ಭಾನುವಾರ, ಜೂನ್ 19, 2016

ಅಪ್ಪನ ನೆನಪಿನಲ್ಲಿ

ಅಪ್ಪನ ನೆನಪಿನಲ್ಲಿ

ಅಪ್ಪ ಶಬ್ದದಲ್ಲೇ ಒಂದು ಭದ್ರತಾ ಭಾವ. ನಾನು ಅಮ್ಮನ ಹೊಟ್ಟೆಯಲ್ಲಿರುವಾಗಲೇ ನನ್ನನ್ನು ಪ್ರೀತಿಸಿದ ಹಾಗೂ ನನಗಾಗಿ ಕನಸು ಕಂಡ ಒಂದೇ ಒಂದು ವ್ಯಕ್ತಿ ಅದು ಅಪ್ಪ. ನಾನಿವತ್ತು ಬರೆಯಹೊರಟಿರುವುದು ನನ್ನ ಜೀವನದ ಮೊದಲ ಹೀರೋ ಆದ ನನ್ನಪ್ಪನ ಬಗ್ಗೆ.   ಮನೆಯ ಹಿರಿಮಗಳಾದ ನನ್ನ ಮೇಲೆ ನನ್ನ ಬಾಪನಿಗೆ ಒಂದಿನಿತು ಪ್ರೀತಿ ಜಾಸ್ತಿಯೇ . ಕೆಲಸ ಮುಗಿಸಿ ಮನೆಗೆ ಪ್ರವೇಶಿಸುವಾಗ ಅವರು ಕರೆಯುತ್ತಿದ್ದ ಮೊದಲ ಹೆಸರು ನನ್ನದು ( ಬಹುಶಃ ಪ್ರತಿ ತಂದೆಯೂ ತನ್ನ ಮೊದಲ ಕರುಳ ಕುಡಿಯ ಹೆಸರು ಕೂಗುತ್ತಲೇ ಮನೆ ಪ್ರವೇಶಿಸುತ್ತಾರೆ).

ಶ್ರಮಜೀವಿಯಾಗಿದ್ದ ನನ್ನ ತಂದೆ ಮೊದಲು ತನ್ನ ತಾಯಿ, ಅಣ್ಣ ಅಕ್ಕಂದಿರು, ಅವರ ಮಕ್ಕಳಿಗಾಗಿ ದುಡಿದರು.  ಆಮೇಲೆ ನಮಗಾಗಿ ಅಂದರೆ ಅವರ ಹೆಂಡತಿ ಮಕ್ಕಳಿಗಾಗಿ ಜೀವನಪೂರ್ತಿ ಅವಿಶ್ರಾಂತವಾಗಿ ದುಡಿದರು. ನಾನು ಚಿಕ್ಕವಳಿದ್ದಾಗ "ಮನೆ ಆಟ" ಎಂಬ ಆಟವಾಡುವಾಗ ತಂದೆಯ ಪಾರ್ಟ್ ನನ್ನದೇ.  ಬಾಪ ಹೇಳುತ್ತಿದ್ದಂತೆ "ನಾನು ಲಾರಿ ಇಟ್ಟು ಬರ್ತೀನಿ" ಎಂಬ ನನ್ನ ಡೈಲಾಗ್ ಗೆ ಮನೆಯ ಹಿರಿಯರೆಲ್ಲ ಬಿದ್ದು ಬಿದ್ದು ನಗುತ್ತಿದ್ದರು.  ದಿನವೂ ಅಪ್ಪ ಕೆಲಸ ಬಿಟ್ಟು ಮನೆಗೆ ಬರುವಾಗ ನಾನು ಕಾಯುತ್ತಿದ್ದುದು ಒಂದು ಅಪ್ಪ ತರುವ ತಿಂಡಿಯ ಪೊಟ್ಟಣ ಮತ್ತೊಂದು ಅವರ ಹಾಸ್ಯಭರಿತವಾದ ಅಂದಿನ ದಿನದ ವರ್ಣನೆ.

