ಬುಧವಾರ, ಮೇ 24, 2017

ಕುದುರೆ

*ಕುದುರೆ*

ಅದು ಮಗ್ರಿಬ್ ನ ಸಮಯ .೬೦ ವಯಸ್ಸು ಮೀರಿದ ಹಿರಿಯರೊಬ್ಬರು ಮಸೀದಿಗೆ ನಮಾಜ್ ಗಾಗಿ ಮೆಲ್ಲನೆ ನಡೆಯುತ್ತಾ ಬರ್ತಾ ಇದ್ದರು . ನನಗಿಂತ ಪ್ರಾಯದಲ್ಲಿ ಮೂರು-ನಾಲ್ಕು ವರ್ಷ ದೊಡ್ಡವರಾದ ತುಂಟ ಹುಡುಗರ ಗುಂಪೊಂದು ಬೆನ್ನು ಬಾಗಿಸಿ ನಡೆಯುತ್ತಿದ್ದ ಅವರನ್ನು "ಅಜ್ಜ ಅಜ್ಜ.. ಕುದುರೆಗೆ ರೇಟ್ ಎಷ್ಟು?" ಎಂದು ಕೇಳುತ್ತಾ ಮಿತಿ ಮೀರಿದ ತಮಾಷೆ ಮಾಡ್ತಾ ಇತ್ತು  .ಯಾವುದನ್ನೂ ಕೇಳಿಸಿಕೊಳ್ಳದೆ ಆ ವ್ರದ್ದರು ಮಸೀದಿಯೊಳಗೆ ಹೊಕ್ಕು ನಮಾಜ್ ಮಾಡಿದ ನಂತರ ಹೊರಡಲು ಅನುವಾದಾಗ "ಅಜ್ಜಾ ಅವರು ಅಷ್ಟು ತಮಾಷೆ ಮಾಡಿದ್ರು ನೀವ್ಯಾಕೆ ಜೋರು ಮಾಡಿಲ್ಲ?" ಎಂದು ಕೇಳಿದೆ.

ಅವರು ಮೆಲ್ಲನೆ ಶಾಂತವಾಗಿ 'ಆ ಮಕ್ಕಳಿಗೆ  ಕುದುರೆಯ ರೇಟ್ ಗೊತ್ತಾಗೋಕೆ ಇನ್ನು ೪೦-೫೦  ವರ್ಷ ಬೇಕು. ಅದಕ್ಕೆ ಸುಮ್ಮನಿದ್ದೆ' ಅಂದ್ರು.ಅವರ ಮಾತಿನ ತಲೆ ಬುಡ ಅರ್ಥವಾಗದ ನಾನು ಆ ದಿನದ  ಮದ್ರಸದ ಪಾಠದ  ಕಡೆಗೆ ನಡೆದೆ. ಅವರ ಮಾತಿನ ಅರ್ಥ ೧೦ ವರ್ಷದ ನಂತರ ಮನದಟ್ಟಾಗಿತ್ತು.

ಬೆನ್ನು ಬಾಗಿದ ಹಿರಿಯರನ್ನು ಕಂಡಾಗಲೆಲ್ಲ ೨೫ ವರ್ಷ ಹಿಂದಿನ ಆ ದಿನ ಮತ್ತೆ ಮನದಲ್ಲಿ ಸುಳಿದು ಹೋಗುತ್ತದೆ.

# ಉಫಾಕು#
*ಹಿರಿಯರನ್ನು ಗೌರವಿಸಿರಿ*

ಗುರುವಾರ, ಮೇ 18, 2017

ಜೀವನ

*ಸಣ್ಣಕತೆ*

ರಾತ್ರಿ ಸಮಯ ಅಂಗಡಿಯ
ಮಾಲೀಕ ಅಂಗಡಿಯನ್ನು , ಮುಚ್ಚುವ ತವಕದಲ್ಲಿ ಇದ್ದನು..
ಅಷ್ಟರಲ್ಲಿ ಒಂದು ನಾಯಿ ಅಲ್ಲಿಗೆ ಬಂದಿತು.

ಅದರ ಬಾಯಿಯಲ್ಲಿ ಒಂದು
ಪ್ಲಾಸ್ಟಿಕ್ ಚೀಲ ಇತ್ತು .. ಆ ಚೀಲದಲ್ಲಿ ಸಾಮಾನುಗಳ ಚಿಟಿ ಮತ್ತು ಹಣ ಇತ್ತು..

ಅಂಗಡಿಯವನು ಹಣವನ್ನು ತೆಗದುಕೊಂಡು ಸಾಮಾನುಗಳನ್ನು ಆ ಚೀಲದಲ್ಲಿ ತುಂಬಿದನು ನಾಯಿಯ ಬಾಯಿಯಿಂದ ಆ ಚೀಲವನ್ನು ತೆಗದುಕೊಂಡು ಹೊರಟಿತು..

ಅಂಗಡಿಯವ ಅಶ್ಚರ್ಯಚಕಿತನಾಗಿ ನಾಯಿ ಹಿಂದೆ ಹಿಂದೆ ತೆರಳಿದನು ... ಯಾಕೆಂದರೆ ನಾಯಿಗೆ ಎಷ್ಟು ತಿಳುವಳಿಕೆ ಇದೆ ಮತ್ತು ಇದರ ಮಾಲೀಕರು ಯಾರು ಎಂದು ಪರಿಶೀಲನೆ ಮಾಡಲು.!

ನಾಯಿ ಬಸ್ ಸ್ಟಾಪ್ ನಲ್ಲಿ ನಿಂತಿತ್ತು.. ಸ್ವಲ್ಪ ಸಮಯದ ನಂತರ ಬಸ್ ಬಂದಿತು.. ನಾಯಿ ಬಸ್ ಅನ್ನು ಹತ್ತಿತು.

ಕಂಡಕ್ಟರ್ ಬಂದಾಗ ತಲೆ ಮುಂದೆ ಚಾಚಿತು.ಕಂಡಕ್ಟರ್ ನಾಯಿಯ ಕೊರಳುನಲ್ಲಿ ಇರುವ ಪಟ್ಟಿಯಲ್ಲಿ ಇರುವ ವಿಳಾಸವನ್ನು ನೋಡಿ ಹಣ ತೆಗದುಕೊಂಡು ನಾಯಿಯ ಕೊರಳಲ್ಲಿ ಟಿಕೆಟ್ ಇಟ್ಟನು.

ನಾಯಿ ಇಳಿಯುವ ಜಾಗ ಬಂದಾಗ ಮುಂದಿನ ಬಾಗಿಲಿನಲ್ಲಿ ಬಂದು ಬಾಲ ಅಲ್ಲಾಡಿಸುತ್ತ ಬಸ್ ನಿಲ್ಲಿಸುವಂತೆ ಸನ್ನೆ ಮಾಡಿತು‌.

ಬಸ್ ನಿಂತ ಮೇಲೆ ಬಾಲ ಅಲ್ಲಾಡಿಸುತ್ತ  ಇಳಿದು ಹೋಗುತ್ತಿತ್ತು.

ಅಂಗಡಿಯವನಿಗೆ ಇನ್ನು ಉತ್ಸಾಹ ಹೆಚ್ಚಾಗಿತ್ತು.. ನಾಯಿ ಹಿಂದೆ , ಹಿಂದೆ ಬರುತ್ತಿದ್ದನು.‌

ನಾಯಿ ಒಂದು ಮನೆಯ ಹತ್ತಿರ
ಬಂದು ನಿಂತು ಚೀಲವನ್ನು ಕೆಳಗೆ ಇಟ್ಟು ಕಾಲಿನಿಂದ ಮೂರು ಸಲ ಬಾಗಿಲು ಬಡಿಯಿತು.

ಒಳಗಡೆಯಿಂದ ನಾಯಿಯ ಮಾಲಿಕ ಬಂದು ಕಟ್ಟಿಗೆಯಿಂದ ನಾಯಿಯನ್ನು ಹೊಡೆದನು.

ಅಂಗಡಿಯವವನು ನಾಯಿಯ ಮಾಲಿಕನಗೆ ಕೇಳಿದನು.
ನಾಯಿಯನ್ನು ಯಾಕೇ ಹೊಡೆದೆ ಎಂದು.?

ನಾಯಿಯ ಮಾಲಿಕ ಹೇಳಿದನು..

ಇದು ನನ್ನ ನಿದ್ರೆಯನ್ನು ಹಾಳು ಮಾಡಿತು..

ಹಣ , ಚೀಟಿ ಮತ್ತು ಚೀಲ ತೆಗದುಕೊಂಡ ಹೋದ ಇದು
ಕೀಲಿಯನ್ನು ಯಾಕೇ ಮರೆತು ಹೋಗಬೇಕಾಗಿತ್ತು  ಎಂದು ಬೈದನು.

#ಜೀವನದ_ಸತ್ಯವು_ಇಷ್ಟೇ

ಬಂಧು ಬಳಗಕ್ಕೆ ಮತ್ತು ಸ್ನೇಹಿತರಿಗೆ ನಾವು ಸಹಾಯ ಮಾಡುವ ದಿನಗಳಷ್ಟು ಮಾತ್ರ
ಒಳ್ಳೆಯವರು ಅಗಿ ಕಾಣುತ್ತೇವೆ.

ನಮ್ಮಿಂದ ಒಂದು ಚಿಕ್ಕ ತಪ್ಪು ಅದರು ಸಹ ಹಿಂದೆ ಮಾಡಿದ ಎಲ್ಲಾ ಸಹಾಯಗಳನ್ನು ಮರೆತು ನಮ್ಮ ಬಗ್ಗೆ ಕೆಟ್ಟದಾಗಿ ಮಾತಾನಾಡಲು ಶುರು ಮಾಡುತ್ತಾರೆ.

ಅದ್ದರಿಂದ ನಾವು ಮಾಡುವ ಕೆಲಸ ಒಳ್ಳೆಯದು ಅಗಿದ್ದರೆ
ಅದೆ ದಾರಿಯಲ್ಲಿ ಮುಂದುವರಿಯುವುದು ಉತ್ತಮ.

ನಾವು ಮಾಡುವ ಕೆಲಸಗಳು
ಜನರನ್ನು ಎಂದೆಂದಿಗೂ ಸಂತೃಪ್ತಿ ಗೊಳಿಸಲು ಸಾಧ್ಯವಿಲ್ಲ.

