ಶನಿವಾರ, ಜೂನ್ 18, 2016

ಮೌಲಾನ ನಿಝಾಮಿಯವರ ಅಂತಿಮ ಕ್ಷಣಗಳು

ಮೌಲಾನ ನಿಝಾಮಿಯವರ ಅಂತಿಮ ಕ್ಷಣಗಳು

Sanmarga.com 

@ ಡಾ| ನಈಮುರ್ರಹ್ಮಾನ್ ಖಾಲಿದ್ 

(ಮೌಲಾನ ನಿಝಾಮಿಯವರ ಪುತ್ರ)
ಅನು: ಮಿಸ್‍ಬಾ ತರೀಕೆರೆ

ಜಮಾಅತೆ ಇಸ್ಲಾವಿೂ ಬಾಂಗ್ಲಾದೇಶದ ಅಧ್ಯಕ್ಷರಾಗಿದ್ದ ಮೌಲಾನಾ ಮುತೀಉರ್ರಹ್ಮಾನ್‍ರನ್ನು ಇತ್ತೀಚೆಗೆ ಬಾಂಗ್ಲಾದ ಹಸೀನಾ ಸರಕಾರ ಗಲ್ಲಿಗೇರಿಸಿತು. ಗಲ್ಲಿಗೇರುವ ಮೊದಲು ಅವರು ಕುಟುಂಬದವರೊಡನೆ ನಡೆಸಿದ ಸಂಭಾಷಣೆಯನ್ನು ಅವರ ಮಗ ಸ್ಮರಿಸಿಕೊಂಡಿದ್ದಾರೆ.
“ಮಗ್ರಿಬ್ ನಮಾಝ್‍ನ ಮೊದಲು ನಮ್ಮ ತಂದೆಯವರನ್ನು ಭೇಟಿಯಾಗಲು ಜೈಲಿಗೆ ಬರಬೇಕೆಂದು ಜೈಲಧಿಕಾರಿ ನಮ್ಮ ತಂದೆಯ ಆಪ್ತ ಸಹಾಯಕರಿಗೆ ಕರೆ ಮಾಡಿದರು. 26 ಮಂದಿ ಕುಟುಂಬದ ಸದಸ್ಯರು ಮೂರು ಕಾರುಗಳಲ್ಲಿ ಜೈಲಿನತ್ತ ಪಯಣ ಬೆಳೆಸಿದೆವು. ಪತ್ರಕರ್ತರು ಹಾಗೂ ಮಾಧ್ಯಮದವರ ದೊಡ್ಡ ದಂಡೇ ಅಲ್ಲಿ ಸೇರಿತ್ತು. ಪೊಲೀಸರ ಬಿಗಿ ಭದ್ರತೆಯಲ್ಲಿ ನಾವು ಪೊಲೀಸ್ ಠಾಣೆಯ ಒಳ ನಡೆದೆವು. ಪೊಲೀಸ್ ಅಧಿಕಾರಿಯಿಂದ ನಮ್ಮ ಭೇಟಿಗೆ ಅಧಿಕೃತ ಪತ್ರ ದೊರೆತ ಬಳಿಕ ನಮ್ಮನ್ನು ಅವರ ಚಿಕ್ಕ ಕತ್ತಲ ಕೋಣೆಗೆ ಕರೆದುಕೊಂಡು ಹೋದರು. ಆ ಕಿರು ಕೋಣೆಗೆ `ರಜನಿ ಗಂಧ’ ಎನ್ನುತಾರೆ. ನನ್ನ ತಂದೆಯವರಿದ್ದ ಕೊಠಡಿ ಸಂಖ್ಯೆ 8. ಆ ಕೋಣೆಯಲ್ಲಿ ಕಿಟಕಿಯಿರಲಿಲ್ಲ. ಕೇವಲ 8 ಅಡಿ ಉದ್ದ 8 ಅಡಿ ಅಗಲ ಹಾಗೂ ಮುಂದೆ ಕಬ್ಬಿಣದ ಗ್ರೀಲ್‍ಗಳನ್ನು ಅಡ್ಡ ಕಟ್ಟಲಾಗಿತ್ತು.
