ಶನಿವಾರ, ಜೂನ್ 18, 2016

ಮಿಸ್ ಯು ಉಪ್ಪಾ (ಅಪ್ಪಾ)

ಜಬ್ಬಾರ್ ಪರಪ್ಪು,ದುಬ್ಯೆ

ಅಮ್ಮ ಹೇಳಿದ ಎಂಟು ಸುಳ್ಳುಗಳು” ಎಂಬ ಪುಸ್ತಕ ಬರೆದು ಗರಿಷ್ಟ ದಾಖಲೆ ಮಾರಟವಾದ ಪುಸ್ತಕ ಎಂಬ  ಹೆಗ್ಗಳಿಕೆ ಗಳಿಸಿದ ಅದರ ಲೇಖಕ ಮಣಿಕಾಂತ ಅವರ ಇನ್ನೊಂದು ಪುಸ್ತಕ “ಅಪ್ಪ ಅಂದ್ರೆ ಆಕಾಶ” ಈ ಪುಸ್ತಕ  ಓದಿದ ಮೇಲೆ ನನ್ನ ಅಪ್ಪನ ನೆನಪಗಾಗಿ ಭಾವನ್ಮಾತಕವಾಗಿ ನೂಂದು ಹೋದೆ. ಆಲ್ಲಿಂದ ಶುರುವಾಯಿತು ನನ್ನ ಅಪ್ಪನ ಬಗ್ಗೆ ಬರೆಯಬೇಕಂಬ ತುಡಿತ…ಎಲ್ಲವು...

      ಎಲ್ಲರು ಈ ತಿಂಗಳಲ್ಲಿ “ಅಪ್ಪಂದಿರ ದಿನ”ದಂದು ಅಪ್ಪನಿಗೆ ಶುಭಾಶಯ ಹೇಳಲು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಆದರೆ ಈ ತಿಂಗಳಲ್ಲಿ ನಾನು ಅಪ್ಪನ್ನ ಕಳದುಕೊಂಡು ಮೂರು ವರ್ಷ ಸಂದಿವೆ. ಅಪ್ಪ ನೆನಪಾಗುತ್ತರೆ ಬೇಡ ಅಂದರು…. ಅದಕ್ಕೆ ನೆನಪುಗಳು ಇರುವೆ ಮನೆಗೆ ಹೋಲಿಸುತ್ತಾರೆ. ಅದರಳೊಗೆ ಎಷ್ಟು ಇರುವೆ ಇರುತ್ತೆ ಎಂಬುದು ಅಂದಾಜು ಮಾಡಲು ಕಷ್ಟ. ಒಂದು ಹೊರಗಡೆ ಬಂದ್ರೆ ಸಾಕು ಅದರ ಹಿಂದೆ ಸಾಲು – ಸಾಲು ಇರುವೆ ಹೊರಗಡೆ ಬರುತ್ತೆ. ಹಾಗೇನೆ ನನ್ನ ಅಪ್ಪನ ನೆನಪುಗಳು ಕಣ್ಣು ಮುಂದೆ ಬರುತ್ತೆ, ಆ ನೆನಪುಗಳ  ಮರವಣಿಗೆಯನ್ನ ಅಕ್ಷರ ರೂಪಕ್ಕೆ ನಿಮ್ಮ ಮುಂದೆ ಇಡುತ್ತೇನೆ. ನನಗೆ ಶಿವರಾಮ ಕಾರಂತ ಹೇಳಿದ ಮಾತು ಈಗ ನೆನಪಿಗೆ ಬರುತ್ತೆ. “ಒಂದು ವಸ್ತು ನಮ್ಮ ಬಳಿ ಇಲ್ಲ ಅಂದ್ರೆ ಅದರ ಮೌಲ್ಯ ನಮಗೆ ತಿಳಿಯತ್ತದೆ”. ಇದು ನನ್ನ ಪಾಲಿಗೆ ಹಗಲಿನಷ್ಟು ಸತ್ಯ ಅನಿಸುತ್ತೆ… ಯಾಕೆಂದರೆ, ನನ್ನ ರೂಂ‍ಮೇಟ್ ಆಫೀಸಿನಿಂದ ಬಂದು ಮಲಗೊ ಹೊತ್ತಿಗೆ ಅವನ ಅಪ್ಪನಿಗೆ ಕಾಲ್ ಮಾಡಿ ಯೋಗಕ್ಷೇಮ ವಿಚಾರಿಸುತ್ತಾನೆ. ಅವನ ಮಾತಿನ ಶೈಲಿ ಹೇಗೆಂದರೆ ನಾವು ಪ್ರೆಂಡ್ ಜೊತೆ ಹರಟೆ ಹೊಡೆಯುತ್ತೇವೋ, ಖುಷಿ, ದು:ಖಗಳನ್ನು ಹಂಚಿಕೊಳ್ಳುತ್ತೇವೋ.. ಆ ರೀತಿಯಲ್ಲಿ. ಅವನ ಪಕ್ಕದಲ್ಲಿ ನಾನು ಮಲಗುವುದರಿಂದ ನನ್ನ ಕಣ್ಣಿನಲ್ಲಿ ಕಣ್ಣೀರು ನಲಿದಾಡುತ್ತವೆ. ನನಗೂ ಈಗಲು ಅಪ್ಪ ಇದ್ದಿದ್ದರೆ ?…

