"ದುಡ್ಡು ಬೇಕೆಂದರೆ ಇಲ್ಲೇ ಇರು, ಜೀವನ ಬೇಕೆಂದರೆ ಊರಲ್ಲಿ ಇರು"
ಗಲ್ಫ್ ರಾಷ್ಟ್ರಗಳಲ್ಲಿ ತನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನು ತ್ಯಾಗ ಮಾಡಿ ತನ್ನ ಕುಟುಂಬದವರಿಗಾಗಿ ದುಡಿಯುವ ಪ್ರವಾಸಿಗರು "ಜೀವನಕ್ಕೊಂದು ದಾರಿ ಕಂಡುಕೊಳ್ಳುವ ವೇಳೆಗೆ ಜೀವನದ ಅಂತ್ಯವನ್ನು ಸಮೀಪಿಸಿರುತ್ತಾರೆ".
ಹೌದು, ಪ್ರವಾಸಿಗರ ಜೀವನ ಅಂದರೆ "ಮುಳ್ಳಿನ ಹಾದಿಯಲ್ಲಿ ಚಪ್ಪಲಿ ಇಲ್ಲದೆ ನಡೆಯುವ ಹಾಗೆ."
ಜುಮಾ ನಮಾಝ್ ಮಾಡಿ ಮಸೀದಿಯಿಂದ ನನ್ನ ರೂಮಿಗೆ ಕಾರಲ್ಲಿ ಒಬ್ಬನೇ ಹೊಗುತ್ತಿದ್ದ ದಾರಿಯಲ್ಲಿ ಮೈ ಸುಡುವ ಬಿಸಿಲಿನಲ್ಲಿ ಒಬ್ಬ ಪ್ರಾಯದ ವ್ಯಕ್ತಿ ಸೂರ್ಯನ ಬಿಸಿಲನ್ನು ಮರೆಮಾಚಲು ಒಂದು ಸಣ್ಣ ಕರ್ಚಿಫನ್ನು ತಲೆಗೆ ಅಡ್ಡವಾಗಿಟ್ಟುಕೊಂಡು ನಡೆದು ಕೊಂಡು ಹೋಗುತ್ತಿದ್ದ ದೃಶ್ಯ ಕಂಡಾಗ, ಅವರನ್ನು ಬಿಟ್ಟು ನಾನು ಮುಂದೆ ಹೋಗುವುದಕ್ಕೆ ನನ್ನ ಮನಸ್ಸು ಯಾಕೋ ನನ್ನನ್ನು ಸಮ್ಮತಿಸಲಿಲ್ಲ.
ಕಾರನ್ನು ಅವರ ಹತ್ತಿರ ನಿಲ್ಲಿಸಿ "ಭಾಯ್ ಆಪ್ ಕಿದರ್ ಜಾರಹಾ ಹೆ" (ನೀವು ಎಲ್ಲಿಗೆ ಹೋಗ್ತಿದ್ದೀರ)?
ಅದಕ್ಕವರು "ನೀ ಮಲಯಾಳಿಯಾನೊ" (ನೀನು ಮಲಯಾಳಿಯಾ)? ಅಂತ ಕೇಳಿದರು.
ನಾನು, ಹಾಂ ಮಲಯಾಳಮ್ ಬರುತ್ತೆ ಕಾರಲ್ಲಿ ಕೂತ್ಕೊಳ್ಳಿ ನಿಮ್ಮನ್ನು ರೂಮ್ ಹತ್ತಿರ ಬಿಡುತ್ತೇನೆ ಅಂತ ಹೇಳಿ ಕಾರಲ್ಲಿ ಕೂರಿಸಿದೆ.
