ವಿವೇಕಾನಂದ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಿವೇಕಾನಂದ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಅಕ್ಟೋಬರ್ 2, 2017

ಮಿಸ್ಟರ್ ನಾಥುರಾಂ ಘೋಡ್ಸೆ,

.....

ಅಂದು ನಿಮ್ಮ ಬಂದೂಕಿನಿಂದ ಸಿಡಿದ ಮೂರನೆಯ ಗುಂಡು ನನ್ನ ಹೃದಯವನ್ನು ಛಿದ್ರಗೊಳಿಸಿ ನನ್ನನ್ನು ನಿಸ್ತೇಜಗೊಳಿಸದೇ ಇದ್ದಿದ್ದರೆ, ಆಗ ಮೂಡಿದ ನನ್ನ ಒಡಲಾಳದ ಭಾವನೆಗಳು ಧ್ವನಿತರಂಗಗಳಾಗಿ ಗಂಟಲಿನಿಂದ ಹೊರಬಂದು ನಿಮ್ಮನ್ನು ಅಲ್ಲಿಯೇ ಕ್ಷಮಿಸುತ್ತಿದ್ದೆ. ದುರಾದೃಷ್ಟವಶಾತ್ ಅವು ಹೊರಬರದೆ   ಅಡಗಿ ಹೋದವು.   ಅದು ನಿಮಗೆ ಮತ್ತು ಅಲ್ಲಿದ್ದವರಿಗೆ ತಲುಪಲೇ ಇಲ್ಲ. ಅದು ನಾನು ಪಶ್ಚಾತಾಪದಿಂದ ಈಗಲೂ ನರಳುವಂತೆ ಮಾಡುತ್ತಿದೆ.
ಪ್ರೀತಿಯ ಘೋಡ್ಸೆ
ನನ್ನಿಂದಾಗಿ ನೀವು ಗಲ್ಲು ಶಿಕ್ಷೆಗೆ ಗುರಿಯಾಗಿ ಪ್ರಾಣ ಕಳೆದುಕೊಂಡಿದ್ದಕ್ಕೆ 69 ವರ್ಷಗಳ ನಂತರವೂ ನನ್ನ ಹೃದಯ ಮಿಡಿಯುತ್ತಿದೆ. ನಿಮ್ಮನ್ನು ಉಳಿಸಲಾಗದಿದ್ದಕ್ಕೆ ಪರಿತಪ್ಪಿಸುತ್ತಿದ್ದೇನೆ.
ಗೆಳೆಯ ನಾಥುರಾಂ,
ಪ್ರಕೃತಿಯ ಪ್ರತಿ ಜೀವವೂ ಅಮೂಲ್ಯ. ಅವುಗಳ ಸಾವು ಸಹಜ ಕ್ರಿಯೆಯಾಗಬೇಕೆ ಹೊರತು ಕೊಲೆ ಹತ್ಯೆ ಅಥವಾ ಶಿಕ್ಷೆಯಾಗಬಾರದು.
ಜೀಸಸ್ ಶಿಲುಬೆಗೇರುವಾಗ ಅವರನ್ನು ಶಿಕ್ಷಿಸುತ್ತಿರುವವರನ್ನು ಕುರಿತು " ಓ  ದೇವರೆ , ಇವರಿಗೆ ತಾವೇನು ಮಾಡುತ್ತಿದ್ದೇವೆ ಎಂಬ ಅರಿವೇ ಇಲ್ಲ. ಆದ್ದರಿಂದ ಇವರನ್ನು ದಯವಿಟ್ಟು ಕ್ಷಮಿಸು " ಎಂದರು.
ಘೋಡ್ಸೆಜಿ, ನಾನು ನಿಮಗೂ ಇದನ್ನೇ ಪ್ರಾರ್ಥಿಸುತ್ತೇನೆ.

