ಸ್ನೇಹ ಜೀವಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸ್ನೇಹ ಜೀವಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಆಗಸ್ಟ್ 19, 2017

ಚಿನ್ನ ಧರಿಸಿ ಹೋಗುವಿರಾ ಜೋಕೆ

ಮದುವೆ ,ಇನ್ನಿತರ ಶುಭ ಕಾರ್ಯಕ್ರಮಗಳಿಗೆ ಬೇರೆಯವರ ಚಿನ್ನ ಧರಿಸಿ ಹೋಗುವಿರಾ ಜೋಕೆ..!!

ಚಿನ್ನ ಧರಿಸದಿದ್ದರೆ ಅದೇನೋ ಹೆಣ್ಣಿಗೆ ಕೊರತೆಯೆನ್ನುವಂತೆ ಚಿನ್ನದ ಮೇಲಿನ ವ್ಯಾಮೋಹ ನವ ತರುಣಿಯರಿಂದ ಹಿಡಿದು ಮುದಿ ವಯಸ್ಸಿನ ಮಹಿಳೆಯರಿಂದಿಗೂ ಬೆಳೆದುಬಿಟ್ಟಿದೆ.
ವ್ಯಾಮೋಹಗಳು ಇರಲೇಬಾರದು ಅಂತಲ್ಲ.
ಕೆಲವರ ಅತಿಯಾದ ವ್ಯಾಮೋಹಗಳು ಹಾಗೂ ಚಿನ್ನ ಧರಿಸದಿದ್ದರೆ ಇನ್ನಿತರರ ಮುಂದೆ ನಾನು ಕೀಳಾಗಿ ಗುರುತಿಸಲ್ಪಡುವನೋ ಅನ್ನುವ ಅಂಜಿಕೆಗಳು ಹಲವು ಅವಾಂತರಗಳನ್ನು ಸೃಷ್ಟಿಸಿಬಿಡುತ್ತದೆ.

ಇಂದು ಬಹುತೇಕ ಮದುವೆ ,ಇನ್ನಿತರ ಶುಭ ಸಮಾರಂಭಗಳು ಮಹಿಳೆಯಂದಿರ ಅಲಂಕಾರದ ವೇದಿಕೆಗಳಾಗಿ ಗುರುತಿಸುವಷ್ಟರ ಮಟ್ಟಿಗೆ ಬದಲಾಗಿನಿಂತಿದೆ.
ಪವನ್ ಗಟ್ಟಲೆ ಚಿನ್ನ ಇರುವಂತಹ ಮಹಿಳೆಯರು ಅದನ್ನು ಪ್ರದರ್ಶನದ ವಸ್ತುಗಳನ್ನಾಗಿ ,ಬಡವರನ್ನು ಅಣಕಿಸುವ ರೀತಿಯಲ್ಲಿ ಪ್ರದರ್ಶಿಸಿ ಮೆರೆದಾಡುವಾಗ ಮಧ್ಯಮ ಹಾಗೂ ಬಡ ಕುಟುಂಬದ ಕೆಲವು ಮಹಿಳೆಯಂದಿರು ತಮ್ಮಲ್ಲಿ ಧರಿಸುವಂತಾಗಲು ಬೇಕಾದಷ್ಟು ಚಿನ್ನ ಇಲ್ಲದಿದ್ದರೂ ತಾನೂ ಸಹ ಅವರಿಗೇನು ಕಡಿಮೆ  ಇಲ್ಲದವರಂತೆ ಯಾರ್ಯಾರದೋ ಚಿನ್ನವನ್ನು ಪಡೆದುಕೊಂಡು ,ಅದನ್ನು ಹಾಕಿಕೊಂಡು ಶುಭ ಸಮಾರಂಭಗಳಲ್ಲಿ ಅದನ್ನು ಪ್ರದರ್ಶಿಸಲ್ಪಡುತ್ತಿದ್ದಾರೆ.

ಮದುವೆ ಇನ್ನಿತರ ಸಮಾರಂಭಗಳಲ್ಲಿ ಒಟ್ಟುಗೂಡಿದ ಮಹಿಳೆಯರು ಗುಂಪಾಗಿ ಮಾತುಗಳಿದರೆ ಅಲ್ಲಿ ಅದೇನು ನಡೆದರೂ ಅವರ ಗಮನಕ್ಕೆ ಬರುವಾಗ  ತುಂಬಾ ಸಮಯ ಕಳೆದುಬಿಡುತ್ತದೆ. ಇದನ್ನೇ ಬಂಡವಳನ್ನಾಗಿಸಿರುವ ಕೆಲವು ಮಹಿಳಾ ಕಳ್ಳಿಯಂದಿರು ಅವರ ಬೆಲೆಬಾಳುವ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ತಮ್ಮ ಕೈ ಚಳಕ ತೋರಿಸುತ್ತಾರೆ.
ಯಾರಿಂದಲೋ ಪಡೆದುಕೊಂಡು ಬಂದ ಚಿನ್ನ ಇನ್ಯಾರದೋ ಕೈ ಸೇರಿದಾಗಾಗಿರುತ್ತದೆ ಬಹುತೇಕ ಮಹಿಳೆಯಂದಿರು ಎಚ್ಚರಗೊಳ್ಳುವುದು. ಇಂತಹ ಹಲವು ಪ್ರಕರಣಗಳು ನಡೆಯುತ್ತಲೇ ಇದೆ.

