ನೆನಪು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ನೆನಪು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಮೇ 29, 2017

ನೋಂಬು

ನೋಂಬು ಅಂದ ತಕ್ಷಣ ಬಾಲ್ಯದ ಜಲಕ್ ಗಳು:

1)ನನಗೆ ಇಂದು ನೋಂಬು ಇದೆ, ಎಂದು ಗೆಳೆಯರ ಮುಂದೆ ಮಾಡಿದ ಆ ಶೋಕಿಯ ದಿನಗಳು.

2)ತರಾವೀಹ್'ಗೆ ಖುಷಿಯಾಗಿ ಹೋಗಿ,ಅಲ್ಲಿ ಜೋರಾಗಿ ಆಮೀನ್ ಹೇಳಿ ನಾ ಮುಂದು ತಾ ಮುಂದು ಎಂದು ಗೆಳೆಯರ ನಡುವೆ ಪೈಪೋಟಿ, ನಡುವೆ ಇದನ್ನು ನಿಯಂತ್ರಿಸಲು ಬರುತ್ತಿದ್ದ ಹಾಸ್ಯಮಯ ಊರ ಮುಖಂಡರು .

3)ಸುಬುಹಿ ನಮಾಜ್ ಮಾಡಿ ಸೀದಾ , ಕ್ರಿಕೆಟ್ ಮೈದಾನಕ್ಕೆ ಹೋಗಿ ಕಾರಕ್ಕೆ ,ಈತಫಲ ವನ್ನು ಬೆಟ್ಟಿಂಗ್ ಆಕಿ ಆಡಿದ ಆ ಆಟಗಳು, ಕಡೆಗೆ ನೋಂಬು ಅಲ್ಲವಾ 1 ಕ್ಕೆ 70 ಎಂದು ಬೆಟ್ಟಿಂಗ್ ರದ್ದು ಗೊಳಿಸುತ್ತಿದ್ದ ಆ ಜಾಲಿ ಮುಮೆಂಟ್ಸ್.

4)ಮಧ್ಯಾಹ್ನ ಬ್ರೇಕ್ ಟೈಮ್ ನಮಾಜ್ ಗೆ ತೆರಳಿ, ನಾ ಮುಂದು ತಾ ಮುಂದು ಎಂದಂತೆ ಕುರ್'ಆನ್ ಕತಾ ಓದುತ್ತಿದ್ದ ಮಧುರ ಕ್ಷಣಗಳು, ಆ ವೇಳೆ ನಿಮಿಷಕ್ಕೆ ಕಣ್ಣಾಡಿಸುತ್ತಲೇ ಬೇಗ ಬೇಗ ಪುಟ ಮರುಚಿ ನನ್ನದು ಇಷ್ಟು ಪುಟ ವಾಯಿತು ಎಂದು ಗರ್ವಪಡುತ್ತಿದ್ದ ಆ ತಿಳಿಗೇಡಿತನದ ಸ್ವೀಟ್ ಡೇಸ್.

5)ಆಟದ ಸಮಯ ನೋಂಬು ಇರುವುದು ಮರೆತೋಯಿತು ಎಂಬ ನೆಪ ಹೇಳಿ ನೀರು ಕುಡಿಯುತ್ತಿದ್ದ ಆ ಕ್ಷಣಗಳು.

6)ನೋಂಬು ತೆರೆಯುವ ಕ್ಷಣ ಸಮೋಸಕ್ಕಾಗಿ ಮಾಡಿದ ಹೇಳಲಾಗದ ಕಿತಾಪತಿಗಳು.

7)29 ನೋಂಬು ಆದ ತಕ್ಷಣ ನಾಳೆ ಪೆರ್ಣಾಳ್ ಎಂದು ಕಾದು ಕುಳಿತು ಕಡೆಗೆ 30 ರ ತರಾವೀಹ್ ಗೆ ಸಪ್ಪೆ ಮುಖ ಹೊತ್ತು ಹೋಗಿ ಗೆಳೆಯರ ಮುಂದೆ ನಾನು 30 ಪೂರ್ತಿಯಾಗಬೇಕೆಂದು ಪ್ರಾರ್ಥಿಸಿದ್ದೆ ಎಂದು ಹೇಳಿದ ಕ್ಷಣಗಳು.

8)ಪೆರ್ನಾಳ್ ಗೆ ಎಂದು ಬಾಪ ತರುತ್ತಿದ್ದ ಆ ಚಂದದ ಬಟ್ಟೆಗಳನ್ನು , ದಿನಕ್ಕೆ ನಾಲ್ಕು ಬಾರಿ ಕಬಾರ್ಟ್ ತೆರೆದು ನೋಡುತ್ತಿದ್ದ ಆ ಮರೆಯಲಾಗದ ಕ್ಷಣಗಳು.

9)ಪೆರ್ಣಾಳ್ ನಮಾಜ್ ಮಾಡಿ ತಕ್ಷಣ , "ಪೆರ್ಣಾಳ್ ಡೊ ಕಾಸ್ ತರು" ಎಂದು ಕೇಳುತ್ತಿದ್ದ ಆ ತುಂಟಾಟದ ನೆನಪುಗಳು.
      ವ್ಹಾ ವ್ಹಾ ಎಷ್ಟು ಮಧುರವಲ್ಲವೇ ಬಾಲ್ಯ,ಬುದ್ದಿ ಇರದ ಆ ದಿನಗಳ ನೋಂಬಿನ ದಿವಸಗಳನ್ನು ಮತ್ತೆ ಮತ್ತೆ ನೆನೆಸಿದರೆ ಮನಸ್ಸಿಗೆ ಒಂತರಾ ಖುಷಿ . ಅಲ್ಲವೇ...!!
                     -ಚಪ್ಪಿ.

ಶುಕ್ರವಾರ, ಏಪ್ರಿಲ್ 14, 2017

ಬಾಲ್ಯದ ನೆನಪುಗಳು

ಹಳೆಯ ನೆನಪುಗಳೇ ಒಂದು ಸುಮಧುರ..
ಶಾಲೆಯಲ್ಲಿ ಕಲಿತ ದಿನಗಳ ಸುಂದರ ನೆನಪುಗಳ ಸರಮಾಲೆ... Upto 90's may be.....Village#Life#

★ ಪಿರಿ ಪಿರಿ ಮಳೆಯ ಕಾಲದಲ್ಲೆ ಶಾಲೆ ಶುರು...ನೀಲಿ ಬಿಳಿ ಹಾಕಿಕೊಂಡು ಶಾಲೆಗೆ ಹೊರಟರೆ ಚಡ್ಡಿ ಫುಲ್ಲು ಚಂಡಿ(ಒದ್ದೆ), ಚಪ್ಪಲಿ ಇಲ್ಲದವರದ್ದು ಒಂದು ಕಥೆಯಾದ್ರೆ ಚಪ್ಪಲಿ ಇದ್ದವರ ಚಡ್ಡಿ,ಅಂಗಿ ಶಾಲೆಗೆ ಬರುವಾಗಲೇ ಕೆಂಪು ಕೆಂಪು😝.

