ಮಂಗಳವಾರ, ಜೂನ್ 21, 2016

"ಗಲ್ಫ್ ಯಾತ್ರೆ ಮತ್ತು ಅಂತಿಮ ಯಾತ್ರೆ"

ಶಾಹಿಲ್..
ಒಬ್ಬ ಶ್ರಮ ಜೀವಿ. ತಾನಾಯಿತು ತನ್ನ ಕೆಲಸವಾಯಿತು ಅಂದುಕೊಂಡು ಯಾರೊಬ್ಬರ ತಂಟೆಗೂ ಹೊಗದೇ ಊರಲ್ಲಿ ಯಾವುದೇ ಕೆಲಸವಿದ್ದರೂ ನಿಯ್ಯತ್ತಿನಿಂದ ದುಡಿದು ತನ್ನ ಮನೆ ಜವಾಬ್ದಾರಿಯನ್ನು ತಾನಾಗಿಯೇ ತನ್ನ ಹೆಗಲ ಮೇಲೆ ಹಾಕಿಕೊಂಡಿದ್ದ. ಮನೆ ಜವಾಬ್ದಾರಿಯನ್ನು ವಹಿಸಿಕೊಳ್ಳದೆ ಬೇರೆ ದಾರಿ ಕೂಡ ಇರಲಿಲ್ಲ, ಯಾಕೆಂದರೆ ಇಬ್ಬರು ಮುದ್ದಿನ ತಂಗಿಯರಿಗೆ ಒಬ್ಬನೇ ಹಿರಿಯಣ್ಣ, ವಯಸ್ಸಾದ ತಂದೆ-ತಾಯಿ!!

ಗಲ್ಫ್ ಜೀವನವನ್ನು ತೀರಾ ಇಷ್ಟಪಡದ ಶಾಹಿಲ್, ತನ್ನ ಇಬ್ಬರು ಮುದ್ದಿನ ತಂಗಿಯರ ಮದುವೆ ಕಾರ್ಯವನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಟ್ಟು ಅವರಿಬ್ಬರನ್ನೂ ಮುಂದೆ ಯಾವುದೇ ಕೊರತೆಗಳು ಬರದಂತೆ ಮನೆಮಗಳಾಗಿ ಸ್ವೀಕರಿಸುವಂತಹ ಮನೆಗೆ ಸೊಸೆಯಾಗಿ ಆದಷ್ಟು ಬೇಗ ಕಳುಹಿಸಿ ಕೊಡಬೇಕೆಂಬ ಆಲೋಚನೆಯಿಂದ ಊರಲ್ಲಿ ಸಿಗುವ ಸಂಬಳ ಮನೆ ನಿಭಾಯಿಸಲೇ ಕಷ್ಟವಾಗುತ್ತಿದ್ದರಿಂದ ಒಂದು ದಿನ ಒಲ್ಲದ ಮನಸ್ಸಿನಿಂದ ಗಲ್ಫ್ ಗೆ ಹೋಗೋ ನಿರ್ಧಾರವನ್ನು ತೆಗೆದುಕೊಂಡ.
ಮನೆಗೆ ಆಧಾರವಾಗಿದ್ದ ಮುದ್ದಿನ ಮಗನನ್ನು ವರ್ಷಗಟ್ಟಲೆ ಬಿಟ್ಟಿರುವ ಶಕ್ತಿ ವಯಸ್ಸಾದ ತಂದೆ-ತಾಯಿಗೆ ಇರಲಿಲ್ಲ. ಅಣ್ಣನಾಗಿ, ಗೆಳೆಯನಾಗಿ, ಕಾವಲುಗಾರನಾಗಿ ಧೈರ್ಯ ತುಂಬುತ್ತಿದ್ದ ಅಣ್ಣ ಕಾಣದೂರಿಗೆ ಹೋಗುವುದು ಪ್ರೀತಿಯ ತಂಗಿಯಂದಿರಿಗೆ ಸ್ವಲ್ಪವೂ ಹಿಡಿಸಲಿಲ್ಲ. ಮನೆಯ ಕಷ್ಟವನ್ನು ನಿವಾರಿಸಲು ಮತ್ತು ತಂದೆ ತಾಯಿಯ ಭಾರವನ್ನು ಕಡಿಮೆಗೊಳಿಸುವ ಸಲುವಾಗಿ ಗಲ್ಫ್ ಗೆ ಹೋಗುವ ನಿರ್ಧಾರವನ್ನು ಬದಲಾಯಿಸದೆ, ಮನೆಯವರನ್ನು ಒಪ್ಪಿಸಿ ಶಾಹಿಲ್ ಕಡಲು ದಾಟಿ ಮರುಭೂಮಿಗೆ ಹಾರಿಯೇ ಬಿಟ್ಟ.

