ಶನಿವಾರ, ಜೂನ್ 11, 2016

ರಮಝಾನ್

ಪವಿತ್ರ ಕುರ್ ಆನ್ ಅವತೀರ್ಣಗೊಂಡ ಮಾಸ ರಮಾಝಾನ್. ಈ ತಿಂಗಳು ಒರ್ವ ಸತ್ಯವಿಶ್ವಾಸಿಯ ಪಾಲಿಗೆ ತರಬೇತಿಯ ತಿಂಗಳು. ಈ ತಿಂಗಳಿನಲ್ಲಿ ಬಹುತೇಕ ಮುಸ್ಲಿಮ್ ಬಾಂಧವರು ತಮ್ಮಿಂದ ಸಾಧ್ಯವಾದಷ್ಟು ಕೆಡುಕಿನಿಂದ ದೂರವಿರಲು ಶ್ರಮಿಸುತ್ತಾರೆ. ಬಹಳಷ್ಟು ದುಶ್ಚಟಗಳಿಂದ ತಮ್ಮನ್ನು ವಿಮುಕ್ತಿಗೊಳಿಸಿ ದೇವನ ಸಂಪ್ರೀತಿಯನ್ನು ಪಡೆಯಲು ಪ್ರಯತ್ನಿಸುತ್ತಾರೆ. ತಾವು ಮಾಡಿರುವ ತಪ್ಪಿಗಾಗಿ ರಮಾಝಾನಿನ ರಾತ್ರಿಗಳಲ್ಲಿ ಏಕಾಂತವಾಗಿ ಪಶ್ಚಾತ್ತಾಪ ಪಟ್ಟು, ಅಲ್ಲಾಹನಲ್ಲಿ ಕ್ಷಮೆಯಾಚಿಸುತ್ತ ಹೊಸ ಜೀವನವನ್ನು ನಡೆಸಲು ಪಣತೊಡುವ ಒಂದು ಸುಮಧುರ ತಿಂಗಳು ರಮಾಝಾನ್.
ಸೈನಿಕರಿಗೆ ತರಬೇತಿ ಅವಧಿಯಿರುವಂತೆ , ಏಕದೇವ ವಿಶ್ವಾಸವನ್ನು ಅಂಗೀಕರಿಸಿರುವ ಇಸ್ಲಾಮಿನ ಸಿಪಾಯಿಗಳಿಗೆ, ಈ ತಿಂಗಳಲ್ಲಿ ಸಂಪೂರ್ಣವಾಗಿ ಮನುಷ್ಯತ್ವದ ಪಾಠ ಭೋಧಿಸಲಾಗುತ್ತದೆ. ಬೆಳಿಗ್ಗಿನಿಂದ ಸಂಜೆಯವರೆಗೆ ಉಪವಾಸ ಆಚರಿಸುವಂತೆ ಮಾಡಿ, ಹಸಿವಿನ ಪರಿಚಯದೊಂದಿಗೆ, ಹಸಿದವನಿಗೆ ಉಣ  ಬಡಿಸುವ ಉದಾತ್ತ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಲು ಪ್ರೇರಕ ರಮಾಝಾನ್!

