ಹಾಂಕಾಂಗ್/ಮುಂಬೈ: ಐರೋಪ್ಯ ಒಕ್ಕೂಟದಿಂದ ಹೊರನಡೆಯುವ ಬ್ರಿಟನ್ ನಿರ್ಧಾರ (ಬ್ರೆಕ್ಸಿಟ್) ಗೊತ್ತಾಗುತ್ತಿದ್ದಂತೆ ಜಾಗತಿಕ ಷೇರು, ಕರೆನ್ಸಿ ಪೇಟೆಗಳಲ್ಲಿ ಶುಕ್ರವಾರ ಅಲ್ಲೋಲ- ಕಲ್ಲೋಲವೇ ಆಗಿದೆ. ಮುಂಬೈ ಷೇರು ಸಂವೇದಿ ಸೂಚ್ಯಂಕ ಒಂದು ಹಂತದಲ್ಲಿ 1100 ಅಂಕಗಳವರೆಗೂ ಕುಸಿತ ಕಂಡಿದ್ದರೆ, ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಮಧ್ಯಂತರದಲ್ಲಿ 96 ಪೈಸೆವರೆಗೂ ಇಳಿಕೆ ದಾಖಲಿಸಿದೆ. ಅಂತಿಮವಾಗಿ ಡಾಲರ್ ಎದುರು ರೂಪಾಯಿ 71 ಪೈಸೆ ಕುಸಿದು 67.96 ರೂ.ನಲ್ಲಿ ಮುಕ್ತಾಯವಾಗಿದೆ. ಇದು ಕಳೆದ 4 ತಿಂಗಳಲ್ಲೇ ಗರಿಷ್ಠ ದೈನಂದಿನ ಕುಸಿತವಾಗಿದೆ.
ಹಣಕಾಸು ಸಚಿವ ಅರುಣ್ ಜೇಟ್ಲಿ, ರಿಸರ್ವ್ ಬ್ಯಾಂಕ್ ಗರ್ವನರ್ ರಘುರಾಂ ರಾಜನ್‌ರಂಥವರ ಸಾಂತ್ವನದ ಮಾತುಗಳ ನಂತರ ಷೇರುದಾರರು ಖರೀದಿಗೆ ಇಳಿದಿದ್ದರಿಂದ ದಿನದಂತ್ಯಕ್ಕೆ ಸೆನ್ಸೆಕ್ಸ್ 604.51 ಇಳಿಕೆ ದಾಖಲಿಸಿ, 26,397 ಅಂಕಗಳಲ್ಲಿ ವಹಿವಾಟು ಮುಗಿಸಿದೆ. ಇದರಿಂದಾಗಿ ಷೇರು ಹೂಡಿಕೆದಾರರು ಒಂದೇ ದಿನ 1.79 ಲಕ್ಷ ಕೋಟಿ ರೂ. ಸಂಪತ್ತು ಕಳೆದುಕೊಂಡಿದ್ದಾರೆ. ಒಂದೇ ದಿನ ಸೆನ್ಸೆಕ್ಸ್ 600 ಅಂಕಗಳಷ್ಟು ಕುಸಿದಿರುವುದು ನಾಲ್ಕು ತಿಂಗಳ ಅವಧಿಯಲ್ಲಿ ಇದೇ ಮೊದಲು. ಇದೇ ವೇಳೆ, ರಿಸರ್ವ್ ಬ್ಯಾಂಕ್ ಮಧ್ಯಪ್ರವೇಶದ ಬಳಿಕ ರೂಪಾಯಿ ತುಸು ಚೇತರಿಸಿಕೊಂಡಿದೆ.
