"ಚಾಚಾ ಅಬ್ಬು ಹುವಾ" ಓಡಿ ಬಂದು ನನ್ನ ಅಣ್ಣನ ಎರಡು ವರ್ಷದ ಮಗ ಸಣ್ಣ ಪರಚಿದ ಗಾಯವಾದರೂ ನನಗೆ ಹೇಳುತ್ತಿದ್ದ, ಅದನು ಸವರಿ, ಏನು ಆಗಿಲ್ಲವೆಂದಾಗಲೇ ಅಲ್ಲಿಂದ ಹೋಗುತ್ತಿದ್ದ.
ಇತ್ತೀಚೆಗೆ ಕುಂದಾಪುರ ದಲ್ಲಿ ಅಫಘಾತದಲ್ಲಿ ಮಡಿದ ಮಕ್ಕಳ ಆ ಜರ್ಝರಿತ ಗಾಯ ನೋಡುವಾಗ, ಆ ಪುಟಾಣಿಗಳು ಎಷ್ಟು ಬಾರಿ ಅವರ ಅಮ್ಮ ನನ್ನು, ಅಪ್ಪನನ್ನು, ಅಥವಾ ಚಿಕಪ್ಪನನ್ನು ಕರೆದಿರಬಹುದು ಎಂದು ಊಹಿಸಿದಾಗಲೆಲ್ಲ ಅಳು ಬಂದು ಬಿಡುತ್ತೆ.
ಆರು ತಿಂಗಳ ಹಿಂದೆ ಇದೇ ವಾಹನದಲ್ಲಿ ನೇತಾಡುಕೊಂಡು ಹೋಗುವ ವಿದ್ಯಾರ್ಥಿಗಳ ಬಗ್ಗೆ ವರದಿ ಮಾಡಿದ್ದೆ. ಅಧಿಕಾರಿಗಳ ಗಮನವನ್ನು ಒಮ್ಮೆ ಆ ಮಕ್ಕಳ ಅಪಾಯಕಾರಿ ಪ್ರಯಾಣದತ್ತ ಗಮನ ಹರಿದು ಅದಕ್ಕೊಂದು ಮುಕ್ತಿ ಸಿಗಲಿ ಎಂಬುದು ನನ್ನ ಗುರಿಯಾಗಿತ್ತು. ಆದರೆ ಅಧಿಕಾರಿಗಳು, ಸಂಘ ಸಂಸ್ಥೆಗಳು,ಸಾರ್ವಜನಿಕರು ಆ ವರದಿಯ ಬಗ್ಗೆ ಕಾಮೆಂಟ್, ಲೈಕ್ ಗೆ ಮಾತ್ರ ಸೀಮಿತವಾಗಿಸಿದರು. ಆ ವರದಿಯ ಆರು ತಿಂಗಳ ಕಾಲವಧಿಯಲ್ಲಿ ಕುಂದಾಪುರದಲ್ಲಿ ಭೀಕರ ಅಫಘಾತ ನಡೆದಿದೆ.
ಈ ಅಫಘಾತದಲ್ಲಿ ಮಕ್ಕಳು ಅಸುನೀಗಿ, ಇಡೀ ಉಡುಪಿ ಆಕ್ರೋಶಗೊಂಡ ತಕ್ಷಣ ಎಚ್ಚೆತ್ತುಗೊಂಡ ಪೊಲೀಸ್ ಇಲಾಖೆ ಮರುದಿನ ಮಂಗಳೂರಿನಲ್ಲಿ ಶಾಲಾ ವಾಹನಗಳ ತಪಾಸಣೆ ಆರಂಭಿಸಿದೆ. ಕೆಲವು ವಾಹನಗಳಲ್ಲಿ ಟೆಂಪೋಗಳಲ್ಲಿ ಅಮಾನುಷವಾಗಿ ಪ್ರಾಣಿಗಳನ್ನು ತುಂಬುವಂತೆ ಮಕ್ಕಳನ್ನು ಹೇರಲಾಗಿತ್ತು. ದಂಡವನ್ನು ವಿಧಿಸಲಾಯಿತು. ಉಡುಪಿಯಲ್ಲೂ ಕಾರ್ಯಚರಣೆ ನಡೆಸಿದ ಪೊಲೀಸರು ಕೆಲವು ಕಡೆ ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ವಾಹನಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಸೂಚನೆ ನೀಡಿದರು. ಒಮ್ನಿಯಲ್ಲಿ ಹನ್ನೆರಡು ,ಆಟೋ ರಿಕ್ಷಾದಲ್ಲಿ ಆರು ಎಂಬ ಹೊಸ ನಿಯಮವನ್ನು ರೂಪಿಸಲಾಯಿತು. ಇದನ್ನು ಖಂಡಿಸಿ ವಾಹನಗಳ ಸಂಘಟನೆ ತಮಗೆ ಇದರಿಂದ ನಷ್ಟವಾಗುತ್ತದೆಂದು ಪ್ರತಿಭಟಿಸಲಾರಂಭಿಸಿದರು.