ಚಿನ್ನ ಅನ್ನುವುದು ಮಹಿಳೆಯರ ಅಭಿಮಾನದ ಪ್ರತೀಕ ಅನ್ನುವಂತೆ ಒಂದು ವರ್ಗ ಇಲ್ಲಿ ತಮ್ಮ ಲಾಭಗಳಿಗೋಸ್ಕರ ಬಿಂಬಿಸಿಬಿಟ್ಟಿದ್ದಾರೆ. ಇನ್ನು ಕೆಲವು ಯುವತಿಯರಿಗೆ ಮದುವೆಯ ಸಂದರ್ಭದಲ್ಲಿ ತನ್ನ ಹೆತ್ತವರು ಹಾಕಿದಂತಹ ಚಿನ್ನಾಭರಣಗಳು ಮದುವೆಯ ಪ್ರಥಮ ವಾರ್ಷಿಕವನ್ನು ಆಚರಿಸುವ ಮುನ್ನವೇ ಯಾವುದೋ ಬ್ಯಾಂಕ್ ಲಾಕರ್ ನೊಳಗೆ ಕೆಲವು ಗಂಡಂದಿರು ಅನಿವಾರ್ಯವಾಗಿಯೋ, ಅನಿವಾರ್ಯತೆಯನ್ನು ಸೃಷ್ಟಿಸಿಯೋ ಅಡವಿಟ್ಟಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ಅವರ ಕುಟುಂಬದಲ್ಲಿ ನಡೆಯುವ ಶುಭ ಕಾರ್ಯಗಳಿಗೆ ಇನ್ಯಾರದೋ ಚಿನ್ನವನ್ನು ಪಡೆದುಕೊಂಡು ಹೋಗಬೇಕಾದ ಪರಿಸ್ಥಿತಿಗಳು ಉದ್ಭವವಾಗುತ್ತಿದೆ.
ಬಹುತೇಕ ಮಹಿಳೆಯರಿಗೆ ತನ್ನ ಚಿನ್ನವನ್ನು ಇನ್ನೊಬ್ಬರಿಗೆ ನೀಡಲು ಇಷ್ಟವಿಲ್ಲದಿದ್ದರೂ , ಅನಿವಾರ್ಯತೆಗೆ ಒಗ್ಗಿಕೊಂಡು ಒಲ್ಲದ ಮನಸ್ಸಿನಿಂದ ಕೊಡುತ್ತಾರೆ.
ಇನ್ನು ಕೆಲವು ಸಂದರ್ಭಗಳಲ್ಲಿ ಇಂತಹ ವಿಷಯಗಳು ಸಂಬಂಧಳ ನಡುವೆ ಕಂದಕ ಸೃಷ್ಟಿಯಾಗಲು ಕಾರಣಗಳಾಗುತ್ತಿದೆ.
ನಂಬಿಕೆಯ ಆಧಾರದ ಮೇಲೆ ಚಿನ್ನವನ್ನು ಪಡೆದು ಅದನ್ನು ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ಬ್ಯಾಂಕಿನಲ್ಲಿ ಅಡವಿಡುವ ಅದೆಷ್ಟೋ ಪ್ರಕರಣಗಳು ನಮ್ಮ ಸಮಾಜದ ನಡುವೆ ದಿನನಿತ್ಯ ನಡೆಯುತ್ತಿದೆ.
ಆದುದರಿಂದ ನಿಮ್ಮ ಚಿನ್ನಾಭರಣಗಳನ್ನು ಇತರರಿಗೆ ನೀಡುವಾಗಲೋ, ಇತರರಿಂದ ಪಡೆಯುವಾಗಲೋ ನೂರು ಬಾರಿ ಯೋಚಿಸಿರಿ.
ಲಜ್ಜೆಗಿಂತ ದೊಡ್ಡ ಸೌಂದರ್ಯ ಹೆಣ್ಣಿಗಿಲ್ಲ.
ಚಿನ್ನವನ್ನು ನಿಮ್ಮ ಅಭಿಮಾನದ ಪ್ರತೀಕವಾಗಿ ಪ್ರದರ್ಶಿಸುವಾಗ , ಅದೇ ಚಿನ್ನದ ವ್ಯಾಮೋಹ ನಿಮ್ಮನ್ನು ಸಂಕಷ್ಟಕ್ಕೊಳಪಡಿಸದಂತೆ ಜಾಗರೂಕರಾಗಿರಿ.

✍🏻ಸ್ನೇಹಜೀವಿ ಅಡ್ಕ

ಬುಧವಾರ, ಮೇ 24, 2017

ರಂಝಾನ್

ರಂಝಾನ್ ನಮ್ಮ ಪಾಲಿನ ಪರಿವರ್ತನೆಯ ತಿಂಗಳಾಗಲಿ

ಪಾವನ ತಿಂಗಳು ರಂಝಾನ್ ಮಗದೊಮ್ಮೆ ಆಗತವಾಗಿದೆ .ತಿಂಗಳುಗಳ ಪೈಕಿ ಶ್ರೇಷ್ಟತೆಯನ್ನು ಹೊಂದಿದ ರಂಝಾನ್ ನಮ್ಮ ತಪ್ಪುಗಳನ್ನು ತಿದ್ದಿಕೊಂಡು, ಪ್ರಾಯಶ್ಚಿತಪಟ್ಟು ಜೀವಿಸಲು ನಮಗಿರುವ ಅವಕಾಶವಾಗಿದೆ.
ಒಳಿತನ್ನು ಬೋಧಿಸುವ,ಕೆಡುಕನ್ನು ವಿರೋಧಿಸುವ ಒಂದು ಸಮೂಹ ನಿಮ್ಮಲ್ಲಿರಲಿ ಅವರೇ ವಿಜಯಶಾಲಿಗಳೆಂದು ಕಲಿಸಿಕೊಟ್ಟ ಧರ್ಮದ ಅನುಯಾಯಿಗಳಿಂದು ಕೆಡುಕಿನತ್ತ ಆಕರ್ಷಿತರಾಗುತ್ತಿದ್ದಾರೆ.ಒಳಿತನ್ನು ಸಂಪೂರ್ಣವಾಗಿ ನಾಮಾವಶೇಷ ಮಾಡಿ ಕೆಡುಕಿನತ್ತ ಧಾವಿಸುತ್ತಿರುವ ಯುವ ಸಮೂಹದ ನಡೆಯು ಒಂದು ರೀತಿಯಲ್ಲಿ ಅಚ್ಚರಿಯನ್ನುಂಟು ಮಾಡುವಾಗ, ಸಮುದಾಯದ ಶ್ರೀಮಂತ ವರ್ಗವು ತಮ್ಮಲ್ಲಿರುವ ಸಂಪತ್ತನ್ನು ಕೆಡುಕಿಗೆ ಉಪಯೋಗಿಸಲ್ಪಡುವಂತಹ ಸನ್ನಿವೇಶಗಳನ್ನು ನಮಗೆ ಕಾಣಿಸಲು ಸಾಧ್ಯ.

ಐಹಿಕವಾದ ಜೀವನದ ಲಾಲಸೆಗಳ ಹಿಂದೆ ಜೋತುಬಿದ್ದ ಮನುಷ್ಯನು,ಪಾರತ್ರಿಕ ಜೀವನದ ಕುರಿತಾದ ಚಿಂತೆಯಿಂದ ದೂರವಾಗಿದ್ದಾನೆ.
ಅತೀ ಗೌರವದಿಂದ ಸ್ವೀಕರಿಸಲ್ಪಡಬೇಕಾದ ರಂಝಾನನ್ನು ಮನುಷ್ಯನಿಂದು ತಿರಸ್ಕಾರದ ನೋಟಗಳಿಂದ  ಕಾಣುತ್ತಿದ್ದಾನೆ.ಕಳೆದ ತಲೆ ಮಾರುಗಳು ರಂಝಾನ್ ತಿಂಗಳ ಆಗಮನವಾಗುವಾಗ ಮನೆಯ ಪರಿಸರಗಳನ್ನೆಲ್ಲಾ ಶುಚಿಯಾಗಿಸಿ,ರಂಜಾನ್ ನನ್ನು ಸ್ವೀಕರಿಸಲು ಸಕಲ ತಯಾರಿಗಳನ್ನು ನಡೆಸುತ್ತಿದ್ದರು ಆದರೆ ಕಾಲಕ್ರಮೇಣ ಮನುಷ್ಯರು ಆಧುನಿಕ ಜೀವನಕ್ಕೆ ಒಗ್ಗಿಕೊಂಡು ಜೀವಿಸಲು ಪ್ರಾರಂಭಿಸಿದರು.ರಂಜಾನ್ ತಿಂಗಳ ಮಹತ್ವವು ಗೊತ್ತಿದ್ದೂ, ಗೊತ್ತಿಲ್ಲದವರಂತೆ ನಟಿಸಿ ಸ್ವೇಚ್ಛಾಚಾರ ದ ಜೀವನವನ್ನು ಅವಲಂಬಿಸತೊಡಗಿದರು.