ಊರಿನವರೊಂದಿಗೆ ನೆರೆಕರೆಯವರೊಂದಿಗೆ ತುಂಬಾ ಹೊಂದಾಣಿಕೆ ಪ್ರೀತಿಯಿಂದಿದ್ದ ನನ್ನ ಬಾಪಾ ಎಂದರೆ ಎಲ್ಲಾರಿಗೂ ಅಚ್ಚುಮೆಚ್ಚು.  ಬಾಪಾನ ಹಾಸ್ಯಭರಿತವಾದ ಮಾತುಗಳಿಂದ ಹಲವಾರು ಜಗಳಗಳು ಬಗೆಹರಿದದ್ದೂ ಉಂಟು. ಒಂದು ಪುಟ್ಟ ಘಟನೆಯನ್ನು ಹೇಳುವುದಾದರೆ ನಮ್ಮ ಊರು ಹಳ್ಳಿಯಾಗಿದ್ದರೂ ರಾಷ್ಟ್ರೀಯ ಹೆದ್ದಾರಿಯ ಬಳಿಯಲ್ಲೇ ಇತ್ತು.  ಹಾಗೂ ನಮ್ಮ ಮನೆಯು ರಸ್ತೆ ಬದಿಯಲ್ಲೇ ಆದ ಕಾರಣ ಏನೇ ಗಲಾಟೆಗಳಾದರೋ ನಮಗೆ ಕೆಲವೊಮ್ಮೆ free  entertainment .  ಹಾಗೆ ಒಂದು ದಿನ ಇಬ್ಬರ ನಡುವೆ ಮಾತಿನ ಚಕಮಕಿಯೊಂದಿಗೆ ತೊಡಗಿದ ಜಗಳವು ಕೈ ಕೈ ಮಿಲಾಯಿಸುವವರೆಗೂ ತಲುಪಿತ್ತು, ತಮಾಷೆ ನೋಡಲು ಸುಮಾರು ೫೦ರಿಂದ ೬೦ ಜನರೂ ಸೇರಿದ್ದರು.  ಕೆಲವರು ಸೇರಿ ಇಬ್ಬರನ್ನು ಹಿಡಿದು ಜಗಳಾಡದಂತೆ ತಡೆಯುತ್ತಿದ್ದ ಹಾಗೆ ಅವರ ರೋಷವು ಇನ್ನೂ ಉಕ್ಕುತ್ತಿತ್ತು ಇದರಿಂದಾಗಿ ಹೆದ್ದಾರಿ ಕೆಲವು ಕ್ಷಣ ಬಂದ್ ಆಗಿತ್ತು.  ಕೊನೆಗೆ ಅಲ್ಲಿಗೆ ಆಗಮಿಸಿದ ನನ್ನ ಬಾಪ ಎಲ್ಲರನ್ನುದ್ದೇಶಿಸಿ ಗಟ್ಟಿ ಸ್ವರದಿಂದ " ಪ್ರೇಕ್ಷಕರೆಲ್ಲ ಬದಿಗೆ ನಿಂತು ಸಹಕರಿಸಿ ವಾಹನಗಳು ಮುಂದೆ ಸಾಗಲು ಅನುಕೂಲ ಮಾಡಿಕೊದಬೇಕಾಗಿ ವಿನಂತಿ" ಎಂದು ಹೇಳಿದಾಗ ಜಗಳಾಡುತ್ತಿದ್ದವರು ಹಾಗೂ ಜಗಳ ಬಿಡಿಸುತ್ತಿದ್ದವರೂ ಎಲ್ಲರೂ ಘೊಳ್ಳನೆ ನಕ್ಕಾಗ ಪರಿಸ್ಥಿತಿ ತಿಳಿಯಾಗಿತ್ತು. 
ಮತ್ತೊಂದು ಸಾರಿ ಮಂಗಳೂರಿನ ಯಾವುದೋ ಒಂದು ಭಾಗದಲ್ಲಿ ಕೋಮುಗಲಭೆಯಾಗುತ್ತಿತ್ತು. ನಮ್ಮೂರಲ್ಲೂ ಬೂದಿ ಮುಚ್ಚಿದ ಕೆಂಡದಂತೆ ಪರಿಸ್ತಿತಿಯು ಬಿಗುವಿನಿಂದ ಕೂಡಿತ್ತು.  ನನ್ನ ಬಾಪ ಕೆಲಸ ಮುಗಿಸಿ ಬಂದವರೇ ಹೊರಜಗಲಿಯಲ್ಲಿ ಕುಳಿತು "ಪಕ್ಕದ ಕೇರಿಯಲ್ಲಿ ಭಯಂಕರ ಕೋಮುಗಲಭೆ" ಎಂದು ಹೇಳಿದರು.  ಅಲ್ಲಿದ್ದವರೆಲ್ಲಾ ಕೂಡಲೇ ಕಿವಿ ನಿಮಿರಿಸಿಕೊಂಡು ನಮ್ಮಪ್ಪನ ಬಳಿ ಬಂದು "ಏನು ವಿಷಯ  ಯಾರಿಗೆ ಗಲಾಟೆ ಎಂದೆಲ್ಲಾ ಕೇಳತೊಡಗಿದರು.  ನಮ್ಮ ತಂದೆ ಗಂಭೀರವಾಗಿ ಶಂಕರ ಭಟ್ರು ಹಾಗೂ ಜೋಕ್ಕಿ ಪೊರ್ಬು ಗಳ ನಾಯಿಗಳಿಗೆ ಎಂದರು.  ಜನರೆಲ್ಲಾ ನಗುತ್ತ ಎಂತ ತಮಾಷೆ ಮಾರಾಯರೇ ಅದು  ಹೇಗೆ ಕೋಮುಗಲಭೆಯಗುತ್ತೆ ಎಂದಾಗ,  ನಮ್ಮ ತಂದೆಯು ಶಂಕರ ಭಟ್ರದು ಹಿಂದೂ ನಾಯಿ, ಜೋಕ್ಕು ಪೊರ್ಬುಗಳದ್ದು ಕ್ರಿಶ್ಚಿಯನ್ ನಾಯಿ ಕೋಮುಗಲಭೆ ತಾನೇ ಎಂದರು.  