ಮಂಗಳವಾರ, ಅಕ್ಟೋಬರ್ 17, 2017

ಕರುಣಾಳು ಬಾ ಬೆಳಕೇ..

ಬಾಲ್ಯದಿಂದ ಇಂದಿನವರೆಗೂ ಬೆಳಕಿಗೊಂದು ಉಪಮೆಯನ್ನು ಹುಡುಕಿ ಸೋತಿದ್ದೇನೆ. ಬೆಳಕಿಗೆ ನಾನು ಕಂಡುಕೊಂಡ ಕನಿಷ್ಠ ಉಪಮೆಯೆಂದರೆ ಅದು ’ಜ್ಞಾನ’ ಮಾತ್ರ. ಯಾವ ರೀತಿ ಬೆಳಕು ಯಾವ ಮೂಲದಿಂದ ಬಂದರೂ ಸ್ವೀಕಾರಾರ್ಹವೋ ಅದೇ ರೀತಿ ಜ್ಞಾನ ಕೂಡಾ. ಈ ಮಾತು ಜ್ಞಾನದ ಹೊರತಾಗಿ, ಸಂಪತ್ತು-ವಾಯು-ಜಲವೂ ಸೇರಿ, ಬೇರಾವುದಕ್ಕೂ ಅನ್ವಯವಾಗದು. ಆದ್ದರಿಂದ ಜ್ಞಾನವನ್ನು ಮಾತ್ರ ಬೆಳಕಿಗೆ ಪರ್ಯಾಯವಾಗಿ ಗುರುತಿಸಲು ಸಾಧ್ಯ.

ಬೆಳಕು ದೇವರಲ್ಲ ಆದರೆ ದೇವರೇ ಬೆಳಕು; ಬೆಳಕು ಜ್ಞಾನವಲ್ಲ ಆದರೆ ಜ್ಞಾನವೇ ಬೆಳಕು; ಬೆಳಕು ಧರ್ಮವಲ್ಲ ಆದರೆ ಧರ್ಮವೆಂಬುವುದೇ ಬೆಳಕು; ಬೆಳಕು ಭಕ್ತಿಯಲ್ಲ ಆದರೆ ಭಕ್ತಿಯೆಂಬುವುದು ಬೆಳಕು; ಬೆಳಕು ಪ್ರೇಮವಲ್ಲ ಆದರೆ ಪ್ರೇಮವೆಂಬುವುದು ಬೆಳಕು; ಬೆಳಕು ಆತ್ಮವಲ್ಲ ಆದರೆ ಆತ್ಮವೆಂಬುವುದು ಬೆಳಕು- ಈ ರೀತಿ ಸ್ವಯಂ ತಾನೇನೂ ಅಲ್ಲವಾದರೂ ಎಲ್ಲವೂ ತಾನೇ ಆಗಿರುವುದು ಬೆಳಕಿನ ಶ್ರೇಷ್ಟತೆ; ನಿರಾಕಾರಿ, ಸರ್ವಾಂತರ್ಯಾಮಿ ಪರಮಾತ್ಮನಂತೆ.

ಬೆಳಕಿಗೆ ಹೊರತಾದ ಜಗತ್ತು ಒಂದು ಗಾಡಾಂಧಕಾರದ ಭಯಾನಕ ಗೂಡು. ಕಣ್ಣಿಲ್ಲದ ಮನುಷ್ಯನಂತೆ. ಬೆಳಕಿಲ್ಲದ ಜಗತ್ತಿನಲ್ಲಿ ಮನುಷ್ಯ ಕಣ್ಣಿದ್ದೂ ಕುರುಡ. ಅಲ್ಲಿ ಬಣ್ಣಗಳಿಲ್ಲ, ಸೌಂದರ್ಯವಿಲ್ಲ, ಕನಸುಗಳಿಲ್ಲ, ವರ್ಣನೆಗಳಿಲ್ಲ- ಇರುವುದು ಕೇವಲ ನಿರ್ಲಿಪ್ತ ಭಾವನೆಗಳು ಮಾತ್ರ. ಎಲ್ಲವನ್ನೂ, ಎಲ್ಲರನ್ನೂ ಬೆಚ್ಚಿ ಬೀಳಿಸುವ ಅಂಧಕಾರ ಬೆಚ್ಚಿ ಬೀಳುವುದು ಬೆಳಕಿಗೆ ಮಾತ್ರ! ಕತ್ತಲೆಯನ್ನು ಒದ್ದೋಡಿಸಲು ಸೂರ್ಯನೇ ಬೇಕೆಂದಿಲ್ಲ; ಮನೆಯ ಮೂಲೆಯಲ್ಲಿರುವ ಒಂದು ಪುಟ್ಟ ಹಣತೆಯೂ ಸಾಕು- ಜ್ಞಾನದ ಬೆಳಕು ಅಜ್ಞಾನದ ಕತ್ತಲೆಯನ್ನು ಒದ್ದೋಡಿಸುವಂತೆ.

