ಪವಿತ್ರವಾದ ರಮಝಾನ್ ತಿಂಗಳು ನಮ್ಮಿಂದ ದೂರವಾಗುತ್ತಿದೆ. ಇನ್ ಷಾ ಅಲ್ಲಾಹ ಇವತ್ತು ಉಪವಾಸದ ಕೊನೆಯ ದಿನವಾಗಿದೆ. ಈ ಮೂವತ್ತು ದಿನದ ಉಪವಾಸದಲ್ಲಿ ನಾವೆಷ್ಟು ಉಪವಾಸವನ್ನ ಮಾಡಿದ್ದೇವೆ ಅನ್ನೋದನ್ನು ನೋಡೋಣ. ಹೆಚ್ಚಿನವರಲ್ಲಿ ಕೇಳಿದರೆ, ಇಲ್ಲ ನಾವು ಇವತ್ತು ಪೂರ್ತಿಯಾದರೆ ಮೂವತ್ತು ಉಪವಾಸ ಭರ್ತಿಯಾಗುತ್ತದೆ ಎಂದು ಹೇಳಿಬಿಡುತ್ತಾರೆ. ಆದರೆ ಅದು ಅಲ್ಲಾಹನ ಲೆಕ್ಕದಲ್ಲಿ ಮೂವತ್ತು ಆಗಿದೆಯೇ? ಎನ್ನುವ ಪ್ರಶ್ನೆಯನ್ನ ನಮಗೆ ನಾವೇ ಕೇಳಿ ನೋಡಬೇಕು. ಕೇವಲ ನಮಗೆ ನಾವೇ ಸಮಾಧಾನಿಸಲು ಉಪವಾಸದಲ್ಲಿ ತೊಡಗಿಸಿಕೊಂಡರೆ ಸಾಕೇ?
*ತಿಂಡಿ ತಿನಿಸುಗಳ ಸ್ಪರ್ಧೆ*
ಉಪವಾಸವೆಂದರೆ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಮಾಡುವ ಸ್ಪರ್ಧೆಯಲ್ಲ. ಈ ಪವಿತ್ರವಾದ ಮಾಸಕ್ಕೆ ಅದರದ್ದೇಯಾದ ಪ್ರಾಮುಖ್ಯತೆಯಿದೆ. ಆದರೆ ವಿಪರ್ಯಾಸ ನೋಡಿ ಇವತ್ತಿನ ದಿನಗಳಲ್ಲಿ ರಮಝಾನ್ ಉಪವಾಸದ ಪ್ರಾರಂಭ ಮತ್ತು ಅಂತ್ಯವನ್ನು ಜನರು ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಮಾಡಿ ಅರ್ಧದಷ್ಟು ಸೇವಿಸಿ ಉಳಿದರ್ಧವನ್ನು ವ್ಯರ್ಥ ಮಾಡುವುದು ಕಾಣಬಹುದಾಗಿದೆ. ಇವತ್ತು ಪ್ರಪಂಚದ ಬೇರೆ ಬೇರೆ ರಾಷ್ಟ್ರಗಳನ್ನು ಪರಿಗಣೆಗೆ ತೆಗೆದುಕೊಂಡಾಗ ಅಲ್ಲಿನ ಬಡ ಜನತೆ ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದೆ ಒದ್ದಾಡುತ್ತಿದ್ದಾರೆ. ಆದರೆ ನಮಗೆ ಸೃಷ್ಟಿಕರ್ತ ಅದೆಷ್ಟೇ ಅನುಗ್ರಹಗಳನ್ನು ನೀಡಿದರು ಅತೃಪ್ತಿಯಿಂದ ಇದ್ದೇವೆ. ರಮಝಾನ್ ಖಂಡಿತವಾಗಿಯೂ ತಿಂಡಿಗಳನ್ನು ತಯಾರು ಮಾಡಿ ಭಕ್ಷಿಸುವ ಮಾಸವಲ್ಲ. ಅಲ್ಪಸ್ವಲ್ಪ ಸೇವಿಸಿ ಸೃಷ್ಟಿಕರ್ತನ ಆರಾಧನೆಯಲ್ಲಿ ತೊಡಗಿ ನಮ್ಮ ಪಾಪಗಳಿಂದ ಮುಕ್ತಿಹೊಂದಲು ಅನುಗ್ರಹಿಸಿದ ಮಾಸವಾಗಿದೆ. ಅಲ್ಪ ಆಹಾರ ಸೇವಿಸುವ ಮೂಲಕ ದೇಹ ಮತ್ತು ಮನಸ್ಸು ನಮ್ಮ ಹತೋಟಿಗೆ ಬರುತ್ತದೆ. ಇದರಿಂದ ನಮ್ಮ ಭಕ್ತಿಯನ್ನು ಹೆಚ್ಚಿಸಬಹುದು.
