ಗುರುವಾರ, ಅಕ್ಟೋಬರ್ 19, 2017

ಬೇಡವೆಂದರೂ ಬಿಡದೀ ಮಾಯೆ..4

ಬೇಡವೆಂದರೂ ಬಿಡದೀ ಮಾಯೆ..4
~~~           ~~~          ~~~
ಜ್ಞಾನದ ವ್ಯಾಪ್ತಿಯು ಸಣ್ಣದು.ಜಗತ್ತಿನ ವಿಸ್ತಾರ ಮಾತ್ರ ದೊಡ್ಡದು ಅಂತ ತಿಳಿದಿದ್ದ ದಿನಗಳು ಅವು.ಬಾಲ್ಯದಲ್ಲಿ ಬೈರಪ್ಪನವರ'ನಿರಾಕರಣ' ಓದಿ ಹಿಮಾಲಯಕ್ಕೆ ದೇವರ ಕಾಣಲು ಹೋಗಬೇಕೆಂದುಕೊಂಡವರು ಬಹಳ.
  ಕನ್ನಡದಲ್ಲಿ ರಾಜಕುಮಾರ್, ವಿಷ್ಣುವರ್ಧನ್, ಲೀಲಾವತಿ, ಭಾರತಿ,ಹಿಂದಿಯಲ್ಲಿ ಅಮಿತಾಬ್ ಬಚ್ಚನ್, ಶ್ರೀದೇವಿ, ರೇಖಾ ನಮ್ಮ ಆರಾಧ್ಯ ದೈವ ಆಗಿದ್ದರು. ದೂರದರ್ಶನ ನಮ್ಮ ಏಕಮಾತ್ರ ಟಿವಿ ಚಾನೆಲ್ ಆಗಿತ್ತು. ಬುಶ್ ಮತ್ತು ಓನಿಡಾ ಟಿವಿಗಳ ಹೆಸರು ಮಾತ್ರ ಗೊತ್ತಿತ್ತು.
   ಊದಿನಕಡ್ಡಿ ಕಡ್ಡಿ ಬೆಳಗಿದ ಮೇಲೆಯೇ ಅಜ್ಜಿ ,ಟಿವಿ ಹಚ್ಚಿ ರಾಮಾಯಣ ,ಆಮೇಲೆ ಮಹಾಭಾರತಗಳನ್ನು ನೋಡಲು ಬಿಟ್ಟದ್ದು.ಆದರೂ ಕೈಕೊಡುತ್ತಿದ್ದ ವಿದ್ಯುತ್ ಕಥೆ ಬೇರೆ ಇದೆ.
ಈಗ ನಡೆಯುವ ಗಾಳಿಪಟದ ಸ್ಪರ್ಧೆಯಂತೆ ಆಗ ಟಿವಿ ಆಂಟೆನಾ ಕಟ್ಟುವ ಕೆಲಸ. ಚಂದ್ರಗುತ್ತಿ ಗುಡ್ಡದ ಎತ್ತರಕ್ಕೆ ಕಬ್ಬಿಣದ ಪೈಪ್ ಜೋಡಿಸಿ,ಅದು ಆಚೀಚೆ ಆಗದಂತೆ ನೋಡಿಕೊಳ್ಳಲು ಚತುರ್ದಿಕ್ಕುಗಳಿಗೂ ತಂತಿಯನ್ನು (ಗಯ್) ಬಿಗಿದು ತೆಂಗಿನ-ಮಾವಿನ ಮರಕ್ಕೋ ತಂದು ಸುತ್ತುವುದು.ಇವತ್ತಿಗೂ ಆ ಆಂಟೆನಾದ ಓಲಾಟದಿಂದ ಕೊರೆದು ಗಾಯವಾದ ಮರಗಳು ಜೀವಂತವಾಗಿವೆ.
         ನಂತರ ಒಂದು ಅಂಕಣದಷ್ಟು ಅಗಲದ ಡಿಶ್ ಬುಟ್ಟಿ/ಕೊಡೆಗಳು ಬಂದು ಸಂಸಾರ ಸಸಾರವಾಯ್ತು ಅಂದುಕೊಳ್ಳುವಷ್ಟರಲ್ಲಿ ಚಾನಲ್ ಗಳು ಜಾಸ್ತಿ ಆದವು.
