ಸುನ್ನಿ ಟುಡೇ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸುನ್ನಿ ಟುಡೇ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಮೇ 28, 2018

ಸಿದ್ದರಾಮಯ್ಯರನ್ನು ಗೆಲ್ಲಿಸಲು ತೋರಿಸಿದ ತಖ್ವಾ ಸಮುದಾಯವನ್ನು ಗೆಲ್ಲಿಸಲಿಕ್ಕೂ ತೋರಿಸುವ*

*ಸಿದ್ದರಾಮಯ್ಯರನ್ನು ಗೆಲ್ಲಿಸಲು ತೋರಿಸಿದ ತಖ್ವಾ  ಸಮುದಾಯವನ್ನು ಗೆಲ್ಲಿಸಲಿಕ್ಕೂ ತೋರಿಸುವ*

*ಸುನ್ನೀಟುಡೇ*

ಇಸ್ಲಾಮಿನಲ್ಲಿ ಬೆದರಿಕೆ, ನಿಂದನೆ, ಹಿಯಾಲಿಸುವಿಕೆ, ಮಾನಛಿದ್ರತೆ, ಅಸಹನೆ, ಕೋಪ, ಮತ್ಸರ ಇಲ್ಲಾ ಎಂದು ಮದ್ರಸದಲ್ಲಿ ಉಸ್ತಾದರು ಹೇಳಿದ್ದ ನೆನಪು. ಇದನ್ನು ಕಳೆದ ಕೆಲವು ದಿನದ ಹಿಂದೆ ಒಬ್ಬರು ವಿದ್ವಾಂಸರಲ್ಲಿ ಹೇಳುತ್ತಾ ಈ ಎಲ್ಲಾ ಸ್ವಭಾವಕ್ಕಿಂತ ಮಿಗಿಲಾಗಿ ಮುಸ್ಲಿಮನಲ್ಲಿ ಏನು ಇರಬೇಕು ಎಂದು ಕೇಳಿದೆ. ವಿದ್ವಾಂಸರು ತುಂಬಾ ಹೊತ್ತು ಆಲೋಚಿಸಿದರು ಅನಂತರ ಹೀಗೆ ಹೇಳಿದರು  *'ಇಸ್ಲಾಮಿನಲ್ಲಿ ಉಪದೇಶ, ಸುವಾರ್ತೆ ಮತ್ತು ಎಚ್ಚರಿಕೆ  ಇದೆ'.* ಪ್ರವಾದಿ ಮುಹಮ್ಮದ್ ( ಸ) ರು ಎಲ್ಲಾ ಕಠಿಣ ಸನ್ನೀವೇಶದಲ್ಲೂ ಉಪದೇಶಕರಾಗಿದ್ದರು. ಜನರನ್ನು ಸನ್ಮಾರ್ಗಕ್ಕೆ ಮತ್ತು ಸತ್ಕರ್ಮಕ್ಕೆ ಕರೆಯುತ್ತಾ ಅವರು ಸುವಾರ್ತೆಯನ್ನು ಬಿತ್ತರಿಸುತ್ತಿದ್ದರು. ಮನುಷ್ಯನ ಜೀವನದ ಮಹತ್ವ ಮತ್ತು ಬದುಕಿನ ಗುರಿಯ ಕುರಿತು ವಿವರಿಸುತ್ತಾ ಅಲ್ಲಾಹನ ಕುರಿತು ಹಾಗೇ ಪರಲೋಕದ ಕುರಿತು ಎಚ್ಚರಿಸುತ್ತಿದ್ದರು. *ಪ್ರವಾದಿ (ಸ)ರನ್ನು ಅದೇ ರೀತಿಯಲ್ಲಿ ಸಾಕ್ಷಿಯಾಗಿಸಿ ಕ್ಷಮೆ - ಸಹನೆ - ಪ್ರೇಮ - ಪರೋಪಕಾರದ ಆಯುಧವನ್ನು ಉಪಯೋಗಿಸಿ ಭೂಮಿ ಮತ್ತು ಪರಲೋಕದಲ್ಲಿ ನಮಗೆ ಗೆಲ್ಲಬಹುದಾಗಿದೆ.* ಇಲ್ಲವಾದರೆ ಆಪತ್ತುಗಳು ನಮ್ಮನ್ನು ಎರಡು ಲೋಕದಲ್ಲೂ ಭೀಕರ ಅವಮಾನಕ್ಕೆ ತಲ್ಲಬಹುದು.

ಗುರುಗಳ ಮಾತು ನನಗೆ ಹಿತ ಎನಿಸಿತು. ಈ ಮಾತನ್ನು ನಾನು ಒಬ್ಬರು ಮುಸ್ಲಿಮ್ ಪತ್ರಕರ್ತರಲ್ಲಿ ಹೇಳಿದೆ. ಅದನ್ನು ಕೇಳುತ್ತಾ ಪತ್ರಕರ್ತ ನನ್ನಲ್ಲಿ ಹೇಳಿದ  ಗುರುಗಳು ಸರಿಯಾದ ವಿಚಾರವನ್ನೇ ಹೇಳಿದ್ದಾರೆ. *ಎಲ್ಲಿಯಾದರು ಈಗಿನ ಮುಸ್ಲಿಮರು ರಸೂಲರ ಕಾಲದಲ್ಲಿ ಮದೀನದಲ್ಲಿ ಇರುತ್ತಿದ್ದರೆ ನಮಗೆ ಮಕ್ಕಾದ ವಿಜಯ ಸಾಧ್ಯವಾಗುತ್ತಿರಲಿಲ್ಲ. ಮಕ್ಕಾದಲ್ಲಿ ಮುಸ್ಲಿಮರು ಇರುತ್ತಿರಲಿಲ್ಲ.*

ಪತ್ರಕರ್ತನ ಮಾತು ಸತ್ಯವಾಗಿತ್ತು. ಸಹನೆ - ಕ್ಷಮೆ - ಅನುಸರಣೆ - ತ್ಯಾಗ ನಮ್ಮಲ್ಲಿ ನಾಶವಾಗಿದೆ. ಸಿದ್ದರಾಮಯ್ಯರ ಮೇಲಿನ ಪ್ರೀತಿಗಾಗಿ ಒಟ್ಟು ಸಮುದಾಯವನ್ನು ಹೈಜಾಕ್ ಮಾಡಿಟ್ಟ ಸಮೂಹ, ಅಲ್ಲಾಹನ ಪ್ರೀತಿಗಾಗಿ ಇದನ್ನು ಮಾಡುತ್ತಿದ್ದರೆ ಎಷ್ಟು ಚೆನ್ನಾಗಿತ್ತು ಎಂದೂ ಭಾವಿಸಿದ್ದಿದೆ. ಕಾಂಗ್ರೇಸ್ಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಲೇಖನಿ - ಸಮಯ - ಜ್ಞಾನ - ಹಣ -ಸಂಘಟಿತ ಪ್ರಯತ್ನ- ಚರ್ಚೆ - ತರ್ಕ - ಹಠ ಎಲ್ಲವನ್ನೂ ದಾರೆ ಎರೆದ ಮುಸ್ಲಿಮ್ ಸಮೂಹದ ಇಚ್ಚಾಶಕ್ತಿ, ನಂಡೆ ಪೆಂಙಲ್ ನಂತಹ ಅಭಿಯಾನಕ್ಕೆ ಮುಡಿಪಾಗಿಟ್ಟಿದ್ದರೆ ಇಂದು 30 ಯಾಕೆ 24 ದಾಟಿದ ಯುವತಿಯರು ಈ ಸಮುದಾಯದಲ್ಲಿ ಇರುತ್ತಿರಲಿಲ್ಲ.  *ರಾಜಕೀಯ ತಪ್ಪಲ್ಲ, ಆದರೆ ಅದು ನಮ್ಮ ಸಬಲೀಕರಣದ ಉದ್ದೇಶವನ್ನು ಮರೆತು ಇನ್ನೊಂದು ಪಕ್ಷದ ಮೇಲಿನ ಹಗೆ - ದ್ವೇಷ - ಮತ್ಸರಕ್ಕೆ ಉಪಶಮನ ಆಗಬಾರದು.*  ಒಬ್ಬ ಬಜರಂಗಿ ಹಿಂದುಗಳನ್ನು ಬಿಜೆಪಿಗೆ ಬಲಾತ್ಕರಿಸುವುದು ಹೇಗೆ ತಪ್ಪೋ ಹಾಗೇ ಒಬ್ಬ ಮುಸ್ಲಿಮ್ ಮುಸ್ಲಿಮರನ್ನು ಕಾಂಗ್ರೇಸ್ಸ್ ಗೆ ಬಲಾತ್ಕರಿಸುವುದು ನನ್ನ ಪ್ರಕಾರ  ತಪ್ಪಾಗಿದೆ.