ಗಲ್ಫ್ ಅನ್ನೋ ಮಾಯಾ ನಗರಿಗೆ ಕೆಲವರು ತೀರಾ ಹದೆಗೆಟ್ಟ ತನ್ನ ಮನೆಯ ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಇನ್ನೂ ಕೆಲವರು ಒಮ್ಮೆಲೇ ದುಡ್ಡು ಮಾಡಿ ವೈಭವದಿಂದ ಊರಿನಲ್ಲಿ ಮೆರೆದಾಡಬೇಕೆನ್ನುವ ದುರಾಸೆಯಿಂದ ಬಂದು ಸೇರುತ್ತಾರೆ.
ಶಾಹಿಲ್ ಯಾವುದೇ ದುರಾಸೆ ಇಲ್ಲದವನಾಗಿದ್ದರಿಂದ ತನ್ನ ಮನೆಯವರಿಗಾಗಿ ತನಗೆ ಇಷ್ಟವಿಲ್ಲದ ಪ್ರವಾಸಿ ಜೀವನಕ್ಕೆ ಮುನ್ನುಡಿ ಬರೆದಿದ್ದ.
ಒಂದು ಸಣ್ಣ ಕಂಪನಿಯಲ್ಲಿ ಕೆಲಸ ಮಾಡುತ್ತಾ ಬಿಡುವಿನ ವೇಳೆಯಲ್ಲಿ ಹೊರಗಡೆ ಸಿಗುತ್ತಿದ್ದ ಸಣ್ಣಪುಟ್ಟ ಕೆಲಸಗಳನ್ನು ಮಾಡಿ ಬರುವ ಹಣವನ್ನೆಲ್ಲಾ ಜೋಪಾನವಾಗಿಯೇ ಕೂಡಿಡುತ್ತಿದ್ದ.
ಊರಿಗೆ ಹೋಗಿ ವಯಸ್ಸಾದ ತಂದೆ-ತಾಯಿಗೆ ಯಾವುದೇ ಭಾರವಿಲ್ಲದೇ ಎಲ್ಲಾ ತನ್ನ ಖರ್ಚಿನಲ್ಲಿಯೇ ತನ್ನ ಮುದ್ದಿನ ತಂಗಿಯಂದಿರ ಮದುವೆಯನ್ನು ನಡೆಸಿಕೊಟ್ಟು, ಊರಲ್ಲೇ ಏನಾದರೊಂದು ಸಣ್ಣ ಬ್ಯುಸಿನೆಸ್ ಮಾಡಬೇಕು, ಮತ್ತೆ ಗಲ್ಫ್ ಜೀವನ ಬೇಡವೆಂದುಕೊಂಡು, ಹೇಗಾದರೂ ಬಂದಾಯಿತಲ್ವಾ.. ಬಂದಿದ್ದಕ್ಕೆ ಇನ್ನೂ ಸ್ವಲ್ಪ ಕಾಲ ಇಲ್ಲೇ ದುಡಿದು ಹೋಗುವ ಎಂದುಕೊಂಡು ಮೂರು ವರ್ಷಗಳನ್ನು ಕಳೆದಿದ್ದು ಶಾಹಿಲ್ ನ ಅರಿವಿಗೆ ಬರಲೇ ಇಲ್ಲ.