✍🏻✍🏻

ವಿಚ್ಛೇದನ

*ಹೆಸರು ಬೇಡ. ಊರು ಬೇಡ. ಜಾತಿ ಬೇಡ. ಕೆಳಗಿನ ಎರಡೂ ಘಟನೆಗಳನ್ನು ಗಮನವಿಟ್ಟು ಓದಿನೋಡಿ.*

1. ಆಕೆಗೆ ಮದುವೆ ಆಗಿ ನಾಲ್ಕು  ವರ್ಷವಾಯಿತು. ಎರಡು ಮಕ್ಕಳ ತಾಯಿ. ಆಕೆಯ ಪತಿ, ಮನೆಯ ಜವಾಬ್ದಾರಿಕೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಮನೆಯ ಖರ್ಚಿಗೂ ಕೊಡುತ್ತಿಲ್ಲ. ಆತ ಗಾಂಜಾದ ಗುಲಾಮ. ದುಡಿದ  ಹಣವನ್ನೆಲ್ಲಾ  ಕುಡಿತಕ್ಕೇ ಮುಗಿಸುತ್ತಾನೆ. ಕಾಸಿಲ್ಲದಾಗ  ಪತ್ನಿಯೊಂದಿಗೆ ಯಾಚುತ್ತಾನೆ, ಕೊಡದಿದ್ದಲ್ಲಿ ರೇಗುತ್ತಾನೆ.  ಜಗಳಕ್ಕಿಳಿಯುತ್ತಾನೆ. ಕೆಟ್ಟು ಹೋದ ಆತನ  ಚಾರಿತ್ರ್ಯದಿಂದಾಗಿ ಆಕೆ ರೋಸಿ ಹೋಗಿದ್ದಾಳೆ.  ಆತನನ್ನು ಸರಿದಾರಿಗೆ ತರಲು ಆಕೆ ಬಹಳಷ್ಟು ವಿಫಲ ಯತ್ನ ನಡೆಸಿದ್ದಳು. ಆತನೊಂದಿಗಿನ ಬದುಕು ಆಕೆಗೆ ಸಾಕು ಸಾಕಾಗಿದೆ. ಅಸಹ್ಯವಾಗಿದೆ. ಪತಿಯೊಂದಿಗಿನ ಪ್ರೀತಿ - ಪ್ರೇಮ ಎಲ್ಲವೂ ಸತ್ತು ಹೋಗಿದೆ. ಪೆಟ್ಟು ತಿನ್ನುವುದನ್ನೇ ಅಭ್ಯಾಸವನ್ನಾಗಿಸಿದ್ದಾಳೆ. ದುಃಖ ತಡೆಯಲಾಗದೆ, "ನನಗೆ ಗಂಡನೇ ಬೇಡ"ವೆಂದು ಹಲವು ಬಾರಿ ತವರಿಗೆ ಓಡಿದ್ದಳು. ಆದರೆ ಮನೆಯ ಹಿರಿಯರು ಸಮಾಧಾನಿಸಿ,  ತಾಳಿ ಕಟ್ಟಿದ ಮೇಲೆ ಹಾಗೆಲ್ಲ ಮಾಡಬಾರದು... ಸಾಯುವ ತನಕ ಗಂಡನೊಂದಿಗಿರಬೇಕೆಂದು ಶಾಸ್ತ್ರ  ಹೇಳಿ ವಾಪಸ್ಸು  ಕಳುಹಿಸಿದ್ದರು. ಮಡುಗಟ್ಟಿದ ದುಃಖದೊಂದಿಗೆ ಆಕೆ ಮತ್ತೆ ಆ ನರಕದ ಬದುಕಿಗೆ ತನ್ನನ್ನು ಅರ್ಪಿಸುತ್ತಾಳೆ.*

*2. ಆತನಿಗೆ ಮದುವೆ ಆಗಿ ಎರಡು ವರ್ಷವಾಯಿತು. ಆಕೆಯೊಂದಿಗಿನ ದಾಂಪತ್ಯ ಬದುಕು ಆತನಿಗೆ ಅಸಹ್ಯ ಮೂಡಿಸಿದೆ. ಪತಿಯ ಅನುಸರಣೆ ಇಲ್ಲದ ಆಕೆಯ ಸೊಕ್ಕು - ವರ್ತನೆ, ದಾಂಪತ್ಯದ ಮನಶ್ಯಾಂತಿ ಮತ್ತು  ಸೌಂದರ್ಯವನ್ನು  ಹದಗೆಡಿಸಿದೆ. ದೂರದ ನೋಟಕ್ಕೆ ದಂಪತಿಗಳಂತಿದ್ದರೂ, ಅಲ್ಲಿ ಪರಸ್ಪರ ಪ್ರೀತಿ-ಪ್ರೇಮ, ಆಕರ್ಷಣೆ, ಅನುಕಂಪ ಯಾವುದೂ ಉಳಿದಿಲ್ಲ. ಹಲವು ಬಾರಿ ಕುಟುಂಬದ ಹಿರಿಯರ ಸಮ್ಮುಖದಲ್ಲಿ ಹಿತೋಪದೇಶ ನಡೆದರೂ ಆಕೆಯ ಮದ    ಇಳಿಯಲಿಲ್ಲ. ಆಕೆ ಹೆಚ್ಚಿನ ಸಮಯವನ್ನು ವಾಟ್ಸಪ್, ಫೇಸ್ಬುಕ್ ನ ಚಾಟಿಂಗ್ ನಲ್ಲೇ ಕಳೆಯುತ್ತಾಳೆ. ಆತನ ಸಂತಸಗಳೂ ನಶಿಸುತ್ತಿವೆ. ಅಂದರೆ ಪತಿ-ಪತ್ನಿಯರೆಂಬ ನೆಲೆಯಲ್ಲಿ ಇರಬೇಕಾದ ಯಾವ ಸಂಬಂಧಗಳೂ ಅವರ ಮಧ್ಯೆ ಉಳಿದಿಲ್ಲ.*

👉🏿 *ಮೇಲಿನ ಎರಡು ಪ್ರತ್ಯೇಕ ಘಟನೆಗಳನ್ನು ವಸ್ತುನಿಷ್ಟವಾಗಿ ನೀವೇ ಅಭ್ಯಸಿಸಿ!  ಪರಿಹಾರವೇನು?*

*ಸಾಯುವ ತನಕ ದಾಂಪತ್ಯದ ಮುಖವಾಡ ಧರಿಸಿ ನರಕ ಸದ್ರಶವಾಗಿ ಅವರು ಬದುಕಬೇಕಾ?  ನೆನಪಿಡಿ!  ಯಾರಿಗೂ ರಗಾಲೆ ಬೇಡವೆಂದು, ಅವರು  ಆತ್ಮಹತ್ಯೆಯ ಹಾದಿ ಹಿಡಿದರೆ, ಅದು ಫೋರ ಅಪರಾಧ ಮತ್ತು ಮಹಾ ಪಾಪವಾಗಿದೆ. ಅದಕ್ಕೆ ಅನುವು ಮಾಡಿಕೊಡುವ ನಮ್ಮಂತಹ ಮೂಕ ಸಾಕ್ಷಿಗಳೂ ದೇವನ ಶಾಪಕ್ಕೆ ಅರ್ಹರು.*
👉🏿 *ಹಾಗಾದರೆ, ಹೊಂದಾಣಿಕೆಯ ಯಾವ ಸಾಧ್ಯತೆಯೂ ಕಾಣದಾಗ ಪರಿಹಾರವೇನು? ಅವರಿಗೂ ಆಸೆ ಕನಸುಗಳಿಲ್ಲವೇ? ಬದುಕುವ ಹಂಬಲವಿಲ್ಲವೇ? ಹೌದು, ವಿಚ್ಛೇದನವೇ ಸೂಕ್ತ ಪರಿಹಾರವೆಂದು ಎಲ್ಲರೂ ಒಪ್ಪುತ್ತಾರೆ. ನೀವೂ ಒಪ್ಪುತ್ತೀರಿ! ಅದು ಸರಿ ಕೂಡಾ!*

👉🏿 *"ವಿಚ್ಛೇದನ" ಎಂಬ ಕನ್ನಡ ಪದವನ್ನೇ  ಅರಬಿಯಲ್ಲಿ "ತಲಾಕ್" ಅನ್ನುತ್ತಾರೆ. ಆದರೆ, ಇಸ್ಲಾಮಿನಲ್ಲಿ ತಲಾಕ್ ಗೆ ಮೊದಲು ಪರಸ್ಪರ ಹಿತೋಪದೇಶ, ಚರ್ಚೆ, ಕುಟುಂಬದ ಹಿರಿಯರಿಂದ ಆಪ್ತ ಸಮಾಲೋಚನೆ ನಡೆಯಲೇಬೇಕು. ಒಂದೇ ಬಾರಿಗೆ ಏಕ ಕಾಲದಲ್ಲಿ ಮೂರು ತಲಾಕ್ ಹೇಳುವಂತಿಲ್ಲ. ಸಮಯಾವಕಾಶದ ನಿಬಂಧನೆಯಿದೆ.*

👉🏿 *ಇಸ್ಲಾಮಿನಲ್ಲಿ ಮೇಲಿನ ಇಬ್ಬರ ಸಮಸ್ಯೆಗಳಿಗೂ ಅತ್ಯುತ್ತಮ ಪರಿಹಾರವಿದೆ.  ಮೊದಲನೆಯದಾಗಿ, ಅಂತಹ  ಸಮಸ್ಯೆಗಳು ಉಂಟಾಗದಂತೆ ಮದುವೆಗೆ ಮೊದಲೇ ಪಾಲಿಸ ಬೇಕಾದ ಮತ್ತು ಗಮನಿಸ ಬೇಕಾದ ಹಲವು ಎಚ್ಚರಿಕೆಗಳನ್ನು ಸೂಚಿಸುತ್ತದೆ. ಅಚಾನಕ್  ಎಚ್ಚರಿಕೆ ವಹಿಸಿಯೂ ಮೇಲಿನಂತೆ ಸಮಸ್ಯೆಗಳು ಸಂಭವಿಸಿದರೆ, ಇಬ್ಬರಿಗೂ ವಿಮೋಚನೆಯ ಮತ್ತು ಬದುಕುವ ಮಾರ್ಗವಿದೆ. ಹೊಸ ದಾಂಪತ್ಯಕ್ಕೆ ಹೆಜ್ಜೆಯನ್ನಿಡಲು ಸರಳ ಅವಕಾಶವಿದೆ.*
👉🏿 *ಮೇಲಿನ ಪ್ರಥಮ ಫಟನೆಯಲ್ಲಿನ ಮಹಿಳೆಗೆ ಇಸ್ಲಾಮೀ ಶರೀಅತ್  ನಲ್ಲಿ  ವಿಚ್ಛೇದನದ ಹಾದಿ ಪುರುಷನಿಗಿಂತ ಅತಿ ಸುಲಭ ಮತ್ತು ಸರಳ.*
*ಅದನ್ನು "ಖುಲಾ" ಅನ್ನುತ್ತಾರೆ. ಇಸ್ಲಾಮ್ ಸ್ತ್ರೀಗೆ ಕೊಟ್ಟ ಈ  ಅತ್ಯುತ್ತಮ ಅವಕಾಶವನ್ನು ಮಾಧ್ಯಮಗಳು,  ವಿಚಾರವಾದಿಗಳೆಂದೆನಿಸಿಕೊಂಡವರು  ಚರ್ಚಿಸುವುದಿಲ್ಲ. ಕೊಂಡಾಡುವುದಿಲ್ಲ. ಬದಲಾಗಿ ಪಕ್ಷಪಾತ ಪೀಡಿತರಂತೆ,  "ತಲಾಕ್" ಎಂಬ ಪದವನ್ನೇ ಭೀಕರವಾಗಿ ಚಿತ್ರೀಕರಿಸಿ ಇಸ್ಲಾಮಿನ ಬಾಹ್ಯ ಸೌಂದರ್ಯವನ್ನು ಕೆಡಿಸಲು ಮತ್ತೆಮತ್ತೆ ಪ್ರಯತ್ನಿಸುತ್ತಾರೆ. ಆದರೆ ಇಸ್ಲಾಮಿನ ಆದರ್ಶಗಳು ಜೀವಂತವಿದೆ. ಅದನ್ನು ಶುದ್ಧ ಮನಸ್ಸಿನಿಂದ ವಸ್ತುನಿಷ್ಠವಾಗಿ ಅಭ್ಯಸಿಸುವುದು ನಮ್ಮೆಲ್ಲರ ಭಾಧ್ಯತೆಯಾಗಿದೆ. ಆ ಮೂಲಕ ಅಪನಂಬಿಕೆಯ, ಸಂಶಯದ, ನಿಗೂಢತೆಯ ಗೋಡೆಯನ್ನು ಸರಿಸೋಣ! ನೀವೇನಂತೀರಿ?*

