ಚರಿತ್ರೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಚರಿತ್ರೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಅಕ್ಟೋಬರ್ 21, 2017

ಟಿಪ್ಪು ಸುಲ್ತಾನ್

ಹದಿನೆಂಟನೇ ಶತಮಾನದಲ್ಲಿ ಟಿಪ್ಪು ಸುಲ್ತಾನ್ ಮೈಸೂರಿನ ಮೇಲಿನ ‘ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ’ಯ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದ. ಮೈಸೂರಿನ ಮೇಲೆ ಮೂರು ಬಾರಿ ದಾಳಿ ಮಾಡಿದ್ದರೂ ಅವರು ಯಶಸ್ವಿಯಾಗಿರಲಿಲ್ಲ. ಆದರೆ ಅವರು 1799ರಲ್ಲಿ ಶ್ರೀರಂಗಪಟ್ಟಣದ ಮೇಲೆ ದಾಳಿ ಮಾಡಿ ಟಿಪ್ಪು ಅವಸಾನಕ್ಕೆ ಕಾರಣರಾದರು.

‘ಮೈಸೂರಿನ ಹುಲಿ’ಯೆಂದು ಪ್ರಖ್ಯಾತನಾಗಿದ್ದ ಟಿಪ್ಪು ಸುಲ್ತಾನನನ್ನು ಮತ್ತು ಆತನ ಹುಲಿಯ ರೂಪಕವನ್ನು ನಾವು ಬೇರೆಬೇರೆಯಾಗಿ ನೋಡುವುದು ಸಾಧ್ಯವಿಲ್ಲ. ಟಿಪ್ಪು ಹುಲಿಯ ರೂಪಕವನ್ನು ಅತಿರೇಕಕ್ಕೆ ಕೊಂಡೊಯ್ದಿದ್ದ. ಆತನ ರಾಜಮುದ್ರೆಯಲ್ಲಿ, ನಾಣ್ಯಗಳಲ್ಲಿ, ಗೋಡೆಗಳ ಮೇಲೆ, ಬಾವುಟಗಳಲ್ಲಿ, ಅವನ ಅಡಿಕೆ ಡಬ್ಬಿಯ ಮೇಲೆಯೂ ಹುಲಿಯ ಚಿತ್ರವಿತ್ತು. ಹುಲಿಯ ಪಟ್ಟೆಗಳ ವಿನ್ಯಾಸದ ವಸ್ತ್ರ ಧರಿಸುತ್ತಿದ್ದ, ತನ್ನ ಸೈನಿಕರಿಗೂ ಅಂಥದೇ ವಸ್ತ್ರಗಳನ್ನು ಕೊಟ್ಟಿದ್ದ. ಅವನ ಕೆಲವು ಚಿಕ್ಕ ಫಿರಂಗಿಗಳನ್ನು ಸಹ ದಾಳಿಮಾಡಲು ಸಿದ್ಧವಿರುವ ಹುಲಿಗಳಂತೆ ವಿನ್ಯಾಸಗೊಳಿಸಲಾಗಿತ್ತು. ಅವನ ಸಿಂಹಾಸನಕ್ಕೆ ಹುಲಿಯ ಕಾಲುಗಳು ಹಾಗೂ ಹುಲಿಯ ತಲೆಗಳ ಆಕೃತಿಗಳಿದ್ದವು. ಟಿಪ್ಪು ಶತ್ರುಗಳಿಗೆ ತನ್ನ ಶಕ್ತಿಯನ್ನು ಪ್ರದರ್ಶಿಸಲು ಒಂದು ಪ್ರಬಲ ಮತ್ತು ಪರಿಣಾಮಕಾರಿ ಸಂಕೇತವನ್ನು ಬಳಸಿಕೊಂಡಿದ್ದ. ಬ್ರಿಟಿಷರಿಗೆ ಟಿಪ್ಪುಸುಲ್ತಾನ್ ‘ವ್ಯಾಘ್ರಸ್ವಪ್ನ’ವಾಗಿದ್ದ. ಬ್ರಿಟಿಷರನ್ನು ಎದುರಿಸುತ್ತಿದ್ದ ರೀತಿ ಹಾಗೂ ಬ್ರಿಟಿಷರ ಮೇಲಿನ ಅವನ ದ್ವೇಷ ಇಂಗ್ಲೆಂಡಿನಲ್ಲಿ ದಂತಕತೆಯೇ ಆಗಿತ್ತು.

ಟಿಪ್ಪು ತನ್ನ ರಾಜಧಾನಿಯಾದ ಶ್ರೀರಂಗಪಟ್ಟಣದಲ್ಲಿ ನಗರದ ಹಲವೆಡೆ ವ್ಯಂಗ್ಯಚಿತ್ರಗಳೆನ್ನಬಹುದಾದ ಬೃಹತ್ ಚಿತ್ರಗಳನ್ನು ಬರೆಸಿದ್ದನೆಂಬ ಉಲ್ಲೇಖಗಳಿವೆ. ಅವುಗಳಲ್ಲಿ ಯೂರೋಪಿಯನ್ನರ, ವಿಶೇಷವಾಗಿ ಬ್ರಿಟಿಷರ ಮೇಲೆ ದಾಳಿ ಮಾಡುತ್ತಿರುವ ಹುಲಿ, ಆನೆಗಳ ಚಿತ್ರಗಳಿದ್ದವು. ಬ್ರಿಟಿಷರ ಬಗೆಗಿನ ಟಿಪ್ಪುವಿನ ಈ ವ್ಯಂಗ್ಯ ಭಾವನೆಯ ಉತ್ತುಂಗವೆಂದರೆ, ಆತ ಹೇಳಿ ಮಾಡಿಸಿದ ಬ್ರಿಟಿಷರ ಮೇಲೆ ದಾಳಿ ನಡೆಸುತ್ತಿರುವ ಹುಲಿಯ ಯಂತ್ರ ಗೊಂಬೆ.

1799ರಲ್ಲಿ ಟಿಪ್ಪೂನನ್ನು ಕೊಂದ ‘ಈಸ್ಟ್ ಇಂಡಿಯಾ ಕಂಪೆನಿ’ಯ ಸೈನಿಕರು ಯಂತ್ರಹುಲಿಯನ್ನು ಲಂಡನ್ನಿಗೆ ಕೊಂಡೊಯ್ದು ಅಲ್ಲಿ ಪ್ರದರ್ಶನಕ್ಕಿರಿಸಿ, ಅವರೂ ಸಹ ಮನರಂಜನೆ ಪಡೆದುಕೊಂಡಿದ್ದಾರೆ. ಟಿಪ್ಪು ಸತ್ತನಂತರ 1800ರಲ್ಲಿ ಜೇಮ್ಸ್ ಸಾಲ್ಮಂಡ್ ಎಂಬಾತ ಬರೆದ ‘ಎ ರಿವ್ಯೂ ಆಫ್ ದ ಆರಿಜಿನ್, ಪ್ರೊಗ್ರೆಸ್ ಅಂಡ್ ರಿಸಲ್ಟ್ ಆಫ್ ದ ಲೇಟ್ ಡಿಸಿಸಿವ್ ವಾರ್ ಇನ್ ಮೈಸೂರ್ ವಿಥ್ ನೋಟ್ಸ್’ ಪುಸ್ತಕದ ಮುಖಪುಟದಲ್ಲೇ ಯಂತ್ರ ಹುಲಿಯ ಚಿತ್ರವಿತ್ತು ಹಾಗೂ ಆ ಯಂತ್ರ ಹುಲಿಯ ಮೊಟ್ಟಮೊದಲ ಚಿತ್ರವೂ ಸಹ ಇದೇ ಆಗಿದೆ.