ಕೋಣೆಯೊಳಗಡೆ ನಮ್ಮ ತಂದೆಯವರು ಹಸಿರು ಚದ್ದರದ ಮೇಲೆ ಕಿಬ್ಲಕ್ಕೆ ಮುಖ ಮಾಡಿ ಪ್ರಾರ್ಥನೆಯಲ್ಲಿ ತಲ್ಲೀನರಾಗಿದ್ದರು. ಶಾಂತ, ಸ್ಪಷ್ಟವಾಗಿ ಸಾಧಾರಣ ಸ್ವರದೊಂದಿಗೆ ಅರಬಿ ದುಆಗಳನ್ನು ಪಠಿಸುತ್ತಿದ್ದರು. ವಾಡಿಕೆಯಂತೆ ಪ್ರತಿಯೊಂದು ದುಆದ ನಂತರ ಸ್ವಲ್ಪ ಹೊತ್ತು ವಿರಮಿಸುತ್ತಿದ್ದರು. ನಾವು ಬಾಲ್ಯದಿಂದಲೂ ಅವರ ದುಆ ಮಾಡುವ ಈ ಶೈಲಿಯನ್ನು ನೋಡುತ್ತಾ ಬಂದಿದ್ದೇವೆ. ಅವರ ಬಳಿಯಲ್ಲೇ ಕುಳಿತ ಕಂದು ಬಣ್ಣದ ಬೆಕ್ಕಿನ ಮರಿ ಅಲ್ಲಾಹನಲ್ಲಿ ದೂರು ನೀಡುತ್ತಿರುವಂತೆ ಕುಳಿತಿತ್ತು. ಅವರ 3 ವರ್ಷ ಪ್ರಾಯದ ಮೊಮ್ಮಗ ಮುಆಝ್ ಮೆಟ್ಟಿಲುಗಳನ್ನೇರಿ, “ತಾತ, ಬಾಗಿಲು ತೆಗೆಯಿರಿ. ನಾವು ನಿಮ್ಮನ್ನು ನೋಡಲು ಬಂದಿದ್ದೇವೆ” ಎಂದನು. ತಂದೆಯವರು ದುಆ ಮುಗಿಸಿ, “ನೀವೆಲ್ಲಾ ಬಂದಿದ್ದೀರಿ! ಇದು ನಮ್ಮ ನಡುವಿನ ಕೊನೆಯ ಸಂಭಾಷಣೆ” ಎಂದರು. ನನ್ನ ಅಕ್ಕ (ಭಾವುಕಳಾಗಿ) “ಅಲ್ಲಾಹನು ಇಚ್ಛಿಸಿದರೆ ಇದು ಕೊನೆಯ ಸಂಭಾಷಣೆಯಾಗಲಾರದು’ ಎಂದರು. ಕೆಲವು ಸಮಯ ಅಲ್ಲಿ ಭಾವೋದ್ವೇಗದ ವಾತಾವರಣ ಸೃಷ್ಟಿಯಾಯಿತು. ಆದರೆ ನನ್ನ ತಂದೆಯವರು ಎಲ್ಲರನ್ನೂ ಸಮಾಧಾನಿಸಿ, ಸಹನೆ ವಹಿಸಿರಿ ಎಂದು ಉಪದೇಶಿಸಿದರು.
ಕಬ್ಬಿಣದ ಸಲಾಕೆಗಳ ಮಧ್ಯದಿಂದಲೇ ಎಲ್ಲರ ಕೈ ಕುಲುಕಿದರು. ಅವರು ಕುರ್ತಾ ಹಾಗೂ ಪಂಚೆ ಧರಿಸಿದ್ದರು. ಕಿಟಕಿಗಳಿಲ್ಲದ ಆ ಕೋಣೆಯ ತಾಪದಿಂದ ತಂದೆಯ ಕುರ್ತಾ ಒದ್ದೆಯಾಗಿತ್ತಾದರೂ ಅವರ ಮುಖವು ಶಾಂತಿ ಹಾಗೂ ಕಾಂತಿಯುತವಾಗಿತ್ತು. ಅವರ ಮುಖದಲ್ಲಿ ದುಃಖ ಹಾಗೂ ಭಯದ ಒಂದು ಸಣ್ಣ ಲಕ್ಷಣವು ಗೋಚರಿಸುತ್ತಿರಲಿಲ್ಲ.
ಎರಡೂ ಕಡೆಯಿಂದಲೂ ಸರಿಯಾಗಿ ಕಾಣುತ್ತಿರಲಿಲ್ಲವಾದ್ದರಿಂದ ನಮ್ಮ ವಿನಂತಿಯ ಮೇರೆಗೆ ಜೈಲಾಧಿಕಾರಿಯು ಜೈಲಿನ ದ್ವಾರವನ್ನು ತೆರೆದರು. ನನ್ನ ತಂದೆಯವರು ಹೊರಬಂದು ನಮ್ಮ ಜೊತೆಯಲ್ಲಿ ಕುಳಿತು ಕೊಂಡರು. ಮೊಟ್ಟ ಮೊದಲು ರೂಢಿಯಂತೆ ನಮ್ಮೆಲ್ಲರ ಕ್ಷೇಮವನ್ನು ವಿಚಾರಿಸಿದರು.
