ಶನಿವಾರ, ಜೂನ್ 11, 2016

ಉಚಿತ ಶಿಕ್ಷಣ

*ತನ್ನ ಮಕ್ಕಳನ್ನೇ ಸರಕಾರಿ ಶಾಲೆಗೆ ಸೇರಿಸಿ, ಎಲ್ಲ ಮಕ್ಕಳಿಗೆ ಉಚಿತ ಶಿಕ್ಷಣ ವ್ಯವಸ್ಥೆ ಮಾಡಿ ಮಾದರಿಯಾದ ಪ್ರಕಾಶ್ ಅಂಚನ್* 

ಲೇಖನ: *ಜಿತೇಂದ್ರ ಕುಂದೇಶ್ವರ *

*ನಮ್ಮೂರ ಶಾಲೆ ಮುಚ್ಚಿ ಹೋಗುತ್ತಿದೆ ಎಂದಾಗ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗೆ ಹೋಗುತ್ತಿದ್ದ ತನ್ನೆರಡೂ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿದರು. ಅಷ್ಟು ಮಾತ್ರವಲ್ಲದೆ ಸಂಸ್ಥೆ ಸಹಕಾರದಿಂದ ಮುಚ್ಚಿ ಹೋಗುತ್ತಿದ್ದ ಶಾಲೆಗೆ 200 ಮಕ್ಕಳನ್ನು ಸೇರಿಸಿ ಜನ ಮೆಚ್ಚುವ ಹಾಗೆ ಮಾಡಿದರು. 

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ಬಾಳ ತಾಲೂಕಿನ ಮೂಡುನಡುಗೋಡು ಗ್ರಾಮದ ದಡ್ಡಲಕಾಡು ಸರ್ಕಾರಿ ಪ್ರಾಥಮಿಕ ಶಾಲೆ ಯಲ್ಲಿ ಕಳೆದ ವರ್ಷ 30 ಮಕ್ಕಳಿದ್ದರು. ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ನೇತೃತ್ವದಲ್ಲಿ ನಡೆದ ಆಂದೋಲನ ಬಳಿಕ 8 ತಿಂಗಳಲ್ಲಿ ಶಾಲೆಯಲ್ಲೀಗ 218 ಮಕ್ಕಳು ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮದಲ್ಲೂ ವಿದ್ಯಾರ್ಜನೆ ಮಾಡುತ್ತಿದ್ದಾರೆ. 

ಸರಕಾರಿ ಕನ್ನಡ ಮಾಧ್ಯಮ ಶಾಲೆ ದಿನದಿಂದ ದಿನಕ್ಕೆ ಕೃಶವಾಗುತ್ತಿತ್ತು. ಒಂದು ದಿನ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ತಂಡ ಶಾಲೆಗೆ ಭೇಟಿ ನೀಡಿದಾಗ ಇನ್ನು ಶಾಲೆ ಮುಚ್ಚಲಿದೆ ಎಂಬ ಸುದ್ದಿ ಬಂತು. ಹೇಗಾದರೂ ಮಾಡಿ ಶಾಲೆ ಉಳಿಸಬೇಕೆನ್ನುವ ನಿರ್ಧಾರಕ್ಕೆ ಬಂದ ಬಳಿಕ ಆದ ಕ್ರಾಂತಿ ಇದು. 

ಶಿಕ್ಷಣ ಇಲಾಖೆಯೊಂದಿಗೆ ಮಾತುಕತೆ ನಡೆಸಿ ಈ ಶಾಲೆಯನ್ನು ಕ್ಲಬ್‌ನ ವತಿಯಿಂದ ದತ್ತು ಪಡೆದು ಸಂಪೂರ್ಣ ಅಭಿವೃದ್ದಿ ಮಾಡಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುತ್ತೇವೆ ಎಂದು ಒಪ್ಪಂದ ಕೂಡಾ ಮಾಡಿದರು. 

ಮೊದಲ ಹಂತದಲ್ಲಿ ಕ್ಲಬ್‌ನ ಹೆಚ್ಚಿನ ಸದಸ್ಯರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಯಿಂದ ಬಿಡಿಸಿ ಈ ಸರಕಾರಿ ಶಾಲೆಗೆ ಸೇರಿಸಿದರು. ಬಳಿಕ ಮನೆ ಮನೆಗೆ ಭೇಟಿ ನೀಡಿ ಈ ಸರಕಾರಿ ಶಾಲೆಯಲ್ಲೇ ನಿಮಗೆ ಬೇಕಾದಂತೆ ಆಂಗ್ಲ ಮಾಧ್ಯಮದ ಶಿಕ್ಷಣವನ್ನು ನೀಡುವ ಭರವಸೆ ನೀಡಿದರು. 