ಆ ದಿನಗಳು ಭಾರತದ ಇತಿಹಾಸದಲ್ಲಿ ಅತ್ಯಂತ ಘೋರ ಮತ್ತು ಯಾತನಾಮಯ ದಿನಗಳು. ಕೆಲವು ಶತಮಾನಗಳಷ್ಟು ದೀರ್ಘಕಾಲ ಒಡಹುಟ್ಟಿದ ಅಣ್ಣ ತಮ್ಮಂದಿರಂತಿದ್ದ ಹಿಂದೂ ಮುಸ್ಲೀಮರು ಬ್ರಿಟೀಷರ ಒಡೆದು ಆಳುವ ನೀತಿಗೆ ಬಲಿಯಾದರು. ಯಾವ ಸ್ವಾತಂತ್ರ್ಯಕ್ಕಾಗಿ ಇಡೀ ಭಾರತ ತನ್ನ ಶಕ್ತಿಯನ್ನು ಉಪಯೋಗಿಸಿತೊ ಅದೇ ಶಕ್ತಿ ಭಾರತವನ್ನು ಒಡೆಯಿತು. ಹೋಗಲಿ ಅದಾದರೂ ಸುಗಮವಾಗಿ ನಡೆಯಲಿಲ್ಲ. ಮಾನವ ಇತಿಹಾಸದ ಘೋರ ದುರಂತಗಳಲ್ಲಿ ಒಂದಾಗಿ ದಾಖಲಾಯಿತು. ರಕ್ತದ ಖೋಡಿಯೇ ಹರಿಯಿತು ಅದೂ ನನ್ನ ಕಣ್ಣ ಮುಂದೆ ನನ್ನ ಅರಿವಿನ ಅಂತರದಲ್ಲಿ.
ನಾಥುರಾಂಜಿ,
ನಿಮಗೆ ಮತ್ತು ನಿಮ್ಮಂತ ಎರಡೂ ಕಡೆಯ ಜನರಿಗೆ ಹತ್ಯೆಯಾದದ್ದು ಹಿಂದೂಗಳು ಮತ್ತು ಮುಸ್ಲೀಮರು.
ಆದರೆ ಸಂಪೂರ್ಣ ಬದುಕನ್ನು ಹೋರಾಟವನ್ನು ಅತ್ಯಂತ ಕಠೋರ ಸತ್ಯ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ ನನ್ನ ದೇಹ ಮತ್ತು ಮನಸ್ಸಿಗೆ ಇದು ಮಾನವ ಜನಾಂಗದ ಮೇಲೆ ನಡೆದ ಅಮಾನುಷ ಮತ್ತು ಅನಾಗರಿಕ ವರ್ತನೆಯಾಗಿ ಕಂಡಿತು.
ಒಂದು ಮಗು ಮತ್ತು ಆಕೆಯ ತಾಯಿಯನ್ನು ಬೇರೆ ಧರ್ಮ ಎಂಬ ಒಂದೇ ಕಾರಣಕ್ಕಾಗಿ ಚಾಕುವಿನಿಂದ ಹಲವಾರು ಬಾರಿ ತಿವಿದು ರಕ್ತ ಸುರಿಯುತ್ತಿದ್ದರೂ ಗೋಳಾಡುತ್ತಿದ್ದರೂ ಮತ್ತೆ ಒಂದು ದೊಡ್ಡ ಕಲ್ಲನ್ನು ಆಕೆಯ ಮೇಲೆ ಹಾಕಿ ಮಗುವಿನ ತಲೆಯನ್ನು ಕತ್ತರಿಸಿ ಕೈಯಲ್ಲಿ ಹಿಡಿದು ಸಂಭ್ರಮಿಸಿವ ಜನರನ್ನು ಅದು ಹೇಗೆ ಧರ್ಮ ರಕ್ಷಕರು ಎಂದು ಕರೆಯುವುದು.
ಸನಾತನ ಧರ್ಮದಲ್ಲಿ ಅಚಲ ನಂಬಿಕೆಯಿದ್ದ ನಾನು ಅದು ಹೇಗೆ ಹಿಂದೂಗಳನ್ನು ದ್ವೇಷಿಸಲು ಸಾಧ್ಯ. ನಾನು ಮುಸ್ಲೀಮರ ಪರವೂ ಇರಲಿಲ್ಲ. ಕೇವಲ ಸತ್ಯ ಮತ್ತು ಅಹಿಂಸೆಯ ಪರವಾಗಿ ಎಲ್ಲಾ ಹತ್ಯೆಗಳನ್ನು ವಿರೋಧಿಸಿದೆ. ಹಿಂಸೆಗೆ ಹಿಂಸೆ ಪರಿಹಾರವಲ್ಲ ಎಂಬ ಅಚಲ ನಂಬಿಕೆ ನನಗೆ ಈಗಲೂ ಇದೆ.
ಭಾರತದ ಏಕತೆ ಮತ್ತು ಐಕ್ಯತೆ ಉಳಿದಿರುವುದೇ ಇಲ್ಲಿನ ಸತ್ಯ ಅಹಿಂಸೆ ಮತ್ತು ಶಾಂತಿಪ್ರಿಯ ಮನಸ್ಥಿತಿಯ ಜನರಿಂದ.
ಸನ್ಮಾನ್ಯ ನಾಥುರಾಂ ಘೋಡ್ಸೆಯವರೆ,
ನೀವು ನನ್ನನ್ನು ಕೊಂದದ್ದು ಈ ದೇಶದ ರಕ್ಷಣೆಗಾಗಿಯಲ್ಲವೇ. ಹಿಂಸೆಯಿಂದ ದೇಶದ ರಕ್ಷಣೆ ಸಾಧ್ಯವಾಗಿದೆಯೇ ?
ನನ್ನ ಸಾವು ನಿಮ್ಮ ಗುರಿ ಈಡೇರಿಸಿದೆಯೇ ?
ಹಿಂದೂಗಳ ಮಾರಣಹೋಮ ಮಾಡಿದ ಪಾಕಿಸ್ತಾನ ನೆಮ್ಮದಿಯಿಂದ ಇದೆಯೇ ?
ಈ ಎಲ್ಲಾ ಪ್ರಶ್ನೆಗಳಿಗೆ ನನ್ನ ಉತ್ತರ " ಓ ಭಾರತ ಮಾತೆಯೇ ಇವರಿಗೆ ತಾವೇನು ಮಾಡುತ್ತಿದ್ದೇವೆ ಎಂಬ ಅರಿವಿಲ್ಲ. ಇವರನ್ನು ಕ್ಷಮಿಸು "
ಅಂದು ಒಬ್ನ ದೇಶಭಕ್ತ ಘೋಡ್ಸೆ ನನ್ನನ್ನು ಕೊಂದರೆ ಇಂದು ಹಲವಾರು ಘೋಡ್ಸೆಗಳಿದ್ದಾರೆ.
ಹಾಗಾದರೆ ಭಾರತ ಈಗ ಅತ್ಯಂತ ಸುರಕ್ಷಿತ ಎನ್ನೋಣವೇ ? ಅಹಿಂಸೆ ಮತ್ತು ಸತ್ಯದ ವಿರುದ್ಧ ಹಿಂಸೆ ಮತ್ತು ಅಸತ್ಯ ಜಯಗಳಿಸಿದೆ ಎಂದು ಭಾವಿಸೋಣವೇ ?
ಅಂದು ಸಾವಿರಾರು ಸಂಖ್ಯೆಯಲ್ಲಿದ್ದ ನನ್ನಂತವರು ಇಂದು ಅವಸಾನದ ಅಂಚಿಗೆ ಬಂದು ನಿಂತಿದ್ದಾರಲ್ಲವೇ ?
ಅದನ್ನು ನಿಮ್ಮ ಆತ್ಮಾವಲೋಕನಕ್ಕೆ ಬಿಡುತ್ತಾ...
ನಾಥುರಾಂ ಜಿ,
ನಿಮ್ಮ ಸಾವಿಗೆ ನಾನು ಕಾರಣವಾಗಿದ್ದಕ್ಕಾಗಿ ಮತ್ತೊಮ್ಮೆ ನಿಮ್ಮಲ್ಲಿ ಕ್ಷಮೆಕೋರುತ್ತಾ...
ಭಾರತೀಯರಲ್ಲಿ ನಾಗರಿಕ ಪ್ರಜ್ಞೆ ಮೂಡಲಿ ಎಂದು ಹಾರೈಸುವ..
ನಿಮ್ಮ ಪ್ರೀತಿಯ...
M K . ಗಾಂಧಿ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.