ಕೆಲವು ವರ್ಷಗಳ ಮೊದಲು ರಂಜಾನ್ ತಿಂಗಳು ಬಂತೆಂದರೆ ಮನೆಯೊಳಗಿನ ಟಿ.ವಿ, ಅದ್ಯಾವುದೋ ಮೂಲೆಗಳಲ್ಲಿ ತನ್ನ ಸ್ಥಾನವನ್ನು ಪಡೆದುಕೊಳ್ಳುತ್ತಿತ್ತು.ಆದರೆ,ಇಂದು ಕೆಲವೊಂದು ಮನೆಗಳಲ್ಲಿ ಮಗ್ರಿಬ್ - ಇಶಾ ಬಾಂಗ್ ನ ನಡುವೆ ಧಾರವಾಹಿಗಳದ್ದೇ ಸದ್ದು ಕೇಳಿಸುವಷ್ಡರ ಮಟ್ಟಿಗೆ ಮುಸ್ಲಿಂ ಸಮುದಾಯವು ಮುಂದುವರಿದಿದೆ ಅನ್ನುವುದು ವಿಪರ್ಯಾಸ.

ಸಮುದಾಯದ ನಡುವೆ ಅದೆಷ್ಟೋ ಜನರು ಬಡತನದ ಬೇಗುದಿಯಲ್ಲಿ ದಿನದೂಡುತ್ತಿದ್ದರೂ, ಶ್ರೀ ಮಂತಿಕೆಯಿಂದ ಮೆರೆಯುವ ಒಂದು ವರ್ಗವು ತಮ್ಮ ಸಂಪತ್ತನ್ನು ಅದ್ಯಾವುದೋ ಕ್ರಿಕೆಟ್ ಟೂರ್ನಮೆಂಟಿಗೋ,ಅಥವಾ ಇನ್ನಿತರ ಮನರಂಜನೆ ಕಾರ್ಯಕ್ರಮಗಳಿಗೋ ಲಕ್ಷ, ಲಕ್ಷ ದೇಣಿಗೆಯನ್ನಾಗಿ ನೀಡುವಾಗ ತಮ್ಮ ಪರಿಸರದಲ್ಲೇ ಇರುವ ಬಡವರಿಗೆ ಸಹಾಯ ಮಾಡದೆ ಕುರುಡುತನ ಪ್ರದರ್ಶಿಸುವ ಕಾರಣಗಳಿಂದ ಮುಸ್ಲಿಂ ಸಮುದಾಯದ ಕೆಲವರು ರಂಝಾನ್ ತಿಂಗಳನ್ನು ಭಿಕ್ಷಾಟನೆಯ ತಿಂಗಳನ್ನಾಗಿ ಪರಿವರ್ತಿಸಿರುವುದು ಸಮುದಾಯದ ದುರಂತ.

ಒಂದು ಕಡೆಯಲ್ಲಿ ಉಪವಾಸಿರಾದ ಬಡವರು, ಉಪವಾಸವನ್ನು ತೊರೆಯಲು ಒಂದು ಗ್ಲಾಸ್ ನೀರು,ಒಂದು ಖರ್ಜೂರವನ್ನು ಉಪಯೋಗಿಸಿ ಉಪವಾಸ ತೊರೆಯುವಾಗ ,ಮತ್ತೊಂದು ಕಡೆ ಪ್ರತಿಷ್ಠೆಯ ಹೆಸರಿನಲ್ಲಿ ಸಂಘಟನೆಗಳು ಇಫ್ತಾರ್ ಕೂಟವನ್ನು ಏರ್ಪಡಿಸಿ ,ಸಾವಿರಾರು ರೂಪಾಯಿಗಳ ಆಹಾರ ಪದಾರ್ಥಗಳನ್ನು ಅನಗತ್ಯವಾಗಿ ನಷ್ಟಗೊಳಿಸುತ್ತಿದ್ದಾರೆ.
ಕರಾವಳಿಯ ಹಲವು ಆಸ್ಪತ್ರೆಗಳಲ್ಲಿ ಇಂದು ಖಾಯಿಲೆ ಪೀಡಿತರಾಗಿ ಕಳೆಯುತ್ತಿರುವವರಲ್ಲಿ ಮುಸ್ಲಿಮರ ಸಂಖ್ಯೆಯು ಅಧಿಕವಾಗಿದೆ.ಆಸ್ಪತ್ರೆಗಳಲ್ಲಿ ಸರಿಯಾದ ವ್ಯವಸ್ಥೆಗಳು ಇಲ್ಲದಿರುವ ಕಾರಣಗಳಿಂದಲೋ,ಅಥವಾ ಬಡತನದ ಕಾರಣಗಳಿಂದಲೋ ಅಲ್ಲಿ ಉಪವಾಸ ಹಿಡಿಯಲು ಸಾಧ್ಯವಾಗದೆ ಕಷ್ಟಪಡುವವರೂ ಇದ್ದಾರೆ,ಒಂದು ದಿನದ ಮುಂಚೆ ತಂದಿರಿಸಿದ ಆಹಾರ ಹಳಸಿದ ಕಾರಣದಿಂದ, ಉಪವಾಸ ನೋಡದೆ ಅಸಹಾಯಕ ನೋಟ ಬೀರುವವರಿಗೆ ಉಪವಾಸ ಹಿಡಿಯಲು ಅನುಕೂಲವಾಗುವ ವ್ಯವಸ್ಥೆ ಮಾಡುವ ಪ್ರಯತ್ನ ಯಾರೂ ಮಾಡುವುದಿಲ್ಲ.

ಸರ್ವಶಕ್ತನು ನೀಡಿದ ಅನುಗ್ರಹ,ಸಂಪತ್ತಿನ ಹೆಸರಿನಲ್ಲಿ ಮೆರೆದಾಡಿ, ಬಡ ಜನತೆಯ ಮೇಲೆ ದ್ವೇಷವನ್ನು ಸಾಧಿಸಿ ಮೆರೆದಾಡುವಾಗ, ನನಗೆ ಸಂಪತ್ತು ನೀಡಿ ಪರೀಕ್ಷಿಸಿದ ಸರ್ವಶಕ್ತನಿಗೆ ನನ್ನನ್ನು ಬಡವನನ್ನಾಗಿ ಮಾಡಲು ಸಾಧ್ಯವಿದೆ ಅನ್ನುವ ವಾಸ್ತವ ಸತ್ಯವನ್ನು ಮಾತ್ರ ಯಾರೂ ಅರ್ಥೈಸುವುದಿಲ್ಲ.