ವಿಷಯದತ್ತ ಗಮನ ಹರಿಸಿದರೆ, ವಿಷಯ ಹೌದು ಕೂಡ ಅಷ್ಟು ಕಡಿಮೆ ಮಕ್ಕಳನ್ನು ಪೋಷಕರು ಕೊಡುವ ಕಡಿಮೆ ಬಾಡಿಗೆಯಲ್ಲಿ ಕೊಂಡಯ್ಯುವುದು ಅಸಾಧ್ಯ ಕೂಡ. ಹಾಗಂತ ಮಕ್ಕಳ ಸುರಕ್ಷತೆಯನ್ನು ಪರಿಗಣಿಸದೇ ಇದ್ದ ಅಸುರಕ್ಷಿತ ವ್ಯವಸ್ಥೆಯನ್ನು ಮುಂದುವರಿಸುವುದೇ?
ಇಂಟರ್ನೆಟ್ಗೆ, ಬ್ರ್ಯಾಂಡ್ ಬಟ್ಟೆಗೆ, ಅತ್ಯುತ್ತಮ ತಿಂಡಿ ತಿನಿಸುಗಳ ಬಗ್ಗೆ, ಮಕ್ಕಳಿಗೆ ಎಲ್ಲದರಲ್ಲೂ ಕಾಂಪ್ರಮೈಸ್ ಮಾಡದೆ ಖರೀದಿಸಿ ಕೊಡುವ ಪೋಷಕರು ತಮ್ಮ ಮುಂದಿನ ಪುಟಾಣಿಯ ಸುರಕ್ಷತೆಯ ಬಗ್ಗೆ ಕಾಂಪ್ರೆಮೈಸ್ ಮಾಡುದೇಕೆ? ಯಾಕೆ ನಾವು ಸ್ವಲ್ಪ ಹೆಚ್ಚು ಹಣ ಕೊಟ್ಟು ಕಡಿಮೆ ಮಕ್ಕಳನ್ನು ವಾಹನಗಳಲ್ಲಿ ಸುರಕ್ಷತೆಯೊಂದಿಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ?. ನೂರಾರು ರೂಪಾಯಿಗಾಗಿ ನಮ್ಮ ಮುದ್ದು ಮಕ್ಕಳ ಪ್ರಾಣದೊಂದಿಗೆ ಸ್ವತಃ ನಾವೇ ಜುಜಾಡುವುದು ಎಷ್ಟು ಸರಿ ಎಂಬ ಪ್ರಶ್ನೆ ನನಗೆ ಸದಾ ಕಾಡುತ್ತಿದೆ. ಕುಂದಾಪುರದಲ್ಲಿ ನಡೆದ ಅಫಘಾತದಲ್ಲಿ ಎಂಟು ಮಕ್ಕಳು ಅಸುನೀಗಲು ಕಾರಣವನ್ನು ಹುಡುಕುತ್ತ, ಚಾಲಕನ ಮೇಲೆ, ಶಾಲೆಯ ಮೇಲೆ ಶಿಕ್ಷಣ ಇಲಾಖೆಯ ಮೇಲೆ ಅಪಾದನೆ ಮಾಡುವ ನಾವು ಯಾಕೆ ಸ್ವತಃ ಹೊಣೆ ಹೋರುದಿಲ್ಲ?.