ಆತ್ಮ ಸಂಸ್ಕರಣೆ ಯೊಂದಿಗೆ ದೇವ ಮತ್ತು ಮನುಷ್ಯನ ಸಂಬಂಧಗಳನ್ನು ಜೋಡಿಸಲು ಈ ತಿಂಗಳು ಸೇತುವಾಗಿದೆ. ಈ ತಿಂಗಳಿನಲ್ಲಿ ಸತ್ಯವಿಶ್ವಾಸಿಗಳು ಹೆಚ್ಚು ಹೆಚ್ಚು ಪವಿತ್ರ ಕುರ್ ಆನ್ ನನ್ನು ಓದಿ, ಅದರ ಮೌಲ್ಯಯುತ ಬೋಧನೆ ಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತ ಸಮಗ್ರ ಜೀವನ ವ್ಯವಸ್ಥೆಯನ್ನು ಸೃಷ್ಟಿಕರ್ತ ನ ಆಜ್ಞೆಯಂತೆ ನಡೆಸಲು ಈ ತಿಂಗಳು ಪ್ರೇರಣೆಯನ್ನು ಒದಗಿಸುತ್ತದೆ.
ಈ ತಿಂಗಳಿನಲ್ಲಿ ಉಪವಾಸ ಕಡ್ಡಾಯವಿದ್ದರೂ, ರೋಗಿಗಳಿಗೆ, ಪ್ರಯಾಣಿಕರಿಗೆ ,ಮಕ್ಕಳಿಗೆ ಹಾಗೂ ಇನ್ನಿತರ ಗಂಭೀರ ಸ್ವರೂಪದ ತೊಂದರೆಗೊಳಗಾಗಿರುವ ವ್ಯಕ್ತಿಗಳಿಗೆ ರಿಯಾಯಿತಿ ನೀಡಲಾಗಿದೆ. ಇದರಿಂದಲೇ ನಾವು ದೇವನ ಯುಕ್ತಿಯನ್ನು ಅರ್ಥೈಸಬಹುದಾಗಿದೆ. ಮನುಷ್ಯರನ್ನು ಉಪವಾಸವಿಟ್ಟು ಸಂಕಷ್ಟಗೊಳಪಡಿಸುದಾದರೆ ಮೇಲೆ ತಿಳಿಸಿದ ಎಲ್ಲ ದುರ್ಬಲರ ಮೇಲೆ ಉಪವಾಸ ಕಡ್ಡಾಯ ಗೊಳಿಸುತ್ತಿದ್ದನ್ನು ಆದರೆ ದೇವನ ಉದ್ದೇಶ ಸಂಕಷ್ಟ ಪಡಿಸುದಲ್ಲ ಬದಲಾಗಿ ಮನುಷ್ಯನಿಗೆ ತನ್ನ ಕರ್ತವ್ಯದ ವಿವಿಧ ಮಜಲುಗಳನ್ನು ಉಪವಾಸ ಎಂಬ ಕರ್ಮದ ಮೂಲಕ ತಿಳಿಸುತ್ತ ಆತನನ್ನು ಒರ್ವ ಮಾನವೀಯ ಮೌಲ್ಯಗಳನ್ನು ಪಾಲಿಸುವ ಹರಿಕಾರನಾಗಿ ರೂಪಿಸುವುದು ಆತನ ಗುರಿ. ಆ ಕಾರಣಕ್ಕಾಗಿ ಈ ಇಡೀ ತಿಂಗಳು ಮನುಷ್ಯ ತನ್ನ ಮನಸ್ಸನ್ನು ಹತೋಟಿಯಲ್ಲಿಟ್ಟು ಎಲ್ಲ ಕೆಡುಕಿನಿಂದ ದೂರ ಸರಿದು ಸಮಗ್ರವಾಗಿ ಮೌಲ್ಯಯುತ ಜೀವನ ನಡೆಸಲಿಯೆಂಬುದೇ ಇದರ ಉದ್ದೇಶ!
ಆಸೆಗಳಿಗೆ ಕಡಿವಾಣ ಹಾಕಿ ಆಸೆಗಳ ನಿಯಂತ್ರಣದೊಂದಿಗೆ, ಶ್ರೀಮಂತರ ಪಾಲಿನಲ್ಲಿ ಬಡವರ ಹಕ್ಕು ಕೂಡವಿದೆ ಮತ್ತು ಅದನ್ನು ಕಡ್ಡಾಯವಾಗಿ ಬಡವರಿಗೆ ಪಾಲಿಸುವಂತಾಗಬೇಕೆಂಬ ಪ್ರಕೃತಿ ದತ್ತವಾದ ನಿಯಮನ್ನು ಈ ತಿಂಗಳು ಮನುಷ್ಯನಿಗೆ ಕಲಿಸಿ ಕೊಡುತ್ತದೆ.

ಆದ್ದರಿಂದ ರಂಝಾನಿನಲ್ಲಿ ಪುಣ್ಯಗಳಿಕೆಯ ಉದ್ದೇಶಕ್ಕಿಂತ ಅಲ್ಲಾಹನ ಪ್ರೀತಿಯನ್ನು ಮರಳಿಗಳಿಸಲು, ಜೀವನದಲ್ಲಿ ತಿಳಿದು ತಿಳಿಯದೆ ಮಾಡಿದ ತಪ್ಪುಗಳನ್ನು ಪ್ರಮಾಣಿಕವಾಗಿ ಒಪ್ಪಿ, ಪಶ್ಚಾತ್ತಾಪ ಪಟ್ಟು ಕಣ್ಣೀರಿನ ಕಂಪಿನಲ್ಲಿ ಹೊಸ ಜೀವನಕ್ಕೆ, ಮನುಷ್ಯತ್ವದ, ಕೆಡುಕುಮುಕ್ತ ಸಮಾಜದ ನವ ನಿರ್ಮಾಣಕ್ಕೆ ತಯಾರಾದಗ ಮಾತ್ರ ಈ ರಮಾಝಾನ್ ನಮ್ಮ ಪಾಲಿಗೆ ಯಶಸ್ವಿಯಾಗಲು ಸಾಧ್ಯ. ಕೇವಲ ಸಂಪ್ರದಾಯದಂತೆ ಈ ತಿಂಗಳು ಉಪವಾಸ ಆಚರಿಸುದಕ್ಕಷ್ಟೇ ಸೀಮಿತವಾದರೆ ಖಂಡಿತವಾಗಿಯೂ ಇದರಿಂದ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ಈ ತಿಂಗಳು ಇಸ್ಲಾಮಿನ ಸಮಗ್ರತೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರಣೆಯಾಗಲೆಂದು ಪ್ರಾರ್ಥಿಸುತ್ತೇನೆ.

ವೈ.ಎನ್.ಕೆ