ಮತ್ತೂಂದೆಡೆ ಡಾಲರ್ ವಿರುದ್ಧ ಬ್ರಿಟನ್‌ನ ಪೌಂಡ್ 31 ವರ್ಷಗಳ ದಾಖಲೆಯ ಕನಿಷ್ಠ ಮಟ್ಟವಾದ 1.3229 ಪೌಂಡ್‌ಗೆ ಒಂದು ಹಂತದಲ್ಲಿ ಕುಸಿದು, ನಂತರ ತುಸು ಚೇತರಿಸಿಕೊಂಡಿದೆ.. ಜಪಾನ್ ಕರೆನ್ಸಿ ಎದುರು ಡಾಲರ್ ಮೌಲ್ಯ ಎರಡೂ ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ 100 ಯೆನ್‌ಗೆ ಕೆಳಕ್ಕೆ ಕುಸಿದು ಮತ್ತೆ 102 ಯೆನ್‌ಗೆ ಜಿಗಿದಿದೆ. ಮಲೇಷ್ಯಾದ ರಿಂಗೆಟ್ ಮೌಲ್ಯ 1998ರ ಮಟ್ಟಕ್ಕೆ ಕುಸಿದಿದೆ.
ಐರೋಪ್ಯ ಒಕ್ಕೂಟ ಎಂದರೇನು?
28 ರಾಷ್ಟ್ರಗಳ ಆರ್ಥಿಕ, ರಾಜಕೀಯ ಸಹಯೋಗಕ್ಕಾಗಿ ಹುಟ್ಟಿಕೊಂಡದ್ದು ಐರೋಪ್ಯ ಒಕ್ಕೂಟ. ಎರಡನೇ ಮಹಾಯುದ್ಧದ ಬಳಿಕ ಯುರೋಪ್ ದೇಶಗಳ ಮಧ್ಯೆ ಪರಸ್ಪರ ಆರ್ಥಿಕ ಸಹಕಾರ ನಡೆಸಲು ಒಕ್ಕೂಟ ಹುಟ್ಟಿಕೊಂಡಿತು. ಕ್ರಮೇಣ ಇದು ಒಕ್ಕೂಟದ ದೇಶಗಳ ಮಧ್ಯೆ 'ಏಕ ಮಾರುಕಟ್ಟೆ' ತತ್ವವನ್ನು ಜಾರಿಗೆ ತಂದಿದ್ದು, ಸರಕು ಮತ್ತು ನಾಗರಿಕರು ದೇಶಗಳೊಳಗೆ ಮುಕ್ತವಾಗಿ ಸಂಚರಿಸಲು ಅನುವುಮಾಡಿಕೊಟ್ಟಿದೆ. ಪ್ರತ್ಯೇಕ ಸಂಸತ್ತು, ಸಂವಿಧಾನ, ಕಾನೂನುಗಳನ್ನು ಒಕ್ಕೂಟ ಹೊಂದಿದ್ದು, ಪ್ರತ್ಯೇಕ 'ಯೂರೋ' ಕರೆನ್ಸಿ ಹೊಂದಿದೆ.
ಭಾರತ ಬ್ರಿಟನ್ ವ್ಯಾಪಾರ ಸಹಕಾರ
ಭಾರತದ ದ್ವಿಪಕ್ಷೀಯ ವ್ಯಾಪಾರದಲ್ಲಿ ಬ್ರಿಟನ್‌ಗೆ 12ನೇ ಸ್ಥಾನ
ಭಾರತದಲ್ಲಿ ಹೂಡಿಕೆ ಮಾಡುವ ಮೂರನೇ ಅತಿ ದೊಡ್ಡ ದೇಶ ಬ್ರಿಟನ್. 2000-15 ನೇ ಅವಧಿಯಲ್ಲಿ 1.4 ಲಕ್ಷ ಕೋಟಿ ರೂ. ಹೂಡಿಕೆ.
ಬ್ರಿಟನ್‌ನಲ್ಲಿ ಹೂಡಿಕೆ ಮಾಡುವ ಮೂರನೇ ಅತಿ ದೊಡ್ಡ ದೇಶವೂ ಭಾರತವೇ. 2014ರಲ್ಲಿ ಭಾರತ 23,250 ಕೋಟಿ ರೂ. ಹೂಡಿಕೆ ಮಾಡಿತ್ತು.