ಅಷ್ಟು ಸಣ್ಣ ಒಮ್ನಿ ಕಾರಿನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ತುಂಬಿಸಿದ್ದು ಕಾರಣವೆಂಬುದು ನಮಗ್ಯಾಕೆ ಅನಿಸುದಿಲ್ಲ?! ಅಷ್ಟು ದೊಡ್ಡ ಅಫಘಾತವಾಗಿ ಪುಟಾಣಿಗಳು ಜೀವ ತೆತ್ತರು ಪೊಲೀಸ್ ಇಲಾಖೆಯನ್ನು ಬಯ್ಯುತ್ತಲೇ ಅದೇ ಒಮ್ನಿ ಮತ್ತು ರಿಕ್ಷಾದಲ್ಲಿ ನೂರೋ ಇನ್ನೂರು ರೂಪಾಯಿ ಉಳಿತಾಯಕ್ಕಾಗಿ ಮಕ್ಕಳನ್ನು ದೂಡುತ್ತಿರುವವರು ನಾವಲ್ಲವೇ?!
ಸ್ನೇಹಿತರೇ ನಾನು ಮಕ್ಕಳನ್ನು ಬಹಳ ಪ್ರೀತಿಸುತ್ತೇನೆ. ಆ ಮಕ್ಕಳಿಗೆ ಸಣ್ಣ ನೋವಾದರೂ ನನ್ನಿಂದ ಸಹಿಸಲು ಅಸಾಧ್ಯ. ಆದರೆ ಇಂದು ನಮ್ಮದೇ ತಪ್ಪಿನಿಂದಾಗಿ ಶವ ಪೆಟ್ಟಿಗೆಯಲ್ಲಿ ಕ್ಯಾಡ್ಬರಿ ಚಾಕಲೆಟ್ ನೋಡುವ ದೌರ್ಭಾಗ್ಯ ನಮ್ಮದಾಗಿರುವುದು ಪ್ರತಿ ರಾತ್ರಿ ನನ್ನನ್ನು ನಿದ್ರೆಯಲ್ಲಿ ಬೆಚ್ಚಿ ಬಿಳಿಸುತ್ತಿದೆ.
ಪೋಷಕರೇ ದಯವಿಟ್ಟು ಇನ್ನಾದರೂ ಮಕ್ಕಳ ಸುರಕ್ಷತೆಯ ಬಗ್ಗೆ ಗಮನಕೊಡಿ.
ಇನ್ನು ಪೊಲೀಸ್ ಇಲಾಖೆ ಸಿನಿಮಾದಲ್ಲಿ ಕ್ಲೈಮ್ಯಾಕ್ಸ್ ನಲ್ಲಿ ಬಂದು ಒಮ್ಮೆಲ್ಲೆ ಕೆಲವು ದಿನ ಕ್ರಮ ಕೈಗೊಂಡರೆ ಸಾಲದು ಬದಲಾಗಿ ಮಕ್ಕಳ ಸುರಕ್ಷತೆಯ ದೃಷ್ಠಿಯಿಂದ ಪ್ರತಿ ವಾಹನದ ಮಿತಿಯಂತೆ ಮಕ್ಕಳನ್ನು ಸಾಗಿಸಲು ಶಾಲಾ ವಿದ್ಯಾರ್ಥಿ ಗಳ ಬಾಡಿಗೆ ಮಾಡುವ ಚಾಲಕರಲ್ಲಿ ಜಾಗೃತಿ ಮೂಡಿಸಬೇಕಿದೆ. ಜಿಲ್ಲಾಡಳಿತ ಕೇವಲ ಕಠಿಣ ಕ್ರಮ ,ಕಠಿಣ ಕ್ರಮ ಎನ್ನದೇ ಪ್ರತಿ ಚಾಲಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಲಾ ವಾಹನದ ವೇಗದ ಮೇಲೆ ಮಿತಿ ಹಾಕಬೇಕಿದೆ.
ಆಗ ಮಾತ್ರ ನಮ್ಮ ಮನೆಯಲ್ಲಿ ನಲಿದಾಡಿಕೊಂಡು, ಅಮ್ಮಾ, ಪಪ್ಪ, ಅಜ್ಜಿ, ದಾದಿ, ಉಮ್ಮ ಎನ್ನುತ್ತಾ ತಿರುಗಾಡುವ ನಮ್ಮ ಮುದ್ದು ಪುಟಾಣಿಗಳ ಮೊಗವನ್ನು ಶವ ಪೆಟ್ಟಿಗೆಗಳಲ್ಲಿ, ಗೋರಿಗಳಲ್ಲಿ ನೋಡುದರಿಂದ ತಪ್ಪಿಸಬಹುದಾಗಿದೆ.
ಇತೀ ನಿಮ್ಮವ,
ಯಾಸೀನ್ ಕೋಡಿಬೆಂಗ್ರೆ.