★ 9.40ಕ್ಕೆ ಶಾಲೆ ಆರಂಭ ಆದರೂ ಬೆಳಗ್ಗೆ ಎಂಟು ಗಂಟೆಗೆ ಹಾಜರು, ಮಳೆಗಾಲವಾದ್ರೆ ಮಾಡಿನಿಂದ ಬೀಳುವ ನೀರಿಗೆ ಕಾಲು ಹಿಡಿಯುವುದು, ನೀರು ರಟ್ಟಿಸುವುದು, ಸ್ಲೇಟ್ ಒರೆಸುವುದು ಹೀಗೆ ಕಾಲ ಕಳೆಯುತ್ತಿದ್ದ ನೆನಪು,‌ಬೇಸಿಗೆ ಕಾಲವಾದರೆ 7.45ಕ್ಕೆ ಬಂದು ಮೈದಾನದಲ್ಲಿ ಆಟ ಶುರು.

★ ಮನೆಯಿಂದ ಬರುವಾಗ ತೊಟ್ಟೆಯಲ್ಲಿ ಚೆಲ್ಲಿದ ಸಾಂಬಾರು..ಗಂಜಿ, ಅದನ್ನು ಶಾಲೆಯ ತನಕ ತರುವುದೇ ಮಹಾನ್ ಕೆಲಸ.

★ ಬೆಳಗ್ಗೆ ಮತ್ತು ಸಂಜೆ ರಸ್ತೆ ದಾಟುವುದೇ ಭಯಂಕರ ಅನುಭವ.ಎಲ್ಲರು ಒಟ್ಟಿಗೆ ದಾಟುವುದೇ ಮಜ.

★ ಬೆಳಗ್ಗೆ ಬರುವ ಎಲ್ಲಾ ಮಾಸ್ಟ್ರು ಟೀಚರ್ ಗಳಿಗೆ ನಮಸ್ತೆ ಕೊಡುವುದಕ್ಕೆ ನಮ್ಮ‌ನಡುವೆ ಸ್ಪರ್ಧೆ.

★ ಬೆಳಗ್ಗೆ ಬಂದು ಡ್ರಮ್ ಗಳಿಗೆ ನೀರು ತುಂಬಿಸುವುದೇ ಕೆಲವರ ಜವಾಬ್ದಾರಿ, ಸಂಜೆ ಕ್ಲಾಸ್ ಗುಡಿಸಿ ಮನೆಗೆ ಹೋಗಬೇಕು.

★ ಬೆಳಗ್ಗಿನ ಪ್ರಾರ್ಥನೆ, ಒಟ್ರಾಸಿ ನಿಲ್ಲುತ್ತಿದ್ದ ಸಾಲು, ಪೀಟಿ ಮಾಸ್ಟ್ರು ಬಂದರೆ ಒಂದು‌ಕೈ ಅಂತರದಲ್ಲಿ ಕ್ಷಣ ಮಾತ್ರದಲ್ಲಿ ಸರಿಯಾಗುತ್ತಿದ್ದ ಲೈನ್ ಗಳು.

★ ಪೇಪರ್ ಓದುವುದಕ್ಕೆ ಹಿಂದೇಟು ಹಾಕುತ್ತಿದ್ದ ದಿನಗಳು,‌ಹುಡುಗರು ಪೇಪರ್ ಓದಿದ್ರೆ ಕ್ರೀಡಾ ಸುದ್ದಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ.

★ ಪ್ರಾರ್ಥನೆಯಲ್ಲಿ ಕುಸಿದು ಬೀಳುವವರದ್ದೇ ಒಂದು ಅವಸ್ಥೆ, ಹುಷಾರಿಲ್ಲ ಅಂತ ಜಗಲಿಯಲ್ಲೆ ಪ್ರಾರ್ಥನೆಗೆ ನಿಂತವರದ್ದು ಒಂದು ತಂಡ,‌ಲೇಟಾಗಿ ಬಂದವರು ಭಯದಲ್ಲೆ ನಿಂತಿರುತ್ತಿದ್ದ ಚೆಂದ,‌ಕುಸಿದು ಬಿದ್ದವರನ್ನು ಹೊತ್ತುಕೊಂಡು ಹೋಗಿ ಪ್ರಾರ್ಥನೆ ತಪ್ಪಿಸಿಕೊಳ್ಳುವ ಖತರ್ನಾಕ್ ಗ್ರೂಪ್.

★ ಪ್ರಾರ್ಥನೆ ಮುಗಿದ್ರೆ ಸಾಕು ನಡುಕ ಶುರು, ನೋಟ್ಸ್ ಬರೆದಿಲ್ಲ, ಕಾಪಿ ಬರೆದಿಲ್ಲ ಅಂತ ಭಯ...

★ ಈ ಭಯದಲ್ಲೆ ಶುರುವಾಗುತ್ತಿದ್ದ ತಲೆನೋವು,ಜ್ವರ,ಎದೆನೋವು, ಇದ್ರಿಂದಾಗಿ ನೋಟ್ಸ್ ಬರೆಯದಿದ್ದರೂ ಏಟು ಬೀಳದಂತೆ ತಪ್ಪಿಸಿಕೊಳ್ಳಬಹುದಿತ್ತು.

★ ನೋಟ್ಸ್ ಬರೆಯದಿದ್ದರೆ ಬೆಂಚು ಮೇಲೆ ನಿಲ್ಲಿಸುವುದು,‌ತರಗತಿಯ ಹೊರಗೆ ನಿಲ್ಲಿಸುವುದು, ಎರಡು ಕೈ ಎತ್ತಿ ನಿಲ್ಲಿಸುವುದು ಎಲ್ಲ ಆಗಿನ ಶಿಕ್ಷೆಗಳು😝

★ ನಮ್ಮ ಬ್ಯಾಗ್ ಅದರೊಳಗಿದ್ದ ಕಂಪಾಸ್, ಕೈವಾರ ಕೋನಮಾಪಕ ರಬ್ಬರ್ ಪೆನ್ಸಿಲ್..ಕಡ್ಡಿ ಕದಿಯುವುದು,ಅದನ್ನು ತಿನ್ನುವುದು ಯಬ್ಬಾ ಭಯಂಕರ ಮಾರ್ರೆ.