ಬ್ರಿಟನ್‌ನಲ್ಲಿ ಭಾರತೀಯ ಮಾಲಿಕತ್ವದ 800ಕ್ಕೂ ಹೆಚ್ಚು ಕಂಪನಿಗಳಿವೆ. ಅದರಲ್ಲಿ 11 ಸಾವಿರ ಕಾರ್ಮಿಕರಿದ್ದಾರೆ.
ಬ್ರಿಟನ್‌ನಲ್ಲಿ ಭಾರತ ಮಾಲಿಕತ್ವದ ಐಟಿ, ಔಷಧ, ಹಣಕಾಸು ಕಂಪನಿಗಳು ಪ್ರಮುಖವಾದವುಗಳು
ಯುರೋಪ್‌ನ ಉಳಿದೆಲ್ಲ ದೇಶಗಳಿಂದ ಬ್ರಿಟನ್‌ನಲ್ಲೇ ಭಾರತದ ಹೆಚ್ಚು ಹೂಡಿಕೆ ಇದೆ.
ಹೊರಬರುವ ಪ್ರಕ್ರಿಯೆ ಹೇಗೆ?
ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರನಡೆಯುವ ಪ್ರಕ್ರಿಯೆ ಲಿಸºನ್ ಒಪ್ಪಂದದ 50ನೇ ಪರಿಚ್ಛೇದದಡಿ ನಡೆಯುತ್ತದೆ. ಆ ಪ್ರಕಾರ, ಐರೋಪ್ಯ ಮಂಡಳಿ ಅಧ್ಯಕ್ಷರಿಗೆ ತಾನು ಐರೋಪ್ಯ ಒಕ್ಕೂಟದಿಂದ ಹೊರನಡೆಯುತ್ತಿರುವ ಉದ್ದೇಶವನ್ನು ಬ್ರಿಟನ್ ತಿಳಿಸಬೇಕು.
ಆನಂತರ ಐರೋಪ್ಯ ಒಕ್ಕೂಟದಿಂದ ನಿರ್ಗಮಿಸಲು ಬ್ರಿಟನ್ ಮುಂದೆ ಎರಡು ದಾರಿಗಳು ಇರುತ್ತವೆ.
1. ಐರೋಪ್ಯ ಒಕ್ಕೂಟದ ಜತೆ ಮಾತುಕತೆ ನಡೆಸಿ, ಹೊರಬರುವುದು.
2 ಯಾವುದೇ ಒಪ್ಪಂದ ಮಾಡಿಕೊಳ್ಳದೇ ಇರುವುದು. ಈ ಮಾರ್ಗದಲ್ಲಿ ಹೋದರೆ ನಿರ್ಗಮಿಸುವ ಕುರಿತು ತನ್ನ ಅಭಿಪ್ರಾಯ ಹೇಳಿದ ಎರಡು ವರ್ಷದ ಬಳಿಕ ಬ್ರಿಟನ್ ಸದಸ್ಯತ್ವ ತನ್ನಿಂತಾನೆ ರದ್ದಾಗಲಿದೆ.
ಈ ಎರಡು ವರ್ಷಗಳ ಅವಧಿಯಲ್ಲಿ ಐರೋಪ್ಯ ಒಕ್ಕೂಟದ ಒಪ್ಪಂದ ಹಾಗೂ ಕಾನೂನುಗಳಿಗೆ ಬ್ರಿಟನ್ ಬದ್ಧವಾಗಿರಬೇಕಾಗುತ್ತದೆ. ಆದರೆ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಭಾಗವಹಿಸುವಂತಿಲ್ಲ.
