ದಿನಾ ತರಾವೀಹ್ ಮುಗಿದ ಬಳಿಕ
ಮರುದಿನದ ಉಪವಾಸದ ನಿಯ್ಯತ್ ಹೇಳಿಕೊಡುವ ಮಾನ್ಯ ಉಸ್ತಾದ್ ಗಳ ಗಮನಕ್ಕೆ:
ಕೆಲವರು ಅದೊಂದು ದ್ಸಿಕ್ರ್ ಎಂಬಂತೆ ಕೇವಲ ಬಾಯಲ್ಲಿ ಉಚ್ಚರಿಸುತ್ತಾರೆ. ರಮಝಾನ್ ದಿನಗಳು ಹೆಚ್ಚುತ್ತಾ ಬಂದಂತೆ ಆಯಾಸದಿಂದ ತೂಕಡಿಸುವವರೂ ಇದ್ದಾರೆ. ಅಂತಹವರು ಯಾಂತ್ರಿಕವಾಗಿ ಬಾಯಲ್ಲಿ ಹೇಳುತ್ತಾರೆಯೇ ಹೊರತು ಏನು ಹೇಳುತ್ತಿರುವುದೆಂಬ ಪ್ರಜ್ಞೆ ಇರುವುದಿಲ್ಲ.
ನಿಯ್ಯತ್ ಅಂದರೆ ಮನದಲ್ಲಿ ಕಲ್ಪಿಸುವ ವಿಚಾರ. ನಿಯ್ಯತ್ ಮನದಲ್ಲಾಗಿರುವಿದು ಕಡ್ಡಾಯ. ಮನಸ್ಸಿಗೆ ಇಳಿಸಿಕೊಂಡ ಸ್ಥಿತಿಯಲ್ಲಿ ನಿಯ್ಯತ್ತಿನ ಪದಗಳನ್ನು ಬಾಯಲ್ಲಿ ಹೇಳಿಕೆ ಸುನ್ನತ್ ಮಾತ್ರ.
ಮನಸ್ಸಿಗೆ ಇಳಿಸದೆ ಬಾಯಲ್ಲಿ ಹೇಳಿದರೆ ನಿಯ್ಯತ್ ಸಿಂಧುವಲ್ಲ. ಉಪವಾಸ ಅಸಿಂಧು. ಆದರೆ ನಿಯ್ಯತನ್ನು ಮನದಲ್ಲಿ ಮಾಡಿದ್ದು ಬಾಯಲ್ಲಿ ಹೇಳದಿದ್ದರೆ ಒಂದು ಸುನ್ನತ್ ನಷ್ಟವಾಗುವುದೇ ಹೊರತು ಉಪವಾಸದ ಸಿಂಧುತ್ವಕ್ಕೆ ಯಾವುದೇ ಅಡ್ಡಿಯಿಲ್ಲ.
ಈ ವಿಷಯವನ್ನು ಎಲ್ಲ ಉಸ್ತಾದ್ ಗಳು ಅವರವರ ಜನರಿಗೆ ತಿಳಿಹೇಳಬೇಕಾಗಿ ವಿನಂತಿ.
ನವೈತು ಸೌಮ ಗದಿನ್ ...ಎಂದು ಅರಬಿಯಲ್ಲಿ ಮಾತ್ರ ಅರಬಿ ಗೊತ್ತಿಲ್ಲದವರಿಗೆ ಕಲಿಸಬಾರದು. ಕಾರಣ ತಾನು ಮನದಲ್ಲಿ ಕಲ್ಪಿಸಿಕೊಳ್ಳುತ್ತಿರುವುದು ಏನನ್ನು ಎಂಬ ಪ್ರಜ್ಞೆ ಇರಬೇಕಾದುದು ನಿಯ್ಯತ್ತಿನ ನಿಬಂಧನೆಯಾಗಿದೆ. ಅರಬಿ ಗೊತ್ತಿಲ್ಲದವರಿಗೆ ಅರಬಿಯಲ್ಲಿ ಕಲಿಸಿದರೆ ಅದೊಂದು ದ್ಸಿಕ್ರ್ ಎಂಬಂತೆ ಬಾಯಲ್ಲಿ ಹೇಳಿ ಅಷ್ಟಕ್ಕೇ ಸಾಕು ಮಾಡುವ ಅಪಾಯವಿದೆ.
ತರಾವೀಹ್ ನಂತರ ನಿಯ್ಯತ್ ಹೇಳಿಕೊಡುವ ರೂಡಿಯಿಂದಾಗಿ ನಿಯ್ಯತ್ ಅದೇ ಸಮಯದಲ್ಲೇ ಆಗಿರಬೇಕು ಎಂಬ ತಪ್ಪು ಕಲ್ಪನೆ ಕೆಲವರಿಗಿದೆ. ಇದನ್ನು ನಿವಾರಿಸಬೇಕು. ಮಗ್ರಿಬ್ ನಂತರ ಸುಬ್ ಹ್ ವರೆಗಿನ ಅವಧಿಯೊಳಗೆ ಯಾವ ಸಮಯದಲ್ಲೂ ನಿಯ್ಯತ್ ಮಾಡಬಹುದು ಎಂಬುದನ್ನು ಜನಸಾಮಾನ್ಯರಿಗೆ ತಿಳಿಸಬೇಕಾಗಿದೆ. ಉಸ್ತಾದ್ ಗಳು ಹೇಳಿಕೊಟ್ಟರೆ ಮಾತ್ರ ನಿಯ್ಯತ್ , ಸ್ವಂತವಾಗಿ ಮಾಡುವಂತಿಲ್ಲ ಎಂಬ ತಪ್ಪು ಕಲ್ಪನೆಯೂ ಬಾರದಂತೆ ಮಾಡಬೇಕು. ನಿಯ್ಯತ್ ಅಂದರೆ ಅವರವರೇ ಅವರವರ ಮನದಲ್ಲಿ ಮಾಡಬೇಕಾದ ದೃಢ ಸಂಕಲ್ಪ ಎಂಬುದನ್ನು ತಿಳಿಹೇಳಬೇಕಾಗಿದೆ.
"ರಮಳಾನಿನ ನಾಳಿನ ಫರಳ್ ಉಪವಾಸವನ್ನು ಆಚರಿಸಲು ನಾನು ಸಂಕಲ್ಪ ಮಾಡಿಕೊಳ್ಳುತ್ತೇನೆ " ಎಂದಾಗಿದೆ ನಿಯ್ಯತ್ ನ ಕಡ್ಡಾಯ ಭಾಗ. ಇಷ್ಟು ಕಲ್ಪಿಸಿಕೊಂಡರೆ ನಿಯ್ಯತ್ ಆಯಿತು. ಇದಕ್ಕೆ ಇಂತಹದ್ದೇ ಭಾಷೆ ಆಗಿರಬೇಕೆಂಬ ನಿಭಂದನೆಯಿಲ್ಲ. ಯಾವ ಭಾಷೆಯಲ್ಲೂ ಆಗಬಹುದು. ಮಾತೃ ಭಾಷೆಯಲ್ಲಾದರೆ ಮನದಾಳಕ್ಕಿಳಿಯಲು ಹೆಚ್ಚು ಸುಲಭ.
ಶಾಫಿಈ ಮಝ್ಹ ಬ್ ಪ್ರಕಾರ ನಿಯ್ಯತ್ ಪ್ರತಿ ದಿನವೂ ಬೇಕು. ಅಲ್ಲದೆ ರಾತ್ರಿಯೇ ಆಗಬೇಕು. ಹನಫಿ ಪ್ರಕಾರ ಹಗಲು ಮಧ್ಯಾಹ್ನಕ್ಕೆ ಮುನ್ನ( ಸುಬ್ ಹಿನಿಂದಲೇ ವ್ರತ ಮಾಡಿ) ನಿಯ್ಯತ್ ಮಾಡಿದರೂ ಸಾಕು.