ರಾಜಕೀಯ ಯಾಗದಲ್ಲಿ ತನು - ಮನ ಕೇಂದ್ರೀಕರಿಸಿ ಭ್ರಮೆಯ ಲೋಕದಲ್ಲಿ ಮಂಕು ಬಡಿದಿದ್ದ ಸಮುದಾಯದ ಕೆಲವು ವರ್ಗವನ್ನು ಬಡಿದೆಬ್ಬಿಸಲು ಸುನ್ನೀಟುಡೇ ಹಲವು ಸಂಚಿಕೆ ಲೇಖನ ಪ್ರಕಟಿಸಿತು. ಎಲ್ಲರೂ ಇದೆಲ್ಲ ಈಗ ಯಾಕೆ ಎಂದು ಕೇಳಿದ್ದರು. ಈಗ ನಮಗೆ ಸಿದ್ದರಾಮಯ್ಯ ಬರಬೇಕು. ಅದು ನಮ್ಮ ಏಕೈಕ ಪ್ರಾರ್ಥನೆ. 'ನೋಂಬು ನೆಕ್ಸ್ಟ್ ವರ್ಷ ಬಂಡ್ ಸಿದ್ದರಾಮಯ್ಯ ಬಂಡಿಲ್ಲ ಎಂದು ಹೇಳಿದ ವ್ಯಕ್ತಿಯೂ ನಮ್ಮ ಮಧ್ಯೆ ಇದ್ದಾರೆ'. *ಸಿದ್ದರಾಮಯ್ಯರನ್ನು ಗೆಲ್ಲಿಸಬೇಕು ಎಂದು ಅವಿರತ ಶ್ರಮಿಸಿದ ನಮಗೆ ಸಮುದಾಯವನ್ನು ಎಲ್ಲಾ ಕ್ಷೇತ್ರದಲ್ಲೂ ಗೆಲ್ಲಿಸಲು ಇದೇ ರೀತಿಯ ಛಲ ಮತ್ತು ಇಚ್ಚಾಶಕ್ತಿ ಇರುತ್ತಿದ್ದರೆ ಫಲಿತಾಂಶ  ಅಭಿಮಾನ ತರಿಸುತ್ತಿತ್ತು.*  ಅಲ್ಲಾಹನ ಕಲ್ಪನೆಯ ಮುಂದೆ ಎಲ್ಲವೂ ತಲೆ ಕೆಳಗಾಯಿತು. ಅಡಿಗೆ ಬಿದ್ದರೂ ಮೂಗು ಮೇಲೆ ಎನ್ನುವಂತೆ ಈಗ ಡಿಕೆ ಶಿವಕುಮಾರ್ ನಮ್ಮ ಸಮುದಾಯಕ್ಕೆ ನೇದಾವು ಆಗಿದ್ದಾರೆ. ನಮ್ಮೊಳಗಿನ ಹೃದಯ ಎಷ್ಟು ಮತಾಂಧವಾಗಿದೆ ಎನ್ನುವುದಕ್ಕೆ ಇದಕ್ಕಿಂದ ದೊಡ್ಡ ಉದಾಹರಣೆ ಬೇಕಿಲ್ಲ. ಸಂಘಪರಿವಾರವು ಹಿಂದೂಗಳಿಗೆ ಚುಚ್ಚಿದ ಕೋಮುವಾದದ ಇಂಜೆಕ್ಷನ್ ಮುಸ್ಲಿಮರ ಮೇಲೆ ಪ್ರಭಾವ ಬೀರಿದೆ. ಉಪದೇಶ ಮತ್ತು ಸುವಾರ್ತೆ ನೀಡಬೇಕಾದ ಕೌಮ್ ನ ಉಮ್ಮತ್ತುಗಳು ನಿಂಧನೆ - ಮಾನಹಾನಿ - ಹಗೆ -ತಮಾಷೆ- ಹಿಯಾಲಿಸುವಿಕೆಯಲ್ಲಿ ಮೈಮರೆತಿದೆ.

ಚುನಾವಣೆಯ ಮೊದಲು ಶಾಫಿ ಸಹದಿ - ಎಸ್.ಬೀ. ದಾರಿಮಿ- ಅಜೀಜ್ ದಾರಿಮಿ ಮುಂತಾದ ಉಲೆಮಾಗಳು ಸಿದ್ದರಾಮಯ್ಯರ ಬಳಿ ಹಾಗೇ ಕುಮಾರಸ್ವಾಮಿಯವರ ಬಳಿಗೆ ಹೋಗಿ ಮಾತುಕತೆ ನಡೆಸಿದ್ದರು. ಇದನ್ನು ಪ್ರಶ್ನಿಸಿ ಸುನ್ನೀ ಟುಡೇ ಮೂವರು ಉಲೆಮಾಗಳಲ್ಲೂ ಮಾತುಕತೆ ನಡೆಸಿತ್ತು. *ನೀವೇಕೆ ಯಡಿಯೂರಪ್ಪರ ಬಳಿ ಹೋಗಲಿಲ್ಲ ? ನಾಳೆ ಅವರು ಮುಖ್ಯಮಂತ್ರಿ ಆದರೆ ಏನು ಮಾಡುತ್ತೀರಿ ? ಚುನಾವಣೆಗೆ ಈ ಗಿಮಿಕ್ಕ್ ಯಾತಕ್ಕೆ ? ಸರಕಾರ ಇರುವಾಗ ಈ ಮೀಟಿಂಗ್ ಮಾಡದೆ ನಾಳೆ ಯಾರು ಅಧಿಕಾರಕ್ಕೆ ಬರುತ್ತಾರೆ ಎಂದು ಗೊತ್ತಿಲ್ಲದೆ ಈ ಮೀಟಿಂಗ್ ನ ಅಗತ್ಯ ಇದೆಯಾ ? ಎಂದು ಕೇಳಿದ್ದೆ.* ಸಮುದಾಯದ ಹಿತಕ್ಕಾಗಿ ಇಚ್ಚಾಶಕ್ತಿಯಿಂದ ಪ್ರಯತ್ನಿಸುವ ಈ ಮೂವರೂ ನಮಗೆ  ಅತ್ಯುತ್ತಮ ಮಾಹಿತಿ ನೀಡಿದ್ದರು.

ಈ ಸಂದರ್ಭ ಶಾಫಿ ಸಹದಿಯವರು ನನ್ನಲ್ಲಿ ಸುದೀರ್ಘವಾದ ಮಾತುಕತೆ ನಡಿಸಿದರು. ಸರಕಾರ ಯಾರದ್ದು ಬೇಕಿದ್ದರೂ ಬರಲಿ, ಮುಸ್ಲಿಮರ ಸಮಗ್ರ ಕಲ್ಯಾಣ- ಅಭಿವೃದ್ದಿ - ಭದ್ರತೆ ಮತ್ತು ನ್ಯಾಯದ ರಕ್ಷಣೆಯನ್ನು ವೀಕ್ಷಿಸುವ ಸಮಿತಿಯನ್ನು ಅಸ್ತಿತ್ವಕ್ಕೆ ತರುತ್ತೇವೆ ಎಂದು ಅವರು ಹೇಳಿದರು. ಮಾತಿನ ಕೊನೆಯಲ್ಲಿ ಯಾವ ಸರಕಾರ ಬರುವ ನಿರೀಕ್ಷೆ ಇದೆ ಎಂದು ಕೇಳಿದ್ದೆ. *ಅದಕ್ಕೆ ಉತ್ತರಿಸಿದ ಶಾಫಿ ಸಹದಿಯವರು  ಸಮ್ಮಿಶ್ರ ಸರಕಾರ ಬರುವ ಸಾಧ್ಯತೆ ಇದೆ. ಹಾಗೇನಾದರು ಆದರೆ ಕುಮಾರಸ್ವಾಮಿ ಮುಖ್ಯಮಂತ್ರಿ, ಜಿ.ಪರಮೇಶ್ವರ್ ಉಪ ಮುಖ್ಯಮಂತ್ರಿ ಆಗುವ ಸಾಧ್ಯತೆ ಇದೆ ಎಂದರು.*  ಅದು ಅವರು, ಅರಿತ ಹಾಗೇ ಬೆರೆತ ರಾಜಕೀಯ ವಲಯದ ಅಭಿಪ್ರಾಯವಾಗಿತ್ತು. ಸಾಧ್ಯತೆಗಳು ನಿಜವಾಗುವ ಸಂಭವಗಳ ಬಗ್ಗೆ ಆಳವಾಗಿ ಅವರು ನಮಗೆ ವಿವರಿಸಿದರು. ಅವರ ಅಭಿಪ್ರಾಯವನ್ನು ನಾನು ಯಥಾವತ್ ನ್ಯೂಸ್ ಕನ್ನಡದಲ್ಲಿ ಪ್ರಕಟಿಸಿದ್ದೆ.

ಒಬ್ಬ ವ್ಯಕ್ತಿ ಹೇಳಿದ ಕಾರಣಕ್ಕೋ ಅಥವಾ ಒಬ್ಬ ವ್ಯಕ್ತಿ ಬರೆದ ಕಾರಣಕ್ಕೋ ಇಲ್ಲಿ ಯಾರು ಸಿ.ಎಂ ಅಥವಾ ಡಿಸಿಎಂ ಆಗುವುದಿಲ್ಲ. ಕಾಕತಾಳೀಯವಾಗಿ ಬರೆದದ್ದು ನಿಜವಾದರೆ ಅದು ವಿಶೇಷ ಮಾನ್ಯತೆ ಪಡೆಯುವ ಸಂಭವವೂ ಅಲ್ಲ. ಉಲೆಮಾಗಳು ರಾಜಕೀಯ ಪಾಂಡಿತ್ಯ ಹೊಂದುವುದು ಮಹಾ ಅಪರಾಧವೂ ಅಲ್ಲ. *ವಿಚಾರಗಳು ಮತ್ತು ಅಭಿಪ್ರಾಯಗಳು ಇದೇ ಆಗಿರಬೇಕು ಎಂದು ಒತ್ತಡ ಹಾಕುವುದು ಮತ್ತು ಭಾರತದಲ್ಲಿ ಇಂತಹುದೇ ಆಹಾರ ಸೇವಿಸಬೇಕು ಎಂದು ಬೆದರಿಕೆ ಹಾಕುವುದು ಎರಡೂ ಒಂದೇ ರೀತಿಯ ಸ್ವಭಾವ ಆಗಿದೆ.*

ಉಪದೇಶ - ಸುವಾರ್ತೆ - ಎಚ್ಚರಿಕೆ ಕೊಡಬೇಕಾದ ಕೌಮಿನ ಉಮ್ಮತ್ತುಗಳು ಸಿದ್ದರಾಮಯ್ಯರ ಮೇಲಿದ್ದ ಅಭಿಮಾನದಿಂದ ಅಂಧವಾಗಿ ನಮ್ಮ ಮೇಲೆ ಮುಗಿ ಬಿದ್ದಿತು. ಶಾಫಿ ಸಹದಿಯವರನ್ನು ಮಾನಸಿಕವಾಗಿ ಹಾಗೇ ನೈತಿಕವಾಗಿ ಕುಗ್ಗಿಸಿ ಹೇಳಿಕೆಯನ್ನೂ ಬರೆಯಿಸಿತು. ಕೇಸರೀ ಶಾಲು ಹಾಕಿದ್ದಕ್ಕೆ ಹಾಗೇ ಕಾಂಗ್ರೇಸ್ಸ್ ಗೆ ಹಿಂದುಗಳನ್ನು ಕರೆಯುವುದನ್ನು ವಿರೋಧಿಸಿ ಮತಾಂದ ಯುವಕನೊಬ್ಬ ಹರಡಿದ ಆಡಿಯೋವನ್ನು ಮಹಾ ಅಕ್ರಮ ಎಂದು ಪ್ರಚಾರ ಮಾಡಿದ್ದ ಸಮುದಾಯ, ಕಾಂಗ್ರೆಸ್ಸ್ ನ ವಿರುದ್ದ ಮಾತನಾಡುವ ಮುಸ್ಲಿಮರನ್ನು ಭಯಪಡಿಸಿದ್ದು ಮತ್ತು ಅವಮಾನಿಸಿದ ಜಾತ್ಯಾತೀತವನ್ನು ಒಪ್ಪುವಂತದ್ದಲ್ಲ.