      

ಅಪ್ಪ ಅಂದ್ರೆ ಆಕಾಶ ಎಂಬ ಲೇಖನದಲ್ಲಿ ಮಣಿಕಾಂತ್ ಒಂದು ಕಡೆ ಹೀಗೆ ಬರೆಯುತ್ತಾರೆ. “ಎಲ್ಲರಿಗೂ ಕೂಡಾ ಅಪ್ಪನೆಂದರೆ ಪ್ರೀತಿ, ಅಪ್ಪನೆಂದರೆ ಅಸಡ್ಡೆ, ಎಲ್ಲಾ ಮನೆಯ ಅಪ್ಪಂದಿರಿಗೂ ಹಾಡುಬರುತ್ತೆ, ಡ್ಯಾನ್ಸ್ ಗೊತ್ತಿರುತ್ತೆ, ಸಿಟ್ಟು ಬರುತ್ತೆ, ಹೋಡೆಯುವುದು ಗೊತ್ತಿರುತ್ತೆ, ಸಮಯ ಬಂದಾಗ ಅಪ್ಪ ಅಮ್ಮನೂ ಆಗಬಲ್ಲ, ತಾಳ್ಮೆ ಕಳೆದುಕೊಂಡಾಗ ಮಾತ್ರ ಸಿಡಿಲಂತೆ ಅಬ್ಬರಿಸಲೂ ಬಲ್ಲ ಈ ಗುಟ್ಟು ಗೂತ್ತಿರುವುದರಿಂದಲೇ ನಾವು ಗಳಿಗೆಗೊಮ್ಮೆ ನಮ್ಮ ಅಪ್ಪಂಗೆ ಕೇಳಿದ್ರೆ ಕೊಡಿಸುತ್ತಾರೆ ಬಿಡಪ್ಪಾ ಎನ್ನುತ್ತೇವೆ. ಯಾರಾದರೂ ಹೆದರಿಸಿದರೆ ನಮ್ಮ ಅಪ್ಪಂಗೆ ಹೇಳ್ತೀನಿ ನೋಡು ಎಂದು ಎಚ್ಚರಿಸುತ್ತೇವೆ. ಹಾಗೆಯೇ ಯಾವುದಾದ್ರೂ ತಪ್ಪು ಮಾಡಿ ಸಿಕ್ಕಿ ಬಿದ್ದಾಗ ಅಪ್ಪನ್ನ ಕಂಡಾಕ್ಷಣ ನಿಂತಲ್ಲೇ ನಡುಗುತ್ತೇವೆ. ”ಇದು ಪೂರ್ತಿ ನಿಜವಲ್ಲವೇ.. ಎಲ್ಲಾ ಮಕ್ಕಳಿಗೆ ಅಪ್ಪ ಅಂದ್ರೆ ಅವರ ಪಾಲಿಗೆ ರಿಯಲ್ ಹೀರೋ. ನನ್ನ ಪಾಲಿಗೂ ಅಷ್ಟೇ..