ಪ್ರೀತಿಯಿಂದ🌹🌹*

ಅಬೂ ಅಬ್ದುಲ್ಲಾ, ಮಂಗಳೂರು.*

    

ಬುಧವಾರ, ಮೇ 17, 2017

ಚಾಣಕ್ಯ

🍁🍁🍁🍁🍁🍁🍁🍁🍁

*ಪ್ರಿಯರೇ,*

*ಯಾರೋ ಚಾಣಕ್ಯನನ್ನು ಕೇಳಿದರಂತೆ.*

1. ವಿಷ ಎಂದರೇನು?
ಆತ ಬಹು ಸುಂದರ ಉತ್ತರ ನೀಡಿದ - ನಮ್ಮ ಅವಶ್ಯಕತೆಗಿಂತ ಏನು ಹೆಚ್ಚಾದರೂ ಅದು ವಿಷ. ಅದು ಅಧಿಕಾರವಿರಬಹುದು, ಐಶ್ವರ್ಯ, ಹಸಿವು, ದುರಾಸೆ, ಸೋಮಾರಿತನವಿರಬಹುದು, ಪ್ರೇಮ, ಆಕಾಂಕ್ಷೆ, ದ್ವೇಷ ಅಥವಾ ಯಾವುದಾದರೂ ಇರಬಹುದು ...

2. ಭಯ ಎಂದರೇನು?
ಅನಿಶ್ಚಿತತೆಯನ್ನು ಒಪ್ಪದಿರುವುದು. ಆ ಅನಿಶ್ಚಿತತೆಯನ್ನು ನಾವು ಒಪ್ಪಿಕೊಂಡರೆ ಅದು ಸಾಹಸ ಆಗುತ್ತದೆ..!

3. ಅಸೂಯೆ ಎಂದರೇನು?
ಇನ್ನೊಬ್ಬರಲ್ಲಿನ ಒಳ್ಳೆಯತನವನ್ನು ಒಪ್ಪದಿರುವುದು. ಆ ಒಳ್ಳೆಯತನವನ್ನು ಒಪ್ಪಿಕೊಂಡರೆ ಅದು ಪ್ರೇರಣೆ ಆಗುತ್ತದೆ.

4. ಕೋಪ ಎಂದರೇನು?
ನಮ್ಮ ನಿಯಂತ್ರಣದಾಚೆಯ ವಿಷಯಗಳನ್ನು ಒಪ್ಪದಿರುವುದು. ಅವನ್ನು ಒಪ್ಪಿಕೊಂಡರೆ ಅದು ಸಹಿಷ್ಣುತೆ ಆಗುತ್ತದೆ.

5. ದ್ವೇಷ ಎಂದರೇನು?
ಒಬ್ಬ ಮನುಷ್ಯನನ್ನು ಅವನಿರುವಂತೆಯೇ ಒಪ್ಪದಿರುವುದು . ಆ ಮನುಷ್ಯನನ್ನು ಬೇಷರತ್ತಾಗಿ ಒಪ್ಪಿಕೊಂಡರೆ ಅದು ಪ್ರೀತಿ ಆಗುತ್ತದೆ.

ಎಲ್ಲವೂ ಒಪ್ಪಿಕೊಳ್ಳುವಿಕೆಗೆ ಸಂಬಂಧಿಸಿದ್ದು. ವಿರೋಧಿಸುವಿಕೆಯು ಒತ್ತಡವನ್ನು ಸೃಷ್ಟಿಸುತ್ತದೆ. ಒಪ್ಪಿಕೊಳ್ಳುವಿಕೆಯು ಒತ್ತಡವನ್ನು ದೂರ ಮಾಡುತ್ತದೆ.
ಶಾಂತವಾಗಿ ಆಲೋಚಿಸಿ ನೋಡಿ.

*ಯಾವಾಗಲೂ  ಕೆಳಗಿನ  ಬ್ರಾಂಡ್ ವಸ್ತುಗಳನ್ನೇ ಬಳಸಿ*

1. ತುಟಿಗಳಿಗೆ "ಸತ್ಯ "
2. ಶಬ್ದಗಳಿಗೆ "ಪ್ರಾರ್ಥನೆ "
3. ಕಣ್ಣಿಗಳಿಗೆ "ದಯೆ"
4. ಕೈಗಳಿಗೆ "ದಾನ"
5. ಹೃದಯಕ್ಕಾಗಿ "ಪ್ರೇಮ"
6. ಮುಖಕ್ಕೆ "ನಗೆ"
7. ದೊಡ್ಡವನಾಗಲು "ಕ್ಷಮೆ"

ಮಂಗಳವಾರ, ಮೇ 16, 2017

ಟಿವಿ ನ್ಯೂಸ್ ಚಾನಲ್ ಗಳು

ಟಿವಿ ನ್ಯೂಸ್ ಚಾನಲ್ ಗಳು ಪ್ರಸಾರ ಮಾಡುವ ಕಾರ್ಯಕ್ರಮಗಳ ಬಗೆಗೆ ತುಂಬಾ ತುಂಬಾ ಹೆಮ್ಮೆ ಇದೆ. ಏಕೆಂದರೆ,
ಸಿನಿಮಾ ತಾರೆಯರ, ಶ್ರೀಮಂತ ರಾಜಕಾರಣಿಗಳ ಭ್ರಷ್ಟ ಅಧಿಕಾರಿಗಳ ಆಡಂಬರದ ವೈಭವೋಪೇತ ಮದುವೆಗಳನ್ನು ಪೆದ್ದು ವೀಕ್ಷಕರಿಗೆ ದೇವಲೋಕದಂತೆ ತೋರಿಸುವ ಬ್ರೋಕರ್ ಗಳಾಗಿರುವುದಕ್ಕೆ.
ಕೊಲೆ ಅತ್ಯಾಚಾರ ಅಪಘಾತಗಳನ್ನು ಕೇಳಲು ಓದಲು ಹಿಂಸೆ ಪಡುತ್ತಿದ್ದ ಮೃದು ಮನಸ್ಸುಗಳಿಗೆ ರಕ್ತದ ಭೀಕರತೆಯ ಸಮೇತ ಸಂಗೀತ ಧ್ವನಿ ಸೇರಿಸಿ ಆಕರ್ಷಕವಾಗಿ ಪ್ರಸಾರ ಮಾಡುತ್ತಿರುವುದಕ್ಕೆ.
ಹಿಂದೆ ಮನೆಯ ಗಲಾಟೆಗಳನ್ನು ಆದಷ್ಟೂ ಗೌಪ್ಯವಾಗಿಟ್ಟು ಕೆಲ ಸಮಯದ ನಂತರ ಸಹಜ ಸ್ಥಿತಿಗೆ ಬರಬಹುದಾಗಿದ್ದ ಘಟನೆಗಳನ್ನು ಸಿನಿಮಾದ ಕ್ಯಾಬರೆ ದೃಶ್ಯದಂತೆ ಸಾರ್ವಜನಿಕವಾಗಿ ಬಹಿರಂಗಗೊಳಿಸಿ ಅವರಿಬ್ಬರು ಇನ್ನೆಂದೂ ಒಟ್ಟಾಗದಂತೆ ಮಾಡುತ್ತಿರುವ ಘನ ಕಾರ್ಯಕ್ಕಾಗಿ.
ಮಾನವೀಯತೆ - ಸೌಜನ್ಯತೆ ಇರಲಿ, ಕನಿಷ್ಠ ಸಾಮಾನ್ಯ ಜ್ಞಾನವೂ ಇಲ್ಲದ ರಾಕ್ಷಸ ಗುಣದ ರಾಜಕಾರಣಿಗಳ ತಿಕ್ಕಲು ಹೇಳಿಕೆಗಳನ್ನು ರಾಜ್ಯದ ಬಹುದೊಡ್ಡ ಸಮಸ್ಯೆ ಎಂಬಂತೆ ಬಿಂಬಿಸಿ ಅದನ್ನು ವಾರಗಟ್ಟಲೆ ವಿಶ್ಲೇಷಿಸುವ ರೀತಿಗೆ....
ಥೂ ..ನಿಮ್ಮ......
ಪತ್ರಕರ್ತರಯ್ಯ ನೀವು ಪತ್ರಕರ್ತರು.
ಹೆಚ್ಚು ಕಡಿಮೆ ಸತ್ಯ ಹರಿಶ್ಚಂದ್ರನಷ್ಟು ಪ್ರಾಮಾಣಿಕವಾಗಿರಬೇಕಾಗಿರುವವರು. ಎಷ್ಟೇ ಕಷ್ಟವಾದರೂ ಸತ್ಯವನ್ನಲ್ಲದೆ ಬೇರೇನನ್ನೂ ಹೇಳಬಾರದವರು.
ಸದ್ಯದ ಪರಿಸ್ಥಿತಿಯಲ್ಲಿ ಇಡೀ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸಿ ರೈತರು ಮಹಿಳೆಯರು ಕಾರ್ಮಿಕರು ಧಮನಿತರ ಜೀವನಮಟ್ಟ ಸುಧಾರಿಸಲು ಹೊಸ ಹೊಸ ಚಿಂತನೆಗಳನ್ನೊಳಗೊಂಡ ಕಾರ್ಯಕ್ರಮಗಳನ್ನು ರೂಪಿಸಿ ಸರ್ಕಾರದ ಗಮನ ಸೆಳೆಯಬೇಕಾಗಿರುವವರು. ಇದರ ಅನುಷ್ಠಾನಕ್ಕೆ ಹಕ್ಕೊತ್ತಾಯ ಮಾಡಬೇಕಾಗಿರುವವರು.
ಅಯ್ಯಾ ಮೂರ್ಖರೆ,
ಮದುವೆ ಯಾರದೇ ಆಗಿರಲಿ ಅದು ತೀರಾ ಖಾಸಗಿ ಕಾರ್ಯಕ್ರಮವಯ್ಯ. ಕುತೂಹಲ ಇರುವ ಜನರು ಸಮಯವಿದ್ದರೆ ಹೋಗಿ ನೋಡಲಿ. ನಿಮ್ಮ ಕೆಲಸ ಅದಲ್ಲರಯ್ಯ.
ಭ್ರಷ್ಟರನ್ನು ಕಳ್ಳರನ್ನು ವಂಚಕರನ್ನು ಕೊಲೆಗಡುಗರನ್ನು ಅತ್ಯಾಚಾರಿಗಳನ್ನು ಹಿಡಿಯಲು ಪೋಲೀಸರಿದ್ದಾರೆ. ಶಿಕ್ಷಿಸಲು ನ್ಯಾಯಾಲಯವಿದೆ.ಅದೊಂದು ಸಣ್ಣ ಸುದ್ದಿಯಯ್ಯ. ಅದಕ್ಕಿಂತ ಮುಖ್ಯ ಆ ರೀತಿಯ ಕೆಟ್ಟ ಚಟುವಟಿಕೆಗಳು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚಿಂತನೆ ನಡೆಸುವ ಕಾರ್ಯಕ್ರಮಗಳನ್ನು ರೂಪಿಸಿರಯ್ಯ.
ಪತ್ರಕರ್ತರೆಂದರೆ ಜನಸಾಮಾನ್ಯರಲ್ಲಿ ಬುದ್ದಿವಂತರೆಂಬ ಅಭಿಪ್ರಾಯವಿದೆಯಯ್ಯ.ಅದನ್ನು ಹಾಳು ಮಾಡಬೇಡಿ. ಈ ಮಾಧ್ಯಮಕ್ಕೆ ಮತ್ತೊಂದು ಪರ್ಯಾಯ ಇಲ್ಲವಯ್ಯ. ಆ ಬದ್ದತೆ ಪ್ರಾಮಾಣಿಕತೆ ಇಲ್ಲದಿದ್ದರೆ ದಯವಿಟ್ಟು ಬೇರೆ ಉದ್ಯೋಗ ನೋಡಿಕೊಳ್ಳಿರಯ್ಯ.
ಬೇಗ ಎಚ್ಚೆತ್ತುಕೊಳ್ಳಿ.