ನಂತರ ಅವರು ನಡೆದ ವಿಚಾರವನ್ನು ಹೇಳಿದರು: ಜೈಲು ಅಧೀಕ್ಷಕರು ನ್ಯಾಯಾಲಯದ ತೀರ್ಪನ್ನು ನನ್ನ ಮುಂದೆ ಓದಿ, “ನಿಮ್ಮನ್ನು ಕ್ಷಮಿಸುವಂತೆ ರಾಷ್ಟ್ರಪತಿಯಲ್ಲಿ ಕೇಳಿಕೊಳ್ಳಬೇಕೇ!” ಎಂದರು. “ನಾನು ಯಾವುದೇ ಅಪರಾಧವೆಸಗಲಿಲ್ಲ. ಕ್ಷಮೆ ಯಾಚಿಸುವುದೆಂದರೆ ತಪ್ಪನ್ನು ಒಪ್ಪಿಕೊಂಡಂತೆ. ಆದುದರಿಂದ ನಾನು ರಾಷ್ಟ್ರಪತಿಯಲ್ಲಿ ಕ್ಷಮಾದಾನ ಬೇಡುವ ಪ್ರಶ್ನೆಯೇ ಇಲ್ಲ. ಜೀವನ ಮರಣ ನೀಡುವವನು ಅಲ್ಲಾಹನೋರ್ವನೇ. ಮಾನವರಲ್ಲಿ ಜೀವನದ ಭಿಕ್ಷೆ ಬೇಡಿ ನನ್ನ ಈಮಾನನ್ನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲ” ಎಂದು ಹೇಳಿದೆ. ಇಂದು ಡಿಐಜಿಯವರು ನನ್ನ ಬಳಿ ಬಂದು “ನಾನು ಕ್ಷಮೆ ಯಾಚಿಸುವುದಿಲ್ಲ” ಎಂದು ಬರಹ ರೂಪದಲ್ಲಿ ಬರೆದು ಕೊಡಿ ಎಂದರು. “ನಾನು ಎಂದಿಗೂ ಕ್ಷಮೆ ಯಾಚಿಸಲಾರೆ ಹಾಗೂ ಜೀವನದ ಭಿಕ್ಷೆ ಬೇಡಲಾರೆ” ಎಂದು ಸ್ಪಷ್ಟವಾಗಿ ಬರೆದು ಪತ್ರವನ್ನು ಅವರ ಕೈಯಲ್ಲಿಟ್ಟೆ ಎಂದು ಅವರು ಮಾತು ನಿಲ್ಲಿಸುತ್ತಿದ್ದಂತೆಯೇ ಅಲ್ಲಿ ಭಾವುಕತೆಯ ವಾತಾವರಣ ಸೃಷ್ಟಿಯಾಯಿತು. ಆದರೆ ಅವರ ಕಣ್ಣಲ್ಲಿ ಒಂದು ಹನಿ ಕಣ್ಣೀರು ಇರಲಿಲ್ಲ. ಹಾಗಂತ ಅವರು ಭಾವನೆ ರಹಿತರು ಅಥವಾ ಕಠೋರ ಹೃದಯಿಯಾಗಿರಲಿಲ್ಲ. ಅವರೊಂದು ಶಾಂತ ನಿರ್ಮಲ ಆತ್ಮದಂತೆ ತನ್ನ ಪ್ರಭುವಿನ ಜೊತೆ ಭೇಟಿ ಮಾಡುವ ತವಕದಲ್ಲಿರುವಂತೆ ಕಾಣುತ್ತಿತ್ತು.
ತಂದೆ-ತಾಯಿ ವೈಯಕ್ತಿಕವಾಗಿ ಮಾತುಕತೆ ನಡೆಸಲಿ ಎಂದು ನಾವೆಲ್ಲರೂ ಹೊರ ಬಂದೆವು. “ನೀವು ಪರಿಶುದ್ಧ ಹಾಗೂ ಪ್ರಾಮಾಣಿಕ ವ್ಯಕ್ತಿಯಾಗಿದ್ದೀರಿ ಹಾಗೂ ನೀವು ಯಾವುದೇ ಅಪರಾಧಗಳನ್ನೆಸಗಲಿಲ್ಲವೆಂದು ನಾವೆಲ್ಲರೂ ಪುನರುತ್ಥಾನ ದಿನದಂದು ಅಲ್ಲಾಹನ ಮುಂದೆ ಸಾಕ್ಷಿಗಳಾಗುತ್ತೇವೆ” ಎಂದು ತಾಯಿಯು ತಂದೆಯ ಬಳಿ ಹೇಳಿದರು.
ಆಗ ತಂದೆಯವರು, “ಇಂದಿನಿಂದ ನೀವು ನನ್ನ ಮಕ್ಕಳ ತಂದೆ-ತಾಯಿಯಾಗಿದ್ದೀರಿ. ಅವರು ನನ್ನನ್ನು ನಿಮ್ಮಲ್ಲಿ ನೋಡುತ್ತಾರೆ, ನೀವು ನನ್ನನ್ನು ಮಕ್ಕಳಲ್ಲಿ ನೋಡುತ್ತೀರಿ” ಎಂದರು.