★  ಮಳೆಗಾಲದಲ್ಲಿ ಕಂಪಾಸ್ ತುಂಬ ನೀರು ಕಡ್ಡಿ, ಸ್ಲೇಟ್ ಒರೆಸಲಿಕ್ಕೆ ಬಳಸುತ್ತಿದ್ದೆವು.

★ ಟೀಚರ್ ಮಾಸ್ಟ್ರು ಮಾಡುತ್ತಿದ್ದ ಪಾಠ, ಅರ್ಥವಾಗದಿದ್ದರೂ ಹೂಂಗುಡುತ್ತಿದ್ದ ರೀತಿ.

★ ನೋಡದೆ ಬರೆಯಲು ಕೊಡುತ್ತಿದ್ದ ಉತ್ತರಲೇಖನ, ಹತ್ತರಲ್ಲಿ ಹತ್ತು ಸರಿ ಬರೆದವರಿಗೆ ಸಿಗುತ್ತಿದ್ದ ಶಹಬ್ಬಾಸ್ ಗಿರಿ, ತಪ್ಪಾಗಿದ್ದನ್ನು ಹತ್ತು ಸಲ ಬರೆಯುವ ಶಿಕ್ಷೆ😄

★ ಶಾಲೆಯಲ್ಲಿನ ಚುನಾವಣೆಯಲ್ಲಿ ಅವಿರೋಧ ಆಯ್ಕೆ, ಸತ್ಯ,ಶಾಂತಿ,ಪ್ರೇಮಗಳೆಂಬ ದಳಗಳು, ಅವುಗಳ ನಡುವೆ ಕ್ರೀಡಾ ಸ್ಫರ್ದೆಗಳು.

★ ಕ್ಲಾಸ್ ಲೀಡರ್ ಅನ್ನುವುದೇ ಮಹಾನ್ ಪಟ್ಟ, ಮಾತಾಡಿದವರ ಹೆಸರು ಬರೆಯುವುದೆ ಲೀಡರ್ ಕೆಲಸ, ಮುಂದೆ ನಾವು ಲೀಡರ್ ಆದ್ರೆ ಲಿಸ್ಟ್ ನಲ್ಲಿ‌ಅವನ ಹೆಸರು ಪಕ್ಕಾ ಇರುತ್ತಿತ್ತು..

★ ಮಾಸ್ಟ್ರು ಪ್ರಶ್ನೆ ಕೇಳಿದಾಗ ಮೆಲ್ಲ ಧ್ವನಿಯಲ್ಲಿ ಹೇಳಿ ಕೊಡುವವನೆ ನಿಜವಾದ ಗೆಳೆಯ.😆😜😉.

★ ವಿಜ್ಞಾನ ದಲ್ಲಿ ಬಿಡಿಸಿರುವ ಅಮೀಬಾವೆ ಜೀವನದ ಶ್ರೇಷ್ಠ ಚಿತ್ರಕಲೆ.😇😬.

★ಮಧ್ಯಾಹ್ನದ ಊಟ, ಮನೆಯಲ್ಲಿ ನಾನ್ ವೆಜ್ ಇದ್ರೂ ವಾಸನೆ ಇರುತ್ತೆ ಅಂತ ತರದೆ ಗಂಜಿ ಊಟ ಮಾಡಿದ್ದೇ ಅಂದಿನ ಭಾವೈಕ್ಯತೆ.

★ ಅಂಗಡಿ ಅಲ್ಲಿ ಸಿಗುತ್ತಿದ್ದ ಚುಕ್ಕಿ,ಕಡ್ಲೆ,ಆಜ್ ಮೊಲ ಎಲ್ಲವು ರುಚಿಯೋ ರುಚಿ, ಪುಳಿ ಚಾಕಲೇಟ್ ಫೇಮಸ್, ಶೂಂಠಿ ಮೀಟಾಯಿ,ಕೆತ್ತಿ ಮೀಠಾಯಿ,ಜೇನು ಮೀಠಾಯಿ ಎಲ್ಲವೂ ಅದ್ಭುತ.

★ಊಟಕ್ಕೆ ಅಂಗಡಿಯಲ್ಲಿ ಸಿಗುತ್ತಿದ್ದ ಪ್ಯಾಕೆಟ್ ಉಪ್ಪಿನಕಾಯಿ ಸೂಪರ್ ಟೇಸ್ಟ್.

★ ಶನಿವಾರ ಮಧ್ಯಾಹ್ನ ಬರುತ್ತಿದ್ದ ಐಸ್ ಕ್ಯಾಂಡಿ ಸೈಕಲ್ ,ಅದನ್ನು ತಿನ್ನಲು‌ ಮುಗಿಬೀಳುತ್ತಿದ್ದ ರೀತಿ.

★ ಅಂಗಡಿಯಿಂದ ಗೋಲಿ ಸೋಡ ಕುಡಿಯುತ್ತಿದ್ದುದು.

★ ಚಿವುಟಿದ್ದನ್ನು ಟೀಚರ್ ಹತ್ರ ಹೇಳುವ ಫ್ರೆಂಡ್ಸ್ .

★ ಮಧ್ಯಾಹ್ನ ಅಪರೂಪಕ್ಕೆ ಶಾಲೆಯ ಪಕ್ಕದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮನೆಯವರು,‌‌ಅವರಿಗೆ ಹಾಕುತ್ತಿದ್ದ ಟ್ಯಾಕ್ಸ್ .

★ ಆಗಾಗ ಶಾಲೆಯ ಹತ್ತಿರ ಬಂದು ಮಕ್ಕಳನ್ನು ಭಯಪಡಿಸುತ್ತಿದ್ದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅಜ್ಜಿ.

★ ಕ್ಲಾಸ್ ನಲ್ಲಿ ಮಾಡಿನಲ್ಲಿ ಕೂರುತ್ತಿದ್ದ ಪಾರಿವಾಳ, ಅದರ ಕೂಗು,‌ಅದರ ಹಿಕ್ಕೆ ಅದನ್ನು ಹಿಡಿಯಲು ಮಾಡಿಗೆ ಹತ್ತುತ್ತಿದ್ದ ಸ್ಪೈಡರ್ ಮ್ಯಾನ್ಸ್.

★ ವಾರಕ್ಕೊಂದು ಭಜನಾ ಕಾರ್ಯಕ್ರಮ,‌ಅದರಲ್ಲಿ ವಿಠಲ್ ವಿಠಲ್ ಗೆ ಭಯಂಕರ ಸೌಂಡು ಮತ್ತು ಮಾತೆರ್ಲಾ ಪನ್ಲೆ ಓಂ ನಮಹ ಶಿವಾಯ ಹಾಡಿಗೆ ಬೇಡಿಕೆ ಹೆಚ್ಚು.