ವೇದಗ್ರಂಥ ಕುರುಆನ್ ಬೆಳಕನ್ನು ವರ್ಣಿಸುವುದು ಹೀಗೆ- "ಅಲ್ಲಾಹನು ಭೂಮಿ ಆಕಾಶಗಳ ಬೆಳಕಾಗಿರುವನು. ಅವನ ಬೆಳಕಿನ ಉಪಮೆ ಒಂದು ಗೋಡೆ-ಗೂಡಿ ನಂತಿದೆ. ಅದರಲ್ಲಿ ಒಂದು ದೀಪವಿದೆ. ದೀಪವು ಒಂದು ಗಾಜಿನೊಳಗಿದೆ. ಗಾಜು ಮುತ್ತಿನಂತೆ ಹೊಳೆಯುವ ತಾರೆಯಂತಿದೆ. ಪೂರ್ವದಲ್ಲಾಗಲಿ ಪಶ್ಚಿಮದಲ್ಲಾಗಲಿ ಬೆಳೆಯದ ಅನುಗ್ರಹೀತ ಮರವೊಂದರ ತಿಪ್ಪೆಯ ಎಣ್ಣೆಯಿಂದ ಅದನ್ನು ಬೆಳಗಿಸಲಾಗುತ್ತದೆ. ಅದರ ಎಣ್ಣೆಗೆ ಬೆಂಕಿ ತಾಗದಿದ್ದರೂ ಅದು ತಾನಾಗಿಯೇ ಪ್ರಜ್ವಲಿಸುತ್ತದೆ. ಹೀಗೆ ಬೆಳಕಿನ ಮೇಲೆ ಬೆಳಕು ಬೀರಿ ಅಲ್ಲಾಹನು ತಾನಿಚ್ಚಿಸಿದವರನ್ನು ಬೆಳಕಿನೆಡೆಗೆ ಒಯ್ಯುತ್ತಾನೆ". ತಮಸೋಮ ಜ್ಯೋತಿರ್ಗಮಯ ಎಂದರೂ ಇದುವೇ.

ಬೆಳಕಿನ ಹಬ್ಬ ದೀಪಾವಳಿಯಂದು ದೇಶ ಬಾಂಧವರು ಸಾಂಕೇತಿಕವಾಗಿ ಹಚ್ಚುವ ಪುಟ್ಟ ಹಣತೆಗಳ ಬೆಳಕು ನಮ್ಮ ಸುತ್ತ-ಮುತ್ತ ಮತ್ತು ನಮ್ಮ ಹೃದಯದಲ್ಲಿ ತುಂಬಿರುವ ಕತ್ತಲೆಯನ್ನು ಶಾಶ್ವತವಾಗಿ ನಿರ್ಮೂಲನ ಮಾಡಲಿ ಎಂಬ ಆಶಯದೊಂದಿಗೆ ನನ್ನ ಪ್ರಾರ್ಥನೆ- "ಕರುಣಾಳು ಬಾ ಬೆಳಕೇ ಮಸುಕಿದೀ ಮಬ್ಬಿನಲ್ಲಿ ಕೈ ಹಿಡಿದು ನಡೆಸೆಮ್ಮನು.."  ಆ ಬೆಳಕು ದೇವರೂ ಆಗಿರಬಹುದು, ಧರ್ಮವೂ ಆಗಿರಬಹುದು, ಜ್ಞಾನವೂ ಆಗಿರಬಹುದು, ಪ್ರೇಮವೂ ಆಗಿರಬಹುದು; ಆ ಬೆಳಕು ಮಾತ್ರ ಸದಾ ಬೆಳಗುತ್ತಿರಲಿ.

ಅಬ್ದುಲ್ ರಹೀಮ್ ಟೀಕೆ

Article published in Udayavani Deepavali special issue 2012