ಶನಿವಾರ, ಜುಲೈ 1, 2017

ವಿ.ಟಿ ಅಬ್ದುಲ್ಲಾ ಕೋಯ ತಂಙಲ್ ರವರ ಭಾಷಣದ ಸಾರಾಂಶ.

ಹಬ್ಬ ಆಚರಿಸಲು ಹೋಗುತ್ತಿದ್ದ ಜುನೈದ್ ಎಂಬ ಹುಡುಗನನ್ನು ಬೀದಿ ನಾಯಿಯಂತೆ ಹೊಡೆದು ಕೊಲ್ಲಲಾಯಿತು.
ನಮ್ಮ ದೇಶದಲ್ಲಿ ಮನುಷ್ಯನಿಗಿಂತ ಪಶುವನ್ನು ಮೃಗವನ್ನು ಹೆಚ್ಚು ಪ್ರೀತಿಸಲಾಗುತ್ತಿದೆ. ಅಂತಹವರ ಕೈಯಲ್ಲಿ ಅಧಿಕಾರ ಇದೆ. ಅಂತಹ ಹಲವು ಘಟನೆಗಳು ನಡೆಯತ್ತಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ನಡೆಯುತ್ತಿರುವ ಚರ್ಚೆಗಳು ಆರೋಗ್ಯಕರವಲ್ಲ ಎಂದು ಪರಿಶೀಲನೆ ನಡೆಸಿದಾಗ ಮನವರಿಕೆಯಾಯಿತು.
ಸಮಸ್ಯೆಗಳು ಇಂದು ಪ್ರಾರಂಭವಾದದ್ದೇ?
ಸಂಘಪರಿವಾರವನ್ನು ಸಮರ್ಥಿಸಲು ಆ ಭಾಷೆಯಲ್ಲಿ ಹೇಳುತ್ತಿಲ್ಲ.  ಬಹಳ ಶಾಂತಚಿತ್ತದೊಂದಿಗೆ ನೀವು ಚಿಂತಿಸಲು ಹೇಳುತ್ತಿದ್ದೇನೆ.
ಇದಕ್ಕಿಂತ ದೊಡ್ಡ ದೊಡ್ಡ ಕೋಮುಗಲಭೆಗಳು ಈ ಭಾರತದಲ್ಲಿ ನಡೆದಿಲ್ಲವೇ?  ಭಾರತ ಸ್ವಾತಂತ್ರ್ಯ ಗೊಂಡ ನಂತರ ಕೋಮುಗಲಭೆಯ ಒಂದು ಭೂಪಟವೇ ನಮ್ಮ ಕೈಯಲ್ಲಿದೆ.ಥಾಣೆ, ಪೂನ,ಮುರ್ಷಿದಾಬಾದ್,ಬಾಗಲ್ಪುರ, ಜಮ್ಶೆಡ್ಪುರದ ಕೋಮು ಗಲಭೆಯಲ್ಲಿ ಹೀಗೆ ದೊಡ್ಡ ದೊಡ್ಡ ನರಮೇಧಗಳು ನಡೆದಿವೆ‌. ಒಂದು ಪ್ರದೇಶವನ್ನೇ ಸುಟ್ಟ ಭಸ್ಮಗೊಳಿಸಿ, ಜನರ ಕೊಲೆ ನಡೆಸಿದ ಕೋಮು ಗಲಭೆಯಗಳನ್ನು ನಾವು ಕಂಡಿಲ್ಲವೇ?
ಆಗೆಲ್ಲಾ ನಾವು ಬಹಳ ಸಮಾಧಾನದೊಂದಿಗೆ ನಾವು ಈದ್ ಆಚರಿಸಿದ್ದೇವೆ. ಯಾಕೆಂದರೆ ಅಂದು ಸೋಶಿಯಲ್ ಮಿಡಿಯಾ ಇರಲಿಲ್ಲ.
ಯುಕ್ತಿಯ ಮಹತ್ವವನ್ನು ನಾವು ಅರಿತಿಲ್ಲ. ಇಂತಹ ಘಟನೆಗಳನ್ನು ಎದುರಿಸುವುದು ನಾವು ಸಂಘ ಪರಿವಾರದ ಅಜೆಂಡಾಗಳಿಗೆ ಜಯ, ಯಶಸ್ಸು ನೀಡಿ ಅಲ್ಲ.
ಹಿಂದೂ ಮುಸ್ಲಿಂ ಪರಸ್ಪರ ಬೇರ್ಪಟ್ಟು ನಿಲ್ಲಬೇಕು ಎಂಬುದು ಅವರ ಉದ್ದೇಶ. ಈಗ ನಮ್ಮ ಜೀವನ ಹಿಂದೂ ಮುಸ್ಲಿಂ ಪರಸ್ಪರ ಬೇರ್ಪಟ್ಟು ಈಗ ಜೀವಿಸುತ್ತಿಲ್ಲ. ಕೋಮುವಾದಿಗಳು ಅಲ್ಪ ಪ್ರಮಾಣದಲ್ಲಿ ಇದ್ದಾರೆ. ಕೇವಲ ೩೩ ಶೇಕಡಾ ಮತ ಅವರಿಗೆ ಲಭಿಸಿದೆ. ಬಾಕಿ ಅವರಿಗೆ ವಿರುದ್ಧ ಮತಗಳು ಹರಿಹಂಚಾಗಿ ಹೋದ ಕಾರಣ ಅವರಿಗೆ ಶಕ್ತಿ ಲಭಿಸಿತು. ಅಂದರೆ  ಇತರರ ಒಡಕು ಅವರ ಶಕ್ತಿಯಾಗಿದೆ. ನಮ್ಮ ದೌರ್ಬಲ್ಯ ಅವರ ಶಕ್ತಿ ಎಂಬುದು ನಾವು ಅರಿಯಬೇಕು.
ಸೋಶಿಯಲ್ ಮಿಡಿಯಾದಲ್ಲಿ ಇಂತಹ ಅಂಶಗಳನ್ನು ನಾವು ಪಸರಿಸಿ ಭಯ ಉತ್ಪಾದಿಸಿ, ಇಂತಹ ಅಂಶಗಳನ್ನು ಹೆಚ್ಚು ಹೆಚ್ಚು ಪಸ್ತಾಪಿಸಿ, ಇಲ್ಲಿ ಮುಸ್ಲಿಮರು ಸುರಕ್ಷಿತರಾಗಬೇಕಾದರೆ ಮುಸ್ಲಿಮರು ಮುಸ್ಲಿಮರ ವಿಷಯಗಳನ್ನು ಮಾತ್ರ ನೋಡಿಕೊಳ್ಳಬೇಕು ಎಂಬ ಚಿಂತನೆ ನಾವು ಪಸರಿಸಿದರೆ, ಸಾಮುದಾಯಿಕವಾಗಿ ಹೀಗೆ ಮಾಡಿದರೆ ಹಿಂದೂ ಮುಸ್ಲಿಂ ಧ್ರುವೀಕರಣ ಎಂಬ ಸಂಘಪರಿವಾರದ ಅಜೆಂಡಾವನ್ನು ನಾವೇ ಕಾರ್ಯಗತಗೊಳಿಸುತ್ತಿದ್ದೇವೆ ಎಂಬುದು ಅದರ ಪರಿಣಾಮವಾಗಿದೆ. ಅದರಿಂದ ನಮಗೆ ಪ್ರಯೋಜನಕ್ಕಿಂತ ಅಪಾಯ ಹೆಚ್ಚು.  ಈ ದೇಶದ ಜಾತ್ಯತೀತ ಮನಸ್ಸಿನವರೂ ನಮಗೆ ವಿರೋಧಿಗಳಾದರೆ ನಂತರ ಅವಸ್ಥೆ ಏನಾಗಬಹುದು.
ನಮ್ಮ ಮುಂದೆ ಎರಡು ದೌತ್ಯಗಳಿವೆ.
1. ನಿಜವಾಗಿ ಮುಸ್ಲಿಮರನ್ನು ನೈಜ ಮುಸ್ಲಿಮರಾಗಿ ಮಾಡಬೇಕು. ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ  ನೀವು ನೋಡಬೇಕು. ಉತ್ತರ ಭಾರತದಲ್ಲಿ ಅವರು ಅಲ್ಲಾಹ್ ರಸೂಲರು ಹೇಳಿದಂತೆ ಜೀವನ ನಡೆಸುತ್ತಿದ್ದಾರೆಯೇ ಎಂದು ನೋಡಬೇಕು. ಆದ್ದರಿಂದ ಅವರನ್ನು ಈಮಾನ್ ಉಳ್ಳವರಾಗಿ ಪರಿವರ್ತನೆ ಮಾಡಬೇಕು. ಅದು ಅಲ್ಲಾಹನ ವಾಗ್ದಾನ ಆಗಿದೆ. ಗೌರವದ ವಾಗ್ದಾನ ಅದಾಗಿದೆ.
