುದಾಯ ತಲೆ ಎತ್ತಿ ನಿಲ್ಲಲು ಸಾದ್ಯವಿಲ್ಲ. ಆಲೋಚನಾ ಶಕ್ತಿಯುಳ್ಳ ಯುವಶಕ್ತಿ ಒಂದು ನಾಡಿನಲ್ಲಿದ್ದರೆ ಆ ನಾಡನ್ನು ಅಭಿವೃದ್ಧಿಗೊಳಿಸಲು ಬಹಳ ಸುಲಭ. ಮಸೀದಿಗಳ ಮುಂದೆ ಇನ್ನೊಂದು ಮಸೀದಿ ಕಟ್ಟುವ ಸಂಪ್ರದಾಯವನ್ನು ಕೊನೆಗೊಳಿಸಬೇಕು. ಧರ್ಮದ ಪ್ರಚಾರ ಅವಶ್ಯಕತೆ ಇರುವ ಅದೆಷ್ಟೋ ಊರು ಕೇರಿಗಳು ನಮ್ಮ ಕರ್ನಾಟಕದಲ್ಲೇ ಇದೆ. ಧರ್ಮದ ಸಂದೇಶಗಳು ಅತ್ತ ರವಾನಿಸಬೇಕು. ಮಾಡುವ ಕಾರ್ಯಗಳೆಲ್ಲವೂ ಅಲ್ಲಾಹನಿಗಾಗಿ ಎಂಬ ನಿಯ್ಯತ್ತಿನಲ್ಲಿರಬೇಕು. ಬಡತನ ನಿರುದ್ಯೋಗ ಮುಂತಾದ ಹಲವಾರು ಸಮಸ್ಯೆಗಳು ಸಮುದಾಯವನ್ನು ತಲ್ಲಣಗೊಳಿಸಿದೆ. ಇವುಗಳನ್ನು ತೊಡೆದು ಹಾಕಿ ಸಮುದಾಯವನ್ನು ಮೇಲಕ್ಕೆತ್ತುವ ಕಾರ್ಯಗಳನ್ನು ರೂಪಿಸಿಕೊಂಡು ನಿರಂತರವಾಗಿ ಸಮುದಾಯ ತ್ಯಾಗಿಗಳಾಗಿ ಬಾಳುವ ಪ್ರತಿಜ್ಞೆಯನ್ನು ಕೈಗೊಳೋಣ…