ಆದರೇ ನಾನು ಅಪ್ಪನನ್ನ ಹೆಚ್ಚು ಇಷ್ಟಪಡಲೇ ಇಲ್ಲ.. ಯಾಕಂದ್ರೇ ಚಿಕ್ಕದಿರುವಾಗಲೆ ನಮ್ಮ ಮನೆಯಲ್ಲಿ ಟಿವಿ ಇರಲಿಲ್ಲ ಅದಕ್ಕೆ ಪಕ್ಕದ ಮನೆಗೆ ಅಪ್ಪನ ಕಣ್ಣುಮುಚ್ಚಿ ಕ್ರಿಕೆಟ್ ನೋಡಲು ಹೋಗುತ್ತಿದ್ದೆ. ತಿರುಗಿ ಬರುವಾಗ ಅಪ್ಪನಿಗೆ ಈ ವಿಷಯ ಗೊತ್ತಾಗಿ ಇರುತ್ತೆ… ಅಪ್ಪ ತನ್ನ ದಪ್ಪದ ಬೆಲ್ಟ್ ನಿಂದ ಹೋಡೆಯುತ್ತಿದ್ದರು. ಯಾವಾಗಲು ಮಂಗಳಾರತಿ ಇದ್ದೆ ಇರುತ್ತಿತ್ತು. ಅದು ಸವಕಲು ಸಂಗತಿಯೂ ಆಗಿತು.. ನನಗೆ.. ಆದ್ರೇ ಅಷ್ಟು ಬೇಗ ಚಾಳಿ ಬಿಡುವವನಲ್ಲ ನಾನು.. ಮತ್ತೆ ಮತ್ತೆ ಕ್ರಿಕೆಟ್ ನೋಡೋದಕ್ಕೆ ಹೋಗ್ತಾ ಇದ್ದೆ. ಯಾಕಂದ್ರೇ ಅಷ್ಟು ಕ್ರೀಕೆಟ್ ಹುಚ್ಚು ಆವರಿಸಿಬಿಟ್ಟಿತ್ತು. ಒಂದು ದಿನ ವಿಶ್ವಕಪ್ ಪೈನಲ್ ಪಂದ್ಯಾಟ ನೋಡಿ ಅದು ಮುಗಿಯುವಾಗ ರಾತ್ರಿ11:30 ಆಗಿತ್ತು. ಮನೆಗೆ ಖದೀಮನಂತೆ  ಹಿಂಬದಿ ಬಾಗಿಲಿನಿಂದ ಒಳಹೋಗಿ ಮೊದಲು ಅಪ್ಪನ ಕೋಣಿಗೆ ದೃಷ್ಟಿ ಹಾಯಿಸಿದಾಗ ಅಪ್ಪ ಕೋಣಿಯ ದೀಪ ಆರಿತ್ತು. ನನ್ನ ಖುಷಿಗೆ ಪಾರವೇ ಇರಲಿಲ್ಲ. ಆದ್ರೆ ಅಪ್ಪ ವರಾಂಡದಲ್ಲಿ  ನನ್ನನ್ನು ಕಾಯುತ್ತಾ ಇದ್ದರು. ಈ ಸಲ ನನ್ನ ಬೆನ್ನಲ್ಲಿ ಬಾಂಸುಂಡೆ ಬರುವುದರಲ್ಲಿ ಎರಡು ಮಾತಿಲ್ಲ ಎಂದು ಅಂದುಕೊಂಡೆ. ನೋಡಿ.. ಅದೇ ಒಂದು ಚೂರು ಆಚೆ-ಇಚೆ ಆಗಲಿಲ್ಲ. ನೆನದಂತೆ ಆಯಿತು. ಆದರೆ ಅಪ್ಪ ಅಷ್ಟಕೆ ನನನ್ನು ಬಿಡಲಿಲ್ಲ ಮನೆಯ ಒಳಗಡೆ ಬರದಂತೆ ಕಟ್ಟಪ್ಪಣೆ ಮಾಡಿದರು. ಏನೂ ಮಾಡುವುದು ನಿಂತಕೊಂಡೆ ನಾನು ಒಬ್ಬನೆ ನಿಂತರೆ ಪರವಾಗಿರಲಿಲ್ಲ ನನ್ನ ಜೊತೆ ನನ್ನ ಪ್ರೀತಿಯ ಅಮ್ಮ. 

