ಬುಧವಾರ, ಜೂನ್ 29, 2016

ಯಾಕೆ ಹೀಗೆ?


ಆತ ಸರಿಯಾದ ಶೈಲಿಯಲ್ಲಿ, ಸಮಾಧಾನದಿಂದ ನಮಾಝ್ ನಿರ್ವಹಿಸುತ್ತಿದ್ದಾನೆ.
ಕಾರಣ,
ಬೆನ್ನ ಹಿಂದೆ ಅಪ್ಪ ನಿಂತು ಗಮನಿಸುತ್ತಿದ್ದಾನೆ.

ರಮಳಾನಿನ ದಿನಗಳಲ್ಲಿ ಹಿಂಬಾಗಿಲಿನಿಂದ ಹೋಟೆಲ್ ಗೆ ನುಗ್ಗಲು ಹೊರಟವನು, ದೂರದಲ್ಲಿ ನಿಂತಿದ್ದ ನೆರೆಮನೆಯವನ ಕಂಡು ಬೆವೆತಿದ್ದಾನೆ...

ವೇಶ್ಯಾಲಯದ ಬಾಗಿಲ ಬಳಿ ನಿಂತು ಸುತ್ತಲೂ ನೋಡುತ್ತಿದ್ದಾನೆ, ಪರಿಚಯಸ್ಥರಿದ್ದಾರೆಯೇ ಎಂದು...

ಜುಗಾರಿ ಆಡಲು ಕುಳಿತಾಗ, ಬಾಲ್ಯದಲ್ಲಿ ಬುಗುರಿ ತಿರುಗಿಸಿ ಆಟವಾಡಿದ್ದ ಗೆಳೆಯನ ಕಂಡು ಭಯಪಟ್ಟು ಹಿಂತಿರುಗಿದ್ದ...

ಸೈಬರಿನಲ್ಲಿ ಕೂತು ಅಶ್ಲೀಲ ಚಿತ್ರಗಳನ್ನು ನೋಡುತ್ತಿದ್ದವನಿಗೋ, ಒಳಗೊಳಗೇ ಭಯ, ಯಾರಾದರೂ ಬಂದಾರೋ??

ಯಾವುದೋ ಹೆಣ್ಣಿನೊಂದಿಗೆ ಲಲ್ಲೆಗರೆವಾಗ ಮೆಲುದನಿಯ ಮಾತು, ಯಾರಾದರೂ ಕೇಳಿದರೆ??
ಆದರೂ,

ಪ್ರತಿಯೊಂದು ಹೆಜ್ಜೆ, ನಿನ್ನೊಳಗಿನ ಅಲುಗಾಟ,ಮುಲುಗಾಟ, ನಡೆ,ನುಡಿ,ಮನದಾಳದ ಮಾತನ್ನೂ ಆಲಿಸುತ್ತಿರುವ ಸರ್ವಶಕ್ತನಾದ ಅಲ್ಲಾಹನು ಇವೆಲ್ಲವನ್ನೂ ವೀಕ್ಷಿಸುತ್ತಾನೆಂಬ ಅರಿವಿನ ಭಯ ಯಾಕೆ ಮೂಡುತ್ತಿಲ್ಲ? ಕಾಲಬುಡದಲ್ಲೇ ಇರುವ ವಿಪತ್ತಿನ ಕುರಿತೇಕೆ ಚಿಂತನೆ ಮೂಡುತ್ತಿಲ್ಲ?

ನಿನ್ನ ಉಸಿರಿನ ನಿಯಂತ್ರಣವೂ ಆತನಲ್ಲೇ ಇದೆ... ಒಂದು ನಿಮಿಷ ನಿನ್ನುಸಿರು ಸ್ಥಗಿತಗೊಂಡರೆ ಸಾಕು, ಈ ಲೋಕದ ಹಾಜರಿ ಪಟ್ಟಿಯಲ್ಲಿ ನಿನ್ನ ಹೆಸರು ಮಾಯಲು....
ಮರಣದ ಕರೆಗಂಟೆಯು ಕಿವಿಯ ತಮಟೆ ಬಡಿಯುತ್ತಿದೆ. ಕಳೆದ ರಮಳಾನ್ ನಲ್ಲಿ ನಮ್ಮೊಂದಿಗಿದ್ದು ಒಂದೇ ಬಟ್ಟಲಿನಲ್ಲಿ ಇಫ್ತಾರ್ ಉಂಡ ಅನೇಕರು ಇಂದು ನಮ್ಮೊಂದಿಗಿಲ್ಲ...
ಮುಂದಿನ ರಮಳಾನ್ ನಲ್ಲಿ ನಾವಿರುತ್ತೇವೆಯೋ? ಗೊತ್ತಿಲ್ಲ..
ಪಶ್ಚಾತ್ತಾಪದ ಪರ್ವಕಾಲ ಮತ್ತೇ ಆರಂಭಗೊಂಡಿದೆ... ಪ್ರಾರ್ಥನೆ ನಮ್ಮದು, ಫಲ ನೀಡುವವನು ಅಲ್ಲಾಹು....

✒- ಮುಆದ್ ಜಿ.ಎಂ