ಅದರಂತೆ ಕ್ಲಬ್‌ನ ವತಿಯಿಂದಲೇ ಏಳು ಮಂದಿ ಶಿಕ್ಷಕರನ್ನು ನೇಮಿಸಲಾಯಿತು. ಇಡೀ ಶಾಲೆಯನ್ನೇ ಆಂಗ್ಲ ಮಾಧ್ಯಮವನ್ನಾಗಿಸಿದರು. ಶಿಕ್ಷಣ ಇಲಾಖೆಯ ಅನುಮತಿ ಪಡೆದು ಎಲ್‌ಕೆಜಿ,  ಯುಕೆಜಿ ಹಾಗೂ ಎಂಟನೇ ತರಗತಿಯನ್ನೂ ಆರಂಭಿಸಿದರು. ಜತೆಗೆ ಸರಕಾರಿ ಶಾಲೆಗೆ ಸೇರುವ ಎಲ್ಲ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕಗಳು, ಸಮವಸ್ತ್ರ, ಊಟ, ಶಾಲಾ ಬಸ್ಸು, ದಾಖಲೆ. ಅರ್ಜಿ ಶುಲ್ಕ ಎಲ್ಲವೂ ಕ್ಲಬ್‌ನ ವತಿಯಿಂದ ಪ್ರಕಾಶ್ ಅಂಚನ್ ಭರಿಸಿದರು. 

*1 ಕೋಟಿ ವೆಚ್ಚದಲ್ಲಿ ಕಟ್ಟಡ*

ಬೀಳುವಂತಿದ್ದ ಶಾಲೆ ಕಟ್ಟಡಕ್ಕೂ ಬದಲಿ ವ್ಯವಸ್ಥೆ ಮಾಡಿದೆ. ಕ್ಲಬ್‌ನ ಹಾಗೂ ದಾನಿಗಳ ಸಹಕಾರದಿಂದ 1 ಕೋಟಿ ರು. ವೆಚ್ಚದಲ್ಲಿ 13 ಕೊಠಡಿಗಳ ಸುಸಜ್ಜಿತ ಶಾಲೆ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದೆ. ಮುಂದಿನ ವರ್ಷ ಈ ಕಟ್ಟಡ ಪೂರ್ಣಗೊಳ್ಳಲಿದೆ. 

*ಬೇರೆ ಊರಲ್ಲೂ ಕ್ರಾಂತಿ*

 ರೂವಾರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಹೇಳುವುದು ಹೀಗೆ: ಶಾಲೆ ಮುಚ್ಚುತ್ತದೆ ಎಂದಾಗ ಮೊದಲು ಕಾರಿಂಜ ಆಂಗ್ಲ ಮಾಧ್ಯಮ ಶಾಲೆಗೆ ಹೋಗುತ್ತಿದ್ದ ನನ್ನ ಇಬ್ಬರು ಮಕ್ಕಳನ್ನು ಬಿಡಿಸಿ ಸರಕಾರಿ ಶಾಲೆಗೆ ಸೇರಿಸಿದೆ. ಅದಾಗಲೇ ಫೀಸ್ ಕೂಡಾ ಕಟ್ಟಿಯಾಗಿತ್ತು. ಶಾಲೆಗೆ ಮಾಡಿದ ಹಣದ ಖರ್ಚಿನ ಲೆಕ್ಕ ಇಟ್ಟಿಲ್ಲ. ಒಳ್ಳೆಯ ವಿಚಾರಕ್ಕೆ ಖರ್ಚು ಮಾಡಿದ ಲೆಕ್ಕ ಇಡಬಾರದು. ಕ್ಲಬ್ ಸದಸ್ಯರು ಆಂದೋಲನಕ್ಕೆ ಕೈ ಜೋಡಿಸಿದರು. 

*ನಾನು ಕಲಿತದ್ದು 7 ನೇ ಕ್ಲಾಸ್.* ನನಗೆ ಕಲಿಯಲು ಅವಕಾಶ ಸಿಗಲಿಲ್ಲ. ಇಲ್ಲಿನ ಬಡ ಮಕ್ಕಳಿಗೆ ಆಧಾರ ಆಗಿರೋದು ಇದೇ ಒಂದು ಶಾಲೆ ಇದು ಮುಚ್ಚಿದರೆ ದುಬಾರಿ ಫೀಸ್ ನೀಡಿ ಮಕ್ಕಳು ಆಂಗ್ಲ ಮಾಧ್ಯಮ ಶಾಲೆಗೆ ಹೋಗುವುದಿಲ್ಲ. ಈ ಕಾರಣಕ್ಕೆ ಶಾಲೆಯನ್ನು ಖಾಸಗಿ ಶಾಲೆಗಳಂತೆ ಆಧುನಿಕ ಶಿಕ್ಷಣಕ್ಕೆ ಸರಿಸಮಾನಾಗಿಸುವಂತೆ ಮಾಡಿದೆವು. ನನ್ನ ಮಕ್ಕಳು ಈಗ ಇಲ್ಲಿಯೇ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಾರೆ. ಈಗ ಉಳಿದ ಕಡೆಗಳಲ್ಲಿ ಆಯಾ ಊರಿನವರು ಶಾಲೆ ಉಳಿಸಲು ಮನಸ್ಸು ಮಾಡುತ್ತಿದ್ದಾರೆ. ಅದಕ್ಕೆ ಆಧುನೀಕರಣದ ಟಚ್ ನೀಡುತ್ತಿರುವುದನ್ನು ನೋಡಿದಾಗ ಸಾರ್ಥಕ ಎನಿಸುತ್ತೆ.