ಬುಧವಾರ, ಜೂನ್ 29, 2016

ಶೋಷಣೆಯ ಮಾರ್ಗ

ಸಲಾತ್ ಮಜ್ಲಿಸ್ ಗೆ ಜನ ಯಾಕಾಗಿ ಸೇರುತ್ತಾರೆ ಎಂಬುದು ಬೆಳಕಿಗೆ ಬರುತ್ತಾ ಇದೆ. ಸಲಾತ್ ಬಿಸ್ನೆಸ್ ಎಂದು ನಾನು ಬರೆದಾಗ ನನ್ನ ಮೇಲೆ ಎಗರಿಬಿದ್ದವರು ಅರ್ಥಮಾಡಿಕೊಳ್ಳಿ.
ಉಳ್ಳಾಲದ ಸಲಾತ್ ಮಜ್ಲಿಸ್ ಗೆ ಜನರನ್ನು ಕರೆತರುತ್ತಿದ್ದ ಮುಸ್ಲಿಯಾರ್ ಗಳಿಗೆ ಮಾಮೂಲಿ ಸಂದಾಯವಾಗುತ್ತಿದ್ದುದು ಇದೀಗ ಆಡಳಿತ ಬದಲಾದಾಗ ಬಯಲಾಗಿದೆ.
ಈ ಸಲದ ಮಜ್ಲಿಸಿಗೆ ಬಸ್ಸಲ್ಲಿ ಜನರನ್ನು ಕರಕೊಂಡು ಬಂದ ಮುಸ್ಲಿಯಾರ್ ಗಳು ಮಾಮೂಲಿಗೆ ಹಲ್ಲುಗಿಂಜುತ್ತಾ ನಿಂತಾಗ ಹೊಸ ಆಡಳಿತ ಸಮಿತಿ ವಿಚಾರಿಸಿತು. ಆಗ ಅವರಿಗೆ ಹಿಂದಿನ ಆಡಳಿತ ಸಮಿತಿ ಕಮಿಷನ್ ಕೊಡುತ್ತಿದ್ದ ವಿಷಯವನ್ನು ಆ ಏಜೆಂಟ್ ಮುಸ್ಲಿಯಾರುಗಳು ಬಾಯಿಬಿಟ್ಟಿದ್ದಾರೆ!
ಹೊಸ ಆಡಳಿತ ಸಮಿತಿಯವರು ಕಮಿಷನ್ ಕೊಡಲು ನಿರಾಕರಿಸಿದ್ದಾರೆಂದು ಸುದ್ಧಿ.