ಪ್ರವಾದಿಗಳು ಇಸ್ಲಾಮೀ ಸಂದೇಶದೊಂದಿಗೆ ಮುಂದೆ ಬಂದಾಗ ಶತ್ರುಗಳು ಅವರನ್ನು ಮೂಲೋತ್ಪಾಟನೆ ಮಾಡಲು ಹೊರಟಾಗ ಅವರು ಹೇಳಿದ ಮಾತು " ನೀವು ಈ ಪ್ರದೇಶ ಬಿಟ್ಟು ಹೋಗಬೇಕು ಇಲ್ಲವೇ ನಮ್ಮ ಧರ್ಮಕ್ಕೆ ಮರಳಿ ಬರಬೇಕು " (ಈಗ ನಮ್ಮೊಂದಿಗೆ ಹೇಳಿದಂತೆ). ನಿಮಗೆ ಸಂಶಯ ಇದ್ದರೆ ಇಬ್ರಾಹೀಮ್ ಅ ರವರ ಚರಿತ್ರೆಯನ್ನು ಮನೆಯಲ್ಲಿರುವ ಕುರಾನ್ ತೆಗೆದು ಅರ್ಥ ಸಹಿತ ಓದಿ ನೋಡಿ. ಆಗ ಅಲ್ಲಾಹನ ವಾಗ್ದಾನ. ನಿಮ್ಮನ್ನು ನಾವು ರಕ್ಷಿಸುತ್ತೇವೆ ಎಂಬುದು ಅಲ್ಲಾಹನ ಆಫರ್.  ಈ ಗೌರವ ಅಲ್ಲಾಹನು ಹೇಳಿದಂತೆ ಜೀವಿಸುವವರಿಗೆ ಮಾತ್ರ.  ಆದ್ದರಿಂದ ನಮ್ಮ ಮೊದಲ ಅಜೆಂಡಾ ಈ ಸಮುದಾಯದ ಪ್ರಜ್ಞೆ ಆ ನಿಟ್ಟಿನಲ್ಲಿ ಬೆಳೆಸಬೇಕು.
ಅವರನ್ನು ಸೈದ್ದಾಂತಿಕ ಚಾರಿತ್ಯದ ಮೂಲಕ ಮಾದರಿಗೊಳಿಸಬೇಕು. ಆದ್ದರಿಂದ ಇದು ಸಾಮುದಾಯಿಕ ಭಾವನೆಗಳನ್ನು ಕೆರಳಿಸುವ ಸಮಯವಲ್ಲ ಎಂಬುದು ನಾವು ಚಿಂತಿಸಬೇಕು.
೨.ಎರಡನೇದು ಈಗಾಗಲೇ ಹೇಳಿದ್ದು, ನಾವು ಸೋಶಿಯಲ್ ಮೀಡಿಯಾಗಳ ಮೂಲಕ ಹಲವನ್ನು ಬಡಿಸಲು ಹೊರಟರೆ ಸಂಘಪರಿವಾರದ ಅಜೆಂಡಾ ಸುಲಭ ಆಗುತ್ತದೆ. ಇದರಿಂದ ಶತ್ರುಗಳ ಸಂಖ್ಯೆ ಹೆಚ್ಚಾಗುತ್ತದೆ.
ಪ್ರವಾದಿ ಸ ಮುಂದೆ ಮೂರು ರೀತಿಯ ಜನತೆ ಇತ್ತು.
ಒಂದು ಕಠಿಣ ವಿರೋಧಿಗಳು, ಎರಡನೇಯದು ಪ್ರವಾದಿಯೊಂದಿಗೆ ತಪ್ಪು ಕಲ್ಪನೆ ಇದ್ದವರು ಆದರೆ ಅಷ್ಟೊಂದು ಕಠಿಣರಲ್ಲ. ಮೂರನೇಯವರು ನಿಷ್ಪಕ್ಷಪಾತಿಗಳು.
ಪ್ರವಾದಿ ಸ ನಿಷ್ಪಕ್ಷಪಾತಿಗಳನ್ನು ಶತ್ರುಗಳ ಪಕ್ಷಕ್ಕೆ ಸೇರಿದಂತೆ ಜಾಗ್ರತೆವಹಿಸಿದರು. ತಪ್ಪು ಕಲ್ಪನೆ ಇರುವವರ ತಪ್ಪು ಕಲ್ಪನೆ ದೂರ ಮಾಡಿದರು. ವೈರಿಗಳನ್ನು ಬೇರೆಯೇ ರೀತಿಯಲ್ಲಿ ಯುಕ್ತಿಯಿಂದ ನೋಡಿಕೊಂಡರು. ಆದ್ದರಿಂದ ಶತ್ರುಗಳ ಸಂಖ್ಯೆ ಹೆಚ್ಚಿಸಿ ದ್ವೇಷದ ಮೂಲಕ ಅವರ ಅಜೆಂಡಾಗಳನ್ನು ನಾವು ಈಡೇರಿಸುತ್ತಿದ್ದೇವೆ ಎಂಬುದು ಪ್ರಜ್ಞಾಪೂರ್ವಕ ಅರಿಯಬೇಕು.
ಆದ್ದರಿಂದ ಸಾಮುದಾಯಿಕ ಭ್ರಾಂತಿಯಿಂದ ಭಾರತದಲ್ಲಿ ವಿಭಜನೆ ಈಗಾಗಲೇ ನಡೆದಿದೆ. ಅದಕ್ಕೆ ಮುಸ್ಲಿಮರು ಕಾರಣ ಅಲ್ಲದಿದ್ದರೂ ಅದರಲ್ಲಿ ಸಾಮುದಾಯಿಕ ಭ್ರಾಂತಿಯ ದೊಡ್ಡ ಪಾತ್ರ ಇದೆ. ಆದ್ದರಿಂದ ಆ ಮಾರ್ಗವನ್ನು ಅನುಸರಿಸದೆ ಮಾನವ ಪ್ರೇಮದ ವಕ್ತಾರರಾಗಬೇಕು. ಆದ್ದರಿಂದ ನಿಷ್ಪಕ್ಷಪಾತಿ ಜನ ಸಮೂಹವನ್ನು ನಾವು ಕಳೆಯಬಾರದು. ಅವರ ಸುಖದುಖಗಳಲ್ಲಿ ಪಾಲ್ಗೊಳ್ಳಬೇಕು. ಅವರೊಂದಿಗೆ ಮಾನವ ಸಂಬಂಧವನ್ನು ಬಲಪಡಿಸಬೇಕು. ನೀವು ಅವರ ಭರವಸೆಯಾದರೆ ಅವರೂ ನಿಮ್ಮ ಭರವಸೆಯಾಗುತ್ತಾರೆ‌ ಪರಸ್ಪರ ನಂಬಿಕೆ ವಿಶ್ವಾಸ ಬಲಗೊಳ್ಳುತ್ತದೆ. ಆದ್ದರಿಂದ ಆಗ ಯಾವ ಕೋಮುವಾದಿ ಅಜೆಂಡಾವು ವಿಜಯಗಳಿಸುವುದಿಲ್ಲ.
ಕೊನೆಗೆ ಅಲ್ಲಾಹನ ಮೇಲೆ ಭರವಸೆ ನಷ್ಟ ಹೊಂದ ಬಾರದು. ನಮ್ಮ ಭರವಸೆ ಕೋಮುವಾದದ ಭರವಸೆ ಆಗಬಾರದು. ಹೇಳುವುದನ್ನು ಪ್ರತಿಭಟಿಸುವುದನ್ನು ನಿಲ್ಲಿಸಬೇಕು ಎಂದಲ್ಲ. ಬದಲಾಗಿ ಅದರ ರೀತಿ ನೀತಿಗಳನ್ನು ಯುಕ್ತಿಯನ್ನು ನಾವು ಅರಿಯಬೇಕು.
ಅಲ್ಲಾಹ್ ನಮ್ಮ ರಕ್ಷಕ ಆಗಿರುವಾಗ ಭಯ ಪಡಬೇಕಾದ ಅವಶ್ಯಕತೆ ಇಲ್ಲ. ನಾವು ಅವನಿಗೆ ಸಹಾಯ ಮಾಡಿದರೆ ಅವನು ನಮಗೆ ಸಹಾಯ ಮಾಡುತ್ತಾನೆ. ನಮ್ಮ ಪಾದಗಳಿಗೆ ಸ್ಥೈರ್ಯ ನೀಡುತ್ತಾನೆ. ಆದ್ದರಿಂದ ಶತ್ರುಗಳ ಕುತಂತ್ರಕ್ಕೆ ಬಲಿಯಾಗಬಾರದು. ನಾವು ನಿರಾಶರೂ ಆಗಬಾರದು. ಸೂರ ನೂರ್ ನಲ್ಲಿ ಅಲ್ಲಾಹನು ವಾಗ್ದಾನ ನೀಡುತ್ತಾನೆ. ಇಂದಿನ ಪರಿಸ್ಥಿತಿ ಹೋಗಿ ಒಂದು ಉತ್ತಮ ನಾಳೆ ಬರಲಿದೆ. ಅಲ್ಲಿ ಹೊಸ ಸಮಾಜ ಉಂಟಾಗುತ್ತದೆ. ಅದು ಉತ್ತಮ ದಿನವಾಗಿರುತ್ತದೆ. ಆ ಧೈರ್ಯ ಸ್ಥೈರ್ಯ ವಿಶ್ವಾಸ ನಮಗಿರಬೇಕು. ನಾವು ವಾಮ ಮಾರ್ಗ ಅನುಸರಿಸಿದರೆ ಅಪಾಯ ಇದೆ. ಅದಕ್ಕೆ ದೊಡ್ಡ ಬೆಲೆ ತೆರಬೇಕಾಗಬಹುದು. ಆ ನಾಶದಿಂದ ನಮಗೆ ಹಿಂದಿರುಗಲು ಸಾಧ್ಯವಾಗದು. ಈ ಬಗ್ಗೆ ಶಾಂತವಾಗಿ ಚಿಂತಿಸಬೇಕು‌. ನಮ್ಮ ಪ್ರತಿರೋಧ ಹೇಗಿರಬೇಕು ಎಂಬ ಬಗ್ಗೆ ಚಿಂತಿಸಿ. ಅಲ್ಲಾಹನು ನಮಗೆ ಮಾರ್ಗದರ್ಶನ ಮಾಡಲಿ ಆಮೀನ್.

