ಸಾವಿರಾರು ಗಿಡನೆಟ್ಟ ಸರದಾರ ಜೀತ್‌ಮಿಲನ್
*ದುಡಿಮೆ ಅರ್ಧ ಹಣ ಸಸ್ಯಸಂಕುಲ ಉದ್ಧಾರಕ್ಕೆ*
ದುಡಿದ ಅರ್ಧ ಹಣವನ್ನು ಗಿಡ ನೆಡುವುದಕ್ಕೆ ಖರ್ಚು ಮಾಡುತ್ತಾರೆ. ಎಲ್ಲೇ ಖಾಲಿ ಜಾಗ ಇರಲಿ ಅಲ್ಲಿ ತನ್ನ ಮಗನ ಜತೆ ಬಂದು ಗಿಡ ನೆಡುತ್ತಾರೆ.
ಇವರ ಹೆಸರು *ಜೀತ್ ಮಿಲನ್ ರೋಶ್* ಇವರ ಉದ್ಯೋಗ ರಾತ್ರಿ ಶ್ರೀಮಂತರ ಕಾಕ್‌ಟೈಲ್ ಪಾರ್ಟಿ ಆಯೋಜಿಸೋದು. ಬಂದ ಹಣವನ್ನು ಗಿಡ ನೆಡಲು ಉಪಯೋಗಿಸೋದು. ಹೀಗಾಗಿ ಇವರು ಎಷ್ಟೇ ಸಂಪಾದನೆ ಮಾಡಿದರೂ ಇರೋದು ಬಾಡಿಗೆ ಮನೆಯಲ್ಲಿ.
ಮಹಾನಗರ ಪಾಲಿಕೆಯಿಂದ ಹಿಡಿದು ಸಾಮಾನ್ಯ ಜನರ ವರೆಗೂ ಆಧುನೀಕರಣ ಹೆಸರಲ್ಲಿ ಸಿಕ್ಕ, ಸಿಕ್ಕಲ್ಲಿ ಮರ ಕಡಿದು ಹಾಕುವವರೇ ಹೆಚ್ಚುತ್ತಿರುವಾಗ ಜೀತ್ ಮಿಲನ್ ಅಂಥವರ ಸಾಧನೆ ಅರ್ಥಪೂರ್ಣ. ಪರಿಸರ ಕಾಳಜಿಯ ಅತಿ ದೊಡ್ಡ ಸಮಾಜ ಸೇವೆ.
ಎಲ್ಲಿ ಖಾಲಿ ಜಾಗ ಕಂಡು ಬರುತ್ತದೆಯೋ ಅಲ್ಲಿಗೆ ಹೋಗಿ ಖುದ್ದು ಹಾರೆ ಪಿಕ್ಕಾಸು ಹಿಡಿದು ಗಿಡ ನೆಡುತ್ತಾರೆ. ಇವರ ಸಸ್ಯಸಂಕುಲ ಬೆಳೆಸುವ ಮಹತ್ಕಾರ್ಯಕ್ಕೆ ಸಹಾಯ ಮಾಡೋದು ಇವರ ಮಗಶಾನ್‌ಎಥನ್‌ರಾಜ್.
ಜೀತ್ ಅವರ ತಂದೆ ವಿನ್ಸೆಂಟ್ ಕೃಷಿಕರು ಹೀಗಾಗಿ ಗಿಡ ನೆಡೋದು ರಕ್ತದಲ್ಲಿಯೇ ಬಂದಿದೆ. ಮಗ 9ನೇ ಕ್ಲಾಸ್. ವಾರಾಂತ್ಯದಲ್ಲಿ, ರಜಾದಿನದಲ್ಲಿ ತಂದೆ ಜತೆ ಗಿಡ ನೆಡೊದೇ ಕೆಲಸ.
ಪಡೀಲ್‌ನಿಂದ ಪರಂಗಿ ಪೇಟೆ ವರೆಗೆ ಇವರು ನೆಟ್ಟ ಗಿಡಗಳು ಆಳೆತ್ತರಕ್ಕೆ ಈಗ ಬೆಳೆಯುತ್ತಿದ್ದು, ಮುಂದೆ ಸಾಲು ಮರಗಳಾಗಲಿವೆ. ಕೂಳೂರಿಂದ ಮಂಗಳಾದೇವಿ ವರೆಗೆ 3 ಸಾವಿರ ಗಿಡಗಳನ್ನು ನೆಟ್ಟಿದ್ದಾರೆ.