ಅದರಂತೆ ನಮ್ಮ ಮನೆಯಲ್ಲಿ ಯಾರೂ ನಮಾಝ್ ಮಾಡದೆ, ನಾವು ಹುಡುಗರು ಮಸೀದಿಗೆ ಹೋಗದೆ ಇರುವಂತಿಲ್ಲ, ಬೆಳಗ್ಗೆ ಅದಾನ್ ಕೊಟ್ಟ ಐದು ನಿಮಿಷದ ಒಳಗಡೆ ನಾವು ಎದ್ದಿಲ್ಲ ಅಂದ್ರೆ ನಮಗಾಗಿ ತಂದಿಟ್ಟ ಬೆತ್ತದಲ್ಲಿ ರುಚಿ ತೋರಿಸುತ್ತಾ ಇದ್ದರು. ಒಂದು ದಿವಸ ಪೆಟ್ಟು ಸರಿಯಾಗಿ ಬಿತ್ತು ಎದಿಲ್ಲ ಕಾರಣದಿಂದ, ಆಮೇಲೆ ಅಪ್ಪನ ಧ್ವನಿ ಕೇಳಿದರೇ ಸಾಕು ಯಾವ ಲೋಕದಲ್ಲಿ ಇದ್ದರೂ ತಟ್ಟನೆ ರೆಡಿಯಾಗಿ ಮಸೀದಿಗೆ ಹೊಗುತ್ತಾ ಇದ್ದೆವು.  ಅಲ್ಲಿಂದ ಶುರುವಾಯಿತು ಅಪ್ಪನ ಮೇಲೆ ಭಯ, ಕರುಣೆ ಇಲ್ಲದವನು.ಏನೆಲ್ಲಾ.. ಆದ್ರೆ ಅಪ್ಪ ನಾನು ಚಿಕ್ಕ ಮಗುವಾಗಿದ್ದಾಗ ತೋರಿಸಿದ ಪ್ರೀತಿ ಅಷ್ಟೀಷ್ಟಲ್ಲ.. ಅಮ್ಮ ಹೇಳುತ್ತಾರೆ ನಾನು ಅಂಬೆಗಾಲಿಡುತ್ತಿರುವ ಸಮಯದಲ್ಲಿ ನನಗೆ ಯಾವಾಗಲೂ ಮುದ್ದಿಸಿ ಕೆನ್ನಗೆ ಒಂದು ಮುತ್ತಿಟ್ಟು ಅಪ್ಪ ಕೆಲಸಕ್ಕೆ ಹೋಗುತ್ತಾರಂತೆ, ಅದರಂತೆ ಒಂದು ದಿನ ಅಪ್ಪ ಕೆಲಸಕ್ಕೆ ಹೋದ ಸಮಯದಲ್ಲಿ ನಾನು ಅವರ ಹಿಂದೆ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಕೂಗಳತೆ ದೂರ ಸಾಗಿದೆನಂತೆ ಆಮೇಲೆ ಯಾರೋ ಅಪ್ಪನಿಗೆ ಹೇಳಿದಂತೆ ನಿಮ್ಮ ಪಾಪು ನಿಮ್ಮ ಹಿಂದೆ ಬರುತ್ತಾ ಇದ್ದಾನೆ ಅಂತ.  ಆಷ್ಟು ಗಾಢವಾದ ವಾತ್ಸಲ್ಯ ಇತ್ತು ನಮ್ಮಿಬ್ಬರಲ್ಲಿ.. ಅದರಂತೆ ಬೆಳೆಯುತ್ತಾ ದೊಡ್ಡವನಾಗುತ್ತಾ ಹೋದಂತೆ ಯುವಕರ ಜೊತೆ ಸೇರಿದಂತೆ.