ಮಂಗಳವಾರ, ಮೇ 16, 2017

ಟಿವಿ ನ್ಯೂಸ್ ಚಾನಲ್ ಗಳು

ಟಿವಿ ನ್ಯೂಸ್ ಚಾನಲ್ ಗಳು ಪ್ರಸಾರ ಮಾಡುವ ಕಾರ್ಯಕ್ರಮಗಳ ಬಗೆಗೆ ತುಂಬಾ ತುಂಬಾ ಹೆಮ್ಮೆ ಇದೆ. ಏಕೆಂದರೆ,
ಸಿನಿಮಾ ತಾರೆಯರ, ಶ್ರೀಮಂತ ರಾಜಕಾರಣಿಗಳ ಭ್ರಷ್ಟ ಅಧಿಕಾರಿಗಳ ಆಡಂಬರದ ವೈಭವೋಪೇತ ಮದುವೆಗಳನ್ನು ಪೆದ್ದು ವೀಕ್ಷಕರಿಗೆ ದೇವಲೋಕದಂತೆ ತೋರಿಸುವ ಬ್ರೋಕರ್ ಗಳಾಗಿರುವುದಕ್ಕೆ.
ಕೊಲೆ ಅತ್ಯಾಚಾರ ಅಪಘಾತಗಳನ್ನು ಕೇಳಲು ಓದಲು ಹಿಂಸೆ ಪಡುತ್ತಿದ್ದ ಮೃದು ಮನಸ್ಸುಗಳಿಗೆ ರಕ್ತದ ಭೀಕರತೆಯ ಸಮೇತ ಸಂಗೀತ ಧ್ವನಿ ಸೇರಿಸಿ ಆಕರ್ಷಕವಾಗಿ ಪ್ರಸಾರ ಮಾಡುತ್ತಿರುವುದಕ್ಕೆ.
ಹಿಂದೆ ಮನೆಯ ಗಲಾಟೆಗಳನ್ನು ಆದಷ್ಟೂ ಗೌಪ್ಯವಾಗಿಟ್ಟು ಕೆಲ ಸಮಯದ ನಂತರ ಸಹಜ ಸ್ಥಿತಿಗೆ ಬರಬಹುದಾಗಿದ್ದ ಘಟನೆಗಳನ್ನು ಸಿನಿಮಾದ ಕ್ಯಾಬರೆ ದೃಶ್ಯದಂತೆ ಸಾರ್ವಜನಿಕವಾಗಿ ಬಹಿರಂಗಗೊಳಿಸಿ ಅವರಿಬ್ಬರು ಇನ್ನೆಂದೂ ಒಟ್ಟಾಗದಂತೆ ಮಾಡುತ್ತಿರುವ ಘನ ಕಾರ್ಯಕ್ಕಾಗಿ.
ಮಾನವೀಯತೆ - ಸೌಜನ್ಯತೆ ಇರಲಿ, ಕನಿಷ್ಠ ಸಾಮಾನ್ಯ ಜ್ಞಾನವೂ ಇಲ್ಲದ ರಾಕ್ಷಸ ಗುಣದ ರಾಜಕಾರಣಿಗಳ ತಿಕ್ಕಲು ಹೇಳಿಕೆಗಳನ್ನು ರಾಜ್ಯದ ಬಹುದೊಡ್ಡ ಸಮಸ್ಯೆ ಎಂಬಂತೆ ಬಿಂಬಿಸಿ ಅದನ್ನು ವಾರಗಟ್ಟಲೆ ವಿಶ್ಲೇಷಿಸುವ ರೀತಿಗೆ....
ಥೂ ..ನಿಮ್ಮ......
ಪತ್ರಕರ್ತರಯ್ಯ ನೀವು ಪತ್ರಕರ್ತರು.
ಹೆಚ್ಚು ಕಡಿಮೆ ಸತ್ಯ ಹರಿಶ್ಚಂದ್ರನಷ್ಟು ಪ್ರಾಮಾಣಿಕವಾಗಿರಬೇಕಾಗಿರುವವರು. ಎಷ್ಟೇ ಕಷ್ಟವಾದರೂ ಸತ್ಯವನ್ನಲ್ಲದೆ ಬೇರೇನನ್ನೂ ಹೇಳಬಾರದವರು.
ಸದ್ಯದ ಪರಿಸ್ಥಿತಿಯಲ್ಲಿ ಇಡೀ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸಿ ರೈತರು ಮಹಿಳೆಯರು ಕಾರ್ಮಿಕರು ಧಮನಿತರ ಜೀವನಮಟ್ಟ ಸುಧಾರಿಸಲು ಹೊಸ ಹೊಸ ಚಿಂತನೆಗಳನ್ನೊಳಗೊಂಡ ಕಾರ್ಯಕ್ರಮಗಳನ್ನು ರೂಪಿಸಿ ಸರ್ಕಾರದ ಗಮನ ಸೆಳೆಯಬೇಕಾಗಿರುವವರು. ಇದರ ಅನುಷ್ಠಾನಕ್ಕೆ ಹಕ್ಕೊತ್ತಾಯ ಮಾಡಬೇಕಾಗಿರುವವರು.
ಅಯ್ಯಾ ಮೂರ್ಖರೆ,
ಮದುವೆ ಯಾರದೇ ಆಗಿರಲಿ ಅದು ತೀರಾ ಖಾಸಗಿ ಕಾರ್ಯಕ್ರಮವಯ್ಯ. ಕುತೂಹಲ ಇರುವ ಜನರು ಸಮಯವಿದ್ದರೆ ಹೋಗಿ ನೋಡಲಿ. ನಿಮ್ಮ ಕೆಲಸ ಅದಲ್ಲರಯ್ಯ.
ಭ್ರಷ್ಟರನ್ನು ಕಳ್ಳರನ್ನು ವಂಚಕರನ್ನು ಕೊಲೆಗಡುಗರನ್ನು ಅತ್ಯಾಚಾರಿಗಳನ್ನು ಹಿಡಿಯಲು ಪೋಲೀಸರಿದ್ದಾರೆ. ಶಿಕ್ಷಿಸಲು ನ್ಯಾಯಾಲಯವಿದೆ.ಅದೊಂದು ಸಣ್ಣ ಸುದ್ದಿಯಯ್ಯ. ಅದಕ್ಕಿಂತ ಮುಖ್ಯ ಆ ರೀತಿಯ ಕೆಟ್ಟ ಚಟುವಟಿಕೆಗಳು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚಿಂತನೆ ನಡೆಸುವ ಕಾರ್ಯಕ್ರಮಗಳನ್ನು ರೂಪಿಸಿರಯ್ಯ.
ಪತ್ರಕರ್ತರೆಂದರೆ ಜನಸಾಮಾನ್ಯರಲ್ಲಿ ಬುದ್ದಿವಂತರೆಂಬ ಅಭಿಪ್ರಾಯವಿದೆಯಯ್ಯ.ಅದನ್ನು ಹಾಳು ಮಾಡಬೇಡಿ. ಈ ಮಾಧ್ಯಮಕ್ಕೆ ಮತ್ತೊಂದು ಪರ್ಯಾಯ ಇಲ್ಲವಯ್ಯ. ಆ ಬದ್ದತೆ ಪ್ರಾಮಾಣಿಕತೆ ಇಲ್ಲದಿದ್ದರೆ ದಯವಿಟ್ಟು ಬೇರೆ ಉದ್ಯೋಗ ನೋಡಿಕೊಳ್ಳಿರಯ್ಯ.
ಬೇಗ ಎಚ್ಚೆತ್ತುಕೊಳ್ಳಿ.