ವಿಷೇಷವೆಂದರೆ ಕಮೀಷನ್ ಗೆ ಹಲ್ಲು ಗಿಂಜಿ ನಿಂತ ಏಜೆಂಟ್ ಮುಸ್ಲಿಯಾರರು ಕೂರ ರವರ ಹೆಸರಲ್ಲಿ ಪ್ರತಿಮಾಸ ಬರುತ್ತಿದ್ದ ವಿಶೇಷ ಬಸ್ಸಲ್ಲಿ ಜ(ದ)ನಗಳನ್ನು ಕರೆತರುತ್ತಿರುವವರು ಎಂಬುದು. ಇದನ್ನು ಪ್ರತ್ಯೇಕ ಹೇಳಲು ಕಾರಣವೇನೆಂದರೆ ಇಂದು ಆಧ್ಯಾತ್ಮದ ಹೆಸರಲ್ಲಿ ಹೇಗೆಲ್ಲ ಶೋಷಣೆ ನಡೆಯುತ್ತದೆ ಎಂದನ್ನು ಅರ್ಥ ಮಾಡಲಿಕ್ಕಾಗಿದೆ. ಕರಾಮತ್ ಇದೆಯೆಂದು ಪ್ರಚಾರ ಮಾಡಲಾದ ಕೂರರ ಹೆಸರಲ್ಲಾದರೆ ಜನ ಬೇಗ ವಶವಾಗುತ್ತಾರೆ. ಕೂರ ತಂಙಳ್ ಉಳ್ಳಾಲದ ಸಲಾತ್ ಮಜ್ಲಿಸ್ಗೆ ಆಯೋಜಿಸುವ ಬಸ್ಸು ವ್ಯವಸ್ಥೆ ಎಂದರೆ ಅಂಧ ವಿಶ್ವಾಸಿ  ಅಮಾಯಕರು ಫಕ್ಕನೆ ಹೊರಡುತ್ತಾರೆ. ಹಾಗೆ ಒಂದು ಬಸ್ಸು ಜನ ಸಿಕ್ಕಿದರೆ ಕನಿಷ್ಟ ಐವತ್ತು ಸಾವಿರವಾದರೂ ಮಜ್ಲಿಸ್ ಗೆ ಕಮಾಯಿ ಬರುತ್ತದೆ.
ಇಷ್ಟು ಕಮಾಯಿ ಮಾಡಿಕೊಡುವ ಏಜೆಂಟರಿಗೆ ಕನಿಷ್ಟ ಐದುಸಾವಿರ ಕೊಟ್ಟರೆ ಯಾರಪ್ಪನ ಗಂಟು ಮುಳುಗುತ್ತದೆ? ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ!  ಜಿಲ್ಲೆಯ ಹಲವು ಕಡೆಗಳಲ್ಲಿ ಕಳ್ಳಕರಾಮತನ್ನು ನಂಬಿ ಜನಜಾತ್ರೆ ಸೇರುತ್ತಿರುವುದರ ಹಿನ್ನೆಲೆಯಲ್ಲೂ ಏಜೆಂಟ್ ಮುಸ್ಲಿಯಾರ್ ಗಳು ಪ್ರಚಾರ ಮಾಡುತ್ತಿರುವ  ಸುಳ್ಳು ಕರಾಮತ್ ಗಳ ಪಾತ್ರ ಮುಖ್ಯವಾಗಿದೆ. ಒಂದು ಕರಾಮತಿನ ಕಳ್ಳ ಕಥೆ ಜನ ಮನದಿಂದ ಮಾಸುವಷ್ಟು ಸಮಯ ವಾದರೆ ಹೊಸ ಕರಾಮತ್ ಸೃಷ್ಟಿಮಾಡುತ್ತಾರೆ. ಕಬ್ಬಿಣ ಕಾದಾಗ ಬಡಿಯಬೇಕು( ಆರಿದರೆ ಬಡಿದು ಫಲವಿಲ್ಲ) ಎಂಬ ಇಂಗ್ಲಿಷ್ ನುಡಿಗಟ್ಟಿನಂತೆ ಸಂದರ್ಭೋಚಿತ ಕರಾಮತ್ ಸೃಷ್ಟಿಸುವುದರಲ್ಲೂ ಈ ಏಜೆಂಟ್ ಶೈತಾನರು ನಿಸ್ಸೀಮರಿಸ್ದಾರೆ. ನೀರಿಗೆ ಹಾಹಾಕಾರವೆದ್ದಿರುವ ಪ್ರಚಲಿತ ಪರಿಸ್ಥಿತಿಯಲ್ಲಿ ' ಸಲಾತ್ ಮಜ್ ಲಿಸಲ್ಲಿ ...ತಂಙಳ್ ದುಆ ಮಾಡಿದಾಗ ಮಳೆ ಸುರಿಯಿತು' ಎಂಬ ಅಪ್ಪಟ ಸುಳ್ಳು ಪ್ರಚಾರ ಇದಕ್ಕೊಂದು ಉದಾಹರಣೆ!
ಇತ್ತೀಚೆಗೆ ನಡೆದ ಈ ಪ್ರಚಾರ ನಡೆದುದರ ಸತ್ಯಾಸತ್ಯತೆಯನ್ನು ತಿಳಿಯಲೆಂದು ಬಾಯಾರು ಕಡೆಯ ಓರ್ವ ವ್ಯಕ್ತಿ ಕಾಣಸಿಕ್ಕಿದಾಗ ಅಲ್ಲೆಲ್ಲ ನೀರಿನ ಅವಸ್ಥೆ ಹೇಗಿದೆ ಎಂದು ನಾನು ಕೇಳಿದೆ. ನನ್ನ ಸಾವಿರ ಕಂಗುಗಳ ತೋಟದ ಆಸೆಯನ್ನೇ ಕೈಬಿಟ್ಟಿದ್ದೇನೆ. ಸಂಪೂರ್ಣ ಹೋಯಿತು.ನೂರು ತೆಂಗುಗಳ ಪೈಕಿ ನಲ್ವತ್ತು ತೆಂಗುಗಳು ಒಣಗಿ ತಲೆ ಮುರಿದು ಬಿದ್ದಾಯಿತು ಎಂದರು. ನನ್ನ ತೆಂಗುಗಳ ಪೈಕಿ ನನ್ನ ಪಿತ್ರಾರ್ಜಿತ ಜಾಗದಲ್ಲಿರುವ ಹಳೆಯ ಏಳೆಂಟು ತೆಂಗುಗಳಿಗೆ ನೀರು ಹಾಕದೆ ಹತ್ತು ವರ್ಷಗಳಾದವು. ಆದರೂ ಈಗಲೂ ಅದರಲ್ಲಿ ಕಾಯಿ ಬೆಳೆಯುತ್ತದೆ. ಈ ಆಧಾರದಲ್ಲಿ ನಾನು ಅವರಲ್ಲಿ ಕೇಳಿದೆ; ' ಒಂದೆರಡು ತಿಂಗಳು ನೀರಿಗೆ ಬರವಾದರೆ ತೆಂಗು ಸಾಯಲು ಛಾನ್ಸು ಇಲ್ಲವಲ್ಲ?
ಅದಕ್ಕೆ ಅವರು ಹೇಳಿದರು:
ನಿಮ್ಮದ್ದು ಬಯಲಲ್ಲಿರುವ ತೆಂಗು.  ಅದು ಸಾಗುವುದಿಲ್ಲ ನಿಜ. ನನ್ನದ್ದು ಮುರಕಲ್ಲಿನ ಪದವಿನಲ್ಲಿರುವ ತೆಂಗುಗಳು. ಅದು ನೀರಿಲ್ಲದೆ ಬದುಕುವುದಿಲ್ಲ.
ಒಟ್ಟಾರೆ....ಸಲಾತ್ ಮಜ್ಲಿಸ್ ನಲ್ಲಿ .......ತಂಙಳ್ ಪ್ರಾರ್ಥಿಸಿದಾಗ ಧಾರಾಕಾರ ಮಳೆಯಾಯಿತು ಎಂಬುದು ಸಲಾತ್ ಬಿಸ್ನೆಸ್ಸಿನ ಕಮೀಷನ್ ಏಜೆಂಟರ ಶುದ್ಧ ಸುಳ್ಳು ಪ್ರಚಾರವೆಂಬುದು ಸ್ಪಷ್ಟ