*25ಗಿಡದಿಂದ ಶುರು*
ಮೋರ್ಗನ್ ಗೇಟ್ ನಿವಾಸಿ ಜೀತ್ 2003 ರಲ್ಲಿ ಗಿಡ ನೆಡುವ ಕೆಲಸ ಶುರು ಮಾಡಿದರು. ಆರಂಭದಲ್ಲಿ 25 ಗಿಡ ನೆಟ್ಟರು. ಈಗ ಬೆಳೆದು ಎತ್ತರವಾಗಿವೆ. ಮಳೆಗಾಲ ಬಂದ ತಕ್ಷಣ ಇವರ ಕೆಲಸ ಶುರು. ಆರಂಭದ ಮೂರು ವರ್ಷದಲ್ಲಿ 800 ಗಿಡ ನೆಟ್ಟರು. ಈಗ ಪ್ರತಿ ವರ್ಷ 5ರಿಂದ 6 ಸಾವಿರ ಗಿಡ ನೆಡುತ್ತಿದ್ದಾರೆ.
ಸರಕಾರಿ ಜಾಗಕ್ಕೆ ಪ್ರಾಶಸ್ತ್ಯ. ರಸ್ತೆ ಬದಿಗಳಲ್ಲಿ, ರೈಲು ಹಳಿಗಳ ಬಳಿ ಗಿಡ ನೆಡುತ್ತಿದ್ದಾರೆ. ಆರಂಭದಲ್ಲಿ ತೋಟಗಾರಿಕೆ ಇಲಾಖೆಯಿಂದ ಗಿಡ ಖರೀದಿಸಿ ನೆಡುತ್ತಿದ್ದರು. ಬಳಿಕ ಇವರ ಸೇವಾ ಕಾರ್ಯ ನೋಡಿ ತೋಟಗಾರಿಕೆ ಇಲಾಖೆಯವರೇ ಗಿಡಗಳನ್ನು ಉಚಿತವಾಗಿ ನಿಡುತ್ತಿದ್ದಾರೆ.
ದನಗಳು ಗಿಡ ತಿಂದು ಹಾಳುಮಾಡುತ್ತವೆ ಎಂದು ಹೇಳುತ್ತಾರೆ. ಆದರೆ ಪ್ರಾಣಿಗಳೇ ವಾಸಿ. ಮಾನವರೇ ಗಿಡ, ಮರ ಕಡಿದು ನಾಶ ಮಾಡುತ್ತಾರೆ. ಮಹಾನಗರ ಪಾಲಿಕೆಯ ಸಿಬ್ಬಂದಿಯೇ ಕೆಲವೊಮ್ಮೆ ನಗರ ಸ್ವಚ್ಛ ಮಾಡುವ ಸಂದರ್ಭದಲ್ಲಿ ನೆಟ್ಟ ಗಿಡಗಳನ್ನು ಸರಾಸಗಟಾಗಿ ತುಂಡರಿಸಿದ್ದೂ ಇದೆ ಎನ್ನುತ್ತಾರೆ ಜೀತ್.
ಗುಜ್ಜರಕೆರೆ ಬಳಿತ ಗಿಡಗಳನ್ನು ಸ್ಥಳೀಯ ಮಂದಿಯೇ ಕತ್ತರಿಸಿದ್ದಾರೆ. ಜನರಿಗೆ ಸೆಕೆಗಾಲದಲ್ಲಿ ಮನೆಯೊಳಗೆ ತಂಪಾಗಿರಬೇಕು. ಗಾಳಿ ಬಿಸುತ್ತಿರಬೇಕು. ಆದರೆ ಗಿಡ, ಮರಗಳನ್ನು ಕತ್ತರಿಸುವುದನ್ನು ಬಿಡುವುದಿಲ್ಲ. ಗಿಡ ನೆಡುವುದಿಲ್ಲ ಎನ್ನುತ್ತಾರೆ.
