ಗುರುವಾರ, ಅಕ್ಟೋಬರ್ 19, 2017

ಬೇಡವೆಂದರೂ ಬಿಡದೀ ಮಾಯೆ..7

ಬೇಡವೆಂದರೂ ಬಿಡದೀ ಮಾಯೆ..7
~~~         ~~~         ~~~
    ಅಪ್ಪ-ಅಮ್ಮ  ಏಕಾಂತದಲ್ಲಿ ಇದ್ದರೆ ,ಪರಸ್ಪರ ಮಾತನಾಡಿಕೊಂಡರೆ ಸಾಕು, ನಾವು ಸಿಡಿಮಿಡಿಗೊಳ್ಳುತ್ತಿದ್ದೆವು.ಇಲ್ಲವೇ ಮಧ್ಯೆ ಹೋಗಿ ಕುಳಿತುಕೊಳ್ಳುತ್ತಿದ್ದೆವು.ಒಟ್ಟಿನಲ್ಲಿ ನಮ್ಮ ಪ್ರತಿಭಟನೆಯನ್ನು ದಾಖಲು ಮಾಡುತ್ತಿದ್ದೆವು.ಈಗಲೂ ಮಕ್ಕಳು 'ಚೆಕ್ಕಿಂಗ್ ಇನಸ್ಪೆಕ್ಟರ್ 'ಥರ ಆಡ್ತವೆ.ಆದರೆ ಆಗಿನಷ್ಟಲ್ಲ..!.ಸುಮಾರು ದೊಡ್ಡವರಾಗುವವರೆಗೂ ಅಪ್ಪ ಅಮ್ಮನ ಮಧ್ಯೆ ಮಲಗಿದ್ದೇವೆ.ನಿದ್ದೆ ಬರುವವರೆಗೂ..ಆದರೂ ಒಂದೂವರೆ ವರ್ಷಗಳ ಗ್ಯಾಪ್ ನಲ್ಲಿ ತಮ್ಮ ಹುಟ್ಟಿದ..!ಆಮೇಲೆ ಅಜ್ಜಿಯ ಜೊತೆಗೆ ಮಲಗಿದ್ದೆವು.
   ಒಬ್ಬರೇ ಮಲಗಿದ್ದು ಕಾಲೇಜು ದಿನಗಳಲ್ಲಿ ಇರಬಹುದು. ಆದರೆ ಪಾಶ್ಚಾತ್ಯ ದೇಶಗಳಲ್ಲಿ
ಮಕ್ಕಳನ್ನು ಬೇಗ 'ಇಂಡಿಪೆಂಡೆಂಟ್' ಮಲಗುವವರನ್ನಾಗಿ ಮಾಡುತ್ತಾರೆ.ಅದು ಇಲ್ಲಿಗೂ
ಬಂದಿದೆ.
     ಆಗೆಲ್ಲ ಸಿಟ್ಟು ಅಥವಾ ಟೆನ್ಷನ್ ಬಂದರೆ ಉಗುರು  ಕಚ್ಚುವುದು,ಕೆಳ ಇಲ್ಲವೇ ಮೇಲ್ತುಟಿಯನ್ನ ಕಚ್ಚಿ ಕೊಳ್ಳುವುದು, ತಲೆ ಕೆರೆಯುವುದು,ಬೆರಳಿನ ಹಿಂಭಾಗದ ಮಧ್ಯ ಭಾಗವ ಕಚ್ಚುವುದು ಇತ್ಯಾದಿ ಮಾಡುತ್ತಿದ್ದೆವು.ಮೂಗಿನಲ್ಲಿ ಸಿಂಬಳ ಸುರಿಯುವುದು,
ಅದನ್ನು ಅಂಗಿಗೋ ಚಡ್ಡಿಗೋ ಒರೆಸಿಕೊಳ್ಳುವುದು,ಹರಿದ ಗುಂಡಿ ,ಅದಕ್ಕೆ ಪಿನ್ನು.ಆ ಲೆಕ್ಕಕ್ಕೆ ಹೆಣ್ಣು ಮಕ್ಕಳು ಹೆಚ್ಚು ವ್ಯವಸ್ಥಿತವಾಗಿ ಇರುತ್ತಿದ್ದರು. ಬಹುಶಃ ನ್ಯಾಪ್ಕಿನ್ ಇರಲೇ ಇಲ್ಲ.
ಬಟ್ಟೆ ಇಟ್ಟುಕೊಳ್ಳುತ್ತಿದ್ದರೇನೋ.