ರಂಝಾನ್ ತಿಂಗಳು ನಮ್ಮ ಪಾಲಿಗೆ ಪರಿವರ್ತನೆಯ ತಿಂಗಳಾಗಿ ಬದಲಾಗಲಿ .ಮನದಲ್ಲಿ ಹುದುಗಿರುವ ದ್ವೇಷ,ಮತ್ಸರ, ಅಹಂಕಾರಗಳಿಗೆ ತಿಲಾಂಜಲಿಯಿಟ್ಟು ಪ್ರೀತಿಯಿಂದ ಜೀವಿಸುವಂತವರಾಗೋಣ.
ಧಾರವಾಹಿಯ ಹಿಂದೆ ಜೋತು ಬಿದ್ದು,ಅದರಲ್ಲಿ ಬರುವ ಕಾಲ್ಪಣಿಕ ದೃಶ್ಯಗಳಿಗೆ ಕಂಬನಿ ಮಿಡಿಯುವ ಕಣ್ಣುಗಳು ಪಾರತ್ರಿಕ ನೋಟವ ಬೀರಿ ಕಣ್ಣೀರು ಮಿಡಿಯುವಂತಾಗಲಿ.ಮನೆಯ ಪರಿಸರವನ್ನು ಒಳಿತಿನೆಡೆಗೆ ಆಕರ್ಷಿಸುವಂತೆ ಬದಲಾಯಿಸಿ,ರಂಜಾನ್ ನನ್ನು ಭಿಕ್ಷಾಟನೆಯ ತಿಂಗಳಾಗಿ ಕಾಣುವ ವರ್ಗವನ್ನು ತಡೆಯುವಂತವರಾಗಿ,ತಮ್ಮ ಝಕಾತನ್ನು ಅರ್ಹ ಕುಟುಂಬಗಳಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ.

ಕಳೆದ ರಂಝಾನ್ ನಲ್ಲಿ ನಮ್ಮೊಂದಿಗಿದ್ದ ಅದೆಷ್ಟೋ ಮಂದಿ ಇಂದು ಆರಡಿ ಮಣ್ಣಿನಡಿಯಲ್ಲಿದ್ದಾರೆ.ಅವರಿಗೂ ನಿರೀಕ್ಷೆಗಳಿದ್ದಿರಬಹುದಿತ್ತು,ಬಣ್ಣ, ಬಣ್ಣದ ಆಸೆಗಳೂ ಇದ್ದಿರಬಹುದಿತ್ತು.ಆದರೆ,ಸರ್ವಶಕ್ತನ ಅನುಲ್ಲಂಘನೀಯವಾದ ವಿಧಿಯ ಮುಂದೆ ಅವರಿಗೆ ತಲೆ ಬಾಗಲೇ ಬೇಕಾಯಿತು.ನಮಗೂ ಈ ಜೀವನ ಶಾಶ್ವತವಲ್ಲ,ಮರಣ ಯಾವ ಸಮಯದಲ್ಲಿ,ಯಾವ ರೂಪದಲ್ಲಿ ಬಂದೊದಗುತ್ತೆ ಅಂತ ಯಾರಿಗೆ ತಾನೇ ಹೇಳಲು ಸಾಧ್ಯ..?
ಅಂತಹ ಅವಘಡ ಮರಣಗಳಿಂದ ನಮ್ಮನ್ನು ರಕ್ಷಿಸಲಿ.(ಆಮೀನ್ )
ಈ ರಂಝಾನ್ ನಮ್ಮ ಪಾಲಿನ ಪರಿವರ್ತನೆಯ ತಿಂಗಳನ್ನಾಗಿ ಸ್ವೀಕರಿಸುವವರು ನಾವುಗಳಾಗೋಣವಲ್ಲವೇ..?

*ಸ್ನೇಹಜೀವಿ ಅಡ್ಕ*

ಗುರುವಾರ, ಮೇ 11, 2017

ಜಮಾಅತ್ ಅಧ್ಯಕ್ಷರು

ಜಮಾಅತ್ ಅಧ್ಯಕ್ಷರ ಜವಾಬ್ದಾರಿ ಮಸೀದಿಯೊಳಗಿನ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದಿರಲಿ...!!

   ಸಮುದಾಯದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಗಣನೀಯ ಪ್ರಮಾಣದಲ್ಲಿ ಸಾಧನೆಯನ್ನು ಮಾಡುತ್ತಿರುವಾಗ ಮತ್ತೊಂದು ಕಡೆ ಸಮುದಾಯದ ನಡುವೆ ಆಳವಾಗಿ ಬೇರೂರುತ್ತಿರುವ ಜ್ವಲಂತ ಸಮಸ್ಯೆಗಳಾದ ಬಡತನ ಮತ್ತು ವರದಕ್ಷಿಣೆಯು ಸಮುದಾಯವನ್ನು ಅಧಃಪತನದತ್ತ ಕೊಂಡೊಯ್ಯುತ್ತಲೇ ಇದೆ.

ಕರಾವಳಿ ಭಾಗದಲ್ಲೇ ಪ್ರತಿಯೊಂದು ಜಮಾಅತ್ ಗಳಲ್ಲೂ ಒಂದಕ್ಕಿಂತ ಭಿನ್ನವಾದ ಮತ್ತೊಂದು ಸಮಸ್ಯೆಗಳು ಸಮುದಾಯವನ್ನು ಕಾಡುತ್ತಾ ಇದ್ದರೂ, ಅದರ ಕುರಿತು ಚಿಂತಿಸಬೇಕಾದಂತವರು, ಅದಕ್ಕೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನ ಮಾಡುವುದರ ಬದಲು ಅದನ್ನು ಕಾಣದಂತೆ ನಟಿಸುತ್ತಾ ಇರುವುದು ಕಾಲದ ದುರಂತ..!!

ಸಮುದಾಯದ ಅದೆಷ್ಟೋ ಪ್ರತಿಭೆಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿ ಮುಂದುವರಿಯುತ್ತಿರುವಾಗ ಕೆಲವೊಮ್ಮೆ ಕಾಡುವ ಬಡತನ, ಅವರ ಶೈಕ್ಷಣಿಕ ಸಾಧನೆಗೆ ತಡೆಯಾದರೂ, ಅದನ್ನು ಪ್ರಶ್ನಿಸುವಂತಹ ಮನಸ್ಸುಗಳು ಕೆಲವೊಮ್ಮೆ ನಮಗೆ ಕಾಣಿಸುವುದಿಲ್ಲ.

ಅಧಿಕಾರಕ್ಕಾಗಿ ಹಾತೊರೆದು ಅದೆಷ್ಟು ಕಷ್ಟಪಟ್ಟಾದರೂ ಅಧಿಕಾರವನ್ನು ಪಡೆದ ನಂತರ ತಮ್ಮ ಜವಾಬ್ದಾರಿಕೆಗಳು ಮಸೀದಿಯ ಚಟುವಟಿಕೆಗಳಿಗೆ ಮಾತ್ರ ಸೀಮಿತ ಅಂದುಕೊಂಡು ಮೌನ ವಹಿಸಿದುದರ ಪರಿಣಾಮವಾಗಿಯೇ ಇಂದು ಪ್ರತಿಯೊಂದು ಜಮಾಅತಿನಲ್ಲೂ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿದೆ,ಮುಸ್ಲಿಂ ಸಮುದಾಯದ ಹಲವರು ಇಂದು ಬೀದಿಗಿಳಿದು ಭಿಕ್ಷೆ ಬೇಡಲು ಕಾರಣವಾಗಿದೆ..!!

