ಬೇಡವೆಂದರೂ ಬಿಡದೀ ಮಾಯೆ..9
------- ------- -------
ಮೊನ್ನೆ ಮೊನ್ನೆ ಚಡ್ಡಿಯನ್ನೂ ಹಾಕದೆ ಒಡಾಡುತ್ತಿದ್ದ ಹುಡುಗರು ನೋಡನೋಡುತ್ತಿದ್ದಂತೆ ನಮ್ಮ ಭುಜಕ್ಕೆ ಬಂದು ಬಿಡುತ್ತಾರಲ್ಲ...!
ಪೋಷಕರ ದೃಷ್ಟಿಯಿಂದ ನೋಡುವುದಾದರೆ ಅವರ ಮಕ್ಕಳ ಬಾಲ್ಯ ಹೈಸ್ಪೀಡ್
ನಲ್ಲೂ ,ಹದಿಹರೆಯ ಸ್ಲೋ ಮೋಷನ್ ನಲ್ಲಿಯೂ ಸಾಗುತ್ತದೆ.ಬಾಲ್ಯ ರಸವತ್ತಾದ
ಗಳಿಗೆಯಾದರೆ,ಮುಂದಿರುವುದು ಆತಂಕದ,ಅಪಾಯದ ಜೊತೆಗೆ ಭವಿಷ್ಯಕ್ಕೆ
ಬುನಾದಿಯಾಗುವ ಕಾಲಾವಧಿ.
ಹದಿಹರೆಯ ( ೧೦ ಮತ್ತು ೧೯ ರೊಳಗಿನ ವಯೋಮಾನ)ದವರ ಬಗ್ಗೆ ಕವಿತೆ,ಕಥೆಗಳನ್ನು ನಾವು ಸಾಕಷ್ಟು ಓದಿದ್ದೇವೆ.ಇದು ಜೀವನದಲ್ಲಿ ತೀವ್ರ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಕಂಡುಬರುವ ಘಟ್ಟ.
ದೇಹದ ಬೆಳವಣಿಗೆ ಮತ್ತು ಅಭಿವೃದ್ಧಿ ಬುಲೆಟ್ ಟ್ರೈನ್ ನ ವೇಗದಲ್ಲಿ ಇರುತ್ತದೆ.
ದೈಹಿಕ, ಸಾಮಾಜಿಕ ಮತ್ತು ಮಾನಸಿಕ ಪ್ರಬುದ್ಧತೆ ಪ್ರಾರಂಭವಾಗುವ ಸಮಯ, ಆದರೆ ಎಲ್ಲವೂ ಒಂದೇ ಕ್ಷಣದಲ್ಲಿ ಆಗದೆ,ಇದೇ ಕಾಲಘಟ್ಟದ ವಿವಿದ ಸ್ತರದಲ್ಲಿ ಆಗುವುದು ವಿಶೇಷ.ಲೈಂಗಿಕ ಪ್ರಬುದ್ಧತೆ ಮತ್ತು ಲೈಂಗಿಕ ಚಟುವಟಿಕೆಯ
ಪ್ರಯೋಗಶೀಲತೆ ಕೂಡ ಆರಂಭವಾಗುವುದು.
ಪ್ರೌಢರಂತಹ ಮಾನಸಿಕ ಬೆಳವಣಿಗೆ ಪ್ರಕ್ರಿಯೆ ಮತ್ತು ಪ್ರೌಢ ವ್ಯಕ್ತಿತ್ವ,
ಸಂಪೂರ್ಣ ಸಾಮಾಜಿಕ- ಆರ್ಥಿಕ ಅವಲಂಬನೆಯಿಂದ ಭಾಗಶಃ ಸ್ವಾತಂತ್ರ್ಯದ ಸಂಕ್ರಮಣಕಾಲ ಇದು.ಹೀಗೆ ಒಟ್ಟಾರೆ ಬಾಲ್ಯದಿಂದ ಪ್ರೌಢತ್ವಕ್ಕೆ ಸಾಗುವ ಮಧ್ಯದ ದುರ್ಗಮ ಆದರೆ ರೋಚಕ ಹಾದಿ.ಇಲ್ಲಿ ಬೃಹತ್ ಬದಲಾವಣೆಯ ಜೊತೆಗೆ ಬೃಹತ್ ಸವಾಲು ಎದುರಾಗುವುದು ಖಚಿತ.