★ ರಾಷ್ಟ್ರೀಯ ಹಬ್ಬಗಳು, ಲಾಡು, ಆಗಾಗ ಕೆಲವು ಬರ್ತ್ಡೇಗಳು ಚಾಕೋಲೇಟ್ ಗಳು.

★ ಬೆಂಚು ಡೆಸ್ಕಿನ ಮೇಲೆ ನಮ್ಮದೇ ಶಿಲ್ಪಕಲೆಯ ಕೆತ್ತನೆ.

★ ಸ್ಕೂಲ್ ಡೇ ನಾಟಕ ಡ್ಯಾನ್ಸ್ ಪ್ರಾಕ್ಟಿಸ್, ಹಿಂದಿನ ದಿನ ಊರಿನ ಹಲವೆಡೆಯಿಂದ ಸೆಗಣಿ ತರುವುದು,‌ಅಂಗಳಕ್ಕೆ ಗುಡಿಸುವುದು, ಬಣ್ಣದ ಕಾಗದ ಅಂಟಿಸುವ ಸಂಭ್ರಮ,‌ಸ್ಕೂಲ್ ಡೇಯ ಬೋರಿಂಗ್ ಸಭಾ ಕಾರ್ಯಕ್ರಮ, ಅದೆಷ್ಟೋ ಮಕ್ಕಳಿಗೆ ಮೊದಲ ಬಾರಿಗೆ ಲಿಫ್ಟ್ ಸ್ಟಿಕ್ ಹಾಕಿದ ಅನುಭವ, ರಾತ್ರಿಪೂರ್ತಿ ನಡೆಯುತ್ತಿದ್ದ ಕಾರ್ಯಕ್ರಮ.

★ ಮಳೆಯ ನಡುವೆ ಅಭ್ಯಾಸ ಮಾಡಿದ ಖೋ ಖೋ, ಕಬಡ್ಡಿ ಹುಡುಗಿಯರ ಥ್ರೋಬಾಲ್ ,ಕೆಲವರು ನೋಡುವುದರಲ್ಲಿ ಬ್ಯುಸಿ ಕೆಲವೇ ಕೆಲವರು ಮಾತ್ರ ಆಟಗಾರರು.

★ ಶಾಲೆಯ ಹಿಂದಿದ್ದ ಆ ದೊಡ್ಡ ಕಲ್ಲು ಮತ್ತು ಅದರ ಹಿಂದಿದ್ದ ಹಾರರ್ ಕಥೆಗಳು.

★ ಕ್ಲಾಸ್ ನಲ್ಲಿ ಕುಳಿತು ಕೊಂಡಿರುವಾಗ ಹೊರಗೆ ಪಾಸಾಗುತ್ತಿದ್ದ ಸೀನಿಯರ್ಸ್ ನೋಡಿ ಅವರೆಷ್ಟು ಆರಾಮಾಗಿದ್ದಾರೆ ಅಂದುಕೊಂಡ ಕ್ಷಣಗಳು.

★ ಮನೆಗೆ ವಾಪಾಸ್ ಹೋಗುವಾಗ ತಿಂದ ಸರೋಳಿ,ನಾನಿಲ್ ಕಾಯಿ, ಚೂರಿಕಾಯಿ,‌ಅರ್ಪುದ ಹಣ್ಣು, ನೇರಳೆ ಕಾಯಿ.

★ ಪೆಟ್ಟು ಬೀಳಬಾರದು ಎಂದು ಗಪ್ ಚುಪ್ ಆಗಿ ಇಟ್ಟುಕೊಂಡ ಕೆಲವು ಮರದ ಎಲೆಗಳು,‌ ದೇವರ ಹುಳ, ಮುಟ್ಟಿದರೆ ಚೆಂಡಿನಂತಾಗುವ ಗಟ್ಟಿಹುಳವನ್ನು ಹಿಡಿದುಕೊಂಡು ಹೋಗುತ್ತಿದ್ದ ಅನುಭವಗಳೆ ಚೆಂದ.

ಹೀಗೆ ಇನ್ನು ಇದೆ...ನೆನಪುಗಳೆ ಇಂಪು...ಬಾಲ್ಯದ ನೆನಪುಗಳು ಸದಾ ಹಚ್ಚ ಹಸಿರು..

ಓದಿರುವುದಕ್ಕೆ ಧನ್ಯವಾದ.🙏🏼

ಶನಿವಾರ, ಮಾರ್ಚ್ 4, 2017

ಕ್ರಿಕೇಟ್ ಹುಚ್ಚು

ಕ್ರಿಕೇಟ್ ಹುಚ್ಚು ತಲೆಯನ್ನು ಹೊಕ್ಕ ದಿನಗಳಲ್ಲಿ ಕನಸುಗಳಲ್ಲಿಯೂ ಕ್ರಿಕೇಟ್ ಮಾತ್ರವಾಗಿತ್ತು.

ಐದು ರೂಪಾಯಿಯ ನೀಲಿ ಕಲರಿನ ರಬ್ಬರ್ ಬಾಲ್.

ಮರದ ಅಲಗೆಯಿಂದ ಸ್ವತಃ ನಿರ್ಮಿಸಿದ ಬ್ಯಾಟ್. ಅದಕ್ಕೆ ಸ್ಕೇಚ್ ಪೆನ್ನ್'ನಿಂದ ಬರೆದ ಮೂರಕ್ಷರ - MRF.

ಆಟಗಾರನ ಸಾಮರ್ಥ್ಯಕ್ಕೆ ಅನುಗುಣವಾಗಿ ಬರೆದ ಹೋಸಾ, ಹೋಸಾ ಕ್ರಿಕೇಟ್ ನಿಯಮಗಳು.

ಅಲ್ಲಿ LBW ಗೆ ಯಾವುದೇ ಸ್ಥಾನವಿರಲಿಲ್ಲ.. ಸಿಕ್ಸರ್'ಗಳು ನಿಯಂತ್ರಿಸಲ್ಪಟ್ಟಿದ್ದವು...

ಮೊದಲು ಬ್ಯಾಟ್ ಮಾಡಿದವನಿಗೆ ಮೊದಲು ಬಾಲ್ ಎಸೆಯುವ ಅವಕಾಶವಿರಲಿಲ್ಲ.

ಬಲಗೈ ದಾಂಡಿಗರಾಗಿ ರೆಡಿ ಮಾಡಿದ ಫಿಚ್'ಗಳಲ್ಲಿ ಬ್ಯಾಟ್ ಬೀಸಲು ಪರದಾಡುತ್ತಿದ್ದ ಒಬ್ಬ ಎಡಗೈ ದಾಂಡಿಗ ಎಲ್ಲಾ ಟೀಮಿನಲ್ಲಿಯೂ ಇದ್ದ.