ಕೇವಲ ಕರಾವಳಿ ಭಾಗದಲ್ಲೇ ಅದೆಷ್ಟೋ ಆಗರ್ಭ ಶ್ರೀಮಂತರನ್ನು ಹೊಂದಿದ ಮುಸ್ಲಿಂ ಸಮುದಾಯದ ವ್ಯಕ್ತಿಗಳಿಂದ ಸಮುದಾಯದ ತಳಮಟ್ಟದ ಅಥವಾ ಬಡ ವರ್ಗದ ಕುರಿತು ಚಿಂತಿಸಿ,ಅವರ ನೋವಿಗೆ ಸ್ಪಂದಿಸುವ ಪ್ರಯತ್ನ ಮಾಡಿದ್ದರೆ ಇಂದು ಸಮುದಾಯ ಇಷ್ಟರ ಮಟ್ಟಿಗೆ ಕಷ್ಟದಾಯಕ ಪರಿಸ್ಥಿತಿಗೆ ಬಂದು ನಿಲ್ಲುತ್ತಿರಲಿಲ್ಲ.

ಸಾರ್ವಜನಿಕ ವೇದಿಕೆಗಳಲ್ಲಿ ಲಕ್ಷ ಲಕ್ಷ ದೇಣಿಗೆ ನೀಡುವ ಶ್ರೀ ಮಂತ ವರ್ಗವು, ಬಡವನೇನಾದರೂ ತನ್ನ ಮನೆಗೆ ಸಮಸ್ಯೆಗಳನ್ನು ಹೇಳಿಕೊಂಡು ಬಂದರೆ ಐವತ್ತೋ,ನೂರೋ ಕೊಟ್ಟು ಕಳುಹಿಸುವಷ್ಟು ನೀಚ ಮಟ್ಟಕ್ಕಿಳಿದು,ಸ್ವಾರ್ಥತೆ ಹಾಗೂ ಹೆಸರಿಗೋಸ್ಕರ ತಮ್ಮ ಸೇವೆಯನ್ನು ವಿಸ್ತರಿಸಿರುವುದು ವಿಪರ್ಯಾಸ.

ತನ್ನ ಜಮಾಅತಿನಲ್ಲಿ ಅದೆಷ್ಟು ಮನೆಗಳಿವೆ ಅನ್ನುವುದರ ಕುರಿತು ಸ್ಪಷ್ಟವಾದ ಅರಿವಿರುವ ಜಮಾಅತ್ ಅಧ್ಯಕ್ಷರಿಗೆ ಆ ಮನೆಯಲ್ಲಿ ಅದೆಷ್ಟು ಮನೆಗಳಲ್ಲಿ ಕಷ್ಟದಾಯಕ ಪರಿಸ್ಥಿತಿಗಳಿವೆ,ಅದೆಷ್ಟು ಸಹೋದರಿಯರು ದಾಂಪತ್ಯ ಜೀವನದ ಹೊಸ್ತಿಲಿಗೆ ಬಂದು ನಿಂತಿದ್ದಾರೆ ಅನ್ನುವುದರ ಕುರಿತು ಚಿಂತಿಸುವಷ್ಟು ಸಮಯವಿಲ್ಲ.
ಮಸೀದಿಯ ವಂತಿಗೆಯನ್ನು ಕೊಡಲು ಒಂದು ವಾರ ತಡವಾದರೆ ಜಮಾಅತಿಗರ ಮುಂದೆ ಗದರಿಸಿ ಪಡೆಯುವಾಗಲೂ, ಯಾಕೆ ನಿನಗೆ ಕೊಡಲು ಸಾಧಿಸಿಲ್ಲ ಅನ್ನುವುದರ ಕುರಿತು ಪ್ರಶ್ನಿಸುವಂತಹ ಸೌಜನ್ಯವೂ ಕೆಲವೊಮ್ಮೆ ಜಮಾಅತ್ ಅಧ್ಯಕ್ಷರಿಗಿರುವುದಿಲ್ಲ.ಬಡತನದ ಬೇಗುದಿಯಲ್ಲಿ ತನ್ನ ಮಗಳನ್ನು ಮದುವೆ ಮಾಡಿಸಲು ಸಾಧ್ಯವಾಗದೆ ಜಮಾಅತಿನ ಮುಂದೆ ನೆರವು ಯಾಚಿಸಿದರೆ ಜಮಾಅತಿನ ಲೆಟರ್ ಹೆಡ್ ಮೂಲಕ ಅರ್ಜಿ ಬರೆದು ಅವರನ್ನು ಭಿಕ್ಷಾಟನೆಗೆ ಕಳುಹಿಸುವ ಜಮಾಅತಿಗರಿರುವುದರಿಂದಲೇ ಇಂದು ಮುಸ್ಲಿಂ ಸಮುದಾಯದಲ್ಲಿ ಭಿಕ್ಷಾಟನೆಯ ಸಂಖ್ಯೆ ವೃದ್ಧಿಸುತ್ತಲೇ ಇರುವುದು.

ಇಂದು ಪ್ರತಿಯೊಂದು ಜಮಾಅತಿನಲ್ಲಿಯೂ ಅದೆಷ್ಟೋ ಸಹೋದರಿಯರು ವಿವಾಹ ಪ್ರಾಯ ಕಳೆದು ಮನೆಯ ನಾಲ್ಕು ಗೋಡೆಗಳ ಮಧ್ಯೆ ಯಾತನೆ ಅನುಭವಿಸುತ್ತಿದ್ದಾರೆ,ಅದರಲ್ಲಿ ಕೆಲವರು ಯತೀಂ ಮಕ್ಕಳಾದರೆ ಇನ್ನು ಕೆಲವರು ಬಡತನದ ಬೇಗುದಿಯಲ್ಲಿ ದಿನದೂಡುತ್ತಿರುವವ ಅಸಹಾಯಕರು.ಒಬ್ಬ ಜಮಾಅತ್ ಅಧ್ಯಕ್ಷನಾಗಿ ನನ್ನಿಂದ ಅದೇನು ಸಾಧ್ಯವಿದೆ ಅನ್ನುವುದರ ಕುರಿತು ಚಿಂತಿಸುವುದರ ಬದಲು ಜಮಾಅತಿನ ಸಮಸ್ಯೆಗಳನ್ನು ತಮ್ಮ ಸಮಸ್ಯೆಗಳಾಗಿ ಮನಗಂಡು ಅದಕ್ಕೆ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಚಿಂತಿಸಬೇಕಾಗಿರುವುದು ಕಾಲಘಟ್ಟದ ಅನಿವಾರ್ಯವಾಗಿದೆ.