ಈ ಹುಚ್ಚು ಕುದುರೆ ಓಟದಲ್ಲಿ ಬೆವರುವುದು ಹೆಚ್ಚಾಗುತ್ತದೆ. ಸ್ನಾನ ಮಾಡುವುದರಿಂದ ಸ್ವಚ್ಛವಾಗುವುದು ಮತ್ತು ಆಹ್ಲಾದಕರ ವಾಸನೆಯನ್ನು ಹೊಂದಬಹುದು.ಹಲ್ಲು ಹುಳುಕು ತಡೆಯಲು ಕನಿಷ್ಠ ದಿನಕ್ಕೆ ಎರಡು ಬಾರಿ ಹಲ್ಲನ್ನು ಉಜ್ಜಬೇಕು, ಇದರಿಂದ ಉಸಿರು ತಾಜಾತನವನ್ನು ಹೊಂದಿರುತ್ತದೆ.
ತೈಲ ಗ್ರಂಥಿಗಳು ಸೇಬಮ್ ಅನ್ನು ಸ್ರವಿಸುವುದರಿಂದ ಮೊಡವೆಗಳು ಬರಬಹುದು.ಪೌಷ್ಟಿಕ ಆಹಾರ ಅತ್ಯಗತ್ಯ.ಕರಿದ ಮತ್ತು ಸಿಹಿ ಪದಾರ್ಥಗಳನ್ನು ತಿನ್ನುವುದನ್ನು ಕಡಿಮೆಮಾಡುವುದು ಬೆಟರ್.
ಸಕಾರಾತ್ಮಕ ಯೋಚನೆಗಳು ನಿಮ್ಮಲ್ಲಿರಲಿ. ಒಳ್ಳೆಯ ಆರೋಗ್ಯಕ್ಕೆ ಸುಭದ್ರ ಮನಸ್ಸು ಅತ್ಯಗತ್ಯ.
ಹದಿಹರೆಯದ ಸಮಯದಲ್ಲಿ ಪೋಷಕರು ಮತ್ತು ಮಕ್ಕಳಲ್ಲಿ ಒಬ್ಬರೊಡನೆ ಒಬ್ಬರು ಹೊಂದಿಕೊಂಡು ಹೋಗುವುದರಲ್ಲಿ ತೊಡಕುಗಳು ಕಾಣಿಸಿಕೊಳ್ಳುತ್ತವೆ. ಅದಾಗದಿರಲಿ.
ಪೋಷಕರ ನಂಬಿಕೆ ಮತ್ತು ಮೌಲ್ಯಗಳನ್ನು ಅರ್ಥಮಾಡಿಕೊಳ್ಳುವುದು ಮಕ್ಕಳ ಕೆಲಸ,ಜೊತೆಗೆ
ಪೋಷಕರು ತಮ್ಮ ಮಕ್ಕಳಿಗೆ ಅತ್ಯತ್ತಮವಾದದ್ದನ್ನೇ ಕೊಡುತ್ತಾರೆ ಎಂಬುದನ್ನು ನೆನಪಿಟ್ಟುಕೊಳ್ಳಿ.ನಿಮ್ಮ ತಂದೆತಾಯಿಯರ ಜತೆ ಮುಕ್ತ ವಾಗಿ ಮತ್ತು ಪ್ರಾಮಾಣಿಕವಾಗಿ ಇರಿ.ಅವರ ಬಗ್ಗೆ ಕಾಳಜಿ ಮತ್ತು ಗೌರವಗಳಿರಲಿ.ಅದೇ ತರಹ ಪೋಷಕರು ಮಕ್ಕಳೊಂದಿಗೆ ಸೌಹಾರ್ದತೆ ಹೊಂದುವುದು ಇಂದಿನ ಅಗತ್ಯ.
* * *
#ವರ್ತಮಾನ*-ಮಕ್ಕಳ ಸ್ಕೂಲ್ ಬ್ಯಾಗನ್ನು ಆಗಾಗ ಅವರಿಗೆ ಗೊತ್ತಾಗದಂತೆ
ಸೂಕ್ಷ್ಮವಾಗಿ ’ಚೆಕ್’ ಮಾಡುವುದು ಒಳ್ಳೆಯದು.ಇದು ಅಪನಂಬಿಕೆಯ ಪ್ರಶ್ನೆ ಖಂಡಿತ ಅಲ್ಲ.ಇದು ಕ್ಷಿಪಣಿಯನ್ನು ಗ್ರಹಿಸುವ ’ರಾಡಾರ್’ ನಂತೆ.ಇದೇ ಮಾತು ಮೊಬೈಲ್,ಪಾಕೆಟ್ ಗಳಿಗೂ ಅನ್ವಯಿಸುವುದು...ಆಮೇಲೆ ಬಾಯಿಬಡಿದು ಕೊಳ್ಳುವುದರಿಂದ ಯಾವ ಪ್ರಯೋಜನವೂ ಇಲ್ಲ...!
*
..ಮುಂದುವರೆಯುವುದು..
-ಡಾ.ಅಜಿತ್ ಹರೀಶಿ.