ಅಮಾಯಕರು ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದುದು ಇಷ್ಟೆ. ಅದೇನೆಂದರೆ,  ಕೆಲ ಮುಸ್ಲಿಯಾರ್ ಗಳು ಬಾಯಿತುಂಬ ಗೌರವದಿಂದ ತಂಙಳ್, ಸಲಾತ್ ಮಜ್ಲಿಸ್, ಕರಾಮತ್ ಎಂದೆಲ್ಲ ಹೇಳಿ ನಿಮ್ಮನ್ನು ದನಗಳಂತೆ ವಾಹನ ಗಳಲ್ಲಿ ತುಂಬಿಸಿಕೊಂಡು ಹೋಗುತ್ತಿರುವುದರ ಒಳಗುಟ್ಟು ಪಕ್ಕಾ ಬಿಸ್ನೆಸ್ಸು. ನಿಮ್ಮಿಂದ ಹಣ ಪೀಕಿಸಿ ಕಮೀಷನ್ ಪಡೆಯುವ ವ್ಯವಹಾರ. ಅವರು ನಿಮ್ಮ ಮನಸಿಗೆ ಮೂಡಿಸುವ ಆಧ್ಯಾತ್ಮಿಕ ಭಾವನೆಗಳು ಪಕ್ಕಾ ದಗಲ್ಬಾಜಿ.
ಒಂದು ಕುಪ್ರಸಿದ್ಧ ಸಲಾತ್ ಮಜ್ಲಿಸ್ ನಡೆಯುತ್ತರುವ ವೇದಿಕೆಯ ನೇಪಥ್ಯದಲ್ಲಿ ಕೆಲವು ರೋಗಿಗಳನ್ನು ಆಂಬುಲೆನ್ಸ್ ನಲ್ಲಿ ಮಲಗಿಸುವ ಶೋ ನಡೆಯುತ್ತಿರುವುದು ವರದಿಯಾಗಿದೆ. ಇದೂ ಕೂಡಾ ಜನರಲ್ಲಿ ನಂಬಿಕೆ ಮೂಡಿಸುವ ನಾಟಕ. ಆಂಬುಲೆನ್ಸ್ ನೊಳಗೆ ಮಲಗಿರುವವರು ಬಾಡಿಗೆ ರೋಗಿಗಳೆಂಬುದನ್ನು ರಹಸ್ಯ ಕಾರ್ಯಾಚರಣೆ ಮಾಡಿದರೆ ಬಯಲುಗೊಳಿಸಬಹುದಾಗಿದೆ.
  ಒಟ್ಟಾರೆ ಇಂದು ' ತಂಗಳ್ ' ಹಾಗೂ ಕರಾಮತ್, ಮಜ್ಲಿಸ್  ಮುಂತಾದ್ದು ಕೋಟಿ ಸಂಪಾದನೆಯ ಬಿಸ್ನೆಸ್ ಮಾರ್ಗಗಳು. ಅಲ್ಲಾಹನಲ್ಲಿ ವಿಶ್ವಾಸ ಸಾಕಾಗದ, ಭೌತಿಕ ದುರಾಸೆಯ,  ಎಲ್ಲಕ್ಕೂ ಪರಿಹಾರ ತಂಙಳರಿಂದ ಎಂದು ನಂಬುವ,  ಒಂದು  ಹಾರೆ, ಪಿಕ್ಕಾಸನ್ನುಕೂಡಾ ಆಚೀಚೆ ಇಡಲು ತಂಙಳ ಸಲಹೆ ಕೇಳಲು ಹೋಗುವ ಪರಮ ಮೂರ್ಖರು ಇರುವ ಕಾಲದ ವರೆಗೆ ಆಧ್ಯಾತ್ಮ, ಕರಾಮತ್ ಗಳು ಶೋಷಣೆಯ ಮಾರ್ಗ ವಾಗಿಯೇ ಉಳಿಯುತ್ತದೆ.

-   ಸಾಲೆತ್ತೂರು ಫೈಝಿ