ಶನಿವಾರ, ಜೂನ್ 11, 2016

ಕ್ಷಮೆ

#ಸ್ವಗತ

ಹೌದು ನಾನೇನೂ ಸಾಚಾ ಅಲ್ಲ, ಬಹುಶಃ ಇದು ಕ್ಲೀಷೆ ಅನಿಸೋ ಅಪಾಯ ಕೂಡ ಇದೆ. ಆದರೂ ಉಳಿದಿರೋ ನನ್ನ  ಆಯಸ್ಸಿನಲ್ಲಿ ಸಾಧ್ಯವಾದಷ್ಟೂ ಸಾಚಾತನದಿಂದ ಬದುಕಲು..ನೇರವಂತಿಕೆ,  ಪ್ರಾಮಾಣಿಕತೆ ಮತ್ತು ಆ ಥರದ ಕೆಲವನ್ನ ನನಗೆ ನಾನೇ ಗೆರೆಗಳ ಥರ ಎಳೆದುಕೊಂಡಿದೀನಿ.  ಇವೊಂಥರ ನಾನೇ define ಮಾಡಿಕೊಂಡಿರೋ alerts ಅಂತಾನೂ ಇಟ್ಕೋಬಹುದು.  ಹ್ಞಾಂ..  ಎಲ್ಲ ಮನುಷ್ಯರಂತೇನೆ ನನ್ನೊಳಗೂ ಹುಲಿ, ಚಿರತೆ, ನಾಯಿ, ಗುಳ್ಳೆನರಿ, ಕತ್ತೆ, ಹಾವು, ಬೆಕ್ಕು, ಮುಂಗುಸಿ, ಗೂಬೆ ಹೀಗೆ ಅನೇಕ ಪ್ರಾಣಿ ಪಕ್ಷಿಗಳು ಗೂಡು ಕಟ್ಟಿಕೊಂಡಿರಬಹುದು. ಅವನ್ನೆಲ್ಲ ನಿವಾರಿಸಿಕೊಳ್ಳೋ ನನ್ನ ನಿರಂತರ ಪ್ರಯತ್ನದ ಹೊರತಾಗಿಯೂ, ಅವು ಮತ್ತೆ, ಅಲ್ಲಲ್ಲಿ, ಆಗಾಗ ನನ್ನೊಳಗೆ ಹೊಕ್ಕು ಹೊಂಚಿಯೇ ತೀರುತ್ವೆ.  ಇವುಗಳನ್ನ ಮೀರಿ ನಿಲ್ಲೋಕೂ, ಮನುಷ್ಯನಾಗಿ ಬದುಕೋಕೂ ಊರುಗೋಲಾಗಿ ನಾನು ಕಂಡು ಕೊಂಡಿರೋದು, ಮತ್ತು ನನಗೆ ದಕ್ಕಿರೋದು ಇಸ್ಲಾಂ.

