ಬೇಡವೆಂದರೂ ಬಿಡದೀ ಮಾಯೆ..3
----- ----- -----
ಹೆಸರುಗಳ ಮೇಲೆ ನೆಡೆಯುವ ಅತ್ಯಾಚಾರ ಮತ್ತೊಂದು ತೆರನಾದದ್ದು.ಆಗೆಲ್ಲ ಉದ್ದುದ್ದ ಹೆಸರುಗಳು ಕಾಮನ್.ನರಹರಿ-ನರ್ಯ,ಮುರಹರಿ-ಮುರ್ಯ ,ಹರಿಶ್ಚಂದ್ರ-ಹರ್ಯ,ಮಹಾಬಲಗಿರಿ-ಮಾಬ್ಲ್ಯ.. ಹೀಗೆಲ್ಲ ವಿರೂಪಗೊಳ್ಳುತ್ತಿತ್ತು.ಕಡೆಗೆ ಅವರ ಕೆಳಗಿನ ತಲೆಮಾರು ಕರೆಯುತ್ತಿದ್ದ ರೀತಿ ಮತ್ತೂ ವಿಚಿತ್ರ.ಏ ಹರಿಯಪ್ಪಣ್ಣ ಅನ್ನುವರು.ತನ್ನ ನಾಲ್ಕಕ್ಷರದ ಹೆಸರನ್ನು ಎರಡಕ್ಕೆ ಇಳಿಸಿ,ಮತ್ತೆ ಐದಕ್ಕೇರಿಸಿದ್ದಕ್ಕೆ ಒಳಗೊಳಗೆ ಸಿಟ್ಟು ಬರುತ್ತಿತ್ತು ಎನ್ನುವುದಕ್ಕೆ ಸಾಕ್ಷಿ ಅವನು ಅವನ ಮಗನ ಹೆಸರನ್ನು ಮೂರಕ್ಷರಕ್ಕೆ ಇಳಿಸಿದ್ದು.ಪ್ರಯೋಗಗಳು ಸಕತ್ತಾಗಿ ನಡೆದು ಎರಡಕ್ಷರ,ಒತ್ತಕ್ಷರವಿಲ್ಲದ್ದು.ಎಲ್ಲಾ ಆಯಿತು.ಈ ಹೆಸರಿನ ಹತ್ಯೆಯ ಭರಾಟೆಯಲ್ಲಿ ಆಕ್ರೋಶಗೊಂಡಿದ್ದು ಅವರ ಹೆಂಡಂದಿರು ಎಂಬ ಮಾತೂ ಇದೆಯಾದರೂ ಆ ವಿಷಯ ’ಟಚ್’ ಮಾಡುವುದು ಬೇಡ.
ಹಿರಿಯರನ್ನು ಅನುಸರಿಸುವ ಪರಿಪಾಠ ಎಲ್ಲರಿಗೂ ಇದೆ.ಆದರೆ ಕೆಟ್ಟದ್ದು ಮತ್ತು ರಹಸ್ಯದ ಬಗ್ಗೆ ಆಸಕ್ತಿ ಸಹಜ ಮತ್ತು ಅನುಕರಣೆ ಬೇಗ.ಹೀಗಿರುವಾಗ ಮೊದಲಿಗೆ ಕಣ್ಣಿಗೆ ಬೀಳುವುದು ಪೋಲಿ ಸಾಹಿತ್ಯ.ಮೊದಲಿಗೆ ಅಕ್ಷರಗಳ ರೂಪದಲ್ಲಿದ್ದುದು ನಂತರ ಕಪ್ಪು ಬಿಳುಪಿನ ಚಿತ್ರಕ್ಕೂ ನಂತರ ವರ್ಣದೊಂದಿಗೂ ಬಂತು.ಆಮೇಲೆ ವಿ.ಸಿ.ಪಿ, ವಿ.ಸಿ.ಆರ್..ಕ್ಯಾಸೆಟ್ ಗಳು. ಈಗಿನದಂತು ಎಲ್ಲರಿಗೂ ಗೊತ್ತಿದೆ..ತೀರಾ ಆನ್ ಲೈನ್ ಅನ್ನುತ್ತಾ ಸೂಕ್ಷ್ಮವಾಗಿ ವಿಷಯ ಮುಗಿಸೋಣ.
ನಮಗೆಲ್ಲ ನಮ್ಮ ಕ್ಲಾಸಿನ ಹೆಣ್ಣುಮಕ್ಕಳ ಮೇಲೆ ವಿನಾಕಾರಣ ಸಿಟ್ಟಿತ್ತು.ಅವರು ಹೋಮ್ ವರ್ಕ್ ಸರಿಯಾಗಿ ಮಾಡುತ್ತಿದ್ದರು.ಸರಿಯಾಗಿ ಓದಿ ಹೆಚ್ಚು ಅಂಕಗಳಿಸುತ್ತಿದ್ದರು.ಮಾಸ್ತರರು ’ಪಾರ್ಷಿಯಾಲಿಟಿ ’ ಮಾಡುತ್ತಾರೆಂಬುದು ನಮ್ಮ ಸರ್ವೆಸಾಧಾರಣ ಆರೋಪಗಳಾಗಿದ್ದವು.
*
ಮುಂದುವರಿಯುವುದು..
ಡಾ.ಅಜಿತ್ ಹರೀಶಿ