ಗುರುವಾರ, ಜೂನ್ 15, 2017

ಮಗ್ರಿಬಿನ ಬಾಂಗ್

ಬಾಪಾ, ನಾಳೆಯಾದ್ರೂ ಶಾಲೆಗೆ ಬರ್ತಿರಾ?" ಮಸೀದಿಯ ಪಕ್ಕದ ಕಚೇರಿಯಲ್ಲಿದ್ದ ಟೆಲಿಫೋನಿಗೆ ಕರೆ ಮಾಡಿದ್ದ ಸಯೀದಾ ಕೇಳುತ್ತಿದ್ದಳು.  ಅದ್ದು ಉಸ್ತಾದ್ ನಿಲ್ಲಲು ಶಕ್ತಿ ಸಾಲದೆ ಕೊಟಡಿಯ ಗೋಡೆಗೆ ಒರಗಿಕೊಂಡರು. ಮಗಳ ಧ್ವನಿಯಲ್ಲಿ ತನ್ನ ಬಗ್ಗೆ ತಾತ್ಸಾರದ ಭಾವವಿದೆಯಾ, ಛೇ ಛೇ ಇರಲಾರದು ಹದಿಮೂರರ ಹರೆಯದಲ್ಲಿಯೇ ಮನೆಯ ಜವಾಬ್ದಾರಿ ವಹಿಸಿಕೊಂಡವಳು ಸಯೀದಾ.

''ಬಾಪಾ.." ಸಯೀದಾ ಇನ್ನೊಮ್ಮೆ ಕರೆದಾಗ ಅದ್ದು ಉಸ್ತಾದ್ ನೆನಪಿನ ಜಂಗುಳಿಯಿಂದ ಹೊರಬಂದರು.
"ಹ್ಞಾ.. ಮೋಳೆ, ನಾಳೆ ಬೆಳಿಗ್ಗೆ ಎಂಟು ಗಂಟೆಯ ಬಸ್ಸಿನಲ್ಲಿ ನಿನ್ನ ಸ್ಕೂಲ್ ಪೀಜನ್ನು ಕಳುಹಿಸುತ್ತೇನೆ, ಆ ಬಸ್ಸಲ್ಲಿ ಕಂಡಕ್ಟರ್ ನನ್ನ ಅಳಿಯ ಅಲ್ವಾ.. ನಿನ್ನ ಸ್ಕೂಲಿಗೇ ತಲುಪಿಸುತ್ತಾನಮ್ಮ", 
"ಆದರೂ ನೀವೊಮ್ಮೆ ಬರಬೇಕೆಂದು ಹೆಡ್ ಮಾಸ್ತರ್ ಹೇಳಿದ್ದಾರೆ ಬಾಪಾ",
"ನಾಳೆ ನಾನು ಬಂದರೆ ಇಲ್ಲಿ ಬಾಂಗ್ ಕೊಡೋದು ಯಾರು ಮೋಳೆ, ನೋಡೋಣ ಈ ಜುಮ್ಮಾ ಕಳೆದ ನಂತರ ಚನಿಯಾಸೆಗಾದ್ರೂ ಬರುತ್ತೇನೆ",
"ಆಯ್ತು ಬಾಪಾ",
"ಉಮಾ ಹೇಗಿದ್ದಾಳೆ ಮೋಳೆ",
"ಇನ್ನೂ ಕೆಮ್ಮು ನಿಂತಿಲ್ಲ ಬಾಪಾ, ಡಾಕ್ಟ್ರು ಕೊಟ್ಟ ಮದ್ದು ಇನ್ನೂ ಇದೆ"

ಅದ್ದು ಉಸ್ತಾದ್ ಪತ್ನಿ ಮದುವೆಯಾಗುವಾಗಲೇ ಅಷ್ಟೇನು ಹುಷಾರಿನವರಾಗಿರಲಿಲ್ಲ, ಆದರೂ ಮದುವೆಯಾಗಿ ಬಂದಂದಿನಿಂದ ಪತಿಯೊಂದಿಗೆ ಎಂದೂ ಕೊಂಕು ಮಾತಾಡಿದವರಲ್ಲ. ಇಲ್ಮು ಕತ್ತಲೆಯನ್ನು ದೂರ ಮಾಡಿ ಬೆಳಕನ್ನು ನೀಡುತ್ತದೆಯೇ ಹೊರತು ಹಸಿವನ್ನು ನೀಗಿಸುವುದಿಲ್ಲ ಎಂದು ಅದ್ದು ಉಸ್ತಾದರ ಗುರುಗಳು ಯಾವಾಗಲೂ ಹೇಳುತ್ತಿದ್ದ ಮಾತು. ಬಡತನ ಅದ್ದು ಉಸ್ತಾದರಿಗೆ ಪಿತ್ರಾರ್ಜಿತ ಬಳುವಳಿ. ಜೊತೆಗೆ ಹೆಂಡತಿಯ ದಮ್ಮು ರೋಗ ಟಿ.ಬಿ ಗೆ ತಿರುಗಿ ಅದ್ದು ಉಸ್ತಾದರ ಜೀವನದ ದಾರಿಯನ್ನೇ ತಿರುಗಿಸಿತ್ತು. ಎಲ್ಲೋ ಬಾಂಗಿನ ಧ್ವನಿ ಕೇಳುತ್ತಿದೆ, ಅರೇ ಫೋನಿನೊಳಗಿಂದಲೇ!? ಅದ್ದು ಉಸ್ತಾದ್ ನೆನಪಿನ ಮೊಟ್ಟೆಯಿಂದ ಹೊರ ಬಂದರು.

" ಅಯ್ಯೋ! ಮಗ್ರೀಬ್ ಮೋಳೆ! ನಮ್ಮ ಹಳೆ ಮಸೀದಿ ಬಾಂಗ್ ಕೇಳ್ತಾ ಇದೆ, ನಾನಿನ್ನು  ಮೇಲೆ ಹೋಗ್ಬೇಕು ಮೋಳೆ, ಪೀಜು ನಾಳೆ ಕಳುಹಿಸುತ್ತೇನೆ" "ಆಯ್ತು ಬಾಪಾ" ಎಂದು ಆಚೆ ಕಡೆಯಿಂದ ಸಯಿದಾ ಹೇಳುತ್ತಿರುವುದನ್ನೂ ಕೇಳದೆ ಅದ್ದು ಉಸ್ತಾದ್ ಫೋನ್ ಕೆಳಗೆ ಇಟ್ಟು ತರಾತುರಿಯಲ್ಲಿ ಮಸೀದಿಯತ್ತ ಓಡಿದರು.