ಟಿಪ್ಪು ಬ್ರಿಟಿಷರನ್ನು ಎದುರಿಸುತ್ತಿದ್ದ ದಂತಕತೆಯೂ ಸಹ ಟಿಪ್ಪು ವ್ಯಂಗ್ಯಚಿತ್ರದ ವಸ್ತುವಾಗಲು ಪ್ರೇರೇಪಣೆ ನೀಡಿದೆ. ಟಿಪ್ಪು ಬದುಕಿದ್ದಾಗಲೇ 1791ರಲ್ಲಿ ಜೇಮ್ಸ್ ಗಿಲ್‌ರೇ ಎಂಬ (ವ್ಯಂಗ್ಯ) ಚಿತ್ರಕಾರ ಇಂಗ್ಲೆಂಡಿನಲ್ಲಿ ‘ದ ಕಮಿಂಗ್ ಆನ್ ಆಫ್ ದ ಮಾನ್ಸೂನ್ಸ್ ಆರ್ ದ ರಿಟ್ರೀಟ್ ಫ್ರಂ ಸೆರಿಂಗಪಟಂ’ (The Coming-on of the monsoons or – the retreat from Seringapatam) (ಬ್ರಿಟಿಷರು ಶ್ರೀರಂಗಪಟ್ಟಣವನ್ನು ‘ಸೆರಿಂಗಪಟಂ’ ಎಂದು ಕರೆಯುತ್ತಿದ್ದರು) ಎಂಬ ವ್ಯಂಗ್ಯಚಿತ್ರ ಟಿಪ್ಪು ಬಗೆಗೆ ಬರೆದ ಜಗತ್ತಿನ ಮೊಟ್ಟಮೊದಲ ವ್ಯಂಗ್ಯಚಿತ್ರವೆನ್ನಬಹುದು. ಆ ವರ್ಣಚಿತ್ರದ ಮೂಲ ಪ್ರತಿ ಈಗಲೂ ಲಂಡನ್ನಿನ ‘ನ್ಯಾಶನಲ್ ಪೋರ್ಟ್ರೈಟ್ ಗ್ಯಾಲರಿ’ಯಲ್ಲಿದೆ.

ಈ ವ್ಯಂಗ್ಯಚಿತ್ರದಲ್ಲಿ ಚಾರ್ಲ್ಸ್ ಕಾರ್ನ್‌ವಾಲಿಸ್ ಟಿಪ್ಪೂವಿನ ‘ದಾಳಿ’ಗೆ ಹೆದರಿ ತನ್ನ ಹೇಸರಕತ್ತೆಯ ಮೇಲೆ ಕೂತು ಓಡುತ್ತಿದ್ದಾನೆ. ಕೋಟೆಯ ಹಿಂದೆ ಗಹಗಹಿಸುತ್ತಾ ನಿಂತಿರುವ ಟಿಪ್ಪು ಕತ್ತಿ ಹಿಡಿದು ಕಾರ್ನ್‌ವಾಲಿಸ್ ಹಾಗೂ ಓಡುತ್ತಿರುವ ಬ್ರಿಟಿಷ್ ಸೈನಿಕರ ಮೇಲೆ ಮೇಲೆ ಅತ್ಯಂತ ರಭಸದಿಂದ (‘ಕಮಿಂಗ್ ಆನ್ ಆಫ್ ದ ಮಾನ್ಸೂನ್!’) ಮೂತ್ರ ಮಾಡುತ್ತಿದ್ದಾನೆ. ಕಾರ್ನ್‌ವಾಲಿಸ್‌ನ ಟೋಪಿ ಹಾರಿದೆ, ಕತ್ತಿ ಕೈಯಿಂದ ಜಾರಿದೆ ಹಾಗೂ ಪಿಸ್ತೂಲು ಕೆಳಗೆ ಬಿದ್ದಿದೆ. ಬ್ರಿಟಿಷ್ ಸೈನಿಕರು ನೆಲದ ಮೇಲೆ ಸತ್ತು ಬಿದ್ದಿದ್ದಾರೆ. ಇದರಿಂದಲೇ ಬ್ರಿಟಿಷರಿಗೆ ಟಿಪ್ಪೂನನ್ನು ಕಂಡರೆ ಎಷ್ಟು ಹೆದರಿಕೆ ಇತ್ತೆಂದು ತಿಳಿಯುತ್ತದೆ.

ಟಿಪ್ಪೂನನ್ನು ಕೊಂದದ್ದೂ ಸಹ ಇಂಗ್ಲೆಂಡಿನಲ್ಲಿ ವ್ಯಂಗ್ಯಚಿತ್ರದ ವಿಷಯವಾಯಿತು. ಆದರೆ ಅದರಲ್ಲಿ ಲೇವಡಿ ಮಾಡಿರುವುದು ಟಿಪ್ಪೂವನ್ನಲ್ಲ, ಅವನನ್ನು ಕೊಂದ ಬ್ರಿಟಿಷರನ್ನು. 1760ರಿಂದ 1790ರವರೆಗೂ ಬ್ರಿಟಿಷರಿಗೆ ಮೈಸೂರನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಟಿಪ್ಪು ಬ್ರಿಟಿಷರನ್ನು ಬಗ್ಗುಬಡೆಯಲು ಫ್ರೆಂಚರ ಸಹಾಯ ಕೋರುತ್ತಿದ್ದ. ನೆಪೋಲಿಯನ್ ಈಜಿಪ್ಟಿಗೆ ಧಾವಿಸಿದಾಗ ಆತ ಭಾರತಕ್ಕೂ ಬಂದುಬಿಡಬಹುದೆಂಬ ಹೆದರಿಕೆ ಬ್ರಿಟಿಷರನ್ನು ಕಾಡಿತು. ಅದಕ್ಕೆ ಮೊದಲೇ ಮೈಸೂರನ್ನು ವಶಪಡಿಸಿಕೊಳ್ಳಲು ‘ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ’ ಯೋಜನೆ ಹಾಕಿತು. ಇಪ್ಪತ್ತೈದು ಸಾವಿರ ಸೈನಿಕರ ಸೇನೆಯೊಂದಿಗೆ ಮಾರ್ಚ್ 1799ರಲ್ಲಿ ಶ್ರೀರಂಗಪಟ್ಟಣದ ಮೇಲೆ ದಾಳಿ ಮಾಡಿದರು. ಒಂದು ತಿಂಗಳಿಗೂ ಹೆಚ್ಚು ಕಾಲ ಟಿಪ್ಪೂ ಕೋಟೆ ಅಭೇದ್ಯವಾಗಿತ್ತು. ಕೊನೆಗೂ ಬ್ರಿಟಿಷರು ಒಳನುಗ್ಗುವಲ್ಲಿ ಯಶಸ್ವಿಯಾದರು. ಅವರೊಂದಿಗೆ ವೀರಾವೇಶದಿಂದ ಹೋರಾಡಿದ ಟಿಪ್ಪು ಸಾವನ್ನಪ್ಪಿದ. ಅವನ ಸಾವಿನ ನಂತರ ನಲವತ್ತೆಂಟು ಗಂಟೆಗಳ ಕಾಲ ಬ್ರಿಟಿಷರು ಟಿಪ್ಪು ಅರಮನೆ ಹಾಗೂ ನಗರವನ್ನು ಕೊಳ್ಳೆಹೊಡೆಯುತ್ತಾರೆ, ಸಾವಿರಾರು ಜನರನ್ನು ಕೊಲ್ಲುತ್ತಾರೆ. ಟಿಪ್ಪು ಸಾವಿನಿಂದ ಬ್ರಿಟನ್ನಿನ ಜನ ಸಂತೋಷದಿಂದ ಕುಣಿದಾಡಿದರಂತೆ.

ಆಗ ಅಕ್ಟೋಬರ್ 8, 1799ರಂದು ‘ದ ಡೆತ್ ಆಫ್ ಟಿಪ್ಪು ಆರ್ ಬಿಸೀಜಿಂಗ್ ದ ಹೇರಂ’ (The death of Tippoo or Besieging the haram!!!) ) ಎಂಬ ವ್ಯಂಗ್ಯಚಿತ್ರ ಪ್ರಕಟವಾಯಿತು.  ಆ ವ್ಯಂಗ್ಯಚಿತ್ರದಲ್ಲಿ ಟಿಪ್ಪೂನನ್ನು ಕೊಂದನಂತರ ಅವನ ಅಂತಃಪುರಕ್ಕೆ ನುಗ್ಗಿ ಟಿಪ್ಪೂನ ರಾಣಿಯರನ್ನು ಅತ್ಯಾಚಾರ ಮಾಡುತ್ತಿರುವ ದೃಶ್ಯವಿದೆ. ಒಬ್ಬ ಮಹಿಳೆಯನ್ನು ಕೊಂಡೊಯ್ಯುತ್ತಿರುವ ಒಬ್ಬಾತ, ‘Hurrah my Honey, now for the Black Joke’ ಎನ್ನುತ್ತಿದ್ದಾನೆ (‘ಬ್ಲಾಕ್ ಜೋಕ್’ ಎನ್ನುವುದು ಆಗಿನ ಇಂಗ್ಲಿಷಿನಲ್ಲಿ ಹೆಣ್ಣಿನ ಜನನಾಂಗಕ್ಕೆ ಇದ್ದ ಅಡ್ಡಹೆಸರು). ಮತ್ತೊಬ್ಬಾತ ‘Cheer up my girls, will supply his place well’ ಎನ್ನುತ್ತಿದ್ದಾನೆ. ಹೆಣ್ಣೊಬ್ಬಳು ಒಬ್ಬನನ್ನು ಕೆಳಕ್ಕೆ ದಬ್ಬಿ ಕುತ್ತಿಗೆ ಹಿಸುಕುತ್ತಿದ್ದಾಳೆ.

