ಬೇಡವೆಂದರೂ ಬಿಡದೀ ಮಾಯೆ..8
------- ------- -------
ಇವನಿಗೇನಾಯ್ತು...!ನಿನ್ನೆವರೆಗೂ ಸರಿ ಇದ್ದ ಅಂತ ನಿಮಗೆ
ಅನ್ನಿಸಿದರೆ ನಿಮ್ಮ ತಪ್ಪಲ್ಲ. ಇವತ್ತು 'ನೋ ಬ್ರಾ ಡೇ' ಅಂತಂದಾಗ ಮತ್ತೂ ಸಿಟ್ಟಿಗೆದ್ದು ಮುಖ ಸಿಂಡರಿಸಬಹುದು.
ನಿಲ್ಲಿ...!ಪ್ರಮುಖ ಆದರೆ ನೀರಸ ಮತ್ತು ಮುಂದೆ
ಹೇಳುವ ವಿಷಯಕ್ಕೆ ಈ ಚಿತ್ರ ಸಂಬಂಧಿಸಿದೆ.
ಅಕ್ಟೋಬರ್ 13 ಅಂದರೆ ಇವತ್ತು ನೋ ಬ್ರಾ ಡೇ.ಇಡೀ ಅಕ್ಟೋಬರ್ ತಿಂಗಳಲ್ಲಿ 'ಸ್ತನ ಕ್ಯಾನ್ಸರ್ 'ಕುರಿತು ಜಾಗೃತಿ ಮೂಡಿಸಲು ಅಭಿಯಾನ ನಡೆಯುತ್ತದೆ. ಅದರ ಭಾಗವಾಗಿ ಈ ನೋ ಬ್ರಾ ಡೇ.ಇಂದು ತಾಯಂದಿರು ತಮ್ಮ ಸ್ತನಗಳ ಸ್ವಯಂ ಪರೀಕ್ಷೆ ಮಾಡಿಕೊಳ್ಳುವುದು ಹೇಗೆ ಎಂದು ತಿಳಿದು ಕೊಳ್ಳಲಿ ಎಂಬುದು ಇದರ ಮುಖ್ಯ ಉದ್ದೇಶ.
ಸ್ತನ ಕ್ಯಾನ್ಸರ್ ನ ಮುಖ್ಯ ಲಕ್ಷಣಗಳನ್ನು ಪ್ರಚುರ ಪಡಿಸುವುದರ ಜೊತೆಗೆ 'mammogram' ಬಗ್ಗೆ ಮಾಹಿತಿ ನೀಡುವರು.ಮೆಮೋಗ್ರಾಮ್ ಪರೀಕ್ಷೆ ನಡೆಸಿದರೆ, ಸಾಮಾನ್ಯವಾಗಿ ರೋಗಿ ಅಥವಾ ವೈದ್ಯರಿಗೆ ಗೊತ್ತಾಗುವ
2 ವರ್ಷಗಳ ಮೊದಲು ಸ್ತನ ಕ್ಯಾನ್ಸರ್ ಪತ್ತೆ ಮಾಡಬಹುದು
ಎನ್ನುತ್ತದೆ ವೈದ್ಯಕೀಯ ವಿಜ್ಞಾನ.
ಈ ದಿನಕ್ಕೊಂದು ಸಣ್ಣ ಇತಿಹಾಸವಿದೆ.ಕೆನಡಾ ದೇಶದ ಟೊರಾಂಟೋದ ಪ್ಲಾಸ್ಟಿಕ್ ಸರ್ಜನ್ ಡಾ.ಮಿಶೆಲ್ ಬ್ರೌನ್
BRA (Breast Reconstruction Awareness) Day ,
ಆರಂಭಿಸಿದರು. ಮ್ಯಾಸ್ಟೆಕ್ಟಮಿ (ಸ್ತನ ಕೊಯ್ದು ತೆಗೆಯುವುದು) ನಂತರ ಸ್ತನದ ಪುನರ್ನಿರ್ಮಾಣಕ್ಕೆ
ಜಾಗೃತಿ ಮೂಡಿಸಲು ಮೊದಲು ಶುರುಮಾಡಿದ್ದು ಇದು.
ಇದರಿಂದ ಅಸಂಖ್ಯಾತ ರೋಗಿಗಳಿಗೆ ಸೂಕ್ತ ಸಮಯದಲ್ಲಿ
ಚಿಕಿತ್ಸೆ ದೊರತು ,ಸುಖಕರವಾಗಿ ಜೀವನ ನಡೆಸುತ್ತಿದ್ದಾರೆ.
ಹಾಗಾಗಿ ಆಧುನಿಕ ವೈದ್ಯ ವಿಜ್ಞಾನಕ್ಕೊಂದು ಸಲಾಂ ಹೇಳೋಣ.
ಇನ್ನು ನಮ್ಮ ಬಾಲ್ಯಾಂಕಣ..ಪ್ರತಿಯೊಬ್ಬರ ಬಾಲ್ಯ ತಾಯಿಯ ಸ್ತನ್ಯಪಾನ ಎಂಬ ಅಮೃತದಿಂದಲೇ ಬೆಳೆದು ಬಂದಿದೆ. ಹುಟ್ಟಿದ ದಿನದಿಂದ ವರ್ಷಗಳವರೆಗೆ ಅದೇ ನಮಗೆ ಆಹಾರ. ತಾಯಿಯ ಎದೆಹಾಲು ನಮ್ಮ ಖರೆತನಕ್ಕೂ ಉಪಮೆಯಾಗಿ ಬಳಕೆ ಆಗುತ್ತದೆ.
ಬಾಲ್ಯದ ಬಗ್ಗೆ ಹೇಳುತ್ತಿರುವಾಗಲೇ ಈ ದಿನ ಬಂದಿದ್ದು,
ಅದನ್ನು ಯೋಗ್ಯವಾಗಿ ಬಳಸಿಕೊಂಡಿದ್ದೇನಷ್ಟೆ.
ಸ್ತನ ಕ್ಯಾನ್ಸರ್ ಇವತ್ತು 'ಗುಣವಾಗದ' ಖಾಯಿಲೆಯ ಪಟ್ಟಿ ಯಲ್ಲಿ ಇಲ್ಲ ಎಂಬುದೂ ಸಂತಸದ ವಿಷಯ. ಆದರೆ
ಆಗಾಗ ಸ್ವಯಂ ಪರೀಕ್ಷೆ, ಸ್ವಲ್ಪವೇ ಶಂಕೆ ಬಂದರೆ ತಜ್ಞ ವೈದ್ಯರನ್ನು ಸಂಪರ್ಕಿಸಿ, ಅವಶ್ಯಕತೆ ಇದ್ದರೆ ಮೆಮೋಗ್ರಾಮ್
ಮಾಡಿಸಿ.ಇನ್ನೂ ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವೆಬ್ ಸೈಟ್ ಗೆ ಭೇಟಿ ಕೊಡಿ.https://www.google.co.in/url?sa=t&source=web&rct=j&url=https://www.medicalnewstoday.com/articles/37136.php&ved=0ahUKEwiP-ImvzezWAhXJQY8KHe53Ds8QFgg_MAI&usg=AOvVaw1N1kSqxC0ZjlhCrU-0EKQz
*
ಮುಂದುವರೆಯುವುದು..(ಸೋಮವಾರದಿಂದ)
-ಡಾ.ಅಜಿತ್ ಹರೀಶಿ