ಹೊರಕ್ಕೆ ಇದೇ ಮೊದಲ ಸಲವಲ್ಲ
ಇದುವರೆಗೆ ಐರೋಪ್ಯ ಒಕ್ಕೂಟದಿಂದ ಯಾವುದೇ ರಾಷ್ಟ್ರ ಹೊರಗೆ ಬಿದ್ದಿಲ್ಲ. ಈ ಮೊದಲು ಡೆನ್ಮಾರ್ಕ್‌ನ ಸಾಗರದಾಚೆಗಿನ ಗಡಿ ಪ್ರದೇಶವಾಗಿದ್ದ ಗ್ರೀನ್‌ಲೆಂಡ್, 1982ರಲ್ಲಿ ಒಕ್ಕೂಟದಿಂದ ಹೊರಬರಲು ಮಸೂದೆ ಮಂಡಿಸಿತ್ತು. ಈ ವೇಳೆ ಮತದಾನವಾಗಿ 52 ಶೇ. ಒಕ್ಕೂಟದಿಂದ ಹೊರಬರಲು ಇಚ್ಛೆ ವ್ಯಕ್ತಪಡಿಸಿದ್ದರು. ಬಳಿಕ ಮಾತುಕತೆ ನಡೆಸಿ ಇದನ್ನು ತಣ್ಣಗಾಗಿಸಿದ್ದರು.
ಬ್ರೆಕ್ಸಿಟ್‌ನಿಂದ ಐಸಿಸ್‌ಗೆ ಸಂತಸ
ಲಂಡನ್: ಯುರೋಪ್ ಒಕ್ಕೂಟದಿಂದ ಬ್ರಿಟನ್ ಹೊರಬರುತ್ತಿರುವುದಕ್ಕೆ ಮತ್ತು ಇದರಿಂದ ಬ್ರಿಟನ್ ಮತ್ತು ಯುರೋಪ್ ಒಕ್ಕೂಟದ ಮೇಲಾಗುವ ಋಣಾತ್ಮಕ ಆರ್ಥಿಕ ಪರಿಣಾಮದ ಕಾರಣ ಐಸಿಸ್ ಉಗ್ರ ಸಂಘಟನೆ ಸಂತಸ ವ್ಯಕ್ತಪಡಿಸಿದೆ. ಅಲ್ಲದೇ ಬರ್ಲಿನ್ ಮತ್ತು ಬ್ರಸೆಲ್ಸ್‌ಗಳ ಮೇಲೆ ದಾಳಿ ನಡೆಸಲು ಐಸಿಸ್ ಉಗ್ರ ಸಂಘಟನೆ ಕರೆ ನೀಡಿದೆ.
ಬ್ರಿಟನ್‌ನಿಂದ ಸ್ಕಾಟ್ಲೆಂಡ್ ಔಟ್?
ಎಡಿನ್‌ಬರೋ: ಐರೋಪ್ಯ ಒಕ್ಕೂಟದಿಂದ ಹೊರಹೋಗುವ ಬ್ರಿಟನ್‌ನ ನಿರ್ಧಾರಕ್ಕೆ, ಬ್ರಿಟನ್‌ನದ್ದೇ ಭಾಗವಾಗಿರುವ ಸ್ಕಾಟ್ಲೆಂಡ್ ವಿರೋಧ ವ್ಯಕ್ತಪಡಿಸಿದೆ. ಜೊತೆಗೆ ಬ್ರಿಟನ್‌ನಿಂದ ತಾನೇ ಹೊರಹೋಗುವ ಕುರಿತು ದೇಶದಲ್ಲಿ ಮತ್ತೂಮ್ಮೆ ಜನಮತಗಣನೆ ನಡೆಸುವ ಸಾಧ್ಯತೆ ದಟ್ಟವಾಗಿದೆ ಎಂದು ಸ್ಕಾಟ್ಲೆಂಡ್‌ನ ಸಚಿವೆ ನಿಕಲೋ ಸ್ಟುರ್ಜನ್ ಹೇಳಿದ್ದಾರೆ.