ತೆಂಗಿನ ತೋಟದತ್ತವೂ, ಗೋಡೆಗಳ ಆಚೆಗೂ ದಾಟದೆ ಅವನು ಗಳಿಸಿದ ಬೌಂಡರಿಗಳಾಗಿತ್ತು ಬ್ಯಾಟಿಂಗ್ ಶೈಲಿ.

ಎಲ್ಲಾ ಕಡೆಗಳಲ್ಲಿಯೂ ಇರುತ್ತಿದ್ದರು. ಒಬ್ಬ ಸೆಲ್ಪಿಸ್ಟ್ ಮತ್ತು ಒಬ್ಬ ಜಗಳಗಂಟಿ..

ಔಟ್ ಆದರೂ ಒಪ್ಪಿಕೊಳ್ಳು ತಯಾರಾಗದ ಒಬ್ಬ.

ಎಲ್ಲಾ ಓವರಿನಲ್ಲಿಯೂ ಒಂದು ಬಾಲ್ ಕಮ್ಮಿ ಎಸೆದು ಕೂಡ ಅದಕ್ಕಾಗಿ ತರ್ಕಿಸುವ ಒಬ್ಬ.

ಸ್ವಂತ ಟೀಮಿನ ಕ್ಯಾಚ್ ಬೇಕಂತಲೇ ಬಿಡುತ್ತಿದ್ದ ಒಬ್ಬ ವಿಕೇಟ್ ಕೀಪರ್.

ಅದು ಬ್ಯಾಟನ್ನು ಮುತ್ತಲಿಲ್ಲವೆಂದು ಸುಮ್ಮನೆ ಬ್ಯಾಟಿನ ಹಿಡಿಯನ್ನು ಅಲ್ಲಾಡಿಸಿ ಶಬ್ದವನ್ನು ಕೇಳಿಸುವ ಬ್ಯಾಟ್ಸ್'ಮ್ಯಾನ್..

ಇವನು ಹೇಗಾದರೂ ಒಮ್ಮೆ ಔಟಾದರೆ ಸಾಕೆಂದು ಪ್ರಾರ್ಥಿಸುವವನೊಬ್ಬನು..

ಲಾಸ್ಟ್ ಬಾಲಲ್ಲಿ ಸಿಂಗಲ್ ರನ್ ತೆಗೆದರೆ ನಾನು ಓಡಲ್ಲ ಎಂದು ಹೇಳುತ್ತಾ ಬ್ಯಾಟಲ್ಲಿ ಕುಳಿತುಕೊಳ್ಳಿವ Non striker ..

ಕ್ಯಾಮರಗಳು ಸೆರೆ ಹಿಡಿಯದೆ ಹೋದ ಅದ್ಬುತ್ತವಾದ ಪೀಲ್ಡಿಂಗ್'ಗಳು..

ಡೈವಿಂಗ್ ಕ್ಯಾಚುಗಳು..

ತರ್ಕಗಳು ಹಲವು ರನ್ನ್ ಔಟುಗಳ ಕುರಿತಾಗಿತ್ತು..

ಸಂಶಯಾಸ್ಪದವಾದ ಔಟುಗಳನ್ನು ಒಮ್ಮೆಯು ಸಮ್ಮತ್ತಿಸಿದ ಚರಿತ್ರೆಯಿಲ್ಲ!

ತರ್ಕಿಸುವ ಸಮಯದಲ್ಲಿ ಟೀಮಿನ 'ಸತ್ಯಸಂಧನು' ಬೆರಳೆತ್ತಿ ಔಟೆಂದು ಹೇಳಿದರೆ ಮತ್ತೆ ಕ್ರೀಸ್ ಬಿಡದೆ ಬೇರೆ ಮಾರ್ಗವಿರಲಿಲ್ಲ..

ಮಳೆ ಬಂದು ನೆನೆದ ಪಿಚ್ಚನ್ನು ಸರಿಪಡಿಸಲು ಕಾಣಿಸುತ್ತಿದ್ದ ಆತ್ಮಾರ್ಥತೆಯನ್ನು ಬೇರೆ ಯಾವ ಕೆಲಸದಲ್ಲಿಯೂ ತೋರಿಸಲಿಲ್ಲ.

ಬ್ಯಾಟಿಂಗ್ ಮುಗಿಸಿ ಅಂಗಡಿಯತ್ತ ಹೋಗಲಿಕ್ಕಿದೆ ಎಂದು ಹೇಳಿ ಪೀಲ್ಡಿಂಗ್ ಮಾಡದೆ ನುನುಚಿಕೊಳ್ಳುತ್ತಿದ್ದ ಬಿರುದುದಾರಿಗಳೂ ಇದ್ದರು.

ಹೊಡೆದ ಬಾಲುಗಳು ಚಿಂದಿ ಉಡಾಯಿಸಿದ ಕಿಟಕಿಗಳು ಕೆಲವೊಮ್ಮೆ ಮರುದಿನದ ಆಟಗಳನ್ನು ನಷ್ಟಪಡಿಸಿದ್ದಿದೆ.

ಬಾಲ್ ಕಂಪೌಂಡಿನ ಎತ್ತರದಲ್ಲಿ ಹಾರುವಾಗ ಮೈದಾನ ಖಾಲಿಯಾಗುತ್ತಿತ್ತು.

ಹಲವರು ಓಡಿ ಮನೆಯನ್ನು ತಲುಪಿಯಾಗುತ್ತಿತ್ತು.

ಬೌಂಡರಿ ಲೈನಲ್ಲಿ ಕ್ಯಾಚ್ ಹಿಡಿದು ಮುಂದೆ ಬಂದು ಪ್ರೀಝಾಗಿ ನಿಂತು ತೋರಿಸುತ್ತಿದ್ದೆವು.

ಯಾರದ್ದೋ ಕಾಲು ತಾಗಿದ ಪಾದದ ಗುರುತನ್ನು ತೋರಿಸಿ ಪ್ರೇಕ್ಷಕರು ಸಿಕ್ಸರ್ ಎಂದು ಘೋಷಿಸುತ್ತಿದ್ದರು..

ಇದೆಲ್ಲವೂ ಆ ದಿನದ ಎಂದಿನ ಆಟಗಳಲ್ಲಿ ಕೆಲವೊಂದು ಮಾತ್ರ.

ಬಿಸಿಲು, ಮಳೆಯನ್ನು ಲೆಕ್ಕಿಸದೆ ಅವೇಶ ತುಂಬಿದ ಹೋರಾಟಗಳಿಗೆ ಕೆಲವು ದಿನಗಳಲ್ಲಿ  ವಿದಾಯವನ್ನು ಕೊರುತ್ತಿದ್ದದ್ದು ಪೊದೆಗಳಲ್ಲಿಯೂ, ಕಂಪೌಂಡುಗಳೆಡೆಯಲ್ಲಿಯೂ ಅವಿತು ಕುಳಿತುಕೊಳ್ಳುತ್ತಿದ್ದ ಚೆಂಡುಗಳಾಗಿತ್ತು.