            ಈಗ ಮಕ್ಕಳನ್ನು ಪ್ರತಿಯೊಂದಕ್ಕೂ ಟ್ರೈನ್ ಮಾಡುತ್ತೇವೆ. ಅನಾಗರಿಕ, ಅಸಭ್ಯ ಎಂಬ ಕಾಲಮ್ಮಿನಡಿಯಲ್ಲಿ ಪ್ರತಿಬಂಧಿಸುತ್ತೇವೆ.ಅವಕ್ಕೆ ಸರಿಯಾಗಿ ಹೊಡೆದಾಡುವುದು ಹೋಗಲಿ, ಶಬ್ದ ಸಂಪದ್ಭರಿತವಾಗಿ ಬಯ್ಯುವುದಕ್ಕೂ ಬಾರದು.
ಅವು ಶಾಲೆ ಎಂಬ ಫ್ಯಾಕ್ಟರಿಯಿಂದ ಬರುವ ಪ್ರೊಡಕ್ಟಗಳು ಅಷ್ಟೇ.
    ಇದು ನಮಗೆ ಗೊತ್ತಿಲ್ಲವಾ..ಗೊತ್ತಿದೆ. ಆದರೂ ಯಾಕೆ ಹೀಗೆ..?ಅಂದು ಬಡತನ ಇತ್ತು. ಅದರ ಅವಮಾನವಿತ್ತು.ವಿದ್ಯೆ ಮತ್ತು ಆ ಮೂಲಕ ಗಳಿಸಬಹುದಾದ ಆರ್ಥಿಕ ಸಂಪತ್ತಿನ ವಾಂಛೆ ಇದನ್ನೆಲ್ಲಾ ಮಾಡಿಸುತ್ತಿದೆ.ಇದು ನಮ್ಮ ಇಗೋ ತೃಪ್ತಿಗೆ
ನೆರವಾಗಬಹುದಷ್ಟೆ.
   ಆದರೆ ಒಂದು ಜನರೇಷನ್ನು ಕೇವಲ ವರ್ಕಿಂಗ್ ರೋಬೋಟ್ ಆಗಿ ತ್ಯಾಗ ಮಾಡಿ ಹೋಗುತ್ತದೆಯೇನೋ ಎಂಬ ಅನುಮಾನ ನನ್ನದು.
ಆ ಸೀಮಿತ, ಯಾಂತ್ರಿಕ ಪಾತ್ರಧಾರಿಗಳು ನಮ್ಮ ಮಕ್ಕಳೇ ಆಗಿರುವ ಸಾಧ್ಯತೆ ಬಹಳ ಹೆಚ್ಚು...!
                                  *
##ವರ್ತಮಾನ - ಫಿಜೆಟ್ ಸ್ಪಿನ್ನರ್ ಗಳೆಂಬ ಆಟಿಕೆಗಳು
ಬಂದಿವೆ.ಬೆಂಗಳೂರಿಗೆ ಬಂದ ಕೆಲವೇ ದಿನಗಳಲ್ಲಿ ನಮ್ಮೂರಂತಹ ಕಟ್ಟಕಡೆಯ ಹಳ್ಳಿ ತಲುಪಿದೆ.
ಇದರ ಉಪಯೋಗ ಗೊತ್ತಾ..?.ಮಕ್ಕಳ ಒತ್ತಡ, ಆತಂಕ, ಖಿನ್ನತೆಯನ್ನು ದೂರ ಮಾಡುತ್ತದೆಯಂತೆ..!
ಎಲ್ಲೋ ಓದಿದ ನೆನಪು..ಸುಖ,ದುಃಖ ಮಾತ್ರ ಬಾಲ್ಯದ
ಜೊತೆಗೆ ಬರುವುದು. ಬೇಸರ, ಆತಂಕ ಇತ್ಯಾದಿ ಪೋಷಕರಿಂದ ತುಂಬಲ್ಪಡುವುದು ಅಂತ.
ಹೇಳುವುದಕ್ಕೇನಿದೆ. ಎಲ್ಲ ಗೊಂದಲಮಯ...!
                      *
ಇವತ್ತು 'World Sight Day'.ಈ ದೃಷ್ಟಿ ದಿನ ನೇತ್ರ ದಾನ ಮಾಡುವ ಸಂಕಲ್ಪ ಮಾಡೋಣ.

ಮುಂದುವರೆಯುವುದು..
.ಡಾ.ಅಜಿತ್ ಹರೀಶಿ