ಧನ್ಯವಾದಗಳು.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಇದು ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.

ಬುಧವಾರ, ಏಪ್ರಿಲ್ 26, 2017

ಸಮಾಜ

ಆಟೋದಲ್ಲಿ ಮರೆತು ಹೋಗಿದ್ದ ಲಕ್ಷಾ೦ತರ ಬೆಲೆಬಾಳುವ ವಸ್ತುಗಳಿದ್ದ ಸೂಟ್ ಕೇಸ್ ಒಂದನ್ನು
ಆಟೋ ಡ್ರೈವರ್ ಒಬ್ಬರು ಮರಳಿ ಅದರ ಒಡೆಯನಿಗೆ ತಲುಪಿಸುತ್ತಾರೆ.
ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದ ವಯೋವೃಧ್ಧ ರೋಗಿಯನ್ನು ಶಾಲಾ ಶಿಕ್ಷಕರೊಬ್ಬರು,
ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ತಮ್ಮ ಮನೆಯಲ್ಲಿಯೇ ಆಶ್ರಯ ನೀಡುತ್ತಾರೆ.
ಅಪಘಾತದಲ್ಲಿ ಮಿದುಳು ನಿಷ್ಕ್ರಿಯಗೊ೦ಡ ವ್ಯಕ್ತಿಯ ಮನೆಯವರು ಆತನ,
ಎಲ್ಲಾ ಅ೦ಗಾ೦ಗಗಳನ್ನು ಅವಶ್ಯಕತೆ ಇರುವವರಿಗೆ ದಾನ ಮಾಡುತ್ತಾರೆ.
ಅ೦ಗವಿಕಲ ಹುಡುಗಿಯನ್ನು ಪ್ರೀತಿಸಿ ಮದುವೆಯಾದ,
ವಿದ್ಯಾವಂತ ಯುವಕನೊಬ್ಬ ಆಕೆಗೆ ಸು೦ದರ ಬದುಕು ನೀಡುತ್ತಾನೆ.
ಅಧಿಕಾರದ ಅನೇಕ ಹ೦ತಗಳನ್ನು ಅನುಭವಿಸಿಯೂ ರಾಜಕಾರಣಿಯೊಬ್ಬರು,
ಈಗಲೂ ಒ೦ದೇ ಕೋಣೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಆಡಳಿತದ ಅತ್ಯಂತ ಉನ್ನತ ಹುದ್ದೆಗೇರಿ ನಿವೃತ್ತರಾದ ಅಧಿಕಾರಿಯೊಬ್ಬರು ,
ಈಗಲೂ ಸರ್ಕಾರಿ ಬಸ್ಸುಗಳಲ್ಲೆ ಓಡಾಡುವ ಸರಳತೆ ಬೆಳೆಸಿಕೊಂಡಿದ್ದಾರೆ.
ಅತ್ಯಂತ ಶ್ರೀಮಂತ ಉದ್ಯಮಿಯೊಬ್ಬ ತನ್ನ ಮಗಳ ಮದುವೆಯನ್ನು,
ಬಹಳ ಸರಳವಾಗಿ ಮ೦ತ್ರ -ಮಾ೦ಗಲ್ಯದ ರೀತಿಯಲ್ಲಿ ಮಾಡಿದರು.
ರಾಜ್ಯದ ಬಹುತೇಕ ಮುಖ್ಯಮಂತ್ರಿಗಳಿಗೆ ಹತ್ತಿರವಾಗಿದ್ದ ಪತ್ರಕರ್ತರೊಬ್ಬರು,
ಈಗಲೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿಯೇ ಓದಿಸಿ ಸರಳತೆ ಅಳವಡಿಸಿಕೊಂಡಿದ್ದಾರೆ.
ಪೋಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದು ನಿವೃತ್ತರಾದ ಅಧಿಕಾರಿಯೊಬ್ಬರು ,
ಪರೋಕ್ಷವಾಗಿಯೂ ಲ೦ಚ ಮುಟ್ಟದ ಶುದ್ಧ ಹಸ್ತರು ಎ೦ದು ಎಲ್ಲರೂ ಮಾತನಾಡಿಕೊಳ್ಳುತ್ತಾರೆ.
ಇದೆಲ್ಲವೂ ಘಟಿಸಿರುವುದು, ಸಾಧ್ಯವಾಗಿರುವುದು ನಮ್ಮ ಈ ಸಮಾಜದಲ್ಲಿಯೇ.
ಆದರೆ ಯೋಚಿಸಬೇಕಾಗಿರುವುದು ಇವು ಕೇವಲ ಅಪರೂಪದ ಉದಾಹರಣೆಗಳು.
ನಮ್ಮ ಆಶಯ ಇಡೀ ಸಮಾಜದ ಪ್ರತಿಕ್ರಿಯೆ ಇದೇ ಆಗಿರಬೇಕು.
ಇಡೀ ಸಮುದಾಯಗಳ ನಡೆ ನುಡಿ ಇದೇ ಆಗಿರಬೇಕು.
ಇಡೀ ಜನಗಳ ಮೂಲಭೂತ ಗುಣ ಇದೇ ಆಗಿರಬೇಕು.
ಇದಕ್ಕಾಗಿ ನೀವೇನು ಬೆವರು ಸುರಿಸಬೇಕಾಗಿಲ್ಲ,
ಇದಕ್ಕಾಗಿ ನೀವೇನು ಬೆಟ್ಟ ಹತ್ತಿ ಸಮುದ್ರ ದಾಟಬೇಕಾಗಿಲ್ಲ,
ಇದಕ್ಕಾಗಿ ನೀವೇನು ಬ್ರಹ್ಮವಿದ್ಯೆ ಕಲಿಯಬೇಕಾಗಿಲ್ಲ,
ಕೇವಲ ನಿಮ್ಮ ವ್ಯಕ್ತಿತ್ವವನ್ನು ಸ್ವಲ್ಪ ಮೇಲ್ದರ್ಜೆಗೆ ಏರಿಸಿಕೊಳ್ಳಿ.
ನಾಗರಿಕ ಪ್ರಜ್ಞೆ ಬೆಳೆಸಿಕೊಳ್ಳಿ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಇದು ಮನಸ್ಸುಗಳ ಅಂತರಂಗದ ಚಳವಳಿ
ವಿವೇಕಾನಂದ.ಹೆಚ್.ಕೆ.