ಅದೂ ನಾವು ಉತ್ತಮ ಫಾರ್ಮಿಗೆ ಬರುವಾಗ..

ಬಾಲ್ಯ ಅದು ನೆಷ್ಟಾಲಜಿಯ ಪರ್ಯಾಯವಾಗಿದೆ.

ನೆನಪುಗಳಲ್ಲಿ ಹಚ್ಚಹಸಿರಾಗಿ ನಿಂತ ಮೈದಾನಗಳಲ್ಲಿ ಹಲವು ಇವತ್ತು ನಾಮವಶೇಷವಾಗಿದೆ.

ಕಟ್ಟಡಗಳು ಮಣ್ಣಿನ ಮೇಲೇರಿದಾಗ ಆ ಸ್ಮಾರಕಗಳು ಬರೀ ನೆನಪುಗಳು ಮಾತ್ರವಾಯಿತು.

ಆದರೆ, ನೆನಪುಗಳಿಗೆ ಮರಣವಿಲ್ಲವಲ್ಲ...

ಅದೆಂಥ ಸುಡುಬಿಸಿಲು ಬಂದರೂ ನಮ್ಮ ಮನಸ್ಸಿನಲ್ಲಿ ಇವುಗಳು ತಂಪಾಗಿ ಹಚ್ಚಳಿಯದೆ ನಿಲ್ಲುತ್ತದೆ.

ನನ್ನೆಲ್ಲಾ ಕ್ರಿಕೇಟ್ ಪ್ರೀಯ ಸ್ನೇಹಿತರಿಗೂ ಸಮರ್ಪಣೆ...

ಭಾನುವಾರ, ಜುಲೈ 3, 2016

ರಂಜಾನ್ ತಿಂಗಳು ಮತ್ತು ಈದ್ ಹಬ್ಬ


(ಬಾಲ್ಯದ ದಿನಗಳ ಒಂದು ಮೆಲುಕು)

ಮುಸ್ಲಿಮರ ಪವಿತ್ರ ಮಾಸ ರಂಜಾನ್.
ತಿಂಗಳು ಪೂರ್ತಿ ವೃತಾನುಷ್ಟಾನ ಮಾಡಿದ ನಂತರದ ತಿಂಗಳು ಒಂದನೇ ತಾರೀಕು ಹಬ್ಬ. ಊರ ಭಾಷೆಯಲ್ಲಿ ಹೇಳೋದಾದ್ರೆ ಪೆರ್ನಾಲ್/ ಈದ್ ಹಬ್ಬ.

ಎಲ್ಲರಂತೆ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವುದೆಂದರೆ ನನಗೂ ಸಂಭ್ರಮ ..
ಬಾಲ್ಯದ ಆ ದಿನಗಳ ಬಗ್ಗೆ ಒಂದಿಷ್ಟು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ ..
ಮೊದ ಮೊದಲು ನನಗೂ ದಿನವಿಡೀ ಉಪವಾಸ ಇರೋದೆಂದ್ರೆ ತುಂಬಾ ಕಷ್ಟವಾಗುತ್ತಿದ್ದರೂ  ಬರಬರುತ್ತಾ ಅದು ಅಭ್ಯಾಸವಾಗಿ ಬಿಟ್ಟಿತ್ತು.
ಶಾಲಾ ದಿನಗಳಲ್ಲಿ ಯಾರಿಗೂ ತಿಳಿಯದಂತೆ ಕಣ್ಣು ತಪ್ಪಿಸಿ ದೂರ ಹೋಗಿ ಊಟ ಮಾಡಿ ಬಂದ ದಿನಗಳಿಗಂತೂ ಕೊರತೆಯಿರಲಿಲ್ಲ. ಇದರಲ್ಲಿ ಈಗಲೂ ನನ್ನನ್ನು ಒಡ ಹುಟ್ಟಿದವರು ತಮಾಷೆ ಮಾಡುವ ವಿಷಯವಿದೆ .. ಹೇಳುತ್ತೇನೆ ನೋಡಿ ..  :)

ಮನೆಯಿಂದ ವೃತಾನುಷ್ಟಾನ ಮಾಡಿ ಕಾಲೇಜಿಗೆ ಹೋಗಿದ್ದೆ. ಆದರೆ ಮಧ್ಯಾಹ್ನ ವಿಪರೀತಿ ಹಸಿವು ಬಾಯಾರಿಕೆ ಆದಾಗ ಕಾಲೇಜು ಪಕ್ಕದ ಗೂಡಂಗಡಿಯ ಬದಿಯಲ್ಲಿ ನಾನು ಬಾಳೆ ಹಣ್ಣು ಮತ್ತು ಸೋಡಾ ಕುಡಿದು ಹಸಿವು/ದಣಿವಾರಿಸಿ ಕೊಂಡಿದ್ದೆ.
ಸಂಧ್ಯಾ ಹೊತ್ತಿಗೆ ಮನೆಗೆ ಬಂದು ಉಪವಾಸಿಗನಂತೆ ಎಲ್ಲರೊಂದಿಗೂ ಬೆರೆತು ತಿಂಡಿ ತಿನ್ನತೊಡಗಿದ್ದೆ.
ಆವಾಗ ಅಮ್ಮ ಕೇಳಿದ್ರು .. "ಗೂಡಂಗಡಿಯ ಬಾಳೆ ಹಣ್ಣು ತಿಂದಾಗ ಹಸಿವು ನೀಗಲಿಲ್ಲವೇ .." ನನಗೆ ಆಶ್ಚರ್ಯ ಕಾದಿತ್ತು .. ಇವರಿಗೆ ಹೇಗಪ್ಪಾ ತಿಳಿದುದು ಎಂದು .. !!!
ಆದರೆ ಪಕ್ಕದಲ್ಲೇ ನನ್ನ ಸಹೋದರ ನಗುತಿದ್ದ .. ಆತ ಬಸ್ಸಿನಲ್ಲಿ ಯಾತ್ರೆ ಮಾಡುವಾಗ ನಾನು ಅಲ್ಲಿ ಅವಿತು ತಿನ್ನುವುದನ್ನು ಕಣ್ಣಾರೆ ಕಂಡು ಮನೆಯಲ್ಲಿ ವರದಿ ಒಪ್ಪಿಸಿದ್ದ ... !!!