ಶುಕ್ರವಾರ 'ಮಿಡ್ ನೈಟ್' ಬರುತ್ತಿದ್ದ ಸಿನಿಮಾ ಮತ್ತು ಭಾನುವಾರದ ಭಾರತದ ಜೊತೆಗೆ ಶಾರುಖ್ ಖಾನ್ ನ 'ಸರ್ಕಸ್' ಬದುಕನ್ನು ಸ್ವರ್ಗದ ಮೂರು ಗೇಣಿನ ಸಮೀಪ ಒಯ್ದಿತ್ತು.ಏಷ್ಟೋ ಭಾನುವಾರಗಳಿಗೊಮ್ಮೆ ಮಧ್ಯಾಹ್ನ 1.30 ಕ್ಕೆ ಪ್ರಸಾರವಾಗುತ್ತಿದ್ದ ಕನ್ನಡ ಸಿನೆಮಾಗಳನ್ನು ಕಾದು ನೋಡುವ ಮಜವೇ ಬೇರೆಯಾಗಿತ್ತು.
  ಇವೆಲ್ಲಾ ನಮ್ಮ ಬಾಲ್ಯಕ್ಕೆ ಲಿಂಕ್ ಆಗಿದ್ದು ಬೇರೆಯೇ ಥರದಲ್ಲಿ.ಮರಹತ್ತುವ ಹುಡುಗ, ಟಿವಿ ಮಾಲಿಕರ ಮನೆಯ ಹುಡುಗಿಗೆ ಒಂದಿಂಚು ಎತ್ತರದ ಪೀಠ ಸಿಗುತ್ತಿತ್ತು. ಓರಗೆಯ ಉಳಿದವರು ಚೂರು ಹೆಚ್ಚೇ ಓಲೈಸುತ್ತಿದ್ದರು.
**ವರ್ತಮಾನ-ಪ್ರಭುತ್ವದ ವಿರುದ್ಧ ವಾಗ್ದಾಳಿ ನಡೆಸಿದಾಗ ಸ್ಟೇಟಸ್ ನಲ್ಲಿ, ಇನ್ಬಾಕ್ಸಿನಲ್ಲಿ ತಿವಿದು-ತಿವಿಸಿಕೊಂಡಾಗಿನ ಥ್ರಿಲ್ ಇದ್ದೇ ಇರುತ್ತದೆ. ಅಲ್ಲೂ ಪಕ್ಕದ ಮನೆಯವರಿಂದ ಹಿಡಿದು ದೂರದ (!)ಅಮೆರಿಕೆಯವರೆಗೆ ಪ್ರತಿಕ್ರಿಯಿಸುತ್ತಿದ್ದರು.
      ಈಗ ಊರವರು, ಆಪ್ತರು,ನೆಂಟರು,ಒಮ್ಮೆಯೂ ಖುದ್ದು ಭೇಟಿಯಾಗಿರದ ಎಫ್. ಬಿ ಸ್ನೇಹ ಬಳಗ,ಗ್ರೂಪುಗಳು...ಅಲ್ಲದೆ ಯು.ಕೆ,ಯು.ಎಸ್,ಆಸ್ಟ್ರೇಲಿಯಾ, ಯುರೋಪ್ ಗಳಿಂದ ಬರುತ್ತಿರುವ ಲೈಕ್, ಕಮೆಂಟ್,ಇನ್ ಬಾಕ್ಸ್ ನಲ್ಲಿ ಪ್ರೋತ್ಸಾಹ ನೀಡುವ ಎಲ್ಲರಿಗೂ ಆಭಾರಿಯಾಗಿದ್ದೇನೆ.
   ಹ್ಮಾಂ...ನಿಮಗೂ ..ಆಚೀಚೆ ನೋಡಬೇಡಿ..ನೀವೇ...!
ಸೈಲೆಂಟ್ ರೀಡರ್ಸ್...ಎದೆ ತುಂಬಿ ಬಂದಿಹುದು.ಹಾಡು ನಿಲ್ಲದು.
                                         *
ಮುಂದುವರಿಯುವುದು...
ಡಾ.ಅಜಿತ್ ಹರೀಶಿ