ಪ್ರವಾಸಿಗರಿಗೆ ಯಾವುದೇ ಹಬ್ಬಗಳ ಸಂಭ್ರಮಗಳಿಲ್ಲ, ಕುಟುಂಬದವರ, ಸ್ನೇಹಿತರ ಮದುವೆ ಸಮಾರಂಭಗಳ ಸಡಗರಗಳ ಪರಿವೇ ಇಲ್ಲ!
ಪ್ರವಾಸಿಗರು ಗಲ್ಫ್ ನಲ್ಲಿ ಸಂಭ್ರಮಿಸುವ ದಿನ ಒಂದಿದೆ, ಅದು ಯಾವುದೆಂದರೆ ಊರಿಗೆ ಹೊರಡುವ ದಿನ. ಎರಡುಮೂರು ವರ್ಷ ಬಿಟ್ಟು ಊರಿಗೆ ಹೊರಡುವ ಪ್ರವಾಸಿಗನ ಸಂಭ್ರಮ ಪದಗಳಲ್ಲಿ ವರ್ಣಿಸಲು ಸಾಧ್ಯವಾಗದಂತದ್ದು.
ವರ್ಷಗಟ್ಟಲೆ ತಾನು ತನ್ನವರನ್ನೆಲ್ಲಾ ಬಿಟ್ಟು ಗಲ್ಫ್ ನಲ್ಲಿ ಮಾನಸಿಕವಾಗಿಯೂ, ದೈಹಿಕವಾಗಿಯೂ ಅನುಭವಿಸಿದ ಎಲ್ಲಾ ನೋವುಗಳನ್ನು ಕೂಡ ಮರೆತು ಬಿಡುತ್ತಾನೆ.
ಊರಿಗೆ ಹೋಗುವ ದಿನ ಹತ್ತಿರ ಬರುತ್ತಿದ್ದಂತೆ ಪ್ರವಾಸಿಗರಿಗೆ ಸರಿಯಾಗಿ ಹೊಟ್ಟೆಗೆ ಊಟಾನು ಸೇರುವುದಿಲ್ಲ, ಸರಿಯಾಗಿ ನಿದ್ರೇನು ಬರುವುದಿಲ್ಲ.
ಆ ಒಂದು ದಿನದ ಸಂಭ್ರಮದ ಆಳ ಎಷ್ಟೆಂದರೆ ತಾನು ಗಲ್ಫ್'ನಲ್ಲಿ ಕಳೆದ ಎರಡುಮೂರು ವರ್ಷಗಳು ಸಾರ್ಥಕವೆನಿಸುವಷ್ಟು.

ತಾನು ಗಲ್ಫ್ ಗೆ ಬಂದು ಮೂರು ವರ್ಷಗಳು ಕಳೆಯುತ್ತಿರುವಾಗ
ಶಾಹಿಲ್'ನಿಗೂ ಊರಿಗೆ ಹೋಗಬೇಕೆನ್ನುವ ಆಸೆ ಬರತೊಡಗಿತ್ತು. ಹೀಗಿರುವಾಗ ಊರಲ್ಲಿದ್ದ ವಯಸ್ಸಾದ ತನ್ನ ತಂದೆಯ ಆರೋಗ್ಯವೂ ತುಂಬಾ ಕ್ಷೀಣಿಸಲು ಶುರುವಾಗಿದ್ದರಿಂದ ಆದಷ್ಟು ಬೇಗ ಊರಿಗೆ ಬರಬೇಕೆನ್ನುವ ಒತ್ತಡವೂ ಶಾಹಿಲ್'ನಿಗೆ ಮನೆಯಿಂದ ಬರತೊಡಗಿತ್ತು. ಕೊನೆಗೂ ಶಾಹಿಲ್ ಊರಿಗೆ ಹೋಗುವ ಒಂದು ದಿನವನ್ನು ನಿಗದಿಪಡಿಸಿದ. ಊರಿಗೆ ಹೋಗುವ ದಿನ ಬಂದಾಗ ಎಲ್ಲರ ಹಾಗೆ ಶಾಹಿಲ್ ಕೂಡ ಸಂಭ್ರಮಿಸಿದ.
ತಂದೆ-ತಾಯಿನ್ನು ನೋಡುವ ಆತುರ!
ಪ್ರೀತಿಯ ತಂಗಿಯಂದಿರನ್ನು ಕಾಣುವ ಕಾತುರ!
ತಾಯ್ನಾಡಿಗೆ ಮರಳುವ ಸಡಗರ!
ಒಟ್ಟಿನಲ್ಲಿ ಶಾಹಿಲ್ ನ ಸಂತೋಷಕ್ಕೆ ಮಿತಿ ಅನ್ನುವುದೇ ಇರಲಿಲ್ಲ.

