ಬೇಡವೆಂದರೂ ಬಿಡದೀ ಮಾಯೆ-10
------- ------- -------
ಹದಿಹರೆಯದಲ್ಲಿ ಹಸ್ತ ಮೈಥುನ ಒಂದು ಸೂಕ್ಷ್ಮ ಆದರೆ ಚರ್ಚಿಸಲೇಬೇಕಾದ ಪ್ರಮುಖ
ವಿಷಯ.ಬಹಳಷ್ಟು ತಪ್ಪು ತಿಳುವಳಿಕೆಯನ್ನು ಹೊಂದಿರುವ ವಿಷಯಗಳಲ್ಲಿ ಇದು ಮುಖ್ಯವಾದುದು.ಸಂಗಾತಿಯಿಲ್ಲದೆ ಏಕಾಂತದಲ್ಲಿ ಲೈಂಗಿಕ ವಾಂಛೆಯನ್ನು ಈಡೇರಿಸಿಕೊಳ್ಳಲು ಸ್ವತಃ ತಮ್ಮ ಕೈಯಿಂದ ತಮ್ಮ ಜನನಾಂಗ ಉದ್ರೇಕಿಸಿ ಲೈಂಗಿಕ ಪರಾಕಾಷ್ಠೆ ತಲುಪಿ ಸ್ರವಿಸುವುದು ಹಸ್ತಮೈಥುನ ಅಂತ ಎಲ್ಲರಿಗೂ ಗೊತ್ತು.
ಆದರೆ ಅದರ ಬಗ್ಗೆ ಇರುವ ತಪ್ಪುಗ್ರಹಿಕೆಗಳ ಬಗ್ಗೆ ನೋಡುವಾ..
ಹಸ್ತಮೈಥುನವು ವ್ಯಕ್ತಿಯಲ್ಲಿರುವ ಲೈಂಗಿಕ ಒತ್ತಡವನ್ನು ಬಿಡುಗಡೆ ಮಾಡುವ ಒಂದು ಕ್ರಿಯೆ ಮಾತ್ರ. ಇದು ನಿಮ್ಮನ್ನು ಸಲಿಂಗಕಾಮಿಯನ್ನಾಗಿ ಮಾಡುವುದಿಲ್ಲ.ನೀವು ಅಂಧರೂ,ನಪುಂಸಕರೂ ಆಗುವುದಿಲ್ಲ.
ಒಂದು ದಿನಕ್ಕೆ ಇಷ್ಟೇ ಹಸ್ತಮೈಥುನ ಮಾಡಿಕೊಳ್ಳಬೇಕು ಎಂಬ ಯಾವುದೇ ನಿಯಮ ಇಲ್ಲ. ತಮ್ಮ ಧಾರ್ಮಿಕ ನಂಬಿಕೆಗಳ ಪ್ರಕಾರ ಹಸ್ತ ಮೈಥುನ ಮಾಡಿಕೊಳ್ಳದೆ ಇರುವವರು ಸಹ ಇದ್ದಾರೆ. ಇನ್ನೂ ಕೆಲವರು ತಮ್ಮ ಜೀವನದಲ್ಲಿ ಕೆಲವೇ ಕೆಲವು ಬಾರಿ ಮಾತ್ರ ಹಸ್ತಮೈಥುನ ಮಾಡಿಕೊಂಡಿರುತ್ತಾರೆ. ಇನ್ನೂ ಕೆಲವರು ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಹಸ್ತಮೈಥುನ ಮಾಡಿಕೊಳ್ಳುತ್ತಾರೆ. ಇದು ವ್ಯಕ್ತಿಗತವಾದ ವಿಚಾರವಾಗಿದ್ದು, ಅವರವರ ಭಾವಕ್ಕೆ ಬಿಟ್ಟದ್ದಾಗಿರುತ್ತದೆ. ಎಲ್ಲಿಯವರೆಗೆ ಇದು ಚಟವಾಗಿ ಪರಿವರ್ತನೆಯಾಗುವುದಿಲ್ಲವೋ, ಅಲ್ಲಿಯವರೆಗೆ ಹಸ್ತಮೈಥುನದಿಂದ ಯಾವುದೇ ಕೇಡಿಲ್ಲ .
ಹಾಗಾಗಿ ಪೋಷಕರಿಗೆ ಈ ವಿಷಯವಾಗಿ ಬಹಳ ತಲೆಬಿಸಿ ಬೇಡ.ಆದರೆ ನಿಜಕ್ಕೂ ಚಿಂತೆ ಮಾಡಬೇಕಾಗಿರುವುದು ಮಾದಕ ವ್ಯಸನಗಳ ಬಗ್ಗೆ,
ಮಾದಕ ವಸ್ತುಗಳಾದ ತಂಬಾಕು,ಗಾಂಜಾ ಮತ್ತು ಮದ್ಯಗಳ ಲಭ್ಯತೆಗೆ ಕಾನೂನು ಕಡಿವಾಣ ಹಾಕಿದ್ದಾಗ್ಯೂ ಕೂಡ, ಇವುಗಳ ಬೇಡಿಕೆ ಇಳಿಯುವಂತೆ ಹಾಗೂ ಹದಿಹರೆಯದವರ ಬೆಳೆವಣಿಗೆಗೆ ಸಹಾಯಕವಾಗುವಂತೆ ಅನೇಕ ಮನೋ ಪರಿವರ್ತನೆಗಳನ್ನು ಕೈಗೊಳ್ಳಬೇಕು. ಇಂತಹ ವಸ್ತುಗಳ ಬಳಕೆಯಿಂದ ಉಂಟಾಗುವ ಅಪಾಯಗಳ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸುವುದು, ಸಹಪಾಠಿಗಳ ಒತ್ತಡಗಳನ್ನು ನಿಭಾಯಿಸುವ ಸಾಮರ್ಥ್ಯ ಬೆಳೆಯಿಸುವಂತೆ ಮಾಡುವುದು, ಒತ್ತಡವನ್ನು ಆರೋಗ್ಯಕರ ರೀತಿಯಲ್ಲಿ ನಿಭಾಯಿಸುವ ಗುಣಗಳನ್ನು ಅವರು ಮೈಗೂಡಿಸಿಕೊಳ್ಳುವಂತೆ ಮಾಡಿದಾಗ ಅವರು ಈ ಚಟಗಳಿಗೆ ಬಲಿಯಾಗುವುದನ್ನು ಕಡಿಮೆ ಮಾಡಲು ಸ್ಫೂರ್ತಿ ದೊರೆಯುತ್ತದೆ.