*ಬಟ್ಟೆ ಖರೀದಿಯಲ್ಲಿ ಪೈಪೋಟಿ*
ಇವತ್ತು ಪಟ್ಟಣದಲ್ಲಿ ಕಾಲಿಡಲು ಜಾಗವಿಲ್ಲದ ವಾತಾವರಣ ನಿರ್ಮಾಣವಾಗಿದೆ. ಕಾರಣ ಎಲ್ಲ ಬಟ್ಟೆಯಂಗಡಿಯಲ್ಲೂ ಮಹಿಳೆಯರದ್ದೆ ಕಾರುಭಾರು. ಪುರುಷನಾದವನು ದುಡಿದು ಮಹಿಳೆಯ ಕೈಗೆ ಇಂತಿಷ್ಟು ದುಡ್ಡಿಟ್ಟು ಎಲ್ಲವೂ ಮುಗಿಯಿತು ಎನ್ನುವಂತೆ ಕೈ ತೊಳೆದುಕೊಳ್ಳುತ್ತಾನೆ. ಇವತ್ತು ಬಟ್ಟೆಬರೆಗಳನ್ನು ಖರೀದಿ ಮಾಡಲು ಪಟ್ಟಣದಲ್ಲಿ ಮಹಿಳೆಯರೇ ಹೆಚ್ಚಾಗಿ ಕಾಣಸಿಗುತ್ತಿದ್ದಾರೆ. ಪ್ರತಿ ಅಂಗಡಿಗಳಲ್ಲೂ ಗಂಟೆಗಟ್ಟಲೆ ಸಮಯವನ್ನು ವ್ಯರ್ಥ ಮಾಡುವ ಆ ಮಹಿಳೆ ತನಗೆ ಕಡ್ಡಾಯ ಮಾಡಲ್ಪಟ್ಟ ಇಬಾದತ್ ಕಾರ್ಯವನ್ನು (ನಮಾಝ್) ವ್ಯರ್ಥವಾಗುವುದರ ಬಗ್ಗೆ ಕಿಂಚಿತ್ತೂ ಯೋಚೇನೆಯೇ ಮಾಡುವುದಿಲ್ಲ. ಇದು ಮಹಿಳೆಯರ ತಪ್ಪಲ್ಲ ಪುರುಷನದ್ದು ಕೂಡ. ಮಹಿಳೆಯರ ಜೊತೆಗೆ ಪುರುಷರು ಇದ್ದರೆ ಹೆಚ್ಚಿನ ಸಮಯ ವ್ಯರ್ಥವಾಗುವುದನ್ನು ತಡೆಯಬಹುದು.
*ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಟ*
ಫೇಸ್ಬುಕ್ ,ವಾಟ್ಸಾಪ್ ಬಂದ ಬಳಿಕ ಮನುಷ್ಯನಿಗೆ ಪರಸ್ಪರ ಕಿತ್ತಾಟ ನಡೆಸಲು ಸುವರ್ಣ ವೇದಿಕೆಯಾಗಿ ಕೆಲವರಿಗೆ ಮಾರ್ಪಟ್ಟಿವೆ. ಪವಿತ್ರವಾದ ರಮಝಾನ್ ಮಾಸಕ್ಕೆ ಕಿಂಚಿತ್ತೂ ಗೌರವವನ್ನು ನೀಡದೆ ಪರಸ್ಪರ ಕಿತ್ತಾಟ ನಡೆಸುವ ಅದೆಷ್ಟೋ ಯುವಕ, ಯುವತಿಯರನ್ನ ನಾವು ಇವತ್ತು ಕಾಣಬಹುದು. ಅದರಲ್ಲೂ ವ್ಯಕ್ತಿಗಳು ಅನಾಮಧೇಯ ಬರಹ ಹಾಗೂ ಹೆಸರುಗಳ ಮೂಲಕ ವ್ಯಕ್ತಿ ನಿಂದನೆಯ ಪ್ರಕ್ರಿಯೆ ಎಗ್ಗಿಲ್ಲದೆ ನಡೆಯುತ್ತಿದೆ. ಅಪರಿಚಿತರು ಫೇಸ್ಬುಕ್ ಮೂಲಕ ಪರಿಚಯವಾಗಿ ತದನಂತರ ಪರಸ್ಪರ ಶತ್ರುಗಳಾಗಿ ಮಾರ್ಪಾಟ್ಟು ಮಾನಹರಾಜು ಮಾಡುವ ನೀಚ ಪ್ರವೃತ್ತಿಗೂ ಕೆಲವರು ಇಳಿಯುತ್ತಿದ್ದಾರೆ. ಒಬ್ಬೊಬ್ಬರು ಮತ್ತೊಬ್ಬರ ವ್ಯಯಕ್ತಿಕ ವಿಚಾರಗಳನ್ನು ಕೆದಕಿ ಕಿತ್ತಾಟ ನಡೆಸುವ ಪ್ರಕ್ರಿಯೆ ಹೆಚ್ಚಾಗಿ ಕಂಡುಬರುತ್ತಿದೆ."ಇತರರ ರಹಸ್ಯವನ್ನು ಬಹಿರಂಗಪಡಿಸುವವನ ರಹಸ್ಯಗಳನ್ನು ಅಲ್ಲಾಹನು ಬಹಿರಂಗಪಡಿಸುವವನು" ಎನ್ನುವ ಹದೀಸ್ ಜನರಿಗೆ ಮರೆತು ಹೋಯಿತೇ ಈ ಜನರಿಗೆ?
*ಫೋಟೋ ಎಡಿಟರುಗಳ ಕಾಟ*
ಪವಿತ್ರವಾದ ರಮಝಾನ್ ಮಾಸವನ್ನು ಗೇಲಿ ಮಾಡಲು ಸ್ವತಃ ಪ್ರವಾದಿ ಮುಹಮ್ಮದ್ (ಸ.ಅ) ಅನುಯಾಯಿಗಳೆಂದು ಕರೆಸಿಕೊಂಡವರೇ ಮುಂದೆ ಬರುತ್ತಿದ್ದಾರೆ. ಸಿನಮಾ ಹಾಸ್ಯನಟರ ಫೋಟೋಗಳನ್ನು ಎಡಿಟ್ ಮಾಡಿ ಬ್ಯಾರಿ ಹಾಗು ಮಲಯಾಳದಲ್ಲಿ ಅದಕ್ಕೆ ಈದ್ ಹಬ್ಬದ ಹೆಸರಿನಲ್ಲಿ ಹಾಸ್ಯ ಸಂಭಷಣೆಗಳನ್ನು ಬರೆದು ವಿಕೃತ ಆನಂದವನ್ನು ಪಡೆಯುತ್ತಾರೆ. ಈದ್ ಹಬ್ಬಕ್ಕೆ ಚಂದ್ರದರ್ಶನವಾಗದ ಕಾರಣ ವಿಲಂಬದ ಹೆಸರಿನಲ್ಲಿ ಈದ್ ಹಬ್ಬವನ್ನು ಹಾಸ್ಯ ಮಾಡುವ ವಿಕೃತ ಜನರು ನಮ್ಮೊಡನೆ ಇದ್ದಾರೆ. ಇವತ್ತು ವಾಟ್ಸಾಪ್ ಗ್ರೂಪುಗಳನ್ನು ತೆರೆದಾಗ ಇಂತಹ ಹಾಸ್ಯಭರಿತ ಸಂದೇಶಗಳೇ ಕಾಣಸಿಗುತ್ತವೆ. ಇಂತಹ ಜನರ ನಾವು ಇದ್ದೇವೆ ಎಂದಾಗ ನಿಜಕ್ಕೂ ಖೇಧಕರವಾಗುತ್ತಿದೆ.