ರಾತ್ರಿ ನಿಯ್ಯತ್ ಮರೆತ ಶಾಫಿಗಳಿಗೆ ಆ ದಿನದ ಉಪವಾಸ ನಷ್ಟ. ಹಗಲಿಡೀ ಉಪವಾಸಿಗನಂತೆ ಇರಲೂ ಬೇಕು( ಇಮ್ಸಾಕ್ ಮಾಡಬೇಕು) ರಂಜಾನ್ ಮುಗಿದ ಬಳಿಕ ಕಳಾ ತೀರಿಸಲೂ ಬೇಕು. ಈ ಸಂಕಷ್ಟದಿಂದ ಪಾರಾಗಲು ಹನಫಿ ಮದ್ಹಬ್ ತಕ್ಲೀದ್ ಮಾಡುವ ಅವಕಾಶವಿದೆ. ಅಂದರೆ ನಿಯ್ಯತ್ ಮರೆತರೆ ಹಗಲು ಮಧ್ಯಾಹ್ನಕ್ಕೆ ಮುನ್ನ ಹನಫಿ ಮಝ್ಹಬ್ ಅನುಸರಿಸುತ್ತೇನೆ ಎಂದು ಕಲ್ಪಿಸಿಕೊಂಡು ಮಧ್ಯಾಹ್ನಕ್ಕೆ ಮುನ್ನ ನಿಯ್ಯತ್ ಮಾಡಿಕೊಂಡರೆ ಆ ದಿನದ ಉಪವಾಸ ಸಿಂಧುವಾಗುತ್ತದೆ.
ಇದೇ ಪ್ರಕಾರ ರಮಝಾನಿನ ಆರಂಭದ ರಾತ್ರಿ ಇಡೀ ಮಾಸದ ನಿಯ್ಯತ್ತನ್ನು ಒಮ್ಮೆಲೆ ಮಾಡಿದರೆ ಸಾಕು ಎಂದಾಗಿದೆ ಮಾಲಿಕೀ ಮಝ್ಹಬ್.
ಈ ರಮಝಾನ್ ತಿಂಗಳ ಫರ್ಝ್ ವ್ರತವನ್ನು ನಾನು ಆಚರಿಸುತ್ತೇನೆ ಎಂದು ನಿಯ್ಯತ್ ಮಾಡಿಕೊಂಡರೆ ಮತ್ತೆ ಪ್ರತಿ ರಾತ್ರಿ ನಿಯ್ಯತ್ ಮಾಡಬೇಕಾಗಿಲ್ಲ.
ಶಾಫಿಗಳು ಇದನ್ನು ಕೂಡಾ ತಕ್ಲೀದ್ ಮಾಡಿಕೊಳ್ಳಬಹುದಾಗಿದೆ.
ಈವತ್ತು ರಾತ್ರಿ ಮಾಲಿಕ್ ಮಝ್ಹಬ್ ಅನುಸರಿಸಿ ಇಡೀ ತಿಂಗಳ ನಿಯ್ಯತ್ ಮಾಡಿಟ್ಟುಕೊಂಡರೆ ಮುಂದೆ ಯಾವುದಾದರೊಂದು ದಿನ ನಿಯ್ಯತ್ ಮರೆತರೂ ಕಳವಳವಿಲ್ಲ. ಹನಫೀ ಮಝ್ಹಬ್ ಅನುಸರಿಸಿ ಮಧ್ಯಾಹ್ನಕ್ಕೆ ಮುನ್ನ ನಿಯ್ಯತ್ ಮಾಡಬೇಕಾದ ಅಗತ್ಯವೂ ಇಲ್ಲ.
ಈ ತಕ್ ಲೀದಿನ ವಿಚಾರವನ್ನು ಫತ್ಹುಲ್ ಮುಈನ್ ಗ್ರಂಥದಲ್ಲಿ ಹೇಳಲಾಗಿದೆ.
ಎಲ್ಲರೂ ರಮಳಾನಿಡೀ ತಮ್ಮ ದುಆದಲ್ಲಿ ನನ್ನನ್ನೂ ಸೇರಿಸಿಕೊಳ್ಳಿರಿ ಎಂದು ಬೇಡಿಕೊಳ್ಳುತ್ತಿದ್ದೇನೆ.
- ಸಾಲೆತ್ತೂರು ಫೈಝಿ