ಒಟ್ಟಾರೆ ಮಾನಸಿಕ ಆರೊಗ್ಯದ ಬಗ್ಗೆ ಹೇಳುವುದಾದರೆ, ಬಾಲ್ಯಾವಸ್ಥೆಯ ಉತ್ತರಾರ್ಧದಲ್ಲಿ ಮತ್ತು ಕಿಶೋರಾವಸ್ಥೆಯ ಮೊದಲ ಭಾಗದಲ್ಲಿ ಮಕ್ಕಳು ಅನೇಕ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತವೆ. ಸಮಸ್ಯಾ ನಿವಾರಣಾ ಕೌಶಲ್ಯ, ಸಮಾಜಿಕ ಕೌಶಲ್ಯ ಮತ್ತು ಆತ್ಮ ವಿಶ್ವಾಸಗಳನ್ನು ಹೆಚ್ಚಿಸುವ ಮೂಲಕ ಕಿಶೋರಾವಸ್ಥೆಯಲ್ಲಿ ತಲೆದೋರುವ ನಡವಳಿಕೆಯಲ್ಲಿನ ಏರುಪೇರು, ಆತಂಕ, ಖಿನ್ನತೆ ಮತ್ತು ತಿನ್ನುವ ಹವ್ಯಾಸದಲ್ಲಿನ ಏರುಪೇರು ಸೇರಿದಂತೆ ಇತರ ಅಪಾಯಕಾರಿ ನಡವಳಿಕೆಗಳಾದ ಲೈಂಗಿಕ ನಡವಳಿಕೆಗಳು, ಮಾದಕ ವಸ್ತುಗಳ ಬಳಕೆ ಮತ್ತು ಹಿಂಸಾತ್ಮಕ ನಡವಳಿಕೆಗಳನ್ನು ನಿರ್ವಹಿಸುವ ಕೌಶಲ ಅವರದಾಗಬೇಕು. ಹದಿಹರೆಯದವರೊಂದಿಗೆ ಬೆರೆತು ಅವರಲ್ಲಿನ ಮಾನಸಿಕ ತೊಂದರೆಗಳನ್ನು ಶೀಘ್ರದಲ್ಲೇ ಗುರುತಿಸಿ ಆಪ್ತ ಸಮಾಲೋಚನೆ, ನಡವಳಿಕೆ ಚಿಕಿತ್ಸೆ ಮತ್ತು ಸೂಕ್ತ ಮನೋವೈದ್ಯಕೀಯ ಔಷಧಗಳ ಬಳಕೆಗೆ ಸೂಕ್ತ ತಜ್ಞರನ್ನು, ಪೋಷಕರು ಅವಶ್ಯಕತೆ ಬಿದ್ದರೆ ಸಂಪರ್ಕಿಸುವುದು ಅನಿವಾರ್ಯ.
* * *
#ವರ್ತಮಾನ -ಹೆಣ್ಣು ಮಕ್ಕಳು ಲೈಂಗಿಕ ದೌರ್ಜನ್ಯ ಮತ್ತು ಬಲತ್ಕಾರಗಳಿಂದ ತಪ್ಪಿಸಿಕೊಳ್ಳಲು ವಿಶೇಷ ಸೂಚನೆ,ತರಬೇತಿ,ದೈಹಿಕ ಕೌಶಲ್ಯ ಅಭಿವೃದ್ಧಿ ಕೊಡಿಸುವುದು ಪೋಷಕರ ಕರ್ತವ್ಯವಾದರೂ,ಲೈಂಗಿಕ ಬಲಾತ್ಕಾರವನ್ನು ತೀವ್ರವಾಗಿ ವಿರೋಧಿಸುವ ಮತ್ತು ಗಂಡಸರ ನಡಾವಳಿಯನ್ನು ಆ ಕ್ಷಣದಲ್ಲೇ ಖಂಡಿಸುವ ದೊಡ್ಡ ಸಮುದಾಯವನ್ನು ಸೃಷ್ಟಿಸಬೇಕಿದೆ.ಇದೇ ಇಂದಿನ ತುರ್ತು ಎಂದು ಹೇಳಬೇಕಾಗಿರುವುದು ವಿಷಾದನೀಯ ಸಂಗತಿ...!
*
..ಮುಂದುವರೆಯುವುದು..
-ಡಾ.ಅಜಿತ್ ಹರೀಶಿ.