ಮಹಾತ್ಮರಾದ ಮಾಲಿಕುದಿನಾರ್ ಕಾಲದಲ್ಲಿ ನಮ್ಮಂತಹ ಮುಸ್ಲಿಮರು ಇರುತ್ತಿದ್ದರೆ ನಮ್ಮ ಸ್ಥಿತಿ ಏನಾಗುತ್ತಿತ್ತು ? ನಾವು ಸೋಶಿಯಲ್ ಮೀಡಿಯಾ ಹಾಗೇ ವಾಟ್ಸಾಪ್ ಗಳಲ್ಲಿ ಹರಡುತ್ತಿರುವುದು ಏನನ್ನು ? ಮೋದಿಯನ್ನು ಹಾಗೇ ಬಿಜೆಪಿಗರನ್ನು ಎದುರಿಸುವುದು ಮತ್ತು ಹಿಯಾಲಿಸುವುದಕ್ಕೆ ನಾವು ಹುಟ್ಟಿದವರಾ ? ಹೀಗೇ ಹಿಯಾಲಿಸಿ - ನಿಂಧಿಸಿ - ಬೆದರಿಸಿ ಕರಾವಳಿಯಲ್ಲಿ ಮುಸ್ಲಿಮರ ಪರಮ ಪ್ರೀತಿಯ ನಾಯಕ
ಸಿದ್ದರಾಮಯ್ಯರ ಪಕ್ಷದ ನಾಮಾಶೇಷ ಅಗಿರುವುದು ನಮ್ಮಿಂದಲೇ ಎಂದು ನಾನು ಹೇಳಿದರೆ ನೀವು ನನ್ನ ಮೈಮೇಲೆ ಬೀಳುತ್ತೀರಾ ? ಕಾಂಗ್ರೇಸ್ಸ್ ಪಕ್ಷದ ಐಟೀ ಸೆಲ್ ಆಗಿ ಕಾರ್ಯಾಚರಿಸುವ ನಮಗೆ ಯಾವ ಲಾಭ ಸಿಗುತ್ತಿದೆ ?  ತಮಾಷೆ - ಹಾಸ್ಯ - ಅವಮಾನ ಮಾಡಿ ನಾವು ಒಂದು ಭೃಹತ್ತ್ ಸಮೂಹದ ಹೃದಯದಲ್ಲಿ ಹಗೆ ಬಿತ್ತುತ್ತಿದ್ದೇವೆ. *ಪ್ರೀತಿ -ಪ್ರೇಮ - ಅನುಕಂಪ ಹರಡಬೇಕಾದ ನಾವು ಯಾವ ಲಾಭಕ್ಕಾಗಿ ಹೀಗೇ ಆಗಿದ್ದೇವೆ ?* ಕಾಂಗ್ರೇಸ್ಸ್ ಮತ್ತು ಜೆಡಿಎಸ್ಸ್ ಒಂದಾದರೆ ನಮಗೆ ಭೂಮಿಯಲ್ಲಿ ಗೌರವ ಸಿಗುವುದೇ ? ನಮಗೆ ಸ್ವರ್ಗ ಸ್ಥಿರವಾಯಿತೇ ? ಸಮುದಾಯದ ಒಳಗೆ ಸಾವಿರಾರು ಸಮಸ್ಯೆ ಇದೆ. ಇದರ ನಿವಾರಣೆಗೆ ಸಂಘಟಿತರಾಗ ಬಹುದೇ? ಸಂಘಟಿತರಾಗಲು ಬೆದರಿಸ ಬಹುದೇ ? ಪ್ರಾರ್ಥಿಸಬಹುದೇ ? ಲೇಖನ ಬರೆಯ ಬಹುದೇ ? ವಾಟ್ಸಾಪ್ ಗೂಪುಗಳನ್ನು ಮಾಡಿ ಚರ್ಚಿಸಿ ಪ್ರಾಯೋಗಿಕ ಪ್ರಯತ್ನಕ್ಕೆ ಮುನ್ನಡೆ ಇಡಬಹುದೇ ? ಹಾಗದರೆ ಕೇಳಿ ಮೂರು ಪ್ರಮುಖ ಸಮಸ್ಯೆಗಳನ್ನು ಹೇಳುತ್ತೇನೆ.
1) ಕರಾವಳಿಯ ಮುಸ್ಲಿಮರಲ್ಲಿ 20 ಮದುವೆಗಳಲ್ಲಿ ಸುಮಾರು 14 ಮದುವೆ ಸಂಬಂಧಗಳು ಬಿರುಕು ಬೀಳುತ್ತಿದೆ. ಡೈವೊರ್ಸ್ ಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಿಧ್ಯಾ ಸಂಪನ್ನ ಯುವತಿಯರೇ ಮೇಲುಗೈ, ಕುಟುಂಬ ವ್ಯವಸ್ಥೆ ನಾಶವಾದರೆ ಇಸ್ಲಾಮ್ ಅಸ್ತಿತ್ವ ಆತಂಕಿತ.
2) ಮುಸ್ಲಿಮ್ ಯುವಕರು ಹತ್ತನೇ ತರಗತಿಯಲ್ಲಿ ಡ್ರಾಪ್ ಔಟ್ ಆಗುತ್ತಿದ್ದಾರೆ. ಯುವತಿಯರ ಶಿಕ್ಷಣ ಮಟ್ಟ ಹೆಚ್ಚುತ್ತಿದೆ. ಮದುವೆ ಸಂಬಂಧಗಳು ಮತ್ತು ಇಂಕಂ ಸೋರ್ಸ್ ಬಗ್ಗೆ ಅಸಮಾನತೆ ಇದೆ. ಯುವತಿ ದುಡಿಯಲು ಹೆಚ್ಚು ಆಸಕ್ತಳಾಗಿದ್ದಾಳೆ. ಅದಕ್ಕೆ ಕಾರಣ  ಬೌತಿಕ ಆಯ್ಕೆಗಳು ಎಂಬುವುದು ವಿಷಾಧನೀಯ.
3) ಮುಸ್ಲಿಮ್ ಶಾಲಾ ಕಾಲೇಜು ವಿಧ್ಯಾರ್ಥಿಗಳಲ್ಲಿ ಅಮಲು ಪದಾರ್ಥದ ಚಟ ಹೆಚ್ಚುತ್ತಿದೆ. ಹೆತ್ತವರ ಹಿಡಿತ ತಪ್ಪಿ ಹೋಗಿರುವ 70% ಯುವಕರ ಭವಿಷ್ಯವನ್ನು ಒಮ್ಮೆ ಕಲ್ಪಿಸಿ ನೋಡಿ.

ಎಡಬದಿಯಲ್ಲಿ ಸೀನಿದರೆ ಹರಾಮ್ ಎಂದು ಅದಕ್ಕೆ ಹದೀಸ್ ಹುಡುಕುವ ಜನರಿಗೆ , ಬಿಜೆಪಿ ಬಂದರೆ ಅಪಾಯ ಎಂದು ಅದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಅಕ್ಷರ ಸಮರ ನಡೆಸುವವರಿಗೆ, ಎಂ.ಆರ್.ಎಂ ಗಳನ್ನೂ , ಧರ್ಮ ಭ್ರಷ್ಟರನ್ನೂ, ಸಮುದಾಯ ಸ್ನೇಹಿಗಳನ್ನು ಹುಡುಕುವ ದುರ್ಭಿನಿಗಳಿಗೆ ಈ ಮೇಲೆ ಹೇಳಿದ ಮೂರು ದುರಂತದಿಂದ ಸಮುದಾಯವನ್ನು ಸರಿದಾರಿಗೆ ತರಲು ಸಾಧ್ಯವಿದ್ದರೆ ಹೇಳಿ....
🏹
*ಸುನ್ನೀಟುಡೇ*

ಶುಕ್ರವಾರ, ಏಪ್ರಿಲ್ 6, 2018

ಸುನ್ನಿ ಟುಡೇ ೩

ಬಿಜೆಪಿಯನ್ನು ಮತ್ತು ಮೋದಿಯನ್ನು ವಿರೋಧಿಸುವುದನ್ನು ಬಿಟ್ಟು ಬಿಡಿ. ನಿಮ್ಮ ವಿರೋಧವೇ ಅವರ ಆಯುಧ......

🌾
ಸುನ್ನೀಟುಡೇ

     ಭಾಗ -3

ಮುಸ್ಲಿಮ್ ರಾಜಕೀಯ ನಿಲುವುಗಳ ಕುರಿತು ಜಾಗೃತಿ ಮೂಡಿಸಲು ಕಳೆದ ಎರಡು ಭಾಗದಲ್ಲಿ ನಾವು ಹಲವಾರು ವಿಚಾರಗಳನ್ನು ಜನರ ಮುಂದಿಟ್ಟೆವು. ಅದಕ್ಕೆ ಪೂರಕವಾಗಿ ಹಲವರು ನಮ್ಮಲ್ಲಿ ಅಭಿಪ್ರಾಯ ಹಂಚಿಕೊಂಡರು. ನಮ್ಮ ವಿಚಾರವನ್ನು ಸಮರ್ಥಿಸುವ ಮತ್ತು ಅದಕ್ಕೆ ಬಲನೀಡುವ ಹಲವು ವೀಡಿಯೋಗಳು - ವಾಯ್ಸ್ ಮೆಸೇಜ್ ಮತ್ತು ಹೇಳಿಕೆಗಳು ನಮಗೆ ಸಿಕ್ಕಿತು. ಅದರಿಂದಲೇ ನಾವು ಈ ಲೇಖನವನ್ನು ಬರೆಯುತ್ತಿದ್ದೇವೆ....