ಹಿರಿಯರನ್ನು ಕಂಡಾಗ ಗೌರವಿಸುವಂತಹ ಒಂದು ಕಾಲವಿತ್ತು.ಜಮಾಅತಿನ ಅಧ್ಯಕ್ಷರ ಮಾತಿಗೆ ಬೆಲೆ ಕಲ್ಪಿಸುವ ಕಿರಿಯ ಜೀವಗಳು ಇದ್ದವು.ಆದರೆ ಇಂದು ಬಹುತೇಕ ಜಮಾಅತ್ ವ್ಯಾಪ್ತಿಯಲ್ಲಿ ಹಿರಿಯರ ಮುಂದೆಯೇ ಇನ್ನಷ್ಟೇ ಮೀಸೆ ಚಿಗುರೊಡೆಯಬೇಕಾದ ಹುಡುಗರು ಸಿಗರೇಟ್,ಗಾಂಜಾ ಮುಂತಾದ ಮಾದಕ ವಸ್ತುಗಳ ದಾಸರಾಗಿ ಬದಲಾಗುತ್ತಿದ್ದಾರೆ. ಇದಕ್ಕೆಲ್ಲಾ ಹೊಣೆ ಯಾರು..? ಸಮಾಜ ಹೆತ್ತವರತ್ತ ಕೈ ತೋರಿಸಿದರೂ ಅದರ ಒಂದು ಪಾಲು ಜಮಾಅತ್ ಅಧ್ಯಕ್ಷರಿಗೂ ಇದೆ ಅನ್ನುವುದು ಮಾತ್ರ ಕಟು ಸತ್ಯ.ತಮ್ಮ ಜಮಾಅತಿಗೊಳಪಟ್ಟ ಯುವಕರಿಗೆ ಸರಿಯಾದ ಮಾರ್ಗದರ್ಶನ ನೀಡಿ ಅವರನ್ನು ಸರಿದಾರಿಗೆ ತರುವಂತಹ ಪ್ರಯತ್ನ ಮಾಡಬೇಕಾಗಿರುವುದು ಸಹ ಜಮಾಅತ್ ಅಧ್ಯಕ್ಷರ ಕರ್ತವ್ಯವಾಗಿದೆ.ಆದರೆ ಇದಕ್ಕೆಲ್ಲಾ ಎಲ್ಲಿದೆ ಸಮಯ ತಾನೇ..?
ಒಂದು ಮಸೀದಿಯೊಳಗೆ ನಾಲ್ಕೈದು ಬಣಗಳಾಗಿ ದಿನನಿತ್ಯ ಇಲ್ಲದ ಸಮಸ್ಯೆಗಳನ್ನು ಸೃಷ್ಟಿಸಿ ಗದ್ದಲಗಳನ್ನು ನಡೆಸುವಾಗ ಜಮಾಅತಿನವರ ನೋವಿಗೆ ಸ್ಪಂದನೆಯಾಗಲು ಸಮಯವಾದರೂ ಎಲ್ಲಿದೆ..?!

ಮಸೀದಿಯ ಯಾವುದಾದರೂ ಕಾಮಗಾರಿಗಳಿಗೋ,ಇನ್ನಿತರ ಖರ್ಚುಗಳಿಗೆ ಕಲೆಕ್ಷನ್ ಮಾಡಲು ತೋರುವ ಉತ್ಸುಕತೆ ಜಮಾಅತಿನಲ್ಲಿರುವ ಅಸಹಾಯಕರ ನೋವಿಗೆ ತೋರದೆ ಇರುವುದು ಖೇದಕರ.
ಸಮುದಾಯದ ಅದೆಷ್ಟೋ ಮಕ್ಕಳು ಬಡತನದ ಕಾರಣದಿಂದ ಶೈಕ್ಷಣಿಕ ಹಾಗೂ ಧಾರ್ಮಿಕ ಶಿಕ್ಷಣಗಳನ್ನು ಅರ್ಧಕ್ಕೆ ಮೊಟಕುಗೊಳಿಸಿ ತನ್ನ ಸಣ್ಣ ಪ್ರಾಯದಲ್ಲೇ ಹೋಟೆಲ್ ಕೆಲಸಕ್ಕೋ,ಇನ್ನಿತರ ಕೆಲಸಗಳಿಗೆ ಹೋಗಿ ತಮ್ಮ ಭವಿಷ್ಯಗಳನ್ನು ನಷ್ಟಗೊಳಿಸುವಂತಹ ಸಂದರ್ಭಗಳು ನಮಗೆ ಕಾಣಿಸಲು ಸಾಧ್ಯವಾಗುತ್ತದೆ.ಕೆಲವೊಮ್ಮೆ ಅಂತಹ ಮಕ್ಕಳು ಸಮಾಜಕ್ಕೆ ಮಾರಕವಾಗಿ ಪರಿಣಮಿಸುತ್ತಾರೆ, ಇದಕ್ಕೆಲ್ಲಾ ಹೊಣೆ ಯಾರು..?
ಅಂತಹ ಮಕ್ಕಳ ನೋವಿಗೆ ಆಸರೆಯಾಗಿ ,ಅವರ ಕಷ್ಟಗಳಿಗೆ ಸ್ಪಂದಿಸುವಂತಹ ಪ್ರಯತ್ನ ಒಂದು ವೇಳೆ ಜಮಾಅತ್ ಮಾಡಿರುತ್ತಿದ್ದರೆ ಅವರೂ ಸಹ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದಲಾಗುತ್ತಿದ್ದರು ತಾನೇ.?

ಒಂದು ಜಮಾಅತಿನ ಅಧ್ಯಕ್ಷರಾಗಿ ಮಸೀದಿಯ ಕಾರ್ಯಚಟುವಟಿಕೆಗಳಿಗೆ ತಮ್ಮನ್ನು ತೊಡಗಿಸಿಕೊಳ್ಳದೆ ತಮ್ಮ ಜಮಾಅತಿನಲ್ಲಿರುವ ಅಸಹಾಯಕ ಕುಟುಂಬಗಳಿಗೆ ಆಗುವ ನೆರವನ್ನು ನೀಡುವ ಪ್ರಯತ್ನವನ್ನು ನಡೆಸಬೇಕಾಗಿದೆ.ತಮ್ಮ ಜಮಾಅತಿನ ಯುವಕರು ಹೊರದೇಶಗಳಲ್ಲಿ ದುಡಿಯುತ್ತಿದ್ದರೆ ಅವರನ್ನು ಸಂಘಟಿತರನ್ನಾಗಿಸಿ, ಅವರಿಂದ ಮಾಸಿಕವಾಗಿ ಸಿಗುವ ಮೊತ್ತವನ್ನು ಜಮಾತಿಗೊಳಪಟ್ಟ ಬಡ ಸಹೋದರಿಯರ ಮದುವೆಗೆ ಸಹಾಯವನ್ನು ಒದಗಿಸಿಕೊಡುವ ಮೂಲಕ ನೆರವಾಗಬೇಕಿದೆ.ಊರಿನ ಯುವಕರಿಗೆ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವುದರ ಜತೆಗೆ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಂತಹ ಪ್ರಯತ್ನ, ಮಾರ್ಗದರ್ಶನ ನೀಡಬೇಕಿದೆ.ತಮ್ಮ ಜಮಾಅತಿನಲ್ಲಿ ಬಡತನದ ಕಾರಣದಿಂದ ಶೈಕ್ಷಣಿಕ ಶಿಕ್ಷಣದಿಂದ ವಂಚಿತರಾಗುವ ವಿದ್ಯಾರ್ಥಿಗಳಿಗೆ ಎಲ್ಲಾ ವಿಧದ ನೆರವನ್ನು ನೀಡಿ ಅವರಿಗೆ ಕಲಿಕೆಯ ಮಹತ್ವವನ್ನು ಸಾರಿ ಹೇಳಬೇಕಾಗಿರುವುದು ಸಹ ಒಬ್ಬ ಜಮಾಅತ್ ಅಧ್ಯಕ್ಷನ ಜವಾಬ್ದಾರಿಕೆಯಾಗಿರುತ್ತದೆ.