ಬ್ರಿಟನ್ನಿನ ವಸಾಹತುಶಾಹಿ ದಬ್ಬಾಳಿಕೆ, ಆಕ್ರಮಣವನ್ನು ಬ್ರಿಟನ್ನಿನ ಹಲವಾರು ಜನ ವಿರೋಧಿಸುತ್ತಿದ್ದರು. ‘ದ ಡೆತ್ ಆಫ್ ಟಿಪ್ಪು ಆರ್ ಬಿಸೀಜಿಂಗ್ ದ ಹೇರಂ’ ವ್ಯಂಗ್ಯಚಿತ್ರ ಅಂತಹ ಒಂದು ವಿರೋಧದ ಅಭಿವ್ಯಕ್ತಿ ಎನ್ನುವವರಿದ್ದಾರೆ. ‘ಭಾರತೀಯರು ಅನಾಗರಿಕರು ಹಾಗೂ ಅಲ್ಲಿನ ರಾಜ, ಮಹಾರಾಜರುಗಳಿಂದಲೇ ದಬ್ಬಾಳಿಕೆಗೆ ಒಳಗಾದವರು. ಅಲ್ಲಿನ ಜನರನ್ನು ಸಭ್ಯ, ನಾಗರಿಕ ಬ್ರಿಟಿಷರಾದ ನಾವು ಕಾಪಾಡುತ್ತಿದ್ದೇವೆ’ ಎನ್ನುವ ಚಿತ್ರಣವನ್ನು ಬ್ರಿಟನ್ನಿಗೆ ಕೊಟ್ಟಿದ್ದ ‘ಈಸ್ಟ್ ಇಂಡಿಯಾ ಕಂಪೆನಿ’ಯ ಮತ್ತೊಂದು ಮುಖವನ್ನು ತೋರಿಸುವ ಪ್ರಯತ್ನ ಈ ವ್ಯಂಗ್ಯಚಿತ್ರದ್ದಾಗಿತ್ತು. ಆದರೆ ಆ ವ್ಯಂಗ್ಯಚಿತ್ರದಲ್ಲಿ ತೋರಿಸಿರುವ ಹೆಣ್ಣಿನ ಸಾಕಷ್ಟು ನಗ್ನತೆ ಬ್ರಿಟಿಷರ ವಸಾಹತುಶಾಹಿ ದಬ್ಬಾಳಿಕೆಯನ್ನು ತೋರಿಸುವ ಉದ್ದೇಶ ಹೊಂದಿರಲಿಲ್ಲ, ಬದಲಿಗೆ ಆಗಿನ ಬ್ರಿಟಿಷ್ ‘ಸಭ್ಯ ನಾಗರಿಕರ’ ಮನಸ್ಸಿಗೆ ಕಚಗುಳಿ ಇಡುವುದಷ್ಟೇ ಆಗಿತ್ತು ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಹಾಗೂ ಚರಿತ್ರಕಾರ ತನ್ನ 2006ರ ‘City of Laughter: Sex and Satire in Eighteenth-century London’ ಪುಸ್ತಕದಲ್ಲಿ, ಆ ಸಮಯದ ವ್ಯಂಗ್ಯಚಿತ್ರ ಮತ್ತು ಅಶ್ಲೀಲ ಸಾಹಿತ್ಯದ ನಡುವಿನ ಸಂಬಂಧಗಳ ವಿಶ್ಲೇಷಣೆಯಲ್ಲಿ ತಿಳಿಸಿದ್ದಾನೆ.   ಈ ಚಿತ್ರ ಬಿಡಿಸಿದ ಕಲಾಕಾರನಿಗೆ ಆಗಿನ ಭಾರತೀಯ ಸಮಾಜದ ಹೆಣ್ಣಿನ ಚಿತ್ರಣ ಇರಲಿಲ್ಲವೆನ್ನಿಸುತ್ತದೆ, ಏಕೆಂದರೆ ಆ ಚಿತ್ರದಲ್ಲಿನ ಹೆಣ್ಣುಗಳು ಧರಿಸಿರುವ ವಸ್ತ್ರಗಳು ಯೂರೋಪಿಯನ್ ಹೆಣ್ಣುಗಳ ವಸ್ತ್ರಗಳಂತಿವೆ. ಆ ವ್ಯಂಗ್ಯಚಿತ್ರ ಬಿಡಿಸಿದ ಕಲಾವಿದ ಯಾರೆಂಬುದರ ಬಗ್ಗೆ ಈಗಲೂ ಏಕಾಭಿಪ್ರಾಯವಿಲ್ಲ. ಕೆಲವರು ರೋಲ್ಯಾಂಡ್‌ಸನ್ ಎಂದರೆ ಆ ಚಿತ್ರರಚನೆ ಹಾಗೂ ಅದರಲ್ಲಿನ ಬರಹದ ಶೈಲಿಯಿಂದ ಕೆಲವರು ಜಾನ್ ಕಾಸ್ ಎನ್ನುತ್ತಾರೆ.

ಟಿಪ್ಪು ಸುಲ್ತಾನ್ ಹುಟ್ಟು ಹಾಕಿದ್ದ ಹುಲಿಯ ರೂಪಕ ಬ್ರಿಟಿಷರಿಗೆ ಸವಾಲಾಗಿತ್ತು. ಬ್ರಿಟಿಷರ ಲಾಂಛನ ಸಿಂಹವಾಗಿತ್ತು ಹಾಗೂ ಅವರು ಹುಲಿಯನ್ನು ಸಿಂಹ ಕೊಲ್ಲುವ ಚಿತ್ರಗಳನ್ನು ಸಾಧ್ಯವಾದೆಡೆಯಲ್ಲೆಲ್ಲ ಬಳಸಿದರು. ಟಿಪ್ಪೂನನ್ನು ಕೊಂದ ಸೈನಿಕರಿಗೆ ಇಂಗ್ಲೆಂಡಿನಲ್ಲಿ ‘ಸೆರಿಂಗಪಟಂ ಪದಕ’ ನೀಡಿ ಸನ್ಮಾನಿಸಿದರು. ಆ ಪದಕದಲ್ಲಿ ಒಂದೆಡೆ ಹುಲಿಯನ್ನು ಸಿಂಹ ಕೊಲ್ಲುತ್ತಿರುವ ಚಿತ್ರವಿತ್ತು. ಟಿಪ್ಪೂ ಸಾವಿನ ನಂತರವೂ ಸಹ ಹುಲಿಯ ಸಂಕೇತದ ಮೇಲಿನ ಅವರ ಸಿಟ್ಟು ಕಡಿಮೆಯಾಗಲಿಲ್ಲ. ಅದೇ ಸಿಟ್ಟಿನಿಂತ ಭಾರತದ ಕಾಡುಗಳಲ್ಲಿ ಹುಲಿಗಳನ್ನು ಕೊಂದು, ಅವುಗಳ ಮೇಲೆ ಕಾಲನ್ನಿಟ್ಟು ಫೋಟೊ ತೆಗೆಸಿಕೊಂಡು ಗರ್ವದಿಂದ ಬೀಗುತ್ತಿದ್ದರು.

1857ರ ‘ಸಿಪಾಯಿ ದಂಗೆ’ಯ ಸಮಯದಲ್ಲಿ ಬ್ರಿಟನ್ನಿನ ವ್ಯಂಗ್ಯಚಿತ್ರಗಳಿಗೆಂದೇ ಮೀಸಲಾಗಿರುವ ಪತ್ರಿಕೆ ‘ಪಂಚ್’ನ, 1857ರ ಆಗಸ್ಟ್ 22ರ ಸಂಚಿಕೆಯಲ್ಲಿ ಜಾನ್ ಟೆನ್ನಿಯಲ್ ಎಂಬಾತನ ‘ದ ಬ್ರಿಟಿಷ್ ಲಯನ್ಸ್ ವೆನ್‌ಜಿಯೆನ್ಸ್ ಆನ್ ದ ಬೆಂಗಾಲ್ ಟೈಗರ್’ (The British Lion’s Vengeance on the Bengal Tiger) ಎಂಬ ವ್ಯಂಗ್ಯಚಿತ್ರ ಪ್ರಕಟವಾಯಿತು.