ಭಾನುವಾರ, ಏಪ್ರಿಲ್ 16, 2017

ಅಂತರಂಗ

ಟಿವಿ ಧಾರಾವಾಹಿಗಳಲ್ಲಿ ಅತ್ತೆ ಸೊಸೆಗೆ ತೊ೦ದರೆ ಕೊಡುವುದನ್ನು ನೋಡಿ ಕಣ್ಣೀರಾಗುವಿರಿ,
ಆದರೆ ನಿಮ್ಮ ಮನೆಯ ಅದೇ ವಾತಾವರಣವನ್ನು ಮರೆಯುವಿರಿ.
ಸಿನಿಮಾದಲ್ಲಿ ನಾಯಕ ಭ್ರಷ್ಟ ರಾಜಕಾರಣಿಗಳನ್ನು ಚಚ್ಚುವುದು ನೋಡಿ ಸಿಳ್ಳೆ ಹೊಡೆಯುವಿರಿ,
ಆದರೆ ನಿಜ ಜೀವನದಲ್ಲಿ ಅದೇ ರಾಜಕಾರಣಿಗಳ ಹಿ೦ಬಾಲಕರಾಗಿರುವಿರಿ.
ಕಥೆಗಳಲ್ಲಿ ಇಡೀ ಬದುಕನ್ನೇ ಇತರರಿಗಾಗಿ ತ್ಯಾಗ ಮಾಡುವ ಪಾತ್ರಗಳಲ್ಲಿ ನಿಮ್ಮನ್ನೇ ಕಲ್ಪಿಸಿಕೊಳ್ಳುತ್ತೀರಿ,
ಆದರೆ ವಾಸ್ತವದಲ್ಲಿ ಅದೇ ಎಲ್ಲವೂ ನನಗೆ ಇರಲಿ ಎ೦ದು ದುರಾಸೆ ಪಡುವಿರಿ.
ಪತ್ರಿಕೆಗಳಲ್ಲಿ ವೃದ್ದ ತ೦ದೆತಾಯಿಗಳನ್ನು ಅನಾಥಾಶ್ರಮಕ್ಕೆ ಸೇರಿಸಿದ ಮಕ್ಕಳ ವಿಷಯ ಕೇಳಿ ಶಾಪ ಹಾಕುವಿರಿ,
ಆದರೆ ನಿಮ್ಮ ಅಮ್ಮ ಅಪ್ಪನಿಗಾಗಿ ವೃದ್ದಾಶ್ರಮ ಹುಡುಕುವಿರಿ.
ವರದಕ್ಷಿಣೆ ಸಾವುಗಳನ್ನುವ ನೋಡಿ ಆಕ್ರೋಶ ವ್ಯಕ್ತಪಡಿಸುವಿರಿ,
ನಿಮ್ಮ ಮಕ್ಕಳ ಮದುವೆಗೆ ಚಿನ್ನ, ಕಾರು ಮನೆ ಬೇಕೆ೦ದು ಆಸೆ ಪಡುವಿರಿ.
ಬೇರೆ ಶ್ರೀಮಂತ ಸಮಾರ೦ಭಗಳಲ್ಲಿ ವ್ಯರ್ಥವಾಗುವ ಆಹಾರ ನೋಡಿ ಬೇಸರದಿಂದ ಲೊಚಗುಟ್ಟುವಿರಿ,
ನಿಮ್ಮ ಮನೆಯ ಕಾರ್ಯಕ್ರಮಗಳಲ್ಲಿ ಅದನ್ನು ಮರೆಯುವಿರಿ.
ಗುರುಹಿರಿಯರ ಅಮೂಲ್ಯ ಹಿತನುಡಿಗಳನ್ನು ಕೇಳಿ ಚಪ್ಪಾಳೆ ಹೊಡೆಯುವಿರಿ,
ನಿಜ ಜೀವನದಲ್ಲಿ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವಿರಿ.
ಪೋಟೋಗಳಲ್ಲಿ ಸು೦ದರ ಪರಿಸರ, ವಾತಾವರಣ ನೋಡಿ ಆನ೦ದಿಸುವಿರಿ,
ನಿಮ್ಮ ಸುತ್ತ ಮುತ್ತ ಕೆಟ್ಟ ವಾತಾವರಣ ಇಟ್ಟುಕೊಂಡಿರುತ್ತೀರಿ.
ಆ೦ತರ್ಯದಲ್ಲಿ ಸ್ವಾರ್ಥಿಗಳಾಗಿರುವ ನಾವು,
ಬಹಿರ೦ಗವಾಗಿ ತ್ಯಾಗ ಜೀವಿಗಳನ್ನು ಕೊ೦ಡಾಡುತ್ತೇವೆ.
ಮಾತಿಗೂ, ಕೃತಿಗೂ ಅ೦ತರ ಹೆಚ್ಚಾದಾಗ ಈ ಆತ್ಮವ೦ಚಕತನ ಬೆಳೆಯುತ್ತದೆ.
ಇದಕ್ಕೆ ನಾವ್ಯಾರು ಹೊರತಲ್ಲ, ಆದರೆ ಇದು ಅಪಾಯಕಾರಿ.
ಇದನ್ನು ನಾವು ಗೆಲ್ಲುವ ನಿಟ್ಟಿನಲ್ಲಿ ಪ್ರಯತ್ನಿಸೋಣ.
ನಮ್ಮ ನಡೆಗೂ, ನುಡಿಗೂ ಅ೦ತರ ಕಡಿಮೆ ಇರಲಿ.
ಸಾಧ್ಯವಾದಷ್ಟೂ ಹೇಳುವುದನ್ನು ಮಾಡೋಣ - ಮಾಡುವುದನ್ನು ಹೇಳೋಣ.
ನಮ್ಮ ಮಕ್ಕಳೂ ಅದನ್ನೇ ಮುಂದುವರಿಸುತ್ತಾರೆ.
ಈ ವಿಷಯದಲ್ಲಿ ಈಗಿನಿಂದಲೇ ಬದಲಾಗೋಣ....
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಇದು ಮನಸ್ಸುಗಳ ಅಂತರಂಗದ ಚಳವಳಿ

ವಿವೇಕಾನಂದ. ಹೆಚ್.ಕೆ.

