ಕವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಮೇ 28, 2017

ನಾಲ್ಕು ತುಂಡು ಖರ್ಜೂರ

೧.
ಅಂದು ಅದೆಷ್ಟೋ ದಿನ ಹೊಟ್ಟೆಗಿಲ್ಲದ
ಸಿಟ್ಟನ್ನು ಅದುಮಿಡಲಾಗದೆ
ನಾ ತುಳಿದ ಅಡುಪಿನ ತಿಟ್ಟೆ ಮೌನವಾಗಿ
ಅಣಕಿಸಿದಾಗ ಸಿಟ್ಟು ಕೊಟ್ಟ ಪೆಟ್ಟು ಅಷ್ಟಿಷ್ಟಲ್ಲ.

ನಾನಿಲ್ಲಿ ಉಚಿತವಾಗಿ ಛತ್ರವಿಟ್ಟಿಲ್ಲ
ಹಳೆಯ ಬಾಕಿ ಪೂರ್ತಿ ತೀರಿಸಿದ ಮೇಲೆ
ಇಪ್ತಾರಿನ ರೇಶನಿಗೆ ಮತ್ತೆ ಕಾಲಿಟ್ಟರೆ ಸಾಕು
ಎಂದ ಮೂಸಾಕರ ಮಾತೂ ಮರೆಯಲಾಗುತ್ತಿಲ್ಲ.

೨.
ಅಂದು ನಾಲ್ಕಾರು  ಮನೆಯಿಂದ ಮಸೀದಿಗೆ
ಹೊತ್ತು ತರುತ್ತಿದ್ದ ಕಂಞಯ ಪರಿಮಳ.
ಮೋನಾಕ ಹಂಚಿದ ಈತಫಳದ ರುಚಿಯಲ್ಲಿ
ಉಪವಾಸ ಮುಗಿದದ್ದೇ ತಿಳಿಯುತ್ತಿರಲಿಲ್ಲ.

ರುಚಿ ರುಚಿ ಸೀರಣಿಯ ಆಸೆಯಿಂದ
ಬದ್ರೀಂಙಳ ಆಂಡ್,ಲೈಲತುಲ್ ಕದ್ರ್
ಮತ್ತೆ ಮತ್ತೆ ಬರಬಾರದೆ?
ಎಂದು ಪ್ರಾರ್ಥಿಸದ ದಿನವೇ ಇರಲಿಲ್ಲ.

೩.
ಈಗಂತೂ ನನಗೆ ತೊಂದರೆಯೇ ಇಲ್ಲ.
ಬರುತ್ತಿವೆ ದಿನಾ ರಂಗು ರಂಗಿನ ಕಿಟ್ಟುಗಳು.
ನೂರಾರು ಬಗೆ ಕ್ಲಿಕ್ಕಿಸುವ ಪೋಟೋಗಳು
ಆದರೆ ಯಾಕೋ ಈಗ ಹಸಿವೆಯೇ ಆಗುತ್ತಿಲ್ಲ.

ಹೊಟ್ಟೆಗಿಲ್ಲದಿದ್ದರೂ ಮನದಿ ನೆಮ್ಮದಿ ಇತ್ತು
ಜತನದಿಂದ ಕಾಪಾಡಿದ ಅಮೂಲ್ಯ ಮಾನವಿತ್ತು.
ಅಲ್ಲಾಹನ ಪರೀಕ್ಷೆ ಎದುರಿಸುವ ತಾಳ್ಮೆಯೂ ಇತ್ತು
ನಿರೀಕ್ಷೆ ಗಳೆದುರು ಸೋಲದ ಅಚಲ ವಿಶ್ವಾಸವಿತ್ತು.

೪.
ಕೊಡುವ ಕೈ ಪಡೆಯುವ ಕೈಗಿಂತ ಮಿಗಿಲು
ನೆಬಿ ವಚನವ ಚಿಕ್ಕ ಮಗುವೂ ತಿಳಿದಿರಲು
ಸ್ವಾಭಿಮಾನ ಅಡವಿಡಲು ಮನವಿರದಿದ್ದರೂ
ವಿಧಿಯಿಲ್ಲದೆ ಕೈಯೊಡ್ಡಿ ಕಂಬನಿಗೆರೆದಿದ್ದೇನೆ.