ಅದರಲ್ಲಿ ಹುಲಿಯೊಂದು ಮಗು ಹಾಗೂ ಮಹಿಳೆಯ ಮೇಲೆ ದಾಳಿ ಮಾಡಿದೆ. ಆ ಮಗು ಮತ್ತು ಹೆಣ್ಣನ್ನು ಕಾಪಾಡಲೋ ಎಂಬಂತೆ ಸಿಂಹವೊಂದು ಹುಲಿಯ ಮೇಲೆ ದಾಳಿ ಮಾಡಿದೆ. ಟಿಪ್ಪೂನ ಯಂತ್ರ ಹುಲಿ ಬ್ರಿಟಿಷನ ಮೇಲೆ ದಾಳಿ ಮಾಡಿ ಗರ್ಜಿಸುತ್ತಿದ್ದರೆ, ‘ಪಂಚ್’ನ ವ್ಯಂಗ್ಯಚಿತ್ರ ಅದಕ್ಕೆ ವಿರುದ್ಧವಾಗಿ ಹುಲಿಯ ಮೇಲೆ ದಾಳಿ ಮಾಡಿ ಸೇಡು ತೀರಿಸಿಕೊಳ್ಳುತ್ತಿರುವಂತಿದೆ. ಅದರ ಶೀರ್ಷಿಕೆಯೂ ಅದನ್ನೇ ಹೇಳುತ್ತದೆ. 
                            - ಡಾ. ಜೆ. ಬಾಲಕೃಷ್ಣ

--------------------------------------------------------------------

ಟಿಪ್ಪು ಜಯಂತಿಯನ್ನ ಅವನನ್ನ ಮೆಚ್ಚುವ, ಆರಾಧಿಸುವ ಸಂಘಟನೆಗಳು ದಶಕಗಳಿಂದ ನಡೆಸುತ್ತಿವೆ. ಇಸ್ಲಾಂ ಪ್ರಕಾರ ಜಯಂತಿ ಆಚರಣೆ ನಿಷಿದ್ಧವಾದರೂ....! ಇದನ್ನ ಸರ್ಕಾರ ಆಚರಿಸುತ್ತಿರುವುದು ಖಂಡಿತ ರಾಜಕೀಯಕ್ಕಾಗಿ.
ಆದ್ರೆ, ಟಿಪ್ಪು, ಕಿತ್ತೂರು ಚನ್ನಮ್ಮ ಹಾಗೂ ಮೈಸೂರಿನ ಒಡೆಯರ್ ಅವರು ಕರ್ನಾಟಕದ ಎಲ್ಲ ರಾಜರಂತೆ ಅಂತ ಸಾಮಾನ್ಯೀಕರಿಸುವುದು ತಪ್ಪು. ಕುವೆಂಪು, ಬೇಂದ್ರೆ, ಎಸ್.ಎಲ್‌. ಭೈರಪ್ಪ, ಅನಂತ ಮೂರ್ತಿ, ದೇವನೂರರು ಒಂದೇ ಗಮನಾರ್ಹವಾದುದನ್ನು ಬರೆಯದ ಬರಹಗಾರರು ಒಂದೇ ಎಂಬಂತಾಗಲಿದೆ.

ಟಿಪ್ಪು, ಒಡೆಯರ್ ಅವರ ಆಳ್ವಿಕೆ, ಆಡಳಿತಗಳು ಆಗಿ ಶತಮಾನಗಳು ಕಳೆದು ಹೋದರು ಅವರ ದೂರದರ್ಶಿತ್ವದ ಕೊಡುಗೆಗಳನ್ನ ಈಗಲು ಅನುಭವಿಸುತ್ತಿದ್ದೇವೆ. ಟಿಪ್ಪು ತಂದ ರೇಷ್ಮೆ, ಕ್ಷಿಪಣಿ ತಂತ್ರಜ್ಞಾನ ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು. ಒಡೆಯರ್ ಕೊಡುಗೆಗಳು ರಾಜ್ಯದುಗ್ಗಲಕ್ಕೂ ಸಿಗುತ್ತವೆ.
ಈ ನವ ಇತಿಹಾಸಕಾರರ ಹಾವಳಿ‌ ನನ್ನ ತಂದೆ, ತಾತ ಮುತ್ತಾತ ಹೇಳಿದ್ದೇ ಸುಳ್ಳು ಎನ್ನಲು ಹೊರಟಿವೆ. ಇತಿಹಾಸ ಬರೆಯುವವ ಎಲ್ಲ ಕಾಲಕ್ಕೂ ಎಡ - ಬಲ ಪೆನ್ನು ಕನ್ನಡಕದವನೇ ಆಗಿರುತ್ತಾನೆ. ಜನಪದ ಹಾಗೆ ಆಗಲಾರದು. ನಾನು ಮಂಡ್ಯದಲ್ಲೇ ಹುಟ್ಟಿ ಬೆಳೆದವನು. ನಾವು ಬೆಳೆಯುವ ಕಾಲಕ್ಕೆ ಮೂರು ಫೋಟೋಗಳು ನಮ್ಮೂರ ಮನೆಗಳಲ್ಲಿ ಕಾಯಂ ಆಗಿರುತಿತ್ತು. ಮೈಸೂರ ಒಡೆಯರ್, ಸರ್. ಎಂ. ವಿಶ್ವೇಶ್ವರಯ್ಯ ಹಾಗೂ ಡಾ. ರಾಜಕುಮಾರ್. ಸರ್.ಎಂ.ವಿ ಅವರನ್ನು ಮಂಡ್ಯದ ಅನ್ನದಾತ ಎಂದೇ ಕರೆದೆವು. ಮಂಡ್ಯದ ಹಳ್ಳಿಹಳ್ಳಿಗಳಲ್ಲಿ ಅವರ ಪುತ್ಥಳಿ, ಪ್ರತಿಮೆಗಳಿವೆ. ಒಕ್ಕಲಿಗರೇ ತುಂಬಿರುವ ಮಂಡ್ಯದಲ್ಲಿ ಬ್ರಾಹ್ಮಣರಾದ ಸರ್ ಎಂವಿ ಆರಾಧನೆಗೆ ಯಾರೂ ಒತ್ತಡ ಹೇರಿದ್ದು ಗೊತ್ತಿಲ್ಲ.

ಆದರೆ, ಒಂದು ದಶಕದಿಂದ ಈಚೆಗೆ ನವ ಇತಿಹಾಸಕಾರರು ಚಿಕ್ಕ ಅವಕಾಶವನ್ನು ಬಿಡದೆ ಸರ್ ಎಂವಿ ಅವರನ್ನು ವಿಲನ್ ರಂತೆ ಚಿತ್ರೀಕರಿಸುವ ಕೆಲಸ ನಡೆಸುತ್ತಿದ್ದಾರೆ. ಮೀಸಲಾತಿ ವಿರೋಧಿಸಿದರು ಅನ್ನೋ ಅಭಿಪ್ರಾಯ ಬೇಧಕ್ಕೆ ಸರ್ ಎಂವಿ ಅವರ ಒಳ್ಳೆ ಕೆಲಸಗಳನ್ನು ಅವರವು ಅಲ್ಲವೇ ಅಲ್ಲ ಎಂದು ಸಾಕ್ಷಿ ಸೃಷ್ಟಿಸುವ ಕೆಲಸ ನಡೆಯುತ್ತಿದೆ. ಈ ನವ ಇತಿಹಾಸಕಾರರು ಯಾರೂ ಆ ಕಾಲಮಾನದಲ್ಲಿ ಬದುಕಿ, ಬಾಳಿದವರು ಅಲ್ಲ. ಪುಸ್ತಕದ ಸಾಲುಗಳ ಅರ್ಥವನ್ನ ಅರ್ಥೈಸಿ ಹೊಸ ಇತಿಹಾಸದ ಪಾಠ ಬರೆಯತೊಡಗಿದ್ದಾರೆ. ನಮ್ಮ ಜನಪದ, ನಮ್ಮ ತಾತ ಹೇಳಿಕೊಟ್ಟಿದ್ದು ಸುಳ್ಳು ಎನ್ನುತ್ತಿದ್ದಾರೆ. ಹಾಗಾದರೆ ನಮ್ಮ ತಾತನ ಅಪ್ಪಂದಿರ ಕಾಲದಲ್ಲಿ ಕನ್ನಂಬಾಡಿ ಕಟ್ಟೆ ಕಟ್ಟಲು ಮನೆಗೊಬ್ಬರು ಹೋಗಿ ಬಂದು ಸರ್ ಎಂವಿ ಬಗ್ಗೆ ತಮ್ಮ‌ಮಕ್ಕಳಿಗೆ ಹೇಳಿದ್ದು. ಅದು ಹಾಗೆ ತಲೆ ಮಾರಿಂದ ತಲೆಮಾರಿಗೆ ಹೇಳಿದ್ದೆಲ್ಲಾ ಸುಳ್ಳೇ?