ಧನ್ಯವಾದಗಳು.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಇದು ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.

ಸೋಮವಾರ, ಮೇ 15, 2017

ಮುಸ್ಲಿಮ್ ಸಮುದಾಯದ ಕ್ಷಮೆಯಾಚಿಸುತ್ತಾ....*

*ಮುಸ್ಲಿಮ್ ಸಮುದಾಯದ ಕ್ಷಮೆಯಾಚಿಸುತ್ತಾ....*  🙋‍♂

👉🏿 *ಹೇಗಾದರೂ ಮಗಳನ್ನು ಮದುವೆ ಮಾಡಿಸಿ ಜವಾಬ್ದಾರಿಯಿಂದ ಮುಕ್ತನಾಗಲು ಹಂಬಲಿಸುವ ತಂದೆ, ಅದಕ್ಕಾಗಿ ಮನೆ-ಮಠ ಮಾರುವುದನ್ನೂ ಬಡ್ಡಿಗೆ ಸಾಲ ಪಡೆದು ಆರ್ಥಿಕವಾಗಿ ದಿವಾಳಿಯಾಗುತ್ತಿರುವುದನ್ನೂ ನಾವು ಕಾಣುತ್ತಿದ್ದೇವೆ. ವಯಸ್ಸಿಗೆ ಬಂದ ಮಗಳ ಮದುವೆಗಾಗಿ ಮಸೀದಿಯ ಆಡಳಿತ ಕಮಿಟಿ ನೀಡಿದ ದೃಢಪತ್ರವನ್ನು ಕೈಯಲ್ಲಿ ಹಿಡಿದು ಮನೆ, ಕಛೇರಿ, ಬಝಾರ್, ಅಂಗಡಿ ಬಾಗಿಲಲ್ಲಿ ಬೇಡುವ ಹೆತ್ತವರು ಒಂದೆಡೆಯಾದರೆ, ಮದುವೆಯನ್ನೇ ತನ್ನ ಪ್ರತಿಷ್ಠೆಯ ಪ್ರದರ್ಶನವೆಂದು ತಿಳಿದು, ಲಕ್ಷಾಂತರ ಹಣವನ್ನು ನೀರಿನಂತೆ ಚೆಲ್ಲಿ ಅಹಂಕಾರದಿಂದ ಬೀಗುವವರು ಮತ್ತೊಂದೆಡೆ.*

👉🏿 *ಕೆಲವು ಮದುವೆ ಸಮಾರಂಭಗಳು ತಿಂಗಳುಗಟ್ಟಲೆ ಮುಂದುವರಿಯುತ್ತದೆ. ಮೊದಲು ವರನ ಸಹೋದರಿಯರು ಬಂದು ಹೆಣ್ಣು ನೋಡುವುದು, ನಂತರ ವರ ತನ್ನ ತಾಯಿಯೊಂದಿಗೆ ಬಂದು ಹೆಣ್ಣು ನೋಡುವುದು, ಬಳಿಕ ವರನ ಕುಟುಂಬದ 40-50 ಮಂದಿ ಹೋಗಿ ಹೆಣ್ಣು ನೋಡುವುದು, ನಿಶ್ಚಿತಾರ್ಥ(ವರಪ್ಪ್), ಮೆಹಂದಿ, ಕೋಲಿಚೋರು, ಹಳದಿ, ತಾಲ, ಚಮ್ಮನ, ಹಾಡು-ಕುಣಿತಗಳು, ಮದುವೆಯ ಭೂರಿ ಭೋಜನಗಳು, ಮದುವೆಯ ಬಳಿಕದ ಕೆಲವು ಕಾರ್ಯಗಳು... ಹೀಗೆ ಪೈಪೋಟಿಯ ರೀತಿಯಲ್ಲಿ ನಡೆಯುತ್ತಿರುವ ದುಂದುವೆಚ್ಚಗಳು, ಅನಗತ್ಯ ಖರ್ಚುಗಳು ಸಮುದಾಯಕ್ಕೆ ಶಾಪವಾಗಿದೆ.*

👉🏿 *ನಮ್ಮಲ್ಲಿರುವ ಹಣದ ಅಹಂ ಎಷ್ಟು ಎತ್ತರದಲ್ಲಿದೆಯೆಂದರೆ, ಪ್ರತಿಯೊಂದನ್ನು ಪ್ರತ್ಯೇಕವಾಗಿ ದುಬಾರಿ ಬಾಡಿಗೆಯ ಹಾಲ್‍ನಲ್ಲೇ ನಡೆಸುತ್ತೇವೆ. ತಿಂದವರಿಗೇ ಮತ್ತೆ ಮತ್ತೆ ತಿನ್ನಿಸುವುದು! ಮಾತ್ರವಲ್ಲ,*

👉🏿 *ಕ್ಷಮಿಸಿ!! ನಮಗೇನಾಯಿತೋ ಗೊತ್ತಿಲ್ಲ! ಯಾರ್ಯಾರದೋ ಕಲ್ಯಾಣ ಮಂಟಪವನ್ನು ನಮ್ಮ ಹಣದಿಂದ ಬಣ್ಣ ಬಣ್ಣದ ವಿದ್ಯುದ್ದೀಪಗಳಿಂದ ಅಲಂಕರಿಸುತ್ತೇವೆ. ಇಂದು ಮುಸ್ಲಿಮೇತರ ಸಹೋದರರು ನಮಗಾಗಿಯೇ ಮದುವೆ ಹಾಲ್‍ಗಳನ್ನು ನಿರ್ಮಿಸುತ್ತಿದ್ದಾರೆ. ಆದರೆ ಅವರ ಮದುವೆಗಳು ಚರ್ಚ್ ಮತ್ತು ದೇವಸ್ಥಾನಗಳಲ್ಲಿ ನಡೆಯುತ್ತವೆ. ಹಾಲ್‍ನಲ್ಲಿ ಸೇರುವ ಜನರಾಶಿಯಿಂದ ರಸ್ತೆ ತಡೆಗಳಾಗುತ್ತಿವೆ. “ಖಂಡಿತವಾಗಿಯೂ ನಿಮಗೆ ನೀಡಿದ ಅನುಗ್ರಹಗಳ ಬಗ್ಗೆ ಪ್ರಶ್ನಿಸಲಾಗುವುದು.”[ಪವಿತ್ರ ಕುರ್‍ಆನ್]*

👉🏿 *ಎಷ್ಟೊಂದು ನೋವಿನ ಸಂಗತಿ! ಇಸ್ಲಾಮನ್ನು ಹೊತ್ತು ನಡೆಯುವವರೂ ಮತ್ತು ಸಮುದಾಯವನ್ನು ತಿದ್ದಿ ಸರಿಪಡಿಸಿ ಮಾದರಿಗಳಾಗಬೇಕಾದವರೂ, ತಮ್ಮ ಸರದಿ ಬಂದಾಗ ಸಮಾಜದ ರೀತಿ-ರಿವಾಜು-ಸಂಪ್ರದಾಯಗಳ ಮುಂದೆ ಮಂಡಿಯೂರುತ್ತಾರೆ. ಅಂದರೆ ಬಚ್ಚಲು ಮನೆಯಲ್ಲಿ ಎಲ್ಲರೂ ಬೆತ್ತಲೆ. ಇದ್ದವರು ಇದ್ದ ಹಾಗೆ ಖರ್ಚುಮಾಡಿದರೆ ತಪ್ಪೇನೆಂದು ಸಮರ್ಥಿಸುತ್ತಾರೆ. ಅಂದರೆ ಸಮಾಜಕ್ಕೆ ಮಾದರಿಗಳಾಗಬೇಕಾದವರೂ ಮಹಾಮಾರಿಗಳಾಗುತ್ತಿದ್ದಾರೆ. ಸರಳ ಸಾಮೂಹಿಕ ವಿವಾಹದ ವೇದಿಕೆಯಲ್ಲಿ ಭಾಷಣ ಬಿಗಿಯುವವರ ಮದುವೆಗಳು ಅದ್ಧೂರಿ-ಬೂಟಾಟಿಕೆ ಆಡಂಭರಗಳಿಂದ ಕೂಡಿರುತ್ತದೆ.*