ಹಳೆ ಪಳೆಯುಳಿಕೆಯ ಸುಳಿವಿಲ್ಲದಂತೆ ಮರೆತ
ಉಳ್ಳವರ ಹೆಸರಿನ ತೆವಳಿಕೆಯೇ ಮೆರೆದಿರಲು
ಇಪ್ತಾರಿನ ಪುಣ್ಯ ಹರಾಜಿಗಿಡುವವರ ಶೋಕಿಯ
ಕಂಡು ಕೊರಗಿದ ಮನಕೆ ಶಾಂತಿಯ ಬೇಡುತ್ತೇನೆ.

#ಉಫಾಕು#

ಶುಕ್ರವಾರ, ಏಪ್ರಿಲ್ 14, 2017

ರಾಜಾ ಎಂ.ಬಿ ಗೋಡೆಯಿಂದ...

*ಅದ್ಬುತ ಕವನ,ಒಂದೊಂದು ಪ್ಯಾರವೂ ಸಹ ಒಂದೊಂದು ಸತ್ಯವನ್ನು ಬಿಚ್ಚಿಡುತ್ತದೆ*

1

ಗುರಿತಪ್ಪಿ ಬಂದ ಗುಂಡು ಮೊಲದ
ಹಣೆಯನ್ನ ಸವರಿತು.ಬೆದರಿ ಹಾರಿದ
ಪಾರಿವಾಳದ ರೆಕ್ಕೆ ತುಂಬೀಗ ನೆತ್ತರ ಪ್ರತಿಬಿಂಬ.

'ಹೊರಬಿದ್ದ ಗುಂಡು ರಕ್ತದ ಹವಣಿಕೆಯಲ್ಲಿರುತ್ತದೆ.
ಅದು ಮೊಲವಾದರೇನು,ಮೊಲೆಯಾದರೇನು??'

2

ಹಡಗಿಗೆ ತೂತು ಬಿದ್ದ ವರ್ತಮಾನ.
ಅಲೆಗಳಿಗೆ ಮತ್ತೊಮ್ಮೆ ಜಿಗುಪ್ಸೆ.
ಸಾವುಗಳನ್ನ ಹೆಗಲ ಮೇಲೆ ಹೊತ್ತುಕೊಂಡು
ದಡಗಳವರೆಗೂ ಚಲಿಸಬೇಕಲ್ಲ ಎಂದು...!!

3

ಮೆಚ್ಚಿಸಲು ಹೆಣಗುತ್ತಿದ್ದಾಳೆ ನರ್ತಕಿ.
ಮಹರಾಜರ ಕಣ್ಣು ಅವಳೆದೆಯ ಮೇಲೆ ಚಲಿಸಿದ್ದನ್ನ
ಕಂಡ ಗೆಜ್ಜೆಯೊಂದು ಸದ್ದು ಕಳೆದುಕೊಂಡಿತು.

'ಮೆಚ್ಚಿಸಲೆತ್ನಿಸುವವರು ಅನಿವಾರ್ಯದ ಅತ್ಯಾಚಾರಕ್ಕೂ ಅಣಿಯಾಗಿರಬೇಕು'.

4

ಕವಿ ಸಂವೇದನೆ ಕಳೆದುಕೊಳ್ಳುತ್ತ
ಸಾಗುತ್ತಿದ್ದಾನೆಂದರೆ ಆತ
ಮುಂದುವರೆದು ಕೊಲೆಗಾರನೂ ಆಗಬಹುದು.

'ಪೆನ್ನು ಪಳಗಿಸಿದವನಿಗೆ ಖಡ್ಗದ ಮಾತು ದೊಡ್ಡದಲ್ಲ'.

5

ಪರಸ್ಪರ ಮುಖ ತಿರುಗಿಸಿಕೊಂಡು ಗೋಡೆಯನ್ನ
ದಿಟ್ಟಿಸುತ್ತ ಮಲಗಿರುವ ದಂಪತಿ.
ಅದೇ ಗೋಡೆಗುಂಟ ಮುತ್ತನ್ನಿಕ್ಕಿಕೊಂಡು ಚಲಿಸಿರುವ
ಇರುವೆಗಳು.