ಅಷ್ಟು ಮಾತ್ರವಲ್ಲ ಇನ್ನು ಹಲವಾರು ವಿಷಯಗಳಿವೆ. ಇಲ್ಲಿ ಕೆಲವು ಮುಖ್ಯ ವಿಷಯಗಳನ್ನು ಮಾತ್ರವೇ ವಿವರಿಸಿದ್ದೇನೆ. ಮೂವತ್ತು ದಿನದ ಉಪವಾಸದ ವೃತ್ತಾಚಾರಣೆಯಲ್ಲಿ ನಾವು ಇದ್ದೇವೆ ಎಂದರೆ ನಮ್ಮಷ್ಟು ಭಾಗ್ಯಶಾಲಿಗಳು ಬೇರಾರು ಇದ್ದಾರೆ ಹೇಳಿ. ಆದರೆ ಆ ಮೂವತ್ತು ದಿನಗಳಲ್ಲಿ ನಮ್ಮದೆಷ್ಡು ಉಪವಾಸವು ಅಲ್ಲಾಹನ ಬಳಿ ಲೆಕ್ಕಕ್ಕೆ ಬರಲಿದೆ ಎನ್ನುವುದರ ಬಗ್ಗೆ ನಾವು ಚಿಂತನೆ ನಡೆಸಬೇಕಾಗಿದೆ. ಪವಿತ್ರವಾದ ಈ ಮಾಸದಲ್ಲಿ ನಾವು ಪರಸ್ಪರ ಕಿತ್ತಾಡುತ್ತಲೂ, ಇತರರನ್ನು ಗೇಲಿ ಮಾಡುತ್ತಲೂ ಇದ್ದವರಾಗಿದ್ದರೆ ನಮ್ಮಷ್ಟು ದುರದೃಷ್ಟಶಾಲಿಗಳು ಬೇರೆ ಯಾರು ಇರಲಾರರು.
ಸರ್ವಶಕ್ತನಾದ ಅಲ್ಲಾಹು ಈ ಪವಿತ್ರವಾದ ಮಾಸದಲ್ಲಿ ನಾವು ಮಾಡಿದ ಸಕಲ ಪಾಪಗಳನ್ನು ಕ್ಷಮಿಸಲಿ. ತಿಳಿದೋ ತಿಳಿಯದೆಯೋ ಸಾಕಷ್ಟು ತಪ್ಪುಗಳನ್ನು ಮಾಡಿರುವುತ್ತೇವೆ. ಮತ್ತೆಂದು ಅಂತಹ ತಪ್ಪುಗಳು ಸಂಭವಿಸಿದಂತೆ ನೋಡಿಕೊಳ್ಳುವುದರ ಸಂಕಲ್ಪದೊಂದಿಗೆ ಈ ಪವಿತ್ರವಾದ ಮಾಸಕ್ಕೆ ವಿದಾಯಕೊರುತ್ತಾ...
ಸಲಾಂ ಸಮ್ಮಿ