👉🏿 *ಒಮ್ಮೆ ಓದಿ ಬಿಸಾಡುವ ಆಮಂತ್ರಣ ಪತ್ರಿಕೆಗೆ ಇಷ್ಟು ಖರ್ಚು ಏಕೆ? ಸಿಂಪಲ್ ಸಾಲದೇ? ಎಂದು ಕೇಳಿದವನ ಮಗಳ ಆಮಂತ್ರಣ ಪತ್ರಿಕೆಯನ್ನು ನೋಡಿ ತಬ್ಬಿಬ್ಬಾದೆ. ಒಂದೇ ಸಂಘಟನೆಯಲ್ಲಿದ್ದೂ ಒಂದೇ ಆದರ್ಶಕ್ಕಾಗಿ ಕೆಲಸ ಮಾಡುವ ಸಹೋದರರ ಅಥವಾ ಅವರ ಮಕ್ಕಳ ಮದುವೆಗಳು ವೈರುಧ್ಯಗಳಿಂದ ಕೂಡಿರುತ್ತದೆ. ನಿಜವಾಗಿ ಇದ್ದವರು, ಇಲ್ಲದವರಿಗೆ ಮಾದರಿಗಳಾಗಬೇಕಿತ್ತು. ತನ್ನ ಸಹ ಕಾರ್ಯಕರ್ತರ/ಮಿತ್ರರ ಆರ್ಥಿಕ ದುಸ್ಥಿತಿಯನ್ನು ಕಂಡು ಮರುಗದ ಕ್ರೂರ ಹೃದಯ ನಮ್ಮದು.*

👉🏿 *ನಾವು ಅಬ್ದುರ್ರಹ್ಮಾನ್ ಬಿನ್ ಔಫ್‍ರ(ರ) ಬಗ್ಗೆ ಬಹಳಷ್ಟು ಮಾತಾಡುತ್ತೇವೆ. ಪ್ರವಾದಿವರ್ಯರನ್ನೂ(ಸ) ಆಮಂತ್ರಿಸದ ಅವರ ಸರಳ ಮದುವೆಯನ್ನು ಕೊಂಡಾಡುತ್ತೇವೆ. ಆದರೆ ನಮ್ಮ ಹತ್ತಿರದ ಮಿತ್ರರು ಅಥವಾ ಕುಟುಂಬಿಕರು ನಮ್ಮನ್ನು ಆಮಂತ್ರಿಸದಿದ್ದಲ್ಲಿ ಮುನಿಸಿಕೊಳ್ಳುತ್ತೇವೆ. ಆಮಂತ್ರಣ ನೀಡದ ಕಾರಣಕ್ಕಾಗಿ ಪದೇ ಪದೇ ಅವರನ್ನು ಚುಚ್ಚುತ್ತೇವೆ. ಕಂಡ ಕಂಡವರಲ್ಲಿ ಹೇಳುತ್ತೇವೆ. ಏಕೆಂದರೆ ನಮ್ಮಲ್ಲಿ ಕೆಲವರಿಗೆ ತಿನ್ನುವುದೆಂದರೆ ತುಂಬಾ ಖುಷಿ! “ಆಮಂತ್ರಣವನ್ನು ತಿರಸ್ಕರಿಸಬಾರದೆಂಬ”  ಪ್ರವಾದಿ ವಚನಗಳಿಂದ ಸಮರ್ಥಿಸುತ್ತೇವೆ.*

👉🏿 *ಸರಿ! ಆದರೆ ಆಮಂತ್ರಣವನ್ನು ಸ್ವೀಕರಿಸುವಾಗ ಅಲ್ಲಿ ಇಸ್ಲಾಮಿನ ಆಶಯ ಆದರ್ಶಗಳನ್ನು ಎಷ್ಟು ಪಾಲಿಸಲಾಗುತ್ತದೆ ಎಂಬುದರ ಬಗ್ಗೆ ನಮಗೆ ಯಾವ ದುಃಖವೂ ಬೇಸರವೂ ಇಲ್ಲ.*
👉🏿 *ಇಸ್ಲಾಮಿನ ದೃಷ್ಟಿಯಲ್ಲಿ ಮದುವೆ ಇಬಾದತ್ ಆಗಿದೆ ಮತ್ತು ಪ್ರವಾದಿ ಚರ್ಯೆಯಾಗಿದೆ. ಮದುವೆಯಾದವನು ದೀನಿನ ಅರ್ಧಭಾಗವನ್ನು ಪೂರ್ತಿಗೊಳಿಸಿದಂತೆ. ಆದ್ದರಿಂದ ಇಸ್ಲಾಮಿನಲ್ಲಿ ಮದುವೆಗೆ ಬಹಳ ಮಹತ್ವವಿದೆ, ರೀತಿನೀತಿಗಳಿವೆ. ಅದು ಸರಳವಾಗಿರಬೇಕೆಂದೂ ಅದರಿಂದ ಯಾರಿಗೂ ತೊಂದರೆಯಾಗಬಾರದೆಂದು ಇಸ್ಲಾಮ್ ಬಯಸುತ್ತದೆ. "ತೀರಾ ಕಡಿಮೆ ಪರಿಶ್ರಮವನ್ನು ಒಳಗೊಂಡ ನಿಖಾಹ್‍ನಲ್ಲಿ ನಿಮಗೆ ಬರ್ಕತ್ ಇದೆ." (ಹದೀಸ್)*

👉🏿 *ವಿವಾಹದ ವಿಷಯದಲ್ಲಿ ವಧು-ವರರಿಗೆ ಪರಸ್ಪರ ನೋಡಲಿಕ್ಕಿರುವ ನಿಜವಾದ ವಸ್ತು ಧರ್ಮನಿಷ್ಠೆಯಾಗಿದೆ ಎಂದು ಪ್ರವಾದಿ(ಸ)  ಮುಸ್ಲಿಮ್ ಸಮುದಾಯಕ್ಕೆ ಉಪದೇಶಿಸಿದ್ದಾರೆ. ಧರ್ಮನಿಷ್ಠೆಯನ್ನು ಕಡೆಗಣಿಸಿ ಕೇವಲ ಹಣ ಮತ್ತು ಸೌಂದರ್ಯವನ್ನು ವಿವಾಹವಾಗುವುದರ ದುಷ್ಪರಿಣಾಮವನ್ನು ಎಚ್ಚರಿಸಿದ್ದೂ ಹದೀಸ್‍ನ ಗ್ರಂಥಗಳಲ್ಲಿದೆ.*
👉🏿 *ಪ್ರವಾದಿಯವರ(ಸ) ಮಾತನ್ನು ಕೇಳದ ಕಾರಣ ಮುಸ್ಲಿಮ್ ಸಮುದಾಯವು ಎಂತಹ ಗೊಂದಲ-ಸಮಸ್ಯೆ-ಅಪಮಾನಕ್ಕೆ ಸಿಲುಕಿದೆಯೆಂಬುದನ್ನು ನಾವೆಲ್ಲ ಕಾಣುತ್ತಿದ್ದೇವೆ.*
👉🏿 *ಇಂದು ನಮ್ಮ ಮದುವೆಗಳು ಸಮಾಜಕ್ಕೆ ಶಾಪಗಳಾಗುತ್ತಿವೆ. ನಾವೆಲ್ಲ ಅದರ ಮೂಕ ಸಾಕ್ಷಿಗಳು. ಕಣ್ಣಿದ್ದೂ ಕುರುಡರಂತೆ. ನಮ್ಮ ಬಾಯಿಗೆ ಬೀಗ ಜಡಿಯಲಾಗಿದೆ. ಮನಸ್ಸುಗಳಿಗೆ ಅಂಧಕಾರ ಕವಿದಿದೆ...*
👉🏿 *ಆದ್ದರಿಂದ ಈ ಮೇಲಿನ ವಿಷಯಗಳು ನಮ್ಮ ಕುಟುಂಬಗಳಲ್ಲಿ ಚರ್ಚೆಯಾಗಲಿ. ಮುಸ್ಲಿಮ್ ಸಮುದಾಯದಲ್ಲೂ ಧಾರಾಳ ಚರ್ಚೆಗಳು ನಡೆದು, ಸಮಸ್ಯೆಗಳಿಗೆ ಪರಿಹಾರ ಸಿಗುವಂತಾಗಲಿ. ಅಲ್ಲಾಹನು ನೀಡಿದ ಅನುಗ್ರಹಗಳನ್ನು ಸದಾ ಸ್ಮರಿಸಿ ಅವನಿಗೆ ಕೃತಜ್ಞರಾಗಿ ಬದುಕೋಣ!* *ಸಂಪತ್ತಿನ ಆಧಿಕ್ಯದಿಂದ ಅಹಂಕಾರ ಪಡದೆ, ಅದನ್ನು ಅಲ್ಲಾಹನ ಮಾರ್ಗದಲ್ಲಿ ಮತ್ತು ಬಡತನ, ದಾರಿದ್ರ್ಯ, ಹಸಿವು, ರೋಗಗಳಿಂದ ದಿನದೂಡುತ್ತಿರುವ ಬಡವರಿಗೆ ವ್ಯಯಿಸೋಣ.*
*ಎಲ್ಲರೂ ಚಿಂತಿಸುವುದು ಹೇಗೆ ಸಮುದಾಯವನ್ನು ಬದಲಾಯಿಸುವುದು ಎಂದಾಗಿದೆ. ಯಾರೂ ಸಹ ಸ್ವತಃ ಬದಲಾಗುವುದರ ಕುರಿತು ಚಿಂತಿಸುವುದಿಲ್ಲ. ನಾವೆಲ್ಲ ಬದಲಾದರೆ ಖಂಡಿತ ಸಮುದಾಯ ಬದಲಾಗುತ್ತದೆ. ಆದ್ದರಿಂದ ಬದಲಾಗೋಣ!*                        