ಇತರೆಡೆಯೂ ಜನಮತಗಣನೆ ಬೇಡಿಕೆ
ಲಂಡನ್: ಐರೋಪ್ಯ ಒಕ್ಕೂಟದಿಂದ ಹೊರಹೋಗಲು ಬ್ರಿಟನ್ ಜನತೆ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ, ಒಕ್ಕೂಟದ ಇತರೆ ಹಲವು ರಾಷ್ಟ್ರಗಳಲ್ಲೂ ಇದೇ ರೀತಿಯ ಜನಮತಗಣನೆಗೆ ಅಲ್ಲಿನ ವಿವಿಧ ಪಕ್ಷಗಳು ಬೇಡಿಕೆ ಮಂಡಿಸಿವೆ. ನೆದರ್‌ಲೆಂಡ್, ಡೆನ್ಮಾರ್ಕ್, ಸ್ವೀಡನ್, ಫ್ರಾನ್ಸ್, ಇಟಲಿಯ ವಿವಿಧ ರಾಜ ಕೀಯ ಪಕ್ಷಗಳು ಸರ್ಕಾರಕ್ಕೆ ಜನಮತಗಣನೆ ನಡೆಸುವಂತೆ ಒತ್ತಾಯಿಸಿವೆ.
ಭಾರತದ ಮೇಲಾಗುವ ಪರಿಣಾಮಗಳು
ಐಟಿ ಕಂಪನಿಗಳಿಗೆ ಬಹುದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ. ಯುರೋಪ್ ಮಾರುಕಟ್ಟೆಗಾಗಿ ಈ ಕಂಪನಿಗಳು ಬ್ರಿಟನ್‌ನಲ್ಲಿ ಕೇಂದ್ರ ಕಚೇರಿ ಸ್ಥಾಪಿಸಿಕೊಂಡಿದ್ದವು. ಈಗ ಪ್ರತ್ಯೇಕ ಕಚೇರಿ ತೆರೆಯಬೇಕಾಗುತ್ತದೆ.
ದೇಶದ ಟಾಪ್- 5 ಕಂಪನಿಗಳಿಗೆ ಶೇ.30ರಷ್ಟು ಆದಾಯ ಯುರೋಪ್‌ನಿಂದಲೇ ಬರುತ್ತಿದೆ. 'ಬ್ರೆಕ್ಸಿಟ್' ಪರಿಣಾಮವಾಗಿ ಐರೋಪ್ಯ ಒಕ್ಕೂಟವು ಐಟಿ ವೆಚ್ಚ ತಗ್ಗಿಸಬಹುದು. ಇದರಿಂದ ಐಟಿ ಕಂಪನಿಗಳ ಆದಾಯದಲ್ಲಿ ಕುಸಿತವಾಗಬಹುದು.
ಬ್ರೆಕ್ಸಿಟ್ ಪರಿಣಾಮವಾಗಿ ಈ ದಶಕದ ಅಂತ್ಯಕ್ಕೆ ಟಾಟಾ ಮೋಟರ್ಸ್ ನ ಅಂಗ ಸಂಸ್ಥೆ ಜೆಎಲ್‌ಆರ್ ಬರೋಬ್ಬರಿ 10 ಸಾವಿರ ಕೋಟಿ ರೂ.ಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಲಾಭದ ಮೇಲೂ ಹೊಡೆತ ಬೀಳಲಿದೆ
ಪುಣೆ ಮೂಲದ ಬಾಬಾ ಕಲ್ಯಾಣಿ ಒಡೆತನದ ಭರತ್ ಫೋರ್ಜ್ ಕಂಪನಿಯ ಶೇ.39ರಷ್ಟು ಆದಾಯ ಯುರೋಪ್‌ನಿಂದ ಬರುತ್ತದೆ. ಮದರ್‌ಸನ್ ಸುಮಿ ಕಂಪನಿ ನೆದರ್ಲೆಂಡ್‌ನಲ್ಲಿ ಬಿಡಿ ಭಾಗ ತಯಾರಿಕಾ ಅಂಗ ಸಂಸ್ಥೆಯೊಂದನ್ನು ಹೊಂದಿದ್ದು, ಅದರಿಂದಲೇ ಶೇ.80ರಷ್ಟು ಆದಾಯ ಗಳಿಸುತ್ತಿದೆ. ಶೇ.45ರಷ್ಟು ಲಾಭವನ್ನೂ ಮಾಡುತ್ತಿದೆ. ಅಪೋಲೋ ಕಂಪನಿಯ ಶೇ.30ರಷ್ಟು ಆದಾಯ, ಶೇ.25ರಷ್ಟು ಲಾಭ ಯುರೋಪ್‌ನಿಂದ ಬರುತ್ತದೆ. ಈಗ ಆ ಕಂಪನಿಗಳಿಗೆ ಹಿನ್ನಡೆಯಾಗುವ ಸಂಭವವಿದೆ.