ಸೋಮವಾರ, ಮಾರ್ಚ್ 13, 2017

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ

ಅಲ್ಲಿ ನೋಡಿದರೆ ಶರ್ಮಿಳಾ ಇರೋಮಳು ಹುಚ್ಚಿಯಂತೆ 16 ವರ್ಷ ತನ್ನವರ ಮೇಲಿನ ದೌರ್ಜನ್ಯ ತಡೆಯಲು ಉಪವಾಸ ಸತ್ಯಾಗ್ರಹ ಮಾಡಿ ವಿಶ್ವವೇ ಬೆರಗಾಗುವಂತೆ ಮಾಡಿದಳು.ಯಾವ ಕ್ರೀಡಾಪಟುವೂ ಯಾವ ಸಾಹಿತಿಯೂ ಯಾವ ವಿಜ್ಙಾನಿಯೂ ಯಾವ ಹೋರಾಟಗಾರನ ಸಾಧನೆಗೂ ಕಡಿಮೆ ಇಲ್ಲದ ಅದ್ಬುತ ಶಕ್ತಿ ಅದು. ಅಂತಹ ಹೆಣ್ಣು ಮಗಳು ಚುನಾವಣೆಗೆ ಸ್ಪರ್ಧಿಸಿದರೆ ಭಾರತದ ಸರ್ವಶ್ರೇಷ್ಠ ಮತದಾರ ಪ್ರಭಗಳಾದ ನಾವು ಆಕೆಗೆ ನೀಡಿದ್ದು 90 ( Drinks ಅಳತೆಯ ಲೆಕ್ಕದಲ್ಲಿ ಸರಿಯಾಗಿ Ninety ) ಅದರಲ್ಲಿ ಬಹಳಷ್ಟು  ಯಾರೋ ಕುಡಿದು ತಪ್ಪಾಗಿ ಒತ್ತಿಬಿಟ್ಟಿರಬೇಕು.
ಇಲ್ಲಿ ನೋಡಿದರೆ ನಮ್ಮದೇ ಪುಂಡ ಹುಡುಗರು ಯೋಗೇಶ್ ಮಾಸ್ಟರ್ ಅವರ ಮೇಲೆ ತೀರಾ ಅಮಾನವೀಯವಾಗಿ ಕಪ್ಪುಮಸಿ ಎಸೆದು ತಮ್ಮ ಪೌರುಷ ಮೆರೆದಿದ್ದಾರೆ.ವಿಚಾರದಲ್ಲಿ ಭಿನ್ನಾಭಿಪ್ರಾಯ ಇದ್ದರೂ ಅವರೂ ನಮ್ಮವರೇ ಅಲ್ಲವೇ.ಒಂದಷ್ಟು ಪ್ರೀತಿಯಿಂದ ಮಾತನಾಡಬಹುದಿತ್ತು. ಬಂಧನ ಜಾಮೀನು ಪ್ರತಿಭಟನೆ ಎಲ್ಲವೂ National waste ನೆನಪಿರಲಿ ದೇಶಪ್ರೇಮಿಗಳೇ.
ನಮ್ಮಲ್ಲಿ ನೋಡಿದರೆ 70 ರ ಆಸುಪಾಸಿನ ಅಪಾರ ಜಾತಿ ಅಭಿಮಾನಿಗಳನ್ನು ಹೊಂದಿರುವ ಮೊಮ್ಮಕ್ಕಳನ್ನೂ ಪಡೆದಿರುವ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು ಬಹಳ ಅನಾಗರಿಕವಾಗಿ ತಮ್ಮ ವಯಸ್ಸು ಜವಾಬ್ದಾರಿಯನ್ನು ಮರೆತು ಬೀದಿ ಬದಿಯ ಪ್ರಾಣಿಗಳ ಹಾಗೇ ಸಾರ್ವಜನಿಕವಾಗಿ ಕಚ್ಚಾಡುತ್ತಿದ್ದಾರೆ. ಕರ್ನಾಟಕ ಇವರ ಅಪ್ಪನ ಆಸ್ತಿ ಎಂದು ತಿಳಿದರೆ ಅಥವಾ ಇಲ್ಲಿನ 7 ಕೋಟಿ ಜನ ಮೂರ್ಖರು ಎಂದು ಭಾವಿಸಿದರೆ ಅಥವಾ ನಿಜವಾಗಲೂ ನಾವು ಮೂರ್ಖರೇ ಇರಬಹುದೇ ?
ಅಲ್ಲಿ ನೋಡಿದರೆ ನಮ್ಮ ಪ್ರಧಾನಿಯವರು ಎರಡು ರಾಜ್ಯಗಳ ಚುನಾವಣೆ ಗೆದ್ದ ಮಾತ್ರಕ್ಕೆ ಹಿಂದಿನ ಕಾಲದ ರಾಜರುಗಳಂತೆ ದೆಹಲಿಯ ಬೀದಿಗಳಲ್ಲಿ ತಮ್ಮದೇ ಇನ್ನೊಂದು ವರ್ಗದ ಮತದಾರರನ್ನು ಅಣಕಿಸುವಂತೆ ವಿಜಯೋತ್ಸವ ಆಚರಿಸುತ್ತಾರೆ. ಮಾಡಲು ಅದಕ್ಕಿಂತ ಗಂಭೀರ ಕೆಲಸಗಳಿವೆ. ಸಂಭ್ರಮ ಪಕ್ಷದ ಕಾರ್ಯಕರ್ತರ ಆ ಕ್ಷಣದ ಒಂದು ಝಲಕ್ ಅಷ್ಟೆ. " ಸಬ್ ಕಾ ಸಾಥ್ ಸಬ್ ಕಾ ವಿಕಾಸ್ " ಘೋಷಣೆಯಾಗದೆ ನಡವಳಿಕೆಯಾಗಬೇಕು.
ಇನ್ನು ಸಮಾಜವಾದಿ ಪಕ್ಷ ಅಧಿಕಾರಕ್ಕಾಗಿ ಅಪ್ಪ ಮಕ್ಕಳೇ ಸಾರ್ವಜನಿಕವಾಗಿ ಕಿತ್ತಾಡಿ ಮಾನವೀಯತೆಗೇ ಕಳಂಕ ತಂದರು. ಬಹುಜನ ಸಮಾಜ ಪಕ್ಷ ಪ್ರತಿ ಚುನಾವಣೆಗೂ ಇಸ್ಪೀಟು ಆಟದಂತೆ ಜಾತಿ ಧರ್ಮದ ಕಾರ್ಡ್ ಉಪಯೋಗಿಸುತ್ತದೆ.
ಕಾಂಗ್ರೇಸ್ ಪಕ್ಷವಂತೂ ಓಟ್ ಬ್ಯಾಂಕ್ ರಾಜಕೀಯದಲ್ಲಿ ಮುಳುಗಿ ಈಗ ಅದು ವಿಫಲವಾಗುತ್ತಿರುವುದರಿಂದ ದಿಕ್ಲು ತಪ್ಪಿದಂತಾಗಿ ಅಸ್ತಿತ್ವ ಉಳಿಸಿಕೊಳ್ಳಲೂ ಪರದಾಡುತ್ತಿದೆ.
ಪಕ್ಜದ ತಮಿಳುನಾಡಿನಲ್ಲಿ ನಡೆದ ಅಸಹ್ಯ ರಾಜಕೀಯ ಇನ್ನೂ ಮರೆಯಲಾಗುತ್ತಿಲ್ಲ. ತೆಲಂಗಾಣದ ಮುಖ್ಯಮಂತ್ರಿ ಸರ್ವಶಕ್ತನೆಂದು ಹೇಳಲಾದ ವಿಶ್ವದ ಶ್ರೀಮಂತ ದೇವರು ವೆಂಕಟೇಶ್ವರನಿಗೂ ಸರ್ಕಾರದ ಖಜಾನೆಯಿಂದ 4.5 ಕೋಟಿ ಬೆಲೆಯ ವಜ್ರಖಚಿತ ಕಿರೀಟ ದಾನ ಮಾಡಿ ಮುಠ್ಢಾಳತನ ಪ್ರದರ್ಶಿಸಿದ.
ಇನ್ನು ಎಂತಹ ಸಂಧರ್ಭದಲ್ಲಿಯೂ ಸತ್ಯ ಮತ್ತು ವಾಸ್ತವದ ಹುಡುಕಾಟ ನಡೆಸಿ ವಿಶಾಲ ದೃಷ್ಟಿಕೋನದ ದೂರದೃಷ್ಟಿಯ ನಿಲುವುಗಳನ್ನು ತಳೆದು ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡಬೇಕಾದ ಮಾಧ್ಯಮಗಳು ಜನಪ್ರಿಯತೆಯ ಚುಂಗು ಹಿಡಿದು ಓಡುವ ಕುದುರೆಯ ಬಾಲದ ಹಿಂದೆ ಓಡುತ್ತಿವೆ.
ಆದ್ದರಿಂದ ಕನಿಷ್ಠ ಜಾಗೃತ ಮನಸ್ಥಿತಿಯವರು ಈ ರೀತಿಯ ಅಸಹನೆ ಅಜಾಗರೂಕತೆಗೆ ಬಲಿಯಾಗದೆ ತಾಳ್ಮೆ ಸಹನೆಯಿಂದ ಪ್ರತಿಕ್ರಿಯಿಸಿ ಉಡಾಫೆಗಿಂತ ಕ್ರಿಯಾತ್ಮಕತೆಗೆ ಹೆಚ್ಚಿನ ಮಹತ್ವ ನೀಡುವಂತಾಗಲಿ ಎಂದು ಆಶಿಸುತ್ತಾ.....