ಹೋಗುವ ದಾರಿ ಮದ್ಯ ಇಬ್ಬರೂ ಒಬ್ಬರಿಗೊಬ್ಬರು ಪರಿಚಯಿಸಿಕೊಂಡೆವು,
ಅವರು ಕೇರಳದ ಕಣ್ಣೂರು ಜಿಲ್ಲೆಯವರಾಗಿದ್ದರು. ನಾನು ಮಲಯಾಲಮ್ ಮಾತಾಡೋದನ್ನು ನೋಡಿ ಅವರು ಕೇಳಿದರು, ನೀನು ಮಲಯಾಳಿಯಾ ಅಂತ ಕೇಳಿದ್ದಕ್ಕೆ "ಮಲಯಾಳಿ" ಅನ್ನದೆ ಮಲಯಾಳಮ್ ಬರುತ್ತೆ ಅಂದಿದ್ಯಾಕೆ?
ನಾನು ಹೇಳಿದೆ, ನಾನು "ಕನ್ನಡಿಗ"(ಮಂಗಳೂರು), ನನ್ನ ಮನೆ ಭಾಷೆ ಮಲಯಾಳಮ್ ಆಗಿದ್ರೂನು ಮಾತೃ ಭಾಷೆ ಕನ್ನಡ ಅಂದೆ.
ಹೀಗೆ ಮಾತಾಡ್ತಾ ಮಾತಾಡ್ತಾ ಅವರು ತಮ್ಮ ಗಲ್ಫ್ ಜೀವನದ ಅನುಭವವನ್ನು ನನ್ನ ಜೊತೆ ಹಂಚಿಕೊಂಡರು.
ಅವರು ಹೇಳ್ತಾ ಹೋದರು...
ನಾನು ನನ್ನ ಇಪ್ಪತ್ಮೂರನೇ ವಯಸ್ಸಿಗೆ ಇಲ್ಲಿಗೆ(ಸೌದಿ ಅರೇಬಿಯಾ) ಬಂದದ್ದು, ಇವಾಗ ನನ್ನ ವಯಸ್ಸು ಐವತ್ನಾಲ್ಕು. ಎರಡು ವರ್ಷಕ್ಕೊಮ್ಮೆ ಮೂರು ತಿಂಗಳ ರಜೆಯಲ್ಲಿ ಊರಿಗೆ ಹೋಗಿ ಬರುತ್ತೇನೆ. ಪ್ರತಿ ಸಲ ಹೋಗುವಾಗಲೂ ಊರಲ್ಲೇ ಇದ್ದು ಏನಾದ್ರೂ ಮಾಡುವ ಅಂತ ಹೇಳಿ ಹೋಗುತ್ತೇನೆ, ಹೋದಮೇಲೆ ಕೈಯಲ್ಲಿ ಇರೋ ಸ್ವಲ್ಪ ದುಡ್ಡು ಖಾಲಿಯಾಗಿ ಸಾಲ ಮಾಡ್ಬೇಕಾದ ಪರಿಸ್ಥಿತಿ ನಿರ್ಮಾಣವಾದಾಗ ನನ್ನ ನಿರ್ಧಾರವನ್ನು ಬದಲಾಯಿಸಿ ಇನ್ನೊಂದು ಬಾರಿ ಹೋಗಿ ಬರುವ ಅಂದುಕೊಂಡು ಮತ್ತೆ ಇಲ್ಲಿಗೇ ಬರುತ್ತೇನೆ.
ಇದರ ನಡುವೆ ಅದೆಷ್ಟೋ ಆತ್ಮೀಯರ ಮರಣಗಳು ಸಂಭವಿಸಿದೆ, ಅಂತಹ ಸಂದರ್ಭಗಳಲ್ಲಿ ಕೆಲಸಕ್ಕೆ ರಜಾನೂ ಹಾಕಲಾಗದೆ ಕಣ್ಣೀರು ಸುರಿಸುತ್ತಾ ಕೆಲಸ ಮಾಡಿದ್ದೂ ಇದೆ.
ಸ್ವಂತ ಮಗಳ ಮದುವೆಗೂ ಹೋಗುವ ಸೌಭಾಗ್ಯ ನನಗಿರಲಿಲ್ಲ.