ವಿಧಿಯ ಆಟ ಬೇರೆಯೇ ಆಗಿತ್ತು!!
ಶಾಹಿಲ್ ಹೊರಡುವ ಮುನ್ನಾ ದಿನ ಅನಾರೋಗ್ಯ ಪೀಡಿತ ತಂದೆ ಇಹಲೋಕವನ್ನು ತೈಜಿಸಿ ಬಿಟ್ಟರು.
ಶುಕ್ರವಾರ ಆಗಿದ್ದರಿಂದ ಜುಮಾಗೆ ಮೊದಲೇ "ಮಯ್ಯತ್" ತೆಗಿಯುವುದು ಒಳ್ಳೆಯದು, ಮಗ ಬರುವುದಕ್ಕೆ ಕಾಯುವುದು ಬೇಡವೆಂದು ಮಸೀದಿ ಗುರುಗಳು ಹೇಳಿದ್ದರಿಂದ ಮಗ ಬರುವುದನ್ನೂ ಕಾಯದೆ ಎಲ್ಲಾ ಕಾರ್ಯಗಳನ್ನು ಆದಷ್ಟು ಬೇಗ ಮುಗಿಸಿ ಬಿಟ್ಟರು.
ಮೂರು ವರ್ಷಗಳ ನಂತರ ಊರಿಗೆ ಬರುವ ಖುಷಿಯಲ್ಲಿರುವ ಶಾಹಿಲ್'ನಿಗೆ ತನ್ನ ತಂದೆ ಮರಣ ಹೊಂದಿ ದಫನ ಮಾಡಿರುವ ವಿಷಯವನ್ನು ತಿಳಿಸುವುದು ಹೇಗೆಂದು ದಿಕ್ಕು ತೋಚದೆ, ಹೇಗಿದ್ದರೂ ಊರಿಗೆ ಬರುತ್ತಿದ್ದಾನೆ ಬಂದ ಮೇಲೆಯೇ ವಿಷಯವನ್ನು ತಿಳಿಸುವ ಎಂದುಕೊಂಡು ಮನೆಯವರು ಸುಮ್ಮನಾದರು.
ಇದ್ಯಾವುದರ ಅರಿವಿಲ್ಲದ ಶಾಹಿಲ್ ಮನೆಯವರಿಗೆ ಇಷ್ಟವಾದ ವಸ್ತುಗಳನ್ನು ಖರೀದಿಸುತ್ತಿದ್ದ, ಜೊತೆಗೆ ತನ್ನ ತಂದೆಗೆ ಬೇಕಾಗಿ ಟಾರ್ಚ್ ಲೈಟ್, ಬೆಲ್ಟ್, ಚಪ್ಪಲಿ, ಸೆಂಟ್, ಒಳ್ಳೆಯ ಗುಣಮಟ್ಟದ ಕಂಬಳಿಯನ್ನೆಲ್ಲಾ ಖರೀದಿಸಿದ!!

ಮರುದಿನ ಏರ್ಪೋರ್ಟ್ ಗೆ ತಲುಪಿದ ಶಾಹಿಲ್ ನಿಗೆ ಅಲ್ಲಿಯೇ ನಿರಾಶೆ ಮೂಡಿತು.
ತನ್ನನ್ನು ಸ್ವೀಕರಿಸಲು ಮನೆಯವರೆಲ್ಲಾ ಬರುತ್ತಾರೆಂದು ನಿರೀಕ್ಷಿಸಿದ್ದ ಅವನಿಗೆ ಏರ್ಪೋರ್ಟ್ ನಲ್ಲಿ ಕಂಡಿದ್ದು ತನ್ನ ಚಿಕ್ಕಪ್ಪ ಮತ್ತು ಇಬ್ಬರು ಗೆಳೆಯರನ್ನು ಮಾತ್ರ!