ಕೆಲವು ಕ್ಷಣಗಳ ಬಳಿಕ ನಾವೆಲ್ಲರೂ ಒಳ ನಡೆದೆವು. ನಮ್ಮೆಲ್ಲರನ್ನುದ್ದೇಶಿಸಿ ತಂದೆಯವರು, “ನೀವೆಲ್ಲರೂ ಒಗ್ಗಟ್ಟಾಗಿ ಸಾಮರಸ್ಯದೊಂದಿಗೆ ಬಾಳಬೇಕು. ಪ್ರತಿಯೊಂದು ಕ್ಷಣದಲ್ಲೂ ಅಲ್ಲಾಹನ ಹಾಗೂ ಪ್ರವಾದಿಯವರ(ಸ) ಮಾರ್ಗವನ್ನೇ ಅನುಸರಿಸಬೇಕು. ನಿಮ್ಮ ತಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳಿರಿ. ನೀವು ನನ್ನನ್ನು ಯಾವ ರೀತಿ ಕಂಡಿದ್ದೀರಿ ಅದೇ ರೀತಿ ಜನರಲ್ಲಿ ಹೇಳಿರಿ. ಅತಿಶಯೋಕ್ತಿಯನ್ನು ತೋರಿಸಬೇಡಿ. ನನಗೀಗ 75 ವರ್ಷ ವಯಸ್ಸು. ನನ್ನ ಅದೆಷ್ಟೋ ಸಹೋದ್ಯೋಗಿಗಳಿಗೆ ನನ್ನಷ್ಟು ಕಾಲಾವಕಾಶ ದೊರೆಯಲಿಲ್ಲ. ನಾನು ಇಷ್ಟು ದಿನಗಳ ಕಾಲ ಬದುಕಿರುವುದೇ ನಿಮ್ಮ ಅದೃಷ್ಟ. ಅಲ್ಲಾಹನೇ ಜೀವನ-ಮರಣ ನೀಡುವವನು. ನನ್ನ ಮರಣ ಇಂದು ರಾತ್ರಿ ನಿಶ್ಚಯಿಸಲ್ಪಟ್ಟಿದೆಯೆಂದರೆ, ನಾನು ಮನೆಯಲ್ಲಿದ್ದರೂ ನಡೆದೇ ತೀರುತ್ತಿತ್ತು. ಅಲ್ಲಾಹನಿಗೆ ವಿಧೇಯರಾಗಿರಿ” ಎಂದರು.
ತದನಂತರ ನಾವು ನಮ್ಮ ಮಕ್ಕಳನ್ನು ಅವರ ಬಳಿ ಕುಳ್ಳಿರಿಸಿ, “ಅಬ್ಬು ನಿಮಗೆ ಮೂವರು ಮೊಮ್ಮಕ್ಕಳಿದ್ದಾರೆ. ಅವರ ಹೆಸರಿನ ಮೊದಲು ನಿಮ್ಮ ಹೆಸರನ್ನು ಸೇರಿಸುತ್ತೇವೆ ಇವರೂ ನಿಮ್ಮಂತೆ ಆಗಲಿ ಎಂದು ಪ್ರಾರ್ಥಿಸಿರಿ” ಎಂದೆವು. ಆದರೆ ಅವರ ಉತ್ತರವೇನಿತ್ತು ಗೊತ್ತೇ? “ಇವರು ನನಗಿಂತಲೂ ಅತ್ಯುತ್ತಮರಾಗಿ, ಪ್ರವಾದಿವರ್ಯರ(ಸ)
ಅನುಯಾಯಿಗಳಂತಾಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಒಂದು ಘಟನೆ ಹೇಳತೊಡಗಿದರು.
ಓರ್ವ ಪ್ರಖ್ಯಾತ ವಿದ್ವಾಂಸರು ತನ್ನ ಮಗನಲ್ಲಿ, “ನೀನು ಯಾರಂತೆ ಆಗಲು ಬಯಸುತ್ತೀ?” ಎಂದರು. ಆಗ ಮಗ, “ನಾನು ನಿಮ್ಮಂತೆ ಆಗಲು ಬಯಸುತ್ತೇನೆ” ಎಂದ. ಇದನ್ನು ಕೇಳಿದ ವಿದ್ವಾಂಸರು ಅಳತೊಡಗಿದರು. ಮಗನು ಆಶ್ಚರ್ಯಚಕಿತನಾದನು. ವಿದ್ವಾಂಸರು ವಿವರಿಸುತ್ತಾ, “ನಾನು ಯಾವಾಗಲೂ ಹ. ಅಲೀಯವರಂತೆ(ರ) ಆಗಲು ಬಯಸುತ್ತಿದ್ದೆ. ನೋಡು ನನ್ನ ಹಾಗೂ ಅಲಿರವರ(ರ) ಮಧ್ಯೆ ಎಷ್ಟೊಂದು ಅಂತರವಿದೆ. ನೀನು ನನ್ನಂತೆ ಆಗಲು ಬಯಸುವುದಾದರೆ, ನೀನು ನನಗಿಂತ ಎಷ್ಟೋ ದೂರ ಹೋಗುವಿ ಎಂದೊಮ್ಮೆ ಯೋಚಿಸು” ಎಂದರು. ತಂದೆಯವರು, “ನನ್ನ ಎರಡನೇ ಪುತ್ರ ಮೋಮಿನ್ ನನಗಿಂತಲೂ ಮಹಾನ್ ವಿದ್ವಾಂಸ. ನಾನು ಅವನಲ್ಲಿ ಹಲವು ಬಾರಿ ಅಭಿಪ್ರಾಯಗಳನ್ನು ಕೇಳಿದ್ದೇನೆ” ಎಂದರು. “ಅಬ್ಬು ನಾವು ನಿಮಗಾಗಿ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ” ಎಂದಾಗ, “ಅಂತಿಮ ತೀರ್ಮಾನ ಅಲ್ಲಾಹನ್ನದ್ದಾಗಿದೆ. ನೀವು ನಿಮ್ಮಿಂದಾದಷ್ಟು ಪ್ರಯತ್ನವನ್ನು ಮಾಡಿರಿ. ರಣರಂಗದಲ್ಲಿ ಯುದ್ಧ ಮಾಡದೆ, ನಾನು ಹುತಾತ್ಮನಾಗುತ್ತಿರುವುದಾದರೆ ಅದೊಂದು ದೊಡ್ಡ ಆಶೀರ್ವಾದವಾಗಿದೆ. ಇಸ್ಲಾಮಿಗಾಗಿ ಹೋರಾಟ ನಡೆಸಿದ ಎಲ್ಲರಿಗೂ ನನ್ನ ಅಭಿನಂದನೆ ಹಾಗೂ ಸಲಾಮನ್ನು ಹೇಳಿರಿ. ನನ್ನ ಈ ಹುತಾತ್ಮತೆಯನ್ನು ಅಲ್ಲಾಹನು ಸ್ವೀಕರಿಸಲಿ ಎಂದು ನೀವೆಲ್ಲರೂ ಪ್ರಾರ್ಥಿಸಬೇಕು” ಎಂದರು ತಂದೆ.
ಇದನ್ನೆಲ್ಲಾ ತದೇಕಚಿತ್ತದಿಂದ ಆಲಿಸುತ್ತಿದ್ದ ತಾಯಿಯು, “ಈ ಜಗತ್ತಿನಲ್ಲಿ ಅಲ್ಲಾಹನು ನಿಮ್ಮನ್ನು ಗೌರವಿಸಿದಂತೆ, ಇನ್‍ಶಾ ಅಲ್ಲಾಹ್ ಪರಲೋಕದಲ್ಲೂ ನಿಮ್ಮನ್ನು ಗೌರವಿಸುತ್ತಾನೆ” ಎಂದರು. ಇದನ್ನು ಕೇಳಿದ ಅಬ್ಬು, “ನಾನೊಬ್ಬ ದೂರ ಗ್ರಾಮದ ಸಾಧಾರಣ ಮನುಷ್ಯ. ಅಲ್ಲಾಹನ ಅಪಾರವಾದ ಕರುಣೆಯಿಂದ ಜಗದ್ವಿಖ್ಯಾತ ವಿದ್ವಾಂಸರು ನನಗಾಗಿ ಪ್ರಾರ್ಥಿಸಿದರು ಹಾಗೂ ಸಹಾನುಭೂತಿ ತೋರಿಸಿದರು. ನನ್ನ ಬಿಡುಗಡೆಯ ಪ್ರಶ್ನೆಗಳನ್ನೆದುರಿಸಬೇಕಾದೀತು ಎಂದು ಪ್ರಧಾನ ಮಂತ್ರಿ ಶೇಕ್ ಹಸೀನ ಟರ್ಕಿಯ ಇಸ್ತಾಂಬುಲ್‍ನಲ್ಲಿ ನಡೆಯುವ 13ನೇ ಓಐಸಿ ಇಸ್ಲಾಮಿಕ್ ಶೃಂಗಸಭೆಯ ಯೋಜನಾ ಯಾತ್ರೆಯನ್ನೇ ರದ್ದುಗೊಳಿಸಿದರು. ಇವೆಲ್ಲಾ ಅಲ್ಲಾಹನ ಆಶೀರ್ವಾದವೇ ಆಗಿದೆ.”
