*ಸಹೋದರೀ..ಹೊಸ ವಸ್ತ್ರ ಖರೀದಿಸಲು ಪೇಟೆ ಸುತ್ತಾಡುವಾಗ ಕೈಯಲ್ಲಿರುವ ಹಣದಲ್ಲಿ ಅದೆಷ್ಟೋ ಬೆವರ ಹನಿಗಳಿವೆ ಅನ್ನುವ ಸತ್ಯವನ್ನು ಮರೆಯದಿರು..!!*
ಸಹೋದರೀ..
ಕ್ಷೇಮವಾಗಿರುವಿ ಎಂದು ಭಾವಿಸುತ್ತಿದ್ದೇನೆ.ಅದ್ಯಾಕೋ ಮೊನ್ನೆ ಮೊನ್ನೆ ರಂಝಾನ್ ತಿಂಗಳ ಬರುವಿಕೆಯನ್ನು ನಿರೀಕ್ಷಿಸುತ್ತಾ ಆ ಪುಣ್ಯ ತುಂಬಿದ ತಿಂಗಳನ್ನು ಸ್ವೀಕರಿಸಲು ತಯಾರಿ ನಡೆಸುತ್ತಿದ್ದ ನಿನ್ನ ಕುರಿತು ನನಗೆ ಅಭಿಮಾನ ಮೂಡುತ್ತಾ ಇತ್ತು.ಆದರೆ ರಂಝಾನ್ ಅಮಿತ ವೇಗದಲ್ಲಿ ನಮ್ಮಿಂದ ಮರೆಯಾಗುವ ತಯಾರಿಯಲ್ಲಿದೆ.ಪೆರ್ನಾಳ್ ದಿನದ ಹೆಸರಿನಲ್ಲಿ ಪೇಟೆಯಲ್ಲಿ ಜಿನುಗುಡುತ್ತಿರುವ ಜನಸಂದಣಿಗಳ ನಡುವೆ ಪರ್ದಾಧಾರಿಣಿಗಳಾದ ನಿನ್ನಂತಹ ಸಹೋದರಿಯರು ಹೊಸ ಬಟ್ಟೆಯ ಖರೀದಿಯ ನೆಪದಲ್ಲಿ ಅತ್ತಿಂದಿತ್ತ ಲಜ್ಜೆಯಿಲ್ಲದವಳಾಗಿ ಅಲೆದಾಡುತ್ತಿರುವಾಗ ನನಗೆ ನಿನ್ನ ಕುರಿತಾದ ನೆನಪುಗಳು ಕಾಡತೊಡಗಿತು.
ಸಹೋದರೀ..
ಹಲವು ವಿಶೇಷತೆಗಳಿಂದ ಗುರುತಿಸಲ್ಪಟ್ಟ,ಹಲವು ಪುಣ್ಯಗಳಿಂದ ಕೂಡಲ್ಪಟ್ಟ ನಮ್ಮ ತಪ್ಪುಗಳನ್ನು ಮನ್ನಿಸಲು ಇರುವಂತಹ ರಂಝಾನ್ ನಮ್ಮಿಂದ ದೂರವಾಗುವ ದಿನಗಳು ಹತ್ತಿರವಾಗುತ್ತಿದೆ.
ನಾವುಗಳಾದರೆ ಐಹಿಕವಾದ ಲೋಕದ ಸುಖ,ಆಡಂಭರಗಳನ್ನು ಆಸ್ವದಿಸುವ ಆತುರದಲ್ಲಿ ಪಾರತ್ರಿಕ ಜೀವನದ ಕುರಿತಾದ ಚಿಂತನೆಗಳಿಂದ ದೂರವಾಗ್ತಾ ಇದ್ದೇವೆ.
ನಿನಗೆ ಗೊತ್ತು ತಾನೇ ಕಳೆದು ಹೋದ ತಲೆಮಾರಿನ ನಿನ್ನಂತಹ ಸಹೋದರಿಯರು ರಂಝಾನ್ ತಿಂಗಳನ್ನು ಬೀಳ್ಕೊಡುವಾಗ ಕಡಿಮೆಯೆಂದರೂ ಮೂರು ಬಾರಿಯಾದರೂ ಪವಿತ್ರವಾದ ಕುರ್ ಆನನ್ನು ಸಂಪೂರ್ಣವಾಗಿ ಓದಿ ಮುಗಿಸುತ್ತಿದ್ದರು.ಈ ತಿಂಗಳನ್ನು ಅದೆಷ್ಟು ಗೌರವಾದರಗಳಿಂದ ಕಾಣುತ್ತಿದ್ದರು.(ಈಗಲೂ ಬೆರಳಣಿಕೆಯ ಸಹೋದರಿಯರು ಅಂತವರು ಇದ್ದಾರೆ) .ಆದರೆ ಇಂದು..?