ಇತ್ತೀಚೆಗೆ ನನ್ನ ಆರೋಗ್ಯನೂ ಸ್ವಲ್ಪ ಕ್ಷೀಣಿಸಿದೆ, ನನ್ನ ಅತ್ಯಮೂಲ್ಯವಾದ ಸಮಯಗಳನ್ನು ಹೆಂಡತಿ ಮಕ್ಕಳಿಗಾಗಿ ತ್ಯಾಗ ಮಾಡಿದ್ದೇನೆ. ಇದೆಲ್ಲವೂ ನನ್ನ ಮನೆಯವರಿಗಾಗಿ ಅನ್ನುವ ಒಂದು ಸಂತೋಷ ಮಾತ್ರ ಬಾಕಿ ಉಳಿದಿರುವುದು.
ಜೀವನದಲ್ಲಿ ಏನೆಲ್ಲಾ ಕನಸುಗಳಿದ್ದವು, ಎಲ್ಲವೂ ಕನಸಾಗಿಯೇ ಉಳಿಯಿತು!
ಇನ್ನುಳಿದ ಸ್ವಲ್ಪ ಕಾಲವಾದರೂ ಮನೆಯಲ್ಲಿ ಹೆಂಡತಿ ಮಕ್ಕಳ ಜೊತೆಯಲ್ಲಿ ಇರಬೇಕೆಂದು ನಿರ್ಧರಿಸಿದ್ದೇನೆ ಎನ್ನುವಷ್ಟರಲ್ಲಿ ಅವರ ಕಣ್ಣುಗಳು ಕೂಡ ಮಾತನಾಡುತ್ತಿದ್ದವು.
ಇಷ್ಟು ಹೇಳಿ ಮುಗಿಸುವ ಹೊತ್ತಿಗೆ ನಾವು ಹೊರಟ ಕಾರನ್ನು ಅವರ ರೂಮಿನ ಮುಂದೆ ನಿಲ್ಲಿಸಿ ಹತ್ತು ನಿಮಿಷಗಳಾಗಿದ್ದವು. ಅವರ ರೂಮಿಗೆ ಹತ್ತುವಂತೆ ತುಂಬಾ ಒತ್ತಾಯ ಮಾಡಿದರೂ ಸಮಯವಿಲ್ಲದ ಕಾರಣ, ಇನ್ನೊಂದು ಸಾರಿ ಖಂಡಿತವಾಗಿಯೂ ಬರುತ್ತೇನೆಂದು ಹೊರಡುವಾಗ ಅವರು ಒಂದು ಮಾತು ಹೇಳಿದ್ರು,
"ದುಡ್ಡು ಬೇಕೆಂದರೆ ಇಲ್ಲೇ ಇರು, ಜೀವನ ಬೇಕೆಂದರೆ ಊರಲ್ಲಿ ಇರು" ಅಂತ.
ಜೀವನದ ಬೆಲೆಯನ್ನು ತಿಳಿದುಕೊಂಡ ಅವರ ಈ ಮಾತಿನಲ್ಲಿ ತುಂಬಾ ದೊಡ್ಡದಾದ ಅರ್ಥವಿದೆ ಅಂದುಕೊಂಡು ನಾನು ನನ್ನ ರೂಮಿಗೆ ಬಂದು ಅವರ ಬಗ್ಗೆ ಸ್ವಲ್ಪ ಯೋಚಿಸಿದೆ.
ಅವರು ಮೂವತ್ತು ವರ್ಷಗಳನ್ನು ಇಲ್ಲೇ ಕಳೆದಿದ್ದಾರೆ, ಎರಡು ವರ್ಷಕ್ಕೊಮ್ಮೆ ಮೂರು ತಿಂಗಳು ಊರಲ್ಲಿದ್ದರೆ ಮೂವತ್ತು ವರ್ಷದಲ್ಲಿ ನಲವತ್ತೈದು ತಿಂಗಳು, ಅಂದರೆ ಅವರ ಅಮೂಲ್ಯವಾದ ಮೂವತ್ತು ವರ್ಷಗಳಲ್ಲಿ ಅವರು ಕುಟುಂಬದ ಜೊತೆಯಲ್ಲಿ ಕಾಲ ಕಳೆದದ್ದು ಕೇವಲ ಮೂರು ವರ್ಷ ಮತ್ತು ಒಂಬತ್ತು ತಿಂಗಳು.