ಕೇವಲ ಹೆಸರಿಗೋಸ್ಕರ ಜಮಾಅತ್ ಅಧ್ಯಕ್ಷರಾಗಿ, ತಮ್ಮ ಜಮಾಅತಿನ ನೊಂದವರ ನೋವನ್ನು ಅರ್ಥೈಸದೆ ಅವರನ್ನು ಭಿಕ್ಷಾಟನೆಗೆ ತಳ್ಳಲ್ಪಡುವಂತಹ ಪರಿಸ್ಥಿತಿಯನ್ನು ಸೃಷ್ಟಿಸದೆ,ಜಮಾಅತಿನ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನಗಳನ್ನು ಕೈಗೊಳ್ಳುವಂತವರಾಗಿರಿ.

📝ಸ್ನೇಹಜೀವಿ ಅಡ್ಕ

ಶನಿವಾರ, ಮಾರ್ಚ್ 4, 2017

ಅಪ್ಪಾ..!! ನಾನ್ಯಾಕೋ ನಿನಗಿಂದು ಬೇಡವಾದನೇ..?!!

ಅಪ್ಪಾ...
        ತಾಯಿಯ ಉದರದೊಳಗೆ ನಾನು ಬೆಳೆಯುತ್ತಿರುವಾಗ ನೀನು ಅದೆಷ್ಟು ಖುಷಿಪಡುತ್ತಿದ್ದೆ..? ತಾಯಿಗೆ ಫೋನ್ ಮಾಡಿ ಅದೆಷ್ಟು ಸಮಾಧಾನ ಹೇಳುತ್ತಿದ್ದಿ ಅಲ್ವಾ..?
ನನ್ನನ್ನು ನೋಡದೆಯೇ,ನೋಡಬೇಕೆನ್ನುವ ತವಕದಲ್ಲಿ ಅದೆಷ್ಟು ಕನಸುಗಳ ಗೋಪುರ ಕಟ್ಟಿರುವೆಯಾ..? ನಿನ್ನ ಗೆಳೆಯರೊಡನೆ ನನ್ನ ವಿಷಯ ಹೇಳಿ ನೀನು ಸಂತೋಷ ಪಡುವಾಗಲೆಲ್ಲಾ, ಅಮ್ಮ ನಿನ್ನ ಸಂತೋಷ ನೋಡಿ ಆನಂದಬಾಷ್ಪವನ್ನು ಹರಿಸುತ್ತಿರುವುದನ್ನು ನೀನೆಂದಾದರೂ ಗಮನಿಸಿರುವೆಯಾ..? ತಾಯಿಯನ್ನು ಏಕಾಂತದಲ್ಲಿರಿಸಿ ನೀನು ಕೆಲಸವನ್ನು ಅರಸುತ್ತಾ ಅತ್ತ ದೂರದೂರಿಗೆ ಹೋಗುವಾಗ ತಾಯಿಯ ಮನದಾಳದಲ್ಲಿ ಮಡುಗಟ್ಡಿದ ನೋವನ್ನು ಮರೆಮಾಚಿ ನಿನ್ನನ್ನು ಬೀಳ್ಕೊಡುವಾಗಲೂ ಪದೇ ಪದೇ ಬರುತ್ತಿರುವ ನನ್ನ ನೆನಪುಗಳನ್ನು ನಿನಗೆ ಕಾಣದಂತೆ ಅದುಮಿಡುವಾಗಲೂ ನಿನಗೆ ತಾಯಿಯ ಕಣ್ಣೀರನ್ನು ಕಾಣದಂತೆ ಮಾಡಲು ತಾಯಿ ಪಟ್ಟ ಕಷ್ಟ ನೀನು ಅರ್ಥೈಸಿರುವೆಯಾ..?

ಅಪ್ಪಾ...ನಿನಗೊಂದು ವಿಷಯ ಗೊತ್ತಾ..? ಅದೆಷ್ಟೋ ನೋವನ್ನನುಭವಿಸಿ ನನ್ನನ್ನು ಜನ್ಮವಿತ್ತಾಗ ನನ್ನನ್ನು ಮುದ್ದಿಸಿ, ನಿನಗೆ ನನ್ನನ್ನು ತೋರಿಸಿ ಸಂತೋಷವನ್ನು ಹಂಚಿಕೊಳ್ಳಲು ತಾಯಿ ಅದೆಷ್ಟು ಹುಡುಕಾಡಿದಳು ಅಂತ ನಿನಗೊತ್ತಾ..? ಎಲ್ಲಾ ದಿನವೂ ನನ್ನದೇ ವಿಷಯವನ್ನು ಮಾತನಾಡುತ್ತಾ ನನ್ನನ್ನು ನೋಡುವ ತವಕವನ್ನು ಮಾಡುತ್ತಿದ್ದ ನೀನು ಇನ್ನೂ ಯಾಕೆ ನನ್ನನ್ನು ನೋಡಲು ಬಂದಿಲ್ಲ..? ನನ್ನನ್ನು ನೋಡಲು ಬಂದ ನೆಂಟರಿಷ್ಟರೆಲ್ಲಾ ನನ್ನನ್ನು ಎತ್ತಿಕೊಂಡು ನನಗೊಂದು ಮುತ್ತಿಡುತ್ತಾ " ನೀನು ನಿನ್ನ ತಂದೆಯನ್ನೇ ಹೋಲುವಂತಿರುವಿ,ಅದೇ ಮುಖ " ಅಂತೆಲ್ಲಾ ಹೇಳುವಾಗ ತಾಯಿ ನೀನಿಲ್ಲದ ಕೊರಗಿನಿಂದ ಅದೆಷ್ಟು ರಾತ್ರಿ ನಿದ್ದೆಯಿಲ್ಲದೆ ಕಳೆದಿದ್ದಾಳೆ ಅಂತ ನಿನಗೆ ಗೊತ್ತಿದೆಯಾ..?
ನಿನ್ನ ಮೇಲೆ ನನಗೆ ಕನಿಕರವಿದೆ.ನಮಗೋಸ್ಕರನೇ ನೀನಲ್ಲಿ ಕಷ್ಟಪಡುತ್ತಿರುವಿ ಅಂತನೂ ಗೊತ್ತು,ಆದರೆ ಅದೆಷ್ಟು ಸಂಪಾದಿಸಿದರೂ,ಅದೆಷ್ಟು ಬಂಗಲೆಯನ್ನು ನಿರ್ಮಿಸಿದರೂ ಅದರಿಂದ ಸ್ನೇಹ,ಪ್ರೀತಿಯನ್ನು ಖರೀದಿಸಲಾಗದು ಅನ್ನುವ ವಾಸ್ತವ ಸತ್ಯವನ್ನು ಮರೆತು ಬಿಟ್ಟೆಯಾ ನೀನು..??!