ನನ್ನ ಪ್ರಕಾರ ಇತಿಹಾಸಕಾರ ಎಡ - ಬಲ ಕನ್ನಡಕ ಹಾಕಬಲ್ಲ, ಪೆನ್ನು ಹಿಡಿಯಬಲ್ಲ, ಜನಪದಕ್ಕೆ ಮುಲಾಜಿರುವುದಿಲ್ಲ. ಇತಿಹಾಸಕಾರನಷ್ಟು ಸುಳ್ಳು ಹೇಳಲಾರದು.
ಹಾಗೆಯೇ, ಟಿಪ್ಪು ಕೂಡ ನನ್ನ ಜಿಲ್ಲೆಯವನೇ, ಅವನನ್ನ ಹೊಗಳಿ ಹಾಡುವ ಲಾವಣಿ, ಪದಗಳನ್ನು ಕೇಳುತ್ತಲೇ ಬೆಳೆದವರು ನಾವು. ಎಂದೂ ಟಿಪ್ಪು ವಿರೋಧಿ ಪದಗಳೇ ನಮ್ಮ ಕಿವಿಗೆ ತಾಕಿರಲಿಲ್ಲ. ಆದರೆ ನವ ಇತಿಹಾಸಕಾರರು ಆತನನ್ನು ಹೈದಾರಾಬಾದಿನ ನಿಜಾಮರು, ರಜಾಕಾರರಂತೆ ಚಿತ್ರಿಸುತ್ತಿದ್ದಾರೆ. ಹೈದರಾಬಾದಿನ ನಿಜಾಮರು, ರಜಾಕಾರರ ಬಗ್ಗೆ ಜನಪದ ಹೇಳುವುದನ್ನೇ ಇತಿಹಾಸವು ಹೇಳಿದೆ. ಅಲ್ಲಿ ಕನ್ನಡಕ - ಪೆನ್ನಿನ ಸಮಸ್ಯೆ ಯಾಕೆ ಬಂದಿಲ್ಲವೋ ಗೊತ್ತಿಲ್ಲ. ನಿಜಾಮರನ್ನು ಹಾಡಿ ಹೊಗಳುವ‌ ನವ ಇತಿಹಾಸ ಸೃಷ್ಟಿಯಾಗಿ ಜಯಂತಿ ಶುರುವಾದರು ಅಚ್ಚರಿ ಇಲ್ಲ. ನಿಜಾಮರು, ರಜಾಕಾರರ ಹಾವಳಿಯನ್ನು ಕಂಡುಂಡವರೆಲ್ಲಾ ಸತ್ತು ಹೋಗಲಿ ಎಂದು ನವ ಇತಿಹಾಸಕಾರರು ಕಾಯುತ್ತಿರಬಹುದು.
ಕಾರಣ, ಈ ನವ ಇತಿಹಾಸಕಾರರು ಯಾರೂ ಆ ಕಾಲಮಾನದಲ್ಲಿ ಬದುಕಿದವರಲ್ಲ. ತಮಗೆ ಒಪ್ಪಿಗೆಯಾಗುವ ಪುಸ್ತಕ, ಪಳೆಯುಳಿಕೆ ಹಿಡಿದು ಕತೆ ಕಟ್ಟುವವರೆ.

ಒಂದು ಉದಾಹರಣೆ:- ಕಾರ್ಗಿಲ್ ಯುದ್ದ ಗೆದ್ದಿದ್ದು ಭಾರತ ಎಂಬುದು ವಿಶ್ವಕ್ಕೆ ಗೊತ್ತಿದೆ. ಆದರೆ, ಕಾರ್ಗಿಲ್ ಯುದ್ದದ ದಳಪತಿಯಾಗಿದ್ದ ಪರ್ವೇಜ್ ಮುಶ್ರಫ್ ತಮ್ಮ ಆತ್ಮಕತೆ ಇನ್ ದ ಲೈನ್ ಆಫ್ ಫೈರ್ ಪುಸ್ತಕದಲ್ಲಿ‌ ಕಾರ್ಗಿಲ್ ಯುದ್ದ ಗೆದ್ದಿದ್ದು ಪಾಕಿಸ್ತಾನ ಅಂತ ಬರೆದುಕೊಳ್ತಾರೆ. ಬೇರೆ ಬೇರೆ ಟಿವಿ ಸಂದರ್ಶನಗಳಲ್ಲೂ ಅದನ್ನೇ ಪ್ರತಿಪಾದಿಸಿದ್ದಾರೆ. ಪಾಕಿಸ್ತಾನದ ಐದನೇ ತರಗತಿಗೆ ಇದು ಒಂದು ಕಾಲಕ್ಕೆ ಪಠ್ಯವೂ ಆಗಿತ್ತು. ಇನ್ನು ಮುನ್ನೂರು ವರ್ಷ ಆದಮೇಲೆ ಕಾರ್ಗಿಲ್ ಯುದ್ದವೂ ಆ ಕಾಲಕ್ಕೆ ಉದಯವಾಗುವ ನವ ಇತಿಹಾಸಕಾರರಿಂದ ವಿವಾದ ಆಗೋದ್ರಲ್ಲಿ ಡೌಟೇ ಇಲ್ಲ.
ನನ್ನ ಪ್ರಕಾರ, ಇತಿಹಾಸದಲ್ಲಿ ನಮಗೆ ಏನು ಬೇಕೋ ಅದು ಸಿಗುತ್ತದೆ. ಕುರುಡನೊಬ್ಬ ಆನೆ ಮುಟ್ಟಿ ವರ್ಣಿಸಿದಂತೆ ಎಂದರೂ ತಪ್ಪಿಲ್ಲ ಏನಂತೀರಿ...? - Avinash Hs

ಭಾನುವಾರ, ಡಿಸೆಂಬರ್ 11, 2016

ಜ್ವರವಾಗಿತ್ತು ಕಾರಣ

ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಬಹಳ ಕ್ಷೀಣಿತರಾಗಿದ್ದರು. ಜ್ವರವು ಅವರ ಮೈಯನ್ನು ಬಲವಾಗಿ ಆವರಿಸಿಕೊಂಡಿತ್ತು. ಯಾವ ಪತ್ನಿಯ ಮನೆಯಲ್ಲಾಗಿದೆ ಇವತ್ತು ನನ್ನ ವಾಸವೆಂದು ತಿಳಿಯದ ಅವಸ್ಥೆ.

*"ನಾಳೆ ನಾನು ಎಲ್ಲಿಯಾಗಿರುವೆನು...? ನಾಳೆ ನಾನು ಎಲ್ಲಿಯಾಗಿದೆ ವಾಸಿಸಬೇಕಾದುದು..?* ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಪ್ರಶ್ನೆಯನ್ನು ಅರ್ಥಮಾಡಿಕೊಂಡ ಪತ್ನಿಯರು ಅವರನ್ನು ಆಯೀಶಾ(ರ) ರವರ ಮನೆಯಲ್ಲಿ ವಾಸಿಸಲು ಅನುಮತಿಯನ್ನು ನೀಡಿದರು. ಎರಡು ಸ್ವಹಾಬಿಗಳ ಹೆಗಲಲ್ಲಿ ಕೈ ಹಾಕಿಕೊಂಡು ಕಾಲುಗಳನ್ನು ಎಳೆಯುತ್ತಾ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಆಯೀಶಾ(ರ)ರವರ ಮನೆಯನ್ನು ತಲುಪಿದರು.

ಇದು.... ಈ ದಿನಗಳಲ್ಲಿ, ಅಥವಾ ರಬಿವುಲ್ ಅವ್ವಲ್ ಪ್ರಥಮ ವಾರದಲ್ಲಿ ಅವರು ಕಠಿಣವಾದ ಜ್ವರದಿಂದ ಮಲಗಿದ್ದರು. ಪ್ರೀಯ ಪತ್ನಿ ಆಯೀಶಾ(ರ) ಕುರ್'ಆನ್ ಸೂರಃಗಳನ್ನು ಓದಿ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಕೈಯಲ್ಲಿ ಊದಿ ಕೊಡುತ್ತಾ ಶರೀರವನ್ನು ತಡವುತ್ತಿದ್ದರು.