ಇನ್ನು ಹಬ್ಬದ ಬಗ್ಗೆ ಹೇಳಬೇಕೆಂದರೆ .. ಅಂದಿನ ಹಾಗೂ ಇಂದಿನ ಹಬ್ಬಗಳಲ್ಲಿನ ವ್ಯತ್ಯಾಸ .. ಅದು ಅಜಗಜಾಂತರ ..
ಅಂದು ಎಲ್ಲವೂ ನೈಜವಾಗಿತ್ತು . ಬಾಲ್ಯದ ಸಂತಸದ ಕ್ಷಣಗಳಿತ್ತು .. ಮುಗ್ದತೆ ಯಿತ್ತು .
ಹಬ್ಬಕ್ಕೆ ಸಡಗರದ ತಯಾರಿ ನಡೆಸುತಿದ್ದೆವು. ಹೊಸ ಬಟ್ಟೆ ಸಿಗುವ ಕನಸು ಕಾಣುತ್ತಿದ್ದೆವು. ಮದಿರಂಗಿ(ಗೋರಂಟಿ) ಹಾಕುವ ಸಂಪ್ರದಾಯವಿತ್ತು .. ಹಬ್ಬದ ದಿನದಂದು ಗೆಳೆಯರೆಲ್ಲರೂ ಸೇರಿ ತಾವು ಎಷ್ಟು ದಿವಸ ಉಪವಾಸವಿದ್ದೆವು ಎಂದೂ ಸಂಖ್ಯೆ ಒಪ್ಪಿಸಬೇಕಾಗಿತ್ತು ..
ಅದರಲ್ಲಿ ಹೆಚ್ಚುದಿನ ಉಪವಾಸವಿದ್ದವ ಹೀರೋ ಆಗಿ ಮೆರೆಯುತ್ತಿದ್ದ .. ಕೆಲವರು ಮೂರು . ನಾಲ್ಕು .. ಹನ್ನೊಂದು .. ಹನ್ನೆರದು.. ಅದರಲ್ಲೂ ಇನ್ನೊಂದು ವಿಶೇಷವೆಂದರೆ ಅರ್ಧ ದಿನ ಉಪವಾಸ .. ಮಧ್ಯಾಹ್ನದವರೆಗೆ ಏನೂ ತಿನ್ನದೇ ಮಧ್ಯಾಹ್ನ ಊಟ ಮಾಡಿದರೆ ಆ ದಿನದ ಉಪವಾಸವನ್ನು ಅರ್ಧ ಉಪವಾಸ ಎಂದು ಪರಿಗಣಿಸುತ್ತಿದ್ದೆವು .. !!!

ಹಬ್ಬದ ಹಿಂದಿನ  ರಾತ್ರಿ ಮದರಂಗಿ ಹಚ್ಚುವ ಸಂಪ್ರದಾಯ .. ಇಂದಿನಂತೆ ಅಂದಿನ ದಿನಗಳಲ್ಲಿ ಟ್ಯೂಬ್ ಮದರಂಗಿ ಇರಲಿಲ್ಲ . ಗಿಡದಿಂದ ಎಲೆಗಳನ್ನು ಕೀಳಿ ಗ್ರೈಂಡ್ ಮಾಡಬೇಕಿತ್ತು .. ಮದರಂಗಿ ಗಿಡ ಎಲ್ಲರ ಮನೆಯಲ್ಲೂ ಇರುತ್ತಿರಲಿಲ್ಲ .. ಅದಕ್ಕೆ ಇನ್ನಾರದೋ ಮನೆಯ ಹಿತ್ತಲಿಗೆ ಹೋಗಬೇಕಾಗಿತ್ತು ..
ಇಂತಹ ಸಂದರ್ಭದಲ್ಲಿ ನೆನಪಾಗುವುದು ನಮ್ಮ ಮನೆಯ ಕೂಗಳತೆ ದೂರದಲ್ಲಿರುವ ಸುಲಾಯರ/ ಶೆಟ್ಟರ ಮನೆ. ಭೂತ ಬಂಗಲೆಯಂತಹ ದೊಡ್ಡ ಮನೆ .. !!!
ಆ ಮನೆ ತುಂಬಾ ಹಳೆಯದಾಗಿದ್ದರೂ ಹೊಸ ಮನೆ ಎಂದು ಹೆಸರು.

ನಮ್ಮಿಬ್ಬರ ಮನೆ/ಕುಟುಂಬದ ಮಧ್ಯೆ ಅನ್ಯೋನ್ಯ ಸಂಬಂಧ .. ಈ ಸ್ನೇಹ ಅಜ್ಜ ಮುತ್ತಜ್ಜರ ಕಾಲದಿಂದಲೇ ಬಂದದ್ದು ಎಂದು ಹೇಳುತ್ತಿದ್ದರು.
ಆ ಮನೆಯ ಅಮ್ಮ ಮೊದಲೇ ನಮಗಾಗಿ ಮದಿರಂಗಿ ಎಲೆಗಳನ್ನು ಕಿತ್ತು ತೆಗೆದಿಡುತ್ತಿದ್ದರು .. ಯಾಕೆಂದರೆ ಹಬ್ಬದ ದಿನ ಖಾತರಿಯಾದರೆ ಎಲ್ಲ ಜನರೂ ಆ ಹಿತ್ತಲಿಗೆ ಲಗ್ಗೆಯಿಡುತ್ತಿದ್ದರು ..ದಿನದ ಕೊನೆಗೆ ಗಿಡ ಬೊಳಾಗುತ್ತಿತ್ತು.
ಆ ಹೊಸಮನೆಯಲ್ಲಿ ನಾಲ್ಕೈದು ನಾಯಿಗಳಿತ್ತು .. ನಮಗೆ ಅದರದ್ದು ಮಾತ್ರ ಭಯ .. !!!

ಈ ಭಯವನ್ನು ಅರಿತೇ .. ನಮ್ಮನ್ನು ದೂರದಿಂದ ಕಂಡಾಗಲೇ ಮನೆಯೊಡೆಯ .. "ಮಾಸ್ಟರ ಮಕ್ಳು ಬರ್ತಿದ್ದಾರೆ ... ನಾಯಿಯನ್ನು ಕಟ್ಟಿಹಾಕು "ಎಂದು ಆಳುಗಳಿಗೆ ಆಜ್ಞೆ ಮಾಡುತ್ತಿದ್ದರು. ನಾಯಿಗಳು ಸಂಕೋಲೆಗಳಲ್ಲಿ ಬಂಧನ ವಾದದ್ದು ಖಾತ್ರಿಯಾದ ನಂತರವೇ ನಾವು ಹಿತ್ತಲಿಗೆ ಹೆಜ್ಜೆ ಹಾಕುತ್ತಿದ್ದೆವು .. !!