       ಮಸೀದಿಯ ಮೆಟ್ಟಿಲನ್ನು ಹತ್ತಿಕೊಂಡು ವರಾಂಡದ ಮೂಲೆಯಲ್ಲಿರುವ ನೀರಿನ ತೊಟ್ಟಿಯಲ್ಲಿ ಕೈಕಾಲು ತೊಳೆದು ಉಝು ಕರ್ಮಗಳನ್ನು ಮುಗಿಸಿದರು.  ನೈರುತ್ಯ ದಿಕ್ಕಿನಿಂದ ಬೀಸಿದ ಗಾಳಿಗೆ ಮೂತ್ರದ ವಾಸನೆ ಜೋರಾಗಿ ಮೂಗಿಗೆ ಬಡಿಯಿತು.  ನೀರಿನ ತೊಟ್ಟಿಗೆ ತಾಗಿಕೊಂಡೇ ಮದರಸದ ಮಕ್ಕಳು ಮತ್ತು ಮಸೀದಿಗೆ ಬರುವವರ ಉಪಯೋಗಕ್ಕೆಂದು ಕಟ್ಟಿಸಿದ ಮೂತ್ರದೊಡ್ಡಿಗಳಿದ್ದವು.  ಶೌಚಾಲಯದ ಗೋಡೆಯ ಬಲಭಾಗದಲ್ಲಿ ಶೈತಾನನ ವಶವಾಗದಂತೆ ಸರ್ವಶಕ್ತನನ್ನು ಅಭಿವಾದಿಸುವ ಸೂಕ್ತಗಳನ್ನು ಅರೆಬಿಕ್ನಲ್ಲಿ ಬರೆದಿದ್ದರು. ಅದನ್ನೊಮ್ಮೆ ಮನಸ್ಸಿನಲ್ಲಿಯೇ ಪಠಿಸಿದ ಅದ್ದು ಉಸ್ತಾದ್ ಇನ್ನೊಮ್ಮೆ ಮುಖತೊಳೆದುಕೊಂಡು ಬೇಗ ಬೇಗನೇ ಮಸೀದಿಯೊಳಕ್ಕೆ ಧಾವಿಸಿ ಮಗ್ರೀಬಿನ ಬಾಂಗ್ ನೀಡಿದರು. ಕಿಟಕಿಯ ಹೊರಗೆ ಹಕ್ಕಿಗಳು ಜೋರಾಗಿ ಚಿಲಿಪಿಲಿಗುಟ್ಟತೊಡಗಿದವು. ಕುರ್ ಆನ್ ಗ್ರಂಥವನ್ನೊಮ್ಮೆ ಹಣೆಗೊತ್ತಿ , ಚುಂಬಿಸಿದ ಅದ್ದು ಉಸ್ತಾದ್ ಗೋಡೆಯಲ್ಲಿ ಗ್ರಂಥವನ್ನಿಡುವ ಹಲಗೆಯ ಅಡ್ಡದಲ್ಲಿರಿಸಿದರು.
        ಮಕ್ಕಳು ಸಂಜೆಯ ತರಗತಿಗೆ ಮದರಸದೊಳಗೆ ಬರುತ್ತಿದ್ದರು. ಆಫೀಸು ಕೋಣೆಯ ಪಕ್ಕದ ಕೊಟಡಿಯಲ್ಲಿಯೇ ಮದರಸ ನಡೆಸುತ್ತಿದ್ದರು.  ಮಕ್ಕಳ ಮುಖವನ್ನು ನೋಡುತ್ತಿದ್ದಂತೆ ಅದ್ದು ಉಸ್ತಾದರಿಗೆ ಮನೆಯ ನೆನಪಾಯಿತು. ನಾಳೆ ಬೆಳಿಗ್ಗೆ ಎಂಟು ಗಂಟೆಯ ಬಸ್ಸಿಗೆ ಮಗಳ ಸ್ಕೂಲ್ ಪೀಜು ಕಳುಹಿಸಬೇಕು,  ಅಧ್ಯಕ್ಷರು ಸಂಬಳವಿನ್ನೂ ಕೊಟ್ಟಿಲ್ಲ.  ತರಗತಿ ಮುಗಿದ ಕೂಡಲೇ ಅಧ್ಯಕ್ಷರ ಮನೆಗೆ ಹೋಗಬೇಕೆಂದು ಕೊಂಡರು.  ಮಕ್ಕಳೆಲ್ಲಾ ತರಗತಿಯಲ್ಲಿ ಕುಳಿತುಕೊಂಡಾಗಿತ್ತು. ಅದ್ದು ಉಸ್ತಾದ್ ಮಕ್ಕಳಿಗೆ ಅರೆಬಿಕ್ ಪಠ್ಯದ ಎರಡು ತಸ್ಬಿಗಳನ್ನು ಗಟ್ಟಿ ಸ್ವರದಲ್ಲಿ ಕಂಠಪಾಠಮಾಡಲು ಹೇಳಿ ಪುನಃ ನೆನಪಿನ ಕುದುರೆಯ ಬೆನ್ನು ಹತ್ತಿದರು.
        ಮದರಸದ ಕಿಟಕಿಯ ಹೊರಗೆ ಶೆರೀಪಮ್ಮಾ ತನ್ನ ಗುಡಿಸಲಿಗೆ ಮಡಲಿನ ತಟ್ಟಿಯನ್ನು ಭದ್ರಗೊಳಿಸುತ್ತಿದ್ದರು. ಗಾಳಿಗೆ ಮಿಣಿ ಮಿಣಿ ಓಲಾಡುತಿದ್ದ ಚಿಮಿಣಿಯ ಬೆಳಕಿಗೆ ಶೆರೀಪಮ್ಮರ ದೊಡ್ಡ ನೆರಳು ಆಚೆ ಈಚೆ ಓಡುತ್ತಿರುವಂತೆ ಕಾಣುತಿತ್ತು. 

"ಅಬ್ಬಾ ಈ ಸರ್ತಿಯಾದರೂ ಮನೆಗೆ ಮರದ ಬಾಗಿಲು ಮಾಡಿಸ್ಬೇಕು" ಸಯೀದಾ ಹೇಳುತ್ತಿದ್ದಳು.
" ಕತ್ತಲಾಗುವಾಗ ಯಾರೋ ಬಂದು ಜಗಲಿಯಲ್ಲಿ ಕುಳಿತ ಹಾಗೆ ಆಗುತ್ತೆ ಅಬ್ಬಾ"
ಅದ್ದು ಉಸ್ತಾದ್ "ಅದು ಮಲಕುಗಳಮ್ಮಾ , ಸಂಜೆ ಹೊತ್ತು ರಹಮತ್ತುಗಳನ್ನು ಹೊತ್ತ ತರುತ್ತಾರೆ ನಮ್ಮ ಮನೆಗೆ"

ಮಕ್ಕಳಿಗೆ ಪಾಠ ಮಾಡುವ ಅಭ್ಯಾಸದಲ್ಲಿ ಹೇಳಿದ ಅದ್ದು ಉಸ್ತಾದ್ ರ ಮಾತುಗಳು ಗಂಟಲಲ್ಲಿಯೇ ಬಾಕಿಯಾದವು. ಮಗಳು ದೊಡ್ಡವಳಾಗುತ್ತಿದ್ದಾಳೆ. ಅದ್ದು ಉಸ್ತಾದರ ಎದೆ ಭಾರವಾದಂತೆ ಅನಿಸುತಿತ್ತು. ಏನೇನೋ ಭಾವನೆಗಳು ಮನಸ್ಸಿಗೆ ಬಂದು ಚುಚ್ಚ ತೊಡಗಿದವು. ಕೆಮ್ಮುತ್ತಲೇ ಇದ್ದ ಹೆಂಡತಿ "ಇಕೊಳ್ಳಿ, ಅದು ಒಮ್ಮೆ ಅವನಿಗೆ ಕಾಗದ ಬರೆಯಬಹುದಲ್ವಾ" ಎಂದರು.
ಅದ್ದು ಉಸ್ತಾದ್ ಪತ್ನಿಯ ಮುಖವನೊಮ್ಮೆ ನೋಡಿದರು, ರೋಗಗ್ರಸ್ತಳಾಗುವ ವಯಸ್ಸೇ ಅಲ್ಲ ಅಮಿನಾರದ್ದು. ಇನ್ನೂ ನಲವತ್ತೈದು ಕೂಡಾ ಆಗಿರಲಿಕ್ಕಿಲ್ಲ ಆಗಲೇ ಈ ಹಾಳಾದ ಅಸ್ತಮಾ ರೋಗ ಅಮಿನಾಬಿಯನ್ನು ಹಣ್ಣುಗಾಯಿ ಮಾಡಿಹಾಕಿತ್ತು.
"ಅದನ್ನು ನನ್ನ ಕಬರಿನಲ್ಲಿಯೂ ಯೋಚನೆ ಮಾಡಲಾರೆ ಅಮಿನಾ" ಅದ್ದು ಉಸ್ತಾದ್ ಅಸಹನೆಯಿಂದ ನುಡಿದರು.
ಅದ್ದು ಉಸ್ತಾದರ ದೊಡ್ಡ ಮಗ ಪೇಟೆಯಲ್ಲಿ ಮಾವನ ಮನೆಯಲ್ಲಿ ಬೆಳೆದವನು ಹತ್ತನೆ ತರಗತಿಯವರೆಗೆ ಅಲ್ಲಿಯೇ ಕಲಿತಿದ್ದ. ಇನ್ನಾದರೂ ಕೇರಳದ ಯಾವುದಾದರೂ ಅರೆಬಿಕ್ ಶಾಲೆಯಲ್ಲಿ ಸ್ವಲ್ಪ ಧಾರ್ಮಿಕ ಶಿಕ್ಷಣ ಕಲಿಯಲಿ ಎಂದು ಅದ್ದು ಉಸ್ತಾದರ ಮನಸ್ಸಾಗಿತ್ತು. ಆದರೆ ಹುಡುಗ ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಇಲ್ಲಿಯೇ ಕಲಿತು ಸೌದಿಯಾಕ್ಕೆ ಹೋಗುತ್ತೇನೆ ಎಂದೇ ಪಟ್ಟು ಹಿಡಿದು ಕುಳಿತ. ಕೊನೆಗೊಮ್ಮೆ ಹನ್ನೆರಡನೇ ತರಗತಿ ಮುಗಿಸಿದವನಿಗೆ ಮಾವನೇ ವೀಸಾವನ್ನೂ ತರಿಸಿಕೊಟ್ಟಿದ್ದ.