ಉಳಿದಂತೆ ಯುರೋಪ್ ಮಾರುಕಟ್ಟೆಯಲ್ಲಿ ವ್ಯವಹರಿಸುತ್ತಿರುವ ಟಾಟಾ ಸ್ಟೀಲ್‌ನಂತಹ ಕಂಪನಿಗೂ ತೊಂದರೆಯಾಗುವ ಸಂಭವವಿದೆ.
ಬ್ರೆಕ್ಸಿಟ್ ಕುರಿತು ಬ್ರಿಟನ್‌ನಲ್ಲಿ ನಡೆದದ್ದು ಬೃಹತ್ ಪ್ರಜಾಸತ್ತಾತ್ಮಕ ಪ್ರಕ್ರಿಯೆ. ಜನರ ಇಚ್ಛೆಯನ್ನು ಗೌರವಿಸಬೇಕು. ಅವರ ಸೂಚನೆಯನ್ನು ಜಾರಿಗೆ ತರಬೇಕು. ಅದಕ್ಕೆ ಹೊಸ ನಾಯಕತ್ವ ಬೇಕು. ಹಡಗನ್ನು ಸ್ಥಿರವಾಗಿಸಲು ನಾನಿರುತ್ತೇನೆ. ಆದರೆ ನಾನೇ ಕ್ಯಾಪ್ಟನ್ ಆಗುವುದು ಸರಿಯಲ್ಲ. ಅಕ್ಟೋಬರ್‌ನಲ್ಲಿ ಹೊಸ ಪ್ರಧಾನಿ ಅಧಿಕಾರ ವಹಿಸಿಕೊಂಡು, ಐರೋಪ್ಯ ಒಕ್ಕೂಟದಿಂದ ಹೊರಬರುವ ಪ್ರಕ್ರಿಯೆ ಆರಂಭಿಸುತ್ತಾರೆ.
-- ಡೇವಿಡ್ ಕೆಮರಾನ್, ಬ್ರಿಟನ್ ಪ್ರಧಾನಿ
ಐರೋಪ್ಯ ಒಕ್ಕೂಟದಿಂದ ಬ್ರಿಟನ್ ನಿರ್ಗಮಿಸುವುದರಿಂದ ಆಗುವ ಅಲ್ಪಾವಧಿ ಹಾಗೂ ಮಧ್ಯಮಾವಧಿ ಪರಿಣಾಮಗಳನ್ನು ಎದುರಿಸಲು ಸರ್ಕಾರ ಸಕಲ ರೀತಿಯಲ್ಲೂ ಸಜ್ಜಾಗಿದೆ.
-- ಅರುಣ್ ಜೇಟ್ಲಿ, ಹಣಕಾಸು ಸಚಿವ
ಉಳಿದ ದೇಶಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆ ಬಲಿಷ್ಠ ಪ್ರಗತಿಯ ಹಾದಿಯಲ್ಲಿದೆ. ಬ್ರೆಕ್ಸಿಟ್ ಪರಿಣಾಮಗಳ ಕುರಿತು ಆರಂಭಿಕ ಚಿಂತೆಗಳು ಮುಗಿದ ಬಳಿಕ ಜನರು ಬ್ರೆಕ್ಸಿಟ್‌ನಿಂದ ಅತ್ಯಂತ ಕಡಿಮೆ ಪರಿಣಾಮಕ್ಕೆ ಒಳಗಾದ ಜಾಗಗಳಿಗೆ ಹುಡುಕುತ್ತಾರೆ. ಆಗ ಹಣ ಇಲ್ಲಿಗೆ ಬಂದೇ ಬರುತ್ತದೆ.
-- ರಘುರಾಂ ರಾಜನ್, ಆರ್‌ಬಿಐ ಗವರ್ನರ್