ನಾಯಿಯೆಂದರೆ ಭಯಪಡಲು ಬಲವಾದ ಕಾರಣವೊಂದಿದೆ .. ಅಂದು ಬಾಲ್ಯದಲ್ಲಿ ಒಮ್ಮೆ ನಾನು ಶಾಲೆಯಿಂದ ನಡೆದು ಬರುತ್ತಿದ್ದಾಗ ನಾಯಿಯೊಂದು ಬೆನ್ನಟ್ಟಿ ಪರಚಿ ಹಾಕಿತ್ತು . ಅಂದಿನಿಂದ ಶುರುವಾಗಿತ್ತು ಭಯ. ಒಂದು ಸತ್ಯವನ್ನು ಇಂದು ಹೇಳುತ್ತಿದ್ದೇನೆ .. "ಈಗಲೂ ನಾಯಿಯೆಂದರೆ ಭಯ .. ಇದನ್ನು Dog ಫೋಬಿಯ ಎನ್ನಬಹುದೇನೋ ... "
ಕೇವಲ ಮದಿರಂಗಿ ಕಿತ್ತು ತಂದರೆ ಸಾಕಾಗುತ್ತಿರಲಿಲ್ಲ .. ಅದನ್ನು ಚೆನ್ನಾಗಿ ಅರೆದು ನಂತರ ಅದಕ್ಕೆ ಕೆಂಪು ಬಣ್ಣ ಬರಲು ಟೀ ಹುಡಿ, ಹಲಸಿನ ಮರದ ಕಾಂಡದ ತಿಗುಡು/ತೊಗಟೆ, ಕೆಂಪು ಬಣ್ಣದ ಇರುವೆಗಳು .. ಇದನ್ನೆಲ್ಲಾ ಮಿಕ್ಸ್ ಮಾಡುತ್ತಿದ್ದೆವು .. !!! ಬಣ್ಣ ಕೆಂಪಾಗಲು ಏನೆಲ್ಲಾ ಸೇರಿಸಬೇಕೆಂದು ಬಾಲ್ಯ ಗೆಳೆಯರಿಂದ ರೆಸೀಪ್ /recipe ಮೊದಲೇ ಕೇಳಿ ತಿಳಿದುಕೊಳ್ಳುತ್ತಿದ್ದೆವು .. !!!
(ಇತ್ತೀಚಿಗೆ ಮನೆಯಲ್ಲಿ ಇದರ ಬಗ್ಗೆ ಚರ್ಚಿಸುವಾಗ ಅಂದು ನಾವೆಷ್ಟು ಮುಗ್ದರು ಮತ್ತು ಮೂರ್ಖರಾಗಿದ್ದೆವು ಎಂದು ನಾವು ಹೇಳಿಕ್ಕೊಂಡು ತುಂಬಾ ನಕ್ಕಿದ್ದೆವು)

ಹಬ್ಬದ ದಿನದಂದು ಬಿಸಿನೀರಿನಲ್ಲಿ ಅಭ್ಯಂಜನ .. ಪ್ರತ್ಯೇಕ ಪ್ರಾರ್ಥನೆ ಇರುವ ಕಾರಣ ಸುಮಾರು ಎಂಟು ಗಂಟೆಗೆ ಮಸೀದಿಗೆ ತಲುಪಬೇಕು.
ಅಂದು ವಿಶೇಷ ಅಡಿಗೆ . .. ಅದರಲ್ಲೂ ಇಡ್ಲಿ ಮತ್ತು ಕೋಳಿ ಸಾರು ಕಡ್ಡಾಯ ..
ಜೊತೆಗೆ ಎಣ್ಣೆ ಖಾದ್ಯಗಳು ..
ಸ್ನಾನ ಮಾಡಿ, ಹೊಸ ಬಟ್ಟೆಯುಟ್ಟು ಗಾಂಭೀರ್ಯದಿಂದ ಮಸೀದಿಗೆ ಹೋಗಿ ಪ್ರಾರ್ಥನೆ ಮಾಡಿ .. ತಮ್ಮ ಉಪವಾಸದ ಲೆಕ್ಕ ಗೆಳೆಯರಿಗೆ ಒಪ್ಪಿಸಿ, ಕಯ್ಯಲ್ಲಿ ಹಚ್ಚಿದ್ದ ಮದಿರಂಗಿಯ
ಬಣ್ಣಕ್ಕೆ ಮಾರ್ಕು ಪಡೆದು ಗೆಳೆಯರ ಮನೆಗೆ ಹೋಗಿ .. ಜೊತೆಗೆ ಅವರನ್ನು ತಮ್ಮ ಮನೆಗೂ ಕರೆದು ತಂದು ಸಂಭ್ರಮಿಸುತ್ತಿದ್ದ ಕಾಲವೊಂದಿತ್ತು .. !!

ಯುಗಾದಿ ಬಗ್ಗೆ ಹಾಡು ಇದೆಯಲ್ಲಾ ...
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ... ಅಂತೆಯೇ ಪ್ರತಿ ವರುಷವೂ ಪೆರ್ನಾಲ್ ಬರುತಿದೆ ...

ಇಂದಿಗೂ ಹಬ್ಬಗಳೆಂದರೆ ಮನಸ್ಸಿಗೆ ಖುಷಿ .
ಆದರೂ ಬಾಲ್ಯದ ದಿನಗಳೊಂದಿಗೆ ತುಲನೆ ಮಾಡುವಾಗ ನೀರಸವಾಗಿ ಕಾಣುತ್ತದೆ . ಬಹುಶಃ ಆ ಮುಗ್ದ ಮನಸಿನ ಭಾವನೆಗಳು ಮನದಲ್ಲಿ ಮನೆಮಾಡಿಕೊಂಡ ಕಾರಣವಿರಬಹುದು.
ಕೆಲವೊಮ್ಮೆ ಮನಬಿಚ್ಚಿ ನಗುವಾಗಲೂ ಕೃತಕದಂತೆ ಕಾಣುತ್ತದೆ .
ಆದರೂ ಹಬ್ಬವನ್ನು ಸಂಭ್ರಮದಲ್ಲಿ ಆಚರಿಸುತ್ತೇವೆ .. ನಮ್ಮ ಮುಂದೆ ನಿಂತಿರುವ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಇದೊಂದು ಅವಿಸ್ಮರಣೀಯ ಸಂಭ್ರಮವಾಗಲಿ ಎಂಬ ಆಶಯ ಮನದಲ್ಲಿ.

ಗೆಳೆಯರಿಗೆಲ್ಲರಿಗೂ ಮುಂಚಿತವಾಗಿ ಹಬ್ಬದ ಶುಭಾಶಯಗಳು.

ಕೆ. ಎ. ಎಂ. ಅನ್ಸಾರಿ