      🌹 *ಪ್ರೀತಿಯಿಂದ* 🌹

   *ಅಬೂ ಅಬ್ದುಲ್ಲಾ, ಮಂಗಳೂರು.*

ಅಂತಿಮ ಪ್ರವಾದಿ ಮುಹಮ್ಮದ್ (ಸ) ಅವರ ವಿದಾಯ ಭಾಷಣ

ಅಂತಿಮ ಪ್ರವಾದಿ ಮುಹಮ್ಮದ್ (ಸ) ಅವರ ವಿದಾಯ ಭಾಷಣ:

ಸರ್ವಸ್ತುತಿಯು ಅಲ್ಲಾಹನಿಗೆ ಮೀಸಲು. ಆದ್ದರಿಂದ ನಾವು ಅವನನ್ನೇ ಸ್ತುತಿಸುತ್ತೇವೆ. ಅವನಲ್ಲೇ ಸಹಾಯ ಯಾಚಿಸುತ್ತೇವೆ. ಅವನಲ್ಲಿ ಪಶ್ಚಾತ್ತಾಪ ಪಡುತ್ತೇವೆ ಅವನತ್ತ ಮರಳುತ್ತೇವೆ. ನಾವು ನಮ್ಮ ಚಿತ್ತಗಳ ದುಷ್ಪ್ರೇರಣೆ ಹಾಗೂ ನಮ್ಮ ಕರ್ಮಗಳ ದುಷ್ಪರಿಣಾಮಗಳಿಂದ ಅಲ್ಲಾಹನ ಅಭಯ ಯಾಚಿಸುತ್ತೇವೆ. ಯಾರಿಗೆ ಅಲ್ಲಾಹನು ಸನ್ಮಾರ್ಗದರ್ಶನ ಮಾಡಿದನೋ ಅವನನ್ನು ಯಾರೂ ಪಥಭ್ರಷ್ಟಗೊಳಿಸಲಾರ. ಅಲ್ಲಾಹನು ಪಥಭ್ರಷ್ಟಗೊಳಿಸಿದವನಿಗೆ ಯಾರೂ ಸನ್ಮಾರ್ಗದರ್ಶನ ಮಾಡಲಾರ. ಅಲ್ಲಾಹನ ಹೊರತು ಅನ್ಯ ಆರಾಧ್ಯರಿಲ್ಲವೆಂದೂ ಅವನು ಏಕೈಕನೆಂದೂ ಅವನಿಗಾರೂ ಭಾಗೀದಾರರಿಲ್ಲವೆಂದೂ ನಾನು ಸಾಕ್ಷ್ಯವಹಿಸುತ್ತೇನೆ. ಮುಹಮ್ಮದ್(ಸ) ಅವನ ದಾಸನೆಂದೂ ಪ್ರವಾದಿಯೆಂದೂ ನಾನು ಸಾಕ್ಷ್ಯವಹಿಸುತ್ತೇನೆ. ಅಲ್ಲಾಹನದೇ ಪರಮಾಧಿಕಾರ. ಸ್ತುತಿಸ್ತೋತ್ರಗಳೆಲ್ಲವೂ ಅವನಿಗೇ ಮೀಸಲು. ಅವನೇ ಜೀವದಾನ ಮಾಡುತ್ತಾನೆ. ಅವನೇ ಸಾಯಿಸುತ್ತಾನೆ. ಅವನು ಸಕಲ ವಸ್ತುಗಳ ಮೇಲೆ ಸರ್ವಶಕ್ತಿಯುಳ್ಳವನಾಗಿದ್ದಾನೆ. ಅಲ್ಲಾಹನಲ್ಲದೆ ಅನ್ಯ ಆರಾಧ್ಯರಿಲ್ಲ. ಅವನು ಏಕೈಕನು. ಅವನು ತನ್ನ ವಗ್ದಾನವನ್ನು ಪೂರೈಸಿದನು. ತನ್ನ ದಾಸನಿಗೆ ವಿಜಯ ದಯಪಾಲಿಸಿದನು. ಅವನೊಬ್ಬನೆ ಶತ್ರು ಸೈನ್ಯಗಳನ್ನು ಪರಾಜಿತಗೊಳಿಸಿದನು.ಅಲ್ಲಾಹನ ದಾಸರೇ, ಅವನ ದಾಸ್ಯ ಆರಾಧನೆ ಮಾಡಬೇಕೆಂದು ನಾನು ನಿಮಗೆ ಉಪದೇಶಿಸುತ್ತೇನೆ ಮತ್ತು ಅದಕ್ಕೆ ಪ್ರೇರೇಪಿಸುತ್ತೇನೆ.

ಜನರೇ, ನನ್ನ ಮಾತುಗಳನ್ನು ಚೆನ್ನಾಗಿ ಆಲಿಸಿರಿ. ಈ ವರ್ಷದ ಬಳಿಕ ನಾವು ಪರಸ್ಪರ ಇಲ್ಲಿ ಬೇಟಿಯಾಗುತ್ತೇವೋ ಇಲ್ಲವೋ ಎಂದು ನನಗೆ ಗೊತ್ತಿಲ್ಲ. ಮುಂದಿನ ವರ್ಷದ ಹಜ್ಜ್ ನಿರ್ವಹಿಸಲು ನಾನಿರುತ್ತೇನೋ ಇಲ್ಲವೋ ಎಂದೂ ನನಗೆ ತಿಳಿಯದು. ಜನರೇ, ಖಂಡಿತವಾಗಿಯೂ ಅಲ್ಲಾಹನು ಈ ರೀತಿ ಹೇಳಿರುವನು: ಮನುಷ್ಯರೇ, ನಿಮ್ಮನ್ನು ನಾನು ಒಂದು ಗಂಡು ಮತ್ತು ಒಂದು ಹೆಣ್ಣಿನಿಂದ ಸೃಷ್ಟಿಸಿರುವೆನು. ನಾನು ನಿಮ್ಮನ್ನು ವಿವಿಧ ಕುಲ ಗೋತ್ರಗಳಾಗಿ ಮಾಡಿರುವುದು ನೀವು ಪರಸ್ಪರ ಪರಿಚಯ ಪಡುವಂತಾಗಲಿಕ್ಕಾಗಿದೆ. ಖಂಡಿತವಾಗಿಯು ಅಲ್ಲಾಹನ ಬಳಿ ನಿಮ್ಮ ಪೈಕಿ ಅತ್ಯಧಿಕ ಭಯಭಕ್ತಿಯುಳ್ಳವನೇ ಅತ್ಯಂತ ಗೌರವಾರ್ಹನಾಗಿರುವನು. ಅರಬನಿಗೆ ಅರಬೇತರನ ಮೇಲೆ ಯಾವುದೇ ಶ್ರೇಷ್ಠತೆ ಇಲ್ಲ. ಅರಬೇತರನಿಗೆ ಅರಬನ ಮೇಲೆ ಯಾವುದೇ ಶ್ರೇಷ್ಠತೆ ಇಲ್ಲ. ಕರಿಯನಿಗೆ ಬಿಳಿಯನ ಮೇಲೆ ಯಾವುದೇ ಮೇಲ್ಮೆ ಇಲ್ಲ. ಬಿಳಿಯನಿಗೆ ಕರಿಯ ಮೇಲೆ ಯಾವುದೇ ಮೇಲ್ಮೆ ಇಲ್ಲ. ಧರ್ಮನಿಷ್ಠೆ ಮತ್ತು ಧೇವಭಕ್ತಿಯ ಹೊರತು.ಮನುಷ್ಯರೆಲ್ಲರೂ ಆದಮರ ಮಕ್ಕಳು. ಆದಮರಾದರೋ ಮಣ್ಣಿನಿಂದ ಸೃಷ್ಟಿಸಲ್ಪಟ್ಟವರು. ತಿಳಿಯಿರಿ! ರಕ್ತ ಅಥವಾ ಸಂಪತ್ತಿನ ಆಧಾರದಲ್ಲಿರುವ ಎಲ್ಲ ಶ್ರೇಷ್ಠತೆಗಳನ್ನು ನಾನು ನನ್ನ ಕಾಲಿನಿಂದ ತುಳಿದಿರುವೆನು. ಕಅಬಾ ಭವನದ ಮೇಲ್ನೋಟ ಮತ್ತು ಹಜ್ಜ್ ಯಾತ್ರಿಕರಿಗೆ ಜಲಪಾನ ಮಾಡಿಸುವ ಕಾರ್ಯವು ಇದಕ್ಕೆ ಹೊರತಾಗಿದೆ. ಕುರೈಷ್ ಗೋತ್ರದವರೇ, (ನಿರ್ಣಾಯಕ ದಿನದಂದು ನಿಮ್ಮ ಪ್ರಭುವಿನ ಮುಂದೆ) ನಿಮ್ಮ ಕೊರಳ ಮೇಲೆ ಈ ಲೋಕದ ಭಾರವನ್ನು ಹೊತ್ತು ಹಾಜರಾಗದಿರಿ. ಇತರ ಜನರಾದರೋ ಅಂದು ಪರಲೋಕದ ಪುಣ್ಯಗಳನ್ನು ಹೊತ್ತು ಹಾಜರಾಗುವರು. ಅಂತಹ ಪರಿಸ್ಥಿತಿಯಲ್ಲಿ ಖಂಡಿತ ನಾನು ಅಲ್ಲಾಹನ ಮುಂದೆ ನಿಮಗೆ ನೆರವಾಗಲಾರೆ.

ತಿಳಿಯಿರಿ! ಅಜ್ಞಾನ ಕಾಲದ ಎಲ್ಲ ಸಂಪ್ರದಾಯಗಳು ನನ್ನ ಪಾದಗಳಡಿಯಲ್ಲಿವೆ. ಅಜ್ಞಾನ ಕಾಲದ ಎಲ್ಲ ಕೊಲೆಯ ಪ್ರತೀಕಾರಗಳನ್ನು ಅನೂರ್ಜಿತಗೊಳಿಸಲಾಗಿದೆ. ಆ ಪೈಕಿ ಮೊದಲ ಕೊಲೆಯ ಪ್ರತೀಕಾರವನ್ನು ಅನೂರ್ಜಿತಗೊಳಿಸಿರುವುದಾಗಿ ನಾನು ಘೋಷಿಸುತ್ತೇನೆ. ಅದು ‘ಸಅದ್’ ಗೋತ್ರಕ್ಕೆ ಸೇರಿದ ರಬೀಅ ಬಿನ್ ಹಾರಿಸ್‍ರ ಕೊಲೆಯ ಪ್ರತೀಕಾರವಾಗಿದೆ. ಅವರನ್ನು ಹುಝೈಲರು ಕೊಂದಿದ್ದರು. ಅಜ್ಞಾನ ಕಾಲದ ಎಲ್ಲ ಬಡ್ಡಿಗಳನ್ನು ಮನ್ನಾ ಮಾಡಲಾಗಿದೆ. ಆ ಪೈಕಿ ಮೊದಲನೆಯದಾಗಿ ನಾನು (ನನ್ನ ಪಿತೃ ಸಹೋದರ) ಅಬ್ಬಾಸ್ ಬಿನ್ ಅಬ್ದುಲ್ ಮುತ್ತಲಿಬ್ ಅವರಿಗೆ ಸಲ್ಲಬೇಕಾದ ಎಲ್ಲ ಬಡ್ಡಿಯನ್ನು ಮನ್ನಾ ಮಾಡಿರುವುದಾಗಿ ಘೋಷಿಸುತ್ತೇನೆ. ಖಂಡಿತವಾಗಿಯು ಅದು ಸಂಪೂರ್ಣ ಮನ್ನಾ ಆಯಿತು.

