ಬೇಡವೆಂದರೂ ಬಿಡದೀ ಮಾಯೆ..5
~~~ ~~~ ~~~
ಯಾರ ಬಾಲ್ಯವೂ ಕಷ್ಟದ್ದಲ್ಲ,ಕೆಟ್ಟದ್ದಲ್ಲ,ಕಠೋರವಂತೂ
ಅಲ್ಲವೇ ಅಲ್ಲ. ಹೀಗಂತ ಹೇಳಲೇಬೇಕಾದ್ದಕ್ಕೆ ಕಾರಣವಿದೆ.ಇತ್ತೀಚೆಗೆ ಹೀಗೊಂದು ಟ್ರೆಂಡ್ ಆಗಿದ್ದನ್ನು ಗಮನಿಸಿರಬಹುದು. ನೀವು ನಿಮ್ಮ ಮನೋವ್ಯಾಪಾರಕ್ಕೆ ಸಂಬಂಧಿಸಿದಂತೆ ಪರಿಹಾರ ಕಂಡುಕೊಳ್ಳಲು ಅರ್ಹರ ಬಳಿ ತೆರಳಿದರೆ ಬರುವ ಸಿದ್ಧ ಉತ್ತರ, 'ನಿಮ್ಮ ಬಾಲ್ಯದ ಕಹಿ ಘಟನೆಗಳು ,ಈ ಎಲ್ಲಾ ಸ್ಥಿತಿಗೆ ಕಾರಣ ಎಂದು'.ಸರಿ,ಇದರಲ್ಲಿ ತಪ್ಪೇನು ಇಲ್ಲ. ಆದರೆ ಇಷ್ಟು ಉತ್ತರಕ್ಕಾಗಿ ನಿಮ್ಮ ಬಳಿಯೇ ಬರಬೇಕಾ..?.ಕವಡೆ ಶಾಸ್ತ್ರದವರು,ಜಾತಕ ಇತ್ಯಾದಿ ಧಾರ್ಮಿಕ ನಂಬಿಕೆಯವರು ಇದನ್ನೇ ಹೇಳುವರು.ಅವರು ಇನ್ನೂ ಮುಂದುವರಿದು ,ಪೂರ್ವ ಜನ್ಮದ ಕಾರಣಗಳನ್ನೂ ಹೇಳಬಹುದು ಅಷ್ಟೇ.ಬಹಳ ವ್ಯತ್ಯಾಸವೇನೂ ಕಾಣದು..!
ಬಾಲ್ಯ ಒಂದಿಷ್ಟು ಪ್ರಭಾವ ಬೀರುತ್ತದೆ ನಿಜ.ಅದಕ್ಕಿಂತ ಹೆಚ್ಚು ಪ್ರಚಲಿತ ಮತ್ತು ಸ್ವಯಂಕೃತ ಕಾರಣಗಳು ನಮ್ಮ ಏಳು-ಬೀಳಿಗೆ ಕಾರಣ.ಗೆದ್ದಾಗ ಎಷ್ಟು ಕಷ್ಟ ಪಟ್ಟಿದ್ದೆ ಗೊತ್ತಾ..ಎಷ್ಟು ವರ್ಷದ ಶ್ರಮ ಈಗ ಸಾರ್ಥಕವಾಯಿತು ಅನ್ನುವ ನಾವು, ಇದೇ ಮಾತನ್ನು ಬಿದ್ದಾಗ ಏಕೆ ಬಳಸುವುದಿಲ್ಲ..? ಏಕೆಂದರೆ ನಾವು ಸೋಲಿಗೆ 'ಸಹಾರಾ'ಮತ್ತು ಅನುಕಂಪ ಬಯಸುತ್ತೇವೆ.ಇವೂ ದುಶ್ಚಟಗಳೇ..!