'ಗೋಡೆಯೆಂಬುದೀಗ ವಿರಹಕ್ಕೂ ಸಾಕ್ಷಿ, ಪ್ರೇಮಕ್ಕೂ ಸಾಕ್ಷಿ'.

6

ಬೇಟೆ ತೊರೆದು ಬಂದವನನ್ನ ಕಾಡು ಸ್ವಾಗತಿಸಿ
ಹಣ್ಣು ಹಂಪಲ ನೀಡಿ ಸಂತೈಸುತ್ತಿರುವಾಗ
ನವಿಲೊಂದು ಓಡಿ ಬಂದಿತು.

ಬೇಟೆಗಾರನೊಳಗಿನ ಧೂರ್ತತನ ಎಚ್ಚರಗೊಂಡು
ಬಿಲ್ಲನ್ನೆಳೆದು ಬಾಣ ಬಿಟ್ಟನು.
ಕಾಡಿನ ಕಣ್ಣುಗಳೆಲ್ಲ ಕಳಚಿಬಿದ್ದವು.

'ಕಾಡು ಕುರುಡಾಯಿತು.ನಂಬಿಕೆ ಬರಡಾಯಿತು.'

7

ನಾಯಿಯ ವಿಧೇಯತೆಯನ್ನ ಅತಿಶಯವಾಗಿ
ವರ್ಣಿಸುವದರಲ್ಲಿ ಅರ್ಥವಿಲ್ಲ.
ಅದಕ್ಕೆ ವಿಧೇಯತೆ ಎಷ್ಟು ಸಹಜವೋ
ಬಯಲು ಮೈಥುನವೂ ಅಷ್ಟೇ ಸಹಜ.

8

ಮುಗ್ಧ ಪ್ರೇಮಿಯನ್ನ ಅಪಮಾನಿಸಿ ನಡೆದಳು ಹುಡುಗಿ.
ಅವಳೊಂದು ಗೋಡೆ ಕಣೋ,
'ಗೋಡೆಗೆ ಬಣ್ಣ ಬಳಿದು ಶೃಂಗರಿಸಬಹುದೇ ವಿನ; ಭಾವ ತುಂಬಿ ಪ್ರೀತಿಸಲಾಗದು'ಎಂದು ಸಮಾಧಾನಿಸಿದೆ.

9

ನಿನ್ನೆ ಏಟು ತಿಂದ ಮನೆ ಮುಂದೆಯೇ ನಾಯಿ
ರೊಟ್ಟಿಗಾಗಿ ಕಾಯುತ್ತಿದೆ.ಹಸಿವಿನ ಲೀಲೆಗಳೆ ಹೀಗೆ,
ಅವಮಾನಗಳನ್ನ ಅಪಮಾನಗಳನ್ನ ಕ್ಷಣಾರ್ಧದಲ್ಲಿ ಮರೆಸಬಲ್ಲುದು.

10

ನವಿಲು ಬಿಡಿಸುತ್ತಿದ್ದೆ.ಅವ್ವನ ಕೆನ್ನೆಗೆ
ಅಪ್ಪ ಫಟಾರ್ ಎಂದು ಬಾರಿಸಿದ ಸದ್ದು ಕೇಳಿ
ನವಿಲನ್ನ ಪುಸ್ತಕದಲ್ಲಿ ಮಡಚಿಟ್ಟು ಮಲಗಿದೆ.

ಕನಸಿನಲ್ಲಿ ಬಂದ ನವಿಲು ಅವ್ವನ
ಕೆನ್ನೆಯ ಮೇಲೆ ನರ್ತಿಸುತ್ತಿತ್ತು.
ಮುಂಜಾನೆದ್ದು ಪುಸ್ತಕ ತೆರೆದಾಗ

'ಅಲ್ಲಿ ನವಿಲಿರಲಿಲ್ಲ,ಅವ್ವನ ಕೆನ್ನೆಯ ಮೇಲೆ ಗಾಯವಿರಲಿಲ್ಲ.'

ಕೃಪೆ: ರಾಜಾ ಎಂ.ಬಿ ಗೋಡೆಯಿಂದ...

ಗುರುವಾರ, ಆಗಸ್ಟ್ 4, 2016

ಕೆಟ್ಟುಹೋ(ಗ)ದ ಕಾಲ!!?