ಒಂದು ದಿವಸ ನಾನು ಊರಿನಲ್ಲಿ ಕೆಲವು ಸಿಗರೇಟ್ ಸೇದುವವರ ಜೊತೆ ನಿಂತುಕೊಂಡಿದ್ದೆ ಅಷ್ಟೆ. ಅಪ್ಪ ನನನ್ನು ಕರೆದು ಸರಿಯಾಗಿ ಬೈದರು, ಕಿವಿ ಹರಿದು ಹೋಗುವ ಹಾಗೆ.. ಆದ್ರೆ ಅಪ್ಪ ಅವತ್ತು ಹೇಳಿದ ಮಾತು “ಚಾರಿಯಾಲ್ ಚಾರಿಯದ್ ಮಣಕ್ಕುಂ” ಇವತ್ತು ಕಿವಿಯಲ್ಲಿ ಗುಂಯ್ ಗುಟ್ಟುತ್ತದೆ. ಚಿಲ್ಲರೇ ಕೊಡದಕ್ಕೆ ಬಸ್ಸಿನ ನಿರ್ವಾಹಕ (ಕಂಡಕ್ಟರ್) ಬೈದರೆ ಮುಂದಿನ ಸ್ಟಾಪ್ ‍ನಲ್ಲಿ ಮರೆಯಬಹುದಿತ್ತು. ಆದ್ರೆ ಬೈದದ್ದು ಅಪ್ಪ ಈ ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯಲ್ಲಿ ಮರೆತು ಬಿಡಲು ಆಗುತ್ತಿಲ್ಲ. ಇದು ಉತ್ಪ್ರೇಕ್ಷ ಮಾತಲ್ಲ, ಇವತ್ತು  ಕೂಡ ಸಿಗರೇಟ್ ಸೇದುವವರು ಜೊತೆ ನಿಂತುಕೊಂಡರೆ ಅಪ್ಪನ ಮಾತು ಅಶರೀರವಾಣಿಯಂತೆ ಕೇಳುತ್ತೆ. ಜೊತೆಗೆ ಅಪ್ಪನ ನೆನಪು ಆಗುತ್ತೆ.. ಅದಕ್ಕೆ ಮಣಿಕಾಂತ ಅವರು ಅಪ್ಪ ಅಂದರೆ ಆಕಾಶ ಯಾಕೆ ಅಂತ ಅವರ ಪುಸ್ತಕದಲ್ಲಿ ಒಂದು ಕಡೆ ಬರೆಯುತ್ತಾರೆ“ ಆಕಾಶದಲ್ಲಿ ದಗದಗಿಸುವ ಸೂರ್ಯ, ಕೊಮಲತೆಯ ಚಂದ್ರ, ಆಬ್ಬರಿಸುವ ಸಿಡಿಲು, ಮೈಸೊಕುವ ಸೊನೆ ಮಳೆ ಏಲ್ಲವೂ ಇದೆ ಅದರಂತೆ ನಮ್ಮ ಅಪ್ಪನು ಕೂಡ …….