ಹೌದು,
         ಇಂತಹ ಅದೆಷ್ಟೋ ಪ್ರಶ್ನೆಗಳನ್ನು ಮುಂದಿಡುವ ಮಕ್ಕಳನ್ನು ನಮಗೆ ಕಾಣಿಸಲು ಸಾಧ್ಯ.ಜೀವನದ ಯಾವುದೋ ಉದ್ದೇಶಗಳನ್ನು ಇಟ್ಟುಕೊಂಡು ಕೆಲಸದ ನಿಮಿತ್ತ ವಿದೇಶಕ್ಕೋ,ದೂರದ ಊರಿಗೋ ಹೋಗುವ ಅದೆಷ್ಟೋ ಅಪ್ಪಂದಿರು ತಮ್ಮ ಮಕ್ಕಳ ಮುಖವನ್ನು ನೋಡಿ ಮುತ್ತಿಡುವಂತಹ ಅವಕಾಶವನ್ನು ಕಳೆದು ನೋವು ತುಂಬಿಕೊಂಡು ಜೀವಿಸುವವರೂ ಇದ್ದಾರೆ.
ಒಂಭತ್ತು ತಿಂಗಳು ಗರ್ಭಧರಿಸಿ ಮುದ್ದು ಮುದ್ದಾದ ಮಗುವಿಗೆ ಜನ್ಮ ನೀಡುವ ಒಬ್ಬಳು ಸಹೋದರಿಯು
ತನ್ನ ಗಂಡನಾದವನು ತನ್ನ ಜತೆ ಇರಬೇಕೆಂದು ಬಯುಸುತ್ತಲೇ ಇರುತ್ತಾಳೆ.ಮಗುವಿನ ಚಲನವಲನಗಳನ್ನು ನೋಡುತ್ತಾ ತನ್ನ ಇನಿಯನ ಜತೆ ಕಳೆಯಲು ಆಕೆಯ ಮನ ತುಡಿಯುತ್ತಿರುತ್ತದೆ.

ಕೆಲವರು ಅನಿವಾರ್ಯ ಕಾರಣಗಳಿಂದ ವಿದೇಶಕ್ಕೆ ಹೋದರೆ ಸಮಯಕ್ಕೆ ಸರಿಯಾಗಿ ರಜೆ ಸಿಗದಿರುವುದರಿಂದಲೋ,ಇನ್ಯಾವುದೋ ಕಾರಣಗಳಿಂದಲೋ ಬರಲು ಅಸಾಧ್ಯವಾದರೆ ಹೆಂಡತಿಯಾದವಳು ತುಂಬಾ ಬೇಸರವನ್ನು ವ್ಯಕ್ತಪಡಿಸುತ್ತಾಳೆ.ಅದೆಷ್ಟೇ ನೋವಿದ್ದರೂ ಅದನ್ನು ತೋರ್ಪಡಿಸಿಕೊಳ್ಳಲು ಇಷ್ಟಪಡುವುದಿಲ್ಲ.ಆ ಸಮಯದಲ್ಲಿ ಹೆಂಡತಿಯ ಮನಸ್ಸನ್ನು ಅರ್ಥೈಸುವ ಪ್ರಯತ್ನ ಮಾಡಬೇಕು.ನಾವು ಸಂಪಾದಿಸುವ ಹಣ,ಆಸ್ತಿಯಿಂದ ನಮ್ಮ ಮಕ್ಕಳಿಗೆ ಪ್ರೀತಿಯನ್ನು ತೋರ್ಪಡಿಸಲು ನಮ್ಮಿಂದ ಅಸಾಧ್ಯ.ಕೆಲವು ಮಕ್ಕಳಿಗೆ ವಯಸ್ಸು ನಾಲ್ಕು ತುಂಬಿದರೂ ಅವರು ತನ್ನ ತಂದೆ ಯಾರೂ ಅಂತನೇ ನೋಡಿರುವುದಿಲ್ಲ.ಕಾರಣ ತಂದೆ ಉದ್ಯೋಗದ ಹೆಸರಿನಲ್ಲಿ ಊರು ಬಿಟ್ಟು ಅದಾಗಲೇ ವರ್ಷ ಐದು ಕಳೆದಿರುತ್ತದೆ.ನಮ್ಮ ಮಕ್ಕಳು ತಂದೆಯ ಪ್ರೀತಿಯಿಂದ ವಂಚಿತರಾಗಿ ದಿನಕಳೆಯಬೇಕಾದ ಸಂದರ್ಭಗಳು ಒದಗಿ ಬರುತ್ತದೆ.
ಇಪ್ಪತ್ತೊಂದನೇ ಶತಮಾನದ ಆಧುನಿಕ ಯುಗದಲ್ಲಿ ಪ್ರೀತಿ,ಪ್ರೇಮಗಳು ಕಾಪಟ್ಯಕ್ಕೆ ಬಲಿಯಾಗುತ್ತಿರುವ ವಿಷಾಧಕರವಾದ ಸನ್ನಿವೇಶದಲ್ಲಿ ನಮ್ಮ ಮಕ್ಕಳಿಗೆ ನಾವು ಪ್ರೀತಿಯನ್ನು ನೀಡದೇ ಹೋದರೆ ಭವಿಷ್ಯದಲ್ಲಿ ಮಕ್ಕಳೂ ನಮ್ಮಿಂದ ಪ್ರೀತಿಯನ್ನು ನಿರೀಕ್ಷಿಸದಂತಹ ಸನ್ನಿವೇಶಗಳು ಸೃಷ್ಟಿಯಾಗಲೂಬಹುದು.
ಅದೆಷ್ಟೇ ಕೆಲಸದ ಒತ್ತಡವಿದ್ದರೂ ತನ್ನ ಪ್ರೀತಿಯ ಮಡದಿ ಮುದ್ದು ಮಗುವಿಗೆ ಜನ್ಮ ನೀಡಿದಳು ಅಂದರಿತಾಗ ನೀವು ನಿಮ್ಮ ಮಡದಿಯ ಸಮೀಪವಿರುವುದೇ ಆಕೆಗೆ ಅತೀ ದೊಡ್ಡ ಸಂತೋಷವಾಗಿರುತ್ತದೆ.
ಮಕ್ಕಳಿಲ್ಲದೆ ಕಣ್ಣೀರ ಧಾರೆ ಹರಿಸುತ್ತಿರುವ ಅದೆಷ್ಟೋ ದಂಪತಿಗಳ ನಡುವೆ ಮುದ್ದಾದ ಮಗುವನ್ನು ನೀಡಿ ಕರುಣಿಸಿದಾಗ ಆ ಮಗುವಿಗೆ ಪ್ರೀತಿ ನೀಡಲು ಸಾಧ್ಯವಾಗದ ಅಪ್ಪಂದಿರು ನಾವುಗಳಾಗದಿರೋಣ.

✍🏻ಸ್ನೇಹಜೀವಿ ಅಡ್ಕ