ಹುಟ್ಟುತ್ತಲೇ ನಮಗೆ 'ದೊಡ್ಡವರಾಗುವ' ಕನಸು
'ದೊಡ್ಡವರಾಗಲು' ಏನೂ ಮಾಡುವ ಮನಸು
ಎಲ್ಲರಂತೆ ನಮಗೊಂದು ಭವ್ಯ ಬಂಗಲೆ ಕನಸು
ಮೂರ್ನಾಕು ಕಾರು ಬೇಕು,ಟೂ ವೀಲರ್ರೂ ಬೇಕು!
ಸರ್ಕಾರಿ ಕೆಲಸ ಬೇಕು,ಗಿಂಬಳ ಕೊಡಲೇಬೇಕು!
ಕೋಟಿಗಟ್ಟಲೆ ಹಣಕೆ ಟ್ಯಾಕ್ಸು ತಪ್ಪಿಸಬೇಕು!

ಅಂದದ ನಾಲ್ಕೈದು ಗರ್ಲ್-ಫ್ರೆಂಡ್ಸ್ ಬೇಕು
ಊರಿನ ಹುಡುಗೀರಿಗೆ ಕಮೆಂಟು ಮಾಡಲೇಬೇಕು
ತಾಳಿಕಟ್ಟಿದ್ದು ಬೇಕು,'ಹೋಗಿ ಬರೋದೂ' ಬೇಕು!
ಮೊಬೈಲು ತುಂಬಾ ಹೊಸದು MMS ಬೇಕು.
ಉಳಿದವರ ಮಾನ ಮಾರಿ ಸಂಪಾದಿಸಬೇಕು
ಊರೇನೇ ಆದರೂ ನನ್ನ ಮಗಳು ಸೇಫಿರಬೇಕು!

ಸಮಾದಲ್ಲಿಷ್ಟು ಸ್ಟೇಟಸು ಬೇಕು
ಕಾನ್ವೆಂಟ್ಸ್ಕೂಲು ಬೇಕು,ಟ್ಯೂಷನ್ ಬೇಕೇ ಬೇಕು
ಗಾಂಜಾ ಅಫೀಮು ನಮಗೆ ಬ್ಲ್ಯಾಕಲ್ಲಾದರೂ ಬೇಕು
ಕುಡಿಯಲೇ ಬೇಕು,ಆರೋಗ್ಯ ಚೆನ್ನಾಗಿರಬೇಕು!
ರೋಗ-ರುಜಿನ,ಕಷ್ಟ-ಕಾರ್ಪಣ್ಯ ದೂರವಿರಬೇಕು.
ಇತರರಿಗೆ ಬಂದರೆ,ನಮಗಿಲ್ಲ ತೊಂದರೆ!

ನೆರೆಹೊರೆಯಲಿ ಹೆಚ್ಚು ಮಾತಿರಬಾರದು
ಕಾರಣವಿಲ್ಲದೆ ಮುಗುಳುನಗೆ 'ಬಾರದು'!
ಅಪರಿಚಿತರಲಿ ಮಾತಿಗಿಳಿಯಬಾರದು.
ಲಾಭವಿಲ್ಲದೆ ನಮಗೆ ನಗ(ಗು)ಬಾರದು!
ಶಾಪಿಂಗ್ ಮಾಲೂ,ಸಿನಿಮಾ ಹಾಲೂ ನಮಗಿದೆ
ಪ್ರಾಯದವರಿಗೇನು? ಅವರಿಗೆ ಆಶ್ರಮವಿದೆ!

ನಮ್ಮ ಧರ್ಮ ಸರ್ವವ್ಯಾಪಿಯಾಗಬೇಕು
ಉಳಿದವರದು ನಶಿಸಿಹೋಗಬೇಕು.
ಕೋಮುಗಲಾಟೆಯಲಿ ಮೂರಂಗಡಿ ಸುಡಬೇಕು
ನಾವು ಜಗಳ ಕಾಯ್ದರೂ ಅವರು ಸುಮ್ನಿರಬೇಕು!
ನಮ್ಮ ಶತ್ರುಗಳು ಸೋಲಬೇಕು,ಸಾಯಬೇಕು!
ಅವರಿವರು ಸೋಲೋದೇ ನಮ್ಮ ಗೆಲುವು!