ಈ ಲೆಕ್ಕಾಚಾರವನ್ನು ಗುಣಿಸಿ, ಕೂಡಿಸಿ, ಕಳೆದಾಗ ನನಗೆ ಸಿಕ್ಕಿದ ಉತ್ತರಕ್ಕೂ ಅವರು ಕೊನೆಯದಾಗಿ ಹೇಳಿದ ಮಾತಿಗೂ ತುಂಬಾ ಸಾಮ್ಯತೆ ಇತ್ತು.
ತಾನು ಇಲ್ಲಿ ಹೊಟ್ಟೆ ತುಂಬಾ ತಿನ್ನುತ್ತಾ ಕೂತರೆ, ಎಲ್ಲಿ ತನ್ನ ಮನೆಯವರು ಒಂದು ಹೊತ್ತು ಉಪವಾಸ ಕೂತುಕೊಳ್ಳಬೇಕಾಗಿ ಬಂದೀತು ಅನ್ನೋ ಭಯದಿಂದ ತಾನೇ ಅಲ್ಪ ಸ್ವಲ್ಪ ತಿಂದು ಬದುಕುವ ಪ್ರವಾಸಿಗರು ನಮ್ಮ ನಡುವೆ ಇದ್ದಾರೆ,
ಏನಾದರು ಕಷ್ಟಗಳು ಬಂದಾಗ, ಏನಾದರು ರೋಗಗಳು ಭಾದಿಸಿದಾಗ ಮನೆಯವರಿಗೆ ತಿಳಿಸಿದರೆ ಅವರು ತುಂಬಾ ನೋವು ಪಡುವರು ಅಂದುಕೊಂಡು ಯಾವುದನ್ನು ಹೇಳದೆ ಎಲ್ಲಾ ನೋವನ್ನು ತಾನೊಬ್ಬನೇ ನುಂಗಿಕೊಳ್ಳುವ ಪ್ರವಾಸಿಗರು ಕೂಡ ನಮ್ಮ ನಡುವೆ ಇದ್ದಾರೆ.
ಇಷ್ಟೆಲ್ಲಾ ನೋವುಗಳನ್ನು ಅನುಭವಿಸುವ, ತನ್ನವರಿಗಾಗಿ ಮಾಡುವ ತ್ಯಾಗಗಳಲ್ಲಿಯೇ ಸಂತೋಷ ಕಾಣುವ ಪ್ರವಾಸಿಗರು ಎರಡು ವರ್ಷಕ್ಕೋ, ಮೂರು ವರ್ಷಕ್ಕೋ ರಜೆಯಲ್ಲಿ ಊರಿಗೆ ಹೋದಾಗ "ನೀನ್ಯಾವಾಗ ಮತ್ತೆ ಹೋಗೋದು?" ಅಂತ ಊರವರು ಕೇಳೋ ಪ್ರಶ್ನೆ ಮಾತ್ರ, ಗಾಯದ ಮೇಲೆ ಉಪ್ಪು ಹಾಕಿದಂತೆ ಇರುತ್ತದೆ.
ಇವತ್ತು ಸಿಕ್ಕಿದ ಈ ವ್ಯಕ್ತಿ ಜೀವನಪೂರ್ತಿ ನೆನಪಿಡಬೇಕಾದಂತಹ ಪಾಠವನ್ನು ನೆನಪಿಸಿ ಹೋದರು.
ನಮ್ಮ ಜೀವನದಲ್ಲಿ ಕೆಲವು ವ್ಯಕ್ತಿಗಳು ನಮ್ಮ ಜೊತೆ ಇರುವ ಸಮಯ ಕೆಲವೇ ನಿಮಿಷಗಳಾದರೂ, ಅವರು ಕೊಡುವ ಸಣ್ಣಪುಟ್ಟ ಸಲಹೆಗಳಲ್ಲಿ ಪೂರ್ತಿ ಜೀವನದ ಅರ್ಥವನ್ನು ಕಲಿಸಿ ಕೊಟ್ಟು ಹೋಗುತ್ತಾರೆ.
✍ಎಸ್ಸಾರ್ಜೆ ಮಾಡನ್ನೂರ್