     ಸೌದಿಗೆ ಹೊರಡುವುದಕೆ ವಾರದ ಮೊದಲೇ ಸತ್ತಾರ್ ಮನೆಗೆ ಬಂದಿದ್ದ. ಅಮಿನಾಭಿಯ ದಮ್ಮು ಈಗದಷ್ಟು ಜೋರು ಇರಲಿಲ್ಲವಾದರೂ ಕೆಮ್ಮುವುದಂತೂ ಇದ್ದೇ ಇತ್ತು.
     ಆಗೆಲ್ಲಾ ಸತ್ತಾರ್ ಸುತ್ತ ಮುತ್ತ ಇರುವ ಹಲವು ಮಸೀದಿಗಳು ಮತ್ತು ದರ್ಗಾಗಳಿಗೆ ಬೇಟಿಯನ್ನೂ ನೀಡಿದ್ದ. " ಉಮ್ಮಾ ಮೇಲಿನ ಮಸೀದಿಗೆ ಸೌದಿಯಿಂದ ಬಂದ ನಂತರ ಶೋ ಬಲ್ಬು ನೀಡುತ್ತೇನೆ ಎಂದು ಹರಕೆ ಇಟ್ಟಿದ್ದೇನೆ ಉಮ್ಮಾ" ಎನ್ನುತ್ತಿದ್ದ.  ಬೊಂಬಾಯಿಗೆ ಬಸ್ಸು ಹತ್ತುವವರೆಗೆ ಅದ್ದು ಉಸ್ತಾದರು ಕೂಡಾ ಕಾಲಿಗೆ ಚಕ್ರ ಕಟ್ಟಿದವರಂತೆ ಓಡಾಡುತಿದ್ದರು. ಅಮಿನಾಬಿಯ ಕಣ್ಣು ಸದಾ ತುಂಬಿದ ಕೊಡದಂತೆ ಕಾಣುತಿತ್ತು. ಯಾವ ಕ್ಷಣಕ್ಕಾದರೂ ಅದು ಹೊರಚೆಲ್ಲಿ ಬಿಡಬಹುದಿತ್ತು.
 
        ಕೊನೆಗೊಮ್ಮೆ ಆ ದಿನವು ಬಂದೇ ಬಿಟ್ಟಿತ್ತು. ಅದ್ದು ಉಸ್ತಾದರ ಮನೆಯಲ್ಲಿ ನಡೆದ ಮೌಲೂದು ಪಾರಾಯಣಕ್ಕೆ ಕೇರಳದಿಂದ ಆಗ ತಾನೇ ಕಲಿತು ಬಂದಿದ್ದ ಉಸ್ತಾದರಿಬ್ಬರನ್ನು ಕರೆಸಿದ್ದರು ಅದ್ದು ಉಸ್ತಾದ್. ಪಾರಾಯಣದ ಮಧುರ ಸ್ವರಗಳು ಇನ್ನೂ ಕಿವಿಯಲ್ಲಿ ಧ್ವನಿಸುತ್ತಿರುವಾಗಲೇ ಸತ್ತಾರ್ ಸೌದಿಗೆಂದು ಮುಂಬಯಿಯ ಬಸ್ಸು ಹತ್ತಿದ್ದ. ಸಣ್ಣವಳಾದ ಸಯೀದಾ ಅಳುತಿದ್ದಳು. ಅಮೀನಾಬಿಯ ಕೆಮ್ಮು ದಮ್ಮು ರೋಗವಾಗಿ ಮಾತು ಬಾರದೆ ಸೆರಗನ್ನು ಬಾಯಿಗೊತ್ತಿಕೊಂಡು ಕಟ್ಟೆಯೊಡೆದು ಹರಿಯುತ್ತಿರುವ ಕಣ್ಣೀರಿನ ಕಣ್ಣುಗಳಿಂದ ಮಗನನ್ನು ನೋಡುತ್ತಿದ್ದರು.  " ಮೋನೆ ನಿನ್ನ ಕೆಲಸವಲ್ಲದೆ, ಬೇರೆ ಯಾರ ಕೂಡ ಸೇರಿಕೊಳ್ಬೇಡಪ್ಪಾ. ಅಲ್ಲಿ ಹೊಸ ಹೊಸ ಜನರು ಮತ್ತು ಊರಿನವರು ಸೇರಿಕೊಂಡು ಏನೇನೊ ನೂತನಗಳ ಬಗ್ಗೆ ಮಾತನಾಡುತ್ತಾರಂತೆ" ಎಂದು ಮಗನ ಬಳಿ ಆಗಾಗ ಹೇಳುತ್ತಿದ್ದರು ಅಮಿನಾಬಿ. ಇಂದು ಮಾತೇ ಹೊರಡುತ್ತಿರಲಿಲ್ಲ. ಆದರೂ ಬಸ್ಸು ಹೊರಟಿತು.
    
      ಸೌದಿಯಿಂದ ಮೊದಲ ಪತ್ರ ಬರುವಾಗ ಮೂರು ತಿಂಗಳೇ ಕಳೆದಿತ್ತು. ಆ ಪತ್ರವನ್ನು ಅದ್ದು ಉಸ್ತಾದರು ಅಮಿನಾಬಿಗೆ ಓದಿ ಹೇಳಿದ್ದಕ್ಕೆ ಲೆಕ್ಕವಿಲ್ಲ. ಅದು ಒಂದು ಪತ್ರದಂತೆಯೇ ಇರಲಿಲ್ಲ, ತಾನು ಮೊತ್ತ ಮೊದಲು ಹತ್ತಿದ್ದ ವಿಮಾನದ  ಮತ್ತು ಪ್ರಯಾಣದ   ಬಗ್ಗೆಯೇ ಬರೆದಿದ್ದ ಸತ್ತಾರ್. ವಿಮಾನ ನಿಲ್ದಾಣದಿಂದ ಅಲ್ಲಾಡುತ್ತಲೇ ಬಹು ದೂರ ಓಡಿದ ವಿಮಾನ ಒಮ್ಮೆಲೆ ಮೇಲಕ್ಕೆ ಹಾರಿ ಒಳಗಿದ್ದವರೆಲ್ಲಾ ಹತ್ತಿಗಿಂತ ಹಗುರವಾದಂತಹ ಅನುಭವವಾದದ್ದೂ,  ಕೆಳಗಡೆ ಜೋರಾಗಿ ಕೇಳುತ್ತಿದ್ದ ವಿಮಾನದ ಸದ್ದು ಮೇಲೆ ಏರಿದಂತೆ ಕಡಿಮಯಾದದ್ದು. ಸೌದಿ ಏರ್ ಪೋರ್ಟಿನಲ್ಲಿ ಕಂಪೆನಿಯ ಏಜೆಂಟ್ ನನ್ನು ಹುಡುಕಲು ಕಷ್ಟವಾದದ್ದು,  ಹೀಗೆ ಸತ್ತಾರ್ ಹೆಜ್ಜೆ ಹೆಜ್ಜೆಗಳನ್ನೂ ವಿವರಿಸುತ್ತಿದ್ದ. ಅಮಿನಾಬಿ ಪ್ರತಿಯೊಂದು ವಾಕ್ಯಗಳನ್ನು ಕೇಳುವಾಗಲೂ "ಯಾ ಅಲ್ಲಾಹ್" ಎಂದು ಕಣ್ಣು ಮುಚ್ಚುತ್ತಿದ್ದರು. ಮಗನನ್ನು ಕ್ಷೇಮವಾಗಿ ತಲುಪಿಸಿ ಕಾಗದ ಬರೆಸುವಂತೆ ಮಾಡಿದ ಅಲ್ಲಾಹನನ್ನು ಎಷ್ಟು ಸಲ ಸ್ಮರಿಸಿ ಕೃತಜ್ಞತೆಯನ್ನು ಹೇಳಿದರೂ ಅಮಿನಾಭಿಗೆ ತೃಪ್ತಿಯಿಲ್ಲ. 

     ಆದರೆ ಕಾಲವೆಂಬುದು ಅದ್ದು ಉಸ್ತಾದರಿಗೆ ಮಣಿದಿರಲಿಲ್ಲ. ಸತ್ತಾರ್ ಕಳುಹಿಸಿದ ಆರನೆ ಪತ್ರ, ಎಂದರೆ ಒಂದು ವರ್ಷದ ನಂತರ ಬಂದ ಪತ್ರವೊಂದು ಸ್ವಲ್ಪ ಬದಲಾಗಿತ್ತು. ಯಾವಾಗಲೂ ಗಟ್ಟಿಯಾಗಿ ಓದುತಿದ್ದ ಅದ್ದು ಉಸ್ತಾದ್ ಒಮ್ಮೆಲೇ ಓದುವುದನ್ನು ನಿಲ್ಲಿಸಿದರು.   
"ಅಬ್ಬಾ ನೀವು ಮೌಲೂದು ಮಾಡಲು ಮನೆ ಮನೆಗೆ ಹೋಗುವುದು ನನಗಿಷ್ಟವಿಲ್ಲ,  ಬೇಕಾದರೆ ನಾನು ಇನ್ನೂರು ರುಪಾಯಿ ಜಾಸ್ತಿಯೇ ಕಳುಹಿಸುತ್ತೇನೆ, ತಂಗಿಯ ಮದುವೆ ಮಾಡುವ ಜವಾಬ್ದಾರಿ ನನ್ನದು. ನೀವು ತಲೆಬಿಸಿ ಮಾಡಬೇಡಿ", ಇನ್ನೂ ಏನೇನೋ ವಿಷಯಗಳು, ಧರ್ಮದ ಬಗೆಗಿನ ಉಪದೇಶಗಳು, ಸತ್ತಾರ್ ಎಲ್ಲವನ್ನೂ ಬಿಡಿಸಿ ಬಿಡಿಸಿ ಬರೆಯುತ್ತಿದ್ದ. ತಂದೆ ತಾಯಿ ಸಂಬಂಧಗಳಿಗೇ ಬೆಲೆಯಿಲ್ಲವೋ ಎಂಬಂತೆ, ಕರ್ಮಶಾಸ್ತ್ರಗಳ ಕಟ್ಟು ನಿಟ್ಟುಗಳನ್ನು ಭೋದಿಸಲು ಶುರು ಹಚ್ಚಿದ್ದ.