ನಗರೀಕರಣ,ಕೈಗಾರಿಕೀಕರಣದ ಪರ ನಿಲ್ಲುವಾತ
ಗ್ಲೋಬಲ್ ವಾರ್ಮಿಂಗ್ ಬಗ್ಗೆ ತಲೆ ಕೆಡಿಸುವಾತ!
ಬರಗಾಲ,ಬಿರುಗಾಳಿಯ ಭಯದಿ ಗೋಳಿಡುವಾತ!
ಸುನಾಮಿ,ಚಂಡಮಾರುತವ ಹೆದರುವಾತ!
ಬುದ್ಧಿವಂತರು ನಾವು,ಬುದ್ಧಿಹೀನರೂ ನಾವು!
'ಎಂದೂ ಮುಗಿಯದ ಆಸೆಗಳ ಒಡೆಯರು ನಾವು'!

ಇಲ್ಲದ ನೆಪ ಹುಡುಕಿ ಪರಾಂಬರಿಸಬೇಡಿ!
ಖಂಡಿತಾ ಕಾಲ ಕೆಡಲಿಲ್ಲ.,ಕೆಡಿಸಿದೆವು

~~~>ಹಾರೀಸ್ ಅಹ್ಮದ್ ಪರಪ್ಪು
https://m.facebook/harisahmedparappu

ಶುಕ್ರವಾರ, ಜುಲೈ 22, 2016

ಇಸ್ಲಾಮ್ ...!

ಇಸ್ಲಾಮ್ ...!
...................ನಿನ್ನಲ್ಲಿ ಅದೆಂತಹಾ ಆಕರ್ಷಣೆ ..!!

ಲೋಕ ಇಸ್ಲಾಮನ್ನು ಏಕೆ ಬಯಸುವುದಿಲ್ಲ
ಮನ ಬಂದಂತೆ ಜೀವಿಸಲು ಅದು ಬಿಡುವುದಿಲ್ಲ !!

ಏಕ ದೇವ ನಂಬಿಕೆಯಲ್ಲಿ ನಿಷ್ಠೆ  ಬೇಕಲ್ಲಿ
ದೇವಾದೇಶಗಳ ಪಾಲಿಸುವುದು ಕಡ್ಡಾಯವಿಲ್ಲಿ !!

ಜೀವಂತ ಹೆಣ್ಣನ್ನು ಹೂಳುವಂತಿಲ್ಲ
ಭ್ರೂಣ ಹತ್ಯೆಯ ಹೆಸರಲ್ಲೂಕೊಲ್ಲುವಂತಿಲ್ಲವಿಲ್ಲಿ !!

ಬಡ್ಡಿ ವ್ಯವಹಾರವನ್ನು ಕಿತ್ತೆಸೆದು
ಬಡವರ ದೋಚುವ ಪರವಾನಗಿರಿ ಇಲ್ಲವಿಲ್ಲಿ !!

ದಾನ ಧರ್ಮ ಝಕಾತ್  ಕಡ್ಡಾಯ
ಧನಿಕರ ಮೇಲೆ, ಪೋಷಿಸಲು ಬಡವರನ್ನಿಲ್ಲಿ !!

ದಿನಕೈದು ಕಡ್ಡಾಯ ನಮಾಜ್ಹ್
ಕೆಡುಕಿನಿಂದ ಅಶ್ಲೀಲತೆಯಿಂದ  ರಕ್ಷಿಸುವುದಿಲ್ಲಿ !!

ಅತ್ಯಾಚಾರ ಬಲಾತ್ಕಾರ ಶಿಕ್ಷಾರ್ಹ
ಲೈಂಗಿಕ ಅರಾಜಕತೆ ನಡೆಸುವಂತಿಲ್ಲವಿಲ್ಲಿ..!!

ಹಕ್ಕು ಭಾದ್ಯತೆಗಳನ್ನೆಲ್ಲ ಅರಿತು
ಜೀವನವನ್ನು ನಡೆಸಬೇಕಾಗಿಹುದಿಲ್ಲಿ ..!!

ಕೊಲೆ ಮಹಾ ಪಾಪ ಕೊಲೆಗೆ
