ಗುರುವಾರ, ಅಕ್ಟೋಬರ್ 19, 2017

ಬೇಡವೆಂದರೂ ಬಿಡದೀ ಮಾಯೆ..6

ಬೇಡವೆಂದರೂ ಬಿಡದೀ ಮಾಯೆ..6
~~~ ~~~ ~~~
ಸುಮಾರು ಹದಿನೆಂಟು ವರ್ಷಗಳ ಹಿಂದೆ 'ಹಿಪ್ನೋಸಿಸ್' ಕಲಿತಿದ್ದೇನೆ. ಆದರೆ ಅದು ಚಿಕಿತ್ಸೆಗಿಂತ ಮನೋರಂಜನೆಗೆ ಹೆಚ್ಚು ಬಳಕೆಯಾಗಿ ಕ್ರಮೇಣ ಬಿಟ್ಟು ಬಿಟ್ಟಿದ್ದೆ.ನಿನ್ನೆ ಯಾಕೋ ಸೆಲ್ಫ್ ಹಿಪ್ನೋಸಿಸ್ ಗೆ ಒಳಗಾಗಿ ಜೀವನದ ಹಿಮ್ಮುಖ ಪಯಣ ಮಾಡಿದೆ.ಈ ಜರ್ನಿಯ ಅಂತಿಮ ನಿಲುಗಡೆ ನನಗೆ 4 ವರ್ಷ ಇದ್ದಾಗಿನ ಕಾಲ.
   ನಮ್ಮೂರಿನ ದೇವಸ್ಥಾನದ ಎದುರಿಗೆ ಒಂದು ಕಟ್ಟಡ ಇತ್ತು. ಅಲ್ಲಿ ಬಾಲವಾಡಿ ಇತ್ತು. ಒಳ್ಳೆಯ ಮಹೂರ್ತ ಸಿಗದ್ದಕ್ಕೋ ಏನೋ ನನ್ನ 'ಚೌಳ' ಅಂದರೆ ಕೂದಲು ತೆಗೆಯುವ ಕಾರ್ಯಕ್ರಮ ಆಗಿರಲಿಲ್ಲ. ಅದು ಮರ್ಕಟ ಮನಸ್ಸಿನ ವಯಸ್ಸು. ಗೆಳೆಯನೊಂದಿಗೆ ಗುದ್ದಾಟವಾಗಿ
ಆತ ನನ್ನ ತಲೆಗೂದಲು ಹಿಡಿದು ಎಳೆದಿದ್ದಾನೆ.ಹುಲುಸಾಗಿ ಬೆಳೆದಿದ್ದ ಅದು ಸುಲಭವಾಗಿ ಗ್ರಿಪ್ ಗೆ ಸಿಕ್ಕಿದೆ. ನಾನು ಸೋತಿದ್ದೆ.ನಂತರ ಹಠಮಾಡಿ ಚೌಳ ಮಾಡಿಸಿಕೊಂಡೇ 'ಅಖಾಡಕ್ಕೆ'ಇಳಿದು ಚಿತ್ ಮಾಡಿ ಮನೆ ಸೇರಿದ್ದು ನೆನಪಿದೆ.
  ಸುಮಾರು ಮೂವತ್ತು ವರ್ಷಗಳಿಗೂ ಹಿಂದೆಯೇ ನಮ್ಮೂರಿಗೆ ಕೃಷ್ಣಾ ಮೋಟಾರ್ಸ್ ಬಂದು ಹಾಲ್ಟ್ ಆಗುತ್ತಿತ್ತು.ನನ್ನ ಹತ್ತನೆಯ ವಯಸ್ಸಿನಲ್ಲಿ ಅಪ್ಪನ ಜೊತೆಗೆ ಶಿವಮೊಗ್ಗಕ್ಕೆ ಹೋಗಿ ಟಿವಿ ತಂದ ನೆನಪು.
ಆಗ ,ಬಸ್ಸಿನ ಕಡೆಯ ಮೆಟ್ಟಿಲಲ್ಲಿ ನಿಂತು 'ರೈಯ್ಯಾ..ರೈಯ್ಯಾ..ಹೋಲ್ಡೇನ್ 'ಅನ್ನುತ್ತಿದ್ದ 'ಕ್ಲೀನರ್ '
ಆಗುವ ಕನಸಿತ್ತು.ಮುಂದೆ ಅವನಿಗಿಂತ ಪ್ರಬಲನಾದ ಡ್ರೈವರ್ ಆಗಬೇಕಂದು..ಮನೆಯ ತುಂಬಾ 'ಬುರ್' ಎಂದು ಶಬ್ದ ಮಾಡುತ್ತಾ ,ಕೈಯಲ್ಲಿ ಡ್ರೈವಿಂಗ್ ಮಾಡುತ್ತಾ ಓಡುತ್ತಿದ್ದೆವು.ಆಮೇಲೆ ವಿದ್ಯಾರ್ಹತೆ ಬೇಡುವ ಕಂಡಕ್ಟರ್ ಕನಸು.ನಂತರ ಮೆಕ್ಯಾನಿಕ್.ಕ್ರಮೇಣ ಇಂಜನೀಯರ್,ನಟ,ಉದ್ಯಮಿ ಹೀಗೆ ಹಲವು ರೂಪಾಂತರಗಳು.
ದೊಡ್ಡವನಾದ ಮೇಲೆ ವೈದ್ಯಕೀಯದ ಕನಸು ಕಂಡಿದ್ದು ಮತ್ತು ಆಗಿದ್ದು. ಮಜಾ ಎಂದರೆ ಗಂಡ,ಅಪ್ಪನಾಗುವ ಕನಸು ಕಾಣದಿದ್ದುದು.
ಆದರೆ ಹೆಣ್ಣುಮಕ್ಕಳ ಕನಸು ಪ್ರಾರಂಭ ಆಗುತ್ತಿದ್ದುದೇ ಗೊಂಬೆಯೊಂದಿಗೆ.ಆ ಡಾಲ್ ಗೆ ಅಕ್ಕ, ತಾಯಿ ಎಲ್ಲವೂ.
ಅವರ ಕನಸುಗಳೂ,ಒಳ್ಳೆಯ ಹೆಂಡತಿ, ಅಮ್ಮ ಹೆಚ್ಚೆಂದರೆ ಟೀಚರ್. ಅಪರೂಪಕ್ಕೆ ಹೆಚ್ಚು ಓದಬೇಕು.ನರ್ಸ್,ಡಾಕ್ಟರ್, ಐ.ಎ.ಎಸ್ ಇತ್ಯಾದಿ.
  ಕನಸು ಕಾಣಲಿಕ್ಕೆ ಕಾಸು ಕೊಡಬೇಕಿಲ್ಲ..ಖುಷಿ ಪಡಿ.ನನಸಾಗಲಿಲ್ಲ ಎಂದು ಖಂಡಿತಾ ವೇದನೆ ಪಡಬೇಡಿ. ವರ್ತಮಾನಕ್ಕಿಂತ ಶ್ರೇಷ್ಠ ಮತ್ತೊಂದಿಲ್ಲ...!
                                               *
##ವರ್ತಮಾನ- ಇವತ್ತು 'ಅಂತರ್ರಾಷ್ಟ್ರೀಯ ಗರ್ಲ್ಸ್ ಡೇ' ಅಂತೆ.Todays Girls are tomorrow's leaders.ಅನುಮಾನವೇ ಬೇಡ.
                                                *
ಮುಂದುವರಿಯುವುದು....
-ಡಾ.ಅಜಿತ್ ಹರೀಶಿ