ಜಾಗತಿಕ ತಾಪಮಾನ ಕುರಿತು ಎಲ್ಲರೂ ಮಾತನಾಡುತ್ತಾರೆ, ಭಾಷಣ ಬಿಗಿಯುತ್ತಾರೆ. ಯಾರೂ ಕೂಡಾ ಪ್ರಾಯೋಗಿಕವಾಗಿ ಜಾರಿ ಮಾಡುತ್ತಿಲ್ಲ. ನನ್ನ ಕೈಲಾದ ಕೆಲಸ ಮಾಡಲು ಗಿಡ ನೆಡಲು ಆರಂಭಿಸಿದೆ ಎನ್ನುತ್ತಾರೆ ಜೀತ್.
*ವಾರ್ಷಿಕ 5 ಸಾವಿರ ಮರ* ನೆಡುತ್ತಿದ್ದೇನೆ. ಆರಂಭದಲ್ಲಿ ಲೆಕ್ಕ ಇಡುತ್ತಿದ್ದೆ. ಈಗ ಲೆಕ್ಕ ಇಡುವುದನ್ನೇ ಬಿಟ್ಟಿದ್ದೇನೆ. ಸುಮಾರು 60 ಸಾವಿರ ಮರ ನೆಟ್ಟಿರಬಹುದು. ಈ ವರ್ಷ6 ಸಾವಿರ ಗಿಡ ನೆಟ್ಟಿದ್ದೇನೆ. ಈಗ ಗಿಡಗಳು ಮೇಲೆ ಬರುತ್ತಿದೆ.
ಪರಿಸರ ಕುಟುಂಬ
ಮಳೆಗಾಲದ ಮೂರು ತಿಂಗಳಲ್ಲಿ ತಂಡದವರು ಜತೆ ಇಡೀ ದಿನ ಗಿಡ ನೆಡುತ್ತೇವೆ. ಮಗ ವಾರಾಂತ್ಯದಲ್ಲಿ ಸೇರಿಕೊಳ್ಳುತ್ತಾನೆ. ಮಳೆಗಾಲದಲ್ಲಿ ನಾನು ಇದರಲ್ಲಿಯೇ ಬ್ಯುಸಿ ಆಗಿರುವ ಕಾರಣ ಸಣ್ಣ ಪುಟ್ಟ ಕಾಕ್‌ಟೈಲ್ ಪಾರ್ಟಿಗಳನ್ನ ಹೆಂಡತಿಯೇ ನೋಡಿಕೊಳ್ಳುತ್ತಾರೆ. ಮೊದಲೆಲ್ಲಾ ನಾನು ಮತ್ತು ಮಗ ಇಬ್ಬರೇ ಗಿಡ ನೆಡುತ್ತಿದ್ದೆವು. ನಾನು ಗುಂಡಿ ತೋಡುವಾಗ ಮಗ ಬಂದು ಗಿಡ ಕೊಡುತ್ತಿದ್ದ ಎನ್ನುತ್ತಾರೆ ಜೀತ್.
*ಖಾಸಗಿ ಕಾಡು ನಿರ್ಮಾಣ !*
ಅದ್ಯಪಾಡಿಯಲ್ಲಿ ಒಬ್ಬರು ನನಗೆ 38 ಎಕರೆ ಖಾಲಿ ಗುಡ್ಡದ ಜಾಗದಲ್ಲಿ ಕಾಡು ಮಾಡುವಂತೆ ಕೇಳಿಕೊಂಡರು. ಅಷ್ಟು ಜಾಗದಲ್ಲಿ 6 ಸಾವಿರ ಗಿಡಗಳನ್ನು ನನ್ನ ತಂಡದ ಜತೆ ನೆಟ್ಟಿದ್ದೇವೆ. ಅದು ಸಂಪದ್ಭರಿತ ಕಾಡಾಗಲಿದೆ. ಅಲ್ಲಿ ಗಂಧ, ಹಲಸು, ಹೆಬ್ಬಲಸು ಸಹಿತ 45 ತಳಿಯ ಗಿಡಗಳು ಬೆಳೆಯುತ್ತಿದೆ. ಇದೇ ರೀತಿ ಖಾಸಗಿ ಖಾಲಿ ಜಾಗದಲ್ಲಿ ಕಾಡು ನಿರ್ಮಾಣ ಮಾಡುವ ಕೆಲಸ ಮಾಡುತ್ತೇನೆ ಎನ್ನುತ್ತಾರೆ ಜೀತ್.
-- Article by *JITENDRA kundeshwara*