ನಾಯಿಗಳ ಜಗಳ ಕೊಮುಗಲಭೆಯಾಗುವುದಿಲ್ಲ ಎಂದು ಯಾರೋ ಒಬ್ಬರು ಹೇಳಿದಾಗ ನಮ್ಮ ತಂದೆ "ನಾಯಿಗಳಿಗೆ ಇಲ್ಲದ ಬೇಡದ ಕೋಮುವೈಷಮ್ಯ ಮನುಷ್ಯರಾದ ನಮಗೇಕೆ"ಎಂದರು.  ಆ ಮಾತು ಅಲ್ಲಿದ್ದವರ ಮನಸ್ಸನ್ನು ಒಂದು ಕ್ಷಣದ ಮಟ್ಟಿಗೆ ತಟ್ಟಿದ್ದಂತೂ ನಿಜ.
ನನ್ನ ಶಾಲೆಯ ಮೊದಲ ದಿನ ನಾನು ಹೊಸ ಯುನಿಫಾರ್ಮ್, ಬ್ಯಾಗ್, ಶೂಸ್ ಎಲ್ಲ ಹಾಕಿಕೊಂಡು ಅಪ್ಪನ ಕೈ ಹಿಡಿದು ಪುಟು ಪುಟು ಹೆಜ್ಜೆ ಹಾಕುತ್ತ ಹೋದದ್ದು ನನಗಿನ್ನೂ ನೆನಪಿದೆ,  ಅಪ್ಪನ ಲಾರಿ ಹತ್ತಿ ಡ್ರೈವರ್ ಆಗಿದ್ದು, ಕಾಡಿನಿಂದ ಸೌದೆ ತರಲು ಅಪ್ಪನ ಜೊತೆಗೆ ಹೋದದ್ದು, ನನ್ನ ಪುಟ್ಟ ಕೈಗಳಿಂದ ಅಪ್ಪನಿಗೆ ಸಹಾಯ ಮಾಡಿದ್ದು, ನನಗೆ ಹುಷಾರಿಲ್ಲದೆ ಮಲಗಿದ್ದಾಗ ಅಪ್ಪ ರಾತ್ರಿಯಿಡೀ ನನ್ನ ಬಳಿ ಕುಳಿತುಕೊಂಡಿದ್ದು, ರಾತ್ರಿ ಮದರಸದಿಂದ ಬರುವಾಗ ನನಗೆ ಭಯವಾಗಬಾರದೆಂದು ಅಲ್ಲಿ ಬಂದು ಕಾಯುತ್ತಿದ್ದದ್ದು, ನಾನು ಬೆಂಗಳೂರಿನಲ್ಲಿ ಇಂಟರ್ನ್ಶಿಪ್ ಮಾಡುತ್ತಿದ್ದಾಗ ಪ್ರತಿವಾರ ನನ್ನಿಷ್ಟದ ಫಿಶ್ ಫ್ರೈ ತಂದುಕೊಟ್ಟು ನಾನು ಕೂತು ಸವಿಯೂವಾಗ ತಲೆ ಸವರಿ ತಿನ್ನು ಮಗೂ ಎನ್ನುತ್ತಿದ್ದುದು.  ಯಾವುದೇ ಹಬ್ಬಕ್ಕೂ ತಮಗಾಗಿ ಹೊಸಬಟ್ಟೆ ಕೊಂಡುಕೊಳ್ಳದೆ ನಮಗೆ ಮಾತ್ರ ಏನೂ ಕಡಿಮೆಯಾಗದಂತೆ ನೋಡಿಕೊಳ್ಳುತ್ತಿದ್ದುದು ಪ್ರತಿಯೊಂದು ಚಿಕ್ಕ ವಿಷಯವನ್ನು ನೆನೆಯುವಾಗಲೂ ನನ್ನೆದೆ ತುಂಬಿ ಬರುತ್ತಿದೆ. 
ನಾನು ಕೆಲಸಕ್ಕೆ ಸೇರಿ ನನ್ನಪ್ಪನನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಮಹಾದಾಸೆಯೊಂದಿಗೆ ನಾನು ವಿಸಿಟ್ ವೀಸಾ ದಲ್ಲಿ ದುಬೈ ಗೆ ಬಂದು ಒಂದು ಕೆಲಸ ಹುಡುಕಿ ಕೆಲ ದಿನ ಕೆಸವನ್ನೂ ಮಾಡಿ ಸ್ವಲ್ಪ ಹಣ ಸಂಗ್ರಹಿಸಿ ಅಪ್ಪನೊಂದಿಗೆ ಕೇಳಿದ್ದೆ "ಅಪ್ಪ ನಿಮಗೇನು ತರಬೇಕು"  ಅಪ್ಪ ಹೇಳಿದ್ದು ನನಗೊಂದು ಖಾಕಿ ಶರ್ಟ್ ಸಾಕು ಅಂತ.  ದೇರಾದಲ್ಲಿದ್ದ ಸಾಕಷ್ಟು ಅಂಗಡಿಗಳನ್ನು ಸುತ್ತಿ ಅಪ್ಪನಿಗೆ  ಒಂದು ಶರ್ಟ್ ಹಾಗೂ ಒಂದು ಬಿಳಿಯ ಚಪ್ಪಲಿ ಕೊಂಡುಕೊಂಡಿದ್ದೆ.  ಊರಿನಲ್ಲಿ ಬಂದಬಂದವರಿಗೆಲ್ಲ ಅದನ್ನು ತೋರಿಸುವಾಗ ಅಪ್ಪನ ಕಣ್ಣಲ್ಲಿ ಮಿಂಚುತ್ತಿದ್ದ ಮಿಂಚು ಕೋಟಿ ಕೊಟ್ಟರೂ ಸಿಗಲಾರದು. 