“ಪುನರುತ್ಥಾನ ದಿನದಂದು ನೀವು ನಮ್ಮನ್ನು ನೆನಪಿನಲ್ಲಿಡಿ. ಅದರಿಂದಾಗಿ ನಾವು ಸ್ವರ್ಗದಲ್ಲಿ ಪ್ರವೇಶಿಸುವಂತಾಗಬಹುದು” ಎಂದಾಗ, ಅಬ್ಬು, “ನೀವು ಸತ್ಕಾರ್ಯಗಳನ್ನು ಮಾಡಿರಿ. ಇನ್‍ಶಾ ಅಲ್ಲಾಹ್ ನೀವು ಸ್ವರ್ಗವನ್ನು ಪ್ರವೇಶಿಸುವಿರಿ” ಎಂದರು. ನಮ್ಮ ವಿನಂತಿಯ ಮೇರೆಗೆ ತಂದೆಯವರು ದುಆ ಮಾಡಿದರು. ಅದು ಸುದೀರ್ಘ ಒಂದು ಗಂಟೆಯ ಕಾಲ ನಡೆಯಿತು. ಮೊದಲು ಅಲ್ಲಾಹನ ಗುಣಗಾನ ಮಾಡಿ, ನಂತರ ಪ್ರವಾದಿವರ್ಯರ(ಸ) ಮೇಲೆ ದರೂದ್ ಹೇಳಿದರು. ಪ್ರತಿದಿನ ಪಠಿಸುತ್ತಿದ್ದ ದುಆಗಳನ್ನು 20 ನಿಮಿಷಗಳ ಕಾಲ ಪಠಿಸಿದರು. ತದ ನಂತರ ಪ್ರಾರ್ಥಿಸ ತೊಡಗಿದರು, “ಓ ಅಲ್ಲಾಹನೇ ನಾನು ನಿನ್ನ ವಿನಮ್ರ, ತಪ್ಪುಗಳನ್ನೆಸಗಿದ ಸೇವಕನಾಗಿದ್ದೇನೆ. ನಿನ್ನ ಧರ್ಮಕ್ಕಾಗಿ ನಿನ್ನ ಕರುಣೆಯಿಂದ ಮಾಡಿದ ನನ್ನೆಲ್ಲಾ ಸೇವೆಗಳನ್ನು ಸ್ವೀಕರಿಸು. ನನ್ನ ಕೊನೆಯ ಕ್ಷಣಗಳವರೆಗೂ ಈಮಾನ್‍ನ ಹಾದಿಯಲ್ಲಿರುವಂತೆ ಅವಕಾಶವನ್ನು ಕಲ್ಪಿಸು. ಹುತಾತ್ಮನಾಗಿ ಮರಣವನ್ನಪ್ಪಲು ಅನುಗ್ರಹಿಸು. ನನ್ನನ್ನು, ನನ್ನ ಹೆತ್ತವರನ್ನು ಹಾಗೂ ನಿನ್ನ ವಿಶ್ವಾಸಿಗಳನ್ನೆಲ್ಲಾ ಪುನರುತ್ಥಾನ ದಿನದಂದು ಕ್ಷಮೆ ನೀಡು. ನಮಗೆ ಮರಣ ಬರುವ ಮೊದಲು ತೌಬಾ ಮಾಡುವ ಅವಕಾಶವನ್ನು ಕಲ್ಪಿಸಿಕೊಡು ಮತ್ತು ಭಯಾನಕ ನರಕಾಗ್ನಿಯಿಂದ ರಕ್ಷಿಸು. ನಿನ್ನ ಧರ್ಮಕ್ಕಾಗಿ ಈ ದೇಶವನ್ನು ಆರಿಸಿಕೋ. ಹತ್ಯೆ, ಅವ್ಯವಸ್ಥೆ ಹಾಗೂ ವಸಾಹತುಶಾಹಿಯಿಂದ ಈ ದೇಶವನ್ನು ರಕ್ಷಿಸು” ಎಂದರು. ಆ ವೇಳೆ ಹೊರ ಕುಳಿತಿದ್ದ ಜೈಲು ಸಿಬ್ಬಂದಿಯು ಕಣ್ಣಿರು ಹರಿಸುತ್ತಿದ್ದರು ಎಂದು ನನ್ನ ಮಗಳು ಹೇಳಿದಳು.
ನಂತರ ತಂದೆಯವರು ನನ್ನ ಅಣ್ಣ ಮೋಮಿನ್‍ರಲ್ಲಿ “ಗಲ್ಲಿಗೇರಿಸುವಾಗ ತಾನು ಸಾಂಪ್ರದಾಯಿಕ ಉಡುಗೆಯಾದ ಪಂಚೆ ಧರಿಸಲೇ ಅಥವಾ ಪೈಜಾಮ-ಕುರ್ತಾ ಧರಿಸಲೇ?” ಎಂದು ಕೇಳಿದರು. ಮೋಮಿನ್, “ಪೈಜಾಮ-ಕುರ್ತಾ ಧರಿಸಿರಿ ಅಬ್ಬು” ಎಂದುತ್ತರಿಸಿದರು.