ಜನರೇ, ಖಂಡಿತವಾಗಿಯು ನಿಮ್ಮ ರಕ್ತ, ನಿಮ್ಮ ಸೊತ್ತು ಮತ್ತು ನಿಮ್ಮ ಮಾನವು ನೀವು ನಿಮ್ಮ ಪ್ರಭುವಿನ ಮುಂದೆ ಹಾಜರಾಗುವ ತನಕ ಪವಿತ್ರವೂ ಅನುಲ್ಲಂಘನೀಯವೂ ಆಗಿದೆ. ನಿಮ್ಮ ಈ ದಿನ, ನಿಮ್ಮ ಈ ತಿಂಗಳು ಮತ್ತು ನಿಮ್ಮ ಈ ನಗರವು ಪವಿತ್ರವೂ ನಿಷಿದ್ಧವೂ ಆಗಿರುವಂತೆ. ಖಂಡಿತವಾಗಿಯು ನೀವು ಸದ್ಯವೇ ನಿಮ್ಮ ಪ್ರಭುವನ್ನು ಭೇಟಿಯಾಗಲಿರುವಿರಿ. ಹೌದು! ನೀವು ನಿಮ್ಮ ಕರ್ಮಗಳಿಗಾಗಿ ಅಲ್ಲಿ ವಿಚಾರಣೆಗೊಳಗಾಗಲಿರುವಿರಿ.

ಮನುಷ್ಯರೇ, ನಿಮಗೆ ನಿಮ್ಮ ಪತ್ನಿಯರ ಮೇಲೆ ಕೆಲವು ಹಕ್ಕುಗಳಿವೆ ಮತ್ತು ನಿಮ್ಮ ಪತ್ನಿಯರಿಗೆ ನಿಮ್ಮ ಮೇಲೂ ಕೆಲವು ಹಕ್ಕುಗಳಿವೆ. ನಿಮ್ಮ ದಾಂಪತ್ಯ ಸಂಬಂಧದ ಪಾವಿತ್ರ್ಯವನ್ನು ಕಾಪಾಡಬೇಕಾದುದು ಮತ್ತು ನಿಮ್ಮ ಹೊರತು ಯಾರನ್ನೂ ನಿಮ್ಮ ಹಾಸಿಗೆಗೆ ಬರಗೊಡದಿರುವುದು ಅವರ ಮೇಲೆ ನಿಮ್ಮ ಹಕ್ಕಾಗಿದೆ. ಅದರಲ್ಲಿ ಅವರು ಚ್ಯುತಿ ಮಾಡಿದರೆ ಅವರನ್ನು ನಿಮ್ಮ ಹಾಸಿಗೆಯಿಂದ ಬೇರ್ಪಡಿಸಬಹುದು. ಗಾಯ ಅಥವಾ ಕಲೆ ಆಗದಂತಹ ರೀತಿಯಲ್ಲಿ ಅವರನ್ನು ಹೊಡೆಯಬಹುದು ಮತ್ತು ಅದರಿಂದ ಅವರು ತಮ್ಮನ್ನು ತಿದ್ದಿಕೊಂಡು ನಿಮಗೆ ವಿಧೇಯರಾದರೆ ಅವರಿಗೆ ನಿಮ್ಮ ಸಾಮರ್ಥ್ಯಾನುಸಾರ ಉಣಿಸಿರಿ ಹಾಗೂ ತೊಡಿಸಿರಿ.

ತಿಳಿಯಿರಿ! ಪತಿಯ ಸಂಪತ್ತಿನಿಂದ ಆತನ ಅನುಮತಿಯಿಲ್ಲದೆ ಏನನ್ನೂ ದಾನ ಮಾಡುವುದು ಪತ್ನಿಗೆ ಧರ್ಮಸಮ್ಮತವಲ್ಲ. ನಿಮ್ಮ ಮಹಿಳೆಯರೊಂದಿಗೆ ಕರುಣೆಯಿಂದ ವರ್ತಿಸಿರಿ. ಅವರು ನಿಮ್ಮ ಸಹಾಯಕಿಯರಾಗಿದ್ದಾರೆ, ಅವರು ತಮ್ಮ ವ್ಯವಹಾರಗಳನ್ನು ತಾವೇ ನೋಡಿಕೊಳ್ಳಲು ಶಕ್ತರಲ್ಲ. ನಿಮ್ಮ ಪತ್ನಿಯರ ಬಗ್ಗೆ ಅಲ್ಲಾಹನನ್ನು ಭಯಪಡಿರಿ. ನೀವು ಅಲ್ಲಾಹನ ಜಾಮೀನಿನೊಂದಿಗೆ ಅವರನ್ನು ವರಿಸಿರುವಿರಿ. ಅಲ್ಲಾಹನ ವಚನದಂತೆ ಅವರನ್ನು ನಿಮಗೆ ಧರ್ಮಸಮ್ಮತವಾಗಿ ಮಾಡಿಕೊಂಡಿರುವಿರಿ.

ಮನುಷ್ಯರೇ, ಸರ್ವಶಕ್ತನೂ ಮಹಾನನೂ ಆದ ಅಲ್ಲಾಹನು ಪ್ರತಿಯೊಬ್ಬನಿಗೂ (ವಾರೀಸು ಸೊತ್ತಿನಲ್ಲಿ) ಅವನ ಪಾಲನ್ನು ನಿಶ್ಚಯಿಸಿರುವನು. ಆದ್ದರಿಂದ ಒಬ್ಬ ವಾರೀಸುದಾರನಿಗೆ (ಶರೀಅತ್ ನಿಯಮಗಳನ್ನು ಮೀರಿ) ವಿಶೇಷ ಉಯಿಲು ಮಾಡುವ ಹಕ್ಕಿಲ್ಲ.

ಮಗುವು ದಂಪತಿಗಳಿಗೆ ಸೇರಿದ್ದು. ದಾಂಪತ್ಯದ ಪಾವಿತ್ರ್ಯವನ್ನು ಮುರಿಯುವ ವ್ಯಕ್ತಿಯನ್ನು ಕಲ್ಲು ಹೊಡೆದು ಸಾಯಿಸಲಾಗುವುದು. ಅವರ ವಿಚಾರಣೆಯು ಅಲ್ಲಾಹನ ಹೊಣೆಯಾಗಿದೆ. ತನ್ನ ವಂಶ ಪರಂಪರೆಯನ್ನು ತನ್ನ ತಂದೆಯ ಹೊರತು ಇತರರೊಂದಿಗೆ ಜೋಡಿಸುವವನ ಅಥವಾ ತನ್ನ ಯಜಮಾನನ ಹೊರತು ಇತರರನ್ನು ತನ್ನ ಒಡೆಯನೆಂದು ಸಾರುವವನ ಮೇಲೆ ಅಲ್ಲಾಹನ ಶಾಪವಿದೆ.

ಎಲ್ಲ ಸಾಲಗಳನ್ನು ಮರು ಪಾವತಿಸಬೇಕು, ಸಾಲ ರೂಪದಲ್ಲಿ ಪಡೆದ ಎಲ್ಲ ಸೊತ್ತುಗಳನ್ನು ಹಿಂದಿರುಗಿಸಬೇಕು. ಉಡುಗೊರೆಗಳಿಗೆ ಪ್ರತಿ ಉಡುಗೊರೆ ನೀಡಬೇಕು. ಜಾಮೀನುಗಾರನು ಜಾಮೀನು ನೀಡಿದಾತನಿಗೆ ಆದ ನಷ್ಟವನ್ನು ಭರಿಸಬೇಕು.

ಎಚ್ಚರಿಕೆ! ಅಪರಾಧಕ್ಕೆ ಅಪರಾದವೆಸಗಿದವನ ಹೊರತು ಬೇರೆ ಯಾರು ಹೊಣೆಯಲ್ಲ. ಮಗು ತನ್ನ ತಂದೆಯ ಅಪರಾಧಕ್ಕೆ ಹೊಣೆಯಲ್ಲ. ತಂದೆಯು ತನ್ನ ಮಗನ ಅಪರಾಧಕ್ಕೂ ಹೊಣೆಯಲ್ಲ.

ತನ್ನ ಸೋದರನು ಸ್ವ ಇಚ್ಛೆಯಿಂದ ನೀಡಿದ ಹೊರತು ಒಬ್ಬ ಮುಸ್ಲಿಮನಿಗೆ ಆತನ ಸಂಪತ್ತಿನಲ್ಲಿ ಯಾವುದೂ ಧರ್ಮ ಸಮ್ಮತವಲ್ಲ. ಆದ್ದರಿಂದ ನಿಮ್ಮ ಮೇಲೆ ನೀವೇ ಅಕ್ರಮವೆಸಗಿಕೊಳ್ಳಬೇಡಿರಿ.

ಮನುಷ್ಯರೇ, ಪ್ರತಿಯೊಬ್ಬ ಮುಸ್ಲಿಮನು ಮುಸ್ಲಿಮನ ಸೋದರನಾಗಿರುವನು. ಎಲ್ಲ ಮುಸ್ಲಿಮರೂ ಒಂದು ಸಾಹೋದರ್ಯ ಬಂಧನದಲ್ಲಿರುವವರಾಗಿದ್ದಾರೆ. ಇನ್ನು ನಿಮ್ಮ ಜೀತದಾಳುಗಳ ವಿಷಯ! ನೀವು ಉಣ್ಣುವುದನ್ನೇ ಅವರಿಗೂ ಉಣಿಸಿರಿ. ನೀವು ಉಡುವುದನ್ನೇ ಅವರಿಗೂ ಉಡಿಸಿರಿ.