ಜ್ವರವೂ, ನೋವು ಕಠಿಣವಾಗತೊಡಗಿತು. ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಬೋಧರಹಿತರಾಗುತ್ತಿದ್ದರು. ನಡುನಡುವೆ ನೀರು ತಂದು ಶರೀರವನ್ನು ನೆನೆಸಲು ಅವರು ಹೇಳುತ್ತಿದ್ದರು. ಸ್ವಲ್ಪ ಸಮನ ಉಂಟಾದಾಗ ಮೆಲ್ಲಮೆಲ್ಲನೆ ನಡೆಯುತ್ತಾ ಅವರು ಮಸ್ಜೀದುನ್ ನೆಬಿಯ ಮಿಂಬರನ್ನು ಹತ್ತಿ ಜನರನ್ನುದ್ದೇಶಿಸಿ ಮಾತನಾಡತೊಡಗಿದರು.ಅದಾಗಿತ್ತು ಅಂತಿಮ ಪ್ರವಚನ.

ಅಲ್ಲಾಹನನ್ನು ಸ್ತುತ್ತಿಸುತ್ತಾ ಅವರು ಹೇಳಿದರು: *ಜನರೇ ಇಲ್ಲಿ ನನ್ನ ಹತ್ತಿರ ಬನ್ನಿರಿ*

ಅವರೆಲ್ಲರೂ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಸಮೀಪಕ್ಕೆ ಬಂದರು. ಅವರಲ್ಲಿ ಹೇಳತೊಡಗಿದರು. *ಹಿಸ್ರಾಯಿಲರನ್ನೂ, ಕ್ರೈಸ್ತರನ್ನೂ ಅಲ್ಲಾಹನು ಶಪಿಸಲಿ..! ಅವರುಗಳು ಅವರ ಬಳಿ ಬಂದ ಪ್ರವಾದಿಗಳ ಸಮಾಧಿಗಳನ್ನು ಆರಾಧನಾಲಯ ಮಾಡಿದರು. ನನ್ನ ಕಬರನ್ನು ನೀವು ಆರಾಧನಾಲಯವನ್ನಾಗಿ ಮಾಡದಿರಿ..*

*ಆ ನಂತರ ಅವರು ನಾನು ಯಾರದ್ದಾದರೂ ಬೆನ್ನಿಗೆ ಹೊಡೆದಿದ್ದರು ಅವರು ನನ್ನ ಬೆನ್ನಿಗೆ ಹೊಡೆಯಲಿ ನನ್ನ ಬೆನ್ನಿದೊ ಇಲ್ಲಿದೆ..! ಅವರು ನನ್ನಲ್ಲಿ ಪ್ರತಿಕಾರವನ್ನು ಮಾಡಲಿ. ನಾನ್ಯಾರದ್ದಾದರೂ ಅಭಿಮಾನಕ್ಕೆ ದಕ್ಕೆಯನ್ನುಂಟು ಮಾಡಿದ್ದರೆ ಅವರು ನನ್ನ ಅಭಿಮಾನಕ್ಕೆ ದಕ್ಕೆಯನ್ನುಂಟು ಮಾಡಬಹುದು. ನನ್ನ ಅಭಿಮಾನವಿದೋ ನಿಮ್ಮ ಮುಂದಿದೆ.. ನನ್ನಲ್ಲಿ ಅವರಿಗೆ ಪ್ರತಿಕಾರವನ್ನು ಮಾಡಬಹುದು..*

ಳುಹರ್ ನಮಾಜ್ ಕಳೆದ ನಂತರ ಅವರು ಪುನಃ ಮೇಲಿನ ಮಾತನ್ನು ಪುನರಾವರ್ತಿಸಿದರು. ಸ್ವಹಾಬಿಗಳಲ್ಲಿ ಒಬ್ಬರು ಎದ್ದು ನಿಂತು ಹೇಳಿದರು: *"ನನಗೆ ಮೂರು ದಿನಾರ್ ನೀವು ಕೊಡಲಿಕ್ಕಿದೆ"*

ಅದನ್ನು ಮರಳಿಸಲು ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ವ್ಯವಸ್ಥೆ ಮಾಡಿದರು. ಅನ್ಸಾರಿ ಸ್ವಹಾಬಿಗಳ ಕುರಿತು ಸ್ವಲ್ಪ ಮಾತನಾಡಿದ ನಂತರ ಅವರು ಮುಂದುವರಿಸಿದರು;

"ಒಬ್ಬ ದಾಸನಿಗೆ ಇಹಲೋಕ ಸೌಖ್ಯದಲ್ಲಿ ಅವನು ಇಚ್ಚಿಸುವುದ್ಯಾವುದೂ ಅವನಿಗೆ ಆಯ್ಕೆ ಮಾಡಿಕೊಳ್ಳುವ ಅನುಮತಿಯನ್ನು ನೀಡಲಾಗಿದೆ. ಅವನು ಅಲ್ಲಾಹನನ್ನು ಆಯ್ಕೆ ಮಾಡಿಕೊಂಡಿದ್ದಾನೆ."
*ಅಬೂಬಕ್ಕರ್ (ರ.ಅ) ರವರಿಗೆ ಮಾತ್ರವಾಗಿತ್ತು ಆ ಮಾತಿನ ಮರ್ಮವು ಅರ್ಥವಾದದ್ದು. ಲೋಕನಾಯಕ ಸಲ್ಲಲ್ಲಾಹು ಅಲೈವಸಲ್ಲಮರು ಈ ಲೋಕದಿಂದ ವಿರಮಿಸಲಿದ್ದಾರೆಂದು ಅಬೂಬಕ್ಕರ್ (ರ) ರವರು ಅಳತೋಡಗಿದರು.

ನಂತರ ಗುರುವಾರ ಮಗ್ರೀಬ್ ನಮಾಜಿಗೆ ಜ್ಬರ ಬರುತ್ತಿದ್ದರೂ ಅವರು ಮಸೀದಿಗೆ ಬಂದರು. ನಮಾಜಿಗೆ ನೇತೃತ್ವವನ್ನು ನೀಡಿದರು. ಇಶಾ ಸಮಯವಾದಾಗ ಜ್ವರವು ಅಧಿಕವಾಗತೊಡಗಿತು. ಜನರು ನಮಾಜ್ ಮಾಡದೆ ಪ್ರವಾದಿವರ್ಯರು ಬರುವುದನ್ನು ಕಾದು ಕುಳಿತರು. ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರಿಗೆ ಮೆಲೇಳಲಾಗುತ್ತಿಲ್ಲ..!!

ಸ್ವಲ್ಪ ನೀರು ತಂದು ಅದರಲ್ಲಿ ಸ್ನಾನ ಮಾಡಿ ನೋಡಿದರು. ಮೆಲೇಳಲು ಪ್ರಯತ್ನಿಸಿದಾಗ ಪ್ರವಾದಿವರ್ಯರು ಬೋಧರಹಿತರಾದರು. ಅಲ್ಪ ಸಮಯದ ನಂತರ ಬೋಧವು ಮರಳಿ ಬಂದಾಗ ಪ್ರವಾದಿವರ್ಯರು ಅನ್ವೇಷಿಸಿದರು; "ಜನರು ನಮಾಜ್ ಮಾಡಿದರಾ..?"

*"ಇಲ್ಲ ಅವರು ನಿಮ್ಮನ್ನು ಕಾಯುತ್ತಿದ್ದಾರೆ."* ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಪುನಃ ಎದ್ದೇಳಲು ಪ್ರಯತ್ನಿಸಿದರು. ಪುನಃ ಬೋಧರಹಿತರಾದರು.