#ನಿವೇದನೆ

ಅಹಮಿಕೆ, ಮಾನವ ಮತ್ತು ದೇವರ ನಡುವಿರುವ ಪರದೆ ~ರೂಮಿ.
ನನ್ನನ್ನು ಕುಬ್ಜನಾಗಿಸೋದು ಕೂಡ ಈ ಅಹಮಿಕೆಯೇ, ಈ ಪರದೆಯನ್ನ ಸರಿಸಿ ಮುಂದುವರೆಯೋದು ನನ್ನ ಆದ್ಯತೆ ಮತ್ತು ಸತತ ಪ್ರಯತ್ನ.  ನನ್ನ ಪ್ರತಿ ಪಾರ್ಥನೆಯಲ್ಲಿ ನಾನು ವಿನೀತನಾಗಿ ಬೇಡೋದು 'ಇಹ್ದಿನ ಸಿರಾತುಲ್ ಮುಸ್ತಕೀಮ್'(ಸರಿ ದಾರಿಯಲ್ಲಿ ಕೈ ಹಿಡಿದು ನಡೆಸೆನ್ನನು).  ಹೀಗೆ ಬೇಡೋವಾಗ, ಹಲವು ಸಾರಿ ನಾನ್ಯಾಕೆ ಹೀಗೆ ಬೇಡ್ಕೋಬೇಕು!? ನಾನ್ಯಾವ ತಪ್ಪುದಾರಿ ತುಳಿದಿದೀನಂತ!?  ಎಂದನಿಸಿದ್ದಿದೆ, ಅದು ಸಹಜ ಕೂಡ.  ಇದೊಂದು ವ್ಯಸನ, ಸರಿ ದಾರೀಲಿ ಇರಲೇಬೇಕೆಂಬ ಪ್ರಜ್ಞಾಪೂರ್ವಕ ವ್ಯಸನ, ಒಳಿತಿಗಾಗಿನ ವ್ಯಸನ. ಒಂದು ವೇಳೆ, ದಾರಿ ತಪ್ಪಿ, ಗಮ್ಯ ತಲುಪದೆ ಸೋತು ಹೋಗಿಬಿಟ್ರೆ!? ಅನ್ನೋ ಆತಂಕ. ಅಂದ ಹಾಗೆ ಈ ಸರಿ ದಾರಿ ಅನ್ನೋದು ನಾನು ತೀರ್ಮಾನಿಸಿದ್ದೇನಲ್ಲ. ಅದು ಅಂತಿಮ ಪ್ರವಾದಿಯೊಳಗೊಂಡು ಎಲ್ಲಾ ಉತ್ತಮರು ನಡೆದ ದಾರಿ.

#ಕ್ಷಮೆಯಾಚನೆ

ಎಷ್ಟೋ ಸಾರಿ, ಅರಿತೋ ಅರಿಯದೆಯೋ ನಮ್ಮ ಬಂಧುಗಳೊಂದಿಗೆ, ಸ್ನೇಹಿತರೊಂದಿಗೆ ಜಿದ್ದಿಗೆ ಬಿದ್ದಿರ್ತೇವೆ.  ಅವಕ್ಕೆ, ಕಾರಣ ಕೂಡ ಸ್ಪಷ್ಟವಾಗಿರಲ್ಲ.  ಅಹಮಿಕೆಯ ಮುಳ್ಳು ಕ್ಷಮೆಯಾಚನೆಯನ್ನ ಗಂಟಲಲ್ಲೇ ಸಿಗಿಸಿ ತಡೆಹಾಕಿಬಿಟ್ಟಿರುತ್ತೆ.  ಹೇಳಿಕೇಳಿ ರಮಧಾನ್ ತಿಂಗಳು ಕ್ಷಮೆಯಾಚನೆಯ, ಕ್ಷಮಾಭಿಕ್ಷೆ ನೀಡುವ ಋತು.  ಯಾರಿಗೂ ಕಾಣದೆ ಕಣ್ಣೀರುಗರೆಯುತ್ತ ಕರುಣಾಳುವಿನಲ್ಲಿ ಕ್ಷಮೆಯಾಚಿಸುವ ಕಾಲ.  ಹಾಗೆಯೇ ನಮ್ಮಿಂದಾದ ತಪ್ಪುಗಳಿಗೂ ನಮ್ಮವರು ಮತ್ತು ನಮ್ಮವರಲ್ಲದವರೊಂದಿಗೂ ಕ್ಷಮೆಯಾಚಿಸುವ ಕಾಲ.  ಪ್ರತಿನಿತ್ಯ ಅಲ್ಲಾಹನಲ್ಲಿ ಕ್ಷಮೆಯಾಚಿಸುತ್ತೇನಾದರೂ, ಈ ಒಂದೂವರೆ ದಿನದಲ್ಲಿ ಕ್ಷಮೆಯಾಚನೆಯೊಂದು ಗಂಟಲಲ್ಲಿ ಸಿಕ್ಕಿಕೊಂಡಿತ್ತು.  ಅದಕ್ಕೆ ಬಿಡುಗಡೆ ನೀಡದೆ ಈ ರಮಧಾನಿನ ಸೌಭಾಗ್ಯವನ್ನು ಕಳೆದುಕೊಳ್ಳಲಾರೆ, ನಿನ್ನ ಪ್ರೀತಿ ಮತ್ತು ವಿಶ್ವಾಸವನ್ನು ಕೂಡ.

So...ಕ್ಷಮೆಯಿರಲಿ.....

#ದಾದಾ ಕಲಂದರ್