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.

ಇದು ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.

ಸೋಮವಾರ, ಜನವರಿ 23, 2017

ಕಂಬಳ - ಜಲ್ಲಿಕಟ್ಡು - ಮಡೆಸ್ನಾನ - ಎಡೆಸ್ನಾನ

ಕಂಬಳ - ಜಲ್ಲಿಕಟ್ಡು - ಮಡೆಸ್ನಾನ - ಎಡೆಸ್ನಾನ - ಬೆತ್ತಲೆ ಸೇವೆ - ಎದೆಬಡಿದುಕೊಳ್ಳುವುದು ಎಲ್ಲವನ್ನೂ ಬೆಂಬಲಿಸೋಣ ಕಣ್ರೀ . ಯಾವಾಗೆಂದರೆ,
ಎಲ್ಲಾ MLA ಮಂತ್ರಿಗಳೂ,  IAS IPS IFS KAS ಅಧಿಕಾರಿಗಳು,  ಸಿನಿಮಾ ಧಾರವಾಹಿಗಳ ನಟನಟಿ ನಿರ್ದೇಶಕರೂ, ಮಠಾದೀಶರು , ಬುದ್ದಿಜೀವಿಗಳು,  ಧರ್ಮಾಧಿಕಾರಿಗಳು,  ಎಲ್ಲಾ ಹೋರಾಟಗಾರರೂ,  ಇಂಜಿನಿಯರ್ ಡಾಕ್ಟರ್ ಲಾಯರ್ ಟೀಚರ್ ಪ್ರೊಫೆಸರ್, ವಿಜ್ಙಾನಿಗಳು , ಕೋಟ್ಯಾಧಿಪತಿ ಉದ್ಯಮಿಗಳು, ಸಾಹಿತಿ ಬರಹಗಾರರು,  ಜ್ಯೋತಿಷಿಗಳು ,  ಮುಖ್ಯವಾಗಿ ಎಲ್ಲಾ ಮಾಧ್ಯಮದ ಪ್ರಖಾಂಡ ಪಂಡಿತರು ತಮ್ಮ ಕುಟುಂಬ ಸಮೇತ ಈ ಚಟುವಟಿಕೆಗಳಲ್ಲಿ ಪಾತ್ರಧಾರಿಗಳಾಗಿ ಭಾಗವಹಿಸಿದಾಗ.
                       ಇದು ಸಾಧ್ಯವೇ ಇಲ್ಲ ಕಣ್ರೀ. ಅವರುಗಳು ಯಾವತ್ತಾದರೂ ಹಳೆಯ ಹರಿದ ಮಾಸಲು ಬಟ್ಟೆ ಹಾಕಿಕೊಂಡಿರುವುದನ್ನು ನೋಡಿದ್ದೀರಾ. ಯಾವನಾದರೂ ಕೈ ಕಾಲು ಮಣ್ಣು ಮಾಡಿಕೊಂಡಿರುವುದನ್ನು ಕಂಡಿರುವಿರಾ. ಕೆಸರಲ್ಲಿ ಹೊರಳಾಡುವುದನ್ನು ಗಮನಿಸಿದ್ದೀರಾ.
ಅವರು ನಮ್ಮಷ್ಟು ಮೂರ್ಖರಲ್ಲಾ ಕಣ್ರೀ. ಕೊಬ್ಬಿದ ಕೊಂಬಿನ ಹೋರಿಯನ್ನು ಹಿಡಿಯಲು ಹೋಗಿ ಅವರು ಅಥವಾ ಅವರ ಮಕ್ಕಳು ಗಾಯ ಮಾಡಕೊಳ್ಳುವುದೋ ಸಾಯವುದನ್ನೋ ಅನುಭವಿಸಲು  ಅವರಿಗೇನು ಹುಚ್ಚೇ. ಇದೊಂದು ಮಹಾನ್ ಸಂಪ್ರದಾಯ. ಇದು ನಡೆಯದಿದ್ದರೆ ನಮ್ಮ ಬದುಕು ನಮ್ಮ ಸಂಸ್ಕೃತಿ ನಾಶವಾಗಿ ನಾವು ನರಕಕ್ಕೆ ಹೋಗುತ್ತೇವೆ ಎಂದು ಭಾವಿಸಲು ಅವರಿಗೇನು ಹುಚ್ಚುನಾಯಿ ಕಚ್ದಿದೆಯೇ.
ಬೇಡ ಕಣ್ರೀ,  ಇದು ಮೂರ್ಖರು,  ಮುಗ್ಧರು,  ಮೂಢರು,  ಸ್ವತಂತ್ರ ಚಿಂತನೆ ಇಲ್ಲದ ಗುಲಾಮ ಮನಸ್ಥಿತಿಯವರು , ಬಡವರು, ಶೋಷಿತರು ಆಚರಿಸುವ ಸಂಪ್ರದಾಯಗಳು ಕಣ್ರೀ.