ನನ್ನ ಕಾಲಾನಂತರ ಪಥಭ್ರಷ್ಟರಾಗಿ ಹೋಗದಂತೆ ಹಾಗೂ ಒಬ್ಬರು ಇನ್ನೊಬ್ಬರ ಕತ್ತು ಕೊಯ್ಯುವವರಾಗಿ ಹೋಗದಂತೆ ಜಾಗರೂಕತೆ ವಹಿಸಿರಿ. ನಮ್ಮ ಪೈಕಿ ಯಾರ ಬಳಿಯಾದರೂ ಒಂದು ಅಮಾನತ್(ವಿಶ್ವಸ್ಥ ನಿಧಿ) ಇದ್ದರೆ ಅವನು ಅದನ್ನು ಅದರ ಮಾಲಿಕನಿಗೆ ಹಿಂದಿರುಗಿಸಬೇಕು.

ಜನರೇ, ಇತಿಯೋಪಿಯಾದ ಒಬ್ಬ ಕರಿಯ ಗುಲಾಮನನ್ನು ನಿಮ್ಮ ನಾಯಕನಾಗಿ ನೇಮಿಸಿದರೂ ಆತನು ನಿಮ್ಮ ಮಧ್ಯೆ ಅಲ್ಲಾಹನ ಗ್ರಂಥಕ್ಕೆ ಅನುಗುಣವಾಗಿ ಆಜ್ಞಾಪಿಸುವ ತನಕ ಅವನನ್ನು ಆಲಿಸಿರಿ ಮತ್ತು ಅನುಸರಿಸಿರಿ.

ಜನರೇ, ನನ್ನ ನಂತರ ಯಾವ ಪ್ರವಾದಿಯು ನಿಯುಕ್ತನಾಗಲಿಕ್ಕಿಲ್ಲ. ನಿಮ್ಮ ನಂತರ ಯಾವ ಸಮುದಾಯವೂ ರಚಿಸಲ್ಪಡಲಿಕ್ಕಿಲ್ಲ.
ಖಂಡಿತ ನಾನು ನಿಮ್ಮ ಬಳಿ ನಿಮ್ಮನ್ನೆಂದೂ ದಾರಿತಪ್ಪಿಸದಂತಹ ವಸ್ತುವನ್ನು ಬಿಟ್ಟಗಲುತ್ತೇನೆ. ಅಲ್ಲಾಹನ ಗ್ರಂಥ ಮತ್ತು ಆತನ ಪ್ರವಾದಿಯ ಸುನ್ನತ್(ಜೀವನ ವಿಧಾನ), ಅವುಗಳನ್ನು ನೀವು ಬಿಗಿ ಹಿಡಿದರೆ ನೀವೆಂದು ದಾರಿತಪ್ಪಲಾರಿರಿ.

ಜಾಗ್ರತೆ! ಧರ್ಮದ ವಿಷಯದಲ್ಲಿ ಅತಿರೇಕ ಎಸಗಬೇಡಿರಿ, ಧಾರ್ಮಿಕ ವಿಷಯದಲ್ಲಿ ಅತಿರೇಕವೆಸಗಿಯೇ ನಿಮ್ಮ ಪೂರ್ವಜರಲ್ಲಿ ಅನೇಕರು ನಾಶ ಹೊಂದಿದರು.

ಖಂಡಿತವಾಗಿಯು ನಿಮ್ಮ ಈ ಭೂಮಿಯಲ್ಲಿ ಶೈತಾನನು ತನ್ನನ್ನು ಜನರು ಆರಾಧಿಸುವ ಬಗ್ಗೆ ಶಾಶ್ವತವಾಗಿ ನಿರಾಶನಾಗಿರುವನು, ಆದರೆ ಆತನನ್ನು ನೀವು ಅನುಸರಿಸುವಿರೆಂಬ ಭಯವಿದ್ದರೆ ಅದು ನೀವು ಕ್ಷುಲ್ಲಕವೆಂದು ಪರಿಗಣಿಸು ವಿಷಯಗಳಲ್ಲಿ ಮಾತ್ರ. ಆದ್ದರಿಂದ ನಿಮ್ಮ ಧರ್ಮದ ಬಗ್ಗೆ ಆತನಿಂದ ಜಾಗರೂಕರಾಗಿರಿ.

ಜನರೇ(ನಿಷಿದ್ಧ) ಮಾಸಗಳನ್ನು ಅದಲು ಬದಲು ಮಾಡುವುದು ಸತ್ಯನಿಷೇಧದ ಕಾರ್ಯವಾಗಿದೆ. ತನ್ಮೂಲಕ ಸತ್ಯನಿಷೇಧಿಗಳು ಇನ್ನಷ್ಟು ಪಥಭ್ರಷ್ಟತೆಯಲ್ಲಿ ಬೀಳುತ್ತಾರೆ. ಒಂದು ವರ್ಷ ಯಾವುದಾದರೂ ತಿಂಗಳನ್ನು ಹಲಾಲ್( ಧರ್ಮಬದ್ಧ)ಗೊಳಿಸುತ್ತಾರೆ. ಇನ್ನೊಂದು ವರ್ಷ ಅದನ್ನು ಹರಾಮ್(ನಿಷಿದ್ಧ)ಗೊಳಿಸುತ್ತಾರೆ. ಈ ರೀತಿ(ಹಿಂದೆ-ಮುಂದೆ ಮಾಡಿ) ಅಲ್ಲಾಹನು ನಿಷಿದ್ಧಗೊಳಿಸಿದ ತಿಂಗಳುಗಳ ಸಂಖ್ಯೆಯನ್ನು ಪೂರ್ತಿಗೊಳಿಸುತ್ತಾರೆ.

ನಿಶ್ಚಯವಾಗಿಯೂ ಕಾಲಚಕ್ರವು ಉರುಳುತ್ತಾ ಇಂದು ಮತ್ತೆ ಅಲ್ಲಾಹನು ಭೂಮಿಯನ್ನು ಸೃಷ್ಟಿಸಿದಂದು ಇದ್ದ ಅದೇ ಸ್ಥಿತಿಗೆ ತಲುಪಿದೆ. ಅರ್ಥಾತ್ ಅಲ್ಲಾಹನ ಬಳಿ ತಿಂಗಳುಗಳ ಸಂಖ್ಯೆ ಹನ್ನೆರಡಾಗಿದೆ. ಅಲ್ಲಾಹನು ಆಕಾಶ-ಭೂಮಿಗಳನ್ನು ಸೃಷ್ಟಿಸಿದಂದೇ ಈ ಸಂಖ್ಯೆಯು(ವಿಧಿ ಲಿಖಿತದಲ್ಲಿ) ಉಲ್ಲೇಖಿಸಲ್ಪಟ್ಟಿದೆ. ಅವುಗಳ ಪೈಕಿ ನಾಲ್ಕು ತಿಂಗಳು ನಿಷಿದ್ಧವಾಗಿದೆ. ಮೂರು ನಿರಂತರ ಬರುವ ತಿಂಗಳುಗಳು. ಅರ್ಥಾತ್-ದುಲ್ ಕಅದ್, ದುಲ್ ಹಜ್ಜ್ ಮತ್ತು ಮುಹರ್ರಮ್. ಒಂದು ಒಂಟಿ ತಿಂಗಳು. ಅರ್ಥಾತ್-ಜುಮಾದಿಲ್ ಆಖಿರ್ ಮತ್ತು ಶಅಬಾನ್‍ಗಳ ಮಧ್ಯೆ ಬರುವ ರಜಬ್ ತಿಂಗಳು.

ಕೇಳಿರಿ! ನಿಮ್ಮ ಪ್ರಭುವನ್ನು ಆರಾಧಿಸಿರಿ. ದಿನಕ್ಕೆ ಐದು ಬಾರಿ ನಮಾಝ್ ನಿರ್ವಹಿಸಿರಿ. ರಮಝಾನ್ ತಿಂಗಳಲ್ಲಿ ಉಪವಾಸ ಆಚರಿಸಿರಿ. ನಿಮ್ಮ ಸಂಪತ್ತಿನ ಮೇಲಿನ ಝಕಾತನ್ನು ಸಂತೋಷದಿಂದ ಪಾವತಿ ಮಾಡಿರಿ. ಅಲ್ಲಾಹನ ಭವನದ ಹಜ್ಜ್ ಯಾತ್ರೆ ಕೈಗೊಳ್ಳಿರಿ. ನಿಮ್ಮ ಆಜ್ಞಾಧಿಕಾರಿಗಳನ್ನು ಅನುಸರಿಸಿರಿ. ನೀವು ನಿಮ್ಮ ಪ್ರಭುವಿನ ಸ್ವರ್ಗದಲ್ಲಿ ಪ್ರವೇಶಿಸಲ್ಪಡುವಿರಿ.

ಕೇಳಿರಿ! ಇಲ್ಲಿ ಹಾಜರಿರುವವರು ಹಾಜರಿಲ್ಲದವರಿಗೆ ಇದನ್ನು ತಲುಪಿಸಬೇಕು. ನೀವು ಸಂದೇಶ ತಲುಪಿಸುವವರ ಪೈಕಿ ಅನೇಕ ಜನರು ಅದರ ಬಗ್ಗೆ ನಿಮಗಿಂತ ಹೆಚ್ಚು ಕಾಳಜಿಯುಳ್ಳವರಾಗಿರಬಹುದು. ನನ್ನ ಬಗ್ಗೆ ನಿಮ್ಮನ್ನು ವಿಚಾರಿಸಿದಾಗ ನೀವು ಏನೆಂದು ಹೇಳುವಿರಿ. ಜನರು ಹೇಳಿದರು: ನೀವು ಧರ್ಮದ ಅಮಾನತನ್ನು ತಲಿಪಿಸಿರುವಿರೆಂದೂ ನಿಮ್ಮ ಪ್ರವಾದಿತ್ವ ರಾಯಭಾರವನ್ನು ಸಂಪೂರ್ಣ ನಿರ್ವಹಿಸಿರುವಿರೆಂದೂ ನಮ್ಮ ಕಲ್ಯಾಣದ ಬಗ್ಗೆ ಕಾಳಜಿ ವಹಿಸಿರುವಿರೆಂದೂ ನಾವು ಸಾಕ್ಷ್ಯವಹಿಸುತ್ತೇವೆ.

ಆಗ ಅಲ್ಲಾಹನ ಸಂದೇಶವಾಹಕರು ತಮ್ಮ ತೋರ್ಬೆರಳನ್ನು ಆಕಾಶದತ್bತ ತೋರಿಸುತ್ತಾ ಜನರೆಡೆಗೆ ಸೂಚಿಸಿ ಹೀಗೆ ಹೇಳಿದರು:
ಓ ಅಲ್ಲಾಹ್! ನೀನು ಸಾಕ್ಷಿಯಾಗಿರು.
ಓ ಅಲ್ಲಾಹ್! ನೀನು ಸಾಕ್ಷಿಯಾಗಿರು.
ಓ ಅಲ್ಲಾಹ್! ನೀನು ಸಾಕ್ಷಿಯಾಗಿರು.
*****