"ಮೊಯಿಲಾರೇ ಮೊಯಿಲಾರೇ !" , ಹುಡುಗನೊಬ್ಬನ ಕೂಗಿಗೆ ಅದ್ದು ಉಸ್ತಾದ್ ಹೊರ ಜಗತ್ತಿಗೆ ಬಂದರು, ಮಕ್ಕಳು ತರಗತಿಯಲ್ಲಿ ತೂಕಡಿಸುತ್ತಿದ್ದರು, ಕರೆಂಟು ಹೋಗಿತ್ತು, ಬಾಗಿಲ ಬದಿಯಲ್ಲಿ ತೂಗುತಿದ್ದ ಲಾಂಟಾರ್ನು ತನ್ನ ಕೆಂಪನೆಯ ನಾಲಗೆಯನ್ನು ತೋರಿಸಿ ಎಣ್ಣೆ ಖಾಲಿಯಾಗಿದೆ ಎಂದು ತೋರಿಸುತಿತ್ತು.  ಮಕ್ಕಳು ತಸ್ಬಿಯನ್ನು ಕಂಠ ಪಾಠ ಮಾಡಿದ್ದರು.
ಎಲ್ಲರೂ ಸತ್ತಾರನಂತೆ ಕಂಡು ಬಂದು ಅದ್ದು ಉಸ್ತಾದರಿಗೆ ಶಕ್ತಿಗುಂದಿದ ಅನುಭವವಾಯಿತು. ಮನಸ್ಸು ಭಾರವಾಗಿ, ಸ್ವರ ಗದ್ಗದಿತವಾಯಿತು.
"ಮಕ್ಕಳೇ , ನಮ್ಮ ಪ್ರೀತಿಯ  ಪ್ರವಾದಿವರ್ಯರ ಬಗ್ಗೆ ಎಂದಿಗೂ ಅಪಸ್ವರವೆತ್ತ ಬೇಡಿರಿ, ಅಂತಹವರಿಂದ ದೂರವಿರಿ", ಅದ್ದು ಉಸ್ತಾದರ ಕಣ್ಣುಗಳು ಹನಿಗೂಡಿದ್ದವು. ಬೋರ್ಡಿನ ಕಡೆಗೆ ತಿರುಗಿ ಅದ್ದು ಉಸ್ತಾದ್ ಕಣ್ಣೊರೆಸಿಕೊಂಡರು. 
"ಅವನಿಗೆ ಪಶ್ಚಿಮದ ಗಾಳಿ ತಾಗಿದೆ, ಇದು ನನ್ನ ಪ್ರವಾದಿಯವರ ನಾಡಿನದ್ದಂತೂ ಅಲ್ಲವೇ ಅಲ್ಲ",  ದಿನಕ್ಕೆ ಹತ್ತು ಸಾರಿಯಾದರೂ ಅದ್ದು ಉಸ್ತಾದ್ ಅವರಷ್ಟಕ್ಕೇ ಹೇಳುತ್ತಿದ್ದರು.
ಬರಬರುತ್ತಾ ಸತ್ತಾರನ ಪತ್ರಗಳು ನಿಧಾನವಾಗ ತೊಡಗಿದವು, ಒಕ್ಕಣೆಯು ಚೊಕ್ಕ ವಾಗಿತ್ತು, ಅಕ್ಷರಗಳು ಭಾರವಾಗಿ ತೊನೆಯುತ್ತಿದ್ದವು.
"ನೀವು ಇಸ್ಲಾಮಿನ ಕರ್ಮಶಾಸ್ತ್ರಗಳ ಬಗ್ಗೆ ತಿಳಿದಿಲ್ಲ" ಎನ್ನುವಷ್ಟರ ಮಟ್ಟಿಗೆ ಬರೆಯುತ್ತಿದ್ದ.

   ಅದ್ದು ಉಸ್ತಾದರಿಗೆ ಪಾಪ ಪ್ರಜ್ಞೆಯೊಂದು ಕಾಡುತಿತ್ತು. ಇವನನ್ನು ಪೇಟೆ ಶಾಲೆಗೆ ಕಳುಹಿಸಿದ್ದೇ ತಪ್ಪಾಯಿತೇ, ನನ್ನ ಬಡತನವೇ ಇದಕ್ಕೆ ಕಾರಣವೇ?  ಅದಾಗಿರಲಾರದು, ಸೌದಿಗೆ ಹೋಗುವ ಮುನ್ನ ಆತ ಸರಿಯಿದ್ದನಲ್ಲ?, ಇತ್ತೀಚೆಗೆ ಮಸೀದಿಯ ಅಧ್ಯಕ್ಷರು ಕೂಡಾ ಇದನ್ನೇ ಹೇಳುತಿದ್ದರು. ಕೆಲವು ಪೇಟೆಯಿಂದ ಹುಡುಗರು ಮಾಡುತ್ತಿರುವ ವಿಚಿತ್ರ ವಾದ ಸರಣಿಯ ಬಗ್ಗೆ. ಆಗೆಲ್ಲಾ ಅಧ್ಯಕ್ಷರ ಬಿ.ಪಿ ಏರುತಿತ್ತು.
"ಅಲ್ಲ, ಅಪ್ಪ ಅಮ್ಮನೇ ಇಲ್ಲದೆ ಮಕ್ಕಳು ಆಗುವುದು ಹೇಗೇ? , ಈ ಪುಣ್ಯ ಪುರುಷರ ಬಗ್ಗೆ ಸಸಾರವಾಗಿ ಮಾತನಾಡ್ಲಿಕ್ಕೆ ಎಷ್ಟು ಧೈರ್ಯ ಅವುಗಳಿಗೆ", ಅದ್ದು ಉಸ್ತಾದರು ಮೌನವಾಗುತ್ತಿದ್ದರು.
"ಆ ಪೆನುಗೊಂಡದ ಬಾಬ , ಆ ಮಹಾ ಪುರುಷ, ನಮ್ಮ ತಾತ ಮುತ್ತಾಂದಿರ ಕಣ್ಣೀರೊರೆಸದಿದ್ದರೆ ನಾವೆಲ್ಲಾ ಈ ಪವಿತ್ರ ಇಸ್ಲಾಮನ್ನು ಪಡೆದು ಕೊಳ್ಳುತಿದ್ದೆವೇ?",
    ಅದ್ದು ಉಸ್ತಾದರಿಗೆ ಕಾಲ ಕೆಳಗಿನ ನೆಲವೇ ಸರಿದು ಹೋಗುತಿರುವಂತೆ ಅನಿಸುತಿತ್ತು. ಮನಸ್ಸು ಕದಡಿಹೋಗಿ ಬಾಂಗ್ ನೀಡುವಾಗ ಧ್ವನಿಯು ಉಡುಗಿಹೋಗುತಿತ್ತು.
"ಅಝಬ್ ನಹೀ ಕೆ ಖುದಾ ತಕ್ ತೇರಿ ರಸಾಯಿ ಹೋ
ತೇರಿ ನಿಗಾಹ್ ಸೆ ಹೈ ಪೋಶಿದಾ ಆದ್ಮಿ ಕಾ ಮಖಾಮ್
ತೇರಿ ನಮಾಝ್ ಮೇ ಬಾಕಿ ಜಲಾಲ್ ಹೈ,  ನ ಜಮಾಲ್
ತೇರಿ ಆಝಾನ್ ಮೆ ನಹೀ ಹೈ ಮೇರಿ ಸೆಹರ್ ಕಾ ಪಯಾಮ್"!!
ಎಂಬ ಅಲ್ಲಾಮ ಇಕ್ಬಾಲರ ನುಡಿಯು ತನ್ನನ್ನೇ ಅಣಕಿಸುತ್ತಿದೆಯೇ ಅನಿಸುತಿತ್ತು.