                  ಗ್ರಾಮಗಳಲ್ಲಿ ಎಂತೆಂತಹ ಅದ್ಭುತ ಆಟಗಳಿವೆ. ಇಬ್ಬರು ಆಡುವ - ಗುಂಪಾಗಿ ಆಡುವ ದೈಹಿಕ ಮಾನಸಿಕ ಸಾಮರ್ಥ್ಯಕ್ಜೆ ಸವಾಲಾಗುವ ವೈವಿಧ್ಯಮಯ ಕ್ರೀಡೆಗಳಿವೆ. ಯಾವುದೇ ಅಪಾಯವಿಲ್ಲದ ಯಾರಿಗೂ ತೊಂದರೆ ಕೊಡದ ಯಾರ ಅನುಮತಿಯೂ ಬೇಕಿಲ್ಲದ ಸಂಭ್ರಮದ ಆಟಗಳಿಗೆ ಭಾರತದಂತ ಅತ್ಯುತ್ತಮ ಸಾಂಸ್ಕೃತಿಕ ಇತಿಹಾಸ ಹೊಂದಿರುವ ದೇಶದಲ್ಲಿ ಬರವೇ.
                ಈ ಸಿದ್ದರಾಮಯ್ಯ, ಯಡಿಯೂರಪ್ಪ,  ಕುಮಾರಸ್ವಾಮಿ, ಶಶಿಕಲಾ,   ಪನ್ನೀರ್ ಸೆಲ್ವಂ, ನರೇಂದ್ರ ಮೋದಿ, ಪ್ರಣವ್ ಮುಖರ್ಜಿ , ಟಿವಿಗಳ ಬಾಯಿಬುಡುಕರು ಯಾರೂ ಇದರಲ್ಲಿ ಭಾಗವಹಿಸುವುದಿರಲಿ ಚಪ್ಪಾಳೆ ತಟ್ಟಲು ಬರುವುದೂ ಅನುಮಾನ. ಏನಾದರೂ ಅನಾಹುತ ನಡೆದರೆ ಟಿವಿಗಳಲ್ಲಿ ನೋಡಿ ಪರಿಹಾರ ಘೋಷಿಸಿ ಹೊಟ್ಟೆತುಂಬ ಮೃಷ್ಟಾನ್ನ ಭೋಜನ ಮಾಡಿ Oxygen bed ನಲ್ಲಿ ಮಲಗಿಕೊಂಡು ಬಿಡ್ತಾರೆ ಕಣ್ರೀ.ರಾತ್ರೋ ರಾತ್ರಿ ಒಂದು ಸಣ್ಣ ಮುಷ್ಕರಕ್ಕೆ ಹೆದರಿ ಸುಪ್ರೀ೦ಕೋರ್ಟ್ ನ ಆದೇಶಕ್ಕೆ ವಿರುಧ್ಧವಾಗಿ ಸುಗ್ರೀವಾಜ್ಞೆ ಹೊರಡಿಸಿದರು  ಪಾಪ ಸಂಪ್ರದಾಯ ಅಂತ ಹೇಳಿ ಈ ಹುಚ್ಚಾಟಕ್ಕೆ ಸತ್ತವನ ಹೆಂಡತಿ ಮಕ್ಕಳು ಬೀದಿಪಾಲಾಗ್ತಾರೆ ಕಣ್ರೀ.
           ಇನ್ನೊಂದು ವಿಪರ್ಯಾಸ ಗೊತ್ತೆ.  ಯಾರು ಈ Digital India, online trading,  cashless economy,  smart city, smart village, advanced technology  global leader, ಅಂತೆಲ್ಲಾ ಮಾತನಾಡುತ್ತಾರೋ ಅವರೇ ಹೆಚ್ಚಾಗಿ ಇದನ್ನು ಬೆಂಬಲಿಸುವುದು ಕಾಣುತ್ತಿದೆ. ಇದು ನನಗೆ ಗೊಂದಲ ಮೂಡಿಸಿದೆ. ಇವರು ಭಾವನಾತ್ಮಕವಾಗಿ ಮಾತ್ರ ಯೋಚಿಸುತ್ತಿದ್ದಾರೆಯೇ ಎಂದು.
ಬೇಡ ಕಣ್ರೀ ... ನಿಮ್ಮ ದಮ್ಮಯ್ಯ ...... ಧರ್ಮ ಜಾತಿ ಎಡ ಬಲ ಪಂಥ ಆ ಪಕ್ಷ ಈ ಪಕ್ಷ ಎಲ್ಲಾ ಸ್ವಲ್ಪ ಪಕ್ಕಕ್ಕಿಟ್ಟು ಭಾರತೀಯತೆಯನ್ನು ಮೈಗೂಡಿಸಿಕೊಂಡು ನಾಗರೀಕ ಸಮಾಜ ಕಟ್ಟೋಣ. ಮಾಡಲು ಇದಕ್ಕಿಂತ ಬಹುಮುಖ್ಯ ಕೆಲಸಗಳಿವೆ. ದಯವಿಟ್ಡು ಈ ಓಟಿನ ರಾಜಕೀಯಕ್ಕೆ ಬಲಿಯಾಗಬೇಡಿ. ವಿಶ್ವ ಬದಲಾಗುತ್ತಿರುವಾಗ ನಾವು ಹಿಮ್ಮುಖವಾಗಿ ಚಲಿಸುವುದು ಬೇಡ. ನಾವೆಲ್ಲಾ ಒಂದೇ ದೋಣಿಯ ಪಯಣಿಗರು. ಇನ್ನಷ್ಟು ವಿಶಾಲ ಮನಸ್ಸಿನಿಂದ ಮತ್ತೊಮ್ಮೆ ಯೋಚಿಸಿ.
ನಿಮ್ಮ ಸ್ವಾತಂತ್ರ್ಯ ನಿಮಗಿದ್ದೇ ಇದೆ.

ಪ್ರಬುಧ್ಧ ಮನಸ್ಸು ಪ್ರಬುಧ್ಧ ಸಮಾಜ,
ಇದು ಮನಸ್ಸುಗಳ ಅಂತರಂಗದ ಚಳುವಳಿ,
ವಿವೇಕಾನ೦ದ. ಹೆಚ್.ಕೆ.