ರಂಝಾನ್ ತಿಂಗಳ ಮೇಲಿನ ಗೌರವ ಅದ್ಯಾಕೋ ನವಪೀಳಿಗೆಯ ಸಹೋದರಿಯರಿಗೆ ಕಡಿಮೆಯಾಗತೊಡಗಿದೆ.ಕುರ್ ಆನ್ ತೆರೆದು ಓದಬೇಕಾದ ಕೈಗಳಿಂದು ವಾಟ್ಸ್ ಅಪ್, ಫೇಸ್ ಬುಕ್ ಮುಂತಾದ ತಾಣಗಳನ್ನು ತೆರೆದು ಸಂದೇಶ ಕಳುಹಿಸುವುದರಲ್ಲಿ ಮಗ್ನವಾಗಿದೆ.ಸರ್ವಶಕ್ತನಿಗೆ ಆರಾಧನೆಯಲ್ಲಿ ಮಗ್ನರಾಗಬೇಕಾದಂತಹ ನಿನ್ನಂತವರು ಸೀರಿಯಲ್ ಗಳ ಹಿಂದೆ ಜೋತುಬಿದ್ದಿದ್ದಾರೆ.
ಎಷ್ಟೊಂದು ವಿಪರ್ಯಾಸವಲ್ಲವೇ ಸಹೋದರೀ..
ಇಂದು ಪೇಟೆಯಾದ್ಯಂತ ವಸ್ತ್ರ ಖರೀದಿಯ ನೆಪವನ್ನು ಹೇಳಿ ಬೆಳಗೆದ್ದು ಮನೆಯಿಂದ ಹೊರಟು ರಾತ್ರಿಯಾದರೂ ಮನೆಗೆ ತಲುಪದೆ ದೇಹದ ಉಬ್ಬು ತಗ್ಗುಗಳನ್ನು ತೋರ್ಪಡಿಸಿ ಲಜ್ಜೆಯಿಲ್ಲದವಳಾಗಿ ಅಲೆದಾಡುತ್ತಿರುವ ನಿನ್ನಂತಹ ಸಹೋದರಿಯರ ಕುರಿತು ಖೇದವುಂಟಾಗುತ್ತಿದೆ.
ನೀನು ವಸ್ತ್ರ ಖರೀದಿಗೋಸ್ಕರ ಕೈಯಲ್ಲಿ ಹಿಡಿದುಕೊಂಡಿರುವ ಹಣದಲ್ಲಿ ಅದೆಷ್ಟೋ ಬೆವರ ಹನಿಗಳಿವೆ,ಅದೆಷ್ಡೋ ಕಣ್ಣೀರಿನ ನೋವುಗಳಿವೆ.ಅದೆಷ್ಟೋ ನಿರೀಕ್ಷೆಗಳ ಮಹಾಪೂರಗಳು ಆ ಹಣದಲ್ಲಿದೆ ಅನ್ನುವ ವಾಸ್ತವ ಸತ್ಯವನ್ನು ಎಂದಾದರೂ ಅರ್ಥೈಸಿರುವೆಯಾ..??
ದೂರದ ಮರುಭೂಮಿಯ ಸುಡುಬಿಸಿಲಿನಲ್ಲಿ ಕಷ್ಟದಾಯಕ ಜೀವನ ನಡೆಸುವ ನಿನ್ನ ಗಂಡನೋ,ನಿನ್ನ ಸಹೋದರನೋ ದುಡಿದು ಸಂಪಾದಿಸುವ ಹಣವನ್ನು ನಿನ್ನ ನಿವೇದನೆಗೆ ಓಗೊಟ್ಟು ಕಳುಹಿಸುವಾಗ ಆತ ನಿನ್ನ ಭವಿಷ್ಯದ ಬಗ್ಗೆ ಚಿಂತಿಸುತ್ತಾನೆ,ನಿನ್ನ ಸಂತೋಷಕ್ಕಾಗಿ ತನ್ನೆಲ್ಲಾ ನೋವುಗಳನ್ನು ತ್ಯಾಗ ಮಾಡಿ ಜೀವಿಸುತ್ತಾನೆ ಅನ್ನುವ ವಾಸ್ತವ ಸತ್ಯವನ್ನು ಎಂದಾದರೂ ಚಿಂತಿಸಿರುವೆಯಾ...??