ಲೋಕಪ್ರಸಿದ್ದ ವಿದ್ವಾಂಸ ಎಪಿ ಅಬುಬಕ್ಕರ್ ಮುಸ್ಲಿಯಾರ್ ರವರ ಮಾತುಗಳಿರುವ ಒಂದು ವೀಡಿಯೋ ನನಗೆ ಹೆಚ್ಚು ಇಷ್ಟವಾಯಿತು ಅವರು ಹೇಳುತ್ತಾರೆ " ಯಾವುದೋ ಒಬ್ಬ ವ್ಯಕ್ತಿ ಅಸೆಂಬ್ಲಿ ಪ್ರವೇಶಿಸುವುದಕ್ಕೆ ನಾವೇಕೆ ಇಮಾನ್ ಮಾರಬೇಕು, ನಾವೇಕೆ ಪರಸ್ಪರ ದ್ವೇಷಕಾರಬೇಕು ? ನಮ್ಮ ಸ್ಥಾಪನೆಗಳಿಗೆ , ಸಮುದಾಯಕ್ಕೆ , ಸಮಾಜಕ್ಕೆ ಹಾಗೂ ರಾಜ್ಯಕ್ಕೆ ಪ್ರಯೋಜನವಾಗುವ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ. ಬಹಳವಾಗಿ ಚಿಂತಿಸಿ ಮತದಾನ ಮಾಡಿ. 100% ಪೂರ್ತಿಯಾಗಿ ಯಾರೂ ಕೂಡ ನಮ್ಮ ಸಮಾಜದ ಹಿತವನ್ನು ಬಯಸಿದವರಲ್ಲ. ಅಲ್ಪಸ್ವಲ್ಪವಾದರೂ ನಮಗೆ ಹಿತವಾಗುವ ಪಕ್ಷವನ್ನು ನಾವು ಬೆಂಬಲಿಸಬೇಕು. ನಮ್ಮಲ್ಲಿ ಅಭಿಪ್ರಾಯ ವ್ಯತ್ಯಾಸವಿರ ಬಹುದು. ಮಸೀದಿಯ ಅಧ್ಯಕ್ಷ ಒಂದು ಪಕ್ಷವಾದರೆ ಕಾರ್ಯದರ್ಶಿಯು ಇನ್ನೊಂದು ಪಕ್ಷದವನಾಗಿರ ಬಹುದು. ನಾವು ಅದಕ್ಕಾಗಿ ಪರಸ್ಪರ ಕಾದಾಟ ಮಾಡಿ ವೈಷಮ್ಯದಿಂದ ಒಟ್ಟು ಸಮುದಾಯವನ್ನು ನಾಶಕ್ಕೆ ಕೊಡುವುದಕ್ಕಿಂತ ಪ್ರತೀಯೊಬ್ಬರ ಆಯ್ಕೆಯನ್ನು ನಾವು ಸ್ವಾಗತಿಸಿಕೊಂಡು ಚುನಾವಣೆಯ ನಂತರವೂ ಆ ಮಸೀದಿ ಆಡಳಿತವನ್ನು ಸಮುದಾಯಕ್ಕೆ ಪ್ರಯೋಜನವಾಗುವ ರೀತಿಯಲ್ಲಿ ಮುನ್ನಡೆಸಬೇಕು.  ರಾಜಕೀಯಕ್ಕಾಗಿ ನಮ್ಮ ವಿಶ್ವಾಸ ಮತ್ತು ಸಮುದಾಯವನ್ನು ಛಿದ್ರಮಾಡದಿರಿ. ಯಾರದೋ ಲಾಭಕ್ಕೆ ಬಲಿಯಾಗದಿರಿ. ಪರಸ್ಪರ ದ್ವೇಷ ದೂಷಣೆ ಮತ್ತು ಹಿಯಾಲಿಸುವ ಮೂಲಕ ಮುಸ್ಲಿಮರ ಹೃದಯ ಒಡೆಯುವ ಕಾರ್ಯ ಮಾಡದಿರಿ. ರಾಜಕೀಯ ಅಭಿಪ್ರಾಯ ವ್ಯತ್ಯಾಸ ಮತ್ತು ಪಕ್ಷಗಳ ಆಯ್ಕೆಗಳಲ್ಲಿ ಸ್ವತಂತ್ರವಿದೆ. ಆದರೆ ಅದು ಸಮುದಾಯದ ಐಕ್ಯತೆ ಮತ್ತು ಸಹೋದರತ್ವಕ್ಕೆ ಹಾನಿ ಉಂಟು ಮಾಡಬಾರದು.

ಎರಡನೆಯದ್ದಾಗಿ ನಮಗೆ ಬಂದ ವಾಯ್ಸ್ ಮೆಸೇಜ್ ಹೀಗೆ ಹೇಳುತ್ತದೆ. ' ನೀವು ಬರೆಯುತ್ತಿರುವುದು ಚಿಂತಿಸುವಂತದ್ದೇ. ಆದರೆ ಅದು ಈ ವಿಷಮಯ ಸನ್ನಿವೇಶದಲ್ಲಿ ಜನರ ಮೆದುಳು ಪ್ರವೇಶಿಸುತ್ತದೆ ಎಂದು ನಾನು ಭಾವಿಸುವುದಿಲ್ಲ. ಮುಸ್ಲಿಮರಿಗೆ ಆಯ್ಕೆಗಳಿಲ್ಲ. ಸಮುದಾಯವನ್ನು ಒಂದು ಕಡೆಯಿಂದ ಬಿಜೆಪಿಯವರು - ಕಾಂಗ್ರೇಸ್ಸ್ ನವರು - ಎಸ್ಡೀಪಿ ಐನವರು - ಸಮುದಾಯ ಪ್ರೇಮಿ ಎಂದು ಹೇಳುವವರು ಹರಿದು ತಿನ್ನಲು ಹವಣಿಸುತ್ತಿದ್ದಾರೆ.  ಅವರಿಗೆ ಸಮುದಾಯದ ಪ್ರಯೋಜನ ಮತ್ತು ಭವಿಷ್ಯಕ್ಕಿಂತ ಹೆಚ್ಚಾಗಿ ತಮ್ಮ ಅಸ್ತಿತ್ವ ಮತ್ತು ಪ್ರತಿಷ್ಠೆಯು ಮಿಗಿಲಾಗಿದೆ.

ಇನ್ನೊಂದು ಬರಹದಲ್ಲಿ ನಮಗೆ ಹಿತವಚನವಿತ್ತು. "ನೀನು ಸಮಾಜಕ್ಕೆ ಏನು ಕೊಡುಗೆ ಕೊಟ್ಟಿದ್ದೀ ? ಮನೆಯಲ್ಲಿ ಕೂತು ಬರೆದು ವಾಟ್ಸಾಪ್ ನಲ್ಲಿ ಹಾಕಿದ ತಕ್ಷಣ ಹೀರೋ ಆಗುತ್ತೀಯಾ ?  ನಿನಗಿಂತ ದೊಡ್ಡವರು ನಮ್ಮ ನಾಯಕರು ಇರುವಾಗ ನಿನ್ನ ಲೇಖನದಿಂದ ಏನೂ ಬದಲಾಗುವುದಿಲ್ಲ..! ನಮ್ಮ ನಾಯಕರಿಗೆ ಗೊತ್ತುಂಟು ಸಮುದಾಯಕ್ಕೆ ಏನು ಕೊಡಬೇಕು ಮತ್ತು ಮಾಡಬೇಕು ಎಂದು....

ಕೊನೆಯದಾಗಿ ನನಗೆ ಇಷ್ಟವಾಗಿದ್ದು ಎನ್ ಡೀ ಟೀವಿಯ ರವೀಶ್ ಕುಮಾರ್ ರವರ ಅಭಿಪ್ರಾಯವಾಗಿತ್ತು. "ಮುಸ್ಲಿಮರೇ ಸುಮ್ಮನಿರಿ. ನೀವು ಆರ್ ಎಸ್ಸ್ ಎಸ್ಸ್ ಮತ್ತು ಬಿಜೆಪಿಯನ್ನು ವಿರೋಧಿಸಲು ಮತ್ತು ನಿಂಧಿಸಲು ಹೋಗಬೇಡಿ. ಅವರು ಈಗ ಬಲಿಷ್ಠರಾಗಿದ್ದಾರೆ. ಬಿಜೆಪಿ ಮತ್ತು ಆರ್ ಎಸ್ಸ್ ಎಸ್ಸ್ ನ್ನು ಟೀಕಿಸುವುದನ್ನು ನಿಲ್ಲಿಸಿ. ಮುಸ್ಲಿಮರ ವಿರೋಧವೇ ಬಿಜೆಪಿಯ ಸಾಮರ್ಥ್ಯ.  ಕಾಶ್ಮೀರ ಹೊರತು ಪಡಿಸಿ ನೀವು ಎಲ್ಲಿಯೂ ಮುಖ್ಯಮಂತ್ರಿಯಾಗಬಾರದು ಎಂಬುವುದೇ ಅವರ ತೀರ್ಮಾನ. ದೇಶದ ಕೇವಲ ಮೂರು ಭಾಗದಷ್ಟು ಜನರು ವ್ಯವಸ್ಥಿತವಾದ ತಂತ್ರದ ಮೂಲಕ ಅಧಿಕಾರ ಪಡೆದಿದ್ದಾರೆ. ಅವರು 80% ಹಿಂದೂಗಳಲ್ಲಿ 18% ಮುಸ್ಲಿಮರ ಭಯವನ್ನು ಸೃಷ್ಠಿಸಿ ಒಗ್ಗಟ್ಟಾಗಿದ್ದಾರೆ. ನಿಮ್ಮ ವಿರೋಧ ಹೆಚ್ಚಿದಾಗಲೆಲ್ಲಾ ಅವರು ಬಲಶಾಲಿಗಳಾಗುತ್ತಿದ್ದಾರೆ. ಅದಕ್ಕಾಗಿ ಅವರು ನಿಮ್ಮನ್ನು ಕೆರಳಿಸುತ್ತಾರೆ.