ಇದೇ ರೀತಿ ಮೂರು ಸಲ ಸಂಭವಿಸಿತು. ಮೂರು ಬಾರಿಯು ಬೋದವು ಮರಳಿ ಬಂದಾಗ ಅವರು ಕೇಳಿದ್ದು ಜನರು ನಮಾಜ್ ಮಾಡಿದರಾ.? ಅಂತಿಮವಾಗಿ ಇನ್ನು ನನ್ನಿಂದ ಸಾಧ್ಯವಿಲ್ಲವೆಂದು ತಿಳಿದಾಗ ಅವರು ಹೇಳಿದರು;

*"ಅಬೂಬಕ್ಕರರಲ್ಲಿ ಜನರಿಗೆ ಇಮಾಮ್ ಆಗಿ ನಮಾಜ್ ಮಾಡಲು ಹೇಳಿರಿ.."*

ಆಯೀಶಾ(ರ)ರವರು ಅದನ್ನು ತಡೆಯಲು ಶ್ರಮಿಸಿದರು. ನನ್ನ ತಂದೆ ಅಬೂಬಕ್ಕರ್ ಮೃದು ಹೃದಯದವರಾಗಿದ್ದಾರೆ. ಕುರ್'ಆನ್ ಓದುವಾಗ ಅಳು ಬರಬಹುದು. ಅದುದರಿಂದ ಇನ್ಯಾರಾದರೂ ಇಮಾಮರಾಗಲಿ.....

ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಸಮ್ಮತಿಸಲಿಲ್ಲ. ಆಯೀಶಾ(ರ)ರೊಂದಿಗೆ ತುಸು ಕೊಪದಲ್ಲಿಯೆ ಮಾತನಾಡಿ ಅಬೂಬಕ್ಕರ್ ಇಮಾಮ್ ಆಗಿ ನಿಲ್ಲಲು ಪ್ರವಾದಿವರ್ಯರು ಪುನರಾವರ್ತಿಸುತ್ತಿದ್ದರು.

ಹೀಗೆ ಮೊದಲನೇ ಬಾರಿ ಮಸ್ಜೀದುನ್ ನೆಬಿಯಲ್ಲಿ ನೆಬಿ ಸಲ್ಲಲ್ಲಾಹು ಅಲೈವಸಲ್ಲಮರ ಉಪಸ್ಥಿತಿಯಲ್ಲಿ, ಬೇರೊಬ್ಬರ ಅಡಿಯಲ್ಲಿ ಜಮಾತ್ ನಮಾಜ್ ನಡೆಯಿತು..!!

ಒಂದೆರಡು ದಿನಗಳ ನಂತರ ಸ್ವಲ್ಪ ಚೇತರಿಕೆಯು ಕಂಡಾಗ ಇಬ್ಬರ ಹೆಗಲಿಗೆ ಕೈ ಹಾಕಿಕೊಂಡು ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಮಸೀದಿಯನ್ನು ತಲುಪಿದರು. ಅಬೂಬಕ್ಕರ್(ರ.ಅ)ರವರ ನೇತೃತ್ವದಲ್ಲಿ ಅಲ್ಲಿ ಳುಹರ್ ನಮಾಜ್ ನಡೆಯುತ್ತಿತ್ತು. ಪ್ರವಾದಿವರ್ಯರನ್ನು ಕಂಡ ಅಬೂಬಕ್ಕರ್(ರ.ಅ) ಹಿಂದೆ ಸರಿಯಲು ಅಣಿಯಾದರು.

ಕೈ ಸನ್ನೆಯಿಂದ ಅಲ್ಲಿಯೇ ನಿಲ್ಲಲು ಅವರಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಸೂಚಿಸಿದರು.

*"ನನ್ನನ್ನು ಅಬೂಬಕ್ಕರ್ ರವರ ಸಮೀಪ ಕುಳ್ಳಿರಿಸಿ."* ನಂತರ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ತಕ್ಬೀರ್ ದ್ವನಿ ಕೇಳಿದಾಗ ಅಬೂಬಕ್ಕರ್(ರ.ಅ) ರವರು ಉಚ್ಚಸ್ವರದಲ್ಲಿ ಹೇಳುತ್ತಾ ಅವರು ನಮಾಜನ್ನು ನಿರ್ವಹಿಸಿದರು.

ಮರುದಿನ ಆರೋಗ್ಯವು ಮತ್ತೆ ಹದಗೆಟ್ಟಿತ್ತು. ಪ್ರವಾದಿವರ್ಯರು ತಮ್ಮ ಕೈಯಲ್ಲಿ ಬಾಕಿ ಉಳಿದಿದ್ದ *ಆರು ದಿನಾರ್ ದಾನ ಮಾಡಿದರು* ಆಯುಧಗಳನ್ನು ಮುಸ್ಲೀಮರಿಗೆ ನೀಡಿದರು. ಯುದ್ದವಸ್ತ್ರವು ಒಬ್ಬ ಜೂದ ಕೈಯಲ್ಲಿ ಗಿರವಿಯಲ್ಲಿತ್ತು. ಅವತ್ತು ರಾತ್ರಿ ಬೆಳಕನ್ನು ಹಚ್ಚಲು ಬೇಕಾಗಿರುವ ಸ್ವಲ್ಪ ಎಣ್ಣೆಯನ್ನು ಆಯೀಶಾ(ರ.ಅ) ಪಕ್ಕದ ಮನೆಯಿಂದ ಸಾಲ ಪಡೆದರು.

*ರಬಿವುಲ್ ಅವ್ವಲ್ ಹನ್ನೆರಡು ಸೋಮವಾರ.... ಪ್ರಭಾತದ ಸಮಯ..* ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಆಯೀಶಾ(ರ.ಅ) ರವರ ಮನೆಯ ಪರದೆಯನ್ನು ಸರಿಸಿ ಮಸೀದಿಯತ್ತ ನೋಡಿದರು. ಜನರು ಅಬೂಬಕ್ಕರ್(ರ.ಅ)ರವರ ನೇತೃತ್ವದಲ್ಲಿ ನಮಾಜಿನಲ್ಲಿದ್ದರು.

ಬಾಗಿಲಿನ ಬಳಿ ಪ್ರವಾದಿವರ್ಯರ ಮುಖ ಕಂಡ ಅವೇಶದಲ್ಲಿ ಜನರು ನಮಾಜಿನಿಂದ ತಮ್ಮ ಶ್ರದ್ದೆಯನ್ನು ಕಳೆಯಲಾರಂಬಿಸಿದರು. ತಕ್ಬೀರ್ ಮೊಳಗಿಸಿ ಅವರು ಅಬೂಬಕ್ಕರ್ (ರ.ಅ)ರವರಿಗೆ ವಿವರನ್ನು ನೀಡಲು ಪ್ರಯತ್ನಿಸಿದರು. ಅಬೂಬಕ್ಕರ್ (ರ.ಅ) ಹಿಂದೆ ಸರಿಯಲು ನೋಡಿದರು. ನಮಾಜನ್ನು ಮುಂದುವರಿಸಲು ಕೈಸನ್ನೆ ಮಾಡುತ್ತಾ ಮುಗುಳುನಗುತ್ತಾ ಪ್ರವಾದಿವರ್ಯರ ಆ ಚಂದ್ರ ಮುಖವು ಪರದೆಗಳೆಡೆಯಲ್ಲಿ ಮರೆಯಾಯಿತು.

ವೇದನೆ,
ಅದು ಅತೀಶಕ್ತವಾಗತೊಡಗಿತು. ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ತಮ್ಮ ಮರಣದ ಸೂಚನೆಯನ್ನು ಪ್ರಕಟಿಸತೊಡಗಿದರು. ನೋವನುಭವಿಸುತ್ತಾ ನಡುನಡುವೆ ಭೋದರಹಿತರಾಗುತ್ತಾ ಕಷ್ಟಪಡುತ್ತಿರುವ ತಂದೆಯವರನ್ನು ಕಂಡ ಮಗಳು ಪಾತಿಮಾ(ರ.ಅ) *"ಹೊ..!! ನನ್ನ ತಂದೆಯವರು ಅನುಭವಿಸುತ್ತಿರುವಾ ಕಷ್ಟಗಳೇ!"*

ಅದು ಕೇಳಿದ ಪ್ರವಾದಿವರ್ಯರು ಪ್ರತಿಕರಿಸಿದರು; *"ನಿನ್ನ ತಂದೆಗೆ ಇವತ್ತಿನಿಂದ ಯಾವುದೇ ಕಷ್ಟಗಳನ್ನು ಅನುಭವಿಸಬೇಕಾಗಿ ಬರಲ್ಲ ಮಗಳೇ."*

ಮಗಳು ಪಾತಿಮಾರನ್ನು ಸಮೀಪ ಕುಳ್ಳಿರಿಸಿ ಪ್ರವಾದಿವರ್ಯರು ಒಂದು ಗುಟ್ಟು ಹೇಳಿದರು. ಅದನ್ನು ಕೇಳಿದಾಗ ಪಾತಿಮಾ(ರ.ಅ)ರವರು ಅಳತೊಡಗಿದರು. ಪುನಃ ಮರು ಕಿವಿಯಲ್ಲಿ ಇನ್ನೋಂದು ಗುಟ್ಟನ್ನು ಹೇಳಿದರು. ಅದನ್ನು ಕೇಳಿದ ಮಗಳು ನಗಲಾರಂಬಿಸಿದರು.