ನಾನು ವೃತ್ತಿಯಲ್ಲಿ ವೈದ್ಯನಾಗಿ, ಹಲವರ ಸಾವನ್ನು ಕಣ್ಣಾರೆ ನೋಡಿದ್ದೇನೆ. ಹಲವರು ಮರಣ ಶಯ್ಯೆಯಲ್ಲಿದ್ದಾಗ ಅವರ ಮುಖದಲ್ಲಿ ಮರಣದ ಭಯ, ದುಃಖ ಗೋಚರಿಸುತ್ತಿದ್ದುದನ್ನು ನಾನು ನೋಡಿದ್ದೇನೆ. ಆದರೆ ಕೊನೆಯ ಬಾರಿ ಭೇಟಿಯಾಗಲು ತಂದೆಯ ಬಳಿ ಹೋದಾಗ, ಶೀಘ್ರದಲ್ಲೇ ಆ ಒಡೆಯನನ್ನು ಭೇಟಿಯಾಗುವ ತಯಾರಿಯಲ್ಲಿದ್ದ, ಸ್ವರ್ಗದ ನಿರ್ಭಯ ಅತಿಥಿಯನ್ನು ಅದೇ ಮೊದಲ ಬಾರಿ ನನ್ನ ಕಣ್ಣುಗಳು ಸಾಕ್ಷಿಯಾಗಿದ್ದವು. ಕ್ಷಮೆಯ ಪ್ರಕ್ರಿಯೆ ನಡೆಸುತ್ತಿದ್ದರೆ ಅವರಿಗೆ ಇನ್ನು ಕೆಲವು ದಿನಗಳ ಕಾಲಾವಕಾಶ ಸಿಗುತ್ತಿತ್ತು. ಆದರೆ ಮರಣದ ಕ್ಷಣವನ್ನು ನಿಶ್ಚಯಿಸುವುದು ಅಲ್ಲಾಹನ ಕೈಯಲ್ಲಿ ಮಾತ್ರವಿದೆ ಎಂದು ನಮಗೆಲ್ಲಾ ತಿಳಿದಿದೆ.
ನನ್ನ ತಂದೆಯ ಮೃದು ಸ್ವಭಾವಕ್ಕೆ ಅವರನ್ನು ಭೇಟಿಯಾದವರೆಲ್ಲಾ ಸಾಕ್ಷಿಯಾಗಿದ್ದಾರೆ. ಜನರ ದೈನಂದಿನ ವ್ಯವಹಾರಗಳ ಮೇಲೆ ಅವರು ನಿಗಾವಿಡುತ್ತಿದ್ದರು. ಯಾರೇ ಒಬ್ಬರು ಸಂಕಷ್ಟದಲ್ಲಿದ್ದರೆ, ಅವರು ಗುಣಮುಖರಾಗುವವರೆಗೆ ಸಹಾಯ ಮಾಡಿ ಅವರ ಬಗ್ಗೆ ವಿಚಾರಿಸುತ್ತಿದ್ದರು. ಇದು ಇತರರ ಬಗ್ಗೆ ಅವರಿಗಿದ್ದ ಕಾಳಜಿ ಹಾಗೂ ಪ್ರೀತಿಯನ್ನು ಸೂಚಿಸುತ್ತದೆ.
ನಮ್ಮ ಈ ಕೊನೆಯ ಭೇಟಿಯಲ್ಲಿ ತಂದೆಯವರು, “ಯಾರು ಸಾತಿಯ(ಅವರು ಹಳ್ಳಿ ಮನೆ)ಗೆ ಅಂತ್ಯಕ್ರಿಯೆಗೆ ಹೋಗುತ್ತೀರಿ” ಎಂದಾಗ, ನಾನು ಮತ್ತು ಮೋಮಿನ್ ಹೋಗುತ್ತೇವೆ ಎಂದೆವು. ತಮ್ಮ ಅದೇ ಶಾಂತ ಸ್ವರದಲ್ಲಿ, ಜಾಗೃತೆಯಿಂದ ಪ್ರಯಾಣಿಸಿರಿ, ನಮ್ಮ ಪಿ.ಎ. ಮಿಥು ಅವರಿಗೆ ಜೊತೆಯಲ್ಲಿ ಕರೆದುಕೊಂಡು ಹೋಗಿರಿ. ಅಮ್ಮನೆಡೆ ತಿರುಗಿ, ಅಲ್ಲಿಗೆ ರಾತ್ರಿ ಸಮಯ ಹೋಗಬೇಡಿ. ನಂತರ ಮಗ ಮೋಮಿನೆಡೆ ತಿರುಗಿ ನನ್ನ ಜನಾಝ ನಮಾಝ್‍ನ ನೇತೃತ್ವ ನೀನು ವಹಿಸಬೇಕು. ಶರ್ಟ್‍ನ ಬದಲು ಕುರ್ತಾ ಧರಿಸುವಂತೆ ಹೇಳಿದರು.