ಎಂಐಎಂ ನಂತಹ ಪಕ್ಷಗಳು ಅವರಿಗೆ ಲಾಭದಾಯಕವಾಗಿದೆ. ಅವರು 30 ಅಥವಾ 40 ವರ್ಷಗಳ ನಂತರ ಬಲಿಷ್ಠರಾಗಿ ಅದನ್ನೂ ನಿಷೇಧಿಸುತ್ತಾರೆ. ನೀವು ಇಷ್ಟಪಡುವ ಯಾವುದೇ ಪಕ್ಷಕ್ಕೂ ನೀವು ಮತ ನೀಡಿ. ಆದರೆ ಎಂದಿಗೂ ಬಿಜೆಪಿಗೆ - ಆರ್ ಎಸ್ಸ್ ಎಸ್ಸ್ ಗೆ ಮತ್ತು ಮೋದಿಗೆ ಟೀಕಿಸಬೇಡಿ. ಅವರನ್ನು ವಿರೋಧಿಸಬೇಡಿ. ಆರ್ ಎಸ್ಸ್ ಎಸ್ಸ್ ಸಂಘಟನೆ ಇದೆ ಎಂಬುವುದನ್ನು ಮರೆತು ಬಿಡಿ. ಬಿಜೆಪಿ ಎಂಬ ಪಕ್ಷ ಇದೆ ಎಂಬುವುದನ್ನೂ ಮರೆತು ಬಿಡಿ. ಮೋದಿಯೆಂಬ ನಾಯಕ ಇರುವುದನ್ನೂ ಮರೆತು ಬಿಡಿ. ನಿಮ್ಮನ್ನು ಕಾಂಗ್ರೇಸ್ಸ್ - ಬಿಎಸ್ಪಿ - ಎಸ್ಪೀ ಎಲ್ಲರೂ ದೂರ ಮಾಡುವ ಕಾಲ ಸಮೀಪದಲ್ಲಿದೆ. ಕಾರಣ ಬಿಜೆಪಿ ನಿಮ್ಮನ್ನು ರಾಜಕೀಯವಾಗಿ ಅಸ್ಪ್ರಷ್ಯ ಮಾಡುವ ಎಲ್ಲಾ ತಂತ್ರಗಳನ್ನೂ ಪ್ರಯೋಗಿಸುತ್ತಿದೆ.

ನೀವು ಸುರಕ್ಷಿತರಾಗುವುದಕ್ಕೆ ಯಾವುದೇ ಮೀಸಲಾತಿ ಅಥವಾ ಪಕ್ಷಗಳ ಅಗತ್ಯವಿಲ್ಲ. ನಿಮ್ಮ ಗುರುತುಗಳನ್ನು ದೇಶದಲ್ಲಿ ಸ್ಥಿರಪಡಿಸಲು ನೀವು ಆಧುನಿಕ ತಂತ್ರಜ್ಞಾನ ಮತ್ತು ಶಿಕ್ಷಣದತ್ತ ಹೆಚ್ಚು ಗಮನ ಹರಿಸಿರಿ. ಸರಕಾರಿ ಇಲಾಖೆಗಳಲ್ಲಿ ಸ್ಥಾನ ಪಡೆಯುವ ಅಂಕಗಳನ್ನು ಪಡೆಯಲು ಪ್ರಯತ್ನಿಸಿ. ಮೀಸಲಾತಿ ಇಲ್ಲದೇ ನೀವು ನಿಮ್ಮ ಝಾಕಾತ್ ಮತ್ತು ಸದಕಾವನ್ನು ಶೈಕ್ಷಣಿಕ ಪ್ರಗತಿಗಾಗಿ ವಿನಿಯೋಗಿಸಲು ಪ್ರಯತ್ನಿಸಿ. ಇದು ಸ್ಪರ್ಧಾತ್ಮಕ ಯುಗ ಇಲ್ಲಿ ಗೆಲ್ಲುವುದು ಅಧ್ಯಯನಶೀಲ ಮತ್ತು ಜಗತ್ತಿಗೆ ಕೊಡುಗೆ ನೀಡುವ ಸಮುದಾಯ ಮಾತ್ರ. ನೀವು ಮೋದಿಯನ್ನು - ಆರ್ ಎಸ್ಸ್ ಎಸ್ಸ್ ನ್ನು ವಿರೋಧಿಸುವುದರಲ್ಲೇ ಸಮಯ ವ್ಯರ್ಥ ಮಾಡಿ ಅವರನ್ನು ಬೆಳೆಸುತ್ತಿದ್ದೀರಿ. ನೀವು ನಿಮ್ಮ ಸಮಾಜವನ್ನು ಬೆಳೆಸಿ - ನಿಮ್ಮ ಸಮುದಾಯವನ್ನು ಎಲ್ಲಾ ಕ್ಷೇತ್ರದಲ್ಲೂ ಪ್ರಬುದ್ದರನ್ನಾಗಿಸಿ. ಸ್ವಾತಂತ್ರ ಪೂರ್ವದಲ್ಲಿ ನೀವು 35% ಜನಸಂಖ್ಯೆ ಹೊಂದಿದ್ದೀರಿ. ಆಗ ಯಾವುದೇ ರಿಸರ್ವೇಶನ್ ಇಲ್ಲದೇ ನಿಮ್ಮ ಸಮುದಾಯ 35% ಸರಕಾರಿ ಕೆಲಸದಲ್ಲಿ ಪಾಲು ಪಡೆದಿತ್ತು. ಈಗ ನಿಮ್ಮ ಸ್ಥಿತಿ ಹೀಗೆ ಆಗಲು ನೀವೇ ಕಾರಣರು. ನೀವು ಮೋದಿಯನ್ನು - ಆರ ಎಸ್ಸ್ ಎಸ್ಸ್ ನ್ನು ಬದಲಾಯಿಸಲು ಆಗುವುದಿಲ್ಲ. ನೀವು ನಿಮ್ಮನ್ನು ಬದಲಾಯಿಸಿ ಆಗ ದೇಶಕ್ಕೆ ನಿಮ್ಮ ಅನಿವಾರ್ಯತೆಯ ಅರಿವಾಗುತ್ತದೆ.

ಈ ನಾಲ್ಕು ಅಭಿಪ್ರಾಯಗಳು ನಮ್ಮ ಮಟ್ಟಿಗೆ ಅಮೂಲ್ಯವಾಗಿದೆ.  ಒಂದನೇ ಅಭಿಪ್ರಾಯದ ಜನರು 10% ಇದ್ದಾರೆ, ಎರಡನೇ ಅಭಿಪ್ರಾಯದ ಜನರು 30% ಇದ್ದಾರೆ, ಮೂರನೇ ಅಭಿಪ್ರಾಯದ ಜನರು 60% ಇದ್ದಾರೆ, ನಾಲ್ಕನೇ ಅಭಿಪ್ರಾಯದ ಜನರನ್ನು ನಾವು ಸೃಷ್ಟಿಸಬೇಕಾಗಿದೆ. ಅದಕ್ಕಾಗಿರುವ ವಿಚಾರವನ್ನು ಹರಡುವುದು ನಮ್ಮ ಬಾಧ್ಯತೆಯಾಗಿದೆ.  ಸಮುದಾಯಕ್ಕೆ ನಾವು ಏನು ಮಾಡಿದ್ದೇವೆ ಎಂಬುವುದರ ಜೊತೆಗೆ ಅಲ್ಲಾಹನು ನಾಳೆ ನಮ್ಮಲ್ಲಿ "ನಿನಗೆ ನಾನು ನೀಡಿದ ಜ್ಞಾನವನ್ನು ನೀನು ಯಾವುದಕ್ಕೆ ಉಪಯೋಗಿಸಿದೆ ಎಂದು ಕೇಳುವಾಗ ನಮಗೆ ಉತ್ತರಿಸುವ ಅವಕಾಶಕ್ಕಾಗಿ ಈ ವಿಚಾರ ಜಾರಿಯಲ್ಲಿರಿಸುತ್ತೇವೆ".
🌾
ಸುನ್ನೀಟುಡೇ

(ಮುಂದುವರಿಯುವುದು)

ಸುನ್ನಿ ಟುಡೇ ೨

ಮುಸ್ಲಿಮರಿಗೆ ಬೇಕಿರುವುದು ಬಿಜೆಪಿಯ ಅಜೆಂಡಾದ ಜಾಗೃತಿಯಲ್ಲ, ಕಾಂಗ್ರೇಸ್ಸ್ ಪಕ್ಷದ ಅನಿವಾರ್ಯತೆಯ ಮಾಹಿತಿಯಲ್ಲ.....

🤔
ಸುನ್ನೀಟುಡೇ
ಭಾಗ -2

2006ರಲ್ಲಿ ಸಾಚಾರ್ ಕಮೀಟಿ ವರದಿಯನ್ನು ಯುಪಿಎ ಸರಕಾರ ಬಿಡುಗಡೆಗೊಳಿಸಿದಾಗ ಭಾರತದ ಮುಸ್ಲಿಮ್ ಸಮುದಾಯ ಧನ್ಯವಾಗಿತ್ತು. ಮುಸ್ಲಿಮರ ಕುರಿತು ರಿಪೋರ್ಟ್ ತಯಾರಿಸುವಲ್ಲಿ ಎಕ್ಸ್ ಪರ್ಟ್ ಆಗಿರುವ ಕಾಂಗ್ರೇಸ್ಸ್ ಗೆ ಈ ವರದಿಯು ತನ್ನ ವಿಫಲತೆಗೆ ಹಿಡಿದ ಕನ್ನಡಿ ಎಂದು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಆದರೂ ಮೂರ್ಖ ಮುಸ್ಲಿಮರು ಅದರ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರಿತು ಬಹಳ
ಧೈರ್ಯದಿಂದಲೇ ವರದಿಯ ಸಮಗ್ರ ಚಿತ್ರಣವನ್ನು ದೇಶದ ಮುಂದಿಟ್ಟಿತು. ಹಿಂದುಳಿದ ವರ್ಗಕ್ಕಿಂತ ಹಿಂದುಳಿದಿರುವ ಮುಸ್ಲಿಮರನ್ನು ದೇಶದ ಅತ್ಯಂತ ನತದೃಷ್ಠ ಸಮೂಹವೆಂದು ತೋರಿಸಿದ ವರದಿಯ ಬಗ್ಗೆ ಮುಸ್ಲಿಮ್ ಸಮುದಾಯ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಬಿಜೆಪಿ ಮತ್ತು ಆರ್ ಎಸ್ಸ್ ಎಸ್ಸ್ ನ್ನು ಇಲ್ಲಿ ಅಪರಾಧಿ ಮಾಡುವ ಯಾವುದೇ ಅವಕಾಶ ಇಲ್ಲದಾಗ ಸಮುದಾಯವು 'ಇದ್ ನಂಗಲೆ ಬಿದಿ' ಎಂದು ಹೇಳುತ್ತಾ ಅಲ್ಲೂ ತಮ್ಮ ಅಯೋಗ್ಯತನವನ್ನು (ಅಸಾಹಯಕತನ) ಪ್ರದರ್ಶಿಸಿತು.

