ಊರ ಹೊರಗಿನ ಬಾವಿಗೆ ಬಿದ್ದು
ಬೆಕ್ಕೊಂದು ಸತ್ತಿದೆ.
'ಬೆಕ್ಕು ಹೆಜ್ಜೆ ತಪ್ಪುವುದೇ?'
ಊರ ನಾಲಗೆಗಳು
ಸುದ್ಧಿಯ ಕಾಡ್ಗಿಚ್ಚು ಹಚ್ಚಿವೆ.
'ಬೆಕ್ಕು ಊರು ಬಿಟ್ಟು
ಹೊರಗ್ಯಾಕೆ ಹೋಗಬೇಕಿತ್ತು?'
ಊರ ಕಣ್ಣುಗಳು
ಹುಬ್ಬೇರಿಸಿವೆ..
'ಇದು ರೇಪ್ ಅಂಡ್ ಮರ್ಡರ್ '
ಊರ ಬೆರಳುಗಳು
ಯಾರ್ಯಾರನ್ನೋ ತೋರಿಸುತ್ತಿವೆ..
'ಬೆಕ್ಕು ಸತ್ತಿದ್ದು ಊರ ಹೊರಗಿನ
ಪಾಳು ಬಾವಿಯಲ್ಲಿ.
ನಮ್ಮ ಮನೆಯ ಬಾವಿಯಲ್ಲಿ
ಬಿದ್ದು ಸತ್ತಿದ್ದರೆ ಏನು ಮಾಡಬೇಕಿತ್ತು.?'
ಊರಿಗೆ ಊರೇ ಸಮಾಧಾನದ
ನಿಟ್ಟುಸಿರು ಬಿಟ್ಟಿದೆ...
ಕಾಲ ಕಳೆದಿದೆ.
ಊರಿಗೆ ಬರಗಾಲ ಬಂದಿದೆ...
ಯಾರ ಮನೆ ಬಾವಿಯಲ್ಲೂ
ಒಂದು ಹನಿ ನೀರಿಲ್ಲ.
ಆದ್ರೆ... ಏನಾಶ್ಚರ್ಯ...
ಊರ ಹೊರಗಿನ
ಬೆಕ್ಕು ಸತ್ತ ಬಾವಿಯಲ್ಲಿ
ನೀರು ಒಸರುತ್ತಿದೆ..
ನಾಲಗೆಗಳೀಗ
ಯೂ ಟರ್ನ್ ಹೊಡೆದಿವೆ.
'ಊರಿಗೆ ನೀರು ಕೊಡಲು
ಬೆಕ್ಕು ಆತ್ಮಾಹುತಿಗೈದಿದೆ.'
ಕಣ್ಣುಗಳೂ ಬೆರಳುಗಳೂ
ಸೇರಿ ಬೆಕ್ಕಿಗೆ ಗುಡಿ ಕಟ್ಟಿವೆ.
ಊರ ಜನ ಎಷ್ಟು
ನೀರು ಸೇದಿದರೂ
ಈ ಬಾವಿ ಮಾತ್ರ
ಬತ್ತುತ್ತಿಲ್ಲ.
ಬೆಕ್ಕಿನ ಮರಿಗಳಿಗೆ
ಮಾತ್ರ ಗೊತ್ತು
ಈ ಬಾವಿಯ ಗುಟ್ಟು.
ಊರ ಜನ ಸೇದುತ್ತಿರುವುದು
ತಮ್ಮ ಕಣ್ಣೀರೆಂದು..
👉🏻ನವೀನ್ ಪಿರೇರಾ, ಸುರತ್ಕಲ್