ನನಗೆ ಸ್ಚೂಲ್ನಲ್ಲಿ ಬಹುಮಾನವಾಗಿ ಗ್ಲಾಸೋ ಪ್ಲೇಟೋ  ಎಲ್ಲರಿಗೂ ತೋರಿಸುವಾಗ ನನ್ನಪ್ಪನಿಗೆ ನೂರು ಬಾಯಿ.  ನನ್ನ ಬಾಪನಿಗಿದ್ದ ಒಂದೇ ಒಂದು ಅಭ್ಯಾಸ ಚಹಾ ಹಾಗೂ ಬೀಡಿ.  ಬಹುಷಃ ಅದೇ ಅವರ ಪ್ರಾಣಕ್ಕೆ ಕಂಟಕವಾಯ್ತೋ   ಏನೋ.  ನಾನು ದುಬೈಗೆ ಬಂದ ೬ ತಿಂಗಳಲ್ಲಿ ನನ್ನಪ್ಪ ಹೃದಯಾಘಾತವಾಗಿ ಆಸ್ಪತ್ರೆ ಸೇರಿದರು.  ಕೊನೆಯ ಕ್ಷಣಗಳನ್ನೆನಿಸುತ್ತಿದ್ದರೂ ನನ್ನನ್ನು ಕಾಯುತ್ತಿದ್ದರು.  ನಾನು ಬಂದ ೨ ನೆ ದಿನ ಅವರು ವಿಧಿವಶರಾದರು.  ಅಂದು ನನಗನಿಸಿದ್ದು ನನ್ನಪ್ಪನನ್ನು ಉಳಿಸಲಾಗದ ಹಣ ಕಾಸು ನನಗೇಕೆ ಎಂದು.  ಒಂಥರಾ ಎಲ್ಲ ವಸ್ತುಗಳ ಬಗ್ಗೆ ನನಗಂದು ಜಿಗುಪ್ಸೆಯಾಗಿತ್ತು. ನನ್ನ ಅಜ್ಜ, ಅಜ್ಜಿ. ದೊಡ್ದೊಪ್ಪಂದಿರು ಯಾರು ತೀರಿಕೊಂಡಾಗ ನನಗೆ ಇಷ್ಟೊಂದು ನೋವಾಗಿರಲಿಲ್ಲ.  ದೇಹದ ಒಂದು ಭಾಗವನ್ನೇ ಬೆರ್ಪಡಿಸಿಕೊಂಡಶ್ತು ನೋವು.  ಅದನ್ನು ಅನುಭವಿಸಿದವರೇ ಬಲ್ಲರು. ಯಾವತ್ತೋ ಒಮ್ಮೆ ರೇಗಿದ್ದು, ಹಟ ಹಿಡಿದದ್ದು ನೆನಪಾಗಿ ನಾನು ಹರಿಸಿದ ಕಣ್ಣೀರು ಲೆಕ್ಕವಿಲ್ಲದಷ್ಟು.