ಒಂದು ದಿವಸ ಹಾಗೆ ಎಲ್ಲವು ಸರಿಯಾಗಿತ್ತು. ಅಪ್ಪನಿಗೆ ಹಠಾತ್ ಎದೆನೋವು ಕಾಣೆಸಿಕೊಂಡಿತು. ಮೂರು ಶಸ್ತಚಿಕಿತ್ಸೆ ಮಾಡಿ ನಂತರ ಸಾವಿನ ಅಂಚಿನಲ್ಲಿ ಬದುಕುಳಿದು ಬಂದರು ಅನ್ನುವ ವೇಳೆಯಲ್ಲಿ ಅಪ್ಪ ಯಾವಗಲೂ ಬಾಯಲ್ಲಿ ಹುಣ್ಣು ಏನು ತಿನ್ನೋಕಾಗಲ್ಲ ಅಂತಿದ್ರು. ಸಾಮಾನ್ಯ ದೇಹ ಉಷ್ಣತೆ ಹೆಚ್ಚಾದಾಗ ಬಾಯಲ್ಲಿ ಹುಣ್ಣು ಆಗುವುದು ಸಹಜ.. ಅಂದುಕೊಂಡು ಸುಮ್ಮನಿದ್ದರು.. ಆ ಹುಣ್ಣು ಕಾನ್ಸರ್ ಎಂಬ ಮಹಾಮಾರಿ ಅಂತ ಡಾಕ್ಟರ್ ಹೇಳಿದಾಗ ನಾನಂತು ಅಧೀರನಾಗಿ ಹೋದೆ. ಅದು ಪ್ರಾರಂಭಿಕ ಹಂತದಿಂದ ಪೈನಲ್ ಸ್ಟೆಜ್ ಬಂದು ತಲುಪಿದೆ ಎಂದು ತಿಳಿದು ಕುಸಿದುಬಿದ್ದೆ. ಅಪ್ಪನ ಸ್ಥಿತಿಯನ್ನು ನನ್ನ ಕಣ್ಣಿನಿಂದ ನೋಡಲು ಅಸಾದ್ಯವಾಗಿ ಹೋಗಿತ್ತು. ಅಸಹನಿಯವಾದ ನೋವು ಅಪ್ಪನಿಗೆ ದಿನೇ ದಿನೇ ಹೆಚ್ಚಾಗತೊಡಗಿತ್ತು. ಬಾಯಲ್ಲಿ ಹುಣ್ಣು ಆಗಿರುವುದರಿಂದ ಅಪ್ಪನಿಗೆ ಏನೂ ತಿನ್ನಲಾಗದೆ ಅಪ್ಪ ಸಣಕಲು ಆಗಿ ಬಿಟ್ಟಿದ್ದಾರೆ. ಒಂದು ಕಾಲದಲ್ಲಿ ಪೈಲ್ವಾನ್ ತರ ಗಟ್ಟಿ ಮುಟ್ಟಾದ ದಡೂತಿ ದೇಹದಂತೆ ಕಾಣುವ ಅಪ್ಪನಾ ಇದು, ಅಂತ ನಂಬಲಿಕ್ಕೂ ಅಸಾದ್ಯವೆನಿಸಿತ್ತು. ಕೊನೆಗೆ ಬಾಯಿ ಪೂರ್ತಿ ಹುಣ್ಣು ನಾಲಿಗೆ ಬಿಡದೆ ಆವರಿಸಿತ್ತು. ಎಲ್ಲಾ ಆಸ್ಪತ್ರೆಯ ಡಾಕ್ಟರ್ ನಮ್ಮಿಂದ ಆಗಲ್ಲ ಅಂತ ಕೈ ಚೆಲ್ಲಿದರು. ಕೊನೆಗೆ ನಾಲಿಗೆ ಆವರಿಸಿದ ಕಾರಣ ಅಪ್ಪ ತಮ್ಮ ಹಲ್ಲಿನಿಂದ ನಾಲಿಗೆನ ತುಂಡು ಮಾಡಿ ಅಮ್ಮನ ಕೈಗಿಟ್ಟರು. ನಂತರ ಅಪ್ಪನ ಮಾತು ನಿಂತು ಹೋಯ್ತು. ಅಪ್ಪನ ಹೃದಯ ಆಘಾತದಿಂದ ಶುರುವಾದ ನನ್ನ ಪ್ರಾರ್ಥನೆ, ನನ್ನ ಹರಕೆ ಮುಂದುವರಿದಿತ್ತು. ಎಲ್ಲಾ ದರ್ಗಾದಲ್ಲಿ, ಎಲ್ಲರ ನಮಾಝ್ ನಂತರವು ಅಲ್ಲಾಹುನಲ್ಲಿ ನನ್ನ ಮನದಾಳದಿಂದ ಬೇಡಿಕೊಂಡೆ. ಅಲ್ಲಹುವೇ ನನ್ನ ಅಪ್ಪನ ಬದುಕುಳಿಸು ಅವರಿಗೆ ದೀರ್ಘಯಸ್ಸು ವರ್ಧಿಸು ಎಂದೆಲ್ಲಾ ಯಾಚಿಸಿದೆ. ಏನು ಮಾಡಲಿ ಕೊನೆಗೆ ಅವನ ಹಟನೇ ಸಾದಿಸಿ ಬಿಟ್ಟ.. ಅಪ್ಪ ರಕ್ತಕಾರಿ ನನ್ನ ಮಡಿಲಲ್ಲಿ ಕೊನೆಯುಸಿರೆಳೆದರು.. ಅವತ್ತು ಮೊದಲ ಸಲ ಮರಣವನ್ನು ಕಣ್ಣಾರೆ ಕಂಡೆ. ದೇವರು ನನ್ನ ದು:ಖಕ್ಕೆ ಪರಿಹಾರ ನೀಡುವುದಕ್ಕೆ ಬದಲು ನನ್ನ ಪ್ರಾರ್ಥನೆಯನ್ನು ಬದಲಾವಣೆ ಮಾಡಿಬಿಟ್ಟ. 

