ಬೇಡವೆಂದರೂ ಬಿಡದೀ ಮಾಯೆ..2.
----- ----- -----
ಬಾಲ್ಯದಲ್ಲಿ ಎಲ್ಲರಿಗೂ ಗೆಳೆಯರಿದ್ದರು.ಕುತೂಹಲದ ವಿಷಯವೆಂದರೆ ಗೆಳತಿಯರು ಇರುತ್ತಲೇ ಇರಲಿಲ್ಲ. ಹಾಗೊಂದು ವೇಳೆ ಇದ್ದರೆ ಅದನ್ನು ಭಯಂಕರ ಅಪರಾಧವಾಗಿ ಪರಿಗಣಿಸಲಾಗುತ್ತಿತ್ತು.ಬೀಡಿ ಸೇದಿದ್ದು,ಬೀಡಾ ಹಾಕಿದ್ದಕ್ಕೆ ,ಶಿಕ್ಷೆಯನ್ನು ಪಾಲಕರು 48 ಗಂಟೆಗಳಲ್ಲಿ ಅನ್ ಲಾಕ್ ಮಾಡಿಬಿಡುತ್ತಿದ್ದರು. ಈ ಭಿನ್ನ ಲಿಂಗಿಗಳ ನಿಷ್ಕಲ್ಮಶ ಗೆಳೆತನಕ್ಕೆ ಆ ಭಾಗ್ಯ ಕರುಣಿಸುವ ಕಾಲ ಅದಾಗಿರಲಿಲ್ಲ.ಆದರೂ ಅಲ್ಲಲ್ಲಿ 'ರಾಮಾಚಾರಿ-ಮಾರ್ಗರೇಟ್' ಗಳು ವ್ಯವಸ್ಥೆಯ ವಿರುದ್ಧ ಬಂಡೆಳುತ್ತಿದ್ದರು.ಆದರೆ ಆಗ ಯುವ ಜನತೆ ವ್ಯವಸ್ಥೆಗೇ ಹೆಚ್ಚಾಗಿ ನಿಷ್ಠೆ ತೋರಿಸಿದ್ದು ಕಂಡುಬರುತ್ತದೆ.ತಮಗಿಲ್ಲದ ಹೊಟ್ಟೆ ಕಿಚ್ಚಿಗೋ ,ಸಾಂಪ್ರದಾಯಿಕ ಮನಸ್ಥಿತಿಗೋ
ಗೊತ್ತಿಲ್ಲ. ಜೊತೆಗೆ 'ಹಿತ್ತಲ ಕಡೆ ' ಯಿಂದ ಹೊರಡುತ್ತಿದ್ದ ರೇಡಿಯೋ ಚಾನಲ್ ಗಳು ಭಾರಿ ಪ್ರಭಾವ ಬೀರುತ್ತಿದ್ದ ದಿನಗಳವು.ಅಜ್ಜಿ, ಅಮ್ಮ, ಅಕ್ಕ, ಅಬ್ಬಾ ಆ ಚಕ್ರವ್ಯೂಹ ನೆನದೇ ಪುಂಗಿ ಬಂದಾಗ್ತಿತ್ತು. ಅದಾಯ್ತಲ್ಲ...ಈ ಗಂಡಾಗುಂಡಿ ದೋಸ್ತರ ವಿಚಾರಕ್ಕೆ ಬರೋಣ.
ನೂರೆಂಟು ಗೆಳೆಯರು ಇದ್ದ ದಿನಗಳವು.ಪುಸ್ತಕದ ಬದನೆಕಾಯಿ ಆಚರಣೆಗೆ ತರದ,ಬರದ ಏರುಪ್ರಾಯ.
ಕೋಳಿ, ಕಾಗೆ, ಗುಬ್ಬಿ, ನರಿ ಎಂಬಿತ್ಯಾದಿ ಅಡ್ಡ ಹೆಸರುಗಳ ಸ್ನೇಹಿತರು. ಆ ಹೆಸರುಗಳು ಬರಲೂ ಮೊಘಲರ ಇತಿಹಾಸದಂತೆ ಇವಕ್ಕೂ ಹಿನ್ನಲೆಯೂ ಇರುತ್ತಿತ್ತು. ನಾವೇನೂ ಮುಂದೆ ಕಡಿದು ಕಟ್ಟೆಹಾಕುವ
ಸಾಧ್ಯತೆ ಇಲ್ಲ ಅನ್ನುವ ಕಾರಣಕ್ಕಾಗಿ ಏನನ್ನೂ ದಾಖಲೆ ಮಾಡಲಿಲ್ಲವಾಗಿ ನಾವ್ಯಾಕೆ ಪ್ರಾಣಿ ಪಕ್ಷಿಗಳ ನಾಮಾಂಕಿತರಾದೆವೆನ್ನುವುದು ಪಕ್ಕಾ ನೆನಪಿಲ್ಲ...!
*
ಮುಂದುವರೆಯುವುದು..
ಡಾ.ಅಜಿತ್ ಹರೀಶಿ