ಮನೆಗೆ ತಲುಪುವುದರೊಳಗೆ ವಿಷಯ ತಿಳಿಸಬೇಕೆಂದುಕೊಂಡ ಚಿಕ್ಕಪ್ಪ ದಾರಿ ಮಧ್ಯೆ
ಶಾಹಿಲ್ ಗೆ ತಂದೆಯ ಮರಣದ ಬಗ್ಗೆ ಸಾವಧಾನವಾಗಿ ತಿಳಿಸಿಯೇ ಬಿಟ್ಟರು!!
ಕಾರಿನ ಒಂದು ಬದಿಯಲ್ಲಿ ಕೂತು ಹೊರಗಿನ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸುತ್ತಾ.. ಇನ್ನೇನು ಸ್ವಲ್ಪದರಲ್ಲೇ ಮನೆ ತಲುಪುತ್ತೇನೆ, ಮೂರು ವರ್ಷಗಳ ನಂತರ ಮನೆಯವರ ಜೊತೆ ಸೇರುತ್ತಿದ್ದೇನೆ ಎಂದೆಲ್ಲಾ ಕನಸು ಕಾಣುತ್ತಿದ್ದ ಶಾಹಿಲ್, ಚಿಕ್ಕಪ್ಪ ಹೇಳಿದ ಆಘಾತಕಾರಿ ಸುದ್ದಿ ಕೇಳಿ ದಿಘ್ಭ್ರಮೆಗೊಂಡು ಮೌನಕ್ಕೆ ಶರಣಾದ.
ನಿಮಿಷಗಳ ನಂತರ ಮೌನ ಮುರಿದು ಯಾಕೆ ನಂಗೆ ಮೊದಲೇ ವಿಷಯ ತಿಳಿಸಿಲ್ಲ, ಯಾಕೆ ಮಯ್ಯತ್ ನೋಡುವುದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ ಎಂದೆಲ್ಲಾ ತಾಳ್ಮೆ ಕಳೆದುಕೊಂಡು ರೇಗಾಡಲು ಶುರುಮಾಡಿದಾಗ ಚಿಕ್ಕಪ್ಪ ಕೂಡ ಮೌನಕ್ಕೆ ಶರಣಾದರು.
ಕಣ್ಣೀರಿನಿಂದ ಪೂರ್ತಿಯಾಗಿ ಒದ್ದೆಯಾಗಿದ್ದ ಶಾಹಿಲ್ ನ ಶರ್ಟ್ ಅಪ್ಪನ ಮೇಲಿಟ್ಟಿರುವ ಪ್ರೀತಿಯ ಆಳವನ್ನು ತಿಳಿಸುತ್ತಿತ್ತು.
ಮನೆಗೆ ತಲುಪಿದ ಶಾಹಿಲ್ ನನ್ನು ಬರಮಾಡಿಕೊಂಡದ್ದು ಒಂದು ಮೂಲೆಯಲ್ಲಿ ಜೀವಂತ ಶವವಾಗಿ ಕುಳಿತಿದ್ದ ತಾಯಿಯ ಮೌನ ಮತ್ತು ಇನ್ನೊಂದು ಮೂಲೆಯಲ್ಲಿ ಕುಳಿತು ಅಳುತ್ತಿದ್ದ ತಂಗಿಯಂದಿರ ಕಣ್ಣೀರು.
ನೂರಾರು ಕನಸುಗಳನ್ನು ಹೊತ್ತು ಗಲ್ಫ್ ರಾಷ್ಟಕ್ಕೆ ಹೊರಟ ಮಗನನ್ನು ಏರ್ಪೋರ್ಟ್ ವರಗೆ ಜೊತೆಗೇ ಹೋಗಿ ಬೀಳ್ಳೊಟ್ಟು ಬಂದ ತಂದೆಯ ಅಂತಿಮ ಯಾತ್ರೆಯಲ್ಲಿ ಪಾಳ್ಗೊಳ್ಳಲು ಸಾಧವಾಗದೇ ಇದ್ದದ್ದು "ಪ್ರವಾಸಿ" ಮಗನ ದುರಾದೃಷ್ಟವಲ್ಲದೆ ಇನ್ನೇನು?

ತಂದೆ-ತಾಯಿಯ ಮಯ್ಯತ್ ನೋಡಲು ಸರಿಯಾದ ಸಮಯಕ್ಕೆ ಊರಿಗೆ ತಲುಪಲು ಸಾಧ್ಯವಾಗದ ಅದೆಷ್ಟೋ ಪ್ರವಾಸಿಗರನ್ನು ನಾನು ಕಣ್ಣಾರೆ ನೋಡಿರುವ ಕಾರಣ ಈ ಕಥೆ ಸೃಷ್ಟಿಯಾಯಿತು.
ಮೇಲ್ನೋಟಕ್ಕೆ ಇದೊಂದು ಕಥೆಯಾದರೂ, ಲಕ್ಷಾಂತರ ಪ್ರವಾಸಿಗರಲ್ಲಿ ಅದೆಷ್ಟೋ "ಶಾಹಿಲ್" ನಮ್ಮ-ನಿಮ್ಮ ನಡುವೆ ಇದ್ದಾರೆ.

ಪ್ರವಾಸಿಗರ ಉದ್ಯೋಗದಲ್ಲಿ ಅಲ್ಲಾಹು ಬರಕತ್ ನೀಡಲಿ... ಆಮೀನ್

✍ಎಸ್ಸಾರ್ಜೆ ಮಾಡನ್ನೂರ್