ಸ್ನೇಹಿತರೆ ನನ್ನದೊಂದು ಬಿನ್ನಹ ನಿಮ್ಮ ತಂದೆ ತಾಯಿಯರು  ಜೀವಂತವಾಗಿದ್ದರೆ ದಯವಿಟ್ಟು ಅವರಿಗೆ ಸಾಧ್ಯವಾದಷ್ಟು ಸಂತೋಷವನ್ನು ನೀಡಿರಿ.  ಈ ಪ್ರಪಂಚದಲ್ಲಿ ಅವರಷ್ಟು ದೊಡ್ಡ ಆಸ್ತಿ ನಮಗೆ ಬೇರೆ ಯಾರೂ ಇಲ್ಲ. ಅವರನ್ನು ಕಳೆದುಕೊಂಡ ನಂತರ ಅದೆಷ್ಟೇ ಗೋಳಾಡಿದರು ಅತ್ತು ಕರೆದರೂ ಪ್ರಯೋಜನವಿಲ್ಲ.  ನನಗಂತೂ ನನ್ನ ತಂದೆಯನ್ನು ಚೆನ್ನಾಗಿ ನೋಡಿಕೊಳ್ಳುವ ಭಾಗ್ಯ ಸಿಗಲಿಲ್ಲ.  ನಿಮಗಾದರೂ ಆ ಭಾಗ್ಯ ಸಿಗಲಿ.  ಕೈಯ್ಯಲ್ಲಿರುವ ಅಮೂಲ್ಯ ರತ್ನಗಳನ್ನು ಯಾವು ಯಾವುದೂ ಕಾರಣಕ್ಕೆ ಕಳೆದುಕೊಳ್ಳದಿರಿ ಅವರಿರುವಷ್ಟು ದಿನ ಅವರನ್ನು ಚೆನ್ನಾಗಿ ನೋಡಿಕೊಂಡೆವು ಎಂಬ ಸಾರ್ಥಕ್ಯ ಭಾವನೆಯಾದರೂ ನಿಮಗೆ ಸಿಗಲಿ ಎಂದು ಆಶಿಸುತ್ತಾ

ನಿಮ್ಮ

ಉಮ್ಮು  ಸಾರಃ Shaziya