ಸಹೋದರೀ..
ಪುಣ್ಯ ತುಂಬಿದ ರಮಳಾನ್ ತಿಂಗಳು ಅನ್ನುವ ಪರಿಜ್ಞಾನವಿಲ್ಲದೆ ನಿನ್ನ ದೇಹ ಸೌಂದರ್ಯವನ್ನು ಅನ್ಯರ ಮುಂದೆ ಪ್ರದರ್ಶಿಸಿ ನಾನಾ ತರದ ಆಫರ್ ಗಳ ಫಲಕ ಜೋತಾಡುವ ಅಂಗಡಿಗಳನ್ನು ಹುಡುಕಾಡುತ್ತಾ ಅಲೆದಾಡುವ ನೀನು, ನಿನ್ನ ಪಾರತ್ರಿಕ ಲೋಕದ ಆಫರ್ ಗಳು ಒಂದೊಂದಾಗಿ ಕಡಿತಗೊಳ್ಳುತ್ತಲೇ ಇರುತ್ತೆ ಅನ್ನುವದರ ಕುರಿತು ಎಂದಾದರೂ ಯೋಚಿಸುವ ಮನಸ್ಸು ಮಾಡಿರುವೆಯಾ..?
ಕಳೆದ ಕೆಲ ವರ್ಷಗಳಿಂದೀಚೆಗೆ ಅದೆಷ್ಟೋ ಸಹೋದರಿಯರು ಪ್ರೀತಿ,ಪ್ರೇಮ ಎಂದು ಅನ್ಯರ ತೆಕ್ಕೆಯೊಳಗೆ ಬಂಧಿಯಾಗಿ ಧರ್ಮ ತೊರೆದು ಹೋದರು..!!
ನಮ್ಮ ಒಂದು ಬೇಜವಾಬ್ದಾರಿತನವನ್ನು ದುರುಪಯೋಗಪಡಿಸಲು ಅದೆಷ್ಟೋ ಜನರು ಕಾದು ಕುಳಿತಂತಿರುವ ಈ ಪ್ರಚಲಿತವಾದ ಕಾಲಘಟ್ಟದಲ್ಲಿ ನೀನು ಅನ್ಯರಿಗೆ ಆಹಾರ ಆಗುವಂತವಳಾಗದಿರು.ವಸ್ತ್ರ ಖರೀದಿಯ ನೆಪದಲ್ಲಿ ಏಕಾಂಗಿಯಾಗಿ ಪೇಟೆಯಲ್ಲಿ ಲಜ್ಜೆಯಿಲ್ಲದವಳಾಗಿ ಅಲೆದಾಡದಿರು..ನಿನ್ನೊಡನೆ ನಿನ್ನ ಹೆತ್ತವರನ್ನೋ,ಸಹೋದರರನ್ನೋ ಜತೆ ಕರೆದುಕೊಂಡು ಹೋಗಿ ನಿನಗೆ ಬೇಕಾದ ವಸ್ತ್ರವನ್ನು ಖರೀದಿಸಿ ಸಮಯವನ್ನು ವ್ಯರ್ಥಗೊಳಿಸದೆ ನಿನ್ನ ಮನೆಯನ್ನು ಸೇರುವಂತವಳಾಗು.
ಇಪ್ಪತ್ತೊಂದನೇ ಶತಮಾನದ ಆಧುನಿಕ ಯುಗದಲ್ಲಿ ಸಿನಿಮಾ ತಾರೆಯರನ್ನು ಆದರ್ಶರನ್ನಾಗಿಸಿ ಜೀವಿಸುತ್ತಿರುವ ನಿನ್ನಂತವರಿಗೆ ಅದೆಂತಹ ಕಠಿಣವಾದ ಪರಿಸ್ಥಿತಿಯಲ್ಲೂ ಇಸ್ಲಾಮಿನ ನೀತಿ ಆದರ್ಶಗಳನ್ನು ಗಾಳಿಗೆ ತೂರದೆ ಆದರ್ಶಯುತ ಬದುಕು ನಡೆಸಿದ ಇಸ್ಲಾಮಿನ ವೀರ ವನಿತೆಯರ ಚರಿತ್ರೆ,ಆದರ್ಶಗಳು ಮರೆತು ಹೋದವೇ..??