ನಾನು ಹೇಳಲು ಹೊರಟಿರುವುದು ಇಷ್ಟು..ಬಾಲ್ಯ ಸುಂದರ,ಅದರ ನೆನಪು ಸುಮಧುರ. ಪಾಶ್ಚಾತ್ಯ ಪ್ರಣೀತ ಮನಶಾಸ್ತ್ರ ವೈವಿಧ್ಯಮಯ ಭಾರತದ ಬಾಲ್ಯಕ್ಕೆ ಖಂಡಿತಾ 'ಲಾಗೂ' ಆಗುವುದಿಲ್ಲ ಎಂಬ ಅಭಿಪ್ರಾಯ ನನ್ನದು.
ಇನ್ನು ಹೆಣ್ಣು ಮಕ್ಕಳ ಬಾಲ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ; ವಿವಾಹೋತ್ತರ ಲೈಂಗಿಕ ಸಂಬಂಧಿ
ಸಮಸ್ಯೆಗಳು...ಅದಕ್ಕೂ ಅದೇ ತೆರನಾದ ಉತ್ತರ. ಬಾಲ್ಯದ ಕಹಿ ಘಟನೆಗಳು ಅಥವಾ ದೌರ್ಜನ್ಯದ ಕಾರಣ..!
ಹಾಗೊಂದು ವೇಳೆ ಹಾಗೆ ಆಗಿದೆ ಎಂದಿಟ್ಟುಕೊಳ್ಳಿ ,ಆ ತರಹ ವರ್ತಿಸಿದವನಿಗೆ ಚಿಕಿತ್ಸೆ ಬೇಕೇ ವಿನಃ ಹೆಣ್ಣು ಮಕ್ಕಳಿಗಲ್ಲ. ಇಲ್ಲಿ ನಾವು ಹೆಣ್ಣನ್ನು ಭಾರತೀಯ ಸಿದ್ಧ ಮನಸ್ಥಿತಿಯಿಂದ ಹೊರತರುವ ,ಧೈರ್ಯ ತುಂಬುವ ಕೆಲಸ ಮಾಡುವುದು ಒಳ್ಳೆಯದು.
ಬಟ್ಟೆಗೆ ಕೆಸರು ತಾಗಿದಾಗ ಬದಲಾಯಿಸಿ, ತೊಳೆದು ಕೊಳ್ಳುವುದೇ ಮಾರ್ಗ.ದೇಹದ ವಿಷಯದಲ್ಲಿ ಇದೇ ಮನಸ್ಥಿತಿಯನ್ನು ಆರೋಪಿಸಿಕೊಳ್ಳುವುದು ಸಮಂಜಸ ಮಾರ್ಗ.
ಏನಪ್ಪ ಇವನು ಬಾಲ್ಯದ ಬಾಲ ಕಳಚಲೊಲ್ಲ ಎಂಬ ಪ್ರಶ್ನೆ ನಿಮಗೆ ಹುಟ್ಟಿದರೆ ,ಅದು ನಿಮ್ಮ ತಪ್ಪಲ್ಲ. ವರದ ಸಾಧ್ಯತೆ ಏನಾದರೂ ಇದ್ದರೆ ನನಗೇ ಮತ್ತೇನೂ ಬೇಡ. ಮರಳುವೇ ಬಾಲವನಕ್ಕೆ...!
*
##ವರ್ತಮಾನ- ಫೇಸ್ಬುಕ್ ಗೆ ಸಂಬಂಧಿಸಿದಂತೆ ಹುಡುಗರು / ಗಂಡಸರಿಗೆ ಮನವಿ- ಚಾಟಿಂಗ್ ಗೆ ಸಂಬಂಧಿಸಿದಂತೆ ಕೆಂಪು ಗೆರೆ ಮುಟ್ಟದಿರಿ.ಹೆಣ್ಣು ಮಕ್ಕಳಿಗೆ- 'ಚಾಕಲೇಟ್'ತೋರಿಸದಿರಿ.ಅಪಾಯ ನಿಮಗೇ...!
*
ಮುಂದುವರಿಯುವುದು....
-ಡಾ.ಅಜಿತ್ ಹರೀಶಿ