      

ಅಲ್ಲಿಂದ ಶುರುವಾಯ್ತು.. ”ಅಲ್ಲಾಹುವೇ ನನ್ನ ಅಪ್ಪನ್ನ ಬದುಕುಳಿಸು” ಎಂದು ಮೊರೆ ಇಡುತ್ತಿದ್ದ ನಾನು ಅಲ್ಲಾಹುವೇ ನನ್ನ ಅಪ್ಪನ ಕಬರನ್ನು ಸ್ವರ್ಗ ಭವನವನ್ನಾಗಿ ಮಾಡು ಎಂದು ಅಂಗಲಾಚುತ್ತಿದ್ದೇನೆ.. ಅಪ್ಪ ಈಗ ಇಷ್ಟ ಆಗುತ್ತಿದ್ದಾರೆ… ಯಾಕೆ ಅಪ್ಪ ನನ್ನನ್ನ ಬೈಯಿದ್ದರು ಎಂದು ಚಿಂತನೆ ಮಾಡಿದಾಗ ಅನಿಸಿದ್ದು, ಮೊನ್ನೆ ಮೊನ್ನೆ ಹಣದಾಗ ಕೊಂಡ ಕಾರನ್ನು ಪಾರ್ಕ್ ಮಾಡಲು ಎಲ್ಲಿ ನೆರಳು ಇರುತ್ತೆ ಅಲ್ಲಿ ಪಾರ್ಕ್ ಮಾಡುತ್ತಾರೆ, ಇದನ್ನು ಇಷ್ಟು ಕಾಳಜಿ ವಹಿಸುವ ಜನರು ತನ್ನಿಂದ ಬಂದ ಒಂದು ಪ್ರತಿರೂಪವನ್ನು ಅಡ್ಡದಾರಿ ಹಿಡಿದರೆ ಯಾವ ಅಪ್ಪ ಈ ತರ ಮಾಡದೆ ಇರುತ್ತಾರೆ ಅಂದುಕೊಂಡೆ. ನನಗೆ ಈಗಲೂ ಅಪ್ಪ ಇದ್ದಿದ್ದರೆ ನನ್ನ ಸಾಧನೆಗೆ ಬೆನ್ನು ತಟ್ಟುತ್ತಿದ್ದರು.. ತಪ್ಪು ದಾರಿಯಲ್ಲಿದ್ದರೆ ಬುದ್ದಿ ಹೇಳುತ್ತಿದ್ದರೇನೊ…

ಪ್ರೀತಿಯ ಗೆಳೆಯರೇ,
ಅಪ್ಪ ಇದ್ದಾಗ ಸರಿಯಾಗಿ ನೋಡಿಕೊಳ್ಳಿ, ಅವರ ಮುಪ್ಪು ನಿಮಗೆ ಅಸಹ್ಯವೆನಿಸಬಹುದು, ಅವರ ಅರಳು ಮರಳು ನಿಮ್ಮ ಪ್ರತಿಷ್ಟೆಗೆ ದಕ್ಕೆ ತರಬಹುದು.. ಪರವಾಗಿಲ್ಲ.. ಸಹಿಸಿಕೊಳ್ಳಿ.. ನಿಮ್ಮನ್ನ ಇಷ್ಟು ಎತ್ತರಕ್ಕೆ ಬೆಳೆಸಿದ್ದಕ್ಕಾಗಿ. ಇದ್ದಾಗ ಅನಾಥಾಶ್ರಮಕ್ಕೆ ಕಳಿಸಿ ಮಾನಸಿಕ ತೊಂದರೆ ಕೊಟ್ಟು, ಮರಣ ನಂತರ ಅವರ ಹೆಸರಿನಲ್ಲಿ ಅನ್ನಸಂತರ್ಪಣೆ, ದಾನ ಮಾಡುವುದು ಉತ್ತಮ ಅನಿಸಲ್ಲ.. (ದಾನ ಅವರಿಗೆ ಸಂದಾಯ ಆಗುತ್ತೆ) ಆದ್ರೆ ಆ ಶಾಪ ನಿಮ್ಮನ್ನ ಬೆಂಬಿಡದೆ ಕಾಡುತ್ತದೆ.. ಅದು ಸುಳ್ಳಲ್ಲ… ಹೌದಲ್ಲವೇ…??

✍🏿ಜಬ್ಬಾರ್ ಪರಪ್ಪು,ದುಬ್ಯೆ