ಕುರ್‍ಆನ್ ಹಾಗೂ ಸುನ್ನತ್‍ಗೆ (ಪ್ರವಾದಿ ಚರ್ಯೆ) ಬದ್ಧರಾಗಿರಬೇಕು. ಪ್ರತಿ ಸಂದರ್ಭದಲ್ಲೂ ಸಹನೆ ವಹಿಸಿರಿ ಜೊತೆಗೆ ಅಲ್ಲಾಹನ ಮೇಲೆ ದೃಢ ವಿಶ್ವಾಸವಿಡಿ. ದೈನಂದಿನ ಪ್ರಾರ್ಥನೆ (ನಮಾಝ್)ಗಳಲ್ಲಿ ಎಚ್ಚರಿಕೆಯಿಂದಿರಿ. ಅವರ ಅಂತಿಮ ಇಚ್ಛೆಯಂತೆ, “ನಾನು ಬರೆದ ಪುಸ್ತಕಗಳನ್ನು ವಿಶೇಷವಾಗಿ ಜೈಲಿನಲ್ಲಿ ಬರೆದ ಪುಸ್ತಕ [The Life of The Prophet (PBUH) According to The Quran and Hadith and The Manners of Living] ಹಾಗೂ ಮೊದಲು ಬರೆದ ಇತರ ಪುಸ್ತಕಗಳನ್ನು ಓದಿರಿ” ಎಂದರು.
ನಂತರ ನನ್ನ ಹಿರಿಯ ಅಕ್ಕ ಮೊಹ್‍ಸೀನಾರನ್ನುದ್ದೇಶಿಸಿ, “ನನ್ನ ಅಮ್ಮು, ನನಗೆ ನಿನ್ನ ಬಗ್ಗೆ ಹೆಚ್ಚಿನ ಕಾಳಜಿ ನೀನು ನನ್ನ ಹಿರಿ ಮಗಳು. ನನ್ನ ಪ್ರೀತಿಯ ಅಮ್ಮು. ನನ್ನ ಜೀವನದಲ್ಲಿ ಮೊದಲ ಬಾರಿ ನನ್ನನ್ನು `ಅಬ್ಬು’ ಎಂದು ಕರೆದವಳು ನೀನು… ನೀನು ತುಂಬಾ ಸಹನೆ ವಹಿಸಬೇಕು” ಎಂದರು. ನಂತರ ಅಮ್ಮನ ಕಡೆಗೆ ತಿರುಗಿ, “ನನ್ನ ಆರು ಚಿನ್ನದಂತಹ ಮಕ್ಕಳನ್ನು ನಿಮ್ಮ ಬಳಿ ಬಿಟ್ಟು ಹೋಗುತ್ತಿದ್ದೇನೆ. ಈಗ ನೀವು ನನಗೆ ವಿದಾಯ ಕೋರಬಹುದು. ನನಗೆ ನೀವು ನಿರ್ಗಮಿಸುವ ರೀತಿಯನ್ನು ನೋಡಬೇಕಾಗಿದೆ” ಎಂದರು.
ನಾವೆಲ್ಲರೂ ಅವರ ಕೈ ಕುಲುಕಿ ವಿದಾಯ ಕೋರಿದೆವು. ಪುಟ್ಟ ಬೆಕ್ಕಿನ ಮರಿಯು ನಮ್ಮ ಜೊತೆ ಸೇರಿತು. ದಾರಿಯುದ್ದಕ್ಕೂ ಅವರ ಪ್ರಕಾಶಿತ ಮುಖವು ನಮ್ಮ ದೃಷ್ಟಿಯಲ್ಲಿತ್ತು. ನಮ್ಮ ತಂದೆಯ ಅಂತ್ಯಕ್ರಿಯೆಗಾಗಿ ನಾವು ಸಾತಿಯಾಗೆ ಪ್ರಯಾಣ ಬೆಳೆಸಿದೆವು. ದಾರಿಯುದ್ದಕ್ಕೂ ಪ್ರವಾದಿಯವರ(ಸ) ಒಂದು ಮಾತು ನನ್ನ ಸ್ಮ್ರತಿ ಪಟಲದಲ್ಲಿ ಹಾದು ಹೋಗುತ್ತಿತ್ತು.
“ಒಂದು ವೇಳೆ ನೀವು ಯಾರಾದರೊಬ್ಬರು ವಿಪತ್ತಿನಿಂದ ನರಳುತ್ತಿದ್ದರೆ, ಅವನಿಗೆ ಅವನ ವಿಪತ್ತನ್ನು ತನ್ನದೊಂದಿಗೆ (ನನ್ನ ಮರಣ) ನೆನಪಿಸಲಿ. ವಾಸ್ತವವಾಗಿ ಇದೊಂದು ಶ್ರೇಷ್ಠ ವಿಪತ್ತಾಗಿದೆ.” (ಬೈಹಕಿ, ತಬ್ರಾನಿ, ಡರ್ಮಿ)
ಈ ಉಮ್ಮತ್ ಪ್ರವಾದಿಯವರ(ಸ) ನಿಧನದ ವಾರ್ತೆಯಿಂದ ಹಾದು ಹೋಗಿದೆ! ಇನ್‍ಶಾ ಅಲ್ಲಾಹ್ ಇದೇ ಉಮ್ಮತ್ ಸಹನೆ ಹಾಗೂ ದೃಢ ವಿಶ್ವಾಸದೊಂದಿಗೆ ಎಲ್ಲಾ ತೊಂದರೆ ಹಾಗೂ ವಿಪತ್ತುಗಳನ್ನು ಎದುರಿಸುತ್ತದೆ.