2014ರ ವರೆಗೆ ಯುಪಿಎ ಸರಕಾರ ಆಡಳಿತ ನಡೆಸಿದ್ದರೂ ಈ ವರದಿಯ ಇಂಪ್ಲಿಮೆಂಟೇಶನ್ ಗೆ ಯಾವುದೇ ಕಾರ್ಯಕ್ರಮ ಅನುಷ್ಠಾನ ಗೊಳಿಸಲಿಲ್ಲ. ಸಾಚಾರ್ ವರದಿ ದೂಳು ಹಿಡಿದು ಹೋಯಿತು. ಸಮುದಾಯದ ಕೆಲವು ಸಾಮಾನ್ಯ ಜನರು ಇದಕ್ಕೆ ಪರಿಹಾರ ಹುಡುಕುವ ಪ್ರಯತ್ನ ಮಾಡಿದರು. ಹಲವು ಸಂಘಸಂಸ್ಥೆಗಳು ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿ ಸುಧಾರಣೆಗಾಗಿ ಅವಿರತ ಶ್ರಮಿಸಿದರು. ಝಕಾತ್ ಪೌಂಡೇಶನ್ ಆಫ್ ಇಂಡಿಯಾ ಎಂಬ ಸಂಘಟನೆಯು ಸಿವಿಲ್ ಸರ್ವಿಸ್ ನಲ್ಲಿ ಮುಸ್ಲಿಮರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಮಹತ್ವದ ಕಾರ್ಯಾಚರಣೆ ನಡೆಸಿತು. ಇದರ ಫಲ 2006 ಸಿವಿಲ್ ಸರ್ವಿಸ್ ನಲ್ಲಿ 3% ಇದ್ದ ಮುಸ್ಲಿಮರ ಭಾಗವಹಿಸುವಿಕೆ 2018ಕ್ಕೆ 4% ಕ್ಕೆ ಏರಿತು. ಬಿಜೆಪಿ ಸರಕಾರ ಇರುವ ಈ ಭಯಪೀಡಿತ ( ಭಪಪಡುವವರಿಗೆ) ಅವದಿಯಲ್ಲಿ ಅಂದರೆ 2016 ರಲ್ಲಿ ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ 50 ಮುಸ್ಲಿಮ್ ಅಭ್ಯರ್ಥಿಗಳು ಐ ಎ ಎಸ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಟಾಪ್ 100 ರಲ್ಲಿ ಗುರುತಿಸಿಕೊಂಡು ಮಹಾ ಸಾಧನೆ ಮಾಡಿದ್ದರು. ವಿಶೇಷವಾಗಿ 50 ಅಭ್ಯರ್ಥಿಗಳೂ ದೇಶಸೇವೆಯ ಕರ್ತವ್ಯದಲ್ಲಿ ತೊಡಗಿಕೊಂಡಿದ್ದು ಸರಕಾರದ ಆಡಳಿತ ಯಂತ್ರದಲ್ಲಿ ಪಾಲು ನೀಡುತ್ತಿದ್ದಾರೆ.

ಈ ಯುವಕ ಮತ್ತು ಯುವತಿಯರ ಸಾಧನೆ ಯಾವುದೇ ಸರಕಾರದ ಕೃಪೆಯ ಕೊಡುಗೆಯಲ್ಲ. ಸಮುದಾಯದ ಯುವ ತಲೆಮಾರಿನ ಇಚ್ಚಾಶಕ್ತಿ ಹಾಗೇ ಸಂಘಸಂಸ್ಥೆಗಳ ಕಾರ್ಯತಂತ್ರದ ಫಲವಾಗಿದೆ. ಸಾಧಿಸುವ ಛಲವಿದ್ದರೆ ಸಂವಿಧಾನಿಕವಾಗಿ ನಮಗಿರುವ ಅವಕಾಶವನ್ನು ನ್ಯಾಯಯುತವಾಗಿ ಪಡೆದುಕೊಳ್ಳಬಹುದು. 3% ಇದ್ದಿದ್ದು 4% ಹೆಚ್ಚಿಸಲು ಇಲ್ಲಿ ಯಾರೂ ಬೀದಿಗೆ ಇಳಿಯಲಿಲ್ಲ, ವೇದಿಕೆ ಕಟ್ಟಲಿಲ್ಲ, ಹೋರಾಟ ಮಾಡಲಿಲ್ಲ. ಹೊರತಾಗಿ ಪ್ರತಿಭಾನ್ವಿತರನ್ನು ಗುರುತಿಸಿ ಅವರಿಗೆ ಮಾರ್ಗದರ್ಶನ ಮಾಡಿ ಸೌಲಭ್ಯ ನೀಡುವ ಸೇವೆ ಒದಗಿಸಲಾಯಿತು.
ಕಾಂಗ್ರೇಸ್ಸ್ ಪಕ್ಷವನ್ನು ಕಾಯಲಿಲ್ಲ, ಬಿಜೆಪಿಯನ್ನು ಭಯಪಡಲಿಲ್ಲ, ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರವಿಲ್ಲದೇ ಝಕಾತ್ ಪೌಂಡೇಶನ್ ನಂತಹ ಸಂಸ್ಥೆಗಳು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿದರು. ಮುಸ್ಲಿಮರಿಗೆ ಅತೀ ಅಗತ್ಯವಾಗಿ ಬೇಕಿರುವುದು ಬಿಜೆಪಿಯ ಅಜೆಂಡಾದ ಮಾಹಿತಿಯಲ್ಲ, ಕಾಂಗ್ರೇಸ್ಸ್ ನ ಅನಿವಾರ್ಯತೆ ಜಾಗೃತಿಯಲ್ಲ ಹೊರತಾಗಿ ಯಾವುದೇ ಪಕ್ಷವೂ ಅಧಿಕಾರಕ್ಕೆ ಬಂದರೂ ಸಂವಿಧಾನಿಕವಾಗಿ ನಮ್ಮ ಹಕ್ಕು ಮತ್ತು ನ್ಯಾಯವನ್ನು ಹೇಗೆ ಪಡೆಯಬಹುದು ಎಂಬ ಕುರಿತ ಕಾರ್ಯಾಗಾರವಾಗಿದೆ.

ಸಿದ್ದರಾಮಯ್ಯ ಸರಕಾರ ಅಕ್ಕಿ ಕೊಟ್ಟಿದೆ, ಕ್ಯಾಂಟೀನ್ ಕೊಟ್ಟಿದೆ ಹಾಗಾಗಿ ನಾನು ಕಾಂಗ್ರೇಸ್ಸ್ ಗೆ ಓಟು ಹಾಕುತ್ತೇನೆ ಎಂಬ ಮೂರ್ಖರ ಬರಹವನ್ನು ಪ್ರಸಾರ ಮಾಡುವ ಮೊದಲು ನಾವು ಚಿಂತಿಸಬೇಕಾದ್ದು ಈ ಅಕ್ಕಿ ಮತ್ತು ಕ್ಯಾಂಟೀನ್ ಸಮುದಾಯದ ಸಬಲೀಕರಣಕ್ಕೆ ಎಷ್ಟರ ಮಟ್ಟಿಗೆ ಉಪಕಾರಿ ಎಂದಾಗಿದೆ. ಅಕ್ಕಿ ಕೊಡುವುದು ಮುಸ್ಲಿಮರಿಗೆ ಮಾತ್ರವಲ್ಲ ರಾಜ್ಯದ ಎಲ್ಲಾ ಬಡವರಿಗೂ ಅಕ್ಕಿ ಸಿಗುತ್ತದೆ ಆದರೆ ಈ ಅಕ್ಕಿಗೂ ನಮ್ಮ ಓಟಿನ ಹಕ್ಕಿಗೂ ಏನು ಸಂಬಂಧ ? ಸರಕಾರ ಜನಪರವಾಗ ಬೇಕಾದರೆ ಇಂತಹಾ ಕಾರ್ಯಕ್ರಮ ಅನಿವಾರ್ಯ ಹಾಗೇ ನೋಡುವುದಾದರೆ ನಾವು ಯಡಿಯೂರಪ್ಪರನ್ನು ಬೆಂಬಲಿಸಬೇಕು. ಮೈನಾರಿಟೀ ನಿಗಮಕ್ಕೆ ಅನುದಾನವನ್ನು ನೂರು ಕೋಟಿ ದಾಟಿಸಿದ್ದು ಕೊನೆಗೆ ಅದು 500 ಕೋಟಿಯಾಗಿ ಏರಿಕೆಯಾಗಿದ್ದು ಬಿಜೆಪಿ ಸರಕಾರದಲ್ಲಾಗಿತ್ತು. ನಾವು ಯುಟೀ ಖಾದರ್ ಸೂರ್ಯ , ರಮಾನಾಥ ರೈ ಚಂದ್ರ , ಕಾರ್ಯಕರ್ತ ನಕ್ಷತ್ರ ಎಂದು ನಕ್ಷತ್ರ ಎಣಿಸುವುದರಲ್ಲೇ ಇದ್ದೇವೆ. ಈ ಸೂರ್ಯ ಚಂದ್ರ ರ ಮೂಲಕ ನಾವು ಸಮುದಾಯಕ್ಕೆ ಯಾವ ಪ್ರಯೋಜನ ಪಡೆದುಕೊಂಡಿದ್ದೇವೆ ? ಇವರ ಮಂತ್ರಿ ಪಧವಿಯ ಪ್ರಯೋಜನ ಪಡೆದು ನಾವೆಷ್ಟು ಶಿಕ್ಷಣ ಸಂಸ್ಥೆ ಅಥವಾ ಸರಕಾರೀ ಸೌಲಭ್ಯ ಪಡೆದುಕೊಂಡಿದ್ದೇವೆ ? ನಮ್ಮ ಸಂವಿಧಾನಿಕ ಹಕ್ಕು ಮತ್ತು ರಕ್ಷಣೆಯಲ್ಲಿ ಇವರ ನಿಲುವಿಗಳು ಯಾವುದು ?