ಮೊಮ್ಮಕ್ಕಳಾದ ಹಸನ್, ಹುಸೈನ್ ರನ್ನು ಕರೆಯುತ್ತಾ ಚುಂಬನವನ್ನರ್ಪಿಸಿದರು. ನಲ್ಮೆಯನು ಉಪದೇಶಿಸಿದರು. ಪತ್ನಿಯರಲ್ಲಿ ಒಳ್ಳೆಯ ಕಾರ್ಯಗಳನ್ನು ಉಪದೇಶಿಸಿದರು.

ಅತಿಕಠಿಣವಾದ ನೋವಿನಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ತಮ್ಮ ಪತ್ನಿಯಲ್ಲಿ ಹೇಳಿದರು: *"ಆಯೀಶಾ.... ಅವತ್ತು ಖೈಬರಿನಲ್ಲಿ ನಾನು ಭಕ್ಷಿಸಿದ ವಿಷದ ರುಚಿಯು ಇವತ್ತು ನನಗೆ ಅನುಭವವಾಗುತ್ತಿದೆ."*

ಎಚ್ಚರ ಬರುವಾಗಲೆಲ್ಲಾ ಮುಖದಿಂದ ವಸ್ತ್ರವನ್ನು ಸರಿಸುತ್ತಾ ಅವರು ಹೇಳುತ್ತಿದ್ದರು: *ಜೂದರ ಮತ್ತು ಕ್ರೈಸ್ತರ ಮೇಲೆ ಅಲ್ಲಾಹನ ಶಾಪವಿರಲಿ..!! ಅವರು ಅವರ ಪ್ರವಾದಿಗಳ ಸಮಾಧಿಗಳನ್ನು ಆರಾಧನಾ ಕೇಂದ್ರಗಳನ್ನಾಗಿ ಮಾಡಿದವರಾಗಿದ್ದಾರೆ."*

*ತನ್ನ ನಂತರವಿರುವವರಿಗೆ ಶಕ್ತವಾದ ತಾಕೀತಾಗಿತ್ತು ಪುನರಾವರ್ತಿಸುತ್ತಿದ್ದ ಈ ಮಾತುಗಳು..*

ಅದರೋಂದಿಗೆ ಅವರು ನಡುನಡುವೆ ಉಪದೇಶಿಸುತ್ತಿದ್ದರು;

*ನಮಾಝ್..!! ನಮಾಝ್..!!*
*ನೀವುಗಳು ನಿಮ್ಮ ಅಧೀನದಲ್ಲಿರುವವರು..!!*

ಜನರು
ಪ್ರಾಧನ್ಯವನ್ನು ಮರೆತು ಬಿಡಬಹುದಾದ ಎರಡು ಸಂಭವಗಳು ಕೂಡ..!!

ನೋವಿನಿಂದ ತೀರಾ ಆಸಕ್ತರಾದ ಪ್ರವಾದಿ ಸಲ್ಲಲ್ಲಾಹು ಅಲೈವಸಮ್ಮರನ್ನು ಆಯೀಶಾ(ರ.ಅ) ತಮ್ಮ ಮಡಿಲಲ್ಲಿ ಮಲಗಿಸಿದರು. ಪ್ರವಾದಿವರ್ಯರನ್ನು ಕಾಣಲು ಬಂದ ಸ್ವಹಾಬಿಯೊಬ್ಬರ ಕೈಯಲ್ಲಿದ್ದ ಮಿಸ್ವಾಕಿನತ್ತ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಆಶೆಯಿಂದ ನೋಡುತ್ತಿರುವುದನ್ನು ಕಂಡ ಆಯೀಶಾ(ರ.ಅ)ಕೇಳಿದರು.

*"ನಾನದನ್ನು ನಿಮಗೆ ಕೇಳಿ ಕೊಡಲ..??"*

ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಹೌದೆಂಬಂತೆ ಸನ್ನೆ ಮಾಡಿದರು. ತುಸುಗಟ್ಟಿಯಾಗಿದ್ದ ಮಿಸ್ವಾಕಿನ ತುದಿಯನ್ನು ತಮ್ಮ ಹಲ್ಲಿನಿಂದ ಕಚ್ಚಿ ಮೆದುವಾಗುವಂತೆ ಮಾಡಿದ ಆಯೀಶಾ(ರ.ಅ)ರವರು ಅದರಿಂದ ಪ್ರವಾದಿವರ್ಯರ ದಂತ ಶುದ್ದಿಯನ್ನು ಮಾಡಿದರು. ನಡುನಡುವೆ ಹತ್ತಿರವಿದ್ದ ನೀರಿನ ಪಾತ್ರೆಯಲ್ಲಿ ಕೈ ಹಾಕಿ ಮುಖವನ್ನು ಸವರಿಕೊಡುತ್ತಿದ್ದರು.

ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ನೋವಿನೊಂದಿಗೆ ಹೀಗೆ ಹೇಳುತ್ತಲ್ಲಿದ್ದರು;

*"ಲಾಹಿಲಾಹ ಇಲ್ಲಲ್ಲಾಹ..!! ಸತ್ಯವಾಗಿಯೂ ಮರಣದ ನೋವು ಅದು ಭಯಾನಕವಾಗಿದೆ..!!"*

ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ತಮ್ಮ ಬೆರಳನ್ನು ಆಕಾಶಕ್ಕೆ ಎತ್ತಿ ಕಣ್ಣುಗಳನ್ನು ಮೇಲೆತ್ತಿ ಏನೋ ಪುನಃ ಹೇಳುತ್ತಿದ್ದಾರೆ. ಆಯೀಶಾ(ರ.ಅ) ಆಲಿಸಲಾರಂಬಿಸಿದರು;

*"ನೀನು ಅನುಗ್ರಹಿಸಿದ ಪ್ರವಾದಿಗಳ, ಸತ್ಯವಂತರ, ರಕ್ತಸಾಕ್ಷಿಗಳ, ಸ್ವಾದಾತುಗಳ ಕೂಟದಲ್ಲಿ ನನ್ನನ್ನೂ ಸೇರಿಸು... ಅಲ್ಲಾಹನೇ, ನನಗೆ ನೀನು ಪಾಪವಿಮೋಚನೆಯನ್ನು ನೀಡಿ ನಿನ್ನ ಕಾರುಣ್ಯವನ್ನು ನನ್ನ ಮೇಲೆ ವರ್ಷಿಸುತ್ತಿರು.. ಉನ್ನತನಾದ ಗೆಳೆಯನಾಗಿ ನನ್ನನ್ನು ನೀನು ಸೇರ್ಪಡಿಸು.. ಅಲ್ಲಾಹನೇ ಉನ್ನತನಾದ ಗೆಳೆಯ..!!"*

*ಅಂತಿಮ ವಾಕ್ಯವನ್ನು ಅವರು ಮೂರು ಸಲ ಪುನರಾವರ್ತಿಸಿದರು. ಈ ಮಧ್ಯೆ ಮೇಲೆತ್ತಿದ್ದ ಅವರು ಕೈ ಕೆಳಜಾರಿತು.*

*"ಅತ್ತ್ಯುನ್ನತನಾದ ಗೆಳೆಯನಾಗಿ ಪ್ರಪಂಚದ ಅತ್ತ್ಯುನ್ನತ ಮನುಷ್ಯನು ವಿರಮಿಸಿದ ಸಮಯ..!!"*

*ಇನ್ನಾ ಲಿಲ್ಲಾಹಿ ವ ಇನ್ನಾ ಇಲಹೀ ರಾಜೀವೂನ್..!*

*ಇದು ಹಿಜ್ರಾಃ ಹನ್ನೋಂದನೇ ವರುಷ ರಬಿವುಲ್ ಅವ್ವಲ್ ಹನ್ನೆರಡು ಸೋಮವಾರ ಮಧ್ಯಾಹ್ನದ ಸಮಯವಾಗಿತ್ತು. ಅವತ್ತಿನ ದಿವಸ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರಿಗೆ ಅರುವತ್ತಮೂರು ವಯಸ್ಸು ಪ್ರಾಯವಾಗಿತ್ತು!!*

✍🏼 *ಹಸ್ನಾಮೋಳ್.ಕೆ.ಸಿ.ನಗರ.*