ಅದೊಂದು ದಿನ ,  ಸಂಜೆ ಮಸೀದಿಯ ಕಚೇರಿಯಿಂದ ಹುಡುಗನೊಬ್ಬ ಕೂಗಿ ಹೇಳಿದ "ಮೊಯಿಲಾರೇ ನಿಮಗೆ ಫೋನಿದೆ".
ಅದ್ದು ಉಸ್ತಾದ್ ಪೋನ್ ಮಾಡುವವಳು ತನ್ನ ಮಗಳೇ ಎಂದು ಗೊತ್ತಿದ್ದರೂ  "ಯಾರದಂತೆ" ಎಂದು ಕೇಳುತ್ತಲೇ ಮಸೀದಿಯ ಕೋಣೆಯಿಂದ ಹೊರಗೆ ಇಳಿದು ಬಂದು ಕಚೇರಿಯ ಒಳಗೆ ಬಂದರು. ಜಮಾತಿನ ಕಾರ್ಯದರ್ಶಿ ತಲೆ ಬಗ್ಗಿಸಿಕೊಂಡು ಲೆಕ್ಕ ಪುಸ್ತಕದಲ್ಲಿ ಬಾಡಿಗೆ ರಶೀದಿ ಬರೆಯುತ್ತಿದ್ದವರು ತಲೆ ಎತ್ತಿ ನೋಡಿ ಪುನಃ ಪುಸ್ತಕದಲ್ಲಿ ಲೀನವಾದರು.
ಪೋನು ಕೈಗೆತ್ತಿಕೊಂಡ ಅದ್ದು ಉಸ್ತಾದರು " ಏನು ಮೋಳೆ " ಎಂದಾಗ ಆ ಕಡೆಯಿಂದ ಕೇಳಿದ್ದು ಒಂದು ಗಂಡು ಧ್ವನಿ.
"ಅಸ್ಸಲಾಮು ಅಲೈಕುಮುಂ ಅದ್ದಾಕ"
"ಹ್ಞಾಂ , ಯಾರು ? ವಾಲೈಕುಂಸ್ಸಲಾಮು ರಹಮತುಲ್ಲಾ ಬರಕಾತು"
ಅದ್ದು ಉಸ್ತಾದರಿಗೆ ತಕ್ಷಣ ಯಾರೆಂದು ಗೊತ್ತಾಗಲಿಲ್ಲ,
"ನಾನು ಅದ್ದಾಕ, ಪಾತುಂಮ್ಮನ ಮಗ ಬಷೀರು, ..ಅದೇ.." 
" ಹ್ಞಾಂ !  ಬಷೀರಾ!,  ಹ್ಞಾಂ .. ಏನು ಮೋನೆ, ನಾನು ಸಯೀದಾ ಅಂದ್ಕೊಂಡೆ,  ಏನಾಯ್ತು ಮೋನೆ?",     
ಪಾತುಮ್ಮಳ ಮಗ ಬಷೀರು ಸ್ವಲ್ಪ ಪೆದ್ದು ಪೆದ್ದಾದ ಹುಡುಗ, ಕಷ್ಟ ಪಟ್ಟು ಐದನೆ ತರಗತಿ ಮುಗಿಸಿದವನಿಗೆ ಮತ್ತೆ ಶಾಲೆಯ ದಾರಿ ರುಚಿಸಲೇ ಇಲ್ಲ. ಅಲ್ಲಿ ಇಲ್ಲಿ ಕೆಲಸ ಮಾಡಿ  ನೆರೆಹೊರೆಯವರಿಗೆ ಅಂಗಡಿಯಿಂದ ಸಾಮಾನು ತಂದು ಕೊಡುವುದು ಮಾಡುತಿದ್ದ. ದಿನಕ್ಕೆ ಎರಡು ಮೂರು ಸಲವಾದರೂ ಅದ್ದು ಉಸ್ತಾದರ ಮನೆಗೆ ಹೋಗಿ ಬರುವವ. ಆದರೂ ಪಾತುಮ್ಮ ಆ ಹುಡುಗನನ್ನು ಗಿಣಿಯ ಹಾಗೆ ಸಾಕುತ್ತಿದ್ದಳು. 
"ಅದ್ದಾಕ ಅದೇ ಉಮ್ಮ ಪೋನು ಮಾಡ್ಲಿಕೆ ಹೇಳಿತು, ನಿಮ್ಮ ಹೆಂಗಸಿಗೆ ದಮ್ಮು ಜೋರಾಗಿ ಡಾಕ್ಟ್ರನ್ನು ನಾನೆ ಕರ್ಕೊಂಡು ಬಂದೆ, ಡಾಕ್ಟ್ರು ಬರೋವಷ್ಟರಲ್ಲಿ ಅವರು ಸತ್ತೋದರಂತೆ ಅದ್ದಾಕ, ಡಾಕ್ಟ್ರನ್ನು ಅಂಗಡಿವರೆಗೆ ಬಿಟ್ಟು ಅಲ್ಲಿಂದಲೇ ಪೋನು ಮಾಡ್ತಾ ಇದ್ದೇನೆ ಅದ್ದಾಕ.."

ಅದ್ದು ಉಸ್ತಾದರಿಗೆ ಕ್ಷಣಕಾಲ ಅರ್ಥವಾಗಲಿಲ್ಲ,  ಏನೋ ಕೇಳಲು ಬಾಯಿ ತೆರೆಯಿತು, ಗಂಟಲಲ್ಲಿ ಪಸೆಯೇ ಆರಿಹೋಗಿತ್ತು, ಯಾರೋ ಗಂಟಲನ್ನು ಗಟ್ಟಿಯಾಗಿ ಒತ್ತಿ ಹಿಡಿದಿರುವಂತೆ ಅನಿಸ ತೊಡಗಿ ಅದ್ದು ಉಸ್ತಾದ್  ಗಂಟಲಿಗೆ ಕೈ ಹಿಡಿದು ಕೊಂಡರು ಬಲಕೈ ಬಲಹೀನವಾಗಿ ಕೈಯಲ್ಲಿದ್ದ ಪೋನು ಬೀಳುವುದೋ ಎಂಬಂತಾಯಿತು,
"ಅದ್ದಾಕ ಅದ್ದಾಕ..." ಬಷೀರು ಆ ಕಡೆಯಿಂದ ಕರೆಯುತ್ತಿದ್ದ, ಪೋನಿನೊಳಗಿಂದ ಅಲ್ಲೇ ಅಂಗಡಿ ಪಕ್ಕದಲ್ಲಿದ್ದ ಹಳೇ ಮಸೀದಿಯಿಂದ ಮಗ್ರೀಬಿನ ಆಝಾನ್ ಕೇಳತೊಡಗಿತು. ಅದ್ದು ಉಸ್ತಾದ್ ಪೋನನ್ನು ಕೆಳಗಿಟ್ಟು  ನಿತ್ರಾಣವಾದಂತಾಗಿ ಎರಡೂ ಕೈಗಳಿಂದ ಮೇಜನ್ನು ಹಿಡಿದು ಕೊಂಡರು. ಕಾರ್ಯದರ್ಶಿ ಮತ್ತೊಮ್ಮೆ ತಲೆ ಎತ್ತಿ ಅದ್ದು ಉಸ್ತಾದರನ್ನೊಮ್ಮೆ ನೋಡಿ ಇನ್ನೊಮ್ಮೆ ಗೋಡೆಯ ಗಡಿಯಾರವನ್ನು ನೋಡಿದ, 
"ಏನಾಯಿತು ಉಸ್ತಾದರೇ? ಯಾರ ಪೋನು,  ಮಗ್ರೀಬಿಗೆ ಸಮಯವಾಯಿತಲ್ಲ?",  ಅದ್ದು ಉಸ್ತಾದ್ ಮಾತನಾಡಲಿಲ್ಲ.

         ಕಾಲುಗಳು ಅದ್ದು ಉಸ್ತಾದರನ್ನು ಎಳೆದುಕೊಂಡು ಮಸೀದಿಯತ್ತ ಸಾಗಿದವು. ಎರಡನೇ ಮೆಟ್ಟಿಲಿನಿಂದ ಮೂರನೇ ಮೆಟ್ಟಿಲಿಗೆ ಇಟ್ಟ ಬಲಕಾಲು ಪುಸಕ್ಕೆಂದು ಜಾರಿ ಎರಡನೇ ಮೆಟ್ಟಿಲಿಗಿಳಿಯಿತು. "ಯಾ ಅಲ್ಲಾ!"  ಅದ್ದು ಉಸ್ತಾದ್ ಹಠಾತ್ತನೆ ಬಾಗಿ ಎರಡೂ ಕೈಗಳಿಂದ ಮೂರನೇ ಮೆಟ್ಟಲನ್ನು ಹಿಡಿದು ಸಾವರಿಸಿಕೊಂಡು ನಿಂತರು, ಸೊಂಟ ಪಳಕ್ಕೆಂದು ಉಳುಕಿದ ಸದ್ದು ಕೇಳಿತು, ನಡುಗುತ್ತಿದ್ದ ಇಡೀ ದೇಹವನ್ನು ನಿಯಂತ್ರಿಸಲು ಹೆಣಗಾಡಿದರು.  ಮಗ್ರೀಬಿಗೆ ಸಮಯ ಮೀರುತಿತ್ತು, ಸೀದಾ ನೀರಿನ ತೊಟ್ಟಿಯ ಬಳಿ ಹೋದವರೇ, ಉಝು ಮಾಡಿದರು.
"ಕಣ್ಣುಗಳೇ ಸ್ವಲ್ಪ ಹೊತ್ತು ತಡೆಯಿರಿ, ನನ್ನ ಈಮಾನನ್ನು ಪರೀಕ್ಷಿಸದಿರಿ! ಯಾ ಅಲ್ಲಾಹ್ ! ನನಗೆ ಶಕ್ತಿ ಕೊಡು"
ಅದ್ದು ಉಸ್ತಾದ್ ಮೈಕಿನ ಗುಂಡಿ ಅದುಮಿ  ಸೂರಾಹ್ ಗಳನ್ನೊಮ್ಮೆ ಉಚ್ಚರಿಸಿ ಗಟ್ಟಿಯಾಗಿ ಆಝಾನ್ ಶುರು ಮಾಡಿದರು.
ಹೃದಯ ವಿದ್ರಾವಕವಾಗಿ ಹೊರಹೊಮ್ಮಿದ ಆ ಧ್ವನಿ ಹಿಂದೆಂದಿಗಿಂತಲೂ ಮಧುರವಾಗಿತ್ತು, ಮಸೀದಿ ಪಕ್ಕದ ಮರದಿಂದ ಹಕ್ಕಿಗಳು ಚಿಲಿಪಿಲಿಗುಟ್ಟತೊಡಗಿದವು, ಸಿಮೆಂಟಿನ ಜಾಲಿಗಳ ತೂತುಗಳಿಂದ ಕಂಬಿಗಳಂತೆ ಕಾಣುತ್ತಿದ್ದ ಅಸ್ತಮಾನದ ಬಿಸಿಲು ನಿಧಾನವಾಗಿ ಮರೆಯಾಗುತ್ತಾ ಕತ್ತಲಾಯಿತು.