ವೇದಿಕೆಯಲ್ಲಿ ಮೊಯಿಲಾಯ ಸಲ್ಲಿ ವಾ ಸಲ್ಲಿ ಹಾಡಿದ್ದಾ ? ಮದುವೆಗೆ ಬಂದು ಮದುಮಗನ ಜೊತೆ ಪೊಟೋ ತೆಗೆದದ್ದಾ ? ಅದೇ ನಮಗೂ ನಾನು ಮೇಲೆ ಹೇಳಿದ ಝಕಾತ್ ಪೌಂಡೇಶನ್ ನ ಮುಸ್ಲಿಮರಿಗೂ ಇರುವ ವ್ಯತ್ಯಾಸ. ನಾವು ಕ್ಷಣಿಕ ಲಾಭಕ್ಕಾಗಿ ಇಲ್ಲವೇ ಪ್ರತಿಷ್ಠೆಯ ಪ್ರದರ್ಶನಕ್ಕಾಗಿ ಈ ಸೂರ್ಯ
ಚಂದ್ರನನ್ನು ಬಳಸಿದೆವು ಆದರೆ ಝಕಾತ್ ಪೌಂಡೇಶನ್ ಸಂಸ್ಥೆಯು ದೂರದೃಷ್ಠಿಯ ಉದ್ದೇಶ ಇಟ್ಟು ಕಾರ್ಯಾಚರಿಸಿತು ಅದರ ಫಲ ಅಂಕಿಅಂಶ 3 ರಿಂದ 4 ಕ್ಕೆ ಏರಿತು.......

ಯುಟೀ ಖಾದರ್ ಮತ್ತು ರಮನಾಥ ರೈ ಯಿಂದ ನಾವು ಬಯಸಿದ್ದು ನಮ್ಮ ಬೀದಿರಂಪಾಟಕ್ಕೆ ನೇತೃತ್ವವನ್ನು, ಸ್ಟೇಷನಿಗೆ ಹೋದ ಯುವಕರನ್ನು ಬಿಡಿಸುವುದನ್ನು, ಪ್ರಭಾಕರ ಭಟ್ಟ್ ನ್ನು ಬಂದಿಸುವುದನ್ನು, ಅವ ಗುಳಿಗೆ ಪೂಜೆ ಮಾಡದಂತೆ ತಡೆಯುವುದನ್ನು,
ಕೇಸರಿ ಶಾಲು ನಿಷೇಧಿಸುವುದನ್ನು ಈಗ ನಮಗೂ ಆ ಸಂಘಪರಿವಾರಕ್ಕೂ ಏನೂ ವ್ಯತ್ಯಾಸವಿಲ್ಲ. ಅವರು ಮುಸ್ಲಿಮರ ಮೇಲಿನ ದ್ವೇಷಕ್ಕೆ ನಮ್ಮ ಮೇಲೆ ಕೋಮುವಾದಿ ಆಗುತ್ತಾರೆ ನಾವು ಕೇಸರಿ ಪಡೆಯ ಮೇಲಿನ ದ್ವೇಷಕ್ಕೆ ಕೋಮುವಾದಿಗಳಾಗುತ್ತೇವೆ. ನಮ್ಮ ಈ ವರ್ತನೆ ಯುಟೀ ಖಾದರ್ ಹಾಗೂ ರಮಾನಾಥ ರೈ ಗೆ ಕಂಟಕವಾಗಿದೆ. ಅವರಿಗೆ ಕಾಂಗ್ರೇಸ್ಸ್ ಆಗುವ ಅನಿವಾರ್ಯತೆ ಇದೆ. ಇಲ್ಲವಾದರೆ ಅವರು ಜಾತ್ಯಾತೀತರು ಆಗುವುದು ಹೇಗೆ ?.....ಇವರ ಜಾತ್ಯಾ ತೀ ಕಥೆ ಮುಂದೆ ಹೇಳುವೆ...!

ಮುಂದುವರಿಯುವುದು....
ಸುನ್ನೀಟುಡೇ

ಸುನ್ನಿ ಟುಡೇ ೧

ಇವರನ್ನೇ ಆರಿಸಿ ಎಂದು ಆದೇಶ ಮಾಡುವ ಸಮುದಾಯದ ಶ್ರೀಮಂತರು ಹಾಗೇ ವೈಟ್ ಕಾಲರ್ ಧುರೀಣರು ನಮ್ಮ ಮೇಲೆ ಅನ್ಯಾಯವಾಗಿದ್ದಾಗ ಎಲ್ಲಿ ಅಡಗಿದ್ದರು ?

ಉಳ್ಳಾಲ ದರ್ಗಾ ಕಮೀಟಿ ರಾಹುಲ್ ಗಾಂಧಿಯ ಹರಕೆ ಸಂದಾಯ ಮಾಡಿತೇ ?

ಸುನ್ನೀಟುಡೇ
ಭಾಗ - 1

ರಾಜ್ಯದ ಹಲವು ಕಡೆ ಮುಸ್ಲಿಮ್ ವಿದ್ವಾಂಸರು - ಸಾಮಾಜಿಕ ಹೋರಾಟಗಾರರು- ಶ್ರೀಮಂತರು ಹಾಗೇ ಸಂಘಸಂಸ್ಥೆಗಳ ಸಾಮಾಜಿಕ
ಧುರೀಣರು ಸಭೆಸೇರಿ ಮುಂದಿನ ಚುನಾವಣೆಯಲ್ಲಿ ತಮ್ಮ ರಾಜಕೀಯ ನಿಲುವುಗಳ ಕುರಿತು ಚರ್ಚಿಸಿದರು. ಅವರಲ್ಲಿ ಆಯ್ಕೆಗಳು ಇರಲಿಲ್ಲ. ದೂರದೃಷ್ಠಿಯ ಉದ್ದೇಶವೂ ಇರಲಿಲ್ಲ. ಮುಸ್ಲಿಮರಿಗೆ ಮುಂದಿನ ಸರಕಾರ ನೀಡಬೇಕಾದ ಕೊಡುಗೆಗಳ ಪಟ್ಟಿ ಇರಲಿಲ್ಲ. ಆಗ್ರಹಗಳಿಗಿಂತ ಹೆಚ್ಚಾಗಿ ಅವರಲ್ಲಿ ಇದ್ದದ್ದು ಆದೇಶವಾಗಿತ್ತು. ಭವಿಷ್ಯದ ಹಿತ ಚಿಂತನೆಗಿಂತ ಹೆಚ್ಚಾಗಿ ಕಾಣಿಸಿದ್ದು ಅಸ್ತಿತ್ವದ ಅಂಜಿಕೆಯಾಗಿತ್ತು. ಧ್ರಡತೆಗಿಂತ ಮಿಗಿಲಾಗಿ ಅವರನ್ನು ಸಾಧ್ಯತೆಗಳು ಭಯಪಡಿಸುತ್ತಿತ್ತು. ನಿರ್ಧಾರ ಮಾಡಿಯೇ ಬಂದಿರುವ ಹೃದಯಗಳಿಗೆ ಕನಸುಗಳಿರಲಿಲ್ಲ. ತನ್ನ ಶಕ್ತಿ ಸಾಮರ್ಥ್ಯವನ್ನು ಆತಂಕದ ಗುಬ್ಬಿಕತೆಗಳಿಗೆ ಮೀಸಲಿಟ್ಟು ಕೊನೆಗೆ ದಶಕಗಳ ಮೋಸಕ್ಕೆ ಸಮುದಾಯವನ್ನು ಬಲಿಕೊಡುವ ಅಭಿಪ್ರಾಯಗಳೇ ಎಲ್ಲರಿಗೂ ಇಷ್ಟವಾಯಿತು.

ಒಂದು ಸಮುದಾಯವು ತನ್ನನ್ನು ತಾನು
ಬದಲಾಯಿಸುವವರೆಗೆ ಅಲ್ಲಾಹನು ಕೂಡ ಅದರ ಸ್ಥಿತಿಯನ್ನು ಬದಲಾಯಿಸುವುದಿಲ್ಲ ಹೀಗೆ ಕುರ್ ಅನಿನಲ್ಲಿ ಇದೆ ಎಂದು ಗುರುಗಳು ಹೇಳಿದ್ದು ಕೇಳಿದ್ದೆ. ಆದರೆ ಕಾಂಗ್ರೇಸ್ಸಿಗೇ ಮತವನ್ನು ಕೊಡುತ್ತೇವೆ ಎಂದು ನೀಯತ್ತು ಮಾಡಿ ಬಂದವರಿಂದ ಬದಲಾವಣೆಯ ಉದ್ದೇಶ ನಿರೀಕ್ಷಿಸಲು ಸಾಧ್ಯವಿಲ್ಲ. ಅಲ್ಲಾಹನು ಹೇಳುತ್ತಾನೆ "ನೀವು ನನ್ನನ್ನು ಭಯಪಡಿರಿ ನಾನು ನಿಮಗೆ ಸಾಕು". ಆದರೆ ಬಿಜೆಪಿಯ ಭಯದಿಂದ ಬದುಕುವವರಿಗೆ ಮುಸ್ಲಿಮ್ ಸಂಘಶಕ್ತಿಯ ನಿರ್ಣಯಗಳನ್ನು ಮಾಡುವ ನೈತಿಕತೆ ಖಂಡಿತಾ ಇಲ್ಲ. ಮೋದಿ ಬರಬಾರದು ಎಂದು ಪ್ರಾರ್ಥಿಸಿದವರಿಗೆ ಅಲ್ಲಾಹನು ನಿರಾಶೆ ಕೊಟ್ಟಿಲ್ಲವೇ ? ಅಧಿಕಾರ ತಾನು ಇಚ್ಚಿಸಿದವರಿಗೆ ಕೊಡುತ್ತೇನೆ ಎಂದು ಹೇಳಿದ ದೇವನು ಗೆದ್ದಿಲ್ಲವೇ ? ಒಂದು ನಿರ್ಧಾರ ಒಟ್ಟು ಸಮುದಾಯ ಹಾಗೂ ಸಮಾಜದ ಸ್ಥಿತಿಯನ್ನು ಬದಲಾಯಿಸುತ್ತದೆ ಎಂದು ಗೊತ್ತಿದ್ದೂ ಮತ್ತೆ ಅದೇ ತಪ್ಪಿನ ನಿರ್ಧಾರವನ್ನು ಮಾಡುವುದು ಸ್ವಾರ್ಥ ಸಾಧನೆಯ ಹಸಿವು ತಣಿಸುವ ಹುನ್ನಾರವಲ್ಲವೇ ? ಬಲಿಯಾಗುವುದು ನೀವಲ್ಲ, ಒಟ್ಟು ಸಮುದಾಯ ಎಂದು ಗೊತ್ತಿದ್ದರೂ ತನ್ನ ಅಸ್ತಿತ್ವ - ಉಧ್ಯಮ - ಸಂಘಸಂಸ್ಥೆ - ಕಾರ್ಯಾಚರಣೆಗಳನ್ನು ಉಳಿಸಲು ಒಂದು ಪಕ್ಷವನ್ನು ಗೆಲ್ಲಿಸುವ ನಿಲುವುಗಳಿಗೆ ಸಮುದಾಯದ ಸಭೆ ಎಂದು ಕರೆಯುವುದಿಲ್ಲ. ಅಲ್ಲಾಹನು ನನ್ನಲ್ಲಿ ಭರವಸೆ ಇಡಿ ಎಂದು ಹೇಳುವಾಗ ನೀವು ಕಾಂಗ್ರೇಸ್ಸ್ ಮೇಲೆ ಇಟ್ಟ ಭರವಸೆ ಮೆಚ್ಚಲೇ ಬೇಕು...!