ಕೊಲೆಯೇ ಶಿಕ್ಷೆ. ಧೈರ್ಯ ಮಾಡುವಂತಿಲ್ಲವಿಲ್ಲಿ  !!

ಒಬ್ಬನಿಗೆ ಶಿಕ್ಷೆ ಇತರರಿಗೆ ಪಾಠ
ಎಂತಹ ಉತ್ತಮ ಸಮಾಜ ಬೆಳೆದುಬರುವುದಿಲ್ಲಿ !!

ಪಾಪಿಗಳಿಗೆ ದೌರ್ಜನ್ಯ ವೆಸಗಲು
ಮೋಜು ಮಸ್ತಿ ಅನೈತಿಕ ಜೀವನಕ್ಕೆ ಎಡೆ ಇಲ್ಲವಿಲ್ಲಿ !!

ಬಡವರನ್ನು ತುಳಿದು ಹೊಡೆದು ಬಡಿದು
ಅಹಂಕಾರದಿಂದ ಜೀವನ ನಡೆಸುವಂತಿಲ್ಲವಿಲ್ಲಿ !!

ಎಲ್ಲರೂ ಸಮಾನರು ದೇವ ದ್ರಷ್ಟಿಯಲ್ಲಿ
ಉತ್ತಮನವನೇ ಅತೀ ಹೆಚ್ಚು ದೇವನಿಷ್ಠೆಯುಳ್ಳವನಿಲ್ಲಿ !!

ಇಸ್ಲಾಮಿನಲ್ಲಿ ಪರಲೋಕ ಪ್ರಾಮುಖ್ಯ
ಸತ್ಯ ನಂಬಿಕೆ ಸತ್ಕರ್ಮದ ಮೇಲೆ ಸ್ವರ್ಗ ಲಭಿಸುವುದಲ್ಲಿ !!

ಆ ಸ್ವರ್ಗದ ಬಯಕೆ ನರಕದ ಭಯ
ನ್ಯಾಯ ನಿಷ್ಠೆಯ ಜೀವನಕ್ಕಾಗಿ ಸಹಕಾರಿ ಯಾಗುವುದಿಲ್ಲಿ !!

ಈ ಸತ್ಯನಂಬಿಕೆ ಜೀವನಕ್ಕೊಂದು
ಬಂಧನ ವಾಗಿಸುವುದೆಂದು ಯಾಕೆ ಭಾವಿಸುವರೋ ಇಲ್ಲಿ !!

ಹಾಗಿರಲು ಜೀವನ ಬರೇ ಆನಂದಿಸಲು
ಎನ್ನುವವರು ಹೇಗೆ ಈ  ಇಸ್ಲಾಮನ್ನು ಬಯಸಬಹುದಿಲ್ಲಿ !!

ಹೀಗೆಂದುಇಸ್ಲಾಮನ್ನ ಅಳಿಸಲು
ಅದೆಷ್ಟು ಪ್ರಯತ್ನ ಅದೆಷ್ಟು ಕೋಟಿ ಕೋಟಿ ಕೊಲೆ ಇಲ್ಲಿ !!

ಇಷ್ಟೆಲ್ಲಾ ಕೊಂದ ಮೇಲೂ
ಹೇಗೆ ವೃದ್ಧಿಯಾಗುತ್ತಿರುವರು ಮುಸ್ಲಿಂ ಕೋಟಿಗಟ್ಟಲೆಯಲ್ಲಿ !!

ಅದಲ್ಲದೆ  ಲೋಕದಾದ್ಯಂತ ಇಂದು
ಜನ ಇಸ್ಲಾಮ್ ಸ್ವೀಕರಿಸುತ್ತಿರುವರು ಲಕ್ಷಗಟ್ಟಲೆಯಲ್ಲಿಲ್ಲಿ !!

ಇದೆಂತಹ ಆಕರ್ಷಣೆ ಗೆಳೆಯರೇ
ಇದನ್ನು ದೇವಾನುಗ್ರಹವಲ್ಲದೆ ಬೇರೇನು ಹೇಳಲಿ ನಾನಿಲ್ಲಿ !!

ಮತ್ತೇನು ಹೇಳಬಹುದು ಗೆಳೆಯರೇ
ಕೃತಜ್ಞತೆ ಆ ಸ್ರಷ್ಟಿಕರ್ತನಿಗೆ ಸಲ್ಲಿಸಲೇ ಬೇಕಾಗಿದೆ ಇಲ್ಲಿ !!

ಅಬುಲ್ ಅಸ್ರಾ