         ಅದ್ದು ಉಸ್ತಾದ್ ಮೊಣಕಾಲೂರಿ ಕುಳಿತಿದ್ದವರು ಅಡ್ಡಬಿದ್ದು ಆ ಪವಿತ್ರ ಸ್ಥಳವನ್ನು ಚುಂಬಿಸಿದರು. ಚಾದರವು ಕಣ್ಣೀರಿನಿಂದ ತೊಯ್ದು ಹೋಯಿತು. ಮಗ್ರೀಬಿನ ಸೂರ್ಯ ಪಶ್ಚಿಮದಲ್ಲಿ ಅಸ್ತಮಿಸಿದ.

Puneeth Appu

ಶುಕ್ರವಾರ, ಜೂನ್ 9, 2017

ಮಂಗಳೂರಿನ ನಾಟೆಕಲ್ ನಲ್ಲಿರುವ ಸರಕಾರಿ ಮುಸ್ಲಿಂ ವಸತಿ


*ನಾನು ಕಲಿತಿದ್ದ ಹಾಗೂ ಪ್ರಸ್ತುತ ಮಂಗಳೂರಿನ ನಾಟೆಕಲ್ ನಲ್ಲಿರುವ ಸರಕಾರಿ ಮುಸ್ಲಿಂ ವಸತಿ ಶಾಲೆಯ ಬಗ್ಗೆ ಈ ಹಿಂದೆ ಒಮ್ಮೆ ಬರೆದಿದ್ದೆ‌‌. ಮುಚ್ಚುವ ಹಂತದಲ್ಲಿದ್ದ ವಸತಿ ಶಾಲೆಗೆ ಮತ್ತೆ ಹಳೆಯ ಮೆರುಗು ಬಂದಿದೆ. 100 ದಾಟದಿದ್ದ ದಾಖಲಾತಿ ಸಂಖ್ಯೆ ಈ ವರ್ಷ ಅಲ್ ಹಮ್ದುಲಿಲ್ಲಾಹ್ 140+ ಆಗಿದೆ.*

*ಮುಸ್ಲಿಂ ಸಮುದಾಯದ ಮಂದಿಯಲ್ಲಿ ಜಾಗೃತಿ ಮೂಡಿದ ಪರಿಣಾಮ ಈ ಫಲಿತಾಂಶ ಬಂದಿದೆ. ಇದಕ್ಕೆ ಒಂದು ಕಾರಣ ಹಳೆಯ ವಿದ್ಯಾರ್ಥಿಗಳ ಶ್ರಮ.*

*ಹಾಸ್ಟೆಲ್ ನ ಪರಿಸ್ಥಿತಿಯ  ಬಗ್ಗೆ ಅರಿತ ಹಳೆಯ ವಿದ್ಯಾರ್ಥಿಗಳು ಒಂದು ಬಾರಿ ಹಾಸ್ಟೆಲ್ ನಲ್ಲಿ ಸಭೆ ಸೇರಿ, ಹಳೆಯ ವಿದ್ಯಾರ್ಥಿಗಳ ಸಂಘ ರಚಿಸಿದ್ದರು. ಇದರ ಅಧ್ಯಕ್ಷರಾಗಿ ಮೊದಲ ಬ್ಯಾಚ್ ನ ವಿದ್ಯಾರ್ಥಿ ಹಾಗೂ ಪ್ರಸ್ತುತ ಯೆನೆಪೋಯ ಮೆಡಿಕಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಅನ್ವರ್ ಅಮೆಮ್ಮಾರ್ ಹಾಗೂ ಕಾರ್ಯದರ್ಶಿಯಾಗಿ ನನ್ನ ಬ್ಯಾಚ್ ನ ಗೆಳೆಯ ಹಾಗೂ ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಸಿರಾಜ್ ಕಿನ್ಯ ಆಯ್ಕೆಯಾಗಿದ್ದರು.*

*ಹಳೆ ವಿದ್ಯಾರ್ಥಿಗಳು, ಅಧ್ಯಾಪಕರು &  ಹಲವಾರು ಸಂಘ ಸಂಸ್ಥೆಗಳ ಸಹಕಾರದಿಂದ ಈ ಯಶಸ್ಸು ದೊರೆತಿದೆ. ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಹಾಗೂ ಅಲ್ಲಾಹನು ಎಲ್ಲರ ಸೇವೆಯನ್ನು ಸ್ವೀಕರಿಸಿ, ಅನುಗ್ರಹಿಸಲಿ.....ಆಮೀನ್.*

*ಶಿಕ್ಷಣ ಪ್ರೇಮಿಗಳು/ದಾನಿಗಳು/ಹಳೆಯ ವಿದ್ಯಾರ್ಥಿ ಗಳಿಂದ ಬೇಕಿದೆ ನೆರವು:*

ನಮ್ಮೆಲ್ಲರ ಪ್ರಯತ್ನ ಫಲಪ್ರದವಾಗಿದೆ ಏನೋ ನಿಜ. ಹಳೆಯ ವಿದ್ಯಾರ್ಥಿಗಳ ಸಂಘವು ಈಗಿರುವ ಹಾಸ್ಟೆಲ್ ನ ವಿದ್ಯಾರ್ಥಿಗಳಿಗೆ ಇನ್ನಷ್ಟು ಉತ್ತಮ ವಾತಾವರಣ ನಿರ್ಮಿಸಲು ಪ್ರಯತ್ನ ಮಾಡುತ್ತಿದೆ. ಜೊತೆಗೆ ಮದರಸಾ ಅಧ್ಯಾಪಕರಿಗೆ ಆರ್ಥಿಕ ವ್ಯವಸ್ಥೆ ಮಾಡಲು ಶ್ರಮಿಸುತ್ತಿದೆ. ಈಗಾಗಲೇ ಸಂಸ್ಥೆಯ ಮೇಲೆ ಪ್ರೀತಿ ಇಟ್ಟಿರುವ, ದೇಶವಿದೇಶಗಳಲ್ಲಿ ನೆಲೆಸಿರುವ ಹಲವು ಮಂದಿ ಹಳೆಯ ವಿದ್ಯಾರ್ಥಿಗಳು ತಮ್ಮ ಕೈಲಾದ ಮಟ್ಟಿಗೆ *ಆರ್ಥಿಕ ನೆರವು* ನೀಡುತ್ತಿದ್ದಾರೆ.

*ಈ ಹಾಸ್ಟೆಲ್ ನಲ್ಲಿ ಕಲಿತ ಅದೆಷ್ಟೋ ಮಂದಿ ವಿದ್ಯಾರ್ಥಿಗಳು ಇಂದು ಹಲವಾರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಎಲ್ಲರನ್ನೂ ಸಂಪರ್ಕ ಮಾಡಲು ನಮಗೆ ಸಾಧ್ಯವಾಗಿಲ್ಲ. ಪ್ರಯತ್ನ ಮುಂದುವರಿದಿದೆ. ಇದರ ಜೊತೆಗೆ ದಾನಿಗಳು, ಶಿಕ್ಷಣ ಪ್ರೇಮಿಗಳು ಈ ಸಂಸ್ಥೆಗೆ ಆರ್ಥಿಕ ನೆರವು ಅಥವಾ ಇಫ್ತಾರ್ ಕೂಟ ಆಯೋಜಿಸಲು ಸಹಕರಿಸಬಹುದು.*

*ಬಡ ಹಾಗೂ ಮಧ್ಯಮ ವರ್ಗದ ಜನರ ಮಕ್ಕಳ ಪ್ರಾರ್ಥನೆ ಸೃಷ್ಟಿಕರ್ತ ಸ್ವೀಕರಿಸಿ, ಅನುಗ್ರಹಿಸಲಿ. ಆಮೀನ್.*

*ಹನಿ ಹನಿಗೂಡಿದರೆ ಹಳ್ಳ* ಎಂಬಂತೆ ಆಸಕ್ತರು, ಸಂಘ ಸಂಸ್ಥೆಗಳ ಯಾರಾದರೂ ಇದ್ದರೆ ನಮ್ಮ ಹಳೆಯ ವಿದ್ಯಾರ್ಥಿಗಳನ್ನು ಸಂಪರ್ಕ ಮಾಡಬಹುದು ಅಥವಾ ನೇರವಾಗಿ ಜಂಟಿ ಖಾತೆಗೆ ಹಣವನ್ನು ವರ್ಗಾವಣೆ ಮಾಡಬಹುದು.

Contact:

Anwar Amemmar : 9008385666

Siraj Kinya: 9880130994

ಖಾತೆಯ ವಿವರ:

Old Students Association, Government Muslim Residential School, Natekal, Mangaluru

Bank Account Details

Name Of the Bank: Karnataka Bank

Account Type: Current Account

Name In Account: Anwar A.S & Siraj
Joint Account

Account Number: 9432000100005501

Branch: Belma, Deralakatte

IFSC Code: KARB0000943

MICR Code: 575052034

ಪ್ರೀತಿಯಿಂದ
✍🏽 *ಇರ್ಷಾದ್ ವೇಣೂರ್*😍
ಹಳೆ ವಿದ್ಯಾರ್ಥಿ
ಸರಕಾರಿ ಮುಸ್ಲಿಂ ವಸತಿ ಶಾಲೆ