ಚುನಾವಣೆಗೆ ತಿಂಗಳುಗಳು ಇರುವಾಗ ನಿಮಗೆ ಸಮುದಾಯದ ರಾಜಕೀಯ ಅಸ್ತಿತ್ವ ಮತ್ತು ನಿಲುವುಗಳ ಕುರಿತು ನೆನಪು ಬಂದಿದ್ದು ಯಾಕೆ ? ಮತದಾನದ ಮಹತ್ವ ಅರಿವಾದದ್ದು ಹೇಗೆ ? ಸಮುದಾಯದ ಮತಕ್ಕೆ ಇರುವ ಸಾಮರ್ಥ್ಯದ ಅರಿವು ಮೂಡಿದ್ದು ಹೇಗೆ ? ನಿಮ್ಮ ಸಭೆಗಳಲ್ಲಿ ಬರುವ ಶ್ರೀಮಂತರು ಹಾಗೇ ಸಮುದಾಯದ ವೈಟ್ ಕಾಲರ್ ಧುರೀಣರು ಈ ಮೊದಲು ಸಮುದಾಯಕ್ಕೆ ಅನ್ಯಾಯವಾದಾಗ ಎಲ್ಲಿ ಅಡಗಿದ್ದರು ? ಇವರು ನಡೆಸುವ ಬಿಲ್ಡಿಂಗ್ ಹಾಗೇ ಜಮೀನು ವ್ಯವಹಾರಕ್ಕೆ ಕುತ್ತು ಬಂದಿದೆ, ಕಳ್ಳ ವ್ಯಾಪಾರ ಹಾಗೇ ವಹಿವಾಟು ನೆಗೆದು ಬಿದ್ದಿದೆ ಅದಕ್ಕಾಗಿ ಇವರು ಒಂದು ಪಕ್ಷವನ್ನೇ ಗೆಲ್ಲಿಸಬೇಕು ಎಂದು ನಿಮ್ಮನ್ನು ಅಂಗಲಾಚುತ್ತಾರೆ. ಇವರ ಸಂಘಸಂಸ್ಥೆಗಳ ಮೇಲೆ ನಿಗಾ ಇರಿಸಲಾಗಿದೆ. ಸರಕಾರದಿಂದ ಅಲ್ಪಸಂಖ್ಯಾತರ ಹೆಸರಿನಲ್ಲಿ ದೋಚಿದ್ದು ಹಾಗೇ ವಕ್ಫ್ ಆಸ್ತಿ ನುಂಗಿ ಹಾಕಿದ್ದು ಬಯಲಾಗಬಾರದು ಎಂದು ಇವರು ತಮ್ಮ ರಕ್ಷಣೆಗಾಗಿ ಸಬೆ ಕರೆದಿದ್ದಾರೆ ಎಂದು ನಾನು ಹೇಳಿದರೆ ನಿಮಗೆ ಕೆಂಡದಂತ ಕೋಪ ಬರಬಹುದು.

ನಿಮಗೆ ದಕ್ಷಿಣ ಕನ್ನಡದ ಶ್ರೀಮಂತ ಮುಸ್ಲಿಮರ ಕಥೆ ಗೊತ್ತಿದೆಯೇ ? ಅವರಿಗೆ ಸಮುದಾಯದ ಮೇಲೆ ಎಷ್ಟು ಪ್ರೀತಿ ಇದೆಯೋ ಅದಕ್ಕಿಂತ ಮಿಗಿಲಾಗಿ ಕಾಂಗ್ರೇಸ್ಸಿನ ಭ್ರಷ್ಟತೆಯಲ್ಲಿ ಪಾಲು ಇದೆ. ಇವರು ಸಮುದಾಯಕ್ಕಾಗಿ ಏನು ಮಾಡಿದ್ದಾರೆ ಎಂದು ಒಮ್ಮೆ ಲೆಕ್ಕ ಹಾಕಿ ನೋಡಿ. ಇವರ ಮನೆ - ಕಾರು -ಉದ್ಯಮ ಎಷ್ಟು ವಿಸ್ತಾರವಾಗಿದೆ. ಆದರೆ ಮಂಗಳೂರಿನ ಖಾಝಿ ಇಂದಿಗೂ ಒಂದು ಹಂಚಿನ ಮನೆಯಲ್ಲಿ ಕಚೇರಿ ಹೊಂದಿದ್ದಾರೆ. ನಿಮಗೆ ಬಿಷಫ್ ಹೌಸ್ ಹಾಗೇ ಸ್ವಾಮೀಜಿಗಳ ಮಠಗಳ ಪರಿಚಯ ಇದೆಯಾ ? ಒಮ್ಮೆ ಯಾಕೆ ನೋಡಿ ಬರಬಾರದು ? ಹಾಗೇ ನಿಮ್ಮ ಖಾಝಿಯ ಹರುಕಳು ಗುಡಿಸಲನ್ನೂ. ಎಲ್ಲಿದೆ ಮುಸ್ಲಿಮ್ ಸಮುದಾಯ ಕೇಂದ್ರ ? ಎಲ್ಲಿದೆ ಇಸ್ಲಾಮಿಕ್ ಸೆಂಟರ್ ? ಎಲ್ಲಿದೆ ಮುಸ್ಲಿಮ್ ಕಮ್ಯುನಿಟೀ ಡೆವಲಪ್ ಮೆಂಟ್ ಸೆಂಟರ್ ? ಮುಸ್ಲಿಮ್ ಕಲ್ಯಾಣ ಕೇಂದ್ರದ ಉದ್ಘಾಟನೆಗೆ ಸಿಎಂ ಬಂದಂತಹ ವರದಿಯನ್ನು ಓದಿದ್ದೀರಾ ? 500 ಕೋಟಿಯಲ್ಲಿ ನಿರ್ಮಾಣವಾಗಿತ್ತಿರುವ ಭಂಟ್ಸ್ ಸಮುದಾಯ ಭವನ ನೋಡಿ ಅಲ್ಲಿ ಅವರ ಸಾಮಾಜಿಕ ಶೈಕ್ಷಣಿಕ ಕಲ್ಯಾಣಗಳು ನಡೆಯುತ್ತದೆ. ನಮ್ಮಲ್ಲಿ ನಮ್ಮ ರಕ್ತವನ್ನೇ ಹೀರುವ ಹಾಸ್ಪಿಟಲ್ ಗಳು, ನಮ್ಮನ್ನು ಬೋಳಿಸುವ 500 ಕೋಟಿಯ ವಾಣಿಜ್ಯ ಮಾಲ್ ಗಳು ಇದೆ. ಅಲ್ಪಸಂಖ್ಯಾತರ ಹೆಸರಿನಿಂದ ಸರಕಾರದಿಂದ ಮತ್ತು ವಕ್ಫ್ ನಿಂದ ಕಬಳಿಸಿದ ಕೇಂದ್ರಗಳು. ಒಬ್ಬ ಮುಖ್ಯಮಂತ್ರಿ ಬಂದರೆ ಮುಸ್ಲಿಮರ ಕೇಂದ್ರವನ್ನು ಭೇಟಿ ಮಾಡಲು ಎಲ್ಲಿ ಅವಕಾಶ ಇದೆ ? ಆಗ ಉಳ್ಳಾಲ ದರ್ಗಾಕ್ಕೆ ಚಪ್ಪರ ಹಾಕಬೇಕು ...! ಅ ಚಪ್ಪರದ ನೆರಳಲ್ಲಿ ಕಾಂಗ್ರೇಸ್ಸ್ ನವನಿಗೆ ಮಾತ್ರವೇ ನೆರಳು ಎಂದು ಬೈಲಾ ಬರೆಯಾಗಿದೆಯೇ ? ಅಥವಾ ರಾಹುಲ್ ಗಾಂದಿಯ ಹರಕೆಯನ್ನು ಯಾರಾದರೂ ತೀರಿಸಿದ್ದೇ ?ಎಸ್ಡೀಪಿಐನವನಿಗೆ ಉಳ್ಳಾಲ ದರ್ಗಾದಲ್ಲಿ ವೇದಿಕೆ ಮಾಡಿ ಕೊಡಬಹುದೇ ? ನರೇಂದ್ರ ಮೋದಿಗೆ ಅಲ್ಲಿ ರೆಡ್ ಕಾರ್ಪೆಟ್ ಸ್ವಾಗತ ಸಿಗಬಹುದೇ ? ನೀವು ರಾಹುಲ್ ಗಾಂಧಿಯನ್ನು ಬೇಟಿ ಆಗಲು
ಹಾಗೂ ಆ ಪುಣ್ಯ ಕೈ ಸ್ಪರ್ಶಿಸಲು ತೋರಿಸಿದ ತಖ್ವಾ ಮೆಚ್ಚಲೇ ಬೇಕು...
🐜
Sunnitoday
ಮುಂದುವರಿಯುವುದು.....