ತನ್ನ ಮರಣಾ ಸಯ್ಯೆಯ ಸಂದರ್ಭದಲ್ಲೂ ಪಾರತ್ರಿಕ ಲೋಕದ ಕುರಿತು ಚಿಂತಿಸಿ ಕಣ್ಣೀರು ಸುರಿಸಿದ ವೀರ ವನಿತೆ ಕಾರುಣ್ಯದ ಪ್ರತೀಕವಾದ ಪ್ರವಾದಿ ಸ.ಅ ರವರ ಸುಪುತ್ರಿ ಫಾತಿಮಾ ರ.ಅ ರವರ ಜೀವನದ ಕುರಿತಾದ ಚರಿತ್ರೆಗಳು, ರಾತ್ರಿಯಿಡೀ ಸರ್ವಶಕ್ತನ ಅಲ್ಲಾಹನಿಗೆ ಆರಾಧನೆಯನ್ನು ಮಾಡುತಿದ್ದಂತಹ ರಾಬಿಯ್ಯತುಲ್ ಅದವಿಯ್ಯ ರ.ಅ ರವರ ಚರಿತ್ರೆಗಳ ಕುರಿತು ನಿನಗೆ ಹೇಳಿಕೊಡುವಂತಹ ಆವಶ್ಯಕತೆ ಇಲ್ಲ ಅಂತ ನನಗೆ ಗೊತ್ತು.ನನಗಿಂತಲೂ ಹೆಚ್ಚಿನದನ್ನು ತಿಳಿದವಳಾಗಿರುವಿ ನೀನು.ಅವರ ಆದರ್ಶವನ್ನು ಬೆನ್ನಟ್ಟಬಾರದೇ ನಿನಗೆ..?!
ಸಹೋದರೀ..
ಕೇವಲ ನಿನ್ನತ್ತ ಮಾತ್ರ ನಾನು ಬೆರಳು ತೋರಿಸಲಾರೆ.ಪುರುಷ ಸಮೂಹ ಕೂಡ ಇಂದು ಸ್ವೇಚ್ಛಾಚಾರದ ಬದುಕಿಗೆ ಒಗ್ಗಿಕೊಂಡು ಧರ್ಮದ ಆಚಾರ-ವಿಚಾರಗಳು ಗಾಳಿಗೆ ತೂರಿ ಜೀವಿಸುತ್ತಿದ್ದಾರೆ.ಮನೆಯ ಹೆಣ್ಣು ಮಕ್ಕಳನ್ನು ವಸ್ತ್ರ ಖರೀದಿಯ ಹೆಸರಲ್ಲಿ ಕಳುಹಿಸಿಕೊಡುವಾಗ ನನಗೂ ಅವರಿಗೂ ಯಾವುದೇ ಸಂಬಂಧವಿಲ್ಲವೆಂದು ಮನೆಯಲ್ಲೋ,ತನ್ನ ಕೆಲಸದಲ್ಲೋ ಆತನು ಇರುತ್ತಾನೆ.
ಪುಣ್ಯತುಂಬಿದ ರಂಝಾನ್ ತಿಂಗಳನ್ನು ಭಕ್ತಿ,ಆರಾಧನೆಗಳಿಂದ ಧನ್ಯಗೊಳಿಸಿ ಪ್ರೀತಿಯಿಂದ ಬೀಳ್ಕೊಡುವವರು ನಾವುಗಳಾಗೋಣ.ವಸ್ತ್ರ ಖರೀದಿಯ ನೆಪದಲ್ಲಿ ಲಜ್ಜೆಯಿಲ್ಲದವಳಾಗಿ ವರ್ತಿಸಿ ಅನ್ಯರ ಕಣ್ಣಿಗೆ ನೀನು ಆಹಾರವಾಗದಿರು.ಇಸ್ಲಾಮಿನ ವೀರ ವನಿತೆಯರ ಆದರ್ಶಗಳನ್ನು ಪಾಲಿಸಿ ನಿನ್ನ ಜೀವನವನ್ನು ,ಪಾರತ್ರಿಕ ಲೋಕವನ್ನು ಧನ್ಯಗೊಳಿಸುವವಳು ನೀನಾಗಿರು.
ನನ್ನ ಬರಹಗಳಿಂದ ನಿನ್ನ ಮನಸ್ಸಿಗೇನಾದರು ನೋವಾಗಿದ್ದಲ್ಲಿ ಕ್ಷಮಿಸಬೇಕು ಅನ್ನುವ ಅಪೇಕ್ಷೆಯೊಂದಿಗೆ,ಸಮಯ ಸಿಕ್ಕಲ್ಲಿ ಇನ್ನೊಮ್ಮೆ ಬರೆಯುವೆ ಇನ್ಶಾ ಅಲ್ಲಾ..
ಸ್ನೇಹಜೀವಿ ಅಡ್ಕ