ಗುರುವಾರ, ಅಕ್ಟೋಬರ್ 19, 2017

ಬೇಡವೆಂದರೂ ಬಿಡದೀ ಮಾಯೆ..೧

ಬೇಡವೆಂದರೂ ಬಿಡದೀ ಮಾಯೆ.. ೧
––              ––                ––
ಎಲ್ಲರಿಗೂ ನೆನಪಿರಬಹುದಾದ ಅಜ್ಜನಮನೆ.ಆ ಸಮಯವನ್ನು ಕಳೆದುಕೊಂಡವರು ಕೆಲವೇ ಜನರಿರಬಹುದು.ತಾಯಿಗೆ ತವರು ಮನೆಯೇ ಇಲ್ಲದಾದಾಗ.ಇನ್ನೊಂದೆರಡು ಮಜಾ ಕಾರಣಗಳಿವೆ.
ಮಗು ಸಿಕ್ಕಾಪಟ್ಟೆ ಕಿಲಾಡಿ ಆಗಿದ್ದರೆ ಮತ್ತು ವಿಪರೀತ ತಿಂಡಿಪೋತನಾಗಿದ್ದರೆ ಸ್ವತಃ ತಾಯಂದಿರು ಅತೀ ಜರೂರು ಕಾರಣಗಳಿಗಷ್ಟೇ ತಂದೆ ಮನೆಗೆ ಹೋಗಿ ತಮ್ಮ  ಜೊತೆಗೆ ಮಕ್ಕಳನ್ನು ವಾಪಸ್ ಕರೆದುಕೊಂಡು ಬರಬಹುದು. ಗಂಡು ಮಕ್ಕಳಿಗೆ ಅಜ್ಜ ಹೀರೊ ಆದರೆ, ಹುಡುಗಿಯರಿಗೆ ಅಜ್ಜಿ ಮಾರ್ಗದರ್ಶಕಿ.ಕ್ರಮೇಣ ಆ ಪಟ್ಟ ಮಾವ-ಅತ್ತೆಗೆ ಶಿಫ್ಟ್. ಬಾಲ್ಯದಲ್ಲಿ ಒಬ್ಬ ಮಾವ ಸೂಪರ್ ಮ್ಯಾನ್ ಅನಿಸಿದರೆ,ಪ್ರೌಢಾವಸ್ಥೆಯಲ್ಲಿ ಇನ್ನೊಬ್ಬ ಮಾವ.ಇಂತಿಪ್ಪ ಅಜ್ಜನ ಮನೆಯಿಂದ ನಾವು ಶಿಫ್ಟ್ ಆಗುವುದು ಗೆಳೆಯರ ಮನೆಗೆ. ಎಷ್ಟೋ ಬಾರಿ ಸಂಬಂಧಿಸಿಯೇ ಇಲ್ಲದ ಅವನ ನೆಂಟರ ಮನೆಗೆ ಕೂಡ ದಾಳಿ ಇಟ್ಟಿರುತ್ತೇವೆ.
ಅಲ್ಲಿಂದ ಜೀವನದ ಬಂಡಿ ಮುಂದೆ ಹೋಗುವುದು ಅರ್ಧಾಂಗಿ ಅರ್ಧ ಜೀವನ ಕಳೆದ ಅವಳಪ್ಪನ ಮನೆ ಕಡೆಗೆ. ಮೊದಮೊದಲು ಬಹಳ ಬಾರಿ ಹೋಗಬೇಕಾದ ಸಂದರ್ಭಗಳು ಹೆಚ್ಚು ಬರುತ್ತವೆ.ಹಾಗಾಗಿ ನಮ್ಮ ಸರ್ಚ್ ಎಂಜಿನ್ ಕೆಲಸಮಾಡಿ ಆ ಊರಿನ ಆಸುಪಾಸಿನ ಸಮಾನ ಮನಸ್ಕರನ್ನು ಒಟ್ಟು ಮಾಡಿರುತ್ತದೆ.ಇದು ಮಾವನ ಮನೆಯಲ್ಲಿ ಹೆಂಡತಿ ಸಾಧಿಸಿಯೇ ಇರುವ ಹಿಡಿತಕ್ಕೆ 'ಕೌಂಟರ್ ಅಟ್ಯಾಕ್' ಆಗಿಯೂ ಇರಬಹುದು.
ನಾವು ಪುಣ್ಯವಂತರು ಇಂತಹ ಹಂತಗಳನ್ನು ಅನುಭವಿಸಿ, ದಾಟಿ ಸಾಮಾಜಿಕ ಜಾಲತಾಣಗಳಿಗೆ ತಲುಪಿದ್ದೇವೆ.ಇದೇ ಮಾತುಗಳು ಬರುವ ತಲೆಮಾರಿಗೆ ಅನ್ವಯಿಸುವ ಸಾಧ್ಯತೆ ತೀರಾ ಕಡಿಮೆ...!
                                *
(ಮುಂದುವರಿಯುವುದು)
ಡಾ.ಅಜಿತ್ ಹರೀಶಿ